‘ಮನೆ ಮಾಡೇ ಗರತಿ ಎಂದರೆ ಮೆಲ್ಲಗೆ ಮನೆಯೊಳಗೆ ಬಂದು ಮನೆನೇ ಮಾರಿದ್ಲಂತೆ…’ ಎಂಬ ಗಾದೆ ಮಾತನ್ನು ನಮ್ಮೂರ ಕಡೆ ಜನ ಹೇಳ್ತಿರ್ತಾರೆ. ಹಾಗಾಗಿದೆ ದೇಶದ ಸ್ಥಿತಿ. ಕೊರೊನಾ ವೈರಸ್ ದಾಳಿಯಿಂದ ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ದಿವಾಳಿಯಾಗಿ ನರಳುತ್ತಿರುವ ನಮ್ಮ ರೈತ ಬಂಧುಗಳು ‘ನಮ್ಮನ್ನು ರಕ್ಷಿಸಿ, ಉಳಿಸಿ’ ಎಂದು ಗೋಗರೆಯುತ್ತಿರುವಾಗ, ಕೇಂದ್ರ ಸರಕಾರ ಅವರ ಗಾಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳನ್ನು ನಾಶ ಮಾಡಲು ಹೊಂಚು ಹಾಕುತ್ತಿದೆ.
ಇದೇ ತಿಂಗಳ ಐದರಂದು ಕೇಂದ್ರ ಕೃಷಿ, ಸಹಕಾರ ಮತ್ತು ಮತ್ತು ಕೃಷಿಕರ ಕಲ್ಯಾಣ ಸಚಿವಾಲಯ ರಾಜ್ಯಕ್ಕೆ ಪತ್ರ ಬರೆದು ”ಮಾದರಿ ಕೃಷಿ ಉತ್ಪನ್ನ ಮತ್ತು ಜಾನುವಾರು ಮಾರುಕಟ್ಟೆ (ಸೌಲಭ್ಯ ಮತ್ತು ಉತ್ತೇಜನ) ಕಾಯಿದೆಯನ್ನು ಸುಗ್ರೀವಾಜ್ಞೆಯ ಮೂಲಕ ಅಂಗೀಕರಿಸುವಂತೆ ಸೂಚನೆ ನೀಡಿದೆ. ಇತ್ತೀಚೆಗೆ ನಡೆದಿದ್ದ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯವನ್ನು ಒತ್ತು ಕೊಟ್ಟು ಉಲ್ಲೇಖಿಸಿ ರಾಜ್ಯಗಳಿಗೆ ಸೂಚನೆ ಕೊಡುವಂತೆ ತಿಳಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಕೇಂದ್ರ ಸರಕಾರ ರೂಪಿಸಿರುವ ‘ಮಾದರಿ ಎಪಿಎಂಎಲ್ ಕಾಯಿದೆ 2017’ ರಲ್ಲಿ ಪ್ರಧಾನವಾಗಿ 9 ಸುಧಾರಣಾ ಪ್ರಸ್ತಾವಗಳಿದ್ದು, ಅವುಗಳಲ್ಲಿ 8 ಸುಧಾರಣೆಗಳನ್ನು ಕರ್ನಾಟಕ ಸರಕಾರ ಈಗಾಗಲೇ ಜಾರಿಗೆ ತಂದಿರುವುದನ್ನು ಕೇಂದ್ರ ಸರಕಾರ ಪ್ರಶಂಸಿಸಿದೆ. ಈಗಿನ ಚರ್ಚೆಯ ಮೂಲ- ಎಪಿಎಂಸಿಗಳ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ಒಂಬತ್ತನೇ ವಿವಾದಾತ್ಮಕ ಸುಧಾರಣಾ ಪ್ರಸ್ತಾವದ ತಿದ್ದುಪಡಿ. ಈ ಸುಧಾರಣಾ ಪ್ರಸ್ತಾಪವನ್ನು ಹಿಂದಿನ ಸಮ್ಮಿಶ್ರ ಸರಕಾರ ವಿರೋಧಿಸಿತ್ತು. ಈಗ ಮತ್ತೆ ವಕ್ಕರಿಸಿದೆ.
ಪ್ರಸ್ತುತ ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ 1966ರ ಸೆಕ್ಷನ್ 8ರ ಪ್ರಕಾರ ‘ಎಪಿಎಂಸಿ ಮಾರುಕಟ್ಟೆ ಯಾರ್ಡ್ ಒಳಗೆ ಇಲ್ಲವೆ ಹೊರಗೆ ಯಾರೂ ಕೂಡ ಅಧಿಕೃತ ಲೈಸೆನ್ಸ್ ಇಲ್ಲದೆ ವ್ಯಾಪಾರ ನಡೆಸುವಂತಿಲ್ಲ. ‘ಸೆಕ್ಷನ್ 66 ಮತ್ತು 67ರ ಪ್ರಕಾರ ಯಾರ್ಡ್‌ನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಅಕ್ರಮ ವ್ಯಾಪಾರ, ಕಾಳಸಂತೆ ಮತ್ತು ಅಕ್ರಮ ದಾಸ್ತಾನು ನಿಯಂತ್ರಿಸಲು ಅವಕಾಶವಿದೆ ಹಾಗೂ ರೈತರಿಗೆ ನ್ಯಾಯಬದ್ಧ ಬೆಲೆ ಸಿಗುವಂತೆ ಮಾಡಲು ಖಾಸಗಿ ಸಂಸ್ಥೆಗಳ ಲೆಕ್ಕಪತ್ರ ಪರಿಶೀಲಿಸಬಹುದು. ಸೆಕ್ಷನ್ 114, 116 ಮತ್ತು 117ರಡಿಯಲ್ಲಿ ತಪ್ಪಿತಸ್ಥರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ಮಾರುಕಟ್ಟೆ ಶುಲ್ಕದ ಮೂರು ಪಟ್ಟು ದಂಡ ವಿಧಿಸುವ ಅವಕಾಶ ಇದೆ. ಈ ಆರೂ ಸೆಕ್ಷನ್‌ಗಳನ್ನು ತಿದ್ದುಪಡಿ ಮೂಲಕ ಬದಲಾಯಿಸಲು ಕೇಂದ್ರ ಹೊರಟಿದೆ.
ರೈತರಿಗೆ ವಿಸ್ತೃತ ಮಾರುಕಟ್ಟೆಯನ್ನು ಒದಗಿಸಿ ಅವರ ಬೆಳೆಗೆ ಲಾಭದಾಯಕ ಬೆಲೆ ಸಿಗುವಂತೆ ಮಾಡುವ ಉದ್ದೇಶದಿಂದ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಕೇಂದ್ರ ಹೇಳುತ್ತಿರುವುದು ‘ಸಿಹಿಮಿಶ್ರಿತ ವಿಷಗುಳಿಗೆ’. ಈಗ ಇರುವ ಕಾಯಿದೆಯಡಿಯಲ್ಲಿಯೂ ಖಾಸಗಿಯವರಿಗೆ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಇದೆ. ರಿಲಯನ್ಸ್, ಮೋರ್, ಡಿಮಾರ್ಟ್ ಮೊದಲಾದ ಹಲವಾರು ಖಾಸಗಿ ಕಂಪನಿಗಳು ರೈತರಿಂದ ಬೆಳೆ ಖರೀದಿ ಮಾಡುತ್ತಿವೆ. ಆದರೆ ಇದಕ್ಕಾಗಿ ಈ ಕಂಪನಿಗಳು ಎಪಿಎಂಸಿಯಿಂದ ಪರವಾನಗಿ ಪಡೆದು, ಮಾರುಕಟ್ಟೆ ಶುಲ್ಕ ಪಾವತಿ ಮಾಡಿ ಷರತ್ತುಗಳನ್ವಯ ವಹಿವಾಟು ನಡೆಸಬೇಕಾಗುತ್ತದೆ. ಆದರೆ ಈಗಿನ ತಿದ್ದುಪಡಿಗೆ ಬೇರೆ ದುರುದ್ದೇಶ ಇದೆ. ಎಪಿಎಂಸಿಗಳ ನಿಯಂತ್ರಣದಿಂದ ಕೊಡವಿಕೊಂಡು ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪನಿಗಳ ತಾಳಕ್ಕೆ ಕೇಂದ್ರ ಸರಕಾರ ಕುಣಿಯತೊಡಗಿದೆ. ಈ ಸಂಚಿನ ಭಾಗವಾಗಿಯೇ ಎಪಿಎಂಸಿ ಹೊಂದಿರುವ ನಿಯಂತ್ರಣವನ್ನು ಕಿತ್ತು ಹಾಕಿ ಖಾಸಗಿಯವರಿಗೆ ಅನಿಯಂತ್ರಿತವಾದ ಮುಕ್ತ ಹಸ್ತ ನೀಡುವ ದುರುದ್ದೇಶದಿಂದ ಈ ತಿದ್ದುಪಡಿಯನ್ನು ತರಲಾಗಿದೆ. ಈ ಬಗ್ಗೆ ನಮ್ಮ ರೈತರು ಜಾಗೃತರಾಗಬೇಕಾಗಿದೆ.
ಕೃಷಿಯನ್ನು ‘ಮಳೆಯೊಡನೆ ನಡೆಸುವ ಜೂಜಾಟ’ ಎನ್ನುತ್ತೇವೆ. ಕೃಷಿ ‘ಮಾರುಕಟ್ಟೆಯ ಜೊತೆ ನಡೆಸುವ ಜೂಜಾಟ’ವೂ ಹೌದು ಎಂದು ಇತ್ತೀಚೆಗೆ ರೈತರಿಗೆ ಅರಿವಾಗಿದೆ. ‘ರೈತರಿಗೆ ನಿಮ್ಮ ಸಾಲವೂ ಬೇಡ, ಸಬ್ಸಿಡಿಯೂ ಬೇಡ, ಅವರ ಬೆಳೆಗೆ ವೈಜ್ಞಾನಿಕವಾದ ಬೆಲೆ ಕೊಡಿ ಸಾಕು’ ಎಂದು ನಮ್ಮ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರು ಯಾವಾಗಲೂ ಹೇಳುತ್ತಿದ್ದರು. ರೈತರ ಈ ಬೇಡಿಕೆಯನ್ನು ತಮ್ಮ ಇತಿಮಿತಿಯೊಳಗೆ ಎಪಿಎಂಸಿಗಳು ಈಡೇರಿಸುವ ಪ್ರಯತ್ನ ಮಾಡುತ್ತಿವೆ. ನಮ್ಮಲ್ಲಿ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾವಣೆಯಲ್ಲಿ ಆಯ್ಕೆಯಾದ ರೈತ ಪ್ರತಿನಿಧಿಗಳನ್ನೊಳಗೊಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿವೆ. ಕೇಂದ್ರ ಸರಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯ ಅನುಷ್ಠಾನದ ಮೂಲಕ ಕೃಷಿ ಉತ್ಪನ್ನಗಳ ಬೆಲೆ ನಿರ್ಧರಿಸಿರುವ ಪ್ರಕ್ರಿಯೆಯಲ್ಲಿ ಎಪಿಎಂಸಿಗಳ ಪಾತ್ರ ನಿರ್ಣಾಯಕ. ಇಲ್ಲಿ ರೈತರು ಮಧ್ಯವರ್ತಿಗಳ ಕಾಟ ಇಲ್ಲದೆ ನೇರವಾಗಿ ವರ್ತಕರಿಗೆ ತಮ್ಮ ಬೆಳೆಯನ್ನು ಮಾರಾಟ ಮಾಡಲು ಅವಕಾಶ ಇದೆ. ಜೊತೆಗೆ ತಮ್ಮ ಉತ್ಪನ್ನಗಳನ್ನು ಅಡಮಾನ ಇಟ್ಟು ಸಾಲ ಪಡೆಯಬಹುದು. ದಾಸ್ತಾನು ಮಳಿಗೆ, ವಿಶ್ರಾಂತಿ ಗೃಹಗಳ ಸೌಲಭ್ಯಗಳೂ ಇವೆ. ಬಹಳ ಮುಖ್ಯವಾಗಿ ರೈತರು ಸಂಘಟಿತರಾಗಲು ಇದು ವೇದಿಕೆ ಒದಗಿಸಿದೆ.
ಈಗಿರುವ ಎಪಿಎಂಸಿ ಕಾಯಿದೆಯಲ್ಲಿ ಸುಧಾರಣೆಗೆ ಬೇಕಾದಷ್ಟು ಅವಕಾಶಗಳಿವೆ. ಪ್ರಸ್ತುತ ಶೇ.6ರಷ್ಟು ರೈತರು ಮಾತ್ರ ಎಪಿಎಂಸಿಗಳಲ್ಲಿ ಬೆಳೆ ಮಾರಾಟ ಮಾಡುತ್ತಿದ್ದು, ಶೇ.94ರಷ್ಟು ರೈತರಿಗೆ ಮಾರುಕಟ್ಟೆ ಸೌಲಭ್ಯಗಳಿಲ್ಲ. ರೈತರಿಗೆ ನೆರವಾಗುವ ಉದ್ದೇಶ ಸರಕಾರಕ್ಕಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಮಾರುಕಟ್ಟೆಗಳಿಲ್ಲದ ಕಡೆಗಳಲ್ಲಿ ಎಪಿಎಂಸಿಯಿಂದ ಪರವಾನಿಗೆ ಪಡೆದು ಮಾರುಕಟ್ಟೆಗಳನ್ನು ಸ್ಥಾಪಿಸಲು ಸರಕಾರ ಉತ್ತೇಜನ ನೀಡಬಹುದಾಗಿದೆ. ಆದರೆ ಕೃಷಿ ಮಾರುಕಟ್ಟೆ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಬೇಕಾಗಿರುವುದು ಪರವಾನಿಗೆ ರಹಿತ ಅನಿಯಂತ್ರಿತ ಅವಕಾಶ. ಇದು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರ ಬೆನ್ನು ಮುರಿಯುವ ಮನೆಹಾಳು ಕೆಲಸ. ಒಮ್ಮೆ ಈ ಬಹುರಾಷ್ಟ್ರೀಯ ಕಂಪೆನಿಗಳು ಕಾಯಿದೆ ತಿದ್ದುಪಡಿ ಮೂಲಕ ಮೀಸೆ ತುರುಕಿಸಿ ಒಳಪ್ರವೇಶಿಸಿದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಅಪ್ರಸ್ತುತಗೊಳಿಸಿ, ನಾಶ ಮಾಡಲು ಬಹಳ ದಿನ ಬೇಕಾಗಲಾರದು. ಪ್ರಾರಂಭದ ಹಂತದಲ್ಲಿ ಈ ಕಂಪನಿಗಳು ರೈತರ ಮನೆಬಾಗಿಲಿಗೆ ತೆರಳಿ ಅವರ ನಿರೀಕ್ಷೆ ಮೀರಿದ ಬೆಲೆ ನೀಡಿ ಬೆಳೆ ಖರೀದಿ ಮಾಡಿ ರೈತರ ವಿಶ್ವಾಸ ಗಳಿಸಬಹುದು. ಈ ಮೂಲಕ ಮಾರುಕಟ್ಟೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದು ನಿಧಾನವಾಗಿ ಎಪಿಎಂಸಿಗಳನ್ನು ಅಪ್ರಸ್ತುತಗೊಳಿಸುವುದು ಇದರ ಹಿಂದಿನ ದುರುದ್ದೇಶ ಎನ್ನುವುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು.
ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲು ಹೊರಟಿರುವ ವಿಧಾನವೇ ಪ್ರಜಾಪ್ರಭುತ್ವ ವಿರೋಧಿ. ಕೃಷಿ ಸಚಿವಾಲಯದ ಮೂಲಕ ನೀತಿ ಆಯೋಗ, ರಾಜ್ಯಗಳಿಗೆ ಈ ರೀತಿ ಆದೇಶ ನೀಡುವುದು ಒಕ್ಕೂಟ ವ್ಯವಸ್ಥೆಗೆ ಅಪಚಾರ ಬಗೆದಂತೆ. ರೈತರಿಗೆ ನೆರವಾಗುವ ಉದ್ದೇಶದಿಂದಲೇ ಕೇಂದ್ರ ಸರಕಾರ ಈ ತಿದ್ದುಪಡಿ ತಂದಿದ್ದರೆ ಇದನ್ನು ಮೊದಲು ವಿಸ್ತೃತ ಚರ್ಚೆಗೊಳಪಡಿಸಬೇಕಿತ್ತು. ರೈತ ಪ್ರತಿನಿಧಿಗಳು, ಎಪಿಎಂಸಿ ಪದಾಧಿಕಾರಿಗಳು ಮತ್ತು ವರ್ತಕರ ಅಭಿಪ್ರಾಯ ಪಡೆದು ಈ ತಿದ್ದುಪಡಿ ರೂಪಿಸಬೇಕಾಗಿತ್ತು. ಇದ್ಯಾವುದನ್ನೂ ಮಾಡದೆ ಇಡೀ ದೇಶ ಕೊರೊನಾ ವೈರಸ್ ವಿರುದ್ಧದ ಜೀವನ್ಮರಣ ಹೋರಾಟದಲ್ಲಿ ಮಗ್ನವಾಗಿರುವ ಅವಕಾಶವನ್ನೇ ಬಳಸಿಕೊಂಡು ತುರ್ತಾಗಿ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿಯನ್ನು ತರಲು ಹೊರಟಿರುವುದೇ ಸರಕಾರದ ಉದ್ದೇಶವನ್ನು ಸಂಶಯದಿಂದ ನೋಡುವಂತೆ ಮಾಡಿದೆ. ರಾಜ್ಯ ಸರಕಾರ ಈ ತಿದ್ದುಪಡಿಗೆ ಒಪ್ಪಿಗೆ ನೀಡದೆ ಇದನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಲಿ. ಸರ್ವಾಧಿಕಾರಿ ಧೋರಣೆಯ ಮೂಲಕ ತಿದ್ದುಪಡಿಗೆ ಅಂಗೀಕಾರ ನೀಡಲು ಹೊರಟರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ.