ಈಡೇರಿದ ದಶಕಗಳ ಕನಸು – ಅಯೋಧ್ಯೆಯಲ್ಲಿಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ

ಕೋಟ್ಯಂತರ ಭಕ್ತರ ಹಲವು ವರ್ಷಗಳ ಕನಸು ಈಡೇರುವ ಗಳಿಗೆ ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ(ಜೂ.10)ರಂದು ಶಿಲಾನ್ಯಾಸ ನಡೆಯಲಿದೆ. ರಾಮಜನ್ಮಭೂಮಿ ವ್ಯಾಪ್ತಿಯಲ್ಲೇ ಇರುವ ‘ಕುಬೇರ ತಿಲ’ ಮಂದಿರದಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡುವುದರೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ.
‘‘ಲಂಕಾ ಮೇಲಿನ ದಾಳಿಗೂ ಮುನ್ನ ಶ್ರೀರಾಮಚಂದ್ರನು ಶಿವನನ್ನು ಪ್ರಾರ್ಥಿಸಿದ್ದ. ಅದೇ ಸಂಪ್ರದಾಯವನ್ನು ಈಗ ಪಾಲಿಸುತ್ತಿದ್ದೇವೆ. ರುದ್ರಾಭಿಷೇಕದ ಬಳಿಕವೇ ರಾಮ ಮಂದಿರ ಶಿಲಾನ್ಯಾಸದ ಕಾರ್ಯಕ್ರಮಗಳು ಆರಂಭವಾಗಲಿವೆ,’’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಕ್ತಾರರಾದ ಮಹಾಂತ ಕಮಲನಯನ ದಾಸ್ ಅವರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 8 ಗಂಟೆಗೆ ಶಿಲಾನ್ಯಾಸದ ವಿಧಿವಿಧಾನಗಳು ಆರಂಭವಾಗಲಿದ್ದು, ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಅವರ ಪರವಾಗಿ ಮಹಾಂತ ಕಮಲ ನಯನ ದಾಸ್ ಹಾಗೂ ಮತ್ತಿತರರು ಶಿವನ ಪ್ರಾರ್ಥನೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಪೂರ್ತಿಗೊಳಿಸಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮವು ಕನಿಷ್ಠ 2 ಗಂಟೆಗಳವರೆಗೂ ನಡೆಯಲಿದ್ದು, ಆ ನಂತರ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ.
ಮೂಲ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಲ್ಲಿದ್ದ ರಾಮ ಲಲ್ಲಾ ಮೂರ್ತಿಯನ್ನು ಬೇರೊಂದು ಸ್ಥಳಕ್ಕೆ ಕಳೆದ ಮಾರ್ಚ್ ನಲ್ಲಿ ಸ್ಥಳಾಂತರಿಸಲಾಗಿತ್ತು. ಮೇ ತಿಂಗಳಲ್ಲಿ ನೆಲವನ್ನು ಸಮತಟ್ಟುಗೊಳಿಸುವ ಕಾಮಗಾರಿ ಆರಂಭಿಸಲಾಗಿತ್ತು. ಈ ವೇಳೆ ಹಲವು ಶಿವಲಿಂಗ ಹಾಗೂ ವಿಗ್ರಹಗಳು ಪತ್ತೆಯಾಗಿದ್ದವು. ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್ ಅವರು ಇತ್ತಿಚೆಗೆ ಅಯೋಧ್ಯೆಗೆ ಭೇಟಿ ನೀಡಿ, ಪರಿಶೀಲಿಸಿದ್ದರು. ಈ ರಾಮ ಮಂದಿರ ನಿರ್ಮಾಣ ಕಾರ್ಯ 2022ರ ಹೊತ್ತಿಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಲಾಕ್‌ಡೌನ್‌ ಬಳಿಕ ರಾಮಲಲ್ಲಾ…
ಒಂದು ವೇಳೆ ಕೊರೊನಾ ವೈರಸ್ ಅಟ್ಟಹಾಸ ಇರದಿದ್ದರೆ ಈ ಶಿಲನ್ಯಾಸವು ರಾಮನವಮಿ(ಏ.22)ಯಂದೇ ನಡೆದಿರುತ್ತಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಹೇರಿದ್ದರಿಂದ ಎಲ್ಲ ಯೋಜನೆಗಳು ಮುಂದಕ್ಕೆ ಹೋದವು. ರಾಮ ಲಲ್ಲಾ ದರ್ಶನಕ್ಕೂ ಅನುಮತಿ ಇರಲಿಲ್ಲ. ಲಾಕ್‌ಡೌನ್‌ ನಿಧಾನವಾಗಿ ಹಿಂಪಡೆಯುತ್ತಿದ್ದು, ದೇವಸ್ಥಾನಗಳನ್ನು ಭಕ್ತರಿಗೆ ಮುಕ್ತಗೊಳಿಸಿದ್ದರಿಂದ ರಾಮಲಲ್ಲಾ ದರುಶನಕ್ಕೂ ಭಕ್ತರು ಆಗಮಿಸುತ್ತಿದ್ದಾರೆ.

ರಾಮನ ಪಾಲಾದ ಜನ್ಮಭೂಮಿ
ಅಯೋಧ್ಯೆಯ ರಾಮಜನ್ಮಭೂಮಿ ವಿವಾದ ಹಲವು ದಶಕಗಳಿಂದ ಇತ್ತು. ಈ ಪ್ರದೇಶದಲ್ಲಿ 16ನೇ ಶತಮಾನದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲಾಗಿತ್ತು. ಆ ಸ್ಥಳದಲ್ಲಿ ರಾಮ ಮಂದಿರ ಇದ್ದು, ಅದನ್ನು ಹಿಂದೂಗಳಿಗೆ ನೀಡಬೇಕೆಂದು ಬ್ರಿಟಿಷ್ ಆಡಳಿತದಲ್ಲೇ ವಿವಾದ ಆರಂಭವಾಯಿತು. ಆ ನಂತರ ಅನೇಕ ಘಟನೆಗಳು ನಡೆದಿವೆ. ಜೊತೆಗೆ ಕಾನೂನು ಸಮರವೂ ಆರಂಭವಾಯಿತು. ಲಕ್ಷಾಂತರ ಕರಸೇವಕರು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ್ದರು. 2.7 ಎಕರೆ ವಿವಾದಿತ ಸ್ಥಳದ ಕುರಿತಾಗಿನ ಸುದೀರ್ಘ ಕಾನೂನು ಸಮರಕ್ಕೆ ಕಳೆದ ನವೆಂಬರ್‌ನಲ್ಲಿ ತೆರೆ ಎಳೆದ ಸುಪ್ರಿಂ ಕೋರ್ಟ್, ಈ ಜಾಗವು ರಾಮಲಲ್ಲಾಗೆ ಸೇರಿದ್ದು ಎಂದು ಐತಿಹಾಸಿಕ ತೀರ್ಪು ನೀಡಿತ್ತು. ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣದ ವಿಚಾರಣೆ ಇನ್ನೂ ಲಖನೌನ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಅಯೋಧ್ಯೆಯ ಸಾಂಸ್ಕೃತಿಕ ಇತಿಹಾಸ
ಶ್ರೀರಾಮ ಇಲ್ಲಿನ ಮಹಾರಾಜ ದಶರಥ- ಕೌಸಲ್ಯೆಯರ ಪುತ್ರನಾಗಿ ಜನ್ಮ ತಾಳಿದ್ದರಿಂದ ಈ ಸ್ಥಳವನ್ನು ರಾಮ ಜನ್ಮಭೂಮಿ ಎಂದು ಕರೆಯಲಾಗುತ್ತದೆ. ಕೋಸಲ ರಾಜ್ಯದ ರಾಜಧಾನಿ ಅಯೋಧ್ಯೆ. ಕ್ರಿ.ಪೂ. 1450ರ ಆಸುಪಾಸಿನಲ್ಲಿ ರಾಮಾಯಣ ನಡೆದಿದೆ ಎಂದು ಅಂದಾಜಿಸಲಾಗಿದೆ. ಆಗ ಇದರ ವಿಸ್ತೀರ್ಣ 12 ಯೋಜನ ಎಂದರೆ ಸುಮಾರು 80ರಿಂದ 100 ಮೈಲಿಗಳ ಸುತ್ತಳತೆ ಇತ್ತು ಎಂದು ರಾಮಾಯಣದಲ್ಲಿ ಉಲ್ಲೇಖವಿದೆ. ಈ ನಗರವನ್ನು ಸೂರ್ಯವಂಶದ ರಾಜರು ಹಲವಾರು ಶತಮಾನ ಆಳಿದರು. ಅವರ ಸಂತತಿ ಮುಂದೆ ಹರಡಿ ಹಂಚಿಹೋಯಿತು. ಮುಂದೆ ಬೌದ್ಧರ ಕಾಲದಲ್ಲಿ ಕೋಸಲ ದೇಶದ ರಾಜಧಾನಿಯಾಗಿ ಸಾಕೇತ ಪ್ರಸಿದ್ಧಿಯಾಯಿತು. ಪ್ರಸ್ತುತ ರಾಮ ಜನ್ಮಭೂಮಿಯು ‘ರಾಮ ಚಬೂತರ್’, ಸೀತೆ ಅಡುಗೆ ಮಾಡಿದ್ದ ಸ್ಥಳ ಅಥವಾ ‘ಸೀತಾ ಕೀ ರಸೋಯಿ’ ಹಾಗೂ ಹನುಮಾನ್ ಮಂದಿರಗಳಿಂದ ಕೂಡಿದೆ.

ಫೆಬ್ರವರಿ 5ರಂದು ಟ್ರಸ್ಟ್ ರಚನೆ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ವಿಶೇಷ ಟ್ರಸ್ಟ್ ರಚಿಸುವ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 5ರಂದು ಸಂಸತ್ತಿನಲ್ಲಿ ಪ್ರಕಟಿಸಿದ್ದರು. ಅದರೊಂದಿಗೆ ‘ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಅಧಿಕೃತವಾಗಿ ಆರಂಭ ಕಂಡಿತು. 2019ರ ನವೆಂಬರ್ 9ರಂದು ಅಯೋಧ್ಯೆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚಿಸುವಂತೆ ನಿರ್ದೇಶನ ನೀಡಿತ್ತು. ಇದಕ್ಕಾಗಿ ಮೂರು ತಿಂಗಳ ಗಡುವು ನೀಡಿತ್ತು. ಮಹಾಂತ ನೃತ್ಯಗೋಪಾಲ್ ದಾಸ ಅವರು ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ಒಟ್ಟು 15 ಸದಸ್ಯರನ್ನು ಇದು ಹೊಂದಿದೆ. ಇದರಲ್ಲಿ ಕರ್ನಾಟಕದ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಶ್ರೀಗಳೂ ಸದಸ್ಯರಾಗಿದ್ದಾರೆ.

ಟ್ರಸ್ಟ್‌ನ ಪ್ರಮುಖ ಸದಸ್ಯರು
1. ಜಗದ್ಗುರು ಶಂಕರಾಚಾರ್ಯ ಸ್ವಾಮಿ
2. ವಸುದೇವಾನಂದ ಸರಸ್ವತಿ ಜಿ ಮಹಾರಾಜ್
3. ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ
4. ಸ್ವಾಮಿ ಪರಮಾನಂದ ಜಿ ಮಹಾರಾಜ್
5. ಸ್ವಾಮಿ ಗೋವಿಂದ ದೇವ್ ಗಿರಿ ಮಹಾರಾಜ್
6. ವಿಮಲೇಂದ್ರ ಮೋಹನ ಪ್ರತಾಪ್ ಮಿಶ್ರಾ
7. ಡಾ. ಅನಿಲ್ ಮಿಶ್ರಾ (ಹೋಮಿಯೋಪತಿ ವೈದ್ಯ)
8. ಶ್ರೀ ಕಾಮೇಶ್ವರ ಚೌಪಾಲ್,
9. ಮಹಂತ್ ದಿನೇಂದ್ರ ದಾಸ್
10. ಕೆ. ಪರಾಶರನ್, ವಕೀಲ

ಹೇಗಿರಲಿದೆ ಮಂದಿರ?
ದೇಗುಲವು ಎರಡು ಅಂತಸ್ತಿನಿಂದ ಕೂಡಿರಲಿದೆ. ಮೊದಲ ಅಂತಸ್ತಿನಲ್ಲಿ ಶ್ರೀರಾಮ ಲಲ್ಲಾ ವಿರಾಜಮಾನವಾದರೆ, ಎರಡನೇ ಅಂತಸ್ತಿನಲ್ಲಿ ಶ್ರೀರಾಮ ಪಟ್ಟಾಭಿಷೇಕದ ವಿಗ್ರಹ ಇರುತ್ತದೆ. ಮಂದಿರದ ಕೆಳಭಾಗದಲ್ಲಿ ಸಿಂಹದ್ವಾರ, ನೃತ್ಯಮಂಟಪ, ರಂಗಮಂಟಪ ಗರ್ಭಗೃಹ ಹಾಗೂ ಪರಿಕ್ರಮ/ಪ್ರದಕ್ಷಿಣಾ ಪಥ ಇರಲಿದೆ. ಎರಡು ಅಂತಸ್ತಿನ ಮಂದಿರದಲ್ಲಿ ಕಿಂಚಿತ್ತೂ ಲೋಹದ ಉಪಯೋಗ ಇರುವುದಿಲ್ಲ. ಕೇವಲ ಕಲ್ಲುಗಳಿಂದಲೇ ಕಟ್ಟಲಾಗುತ್ತದೆ.

ಕಲಾಪೂರ್ಣ ಕಂಬಗಳು
ಪ್ರತಿಯೊಂದು ಅಂತಸ್ತಿನಲ್ಲಿ 106 ಕಂಬಗಳು ಇರುತ್ತವೆ. ಇವುಗಳು 16.6 ಅಡಿ ಹಾಗೂ 14.6 ಅಡಿಗಳಷ್ಟು ಇದ್ದು ಪ್ರಥಮ ಹಾಗೂ ದ್ವಿತೀಯ ಅಂತಸ್ತಿನಲ್ಲಿ ಜೋಡಿಸಲಾಗುವುದು. ಈ ಕಲ್ಲಿನ ಕಂಬಗಳ ತುಂಬ ಕಲಾಪೂರ್ಣ ಕೆತ್ತನೆಗಳು ಇರುತ್ತವೆ.

ಯಾವ ಕಲ್ಲುಬಳಕೆ?
ಸಮಗ್ರ ಮಂದಿರ ನಿರ್ಮಾಣಕ್ಕೆ ರಾಜಸ್ಥಾನದ ತಿಳಿಗುಲಾಬಿಯ ಭರತ್ಪುರ ಯಾಬನ್ಸಿ ಪಹಾಡ್ಪುರ ಕಲ್ಲುಗಳನ್ನು ಬಳಸಲಾಗುತ್ತಿದೆ. ದೇಶಾದ್ಯಂತ ಪೂಜನಗೊಂಡ 2.5 ಲಕ್ಷ ಪವಿತ್ರ ಶಿಲೆಗಳು ಕೂಡಾ ಅಯೋಧ್ಯೆಯ ಕರಸೇವಕಪುರಂನಲ್ಲಿವೆ.

ಸರ್ವ ವ್ಯವಸ್ಥೆ
ಮಂದಿರ ನಿರ್ಮಾಣ ಪರಿಕರಗಳ ಸಂಗ್ರಹ ಹಲವು ವರ್ಷಗಳಿಂದ ನಡೆಯುತ್ತಿದ್ದು, ಕಲ್ಲುಗಳ ಕೆತ್ತನೆ ಕಾರ್ಯವೂ ಕಳೆದ 29 ವರ್ಷಗಳಿಂದ ನಡೆಯುತ್ತಿದೆ. ಶೇ.75ರಷ್ಟು ಮುಕ್ತಾಯಗೊಂಡಿದೆ. ನೆಲ ಅಂತಸ್ತು ಹಾಗೂ ಮೊದಲ ಮಹಡಿಯನ್ನು ಕಟ್ಟಲು ಬೇಕಾಗಿರುವ ಕಂಬಗಳು ಸಿದ್ಧವಾಗಿವೆ. 16.6 ಅಡಿ ಎತ್ತರದ 108 ಸ್ತಂಭಗಳಾಗಲೇ ಕೆತ್ತನೆಗೊಂಡು ಸಿದ್ಧವಾಗಿವೆ. ಮುಂದಿನ ವಿಶಾಲ ಮಂಟಪ ಹಾಗೂ ಗರ್ಭಗೃಹಗಳ ಹಾಲುಗಲ್ಲಿನ ಗೋಡೆಹಾಸುಗಳೂ ತಯಾರಾಗಿವೆ. ಭಾರವನ್ನು ಆಧರಿಸಲು ಬೇಕಾಗಿರುವ 185 ಕಲ್ಲಿನ ತೊಲೆಗಳಲ್ಲಿ 150 ಪೂರ್ಣಗೊಂಡಿವೆ.

1989ರಲ್ಲಿ ರಾಮ ಶಿಲಾ ಪೂಜನ
1989ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಮಾಡಲು ನಿರ್ಧರಿಸಲಾಯಿತು. ಆಗ ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ನ ಕಾರ್ಯಕರ್ತರು ತಮ್ಮ ಹಳ್ಳಿಗಳಿಂದ ಇಟ್ಟಿಗೆಯನ್ನು ಕೇಸರಿ ವಸ್ತ್ರದಲ್ಲಿ ಅದಕ್ಕೆ ಪೂಜೆ ಮಾಡಿಕೊಂಡು ಅಯೋಧ್ಯೆಗೆ ತಂದರು. ಹೀಗೆ ಸಹಸ್ರಾರು ಜನರು ದೇಶದ ಮೂಲೆಮೂಲೆಗಳಿಂದ ಇಟ್ಟಿಗೆಗಳನ್ನು ತಂದು ಅಯೋಧ್ಯೆಯಲ್ಲಿ ಸಂಗ್ರಹಿಸಿದರು. ಸುಮಾರು 200,000 ಹಳ್ಳಿಗಳಿಂದ ಇಟ್ಟಿಗೆಗಳನ್ನು ತರಲಾಗಿತ್ತು. 3,00,000 ರಾಮ ಶಿಲಾ ಪೂಜನಗಳು ನಡೆದವು. ಅಲ್ಲದೆ, ಇಟ್ಟಿಗೆಗಳನ್ನು ಮೆರವಣಿಗೆಯಲ್ಲಿ ತರಲಾಗುತ್ತಿತ್ತು. ಲಕ್ಷಾಂತರ ಜನರು ಭಾಗವಹಿಸಿದ್ದರು. ಆದರೆ, ಈಗ ನಡೆಯುತ್ತಿರುವ ಶಿಲನ್ಯಾಸವೂ ಹೊಸ ಪರ್ವಕ್ಕೆ ಕಾರಣವಾಗಲಿದೆ.

ಮಂದಿರದ ಬಳಿ 67 ಎಕರೆ ಜಾಗ
ರಾಮ ಮಂದಿ ನಿರ್ಮಾಣಕ್ಕೆ ಟ್ರಸ್ಟ್‌ಗೆ 67 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಅಯೋಧ್ಯೆಯಲ್ಲಿ ತಲೆ ಎತ್ತುತ್ತಿರುವ ಮಂದಿರದ ಸುತ್ತಮುತ್ತಲಿನ ಜಾಗ ಇದಾಗಿದೆ. ವಿಶ್ವ ಹಿಂದೂ ಪರಿಷತ್ ರೂಪಿಸಿದ ಮಾದರಿಯಲ್ಲೇ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಮಂದಿರ ನಿರ್ಮಾಣ ಉದ್ದೇಶಕ್ಕೆ 1985ರ ಡಿಸೆಂಬರ್ 18ರಂದು ಸ್ಥಾಪನೆಗೊಂಡ ರಾಮ ಜನ್ಮಭೂಮಿ ನ್ಯಾಸ್ ಈಗಾಗಲೇ ಮಂದಿರದ ರೂಪುರೇಷೆ ಸಿದ್ಧಪಡಿಸಿದೆ. ವಿಎಚ್‌ಪಿ 1990ರಿಂದಲೇ ಶಿಲ್ಪ ಕೆತ್ತನೆ ಆರಂಭಿಸಿತ್ತು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top