ರೈತರ ವಿರೋಧಕ್ಕೆ ಡೋಂಟ್‌ಕೇರ್‌ – ಜನಾಕ್ರೋಶ ಧಿಕ್ಕರಿಸಿ ಎಪಿಎಂಸಿ ತಿದ್ದುಪಡಿ ಕಾಯಿದೆಗೆ ಸಂಪುಟ ಅಸ್ತು

– ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬಾಕಿ, ಪ್ರತಿಪಕ್ಷಗಳಿಂದ ಹೋರಾಟದ ಎಚ್ಚರಿಕೆ
ವಿಕ ಸುದ್ದಿಲೋಕ ಬೆಂಗಳೂರು : ರೈತರು, ರೈತ ಸಂಘಟನೆಗಳು, ಪ್ರತಿಪಕ್ಷಗಳು ಹಾಗೂ ಇನ್ನಿತರ ಬಳಕೆದಾರರ ರಾಜ್ಯವಾಪಿ ತೀವ್ರ ವಿರೋಧದ ನಡುವೆಯೂ ವಿವಾದಿತ ಎಪಿಎಂಸಿ ಕಾಯಿದೆ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರ ಅಂಕಿತ ಬೀಳುವುದೊಂದು ಬಾಕಿಯಿದೆ. ಈ ಸಂಬಂಧ ಒತ್ತಡ ತಂದಿದ್ದ ಕೇಂದ್ರ ಸರಕಾರ ‘ಮಾದರಿ ಕಾಯಿದೆ’ಯ ಪ್ರತಿಯನ್ನೂ ಕಳುಹಿಸಿಕೊಟ್ಟಿತ್ತು. ಅದರ ಆಧಾರದಲ್ಲೆ ಈ ಕಾಯಿದೆ ತಿದ್ದುಪಡಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಸಮ್ಮತಿ ನೀಡಲಾಗಿದೆ. ಎಪಿಎಂಸಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಭವಿಷ್ಯದಲ್ಲಿ ರೈತರು ಕಾರ್ಪೊರೇಟ್ ಸಂಸ್ಥೆಗಳ ಕಪಿಮುಷ್ಟಿಯೊಳಗೆ ಸಿಲುಕುವುದನ್ನು ತಪ್ಪಿಸಬೇಕು ಎನ್ನುವ ಜನಾಗ್ರಹಕ್ಕೆ ಸಿಎಂ ಯಡಿಯೂರಪ್ಪ ಅವರು ಸಹಮತ ವ್ಯಕ್ತಪಡಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.ಈ ಸುಗ್ರೀವಾಜ್ಞೆಯ ವಿರುದ್ಧ ರಾಜ್ಯಾದ್ಯಂತ ರೈತರ ವಲಯದಲ್ಲಿ ಆಕ್ರೋಶ ತೀವ್ರಗೊಳ್ಳುತ್ತಿದೆ. ಈ ನಡುವೆಯೂ ಇದೊಂದು ರೈತ ಸ್ನೇಹಿಯಾದ ಉತ್ತಮ ಕಾಯಿದೆಯೆಂದು ಸರಕಾರ ಸಮರ್ಥಿಸಿಕೊಂಡಿದೆ. ರೈತರು ಬೆಳೆದ ಬೆಳೆ ಮಾರಲು ಅವರಿಗೆ ಸ್ವಾತಂತ್ರ್ಯ ನೀಡಲು ಈ ಸುಗ್ರೀವಾಜ್ಞೆ ತರಲಾಗುತ್ತಿದೆ ಎಂದು ಸಂಪುಟ ಸಭೆ ವಿವರ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವ್ಯಾಖ್ಯಾನಿಸಿದರು. ಈ ಮಧ್ಯೆ, ಎಂಪಿಎಂಸಿ ಕಾಯಿದೆ ತಿದ್ದುಪಡಿಯ ಸಾಧಕ-ಬಾಧಕ ಸಂಬಂಧ ಸುದೀರ್ಘ ಚರ್ಚೆ ನಡೆಯಿತು. ಅಧಿಕಾರಿಗಳು ಈ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಬಳಿಕ ಸರ್ವಾನುಮತದಿಂದ ಅಂಗೀಕಾರ ನೀಡಲಾಯಿತು ಎನ್ನಲಾಗಿದೆ.
ರಾಜ್ಯ ಸಮಿತಿಗೆ ನಿಯಂತ್ರಣ ಅಧಿಕಾರ ಈ ತಿದ್ದುಪಡಿ ಕಾಯಿದೆಯಂತೆ ತಾಲೂಕು, ಜಿಲ್ಲಾಮಟ್ಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ(ಎಪಿಎಂಸಿ) ಈ ಮೊದಲಿನ ಅಧಿಕಾರ ಇರುವುದಿಲ್ಲ. ಇನ್ನು ಮುಂದೆ ಎಪಿಎಂಸಿ ಯಾರ್ಡ್‌ನಲ್ಲಿ ಮಾತ್ರ ಈ ಸಮಿತಿಗೆ ಅಧಿಕಾರ ಇರುತ್ತದೆ. ಯಾರ್ಡ್ ಹೊರಗೆ ನಡೆಯುವ ವಹಿವಾಟಿನ ಮೇಲೆ ನಿಯಂತ್ರಣದ ಅಧಿಕಾರ ಇರುವುದಿಲ್ಲ. ಆದರೆ, ರಾಜ್ಯ ಮಟ್ಟದ ಎಪಿಎಂಸಿ ನಿರ್ದೇಶನಾಲಯದ ಅಧಿಕಾರವನ್ನು ಮೊಟಕುಗೊಳಿಸಿಲ್ಲ. ರಾಜ್ಯ ಸಮಿತಿಯ ಅಧಿಕಾರ ಅಬಾಧಿತವಾಗಿರಲಿದ್ದು, ರೈತರಿಗೆ ಅನ್ಯಾಯವಾದರೆ ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಮಾಧುಸ್ವಾಮಿ ತಿದ್ದುಪಡಿ ಕಾಯಿದೆಯಲ್ಲಿನ ಅಂಶಗಳ ಬಗ್ಗೆ ತಿಳಿಸಿದರು.
ಷರತ್ತುಗಳು ಅನ್ವಯ ರೈತರಿಂದ ಬೆಳೆ ಖರೀದಿಸುವ ಖಾಸಗಿಯವರು, ಖಾಸಗಿ ಕಂಪನಿಯವರು ಬ್ಯಾಂಕ್‌ನಿಂದ ಖಾತರಿ ಪಡೆಯುವುದು, ಠೇವಣಿ ಇಡುವುದು ಕಡ್ಡಾಯ. ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನೇ ಬಳಸಬೇಕು ಎಂಬ ಅಂಶ ಕಾಯಿದೆಯಲ್ಲಿ ಅಡಕವಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಸುಗ್ರೀವಾಜ್ಞೆಯಲ್ಲಿ ಏನಿದೆ? ಕಾನೂನು ಸಚಿವರು ತಿಳಿಸಿದ ಪ್ರಕಾರ ಎಪಿಎಂಸಿ ಕಾಯಿದೆಯ 2 ಸೆಕ್ಷನ್‌ಗಳಿಗೆ ಮಾತ್ರ ತಿದ್ದುಪಡಿ ತರಲಾಗಿದೆ. ಅದರಂತೆ ರೈತರು ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಅಧೀನಕ್ಕೆ ಒಳಪಡುವುದಿಲ್ಲ. ರೈತರು ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಬೆಳೆ ಮಾರಾಟ ಮಾಡಬಹುದು. ಹಾಗೆಯೆ ಖಾಸಗಿಯವರು ರೈತರಿಂದ ನೇರವಾಗಿ ಬೆಳೆ ಖರೀದಿಸಬಹುದು.
ಆದಾಯ ದ್ವಿಗುಣದ ಆಶಯ ರೈತರ ಆದಾಯ ದ್ವಿಗುಣಗೊಳಿಸಬೇಕು, ರೈತರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಈ ಕಾಯಿದೆ ತಿದ್ದುಪಡಿಯ ಉದ್ದೇಶವಾಗಿದೆ. ಬೆಳೆ ಕೊಂಡೊಕೊಳ್ಳಲು ಖಾಸಗಿ ಮಾರುಕಟ್ಟೆಯನ್ನೂ ಪ್ರಾರಂಭಿಸಬಹುದು. ಪರವಾನಗಿ ಪಡೆದುಕೊಂಡು ವ್ಯಕ್ತಿಗತವಾಗಿಯೂ ಖರೀದಿ ಮಾಡಬಹುದು. ಇದರಿಂದ ರೈತರು ಮತ್ತು ಖರೀದಿದಾರರ ನಡುವೆ ನೇರ ಸಂಪರ್ಕವಾಗಲಿದೆ. ಈ ಮೊದಲು ಮಧ್ಯವರ್ತಿಗಳಿಂದ ಕಮಿಷನ್ ಸಂಗ್ರಹವಾಗುತ್ತಿತ್ತು. ಅದಕ್ಕೆ ಕಡಿವಾಣ ಬೀಳಲಿದೆ. ಎಪಿಎಂಸಿ ಸೆಸ್ ಕಡಿತವಾಗಲಿದೆ. ಆದರೆ, ರೈತರಿಗೆ ಸಹಾಯವಾಗುವುದೇ ಮುಖ್ಯವಾಗಿದೆ ಎಂದು ಸಚಿವರು ತಿಳಿಸಿದರು.

ಖಾಸಗಿಯವರು ರೈತರಿಂದ ನೇರವಾಗಿ ಬೆಳೆ ಖರೀದಿ ಮಾಡುತ್ತಿರುವುದು ಇದೇ ಮೊದಲಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನಿಂದಲೂ ನಡೆಯುತ್ತಿದೆ. ರಿಲಯನ್ಸ್ ಇನ್ನಿತರ ಸಂಸ್ಥೆಗಳು ಹೀಗೆ ಖರೀದಿ ಮಾಡುತ್ತಿವೆ. ಈಗ ರೆಗ್ಯೂಲರೈಸ್ ಮಾಡಲಾಗುತ್ತಿದೆ. ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಕಳುಹಿಸಿರಲಿಲ್ಲ. ಸಂಪುಟದ ಅನುಮೋದನೆವರೆಗೆ ತಡೆ ಹಿಡಿದಿದ್ದರು. ವಿಧಾನಮಂಡಲದಲ್ಲೆ ಕಾಯಿದೆ ಪಾಸು ಮಾಡುವ ಉದ್ದೇಶವಿತ್ತು. ಕೊರೊನಾದಿಂದಾಗಿ ಸಾಧ್ಯವಾಗಲಿಲ್ಲ. – ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ
ಮಧ್ಯವರ್ತಿಗಳ ಕಪಿಮುಷ್ಠಿಯಿಂದ ಎಪಿಎಂಸಿ ಕಾಯಿದೆ ರೈತರಿಗೆ ತಕ್ಕಮಟ್ಟಿನ ರಕ್ಷ ಣೆ ನೀಡಿತ್ತು. ಕಾಯಿದೆ ತಿದ್ದುಪಡಿಯಾದರೆ ಬಂಡವಾಳಶಾಹಿಗಳು, ಬಹುರಾಷ್ಟ್ರೀಯ ಕಂಪನಿಗಳಿಂದ ರೈತರು ಶೋಷಣೆಗೊಳಗಾಗುವ ಅಪಾಯವಿದೆ.-ದೇವೇಗೌಡ, ಮಾಜಿ ಪ್ರಧಾನಿ
ಆಡಳಿತಾರೂಢ ಬಿಜೆಪಿ ದೇಶವನ್ನು ಮತ್ತೆ ಈಸ್ಟ್ ಇಂಡಿಯಾ ಕಂಪನಿ ಕಾನೂನುಗಳ ದಿನಗಳತ್ತ ಕೊಂಡೊಯ್ಯುತ್ತಿದೆ. ರೈತರು, ವರ್ತಕರನ್ನು ಬಹುರಾಷ್ಟ್ರೀಯ ಕಂಪನಿಗಳ ದಾಸ್ಯಕ್ಕೆ ಒಪ್ಪಿಸಲು ಹೊರಟಿದೆ. ರೈತರಿಗೆ ದ್ರೋಹ ಎಸಗುವ ಈ ಕಪಟ ನಿರ್ಧಾರದ ವಿರುದ್ಧ ಹೋರಾಟ ಅನಿವಾರ್ಯ.- ಎಚ್.ಕೆ.ಪಾಟೀಲ್, ಮಾಜಿ ಸಚಿವ

ಎಪಿಎಂಸಿ ವ್ಯವಸ್ಥೆಯ ಕಡೆಗಣನೆ ಬೇಡ

– ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ
ರೈತಾಪಿ ವರ್ಗ ಬೆಳೆದ ಉತ್ಪನ್ನಕ್ಕೆ ಯೋಗ್ಯ ಮಾರುಕಟ್ಟೆ ಮತ್ತು ಧಾರಣೆ ಸಿಗುವಂತೆ ಮಾಡುವ ಜವಾಬ್ದಾರಿ ರಾಜ್ಯ ಸರಕಾರ ಹೊರತಂದಿರುವ ‘ನಿಯಂತ್ರಿತ ಮಾರುಕಟ್ಟೆ ಅಥವಾ ಎಪಿಎಂಸಿ’ ಕಾಯಿದೆ ಮೇಲಿದೆ. ರೈತರು ಮಧ್ಯವರ್ತಿಗಳಿಂದ ಅಳತೆಯಲ್ಲಿ, ಖರೀದಿ, ಪಾವತಿ ಇತ್ಯಾದಿ ವಿಚಾರಗಳಲ್ಲಿ ಮೋಸ ಹೋಗದಿರಲಿ ಹಾಗೂ ಒಂದು ಸ್ಪರ್ಧಾತ್ಮಕ ಮಾರಾಟದಿಂದ ಒಳ್ಳೆ ಧಾರಣೆ ಸಿಗುವಂತಾಗಲಿ ಎನ್ನುವ ಉದ್ದೇಶಗಳು ಈ ಎಪಿಎಂಸಿ ವ್ಯವಸ್ಥೆ ಹಿಂದೆ ಅಡಗಿದೆ. ಇವು ಈಡೇರಲು ರೈತರು ತಮ್ಮ ಮನೆ ಬಾಗಿಲಲ್ಲೇ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವ ಬದಲು ತಾಲೂಕು ಮಟ್ಟದಲ್ಲಿರುವ ಎಪಿಎಂಸಿ ಪ್ರಾಂಗಣಕ್ಕೆ ಬಂದು ಮಾರಾಟ ಮಾಡುವ ನಿಬಂಧನೆಯನ್ನು ಈ ಕಾಯಿದೆ ಅಡಿ ಒಡ್ಡಲಾಗಿದೆ. ಜೊತೆಗೆ, ರೈತರು ಉತ್ಪನ್ನವನ್ನು ಕೆಲಕಾಲ ಕೂಡಿಡಲು ಬಯಸಿದರೆ ಸೂಕ್ತ ಶೇಖರಣೆ ವ್ಯವಸ್ಥೆ ಜೊತೆಗೆ ವರ್ಗೀಕರಣ, ಅಡಮಾನ ಸಾಲದ ವ್ಯವಸ್ಥೆ ಅಷ್ಟೇಕೆ ರೈತರಿಗೆ ಊಟ, ಉಪಚಾರ ತಂಗಲು ವ್ಯವಸ್ಥೆಗಳೂ ದೊರಕಬೇಕೆನ್ನುವುದು ಇಲ್ಲಿ ಆಶಯವಾಗಿದೆ. ಈ ಎಲ್ಲಾ ಘನೋದ್ದೇಶಗಳನ್ನು ನಿರ್ವಹಿಸಲು ರೈತರು, ವ್ಯಾಪಾರಸ್ಥರು ಮತ್ತಿತರರನ್ನೊಳಗೊಂಡ ಜನ ತಾಂತ್ರಿಕವಾಗಿ ಆಯ್ಕೆಯಾದ ಸಮಿತಿಯೊಂದನ್ನೂ ರೂಪಿಸಲಾಗಿದೆ.
ಆದರೆ ಈ ವ್ಯವಸ್ಥೆ ಉದಾರಿಕರಣ, ಜಾಗತಿಕರಣ ನೀತಿಗಳಿಗೆ ಹೊಂದಿಕೆಯಾಗುವುದಿಲ್ಲ ಎನ್ನುವುದು ಆಳುವ ವರ್ಗದ ಅಭಿಪ್ರಾಯ. ಜೊತೆಗೆ ಮಧ್ಯವರ್ತಿಗಳ, ದೊಡ್ಡ ದೊಡ್ಡ ಕಂಪನಿಗಳ, ಪಟ್ಟಭದ್ರ ಹಿತಾಸಕ್ತಿಗಳೆಲ್ಲರ ಒತ್ತಡ ಬೇರೆ. ಇಂದಿನ ಎಪಿಎಂಸಿ ಸ್ಪರ್ಧಾತ್ಮಕ ಮಾರಾಟ ವ್ಯವಹಾರದಲ್ಲಿ ಅಸಮರ್ಥವಾಗಿದೆ. ಇದರಲ್ಲಿ ರೈತರಿಗೆ ಸರಿಕಂಡ ಸ್ಥಳದಲ್ಲಿ ಮಾರಾಟ ಮಾಡಲು ಸ್ವಾತಂತ್ರ್ಯವಿಲ್ಲ. ಬದಲಿಗೆ ಎಪಿಎಂಸಿ ವ್ಯಾಪ್ತಿಯಲ್ಲೇ ವ್ಯವಹರಿಸಬೇಕು ಎನ್ನುವುದು ‘ಏಕಸ್ವಾಮ್ಯ ಮತ್ತು ದಬ್ಬಾಳಿಕೆ’ ಮನೋ ಪ್ರವೃತ್ತಿ ಮೊದಲಾದ ಅಪವಾದಗಳನ್ನು ಹೇರಲಾಗಿದೆ. ನೀತಿ ಆಯೋಗ ಮತ್ತು ಕೇಂದ್ರದ ಕೃಷಿ ಸಚಿವಾಲಯಗಳು ಎಪಿಎಂಸಿ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸುತ್ತವೆ. ಕೃಷಿ ಮಾರಾಟ ವ್ಯವಸ್ಥೆಯಲ್ಲಿ ಸರಕಾರದ ಹಿಡಿತ ಸಡಿಲಗೊಳಿಸಿ, ಖಾಸಗಿ ವಲಯಕ್ಕೆ, ಒಪ್ಪಂದ ಕೃಷಿ ಕಂಪನಿಗಳಿಗೆ, ರಫ್ತುದಾರರಿಗೆ ನೇರವಾಗಿ ರೈತರಿಂದ ಖರೀದಿಸುವ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ 2017 ಮಾದರಿ ಕಾಯಿದೆಯೊಂದನ್ನು ಹೊರ ತಂದು ರಾಜ್ಯ ಸರಕಾರಗಳ ಮುಂದಿಡಲಾಗಿದೆ. ಮಾತ್ರವಲ್ಲ ಇದನ್ನು ‘ಅನುಷ್ಠಾನಗೊಳಿಸುವ ರಾಜ್ಯಗಳನ್ನು ಮಾತ್ರ ಪ್ರೋತ್ಸಾಹಿಸಲಾಗುವುದು’ ಎಂದು ಇತ್ತೀಚಿಗೆ 2020ರಲ್ಲಿ ಕೇಂದ್ರ ವಿತ್ತ ಸಚಿವರು ಮಂಡಿಸಿರುವ ಆಯವ್ಯಯದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿರುತ್ತದೆ.
ಹಲ ರಾಜ್ಯಗಳು ಈ ಆದೇಶ ಪಾಲಿಸಿದ್ದರೂ ರೈತ ಚಳವಳಿ ಗಟ್ಟಿಯಾಗಿರುವ ಕರ್ನಾಟಕ ರಾಜ್ಯ ಸ್ವಲ್ಪ ಹಿಂಜರಿದಿರುತ್ತದೆ. ಇದನ್ನು ಸಹಿಸದ ಕೇಂದ್ರ ಸರಕಾರ ಇತ್ತೀಚಿಗೆ ನೇರವಾಗಿ ಪತ್ರ ಬರೆದು ಕರ್ನಾಟಕ ಸರಕಾರ ತಕ್ಷಣದಲ್ಲಿ ರಾಜ್ಯಪಾಲರ ಆದೇಶದ ಮೂಲಕ ಈ ಬದಲಾವಣೆ ತರಲು ಸೂಚಿಸಿದೆ. ಕೊರೊನಾ ಮಹಾಮಾರಿ ಸಮಸ್ಯೆಯಿಂದ ರೈತಾಪಿ ವರ್ಗಕ್ಕೆ ಉತ್ಪನ್ನ ಸಾಗಾಣಿಕೆ ಮಾಡಲು ಕಷ್ಟವಾಗಿರುವ ಪರಿಸ್ಥಿತಿಯನ್ನೇ ನೆಪ ಮಾಡಿಕೊಂಡು, ಸಾಧಕ- ಬಾಧಕಗಳನ್ನು ಅರಿಯುವ ಮೊದಲೇ ರಾಜ್ಯ ಸರಕಾರ ಯಾವ ಕ್ಷ ಣದಲ್ಲಾದರೂ ಈ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.
ಈಗಿರುವ ವ್ಯವಸ್ಥೆಯಲ್ಲಿ ಪಟ್ಟಭದ್ರ ಹಿತಾಸಕ್ತರು, ಮಧ್ಯವರ್ತಿಗಳಿಂದ ರೈತರು ಬವಣೆ ಪಡುತ್ತಿರುವುದರಲ್ಲಿ ಅನುಮಾನವಿಲ್ಲ. ಇಂದು ರೈತ ಬೆಳೆದ ಉತ್ಪನ್ನದಲ್ಲಿ ಶೇ.30-40ರಷ್ಟು ಮಾತ್ರ ನಿಯಂತ್ರಿತ ಮಾರುಕಟ್ಟೆ ವ್ಯಾಪ್ತಿಯಲ್ಲಿ ಮಾರಾಟವಾಗುತ್ತಿದೆ. ಸದ್ಯದ ವ್ಯವಸ್ಥೆಗೆ ಬದಲಾವಣೆ ತಂದಿದ್ದೇ ಆದಲ್ಲಿ ರೈತ ಬೆಳೆದಿದ್ದನ್ನು ವ್ಯಾಪಾರಸ್ಥರು, ಖಾಸಗಿ ಕಂಪನಿಗಳು ಆತನ ಮನೆ ಬಾಗಿಲಲ್ಲೇ ಖರೀದಿಸಬಹುದು ಎನ್ನಲಾಗುತ್ತಿದೆ. ಎಪಿಎಂಸಿ ಅನ್ನುವುದು ಒಂದು ಸಾಂಸ್ಥಿಕ ರಚನೆ. ಇದರಲ್ಲೇ ಸಿಗದ ನ್ಯಾಯ ರೈತನಿಗೆ ಮನೆ ಬಾಗಿಲಲ್ಲಿ ಸಿಗುತ್ತೆ ಅನ್ನುವ ಯಾವ ಖಾತರಿಯಿದೆ? ಉತ್ಪಾದನೆ ನಡೆಯುವ ಸ್ಥಳದಿಂದ ಗ್ರಾಹಕರ ಹತ್ತಿರ ಬಂದ ಹಾಗೆ ಉತ್ಪನ್ನ ಒಂದರ ಮಾರುಕಟ್ಟೆ ವಿಸ್ತಾರವಾಗುತ್ತದೆ, ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ ಅನ್ನುವುದು ಅರ್ಥಶಾಸ್ತ್ರದ ಸರಳ ನಿಯಮ. ಅಂದಮೇಲೆ ರೈತ ಬೆಳೆದ ಸ್ಥಳದಲ್ಲೇ ಮಾರಾಟ ವ್ಯವಸ್ಥೆ ತರುವ ಹಿಂದೆ ಯಾವ ತರ್ಕವಿದೆ? ಎಪಿಎಂಸಿ ವ್ಯಾಪ್ತಿಯ ಹೊರಗಡೆ ವ್ಯಾಪಾರ ನಡೆದರೆ ಸರಕಾರಕ್ಕೆ ದೊರೆಯುವ ಮಾರುಕಟ್ಟೆ ಕರ, ಸೆಸ್, ಅಡಕೆ, ಮೆಣಸಿನಂತಹ ಉತ್ಪನ್ನಗಳ ಮೇಲೆ ಜಿಎಸ್‌ಟಿ ಇತ್ಯಾದಿ ಮೂಲದ ಸಹಸ್ರಾರು ಕೋಟಿ ರೂ. ಆದಾಯದ ಪಾಡೇನು? ಎಪಿಎಂಸಿ ಪ್ರಾಂಗಣದ ಒಳಗಡೆ ಬರದ ದೊಡ್ಡ ಪ್ರಮಾಣದ ಖರೀದಿದಾರರು ಸ್ವಯಂ ರೈತರ ಮನೆ ಮನೆಗೆ ಬಂದು ಖರೀದಿಸುತ್ತಾರೆ ಅನ್ನೋದು ನಂಬಲು ಸಾಧ್ಯವೇ? ಮಧ್ಯವರ್ತಿಗಳು ಬೇಕಾಬಿಟ್ಟಿ ಬೆಲೆಗೆ ರೈತರಿಂದ ಕೊಂಡು ಈ ಬೃಹತ್ ಖರೀದಿದಾರರಿಗೆ ಒದಗಿಸುವ ವ್ಯವಸ್ಥೆ ಈಗಿನಂತೆ ಮುಂದುವರೆಯುವುದರಲ್ಲಿ ಅನುಮಾನವೇ ಇಲ್ಲ. ರೈತರ ಉತ್ಪನ್ನಗಳನ್ನು ಕಂಡಕಂಡಲ್ಲಿ ಖರೀದಿಸಲು ಅನುವು ಮಾಡಿ ಕೊಟ್ಟಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಆಧುನಿಕ ಆನ್‌ಲೈನ್‌ ಮಾರಾಟ, ಇ-ಮಾರಾಟ, ರಾಷ್ಟ್ರಮಟ್ಟದ ಏಕೀಕೃತ ಮಾರುಕಟ್ಟೆ ‘ಇನಾಮ್’ ಮುಂತಾದವುಗಳ ಕಥೆಯೇನು? ಸದ್ಯದ ವ್ಯವಸ್ಥೆ ಮತ್ತಷ್ಟು ಸ್ಪರ್ಧಾತ್ಮಕವಾಗಿ ರೈತಪರವಾಗುವ ನಿಟ್ಟಿನಲ್ಲಿ ಬದಲಾವಣೆ ಬೇಕೇ ಬೇಕು. ಆದರೆ ಈ ವಿಚಾರದಲ್ಲಿರೈತಾಪಿ ವರ್ಗದ ಅಭಿಪ್ರಾಯ ಪಡೆಯಬೇಕು. ಜನಪ್ರತಿನಿಧಿಗಳು ಚರ್ಚಿಸಬೇಕು. ಕೊರೊನಾ ಲಾಕ್‌ಡೌನ್‌ ನೆಪ ಮಾಡಿಕೊಂಡು ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸುವಂತೆ ರಾಜ್ಯದ ಮೇಲೆ ಒತ್ತಡ ತರುವುದು ಸರಿಯಲ್ಲ.

ರೈತರೆಡೆಗೆ ಮಾರುಕಟ್ಟೆ ಮತ್ತು ಹಂಚಿಕೆ
ಉತ್ಪಾದನೆಯ ಹೊರತಾಗಿ ಬೇರೇನೂ ಮಾಡಲು ಅಶಕ್ತನಾಗಿರುವ ರೈತನಿಗಿಂದು ಖರೀದಿ, ಮಾರುಕಟ್ಟೆ, ಶೇಖರಣೆ, ಸಂಸ್ಕರಣೆ ಹೀಗೆ ಎಲ್ಲಾ ‘ಕೊಯಿಲೋತ್ತರ ಸೇವೆ’ಗಳನ್ನು ಸರಕಾರವೇ ನೇರವಾಗಿ ಒದಗಿಸದಿದ್ದರೆ ದೇಶದ ಆಹಾರ ಭದ್ರತೆ ಅಡಿಪಾಯಕ್ಕೆ ಆಘಾತವಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೈತರಿಗೆ ಲಾಭದಾಯಕ ಧಾರಣೆ ಖಾತ್ರಿಗೊಳಿಸಲು ಕೃಷಿ ಬೆಲೆ ಆಯೋಗ ಪ್ರಸ್ತಾಪಿಸಿರುವಂತೆ ಕಾಯಿದೆ ಕಾನೂನುಗಳ ನೆರವು ಪಡೆಯುವುದು ಇಂದು ಅತ್ಯಗತ್ಯವಾಗಿದೆ. ‘ಮಾರುಕಟ್ಟೆಯನ್ನೇ ರೈತರೆಡೆಗೆ ಕೊಂಡೊಯ್ಯು’ವ ವಿಚಾರ ಪ್ರಸ್ತಾವನೆ ಇಂದು ಅತ್ಯಗತ್ಯ. ಗ್ರಾಮ ಗ್ರಾಮಗಳಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸುವ, ಸಂಸ್ಕರಿಸಿ ಮೌಲ್ಯವರ್ಧನೆ ಮಾಡುವ, ಶೇಖರಣೆ, ಅಡಮಾನ ಸಾಲ ಇತ್ಯಾದಿ ಸೌಲಭ್ಯ ಒದಗಿಸುವ ಕಾರ್ಯ ಕೈಗೊಂಡರೆ ಅದು ಮಾರುಕಟ್ಟೆಯನ್ನು ರೈತರ ಕಡೆಗೈ ಕೊಂಡೊಯ್ದಂತಾಗುತ್ತದೆ. ಬದಲಿಗೆ ಮನೆಬಾಗಿಲಲ್ಲೇ ರೈತರನ್ನು ಮಧ್ಯವರ್ತಿಗಳ ಬಲಿಪಶು ಮಾಡುವ ಈಗಿನ ಪ್ರಯತ್ನ ಖಂಡಿತ ಸಲ್ಲದು.
ರೈತರ ಉತ್ಪನ್ನಕ್ಕೆ ಯೋಗ್ಯ ಮಾರುಕಟ್ಟೆ ಮತ್ತು ಧಾರಣೆ ಮಾತ್ರವಲ್ಲ ಆಹಾರ ಉತ್ಪನ್ನಗಳನ್ನು ಸಮರ್ಥವಾಗಿ ಹಂಚಿಕೆ ಮಾಡಿ ಕಡುಬಡವರ ಹಸಿವು, ಅಪೌಷ್ಟಿಕತೆ ದೂರಮಾಡಲು ಕೂಡ ಸಮಗ್ರ ಕಾರ್ಯಕ್ರಮ ಅಗತ್ಯ. ಇಂದು ದೇಶದಲ್ಲಿ ಹಸಿವು, ಅಪೌಷ್ಟಿಕತೆಗಳು ಒಂದು ಕಡೆ ತಾಂಡವಾಡುತ್ತಿದ್ದರೆ ಇನ್ನೊಂದೆಡೆ ಆಹಾರ ಉತ್ಪನ್ನಗಳು ಬೇಡಿಕೆ ಇಲ್ಲದೆ ಕೊಳೆಯುವಂತಾಗಿದೆ. ಬೆಲೆ ಇಲ್ಲದೆ ರೈತರು ಹಣ್ಣು-ತರಕಾರಿ ಹಾಲನ್ನು ರಸ್ತೆಗೆ ತಂದು ಸುರಿಯುವ ಪರಿಸ್ಥಿತಿ ಬಂದಿದೆ. ಕೊರೊನಾ ಮಹಾಮಾರಿ ವೈರಸ್ ತಂದಿರುವ ಅವಾಂತರದಿಂದ ಜನಸಾಮಾನ್ಯರ, ಕಡುಬಡವರ ಆಹಾರ ಭದ್ರತೆ ಮಾತ್ರವಲ್ಲ ಅವರ ಆರೋಗ್ಯದ ಬಗ್ಗೆ ಗಮನ ವಹಿಸುವ ಗುರುತರ ಜವಾಬ್ದಾರಿ ಕೂಡಾ ಇಂದು ಸರಕಾರದ ಮೇಲಿದೆ.
ಈ ಎಲ್ಲ ಕಾರ್ಯಗಳ ಈಡೇರಿಕೆ ಜವಾಬ್ದಾರಿಯುತ ಸರಕಾರ ಒಂದರ ನೇರ ‘ಹಸ್ತಕ್ಷೇಪ’ದಿಂದ ಮಾತ್ರ ಸಾಧ್ಯ. ಜಾಗತಿಕರಣ ಮತ್ತು ಉದಾರಿಕರಣ ನೀತಿಗಳಿಂದ ಬಲಿಷ್ಠಗೊಂಡಿರುವ ಮಾರುಕಟ್ಟೆ ಅರ್ಥವ್ಯವಸ್ಥೆಯಾಗಲಿ ಅಥವಾ ಖಾಸಗಿ ವಲಯವಾಗಲಿ ರೈತರ ಉತ್ಪನ್ನಗಳ ಮಾರಾಟ ಮತ್ತು ಆಹಾರ ಉತ್ಪನ್ನಗಳ ಸಮಾನ ಹಂಚಿಕೆಯ ಬಗ್ಗೆ ಗಮನಹರಿಸಲು ಅಸಾಧ್ಯ ಎಂಬುದನ್ನು ಸದ್ಯದ ಪರಿಸ್ಥಿತಿ ಜಗತ್ತಿನಾದ್ಯಂತ ಸಾಬೀತುಪಡಿಸುತ್ತಿದೆ. ಇದನ್ನು ಅರ್ಥಮಾಡಿಕೊಳ್ಳದೆ ಎಪಿಎಂಸಿಯಂತಹ ಸರಕಾರದ ವ್ಯಾಪ್ತಿಯ ಸಾಂಸ್ಥಿಕ ರಚನೆ, ಜನ ಪ್ರತಿನಿಧಿ ಸಂಸ್ಥೆಯೊಂದನ್ನು ನಿರ್ಲಕ್ಷಿಸಿ, ತಿಲಾಂಜಲಿ ಕೊಡಹೊರಟಿರುವುದು ಈ ದಿನಗಳಲ್ಲಿ ಮೂರ್ಖತನವಾದೀತು.
(ಲೇಖಕರು ಕೃಷಿ ಆರ್ಥಿಕ ತಜ್ಞರು)

ಕಾಯಿದೆ ಅನುಷ್ಠಾನಕ್ಕೆ ಅವಸರವೇಕೆ?

– ಪ್ರೊ. ಬಿ ಎಂ. ಕುಮಾರಸ್ವಾಮಿ
ಮಾರಾಟವು ಕೃಷಿ ಆರ್ಥಿಕತೆಯ ಅವಿಭಾಜ್ಯ ಅಂಗ. ಭಾರತದಲ್ಲಿ ಕೃಷಿ ಮಾರುಕಟ್ಟೆಯ ಸುಧಾರಣೆ 1950ರಿಂದಲೇ ಪ್ರಾರಂಭವಾಯಿತು. ವಿವಿಧ ರಾಜ್ಯ ಸರಕಾರಗಳು ತಮ್ಮದೇ ಆದ ಎಪಿಎಂಸಿ ಕಾಯಿದೆಗಳನ್ನು ಜಾರಿಗೊಳಿಸಿವೆ. ಎಪಿಎಂಸಿ ವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಅಥವಾ ಮಂಡಿ ವ್ಯವಸ್ಥೆ ಕೆಲಸ ಮಾಡುತ್ತದೆ. ಒಂದು ಕೃಷಿ ಮಾರುಕಟ್ಟೆಯ ವ್ಯಾಪ್ತಿಗೆ ಬರುವ ಎಲ್ಲಾ ರೈತರು ತಮ್ಮ ಉತ್ಪನ್ನಗಳನ್ನು ನಿಯಂತ್ರಿತ ಮಾರುಕಟ್ಟೆಗೆ ತಂದು ಮಾಡುವುದು ಕಡ್ಡಾಯ. ಇಲ್ಲಿರುವ ಸೀಮಿತ ಸಂಖ್ಯೆಯ ನೋಂದಾಯಿತ ವ್ಯಾಪಾರಿಗಳು ರೈತರ ಕೃಷಿ ಉತ್ಪನ್ನಗಳಿಗೆ ತಮ್ಮ ಬೆಲೆಯನ್ನು ಲಿಖಿತವಾಗಿ ನಮೂದಿಸುತ್ತಾರೆ. ಅತಿ ಹೆಚ್ಚು ಬೆಲೆ ಕೊಡುವವರಿಗೆ ಸರಕು ಮಾರಾಟವಾಗುತ್ತದೆ. ಎಪಿಎಂಸಿಯ ವ್ಯವಹಾರಗಳ ನಿಯಂತ್ರಣ ಮಾರುಕಟ್ಟೆ ಸಮಿತಿಯ ಕರ್ತವ್ಯವಾಗಿರುತ್ತದೆ. ಈ ಸಮಿತಿಯಲ್ಲಿ ರೈತರು, ವರ್ತಕರು ಹಾಗೂ ಕಮಿಷನ್ ಏಜೆಂಟರಿಂದ ಚುನಾಯಿತ ಪ್ರತಿನಿಧಿಗಳು ಹಾಗೂ ಸರಕಾರ ನೇಮಿಸಿದ ಅಧಿಕಾರಿಗಳು ಇರುತ್ತಾರೆ.
ಪ್ರಾರಂಭದ ಕೆಲ ವರ್ಷಗಳಲ್ಲಿ ಎಪಿಎಂಸಿಗಳು ಉತ್ತಮವಾಗಿ ಕೆಲಸ ಮಾಡಿದವು. ರೈತರಿಗೆ ಉತ್ತಮವಾದ ಬೆಲೆ ದೊರಕಿಸಿ ಹಿತ ಕಾಯ್ದವು. ಆದರೆ ಕಾಲ ಕ್ರಮೇಣ ಎಪಿಎಂಸಿಗಳು ಗುಂಪುಗಾರಿಕೆ, ಪಕ್ಷ ರಾಜಕೀಯ, ಭ್ರಷ್ಟಾಚಾರ ಮುಂತಾದ ಹೊಲಸು ಕೂಪಗಳಾದವು. ಸೀಮಿತ ಸಂಖ್ಯೆಯಲ್ಲಿರುವ ವರ್ತಕರು ಒಳ ಒಪ್ಪಂದ ಮಾಡಿಕೊಂಡು ರೈತರ ಉತ್ಪನ್ನಗಳಿಗೆ ಕಡಿಮೆ ಬೆಲೆಗೆ ಟೆಂಡರ್ ಹಾಕತೊಡಗಿದರು. ನಾನಾ ರೀತಿಯ ಮಾರುಕಟ್ಟೆ ಶುಲ್ಕಗಳ ವಸೂಲಿ ಎಲ್ಲವೂ ಪ್ರಾರಂಭವಾದವು. ಎಪಿಎಂಸಿ ಅವ್ಯವಹಾರಗಳ ವಿರುದ್ಧ ರೈತರ ಆಕ್ರೋಶ, ಸತ್ಯಾಗ್ರಹ ಮುಂತಾದ ವರದಿಗಳು ಪತ್ರಿಕೆಗಳಲ್ಲಿ ಆಗಾಗ ಬರುತ್ತಲೇ ಇರುತ್ತವೆ. ಎಪಿಎಂಸಿ ಎಂಬುದು ಒಂದು ಏಕಸ್ವಾಮ್ಯ ವ್ಯವಸ್ಥೆ. ಅಲ್ಲಿ ಸೀಮಿತ ಸಂಖ್ಯೆಯ ವರ್ತಕರು ಇರುತ್ತಾರೆ. ಆದ್ದರಿಂದ ಸ್ಪರ್ಧೆ ಇರುವುದಿಲ್ಲ. ಆ ವ್ಯವಸ್ಥೆಯಲ್ಲಿ ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಖಂಡಿತ ಸಿಗುವುದಿಲ್ಲ. ಆದ್ದರಿಂದ ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಬೇಕಾಗಿದೆ. ಆಗ ಮಾತ್ರ ರೈತರಿಗೆ ಲಾಭದಾಯಕ ಬೆಲೆ ಸಿಗುವುದು ಸಾಧ್ಯ. ಅಲ್ಲದೆ ಕೃಷಿ ಮಾರುಕಟ್ಟೆಯನ್ನು ವಿಸ್ತರಿಸುವ ಅಗತ್ಯವಿದೆ. ಒಬ್ಬ ರೈತ ತನ್ನ ಉತ್ಪನ್ನವನ್ನು ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಮಾರುವ ಸ್ವಾತಂತ್ರ್ಯ ಬೇಕು. ಲಭ್ಯವಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಮಾರುಕಟ್ಟೆ ರಾಷ್ಟ್ರವ್ಯಾಪಿಯಾಗುವಂತೆ ಮಾಡಬೇಕಾಗಿದೆ. ಈ ಎಲ್ಲಾ ಉದ್ದೇಶಗಳಿಂದ 2003ರಲ್ಲಿಯೇ ಕೇಂದ್ರ ಸರಕಾರ ಒಂದು ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆಯನ್ನು ರೂಪಿಸಿ ಅದನ್ನು ಅಳವಡಿಸುವಂತೆ ರಾಜ್ಯ ಸರಕಾರಗಳನ್ನು ಕೇಳಿಕೊಂಡಿತು. ನಾನಾ ಕಾರಣಗಳಿಂದ ಅದು ಜಾರಿಯಾಗಲಿಲ್ಲ.
ಈಗ 2ನೇ ಬಾರಿಗೆ ಕೇಂದ್ರ ಕೃಷಿ ನಿರ್ದೇಶನಾಲಯವು ‘ಮಾದರಿ ಕೃಷಿ ಉತ್ಪನ್ನ ಮತ್ತು ಜಾನುವಾರು ಮಾರಾಟ ಉತ್ತೇಜನ ಹಾಗೂ ಸೌಲಭ್ಯ ಕಾಯಿದೆ-2017 ಎಂಬ ಹೆಸರಿನ ಕಾಯಿದೆಯನ್ನು 2017ರಲ್ಲಿ ರೂಪಿಸಿ ರಾಜ್ಯ ಸರಕಾರಗಳು ಅಳವಡಿಸಬೇಕು ಎಂದು ಒತ್ತಾಯಿಸುತ್ತಿದೆ. ಇದಕ್ಕೂ ಕೂಡ ರಾಜ್ಯ ಸರಕಾರಗಳಿಂದ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿಲ್ಲ. ಆದ್ದರಿಂದ ಕೃಷಿ ಸಚಿವಾಲಯವು ಮೇ 5ರಂದು ರಾಜ್ಯ ಸರಕಾರಕ್ಕೆ ಪತ್ರ ಬರೆದು ಸುಗ್ರೀವಾಜ್ಞೆಯ ಮೂಲಕ ಎಪಿಎಂಎಲ್ ಕಾಯಿದೆ 2017 ಅನ್ನು ರಾಜ್ಯದಲ್ಲಿ ತುರ್ತಾಗಿ ಅಳವಡಿಸಿಕೊಳ್ಳುವಂತೆ ಒತ್ತಾಯ ಮಾಡಿದೆ.

ಎಪಿಎಂಎಲ್ ಕಾಯಿದೆಯಲ್ಲಿ ಏನಿದೆ?
1. ಈ ಕಾಯಿದೆಯು ಪ್ರತಿ 80 ಕಿ.ಮೀ.ಗೆ ಕೃಷಿ ಮಾರುಕಟ್ಟೆ ಸ್ಥಾಪಿಸಲು ಬಯಸುತ್ತದೆ. ಈ ಉದ್ದೇಶಕ್ಕಾಗಿ ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳೂ ಸಗಟು ಕೃಷಿ ಮಾರುಕಟ್ಟೆಗಳನ್ನು ಸ್ಥಾಪಿಸಲು ಅಕವಾಶ ನೀಡುತ್ತದೆ. ಖಾಸಗಿ ಮಾರುಕಟ್ಟೆಗಳು, ಉಗ್ರಾಣಗಳು ಹಾಗೂ ಶೀತಗೃಹಗಳನ್ನೂ ನಿಯಂತ್ರಿತ ಕೃಷಿ ಮಾರುಕಟ್ಟೆ ಎಂದು ಪರಿಣಗಿಸಲಾಗುತ್ತದೆ.
2. ಮಾರುಕಟ್ಟೆ ಛಿದ್ರೀಕರಣವನ್ನು ತಡೆಗಟ್ಟಲು ಇಡೀ ರಾಜ್ಯವನ್ನು ಒಂದು ಮಾರುಕಟ್ಟೆ ಎಂದು ಪರಿಗಣಿಸಲಾಗುತ್ತದೆ.
3. ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು ಹಾಗೂ ಎಣ್ಣೆ ಕಾಳುಗಳು ಅಲ್ಲದೇ ವಾಣಿಜ್ಯ ಬೆಳೆಗಳು, ತೋಟಗಾರಿಕೆ ಬೆಳೆಗಳು, ಜಾನುವಾರುಗಳು, ಮೀನುಗಾರಿಕೆ ಉತ್ಪನ್ನಗಳು ಎಲವನ್ನೂ ಈ ಕಾಯಿದೆ ನಿಯಂತ್ರಿತ ಮಾರುಕಟ್ಟೆ ವ್ಯಾಪ್ತಿಗೆ ತರುತ್ತದೆ.
4. ರೈತರು, ಆಹಾರ ಸಂಸ್ಕರಣೆಗಾರರು, ರಫ್ತುದಾರರು, ಚಿಲ್ಲರೆ ವ್ಯಾಪಾರಿಗಳು ಹಾಗೂ ಬಳಕೆದಾರರು ಎಲ್ಲರನ್ನೂ ಒಳಗೊಳ್ಳುವ ಮೂಲಕ ಕೃಷಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಗುವುದು.
5. ಕೃಷಿ ಮಾರಾಟ ನಿರ್ದೇಶಕರು ಹಾಗೂ ರಾಜ್ಯ ಕೃಷಿ ಮಾರುಕಟ್ಟೆ ಸಮಿತಿಯ ನಿರ್ವಾಹಕ ನಿರ್ದೇಶಕರು- ಈ ಎರಡು ಅಧಿಕಾರಿಗಳು, ಅಧಿಕಾರವನ್ನು ಸ್ಪಷ್ಟವಾಗಿ ಪ್ರತ್ಯೇಕಿಸಲಾಗಿದೆ. ಕೃಷಿ ಮಾರಾಟ ನಿರ್ದೇಶಕರು, ನಿಯಂತ್ರಣ ಕಾರ್ಯಗಳನ್ನು ಹಾಗೂ ನಿರ್ವಾಹಕ ನಿರ್ದೇಶಕರು ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುವವರು.
6. ಹೆಚ್ಚಿನ ಸ್ಪರ್ಧೆ ಏರ್ಡಿಸುವುದಕ್ಕಾಗಿ ಖಾಸಗಿ ಸಗಟು ಮಾರಾಟ ಅಂಗಗಳು ಹಾಗೂ ರೈತ-ಗ್ರಾಹಕ ಮಾರಾಟ ಅಂಗಗಳನ್ನು ಸ್ಥಾಪಿಸಲು ಸೂಕ್ತ ವಾತಾವರಣ ಕಲ್ಪಿಸಲಾಗುವುದು.
7. ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡುವ ಯಾರಿಗೇ ಆಗಲಿ, ಯಾವ ಸ್ಥಳ ಅಥವಾ ಸಮುದಾಯದಲ್ಲಾಗಲಿ, ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಈ ಕಾಯಿದೆ ಒದಗಿಸುತ್ತದೆ.
8. ಕೃಷಿ ಮಾರುಕಟ್ಟೆಯನ್ನು ಇತರ ರಾಜ್ಯಗಳಿಗೆ ಹಾಗೂ ರಾಷ್ಟ್ರ ಮಟ್ಟಕ್ಕೆ ವಿಸ್ತರಿಸಲು ವಿದ್ಯುನ್ಮಾನ ಮಾರುಕಟ್ಟೆ(ಇ-ಮಾರ್ಕೆಟ್) ಒದಗಿಸಲಾಗುವುದು.
9. ಇಡೀ ರಾಜ್ಯಕ್ಕೆ ಒಂದೇ ಪರವಾನಗಿ ಹಾಗೂ ಏಕರೂಪ ಮಾರುಕಟ್ಟೆ ಶುಲ್ಕ ವ್ಯವಸ್ಥೆ ಜಾರಿಗೊಳಿಸಲಾಗುವುದು.
10. ಮಾರುಕಟ್ಟೆ ಸಮಿತಿಗಳು ಹಾಗೂ ರಾಜ್ಯ ಮಾರುಕಟ್ಟೆ ಬೋರ್ಡ್ಗಳನ್ನು ಸಂಪೂರ್ಣವಾಗಿ ಪ್ರಜಾಸತ್ತಾತ್ಮಕಗೊಳಿಸಲಾಗುವುದು.
ಕೃಷಿ ಮಾರುಕಟ್ಟೆ ಮಾದರಿ ಕಾಯಿದೆಯ ಪ್ರಮುಖ ಅಂಶಗಳು ಮೇಲ್ನೋಟಕ್ಕೆ ಉತ್ತಮವಾಗಿವೆ ಎಂದೆನಿಸುತ್ತದೆ. ಆದರೆ ಕೋಟ್ಯಂತರ ಕೃಷಿ ಉತ್ಪಾದಕರು, ಗ್ರಾಹಕರು ಹಾಗೂ ಉದ್ದಿಮೆದಾರರ ಭವಿಷ್ಯ ನಿರ್ಧರಿಸುವ ಈ ಕಾಯಿದೆಯನ್ನು, ರೈತರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ನಂತರ ಶಾಸನ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವುದು ಸೂಕ್ತವಾದುದು. ಅದರ ಬದಲಾಗಿ ರಾಜ್ಯವೆಲ್ಲ ಕೊರೊನಾ ಸಂಕಟದಲ್ಲಿರುವಾಗ ಯಾರ ಜೊತೆ ಚರ್ಚಿಸದೆ ಗುಟ್ಟು ಗುಟ್ಟಾಗಿ ಸುಗ್ರೀವಾಜ್ಞೆ ಮೂಲಕ ಕಾಯಿದೆ ಜಾರಿಗೊಳಿಸುತ್ತಿರುವುದು ಕಾಯಿದೆಯ ಉದ್ದೇಶದ ಬಗ್ಗೆ ಜನರಲ್ಲಿ ಅನುಮಾನ ಮೂಡಿಸುತ್ತದೆ. ಸರಕಾರ 3 ತಿಂಗಳ ಅವಕಾಶ ನೀಡಿ, ಕಾಯಿದೆಯ ಬಗ್ಗೆ ಜನರಲ್ಲಿತಿಳಿವಳಿಕೆ ಮೂಡಿಸಿ, ಚರ್ಚಿಸಿ ನಂತರ ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದರೆ ಸೂಕ್ತವಾಗುತ್ತಿತ್ತು. ಅವಸರವೇ ಅಪಘಾತಕ್ಕೆ ಕಾರಣ ಎಂಬುದನ್ನು ನೆನಪಿಡಿ!
(ಲೇಖಕರು ಆರ್ಥಿಕ ಚಿಂತಕರು)

ಎಪಿಎಂಸಿ ತಿದ್ದುಪಡಿ ರೈತರಿಗೆ ಮರಣಶಾಸನ
– ಬೆವರಿನ ಹನಿಗೆ ಮೋಸವಾದರೆ ರೈತರ ಕಣ್ಣುಗಳಲ್ಲಿ ಹರಿಯುವ ರಕ್ತದ ಕೋಡಿಯನ್ನು ಒರೆಸುವವರು ಯಾರು?

– ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಕೃಷಿ ಉತ್ಪನ್ನ ಮಾರುಧಿಕಟ್ಟೆ ಸಮಿತಿ ಕಾಯಿದೆಗೆ ತರಾತುರಿಯಲ್ಲಿ ತಿದ್ದುಪಡಿ ತರುವ ಮೂಲಕ ರಾಜ್ಯ ಸರಕಾರ ಕ್ರಮ ಅವಿವೇಕತನದಿಂದ ಕೂಡಿದೆ. ಲಾಭ ನಷ್ಟ ಏನೇ ಬರಲಿ ರೈತರಿಗೆ ಬೇರೆ ಕಸುಬು ಇಲ್ಲ, ಕೇಂದ್ರ ಸರಕಾರ ಒತ್ತಡ ತಂದು ರಾಜ್ಯ ಸರಕಾರಗಳ ಮೂಲಕ ಎಪಿಎಂಸಿ ಕಾಯಿದೆಗೆ ತಿದ್ದುಪಡಿಯ ಹುನ್ನಾರ ಕಾರ್ಪೋರೇಟ್ ಸಂಸ್ಥೆಗಳ ಓಲೈಕೆಗೆ ಒಂದು ವ್ಯವಸ್ಥಿತ ತಂತ್ರವಾಗಿದೆ. ಕೆಲವೇ ಕೆಲವು ಕಂಪನಿಗಳನ್ನು ಮೆಚ್ಚಿಸಲು ಎಪಿಎಂಸಿ ಮುಚ್ಚುವ ದೊಡ್ಡ ಷಡ್ಯಂತ್ರ ಬಡ ರೈತನ ಹೊಟ್ಟೆಯ ಮೇಲೆ ಬರೆ ಹಾಕಿದಂತಾಗಿದೆ.
ಲಾಕ್‌ಡೌನ್‌ನಿಂದಾಗಿ ಕಂಗೆಟ್ಟಿರುವ ರೈತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಮತ್ತು ಬೆಲೆ ಸಿಗದೆ ಹತಾಶನಾಗಿದ್ದಾನೆ. ಇಂತಹ ಸಂದಿಗ್ಧದಲ್ಲಿ ರೈತನ ಮೇಲೆ ಸವಾರಿಗೆ ಹೊರಟಿರುವ ಈ ತಿದ್ದುಪಡಿ ಕಾಯಿದೆ ರೈತರಿಗೆ ಮರಣ ಶಾಸನ. ಹಿಂದಿನ ಸಮ್ಮಿಶ್ರ ಸರಕಾರ ಈ ಕಾಯಿದೆಯನ್ನು ಸಾರಾಸಗಟಾಗಿ ವಿರೋಧಿಸಿತ್ತು. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಅನ್ನದಾತನ ಹೊಟ್ಟೆಯ ಮೇಲೆ ಹೊಡೆಯುವುದು ಸರಿಯೆ?
ದಾವಣಗೆರೆ ಜಿಲ್ಲೆಯಲ್ಲಿ ರೈತರಿಂದ 1.5 ಕೋಟಿ ರೂ. ಮೌಲ್ಯದ ಭತ್ತ ಖರೀದಿಸಿದ ರೈತರಿಗೆ ಕಡೆಗೂ ಕವಡೆ ಕಾಸು ಕೊಡದೆ ರೈತರು ಆತ್ಮಹತ್ಯೆಗೆ ಶರಣಾಗಬೇಕಾದ ದುಸ್ಥಿತಿಗೆ ತಲುಪಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಕ್ಕರೆಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬೆಲೆ ನೀಡುತ್ತೇವೆಂದು ಮೌಖಿಕ ಒಪ್ಪಂದದ ಮೂಲಕ ಕಬ್ಬು ಬೆಳೆಗಾರರಿಂದ ಕಬ್ಬು ಖರೀದಿಸಿ ರೈತರಿಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ವಂಚಿಸಿದ್ದು ಇನ್ನೂ ಹಸಿರಾಗಿದೆ. ಮೌಖಿಕ ಒಪ್ಪಂದದ ಕಾರಣ ಕಬ್ಬು ಬೆಳೆಗಾರರ ಹಿತ ಕಾಯಲು ಸರಕಾರ ಮಧ್ಯಸ್ಥಿಕೆ ವಹಿಸಿಕೊಳ್ಳಲು ಆಗದ ಶೋಚನೀಯ ಸ್ಥಿತಿಯನ್ನು ಎದುರಿಸಿದನ್ನು ಮುಖ್ಯಮಂತ್ರಿಯಾಗಿದ್ದಾಗ ನಾನು ಅನುಭವಿಸಿದ್ದೇನೆ.
ರೈತರಿಗೆ ಸೂಕ್ತ ಮಾರುಕಟ್ಟೆ ಕನಿಷ್ಠ ಬೆಂಬಲ ಬೆಲೆ ಸಿಗದ ಇಂತಹ ಪರಿಸ್ಥಿತಿಯಲ್ಲಿ ಎಪಿಎಂಸಿಗಳಿಗೆ ಬೀಗ ಜಡಿಯಲು ಸರಕಾರ ಮುಂದಾಗಿರುವುದು ಅತ್ಯಂತ ಖಂಡನೀಯ. ಈ ತಿದ್ದುಪಡಿ ಬಗ್ಗೆ ಸಾಮಾನ್ಯ ರೈತರಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಸ್ಪಷ್ಟ ಮಾಹಿತಿಗಳಿಲ್ಲ. ಇದರ ಜಾರಿಯಿಂದ ವರ್ತಕರು ರೈತರಿಗೆ ವಂಚಿಸಿದರೆ ಅದನ್ನು ರೈತ ಹೇಗೆ ಪ್ರಶ್ನಿಸಬೇಕು, ಬೆವರಿನ ಹನಿಗೆ ಮೋಸವಾದರೆ ಅವನ ಕಣ್ಣುಗಳಲ್ಲಿ ಹರಿಯುವ ರಕ್ತದ ಕೋಡಿಯನ್ನು ಒರೆಸುವವರು ಯಾರು? ಇದು ಕೇಂದ್ರ ಸರಕಾರ ರೈತರಿಗೆ ಮಾಡಲು ಹೊರಟಿರುವ ಮಹಾ ಮೋಸ.
ಪ್ರಧಾನಿ ನರೇದ್ರ ಮೋದಿಯವರು ‘ಆತ್ಮ ನಿರ್ಭರ’ ಎಂದಿದ್ದಾರೆ. ಇದು ಸ್ವಾವಲಂಬಿ ಎಂಬ ವ್ಯಾಖ್ಯಾನ ಕೊಡುತ್ತದೆ. ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ರೈತರನ್ನು ಪರಾವಲಂಬಿ ಮಾಡುವ ಕುತಂತ್ರ ಇದಾಗಿದೆ. ಜಾರಿಗೆ ಮುನ್ನ ಸಾರ್ವಜನಿಕ ಚರ್ಚೆ ಮತ್ತು ಅದರ ಗುಣಾವಗುಣಗಳ ಬಗ್ಗೆ ಚಿಂತನ ಮಂಥನ ನಡೆಯಬೇಕು. ರೈತನ ಹಿತ ಕಾಯ್ದುಕೊಳ್ಳುವುದೇ ಎಲ್ಲರ ಹೆಬ್ಬಯಕೆ. ಈ ನಿಟ್ಟಿನಲ್ಲಿ ವಿಸ್ತೃತ ಚರ್ಚೆ ನಡೆಯಲಿ.
ಎಚ್. ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಹೊಸಕೋಟೆ ಬಳಿ ಸುಸಜ್ಜಿತ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಆರಂಭಿಸಲು ಹೊಸ ಕನಸಿಗೆ ಬೀಜ ನೆಟ್ಟರು. ಇದಕ್ಕೆ ಸಾಥ್ ನೀಡಿದವರು ಕ್ಷೀರಕ್ರಾಂತಿಯ ಹರಿಕಾರ ಕುರಿಯನ್. ಒಟ್ಟು 165 ಕೋಟಿ ರೂ. ಬಂಡವಾಳದೊಂದಿಗೆ ಆರಂಭವಾದ ‘ಸಫಲ’ ಹೆಸರಿನ ಹಣ್ಣು ತರಕಾರಿ ಮಾರುಕಟ್ಟೆ ಸೂಕ್ತ ನಿರ್ವಹಣೆಯಿಲ್ಲದೆ ಈಗ ಸೊರಗಿ ಹೋಗಿದೆ. 10 ಸಾವಿರ ಟನ್ ಸಂಸ್ಕರಣೆ ಸಾಮರ್ಥ್ಯವಿರುವ ಈ ‘ಸಫಲ’ ಆಳುವವರ ಅಸಡ್ಡೆಯಿಂದ ವಿಫಲವಾಯಿತು. ಸರಿಯಾದ ನಿರ್ವಹಣೆ ಕೊರತೆ ಕಾರಣ ರೈತರಿಗೆ ಹೆಚ್ಚಿನ ಲಾಭವಾಗಲಿಲ್ಲ. ಇಂತಹ ಅಕ್ರಮ ವಿಷಯಗಳತ್ತ ಗಮನಹರಿಸಿ ರೈತರ ಬದುಕು ಹಸನು ಮಾಡಲು ಸರಕಾರಗಳು ಪ್ರಯತ್ನಿಸಬೇಕು. ರೈತನ ರಟ್ಟೆಗೆ ಬಲ ತುಂಬಲು ಪ್ರಯತ್ನಿಸಧಿಬೇಕಿರುವ ಸರಕಾರ ಅವನ ಬಟ್ಟೆಯ ಮೇಲೆ ಬರೆ ಎಳೆಯಬಾರದು.
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ
ಕಳುವಡೆ, ತಾಯ ಮೊಲೆ ಹಾಲು ನಂಜಾಗಿ ಕೊಲುವಡೆ
ಇನ್ಯಾರಿಗೆ ದೂರುವೆ
ಕೂಡಲ ಸಂಗಮ ದೇವ

ಕೃಷಿ ವ್ಯವಸ್ಥೆಯ ಬುಡಮೇಲು ಸಹಿಸಲ್ಲ

– ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ರೈತರು ಮತ್ತು ಗ್ರಾಹಕರ ಹಿತರಕ್ಷಿಸುವ ಜತೆಗೆ, ಸುಮಾರು 20 ಲಕ್ಷ ಮಂದಿ ಅವಲಂಬನೆಯ ಸಹಕಾರಿ ತತ್ವ ತಳಹದಿಯ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಣೆ ಹಾದಿಯಲ್ಲಿ ಮುನ್ನಡೆಸಬೇಕಾದ ಹೊತ್ತಿನಲ್ಲಿ ಇಡೀ ವ್ಯವಸ್ಥೆಯನ್ನೇ ಮೂಲೋತ್ಪಾಟನೆ ಮಾಡಲು ಸರಕಾರ ಹೊರಟಿದೆ.
ಬಂಡವಾಳಶಾಹಿಗಳ ಕೈಗೊಂಬೆಯಾಗಿ ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಹಲವು ಜನವಿರೋಧಿ ನಿಲುವುಗಳಿಗೆ ಎಪಿಎಂಸಿ ಕಾಯಿದೆ ತಿದ್ದುಪಡಿಯೂ ಒಂದಾಗಿದೆ. ಪಕ್ಷದ ಒತ್ತಡದಂತೆ ರಾಜ್ಯ ಬಿಜೆಪಿ ಸರಕಾರವೂ ರೈತರ ಹಿತ ಬಲಿಕೊಡಲು ಹೊರಟಿದೆ. ಪಕ್ಷದ ಓಲೈಕೆಗೆ ನಾಡಿನ ಜನರ ಹಿತ ಬಲಿಕೊಡುವ ಎಪಿಎಂಸಿ ಕಾಯಿದೆ ತಿದ್ದುಪಡಿಯನ್ನು ಕಾಂಗ್ರೆಸ್ ಯಾವ ಕಾರಣಕ್ಕೂ ಒಪ್ಪಲ್ಲ. ಸರಕಾರ ಹಿಂದೆ ಸರಿಯದಿದ್ದರೆ ನಾವು ಜನರೊಟ್ಟಿಗೆ ನಿಲ್ಲುತ್ತೇವೆ.

ಪ್ರಜಾತಂತ್ರ ವಿರೋಧಿ ಹಾದಿ
ಅಧಿಕಾರವನ್ನು ವ್ಯವಸ್ಥೆಯ ಸುಧಾರಣೆಗೆ ಬಳಕೆ ಮಾಡಿಕೊಳ್ಳುವ ಬದಲು ಬೆರಳೆಣಿಕೆಯ ಮಂದಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಹೊರಟರೆ ವ್ಯವಸ್ಥೆ ಉಳಿಯುತ್ತಾ? ಮೇಲಾಗಿ, ಈ ಪ್ರಯತ್ನಕ್ಕೆ ಪ್ರಜಾತಂತ್ರ ವಿರೋಧಿ ಮಾರ್ಗವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಯ್ಕೆ ಮಾಡಿಕೊಂಡಿರುವುದು ಆಘಾತಕಾರಿ ಆಗಿದೆ.
ಸಹಕಾರ ತಳಹದಿಯ ಎಪಿಎಂಸಿ ವ್ಯವಸ್ಥೆ ರಾಜ್ಯ ಪಟ್ಟಿಯಲ್ಲಿರುವ ವಿಚಾರ. ರಾಜ್ಯ ಸರಕಾರಗಳ ವಿವೇಚನೆ ಮತ್ತು ವಿವೇಕದಂತೆ ಕಾಯಿದೆ, ಕಾನೂನು ರೂಪುಗೊಳ್ಳಬೇಕು. ಈ ವಿಚಾರದಲ್ಲಿ ಕೇಂದ್ರ ತಲೆಹಾಕುವ ಅಗತ್ಯ ಏನಿತ್ತು? ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ಮಾಡಿಕೊಡಲು ಈ ದುರ್ಮಾರ್ಗವನ್ನು ಕೇಂದ್ರ ಸರಕಾರ ಹಿಡಿದಿದೆ. ರಾಜ್ಯ ಸರಕಾರದಲ್ಲಿ ಹಲವರಿಗೆ ಇಷ್ಟವಿಲ್ಲದಿದ್ದರೂ ಕೇಂದ್ರದ ವರಿಷ್ಠರ ತಾಳಕ್ಕೆ ತಕ್ಕಂತೆ ಕುಣಿಯುವುದು ಅನಿವಾರ್ಯ ಆಗಿರಬಹುದು. ಇದನ್ನು ಗಮನಿಸಿದರೆ ಸಿಎಂ ಬಿ.ಎಸ್.ಯಡಿಯೂರಪ ಸರಕಾರದ ನಿಷ್ಠೆ ಕೇಂದ್ರದ ವರಿಷ್ಠರಿಗೆ ಹೊರತು ರಾಜ್ಯದ ಜನರ ಹಿತವಲ್ಲ ಎಂಬುದು ಸ್ಪಷ್ಟ.

ಚರ್ಚೆ ಇಲ್ಲದೆ ಅಂಗೀಕಾರ ಏಕೆ?
ಯಾವುದೇ ಕಾನೂನು ಬದಲಾವಣೆಗೆ ರೀತಿ ನೀತಿಗಳಿವೆ. ಅಧಿಕಾರವಿದ್ದ ಮಾತ್ರಕ್ಕೆ ಬೇಕಾದ್ದು ಮಾಡುತ್ತೇವೆ ಎನ್ನಲಾಗದು. ಕಾಯಿದೆ ರೂಪಿಸುವುದು, ಬದಲಿಸುವುದು ಸರಕಾರದ ಪರಮಾಧಿಕಾರ ಎಂದು ಭಾವಿಸುವುದು ಮೂರ್ಖತನ. ಆಡಳಿತ ಇರಲಿ, ಪ್ರತಿಪಕ್ಷವೇ ಆಗಲೀ ಎಲ್ಲ ಚುನಾಯಿತ ಪ್ರತಿನಿಧಿಗಳ ಸಲಹೆ, ಅಭಿಪ್ರಾಯ ಮುಖ್ಯವಾಗಿರುತ್ತದೆ. ಮೇಲಾಗಿ, ಸಾಧಕ ಬಾಧಕಗಳ ಸಮಗ್ರ ಚರ್ಚೆ ನಡೆಯಬೇಕು. ಇದಾವುದೂ ಇಲ್ಲದೆ ರಾತ್ರೋರಾತ್ರಿ ಕಾಯಿದೆ ಬದಲಾವಣೆಗೆ ಹೊರಟರೆ ಪ್ರಜಾತಂತ್ರ ಉಳಿಯುತ್ತಾ? ಚುನಾಯಿತ ಸರಕಾರಕ್ಕೆ ಗೌರವ ಸಿಗುತ್ತಾ?
ಸರಿ-ತಪ್ಪುಗಳ ಸ್ಪಷ್ಟತೆಯೇ ಇಲ್ಲದೆ ಏಕಾಏಕಿ ಕಾನೂನು ಬದಲಿಸಿ ಬಹುಸಂಖ್ಯಾತ ಜನರ ಹಿತ ಬಲಿಕೊಡುವ ಹಾದಿಯನ್ನು ಸರಕಾರ ತುಳಿಯಬಾರದಿತ್ತು. ಹೀಗಾದರೆ, ಶಾಸನಸಭೆಗೆ ಏನು ಗೌರವ ಉಳಿಯುತ್ತದೆ? ಅಧಿವೇಶನದಲ್ಲಿ ಚರ್ಚೆ ಇಲ್ಲ, ಏಕಾಏಕಿ ಕಾಯಿದೆ ಬದಲಾಯಿಸುತ್ತೇವೆ ಎಂದು ಹೊರಟಿರುವ ಧೋರಣೆ ಅನಾಹುತಕಾರಿ. ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ರಾಜ್ಯಪಾಲರು ನೀಡಿರುವ ತಪಾರಕಿಯೇ ಸರಕಾರದ ನಡೆ ಸರಿ ಇಲ್ಲ ಎಂಬುದಕ್ಕೆ ನಿದರ್ಶನ ಅಲ್ಲವೆ? ಕಾಯಿದೆ ತಿದ್ದುಪಡಿಯ ಒಳಿತು, ಕೆಡಕುಗಳಿಗಿಂತ ಸರಕಾರ ತುಳಿದಿರುವ ಹಾದಿಯೇ ಅನುಮಾನ ಮೂಡಿಸಿದೆ.
ಕಾಯಿದೆ, ಕಾನೂನು ಬದಲಾವಣೆ ಬೇಡ ಎಂದು ಯಾರೂ ಹೇಳಲ್ಲ. ಆದರೆ, ಉದ್ದೇಶದ ಸ್ಪಷ್ಟತೆ ಇರಬೇಕು. ಬದಲಾವಣೆಯ ಪ್ರಯೋಜನ ಏನು ಎಂಬುದು ಎಲ್ಲರಿಗೂ ಸ್ಪಷ್ಟವಾಗಬೇಕು. ವಿಧಾನ ಮಂಡಲದಲ್ಲಿ ಸಾಧಕ-ಬಾಧಕಗಳ ಚರ್ಚೆಗೆ ಅವಕಾಶ ಸಿಗಬೇಕು. ಮುಖ್ಯವಾಗಿ, ಎಪಿಎಂಸಿ ವಿಚಾರದಲ್ಲಿ ತುರ್ತಾಗಿ ಸುಗ್ರೀವಾಜ್ಞೆ ಹೊರಡಿಸುವುದರ ಅವಶ್ಯಕತೆ ಏನಿದೆ?

ಹುಳುಕು ಇದ್ದರೆ ಸರಿಪಡಿಸೋಣ
ಎಪಿಎಂಸಿಗಳು ಜನಸಾಮಾನ್ಯರಿಗಾಗಿ ಇರುವ ವ್ಯವಸ್ಥೆ. ಸಂತೆಯ ಪುರಾತನ ವ್ಯವಸ್ಥೆಯ ಮುಂದುವರಿದ ಭಾಗವೇ ಎಪಿಎಂಸಿ. ರೈತರು ಮತ್ತು ಗ್ರಾಹಕರ ಮಧ್ಯೆ ದಲ್ಲಾಳಿ ಕಾಟ ತಪ್ಪಿಸಿ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವ ವ್ಯವಸ್ಥೆ. ಹುಳುಕು ಸರಿಪಡಿಸಿ ಇನ್ನಷ್ಟು ಬಲಪಡಿಸುವ ಚಿಂತನೆ ನಡೆಯಬೇಕಾದ ಸನ್ನಿವೇಶದಲ್ಲಿ ಸರಕಾರ ಪ್ರತಿಗಾಮಿ ಹೆಜ್ಜೆ ತುಳಿದಿದೆ. ನಾಡಿನ ರೈತ ಕುಲದ ಶಾಪ ಸರಕಾರವನ್ನು ತಟ್ಟದೆ ಬಿಡದು. ಕಾಂಗ್ರೆಸ್ ಪಕ್ಷ ಕೈಕಟ್ಟಿ ಕೂರುವುದಿಲ್ಲ. ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದು ನಿಶ್ಚಿತ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top