ಸವಾಲಿನ ನಡುವೆ 8 ಕೋಟಿ ವಲಸಿಗ ಕಾರ್ಮಿಕರಿಗೆ ನೆರವು

(ಆತ್ಮ ನಿರ್ಭರ ಭಾರತ್ ಭಾಗ 3)

ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ಕಾಲ್ನಡಿಗೆಯಲ್ಲೇ ಹಳ್ಳಿಗಳಿಗೆ ಸಾಮೂಹಿಕ ವಲಸೆ ಹೊರಟಾಗ ಸಂಕೀರ್ಣ ಸಮಸ್ಯೆಯ ಸರಣಿ ಉದ್ಭವಿಸಿತು. ಆತ್ಮನಿರ್ಭರ ಭಾರತ್ ಪ್ಯಾಕೇಜಿನ ಎರಡನೇ ಕಂತಿನಲ್ಲಿ ವಲಸಿಗರಿಗೆ ಆದ್ಯತೆ ನೀಡಲಾಗಿತ್ತು. ವಲಸಿಗರಿಗೆ ಉಚಿತ ಆಹಾರ ವ್ಯವಸ್ಥೆ ಸಕಾಲಿಕ. ಜತೆಗೆ ನೇರ ನಗದು ಕಲ್ಪಿಸಬೇಕು ಎನ್ನುತ್ತಾರೆ ತಜ್ಞರು.

ಕೊರೊನಾ ಬಿಕ್ಕಟ್ಟಿನ ಪರಿಣಾಮ ನಗರ ಮತ್ತು ಪಟ್ಟಣಗಳಲ್ಲಿ ಹಠಾತ್ ಕೆಲಸ ಕಳೆದುಕೊಂಡು ಪರದಾಡಿದ ಕೋಟ್ಯಂತರ ವಲಸಿಗ ಕಾರ್ಮಿಕರು ಹಳ್ಳಿಗಳತ್ತ ಸಾಮೂಹಿಕ ವಲಸೆ ಹೋಗಿದ್ದಾರೆ. ವಲಸಿಗರಿಂದ ಕೊರೊನಾ ಹರಡುವ ಭೀತಿಯೂ ಇತರರಲ್ಲಿ ಅವರ ಬಗ್ಗೆ ಅಸಹನೆಯೂ ಉಂಟಾಗಿದೆ. ಇಂಥ ಸ್ಥಿತಿಯಲ್ಲಿ ಆತ್ಮನಿರ್ಭರ ಭಾರತ್ ಪ್ಯಾಕೇಜ್, ಎಂಟು ಕೋಟಿ ವಲಸಿಗರಿಗೆ ಉಚಿತ ಆಹಾರ ವ್ಯವಸ್ಥೆ, ರೇಷನ್ ಕಾರ್ಡ್ ಪೋರ್ಟಬಿಲಿಟಿ ವ್ಯವಸ್ಥೆ ಕಲ್ಪಿಸಿರುವುದು ಸೂಕ್ತ. ಆದರೆ ರೈಲು ಮತ್ತು ಬಸ್ ವ್ಯವಸ್ಥೆಯನ್ನು ಇನ್ನೂ ಅಚ್ಚುಕಟ್ಟಾಗಿ ಏರ್ಪಡಿಸಿದ್ದರೆ, ರಾಜ್ಯ ಸರಕಾರಗಳು ಇದರ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರೆ ವಲಸಿಗರಿಗೆ ಅನುಕೂಲವಾಗುತ್ತಿತ್ತು.
‘‘ವಲಸಿಗರಿಗೆ ಎಲ್ಲಿ ಬೇಕಾದರೂ ಪಡಿತರ ಸೌಲಭ್ಯ ಕಲ್ಪಿಸಿರುವುದು ಒಳ್ಳೆಯದೇ. ಆದರೆ ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ಒದಗಿಸಿದ್ದರೆ ವಲಸಿಗರ ನೋವು, ಸಂಕಷ್ಟಗಳನ್ನು ಬಗೆಹರಿಸಬಹುದಿತ್ತು. ರಸ್ತೆ ಬದಿ ವ್ಯಾಪಾರಿಗಳು, ಮೆಕಾನಿಕ್‌ಗಳು, ಬ್ಯೂಟಿ ಪಾರ್ಲರ್ ಇತ್ಯಾದಿ ಬಿಸಿನೆಸ್ ಮಾಡುವವರಿಗೆ 5000 ರೂ. ನೆರವು ಸಾಲದು,’’ ಎನ್ನುತ್ತಾರೆ ಲೇಬರ್ ನೆಟ್ ಸಂಸ್ಥೆಯ ಸಿಇಒ ಗಾಯತ್ರಿ ವಾಸುದೇವನ್.
‘‘ವಲಸಿಗರ ಜೀವನ ನಿರ್ವಹಣೆಗೆ ರಿಲೀಫ್ ಕೊಟ್ಟಿರುವುದು ಸೂಕ್ತ. ಆದರೆ ಲಾಕ್‌ಡೌನ್‌ ಘೋಷಿಸಿದ ತಕ್ಷಣ ವಲಸಿಗರ ಹಿತಾಸಕ್ತಿಗೆ ಆದ್ಯತೆ ನೀಡಬಹುದಿತ್ತು’’ ಎನ್ನುತ್ತಾರೆ ಆರ್ಥಿಕ ತಜ್ಞರಾದ ನಾರಾಯಣ ಎಂ.ಆರ್.

ಪ್ಯಾಕೇಜಿನಲ್ಲಿ ಇನ್ನೇನಿರಬೇಕಿತ್ತು?
– ಕಟ್ಟಡ ಕಾರ್ಮಿಕರಿಗೆ ಇರುವಂತೆ ವಲಸಿಗ ಕಾರ್ಮಿಕರಿಗೆ ಕೂಡ ನೇರ ನಗದು ವಿತರಣೆಗೆ ವ್ಯವಸ್ಥೆ ಕಲ್ಪಿಸಬಹುದಿತ್ತು.
– ವಲಸಿಗ ಕಾರ್ಮಿಕ ಡೇಟಾ ಬೇಸ್ ವ್ಯವಸ್ಥೆಗೆ ಪ್ರತ್ಯೇಕ ಯೋಜನೆ ಕಲ್ಪಿಸಬಹುದಿತ್ತು.
– ಆ್ಯಪ್ ಆಧಾರಿತ ಕಂಪನಿಗಳು, ಕ್ಯಾಬ್ ಡ್ರೈವರ್ಸ್, ಲೋಡಿಂಗ್, ಲಾಜಿಸ್ಟಿಕ್ಸ್ ಇತ್ಯಾದಿ ವಲಯಗಳಲ್ಲಿದ್ದ ವಲಸಿಗರಿಗೂ ನೇರ ನಗದು ಅಗತ್ಯ.
– ವಲಸಿಗರಲ್ಲಿನ ಆತಂಕ ನಿರ್ಮೂಲನೆಗೆ ನಿರಂತರ ಜಾಗೃತಿಗೆ ಕಾರ್ಯಕ್ರಮ.
– ರೈಲ್ವೆ, ಬಸ್ ಪಾಸ್‌ಗಳು ಸಾಲುತ್ತಿಲ್ಲ. ವಲಸಿಗರಿಗೆ ಸಾರಿಗೆ ವ್ಯವಸ್ಥೆ ಸುಧಾರಿಸಬೇಕಿತ್ತು.
– ಟೋಲ್ ಪ್ಲಾಜಾ ವ್ಯಾಪ್ತಿಯಲ್ಲಿ ವಲಸಿಗರಿಗೆ ವಸತಿ ಕಲ್ಪಿಸಬಹುದಿತ್ತು.
– ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲ ಸಿಗುವುದು ದುಸ್ತರ. ಬಿಸಿನೆಸ್ ಕಿಟ್ ಕಲ್ಪಿಸಬೇಕು.

ವಲಸಿಗ ಕಾರ್ಮಿಕರಿಗೆ ಕೊಟ್ಟಿದ್ದೇನು?
– ರೇಷನ್ ಕಾರ್ಡ್ ಇಲ್ಲದಿದ್ದರೂ ವಲಸಿಗ ಕಾರ್ಮಿಕರಿಗೆ 2 ತಿಂಗಳು ಕಾಲ ಉಚಿತವಾಗಿ ಪ್ರತಿ ವ್ಯಕ್ತಿಗೆ – ತಲಾ 5 ಕೆ.ಜಿ ಅಕ್ಕಿ, ಗೋಧಿ ವಿತರಣೆ. 1 ಕೆ.ಜಿ ಬೇಳೆ ವಿತರಣೆ.
– ಅಂದಾಜು 8 ಕೋಟಿ ವಲಸಿಗರಿಗೆ ನೆರವು. ಇದಕ್ಕಾಗಿ 3,500 ಕೋಟಿ ರೂ. ವೆಚ್ಚ.
– ಪಿಎಂ ಆವಾಸ್ ಯೋಜನೆಯಡಿಯಲ್ಲಿ ಕಡಿಮೆ ದರದಲ್ಲಿ ಬಾಡಿಗೆ ಮನೆ.
– ಬೀದಿ ವ್ಯಾಪಾರಿಗಳಿಗೆ 5,000 ರೂ. ಸಾಲ
– ಮನರೇಗಾದಲ್ಲಿ ದಿನದ ಕನಿಷ್ಠ ವೇತನ 202 ರೂ.ಗೆ ಏರಿಕೆ

ವಲಸಿಗ ಕಾರ್ಮಿಕರನ್ನು ಬಲವಂತವಾಗಿ ತಡೆಯಲು ಅಸಾಧ್ಯ. ಆದರೆ ಅವರ ಬಗ್ಗೆ ಅಂಕಿ ಅಂಶಗಳ ಸಂಗ್ರಹ ಮುಖ್ಯ. ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಾರ್ಮಿಕ ಇಲಾಖೆ ವಲಸಿಗರ ನೋಂದಣಿ ಮಾಡುವುದರಿಂದ ನೇರ ನಗದು ವಿತರಣೆ ಇತ್ಯಾದಿ ಸೌಲಭ್ಯಗಳನ್ನು ಅವರಿಗೆ ವಿಸ್ತರಿಸಬಹುದು.
– ಸುರೇಶ್ ಹರಿ, ಅಧ್ಯಕ್ಷ, ಕ್ರೆಡಾಯ್, ಬೆಂಗಳೂರು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top