ಅಸ್ತಿತ್ವಕ್ಕೆ ತಡಕಾಡುತ್ತಿರುವವರ ಲೊಳಲೊಟ್ಟೆ

ಅಸಹಿಷ್ಣುತೆ ಎಂಬುದು ಇತ್ತೀಚೆಗೆ ಹುಟ್ಟಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿರುವ ಹೊಚ್ಚ ಹೊಸ ಪದ. ಇದನ್ನು ನೋಡುತ್ತಿದ್ದರೆ ಕಳೆದ ಹದಿನೈದು ವರ್ಷಗಳಿಂದಲೂ ಅತಿಯಾಗಿ ಬಳಸಿದ ಸೆಕ್ಯುಲರ್ ಮತ್ತು ಕೋಮುವಾದ ಎಂಬ ಪದಗಳು ಸವಕಲಾಯಿತೆಂದು ಅದರ ವಾರಸುದಾರರಿಗೇ ಅನ್ನಿಸಿತೆ ಎಂಬ ಅನುಮಾನ ಮೂಡುವುದು ಸಹಜ.500x500x8765-nayantara-sahgal-0.jpg.pagespeed.ic.epLD4C8lMRಅರೆ ಇಸ್ಕಿ, ಏಕಾಏಕಿ ಈ ಅಸಹಿಷ್ಣುತೆ ವಿರೋಧಿ ಚಳವಳಿ ಎದ್ದು ಕುಳಿತಿದ್ದಾದರೂ ಹೇಗೆ? ಎಷ್ಟೇ ಯೋಚಿಸಿದರೂ ಸಮರ್ಪಕ ಉತ್ತರ ಮಾತ್ರ ಹೊಳೆಯುತ್ತಿಲ್ಲ.

ಇಲ್ಲೊಂದು ಪ್ರಶ್ನೆ. ಧಾರ್ವಿುಕ ಅಸಹಿಷ್ಣುತೆ, ವೈಚಾರಿಕ ತಾಕಲಾಟ ಇವೆಲ್ಲ ಈ ದೇಶಕ್ಕೆ ಪರಿಚಯವಾದದ್ದು ಕಳೆದ ಒಂದೂವರೆ ವರ್ಷದ ಈಚೆಗೆ ಮಾತ್ರವೇನು? ಸ್ವಾತಂತ್ರ್ಯೂರ್ವದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೂ ಅಷ್ಟೆ, ಆ ನಂತರದ ದಿನಗಳನ್ನು ಮೆಲುಕು ಹಾಕಿದರೂ ಅಷ್ಟೆ.. ಗುಲಾಮಗಿರಿ, ಹೇರಿಕೆ, ಹಿಂಸೆ ಹೇರಳವಾಗಿಯೇ ಕಾಣಿಸುತ್ತದೆ.

ಮೊದಲು ಹತ್ತಾರು ಮುಸ್ಲಿಂ ಆಕ್ರಮಣಕಾರರ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ದೇಶನಿಷ್ಠ ಸೈನಿಕರು ಮತ್ತು ಅಮಾಯಕರಿಗೆ ಲೆಕ್ಕವೇ ಇಲ್ಲ. ಉದಾಹರಣೆಗೆ 1761ರ ಪಾಣಿಪತ್ ಯುದ್ಧದ ನಂತರ ಒಂದೇ ಸಂದರ್ಭದಲ್ಲಿ ನಲ್ವತ್ತರಿಂದ ಎಪ್ಪತ್ತು ಸಾವಿರ ಮರಾಠಾ ಯೋಧರು, ಇಪ್ಪತ್ತು ಸಾವಿರಕ್ಕೂ ಹೆಚ್ಚು ಮರಾಠಾ ಮಹಿಳೆಯರು ಮತ್ತು ಚಿಕ್ಕ ಚಿಕ್ಕ ಮಕ್ಕಳು ಕೊಲ್ಲಲ್ಪಟ್ಟರು.

1784ರಿಂದ 1799ರ ಅವಧಿಯಲ್ಲಿ ಟಿಪ್ಪು ಸುಲ್ತಾನ ಸುಮಾರು 5600ಕ್ಕೂ ಕ್ಯಾಥೋಲಿಕ್ ಕ್ರೖೆಸ್ತರನ್ನು ಬರ್ಬರವಾಗಿ ಕೊಂದುಹಾಕಿದ ಎಂಬುದಕ್ಕೆ ಇತಿಹಾಸದ ಪುಟದಲ್ಲಿ ಸ್ಪಷ್ಟ ದಾಖಲೆ ಸಿಗುತ್ತದೆ. ಅದು ‘ಮಂಗಳೂರು ಕ್ರೖೆಸ್ತರ ಹತ್ಯಾಕಾಂಡ’ ಎಂತಲೇ ಪ್ರಸಿದ್ಧ. ಇಷ್ಟಾದರೂ ಟಿಪ್ಪು ಸುಲ್ತಾನ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಲು ಯಾವ ಅಡ್ಡಿಯೂ ಇಲ್ಲ. ಇರಲಿ.

1857ರ ಹೊತ್ತಿಗೆ ಅಲಹಾಬಾದ್ ಸಮೀಪ ನಡೆದ ‘ಜನರಲ್​ನೇಲಿ’ ನರಮೇಧದಿಂದ ಹಿಡಿದು 1919ರ ಜಲಿಯನ್​ವಾಲಾಬಾಗ್ ಹತ್ಯಾಕಾಂಡದ ವರೆಗೆ ದೇಶದಲ್ಲಿ ನಡೆದ ಅಮಾಯಕರ ಮಾರಣಹೋಮದ ಲೆಕ್ಕ ಇಟ್ಟವರಾರು?

1922ರಲ್ಲಿ ಕೇರಳದ ಮಲ್ಬಾರ್​ನಲ್ಲಿ ಮಾಪಿಳ್ಳೆಗಳು ನಡೆಸಿದ ಹತ್ಯಾಕಾಂಡವನ್ನು ಈ ದೇಶದ ಬಹುಸಂಖ್ಯಾತರು ಎಂದಿಗೂ ಮರೆಯುವ ಹಾಗಿಲ್ಲ. 1946ರ ಸೆಪ್ಟೆಂಬರ್​ನಲ್ಲಿ ನಡೆದ ಕೋಲ್ಕತಾ ಹತ್ಯಾಕಾಂಡ ಮತ್ತು ನೌಕಾಲಿ ಹತ್ಯಾಕಾಂಡದಲ್ಲಿ ಐದರಿಂದ ಹತ್ತು ಸಾವಿರ ಅಮಾಯಕ ಹಿಂದುಗಳು ಪ್ರಾಣ ಕಳೆದುಕೊಂಡರು. ಇನ್ನು 1947ರಲ್ಲಿ ದೇಶ ವಿಭಜನೆ ಆದಾಗ ನಡೆದ ಹಿಂಸಾಚಾರ, ಹತ್ಯೆ, ಹರಿದ ರಕ್ತಕ್ಕೆ ಲೆಕ್ಕವಿಲ್ಲ. ಉದಾಹರಣೆಗೆ ಪಶ್ಚಿಮ ಪಂಜಾಬ್ ಒಂದರಲ್ಲೇ ಹತ್ತು ಲಕ್ಷಕ್ಕೂ ಹೆಚ್ಚು ಹಿಂದುಗಳು ಮುಸ್ಲಿಂ ಮತಾಂಧರ ದಾಳಿಯಿಂದ ಪ್ರಾಣ ಕಳೆದುಕೊಂಡರು ಎಂಬುದನ್ನು ಇತಿಹಾಸದ ದಾಖಲೆಗಳು ಹೇಳುತ್ತವೆ. ಇಷ್ಟೆಲ್ಲ ಇದ್ದರೂ ಈ ಎಲ್ಲ ಹೃದಯವಿದ್ರಾವಕ ಘಟನೆಗಳನ್ನು ಮನಸ್ಸಿನಲ್ಲೇ ನುಂಗಿಕೊಂಡು ಇಂದಲ್ಲ ನಾಳೆ ಪರಿಸ್ಥಿತಿ ಸರಿಹೋದೀತೆಂಬ ನಿರೀಕ್ಷೆಯಲ್ಲಿ ಬಹುಪಾಲು ಮಂದಿ ಕಾಲ ತಳ್ಳುತ್ತಿದ್ದಾರೆ.

ಇವೆಲ್ಲ ಸ್ವಾತಂತ್ರ್ಯೂರ್ವದಲ್ಲಿ ನಡೆದುಹೋದ ಘಟನೆಗಳು. ಮೊಘಲರು, ಮುಸ್ಲಿಂ ದಾಳಿಕೋರರು, ಬ್ರಿಟಿಷರ ಕ್ರೌರ್ಯದ ಪರಿಣಾಮದಿಂದ ಆದ ಕಹಿ ಘಟನೆಗಳು. ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತು ವರ್ಷ ಸಮೀಪಿಸುತ್ತ ಬಂದ ಮೇಲಾದರೂ ಈ ದೇಶದಲ್ಲಿ ಶಾಂತಿ ನೆಲೆಸಿತೇ? ಹಿಂಸಾಚಾರ ನಿಂತಿತೇ?

1948ರಲ್ಲಿ ನಡೆದ ‘ಹೈದರಾಬಾದ್ ಹತ್ಯಾಕಾಂಡ’ ಬಹುಶಃ ಸ್ವಾತಂತ್ರ್ಯೊತ್ತರ ಭಾರತದಲ್ಲಿ ನಡೆದ ಮೊದಲ ಹಿಂಸಾಕಾಂಡ. ಹೈದರಾಬಾದ್ ನಿಜಾಮನ ಸೋಲಿನ ಸೇಡು ತೀರಿಸಿಕೊಳ್ಳಲು ಮುಸ್ಲಿಮರು ನಡೆಸಿದ ಹಿಂಸಾಚಾರದಲ್ಲಿ ಸುಮಾರು ಒಂದು ಸಾವಿರ ಹಿಂದುಗಳು ಪ್ರಾಣ ಕಳೆದುಕೊಂಡರು ಎಂದು ವಿವಿಧ ದಾಖಲೆಗಳು ಹೇಳುತ್ತವೆ. ಆ ನಂತರದ್ದು 1969ರ ಗುಜರಾತ್ ದಂಗೆ; ಆಗಿನ್ನೂ ಮೋದಿಯ ಹೆಸರು ನೆರೆಮನೆಯವರಿಗೂ ಗೊತ್ತಿರಲಿಲ್ಲ ಅಂತ ತೋರುತ್ತದೆ. ಆಗ ನಡೆದ ಹಿಂದು-ಮುಸ್ಲಿಂ ದಂಗೆಯಲ್ಲಿ 660 ಹಿಂದುಗಳು ಮತ್ತು 450 ಮುಸ್ಲಿಮರು ಪ್ರಾಣ ಕಳೆದುಕೊಂಡರು. 1976ರಲ್ಲಿ ದೆಹಲಿಯ ತುರ್ಕ್​ವುನ್ ಪ್ರದೇಶದಲ್ಲಿದ್ದ ಅಕ್ರಮ ವಲಸಿಗರ ತೆರವು ಕಾರ್ಯಾಚರಣೆ ವೇಳೆ 150ಕ್ಕೂ ಹೆಚ್ಚು ಮುಸ್ಲಿಮರು ಪೊಲೀಸರ ಗುಂಡಿಗೆ ಬಲಿಯಾದರು.

ಮೊರಾದಾಬಾದ್ ಹತ್ಯಾಕಾಂಡ: 1980ರಲ್ಲಿ ಮುಸ್ಲಿಮರು ಮತ್ತು ಪೊಲೀಸರ ನಡುವಿನ ತಿಕ್ಕಾಟ ಹಿಂಸಾತ್ಮಕ ಸಂಘರ್ಷ ರೂಪಕ್ಕೆ ತಿರುಗಿತು. ಮುಂದೆ ಅದು ಹಿಂದು-ಮುಸ್ಲಿಂ ದಂಗೆ ಸ್ವರೂಪ ಪಡೆದುಕೊಂಡು 2,500ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಅದೇ ವರ್ಷ ತ್ರಿಪುರಾದಲ್ಲಿ ನಡೆದ ಮಂಡಿ ಹತ್ಯಾಕಾಂಡದಲ್ಲಿ 500 ಮಂದಿ ಬಂಗಾಲಿ ನಿರಾಶ್ರಿತ ಹಿಂದುಗಳು ಮತಾಂಧರ ದಾಳಿಗೆ ಸಿಲುಕಿ ಸಾವನ್ನಪ್ಪಿದರು.

1984ರ ಸಿಖ್ ಹತ್ಯಾಕಾಂಡ: ಈ ರಕ್ತಸಿಕ್ತ ಇತಿಹಾಸವನ್ನಂತೂ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಗೆ ದೆಹಲಿ ಮತ್ತು ದೇಶದ ನಾನಾ ಭಾಗಗಳಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ನಡೆಸಿದ ಪ್ರತೀಕಾರದ ಪರಿಣಾಮ 3,000ಕ್ಕೂ ಹೆಚ್ಚು ಸಿಖ್ ಸಮುದಾಯದವರು ಬರ್ಬರವಾಗಿ ಹತ್ಯೆಯಾದರು. ಈ ಕಳಂಕವನ್ನು ಕಾಂಗ್ರೆಸ್ ಎಂದಿಗೂ ತೊಳೆದುಕೊಳ್ಳಲು ಸಾಧ್ಯವಿಲ್ಲ. ಇಲ್ಲೊಂದು ಸಂಗತಿಯನ್ನು ಗಮನಿಸಬೇಕು. ಸ್ವಾತಂತ್ರ್ಯೊತ್ತರ ಭಾರತದಲ್ಲಿ ತೊಂಭತ್ತರ ದಶಕದವರೆಗೆ ನಡೆದ ಎಲ್ಲ ಹಿಂಸಾಚಾರ ಮತ್ತು ಹತ್ಯಾಕಾಂಡಗಳಿಗೆ ಕಾಂಗ್ರೆಸ್ ಸರ್ಕಾರಗಳ ಪ್ರೇರಣೆ, ಅಸಹಾಯಕತೆ, ಧಾರ್ವಿುಕ ತಾರತಮ್ಯ ಮತ್ತು ಅದರ ಪರಿಣಾಮ ಪೊಲೀಸರು ತಾಳಿದ ತಾಟಸ್ಥ್ಯ ನಿಷ್ಕ್ರಿಯ ಧೋರಣೆ ಕಾರಣವಾದರೆ, ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಪಕ್ಷವೇ ನೇರವಾಗಿ ಭಾಗಿ ಆಯಿತು. ಇದಕ್ಕೆ ಈ ನಿದರ್ಶನವೇ ಸಾಕು. ಇಂದಿರಾ ಸಾವಿನ ನಂತರ ದೇಶದ ಪ್ರಧಾನಿಯಾದ ರಾಜೀವ್ ಗಾಂಧಿ ಸಿಖ್ ಹತ್ಯಾಕಾಂಡದ ಕುರಿತು, ‘ದೊಡ್ಡ ಮರ ಉರುಳಿದಾಗ ನೆಲ ಕಂಪಿಸುವುದು ಸಹಜ’ ಎಂದಿದ್ದರು. ಈ ಬಗ್ಗೆ ಹೆಚ್ಚಿನ ವಿವರಣೆ ಅಗತ್ಯವಿಲ್ಲವೆಂದು ತೋರುತ್ತದೆ.

1989ರ ಭಾಗಲ್ಪುರ ಹತ್ಯಾಕಾಂಡ: ಬಿಹಾರದ ಭಾಗಲ್ಪುರ ವಿಶ್ವವಿದ್ಯಾಲಯದಿಂದ ಆರಂಭವಾದ ದಂಗೆಯಲ್ಲಿ 900ರಿಂದ 1000 ಮಂದಿ ಹಿಂದುಗಳು ಮತ್ತು ಮುಸ್ಲಿಮರು ಮೃತಪಟ್ಟರು. ಅಷ್ಟು ಮಾತ್ರವಲ್ಲ, ಅಲ್ಲಿಂದ 2000ನೇ ಇಸವಿಯವರೆಗೆ ದೇಶದ ಒಂದಲ್ಲ ಒಂದು ಭಾಗದಲ್ಲಿ ದಿನವೂ ಮತೀಯ ಹಿಂಸಾಚಾರ ನಡೆಯುತ್ತಲೇ ಇದೆ. ಅಂದಾಜು ಮೂರು ಸಾವಿರ ವಿವಿಧ ಹಿಂಸಾಚಾರ ಪ್ರಕರಣಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಕಾಶ್ಮೀರಿ ಪಂಡಿತರ ಕರುಣಾಜನಕ ಕತೆ: 1990ರ ದಶಕದಲ್ಲಿ ಕಾಶ್ಮೀರದಲ್ಲಿ ಆರಂಭವಾದ ಭಯೋತ್ಪಾದನೆ ಮತ್ತು ಮತಾಂಧರು ನಡೆಸಿದ ಹತ್ಯಾಕಾಂಡಗಳ ಪರಿಣಾಮ ಮೂರು ಸಾವಿರ ಮಂದಿ ಕಾಶ್ಮೀರಿ ಪಂಡಿತರು ಪ್ರಾಣ ತೆತ್ತಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಮನೆಮಠ ಕಳೆದುಕೊಂಡು ಬೀದಿಭಿಕಾರಿಗಳಾಗಿದ್ದಾರೆ. ಆದರೆ ಆ ಬಗ್ಗೆ ವಿಚಾರವಾದಿಗಳ ಹೃದಯ ಮಿಡಿಯುವುದಿಲ್ಲ!

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಮತ್ತು ನಂತರದ ಹಿಂಸಾಚಾರ ಪ್ರಕರಣಗಳಲ್ಲಿ ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2000ನೇ ಇಸವಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 30 ಮಂದಿ ಅಮರನಾಥ ಯಾತ್ರಿಕರು ಅಸುನೀಗಿದರು.

2002ರ ಗೋಧ್ರಾ ಹತ್ಯಾಕಾಂಡ: ಸಾಬರಮತಿ ರೈಲಿನಲ್ಲಿ ಅಯೋಧ್ಯೆಯಿಂದ ಮರಳುತ್ತಿದ್ದ 59 ಕರಸೇವಕರನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣ ಮತ್ತು ಅದರ ಪರಿಣಾಮ ಹಿಂಸಾಚಾರದಲ್ಲಿ ಸುಮಾರು 2 ಸಾವಿರ ಮಂದಿ ಸಾವನ್ನಪ್ಪಿದರು.

2002ರ ಅಕ್ಷರಧಾಮ ದಾಳಿ: ಗುಜರಾತದ ಈ ಪ್ರಸಿದ್ಧ ದೇವಸ್ಥಾನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 79 ಹಿಂದುಗಳು ಮತ್ತು ರಘುನಾಥ ದೇವಸ್ಥಾನದ ಮೇಲಿನ ದಾಳಿಯಲ್ಲಿ 14 ಹಿಂದುಗಳು ಕೊಲ್ಲಲ್ಪಟ್ಟರು.

2003ರಲ್ಲಿ ಜಮ್ಮು-ಕಾಶ್ಮೀರದ ನದಿಮಾರ್ಗ್ ಭಯೋತ್ಪಾದಕ ದಾಳಿಯಲ್ಲಿ 24 ಹಿಂದುಗಳು, ಕಾಲೂಚಕ್ ಹಿಂಸಾಚಾರದಲ್ಲಿ 31 ಹಿಂದುಗಳು, ಕೇರಳದ ಮರದ್ ದಾಳಿಯಲ್ಲಿ ಎಂಟು ಮಂದಿ ಹಿಂದುಗಳು ಪ್ರಾಣ ಕಳೆದುಕೊಂಡರು. 2006ರಲ್ಲಿ ವಾರಾಣಸಿ ಬಾಂಬ್ ಸ್ಪೋಟದಲ್ಲಿ 28 ಮಂದಿ ಮೃತಪಟ್ಟರು. ಅದೇ ವರ್ಷ ಜಮ್ಮು-ಕಾಶ್ಮೀರದ ದೋಡಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 35 ಹಿಂದುಗಳು ಪ್ರಾಣ ತೆತ್ತರು. 2008ರಲ್ಲಿ ನಡೆದ ಭೀಕರ ಮುಂಬೈ ದಾಳಿಯಲ್ಲಿ 164 ಮಂದಿ ಸಾವನ್ನಪ್ಪಿದರು.

2013ರಲ್ಲಿ ಉತ್ತರಪ್ರದೇಶದ ಮುಜಾಫರ ನಗರದಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಸುಮಾರು 60 ಮಂದಿ ಸಾವನ್ನಪ್ಪಿದ್ದು ಗೊತ್ತೇ ಇದೆ. 2010ರಿಂದ 2014ರ ಅವಧಿಯಲ್ಲಿ ಛತ್ತೀಸಗಢದ ದಂತೇವಾಡ, ಪಶ್ಚಿಮ ಬಂಗಾಳದ ಡೆಗಂಗಾ, ಮಹಾರಾಷ್ಟ್ರದ ಗಡಚಿರೋಳಿ, ಆಂಧ್ರಪ್ರದೇಶದ ಹಲವಾರು ಕಡೆಗಳಲ್ಲಿ ನಡೆದ ಎಡಪಂಥೀಯ ಉಗ್ರರಾದ ನಕ್ಸಲರ ದಾಳಿಗಳಲ್ಲಿ 600ಕ್ಕೂ ಹೆಚ್ಚು ಪೊಲೀಸರು ಮತ್ತು 300ಕ್ಕೂ ಹೆಚ್ಚು ಮಂದಿ ನಾಗರಿಕರು ಜೀವ ಕಳೆದುಕೊಂಡರು. 2012ರಲ್ಲಿ ಅಸ್ಸಾಂನಲ್ಲಿ ಬೋಡೊ ಜನರು ಮತ್ತು ಮುಸ್ಲಿಂ ಜನಾಂಗದವರ ನಡುವಿನ ಕಾದಾಟದಲ್ಲಿ 77 ಮಂದಿ ಸಾವನ್ನಪ್ಪಿದ್ದರು. ಹಾಗಾದರೆ ಇದ್ಯಾವುದೂ ಅಶಾಂತಿ, ಅಸಹಿಷ್ಣುತೆ ಅಲ್ಲವೇ? ಇದನ್ನೆಲ್ಲ ಏನೆಂದು ಕರೆಯೋಣ?

ಬಿ.ಆರ್. ಅಂಬೇಡ್ಕರ್ ಅವರು ರಾಜಕೀಯವಾಗಿ ಮೇಲಕ್ಕೆ ಬರದಂತೆ ತಡೆದು ಹತ್ತಿಕ್ಕಿದ್ದು ನೆಹರು ಮತ್ತು ಕಾಂಗ್ರೆಸ್ ಪಕ್ಷ ಹೊಂದಿದ್ದ ಅಸಹಿಷ್ಣುತೆ ಕಾರಣಕ್ಕೇ ಅಲ್ಲವೇ? ಇತಿಹಾಸವನ್ನು ಸುಳ್ಳು ಮಾಡಬಹುದೇ?

ದೇಶದ ಏಕತೆ-ಅಖಂಡತೆಗಾಗಿ ಕಾಶ್ಮೀರ ಚಳವಳಿ ಹಮ್ಮಿಕೊಂಡಿದ್ದ ಶ್ಯಾಮಪ್ರಸಾದ್ ಮುಖರ್ಜಿ ಅವರನ್ನು ಹತ್ಯೆ ಮಾಡಿದ್ದು ಯಾವ ಕಾರಣಕ್ಕೆ? ಜನಸಂಘದ ನೇತಾರರಾಗಿದ್ದ ಪಂಡಿತ ದೀನದಯಾಳ್ ಉಪಾಧ್ಯಾಯ ಅವರನ್ನು ಹತ್ಯೆ ಮಾಡಿದವರು ಯಾರು? ಆಗ ಅಧಿಕಾರದಲ್ಲಿದ್ದವರು ಕಣ್ತೋರಿಕೆಯ ತನಿಖೆಯನ್ನೂ ನಡೆಸದ್ದು ಯಾಕೆ?

1996ರಲ್ಲಿ ಭಟ್ಕಳದಲ್ಲಿ ಜನಪ್ರಿಯ ವೈದ್ಯ ಡಾ. ಚಿತ್ತರಂಜನ್ ಹತ್ಯೆ ನಡೆದದ್ದು ಎಲ್ಲರಿಗೂ ಗೊತ್ತೇ ಇದೆ. ಹಂತಕರು ಯಾರು? ಅವರ ಹಿನ್ನೆಲೆ ಏನು ಎಂಬುದು ಇನ್ನೂ ಹೊರಬಂದಿಲ್ಲ. ಯಾಕಾಗಿ? ಚಿತ್ತರಂಜನ್ ಯಾವ ಪಕ್ಷ, ಪಂಗಡಕ್ಕೆ ಸೇರಿದವರು ಎಂಬುದಕ್ಕಿಂತ ಹೆಚ್ಚಾಗಿ ಅವರೊಬ್ಬ ಜನಾನುರಾಗಿ ವೈದ್ಯರಾಗಿದ್ದರು. ಮುಸ್ಲಿಂ ಜನಾಂಗದವರೇ ಹೆಚ್ಚು ಮಂದಿ ಅವರಿಂದ ಔಷಧೋಪಚಾರದ ಸೇವೆ ಪಡೆಯುತ್ತಿದ್ದರು. ಆದರೂ ಅವರ ಹತ್ಯೆ ಆಯಿತಲ್ಲ?

ಚಿತ್ತರಂಜನ್ ಹತ್ಯೆಗೆ ಸಂಬಂಧಿಸಿ ನ್ಯಾ.ರಾಮಚಂದ್ರಯ್ಯ ಮತ್ತು ನ್ಯಾ.ಕೆದಂಬಾಂಡಿ ಜಗನ್ನಾಥ ಶೆಟ್ಟಿ ತನಿಖಾ ಆಯೋಗದ ವರದಿಯನ್ನು 20 ವರ್ಷಗಳಿಂದಲೂ ಸರ್ಕಾರಗಳು ಬಚ್ಚಿಟ್ಟುಕೊಂಡಿರುವುದೇಕೆ? ಭಟ್ಕಳದಲ್ಲಿ ಪಾಕಿಸ್ತಾನದ ಐಎಸ್​ಐ ನೆಲೆ ಇದೆ ಎಂದು ವರದಿಯಲ್ಲಿ ಹೇಳಿರುವುದಕ್ಕಾಗಿಯೇ? ಅಥವಾ ಐಎಸ್​ಐ ಉಗ್ರರೇ ಚಿತ್ತರಂಜನ್ ಹತ್ಯೆ ಮಾಡಿದ್ದಾರೆಂದು ಖಚಿತವಾಗಿ ವರದಿಯಲ್ಲಿ ಹೇಳಿರುವುದಕ್ಕಾಗಿಯೇ? ಎರಡೂ ಆಯೋಗಗಳು ಯೋಗ್ಯ ರೀತಿಯಲ್ಲಿ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದರೂ, ಚಿತ್ತರಂಜನ್ ಹತ್ಯೆ ತನಿಖೆಯನ್ನು ಮುಕ್ತಾಯ ಮಾಡುವಂತೆ ಸಿಬಿಐ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದು ಯಾಕೆ? ಇದನ್ನೆಲ್ಲ ನೋಡುವಾಗ ವಿಚಾರವಾದಿಗಳಲ್ಲಿರುವ ಅಸಹಿಷ್ಣುತೆಯ ವಿರುದ್ಧದ ಆಕ್ರೋಶ ಎಲ್ಲಿಗೆ ಹೋಗಿತ್ತು?

ಹಾಗೇ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹತ್ಯೆ ಪ್ರಕರಣ. ಒಡಿಶಾದ ಕಂಧಮಲ್ ಜಿಲ್ಲೆಯ ತುಮುದಿಬಂದ್ ಗ್ರಾಮದಲ್ಲಿ ಸಾವಿರಾರು ಬಡ ಮತ್ತು ಗುಡ್ಡಗಾಡು ಮಕ್ಕಳಿಗೆ ವಸತಿ ಶಾಲೆ ನಡೆಸುತ್ತಿದ್ದ ಸಂತ ಲಕ್ಷ್ಮಣಾನಂದ ಸರಸ್ವತಿ ಮತ್ತು ಅವರ ಆಶ್ರಮದ ಮಕ್ಕಳ ಮೇಲೆ ದುಷ್ಕರ್ವಿುಗಳು ಹತ್ತಾರು ಬಾರಿ ದಾಳಿ ನಡೆಸಿದರೂ ಸರ್ಕಾರಗಳೇಕೆ ಕಣ್ತೆರೆದು ನೋಡಲಿಲ್ಲ? ಜೀವ ಬೆದರಿಕೆ ಇರುವ ಬಗ್ಗೆ ಲಕ್ಷ್ಮಣಾನಂದರೇ ಪೊಲೀಸರಿಗೆ ದೂರು ನೀಡಿದ್ದರು. ಕೊನೆಗೊಂದು ದಿನ ಅವರು ಹಂತಕರ ಗುಂಡಿಗೆ ಬಲಿಯಾದರು. ಈ ಹತ್ಯೆಯ ಹಿಂದೆ ಬಿಜೆಡಿ ಸಂಸದ ಸುರ್ಗಿಬಾ ಸಿಂಗ್ ಪನ್ನಾ, ಕಾಂಗ್ರೆಸ್ ಸಂಸದ ರಾಧಾಕಾಂತ್ ನಾಯಕ್ ಮತ್ತು ಓರ್ವ ಕ್ರೖೆಸ್ತ ಪಾದ್ರಿ ಇದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದೇ ತಡ, ಪ್ರಕರಣದ ತನಿಖೆ ನಂತರ ಮುಂದೆ ಸಾಗುವುದೇ ಇಲ್ಲ. ಯಾಕೆ?

2012-2014ರ ಅವಧಿಯಲ್ಲಿ ತಮಿಳುನಾಡೊಂದರಲ್ಲೇ 16 ಮಂದಿ ಪ್ರಮುಖ ಹಿಂದು ಸಂಘಟನೆಗಳ ಮತ್ತು ಹಿಂದುಪರ ರಾಜಕೀಯ ನಾಯಕರ ಹತ್ಯೆ ಆಯಿತು. ಅವರಲ್ಲಿ ತಮಿಳುನಾಡು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯ ಪುಗಳೇಂದಿ, ಹಿಂದು ಮಕ್ಕಳ ಕಚ್ಚಿ ಸಂಸ್ಥಾಪಕ ಅರ್ಜುನ್ ಸಂಪತ್… ಹೀಗೆ ಒಬ್ಬರಾದ ನಂತರ ಒಬ್ಬರು ಹತ್ಯೆಯಾದರು. ಒಬ್ಬನೇ ಒಬ್ಬ ವಿಚಾರವಾದಿಯ ಕರುಳು ಕರಗಿತೇ? ಕೇರಳದಲ್ಲಿ ನಡೆದ ಸಾಲು ಸಾಲು ಹಿಂದು ನಾಯಕರ ಹತ್ಯಾಕಾಂಡಕ್ಕೆ ಯಾರಾದರೂ ತುಟಿ ಬಿಚ್ಚಿದರೇ?

ಇಷ್ಟು ದಿನ ತೆಪ್ಪಗಿದ್ದವರು ಈಗೇಕೆ ಎದ್ದು ಕುಳಿತು ಬಡಬಡಿಸುತ್ತಿದ್ದಾರೆ? ಇತ್ತೀಚೆಗೆ ಲೇಖಕ ಎಂ.ಎಂ. ಕಲಬುರ್ಗಿಯವರು ಹಂತಕರ ಗುಂಡಿಗೆ ಬಲಿಯಾದಾಗ ಶುರುವಾದ ಅಸಹಿಷ್ಣುತೆಯ ಕೂಗು ಉತ್ತರಪ್ರದೇಶದ ದಾದ್ರಿಯ ಅಕ್ಲಾಕ್ ಎಂಬ ಮುಸ್ಲಿಂ ವ್ಯಕ್ತಿಯ ಹತ್ಯಾ ಪ್ರಕರಣದವರೆಗೆ ಮುಂದುವರಿಯಿತು. ಈ ಎರಡೂ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನೂ ಇಲ್ಲ. ಹಂತಕರನ್ನು ಹಿಡಿದು ಶಿಕ್ಷಿಸುವುದು ಕರ್ನಾಟಕ ಮತ್ತು ಉತ್ತರಪ್ರದೇಶ ಸರ್ಕಾರದ ಹೊಣೆಗಾರಿಕೆ. ಆದರೆ ಬಂದೂಕಿನ ನಳಿಕೆಯ ಗುರಿ ಇಟ್ಟಿರುವುದು ಕೇಂದ್ರ ಸರ್ಕಾರದ ಕಡೆಗೆ. ಇದ್ಯಾವ ನ್ಯಾಯ? ಇದ್ಯಾವ ನೀತಿ? ಸ್ವಲ್ಪ ಸಹನೆ ಬೇಕಲ್ಲವೇ?

ಸಹಿಷ್ಣುತೆ ಕುರಿತು ಬೊಬ್ಬೆ ಹೊಡೆಯುತ್ತಿರುವವರಿಗೆ ಸಹಿಸಲಾಗುತ್ತಿಲ್ಲ. ಕಾರಣ ಇಷ್ಟೆ, ಬಹುಸಂಖ್ಯಾತ ಜನಜಾತಿಗೆ ಸೇರಿದ ಎಲ್ಲರಲ್ಲೂ ಹೊಸ ಭರವಸೆ, ಹೊಸ ಆಲೋಚನೆ ಹುಟ್ಟಿಕೊಂಡಿರುವಾಗ ಠೇವಣಿ ಸ್ವರೂಪದಲ್ಲಿರುವ ಅಲ್ಪಸಂಖ್ಯಾತ ವರ್ಗದಲ್ಲೂ ಎಲ್ಲಿ ಸತ್ಯದ ಅರಿವಾಗಿಬಿಡುತ್ತದೋ, ಹಾಗಾದರೆ ಏನು ಮಾಡುವುದು? ಮುಖವಾಡ ಕಳಚಿದರೆ ಭವಿಷ್ಯ ಹೇಗೆ ಎಂಬ ಆತಂಕ, ಅದರ ಪರಿಣಾಮ ಈ ಅಸಹನೆ ಇದ್ದರೂ ಇರಬಹುದು. ಅಲ್ಲವೇ?

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top