ಕೊರೊನಾ ಸಮರದ ಸಾಹಸಿ ಸೇನಾನಿಗಳು ಈ ಆಶಾ ಕಾರ್ಯಕರ್ತೆಯರು

ವಿಕ ಸುದ್ದಿಲೋಕ ಬೆಂಗಳೂರು:  ಹಲವು ಕಡೆಗಳಲ್ಲಿ ಅವರ ಮೇಲೆ ಹಲ್ಲೆನಡೆಯಿತು, ಕೆಲವೆಡೆ ಅವರ ಕಡತಗಳನ್ನು ಕಿತ್ತೆಸೆದರು, ಬಾಯಿಗೆ ಬಂದಂತೆ ನಿಂದಿಸಿದರು.. ಆದರೂ ಅವರು ತಮ್ಮ ಕರ್ತವ್ಯದಿಂದ ಹಿಂದೆ ಸರಿಯಲಿಲ್ಲ. ಮೂಲಸೌಕರ್ಯಗಳಿಲ್ಲ, ರೋಗಗಳ ಆತಂಕ ತುಂಬಿರುವ ಜಾಗಗಳಲ್ಲಿ ಅವರು ಒಬ್ಬಂಟಿಯಾಗಿ ಸಂಚರಿಸಬೇಕು.. ಅಷ್ಟಾದರೂ ಅವರು ಎದೆಗುಂದಲಿಲ್ಲ. ಸಕಾಲದಲ್ಲಿ ವೇತನ ನೀಡಲಿಲ್ಲವೆಂದು ಬೀದಿಗಿಳಿದು ಪ್ರತಿಭಟಿಸಿದ್ದರು. ಆದರೆ, ಸಂಕಷ್ಟದ ಈ ಕಾಲದಲ್ಲಿ ಅದನ್ನೇ ಬಳಸಿ ಬ್ಲ್ಯಾಕ್‌ಮೇಲ್‌ ಮಾಡಲಿಲ್ಲ. – ಇದು ಕೊರೊನಾ ವಿರುದ್ಧ ಸಮರದಲ್ಲಿ ನೈಜ ಸೇನಾನಿಗಳಾಗಿ ಊರೂರುಗಳಲ್ಲಿ ಕಾರ್ಯಾಚರಿಸುತ್ತಿರುವ ಆಶಾ ಕಾರ್ಯಕರ್ತೆಯರ ಕತೆ.
ಕೊರೊನಾದ ಸಂಕಷ್ಟ ಕಾಲದಲ್ಲಿದೇಶದ ಸರ್ವ ಜನರು ಲಾಕ್‌ಡೌನ್‌ ಹೆಸರಿನಲ್ಲಿ ಮನೆಯೊಳಗೆ ಬೆಚ್ಚಗಿದ್ದಾರೆ. ಆದರೆ, ವೈದ್ಯಕೀಯ ಸಿಬ್ಬಂದಿ ರೋಗಿಗಳ ಚಿಕಿತ್ಸೆಗಾಗಿ ಪಣತೊಟ್ಟು ನಿಂತಿದ್ದಾರೆ. ಆಶಾ ಕಾರ್ಯಕರ್ತೆಯರೆಂಬ ಗುಲಾಬಿ ದಿರಿಸಿನ ಹೆಣ್ಮಕ್ಕಳು ಜನರ ರಕ್ಷಣೆಗಾಗಿ ಅಕ್ಷರಶಃ ಬೀದಿ ಹೋರಾಟ ನಡೆಸುತ್ತಿದ್ದಾರೆ. ತಮ್ಮ ವ್ಯಾಪ್ತಿಯ ಪ್ರತಿ ಮನೆಯಲ್ಲಿ ಯಾರ್ಯಾರು ಇದ್ದಾರೆ, ಯಾರಿಗಾದರೂ ಜ್ವರ, ಕೆಮ್ಮು ಮೊದಲಾದ ಕೊರೊನಾ ಲಕ್ಷಣಗಳಿವೆಯಾ? ಮನೆಗೆ ಬೇರೆ ಊರಿನಿಂದ ಯಾರಾದರೂ ಬಂದಿದ್ದಾರಾ ಎಂಬೆಲ್ಲ ಮಾಹಿತಿಗಳನ್ನು ದಾಖಲಿಸಿಕೊಂಡು ಆರೋಗ್ಯ ಇಲಾಖೆಗೆ ನೀಡುವ ಕೆಲಸ ಇವರದು. ಮುಂಬಯಿಯ ಧಾರಾವಿಯಂಥ ಪರಮ ಕೊಳೆಗೇರಿಗಳಿಂದ ಹಿಡಿದು ಎಲ್ಲೆಡೆ ಸಂಚರಿಸುತ್ತಿದ್ದಾರೆ. ಅವರಿಗೂ ಕುಟುಂಬಗಳಿವೆ, ಮಕ್ಕಳಿದ್ದಾರೆ. ಊರೂರು ತಿರುಗುವಾಗ ಯಾವ ಕ್ಷಣದಲ್ಲಿ ಬೇಕಾದರೂ ಸೋಂಕು ತಗುಲುವ ಆತಂಕ ಇದ್ದೇ ಇದೆ. ದಿನಕ್ಕೆ ಐದಾರು ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗುವ ಇವರಿಗೆ ಊಟ ತಿಂಡಿಯೂ ಸಿಗುವುದಿಲ್ಲ.  ನೀರನ್ನು ಸಮೇತ ಬ್ಯಾಗಲ್ಲೇ ಇಟ್ಟುಕೊಂಡು ತಿರುಗಬೇಕು. ಇಷ್ಟೆಲ್ಲ ಕಷ್ಟಪಟ್ಟು ಸಮೀಕ್ಷೆಗೆ ಹೋದರೆ ಜನ ಸರಿಯಾಗಿ ಮಾಹಿತಿ ನೀಡುವುದು ಬಿಡಿ, ಬೈದು ಓಡಿಸುತ್ತಾರೆ. ಕೆಲವರು ಹಲ್ಲೆಯನ್ನೂ ಮಾಡಿದ್ದಾರೆ. ಮನೆಯೊಳಗೆ ಕರೆಯುವ ಸಹೃದಯತೆ ಇಲ್ಲವೇ ಇಲ್ಲ.  ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿರುವುದರ ಹಿಂದೆ ಆಶಾ ಕಾರ್ಯಕರ್ತೆಯರ ಪಾಲು ದೊಡ್ಡದಿದೆ ಎಂದು ಪ್ರಧಾನಿಯವರೇ ಕೊಂಡಾಡಿದ್ದಾರೆ. ಆದರೆ, ಆಶಾ ಕಾರ್ಯಕರ್ತೆಯರು ಅಂಥ ಮಹಾಗೌರವನ್ನೇನೂ ಬಯಸುತ್ತಿಲ್ಲ. ‘‘ಕ್ಷೇತ್ರ ಕಾರ್ಯದ ವೇಳೆ ಸಾಕಷ್ಟು ನೋವಿನ ಘಟನೆಗಳು ನಡೆದಿವೆ. ನಮಗೆ ಬೇಸರವಿಲ್ಲ. ದೇಶಸೇವೆಯ ದೊಡ್ಡ ಅವಕಾಶ ಎಂಬ ಹೆಮ್ಮೆ ನಮಗೆ,’’ ಎನ್ನುವ ಅವರು ತಮ್ಮ ಕೆಲಸಕ್ಕೆ ಸಹಕಾರ ಕೊಡಿ ಎಂದಷ್ಟೇ ಮನವಿ ಮಾಡುತ್ತಿದ್ದಾರೆ.
ಆಶಾ ಕೆಲಸವೇನು? ಒಬ್ಬ ಆಶಾ ಕಾರ್ಯಕರ್ತೆ ದಿನಕ್ಕೆ 25 ಮನೆಯಂತೆ ಸರ್ವೆ ನಡೆಸಬೇಕು. ಪ್ರತಿ ಮನೆಗೆ ದಿನ ಬಿಟ್ಟು ದಿನ ಬಂದು ಆರೋಗ್ಯ ತಪಾಸಣೆ ನಡೆಸಬೇಕು. ಬೆಳಗ್ಗೆ ಊರು ಭೇಟಿ, ಬಳಿಕ ಮಾಹಿತಿಯನ್ನು ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡಬೇಕು.
ಗುಲಾಬಿ ಗ್ಯಾಂಗ್‌- 10,23,136 ದೇಶದಲ್ಲಿ ,  40,720 ರಾಜ್ಯದಲ್ಲಿ.

ಸಂಕಷ್ಟಗಳೇನು?- ಸೂಕ್ತವಾದ ಗ್ಲೌಸ್‌ಗಳನ್ನು ಒದಗಿಸಿಲ್ಲ, ರಕ್ಷಣಾ ಕಿಟ್‌ಗಳಿಲ್ಲ. ಸಿಂಗಲ್‌ ಪದರ ಮಾಸ್ಕ್‌ ಮಾತ್ರ ಸಿಕ್ಕಿದೆ. – ಜನರು ಸಹಕಾರ ನೀಡುತ್ತಿಲ್ಲ, ಕೆಲವು ಕಡೆ ನಿಂದನೆ, ಕೆಲವು ಕಡೆ ಹಲ್ಲೆಯೂ ನಡೆದಿದೆ.- ದಿನಕ್ಕೆ ಹತ್ತಾರು ಕಿ.ಮೀ. ನಡೆಯಬೇಕು, ಊಟ ಬಿಡಿ ಕೆಲವು ಕಡೆ ನೀರೂ ಸಿಗೋಲ್ಲ.
ಈಗ ಜನರಿಗೆ ಆಶಾ ಕಾರ್ಯಕರ್ತೆಯರೇನು ಎನ್ನುವುದ ಅರಿವಾಗಿದೆ. ಕಠಿಣ ಸನ್ನಿವೇಶಗಳಲ್ಲೂ ಹಿಂಜರಿಯದ ಅವರಿಗೆ ಸರಕಾರ ಕನಿಷ್ಠ ವೇತನ ನೀಡಬೇಕು. ನರ್ಸಿಂಗ್‌ ತರಬೇತಿ ನೀಡಿ ಅರ್ಹರಿಗೆ ಭಡ್ತಿ ನೀಡಬೇಕು. ಜತೆಗೆ ಉದ್ಯೋಗ ಭದ್ರತೆ ಕಲ್ಪಿಸಬೇಕು. – ಎಸ್‌. ವರಲಕ್ಷ್ಮಿ ಅಧ್ಯಕ್ಷರು ಕರ್ನಾಟಕ, ರಾಜ್ಯ ಆಶಾ ಕಾರ್ಯಕರ್ತೆಯರ ಸಂಘ

ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯ ರಕ್ಷಣೆ, ಗರ್ಭಿಣಿ, ಬಾಣಂತಿ, ಮಕ್ಕಳ ಆರೈಕೆಯಲ್ಲಿ ಬಹುದೊಡ್ಡ ಪಾತ್ರ ವಹಿಸುವ ಆಶಾ ಕಾರ್ಯಕರ್ತೆಯರು ಈಗ ಕೋರೊನಾ ವಿರುದ್ಧದ ಹೋರಾಟದಲ್ಲೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಆದರೆ, ಅವರ ಕರ್ತವ್ಯದಲ್ಲಿ ಸಾಕಷ್ಟು ಅಡ್ಡಿ ಆತಂಕಗಳು ಸೃಷ್ಟಿಯಾಗಿವೆ. ಇವರಿಗೆ ಜನರ ಸಹಕಾರ, ಸರಕಾರದ ಪ್ರೋತ್ಸಾಹ ಬೇಕಾಗಿದೆ.

ಭಯಪಡುವ ಬೀದಿಗಳಲ್ಲಿ ಭರವಸೆಯ ಹೆಜ್ಜೆ

– ಏ.3ರಂದು ಬೆಂಗಳೂರಿನ ಥಣಿಸಂದ್ರದ ಸಾರಾಯಿ ಪಾಳ್ಯದ ಸಾದಿಕ್ ಲೇಔಟ್ನಲ್ಲಿ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಮೇಲೆ ಹಲ್ಲೆ ನಡೆಸಿದ್ದು ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.
– ಏ. 2ರಂದು ಬಂಟ್ವಾಳ ತಾಲೂಕಿನ ಕರಿಯಂಗಳದಲ್ಲಿ, 3ರಂದು ಅಮ್ಟಾಡಿ ಗ್ರಾಮದಲ್ಲಿ ಬೆದರಿಕೆ ಹಾಕಲಾಗಿದೆ.
ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಯಲ್ಲಿ ಗ್ರಾ.ಪಂ. ಸದಸ್ಯರೊಬ್ಬರು ಆಶಾ ಕಾರ್ಯಕರ್ತೆಯನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಶಿವಮೊಗ್ಗ ತಾಲೂಕು ಗೊಂದಿಚಟ್ನಹಳ್ಳಿಯಲ್ಲೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.
– ಏ.9ರಂದು ಕಲಬುರಗಿ ನಗಧರ ರೆಹಮತ್ ನಗರದ ರಾಮಜಿನಗರ, ನೂರಾನಿ ಮೈಲಾದ ಪರಿಸರದಲ್ಲಿ ಎನ್ಆರ್‌ಸಿ ಸರ್ವೇಗೆ ಬಂದಿದ್ದೀರಿ ಎಂದು ಆಕ್ಷೇಪಿಸಿ ಪುಸ್ತಕ, ಪೇಪರ್‌ಗಳನ್ನು ಕಸಿದು ಬೈದು ಓಡಿಸಿದ್ದಾರೆ.
– ಏ.10ರಂದು ಹುಬ್ಬಳ್ಳಿಯ ಗೌಳಿ ಗಲ್ಲಿಯಲ್ಲಿ ಕಡತಗಳನ್ನು ಕಸಿದು ಬೆದರಿಕೆ
– ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಸಾವಳಿ ಗ್ರಾಮದಲ್ಲಿ ಹೈದರಾಬಾದ್‌ನಿಂದ ಬಂದಿರುವ ಶ್ರೀಕಾಂತ, ಈತನ ಹೆಂಡತಿ ಪ್ರಿಯಾಂಕಾ ಅವರಿಗೆ ಮನೆಯಿಂದ ಹೊರ ಬರಬೇಡಿ. ಹೋಮ್ ಕ್ವಾರಂಟೈನ್‌ನಲ್ಲಿ ಇರಿ ಎಂದಿದ್ದಕ್ಕೆ ಆವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೂ ಯತ್ನಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಎರಡು ತಂಡದ ಮೇಲೆ ಒಂದೇ ದಿನ ಹಲ್ಲೆ ನಡೆದಿತ್ತು. ಬಳಿಕ ಪೊಲೀಸ್ ಭದ್ರತೆ ನೀಡಲಾಗಿತ್ತು.
– ಮಂಡ್ಯ ತಾಲೂಕಿನ ಹಳ್ಳಿಯೊಂದಕ್ಕೆ ಬೇರೆ ಊರಿನಿಂದ ಬಂದಿದ್ದ ವ್ಯಕ್ತಿಯನ್ನು ಪ್ರಶ್ನಿಸಿದಕ್ಕೆ ಜಗಳ ಮಾಡಿದ ಘಟನೆ ನಡೆದಿದೆ.
ಚಿತ್ರದುರ್ಗ ನಗರದ ಖಾಜಿ ಮೊಹಲ್ಲಾದಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದ ಮನೆಯ ಉಸ್ತುವಾರಿ ಹೊತ್ತಿದ್ದ ಶಬೀನಾ ಬೇಗಂ ಅವರಿಗೆ ನಿಯಮಿತ ಭೇಟಿಗೆ ಅವಕಾಶ ನೀಡದೇ ಹಲ್ಲೆಗೂ ಮುಂದಾಗಿದ್ದಾರೆ.
– ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಿದರಹಳ್ಳಿ ತಾಂಡದಲ್ಲಿ ಶಶಿಕಲಾ ಬಾಯಿ ಮೇಲೆ ಅದೇ ಗ್ರಾಮದ ನಾಲ್ವರು ಹಲ್ಲೆ ನಡೆಸಿದ್ದರು.
ಏ.11ರಂದು ಮಂಗಳೂರಿನಲ್ಲಿ ಎಸ್‌ಡಿಪಿಐ  ಕಾರ್ಯಕರ್ತರಿಂದ ಕಾರ್ಯಕರ್ತೆಯರ ನಿಂಧನೆ. ಇಬ್ಬರ ಸೆರೆ.

ಲಾಠಿ ಹಿಡಿದು ಬಸ್ಕಿ ಹೊಡಿಸಿದ ಆಶಾ ಸೈನಿಕರು!
ಗದಗ: ಜಿಲ್ಲೆಯ ರೋಣ ತಾಲೂಕಿನ ಮಾರನಬಸರಿ, ಜಕ್ಕಲಿ ಗ್ರಾಮದ ಆಶಾ ಕಾರ್ಯಕರ್ತೆಯರು, ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಜೊತೆಗೆ ಬೇಕಾಬಿಟ್ಟಿ ಸಂಚರಿಸುವವರ ನಿಯಂತ್ರಣಕ್ಕೆ ಲಾಠಿ ಹಿಡಿದಿದ್ದಾರೆ. ಅಲ್ಲದೇ ಬಸ್ಕಿ ಶಿಕ್ಷೆ ಕೂಡ ವಿಧಿಸುತ್ತಿದ್ದಾರೆ. ರಾಜ್ಯದ ವಿವಿಧೆಡೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯುತ್ತಿದ್ದರೆ ಈ ಗ್ರಾಮಗಳಲ್ಲಿ ಪರಿಸ್ಥಿತಿ ಸಂಪೂರ್ಣ ವಿರುದ್ಧವಾಗಿದೆ. ಪಿಂಕ್ ಟೀಮ್ ಕಂಡ ಕೂಡಲೇ ಜನರೂ ಓಟ ಕೀಳುತ್ತಿದ್ದಾರೆ. ಹೆಣ್ಣು ಮಕ್ಕಳ ಕೈಯಲ್ಲಿ, ಅದೂ ಲಾಠಿಯಲ್ಲಿ ಪೆಟ್ಟು ತಿನ್ನುವುದು ಬೇಡಪ್ಪ ಅಂತ ಯುವಕರು ಮನೆಯೊಳಗೆ ಕುಳಿತಿರುವುದರಿಂದ ಪ್ರಯೋಗ ಯಶಸ್ವಿಯಾಗಿದೆ!

ನನ್ನ ಮಗಳನ್ನು ಕರೆ ತನ್ನಿ ಪ್ಲೀಸ್
– ಇದು ಶಿವಮೊಗ್ಗದ ಆಶಾ ಕಾರ್ಯಕರ್ತೆಯ ಅಳಲು
ಶಿವಮೊಗ್ಗ: ಕೊರೊನಾದಿಂದ ಜನರ ರಕ್ಷಿಸಲು ಪಣತೊಟ್ಟ ಆಶಾ ಕಾರ್ಯಕರ್ತೆಯೊಬ್ಬರು ಬೆಂಗಳೂರಿನಲ್ಲಿರುವ ತನ್ನ ಪುಟ್ಟ ಮಗಳನ್ನು ಕರೆಸಿಕೊಳ್ಳಲಾಗದೆ ಕಣ್ಣೀರು ಹಾಕುತ್ತಿದ್ದಾರೆ. ಶಿವಮೊಗ್ಗ ತುಂಗಾನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆಶಾ ಕಾರ್ಯಕರ್ತೆ ನಳಿನ ಅವರು ತಮ್ಮ 7 ವರ್ಷದ ಮಗಳು ದರ್ಶಿನಿಯನ್ನು ಮಾ. 14ರಂದು ಬೆಂಗಳೂರಿನ ಸೋದರ ಮಾವನ ಮನೆಗೆ ಕಳುಹಿಸಿದ್ದರು. ಯುಗಾದಿಗೆ ಮರಳಿ ಕರೆತರುವ ಪ್ಲ್ಯಾನ್ ಇತ್ತು. ಆದರೆ, ಲಾಕ್‌ಡೌನ್‌ ಆಗಿದ್ದರಿಂದ ‘ಇವರಿಲ್ಲಿ, ಅವಳಲ್ಲಿ’ ಎಂಬ ಪರಿಸ್ಥಿತಿ. ಹುಟ್ಟುವಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಬಹು ಕಷ್ಟದಿಂದ ಬೆಳೆಸಿದ್ದರು. ಆಕೆಗೆ ಆಘಾತವಾಗದಂತೆ ನೋಡಿಕೊಳ್ಳಬೇಕೆಂದು ವೈದ್ಯರು ಸಲಹೆ ನೀಡಿದ್ದರಂತೆ. ಈಗ ನೋಡಿದರೆ ಮಗಳು ದಿನಕ್ಕೆ ಹತ್ತಾರು ಬಾರಿ ಕರೆ ಮಾಡಿ, ‘‘ಯಾವಾಗ ಬರುತ್ತೀಯ ಅಮ್ಮ, ನಾನಿಲ್ಲಿ ಇರೋದಿಲ್ಲ, ಅಪ್ಪ ನನ್ನನ್ನು ಬಂದು ಕರೆದುಕೊಂಡು ಹೋಗು’’ ಎಂದು ದುಂಬಾಲು ಬೀಳುತ್ತಿದ್ದಾಳೆ. ಮಗಳನ್ನು ಕರೆತರುವುದಕ್ಕಾಗಿ ನಳಿನ ಅವರು ಹಲವು ಅಧಿಕಾರಿಗಳ ಬಳಿ ಹೋಗಿ ಅಲವತ್ತುಕೊಂಡಿದ್ದಾರೆ. ಎಲ್ಲರೂ ಬರೀ ಸಮಾಧಾನವಷ್ಟೇ ಹೇಳಿದ್ದಾರೆ. ವಿದೇಶದಿಂದ ದೊಡ್ಡವರ ಮಕ್ಕಳನ್ನು ಕರೆತಂದಿದ್ದಾರೆ, ನನ್ನ ಮಗಳನ್ನು ಕರೆ ತರಲು ಮಾತ್ರ ಯಾಕಿಷ್ಟು ಅಡ್ಡಿ ಎನ್ನುವುದು ಅವರ ಪ್ರಶ್ನೆ.

ಗರ್ಭಿಣಿಯ ಮನೆ ಖಾಲಿ ಮಾಡಿಸಿದರು
ನಾನು ನಾಲ್ಕು ತಿಂಗಳ ಗರ್ಭಿಣಿ. ಬೆಂಗಳೂರಿನಿಂದ ಬಂದ ವ್ಯಕ್ತಿಯೊಬ್ಬರಿಗೆ 14 ದಿನ ಕ್ವಾರಂಟೈನ್‌ನಲ್ಲಿರಬೇಕು ಎಂದು ತಿಳುವಳಿಕೆ ನೀಡಿದೆ. ಆಗ ಆ ವ್ಯಕ್ತಿ ‘ನೀನ್ಯಾರು ಕೇಳೋಕೆ’ ಎಂದು ನನಗೆ ಏಕ ವಚನದಲ್ಲಿ ನಿಂದಿಸಿದ. ಇಷ್ಟೆಲ್ಲ ಆಗಿ ಮನೆಗೆ ಬಂದರೆ ಬಾಡಿಗೆ ಮನೆ ಮಾಲೀಕ ‘ಕೊರೊನಾ ಪೀಡಿತರೊಂದಿಗೆ ಕೆಲಸ ಮಾಡಿ ನಮ್ಮ ಮನೆಗೆ ಬರುವುದು ಬೇಡ. ಮನೆ ಖಾಲಿ ಮಾಡಿ,’ ಎಂದ. ಈಗ ಎರಡು ಪುಟ್ಟ ಮಕ್ಕಳೊಂದಿಗೆ ಬೇರೆ ಮನೆಗೆ ಹೋಗಿದ್ದೇನೆ.
-ವಿಜಾಪುರದ ಮಹಿಳೆಯೊಬ್ಬರ ಕಣ್ಣೀರ ಕತೆ

ನೇಮಕ ಹೇಗೆ?
– ನರ್ಸ್‌ಗಳು ಗುರುತಿಸಿ, ಪಂಚಾಯಿತಿ ಮೂಲಕ ನೇಮಕ ನಡೆಯುತ್ತದೆ. ಎಸ್ಸೆಸ್ಸೆಲ್ಸಿ ಪಾಸಾಗಬೇಕು.

ಏನೇನು ಜವಾಬ್ದಾರಿ?
– ಗರ್ಭಿಣಿಯರಿಗೆ ತಾಯಿ ಕಾರ್ಡ್ ಮಾಡಿಸುವುದು, ಆರೈಕೆಯ ಬಗ್ಗೆ ಮಾಹಿತಿ ನೀಡುವುದು, ಟಿಬಿ ರೋಗಿಗಳಿಗೆ ಡಾಕ್, ಅನ್ಯರೋಗಿಗಳಿಗೆ ಸಹಕಾರ. ಡೆಂಗೆ, ಮಲೇರಿಯಾ ಜ್ವರದ ಬಗ್ಗೆ ಮಾಹಿತಿ ಸಂಗ್ರಹ. ಜಂತುಹುಳ ಕಾರ್ಯಕ್ರಮ, ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಹುಟ್ಟಿನಿಂದ ಒಂದುವರೆ ವರ್ಷದ ಮಗುವಿನ ಆರೈಕೆ ಮಾಹಿತಿ, ಗರ್ಭಿಣಿಯರನ್ನು ಒಟ್ಟು ಸೇರಿಸಿ ಆರೋಗ್ಯ, ಸ್ವಚ್ಛತೆ, ಆಹಾರ ಬಗ್ಗೆ ಮಾಹಿತಿ, ಓಆರ್‌ಎಸ್‌  ವಿತರಣೆ-ತಯಾರಿಕೆ ಬಗ್ಗೆ ಮಾಹಿತಿ ನೀಡುವುದು.
– ದಿನಕ್ಕೆ 4ರಿಂದ 5 ಗಂಟೆ ಕೆಲಸ, ತಿಂಗಳಿಗೆ 4ರಿಂದ 5 ಬಾರಿ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು.
ಪ್ರೋತ್ಸಾಹಧನ ಎಷ್ಟು?
– ತಿಂಗಳಿಗೆ ರಾಜ್ಯದಿಂದ 3,500 ರೂ, ಕೇಂದ್ರದಿಂದ 3,500 ರೂ. (ಈಗ ತಲಾ 500 ರೂ. ಹೆಚ್ಚಿಸಲಾಗಿದೆ)
– ಬಿಪಿಎಲ್ ಹೊಂದಿದ ಮಹಿಳೆ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಸಹಕರಿಸಿದರೆ 200 ರೂ. ಸಿಗುತ್ತದೆ.

ನಿವೃತ್ತಿಯ ಬಳಿಕ ಏನು?
– ನಿವೃತ್ತಿ ವೇಳೆ 10ಸಾವಿರ ರೂ. ನೀಡುವ ಭರವಸೆ.
– ಕೊರೊನಾ ಸೇವೆ ವೇಳೆ ಮೃತಪಟ್ಟರೆ 10 ಲಕ್ಷ ರೂ. ವಿಮೆ

ಬೇಡಿಕೆ
– 12,000 ರೂ. ಮಾಸಿಕ ವೇತನ ಕೊಡಿ.
– ನರ್ಸಿಂಗ್ ತರಬೇತಿ, ಅರ್ಹರಿಗೆ ಬಡ್ತಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top