– ಸಿಬಿಎಸ್‌ಸಿ, ಐಸಿಎಸ್‌ಸಿ ಶಾಲೆಗಳಲ್ಲಿ ಕನ್ನಡ ಬೋಧಿಸುವಂತೆ ಸರಕಾರದ ಆದೇಶ.
– ಜಯಂತ್ ಗಂಗವಾಡಿ, ಬೆಂಗಳೂರು.
2026-27ನೇ ಸಾಲಿನ ಹೊತ್ತಿಗೆ ರಾಜ್ಯದ ಎಲ್ಲಾ ಶಾಲೆಗಳು 1ರಿಂದ 10ನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯ ಮಾಡಲಾಗಿದ್ದು, ನಿಯಮ ಜಾರಿಯ ಪರಿಶೀಲನೆಗೆ ಸರಕಾರ ಉನ್ನತಮಟ್ಟದ ಸಮಿತಿ ರಚಿಸಿದೆ. ಈ ಸಂಬಂಧ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಕಲಿಯಬೇಕು ಎಂಬುದು ಸರಕಾರದ ಆಶಯವಾಗಿದೆ. ಕೆಲವು ಖಾಸಗಿ ಶಾಲೆಗಳು ತೃತೀಯ ಭಾಷೆಯಾಗಿ ಪ್ರಾಥಮಿಕ ಹಂತದಲ್ಲಿ ಮಾತ್ರ ಕನ್ನಡವನ್ನು ಕಲಿಸುತ್ತಿದ್ದು, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಕೈ ಬಿಟ್ಟಿವೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಹಂತ ಹಂತವಾಗಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಕಲಿಸುವ ಸಂಬಂಧ 2015ರಲ್ಲಿ ‘ಕನ್ನಡ ಭಾಷಾ ಕಲಿಕಾ ಅಧಿನಿಯಮ’ ಜಾರಿಗೆ ತರಲಾಗಿದೆ. ಇದರ ಅನ್ವಯ 2017ರಲ್ಲಿ ‘ಕನ್ನಡ ಭಾಷಾ ಕಲಿಕಾ ನಿಯಮ’ಗಳನ್ನು ಪ್ರಕಟಿಸಲಾಗಿದೆ.
ರಾಜ್ಯದ ಎಲ್ಲಾ ಶಾಲೆಗಳು ಪ್ರಥಮ ಮತ್ತು ದ್ವಿತೀಯ ಬಾಷೆಯಾಗಿ ಕನ್ನಡ ಕಲಿಸುವ ಸಂಬಂಧ 2017ರಲ್ಲಿ ಜಾರಿಗೆ ತಂದಿದ್ದ ನಿಯಮಗಳ ಪಾಲನೆಯಾಗಿಲ್ಲ. ಕನ್ನಡ ಭಾಷಾ ಕಲಿಕಾ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದೇವೆ. ಎಲ್ಲಾ ಶಾಲೆಗಳು ಗುಣಮಟ್ಟದ ಶಿಕ್ಷಕರಿಂದ ಕನ್ನಡ ಕಲಿಸಬೇಕು. ತಪ್ಪಿತಸ್ಥ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು.- ಎಸ್. ಸುರೇಶ್‌ಕುಮಾರ್, ಶಿಕ್ಷಣ ಸಚಿವ.
ಜೂ.16ರ ವೇಳೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸದ ಶಾಲೆಗಳ ವರದಿ ಲಭ್ಯವಾಗಲಿದೆ. ರಾಜ್ಯದಲ್ಲಿರುವ ಕೇಂದ್ರೀಯ ವಿದ್ಯಾಲಯಗಳೂ ಈ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು.- ಟಿ.ಎಸ್.ನಾಗಾಭರಣ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ.
ಉನ್ನತ ಮಟ್ಟದ ಸಮಿತಿ : ಕನ್ನಡ ಭಾಷಾ ಕಲಿಕಾ ನಿಯಮ ಜಾರಿಗೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಆಯುಕ್ತರು, ಶಿಕ್ಷಣ ತಜ್ಞ ಡಾ. ವಿ.ಪಿ.ನಿರಂಜನಾರಾಧ್ಯ ಸೇರಿ ಇಲಾಖೆಯ ಇತರೆ ಉನ್ನತ ಅಧಿಕಾರಿಗಳು ಈ ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಯು ಶಾಲೆಗಳಿಗೆ ಭೇಟಿ ನೀಡಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ, ದ್ವಿತೀಯ ಭಾಷೆಯಾಗಿ ಕಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಿದೆ.