ಅಮೆರಿಕ ಕಲಿಸಿದ ಪಾಠ ಏನು ಗೊತ್ತೇ?

ಲಾಡೆನ್‌ ಸೆರೆಹಿಡಿಯಲು ಪಾಕಿಸ್ತಾನದ ಸೇನೆ ಮತ್ತು ಸರ್ಕಾರದ ನೆರವು ಪಡೆಯುವುದು ಅಮೆರಿಕಕ್ಕೆ ಅಸಾಧ್ಯದ ಕೆಲಸವೇನಾಗಿರಲಿಲ್ಲ ಅಥವಾ ಆತನನ್ನು ಜೀವಂತವಾಗಿಯೇ ಸೆರೆಹಿಡಿಯಬಹುದಿತ್ತು. ಆದರೆ ಅಮೆರಿಕ ಹಾಗೆ ಮಾಡಲಿಲ್ಲ. ಕೊನೆಗೆ ಆತನ ಶವ ಕೂಡ ಯಾರಿಗೂ ಸಿಗಗೊಡಲಿಲ್ಲ ! ಏನಿದರ ಮರ್ಮ ? 

ಇದೆಂಥ ವಿಚಿತ್ರವೋ ನಾ ಕಾಣೆ!

Osama bin Ladenಪಾಕಿಸ್ತಾನದ ಐಎಸ್​ಐನಿಂದ ನೇರ ಪ್ರೇರಣೆ ಪಡೆದು ಭಾರತದಲ್ಲಿ ರಕ್ತಹರಿಸಲು ಬಂದ ಭಯಂಕರ ಪಾತಕಿಗೆ ಕರುಣೆ ತೋರಿಸಬೇಕಿತ್ತೇನು? ಯಾಕುಬ್ ಮೆಮನ್​ನನ್ನು ಗಲ್ಲು ಶಿಕ್ಷೆಗೆ ಒಳಪಡಿಸುವಾಗ ಭಾರತದಲ್ಲಿ ನಡೆದ ಪ್ರಹಸನಗಳನ್ನು ನೋಡಿದಾಗ ಇಂತಹ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಅದರ ಬೆನ್ನಲ್ಲೇ ನಮಗಿಂತ ಆ ಅಮೆರಿಕವೇ ಗ್ರೇಟ್ ಅನ್ನಿಸಿಬಿಡುತ್ತದೆ. ನಮ್ಮಲ್ಲಿ ಕೊನೇ ಕ್ಷಣದವರೆಗೂ ನಡೆದ ನಾಟಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಥಟ್ಟಂತ ನೆನಪಿಗೆ ಬರುವುದು ಒಸಾಮಾ ಬಿನ್ ಲಾಡೆನ್​ನ ಕ್ರೌರ್ಯ ಮತ್ತು ಅದರ ಪ್ರತಿಫಲವಾಗಿ ಆತನ ವಿಷಯದಲ್ಲಿ ಅಮೆರಿಕ ನಡೆದುಕೊಂಡ ರೀತಿನೀತಿಯ ಚಿತ್ರಣ. 2001ರ ಸೆಪ್ಟೆಂಬರ್ 11ರಂದು ಅಲ್ ಕೈದಾ ಉಗ್ರರು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ ಬಿನ್ ಲಾಡೆನ್ನನ ಹುಟ್ಟಡಗಿಸಲು ಅಮೆರಿಕ ತೀರ್ವನಿಸಿದ್ದು ಗೊತ್ತಿರುವ ಸಂಗತಿಯೇ. ಅದೊಂದು ಮಿಷನ್​ಗೋಸ್ಕರ ಅಮೆರಿಕ ಬರೊಬ್ಬರಿ ಹತ್ತು ವರ್ಷ ಕಾಲ ತನ್ನೆಲ್ಲ ಶಕ್ತಿ ಮತ್ತು ಶ್ರಮವನ್ನು ಸಂಪೂರ್ಣವಾಗಿ ವಿನಿಯೋಗಿಸಿತು. ಆ ದೇಶ ಮಾಡಿದ ಸಂಕಲ್ಪ ಈಡೇರಿದ್ದು 2011ರ ಮೇ 2ರಂದು. ಲಾಡೆನ್ನನ ವಿಷಯದಲ್ಲಿ ಅಮೆರಿಕ ತೋರಿದ ಕೆಚ್ಚು, ಮಾಡಿದ ಕಾದಾಟ ಜಗತ್ತಿನ ಇತರೆಲ್ಲ ದೇಶಗಳಿಗೆ ನಿಜವಾಗಿ ಮಾದರಿ ಆಗಬೇಕು. ಹೀಗಾಗಿ ಲಾಡೆನ್ನನಂತಹ ಪೀಡೆಯನ್ನು ಮೂಲದಲ್ಲಿ ಬೆಳೆಸಿದ ಅಮೆರಿಕದ ಘನಘೊರ ಪ್ರಮಾದವನ್ನೂ ನಾವು ಒಂದು ಕ್ಷಣ ಮರೆತುಬಿಡಬಹುದು.

ಮುಖ್ಯವಾದ ವಿಚಾರ ಅದಲ್ಲ. ಲಾಡೆನ್ನನ ಆಟಾಟೋಪಕ್ಕೆ ಇತಿಶ್ರೀ ಹೇಳಬೇಕೆನ್ನುವ ಅಮೆರಿಕದ ತೀರ್ವನದ ಹಿನ್ನೆಲೆಯಲ್ಲಿ ನಾವು ಕೆಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಅಮೆರಿಕ ಅಂತಹ ಒಂದು ಗಟ್ಟಿ ತೀರ್ವನ ಮಾಡಿದಾಗ ಆ ದೇಶದ ಅಧ್ಯಕ್ಷರಾಗಿದ್ದವರು ಜಾರ್ಜ್ ಡಬ್ಲ್ಯು. ಬುಷ್. ಆ ಗುರಿ ಈಡೇರುವ ಹೊತ್ತಿಗೆ ಅದೇ ಜಾರ್ಜ್ ಅಧಿಕಾರಾವಧಿ ಮುಗಿದು ಮಾಜಿ ಆಗಿಬಿಟ್ಟಿದ್ದರು. ಬುಷ್ ಕುಳಿತ ಕುರ್ಚಿಯನ್ನು ಬರಾಕ್ ಒಬಾಮಾ ಅಲಂಕರಿಸಿದ್ದರು. ಆದರೆ ಸರ್ಕಾರದ ಸಂಕಲ್ಪದ ವಿಚಾರದಲ್ಲಿ ಒಬಾಮಾ ನಿಲುವು ಒಂದಿಷ್ಟೂ ಬದಲಾಗಲಿಲ್ಲ. ಲಾಡೆನ್ ಜಗತ್ತಿನ ಯಾವುದೇ ದೇಶದಲ್ಲಿ ಬಚ್ಚಿಟ್ಟುಕೊಂಡಿರಲಿ, ಆತನ ಸಂಬಂಧವಾಗಿ ಯಾವುದೇ ದೇಶದ ಮೇಲೆ ಮಿಲಿಟರಿ ಕಾರ್ಯಾಚರಣೆ ಮಾಡುವ ಪ್ರಸಂಗವೇ ಬರಲಿ ಅದಕ್ಕೆ ಹಿಂದೇಟು ಹಾಕಬಾರದು ಎಂಬುದು ಅಮೆರಿಕ ತಾಳಿದ್ದ ಗಟ್ಟಿ ತೀರ್ವನವಾಗಿತ್ತು. ಆ ವಿಚಾರದಲ್ಲಿ ಯಾವ ಹಂತಕ್ಕೆ ಹೋಗಲೂ ಹಿಂಜರಿಯಬಾರದು ಎಂಬುದು ಅದರ ನಿಲುವಾಗಿತ್ತು. ಹಾಗೆ ತೀರ್ವನಿಸುವಾಗ ಅಮೆರಿಕಕ್ಕೆ ಗೊತ್ತಿತ್ತು, ಆತ ಒಂದೋ ಅಫ್ಘಾನಿಸ್ತಾನದಲ್ಲಿ ಇಲ್ಲ ಪಾಕಿಸ್ತಾನದಲ್ಲಿ ಅಡಗಿದ್ದಾನೆಂದು. ಆ ವಿಚಾರ ಬೇರೆ. ಅಂತಿಮವಾಗಿ ಆತ ಕರಾಚಿಯ ಮಗ್ಗುಲಿನ ಅಬೋಟಾಬಾದ್ ಬಿಲಾಲ್ ಪಟ್ಟಣದಲ್ಲಿ ಅವಿತುಕೊಂಡಿದ್ದಾನೆಂಬುದನ್ನು ಸಿಐಎ (Central Intelligence Agency) ಪರವಾಗಿ ಲಾಡೆನ್ ಬೇಟೆಯ ಕಾರ್ಯಾಚರಣೆಗಿಳಿದಿದ್ದ ಮಿಸ್ಟರ್ ಮರಾವೆನ್ ಖಾತ್ರಿ ಮಾಡಿಕೊಂಡಿದ್ದ. ಹೀಗಾಗಿ ಲಾಡೆನ್ ಸೆರೆಹಿಡಿಯಲು ಪಾಕಿಸ್ತಾನದ ಸೇನೆ ಮತ್ತು ಸರ್ಕಾರದ ನೆರವು ಪಡೆಯುವುದು ಅಮೆರಿಕಕ್ಕೆ ಅಸಾಧ್ಯದ ಕೆಲಸವೇನಾಗಿರಲಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಅದು ಅಂತಹ ಕೆಲಸಕ್ಕೆ ಮುಂದಾಗಲಿಲ್ಲ. ಸಾಕಷ್ಟು ರಿಸ್ಕ್ ತೆಗೆದುಕೊಂಡು ತಾನೇ ನೇರವಾಗಿ ಲಾಡೆನ್ ಸದೆಬಡಿಯುವ ಕಾರ್ಯಾಚರಣೆಗೆ ಮುಂದಾಯಿತು. ಕಾರಣ ಇಷ್ಟೆ, ಅಮೆರಿಕಕ್ಕೆ ಬೇಕಾಗಿದ್ದು ಸೆಪ್ಟೆಂಬರ್ 11ರಂದು ತನಗಾದ ಅಪಮಾನಕ್ಕೆ ಪ್ರತೀಕಾರ ತೆಗೆದುಕೊಳ್ಳುವುದೇ ಹೊರತು ಬೇರೇನೂ ಆಗಿರಲಿಲ್ಲ. ಹೀಗಾಗಿ ನೇರವಾಗಿ ಹೆಲಿಕಾಪ್ಟರ್ ಮೂಲಕ ದಾಳಿ ಮಾಡಿ ಲಾಡೆನ್ ಬಲಿ ಪಡೆಯಿತು. ಪಾಕ್ ನೆಲದಲ್ಲಿ ನೇರವಾಗಿ ಕಾರ್ಯಾಚರಣೆಗಿಳಿಯುವುದರ ಸಾಧಕ-ಬಾಧಕಗಳು, ಬರಬಹುದಾದ ಟೀಕೆಗಳ ಬಗ್ಗೆ ಅರಿವಿದ್ದೇ ಅಮೆರಿಕ ಅಂಥ ಕೆಲಸಕ್ಕೆ ಮುಂದಾಯಿತು.

ಆ ಕತೆಯಲ್ಲ ಒತ್ತಟ್ಟಿಗಿರಲಿ, ಲಾಡೆನ್ ಆಟಾಟೋಪಕ್ಕೆ ಇತಿಶ್ರೀ ಹೇಳುವ ಕಾರ್ಯಾಚರಣೆಯ ಕೊನೆಯ ಘಟ್ಟದಲ್ಲಿ ಅಮೆರಿಕ ಸರ್ಕಾರ ತೆಗೆದುಕೊಂಡ ಎರಡು ಮಹತ್ವದ ನಿರ್ಧಾರಗಳು ಭಾರತದ ಈಗಿನ ಸಂದರ್ಭದಲ್ಲಿ ಆಲೋಚನೆಗೆ ಹೆಚ್ಚು ಪ್ರಸ್ತುತ ಎಂದೆನಿಸುತ್ತದೆ.

ಮೊದಲನೆಯದು; ಅಮೆರಿಕ ಮನಸು ಮಾಡಿದ್ದರೆ ಒಸಾಮಾನನ್ನು ಜೀವಂತ ಹಿಡಿಯುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ. ಆದರೆ ಆತನನ್ನು ಜೀವಂತ ಹಿಡಿಯುವುದು ಅಮೆರಿಕಕ್ಕೆ ಬೇಕಾಗಿರಲಿಲ್ಲ. ಹೀಗಾಗಿ ಉದ್ದೇಶಪೂರ್ವಕವಾಗಿ ದಾಳಿ ವೇಳೆ ಆತನನ್ನು ಕೊಂದು ಹಾಕಿತು. ಆತನನ್ನು ಜೀವಂತ ಸೆರೆಹಿಡಿದರೆ ಅದು ಮುಂದೆ ತಲೆನೋವಿಗೆ ಕಾರಣವಾಗುತ್ತೆ ಎಂಬುದು ಆ ನಿರ್ಧಾರಕ್ಕೆ ಮುಖ್ಯ ಕಾರಣ ಆಗಿದ್ದಿರಲೂ ಸಾಕು.

ಎರಡನೆಯದು; ಲಾಡೆನ್ನನ ಶವವನ್ನು ಈ ಭೂಮಿಯ ಮೇಲೆ ಯಾರ ಕೈಗೂ ಸಿಗದಂತೆ ಅಂತ್ಯಕ್ರಿಯೆ ಮಾಡಿ ಮುಗಿಸಬೇಕೆಂದು ತೀರ್ವನಿಸಿದ್ದು. ಅದು ಬರಾಕ್ ಒಬಾಮಾ ಅವರ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ತೆಗೆದುಕೊಂಡ ಅತ್ಯಂತ ಜಾಣ್ಮೆಯ ಮತ್ತು ಅತಿ ಮಹತ್ವದ ನಿರ್ಧಾರ ಎಂದರೆ ತಪ್ಪಾಗಲಾರದು.

ಈ ತೀರ್ವನದ ಹಿಂದೆ ಅಮೆರಿಕಕ್ಕೆ ಒಂದು ಸ್ಪಷ್ಟ ಕಲ್ಪನೆಯಿತ್ತು. ಇಡೀ ಜಗತ್ತನ್ನು ಹತ್ತಾರು ವರ್ಷಗಳ ಕಾಲ ಬೇತಾಳದಂತೆ ಕಾಡಿದ ಈ ದುರುಳನ ಒಂದೇ ಒಂದು ಕುರುಹು ಕೂಡ ಯಾರೊಬ್ಬರಿಗೂ ಸಿಗಕೂಡದು ಎಂಬುದು. ಅದು ಅಮೆರಿಕ ದೃಢವಾದ ತೀರ್ವನವೂ ಆಗಿತ್ತು. ಹೀಗಾಗಿ ಲಾಡೆನ್ ಸತ್ತ ಮರುಕ್ಷಣದಲ್ಲೇ ಆತನ ಶವವನ್ನು ಅಮೆರಿಕ ಯೋಧರು ಅಫ್ಘಾನಿಸ್ತಾನಕ್ಕೆ ಸಾಗಿಸಿದರು. ಆತ ಲಾಡೆನ್ ಹೌದೋ ಅಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಡಿಎನ್​ಎ ಪರೀಕ್ಷೆಯೂ ಸೇರಿ ನಾನಾ ವಿಧದ ಪರೀಕ್ಷೆ ನಡೆಸಿದರು. ಪರಾಂಬರಿಸಿ ನೋಡಿದ ನಂತರ ಆತ ಲಾಡೆನ್ ಹೌದೆಂದು ಖಚಿತವಾದ ಮೇಲೆ ಆ ಶವವನ್ನು ಭಾರವಾದ ಲೋಹದ ಜೊತೆಗಿಟ್ಟು ಭದ್ರವಾಗಿ ಪ್ಯಾಕ್ ಮಾಡಿದರು. ಎತ್ತಿಕೊಂಡು ಹೋಗಿ ಉತ್ತರ ಅರೇಬಿಯನ್ ಸಾಗರದ ಆಳದಲ್ಲಿ ಸರಳ ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿ ಮುಗಿಸಿ ಬಂದರು. ವಾಸ್ತವದಲ್ಲಿ ನೀರಲ್ಲಿ ಶವದ ಅಂತ್ಯಸಂಸ್ಕಾರ ಮಾಡಲು ಇಸ್ಲಾಂ ನಂಬಿಕೆಯಲ್ಲಿ ಮತ್ತು ಆಚರಣೆಯಲ್ಲಿ ಅವಕಾಶವಿಲ್ಲ. ಲಾಡೆನ್ ಅಟ್ಟಹಾಸ ಕೊನೆಗಾಣಿಸಲು ಅಮೆರಿಕ ಕೈಗೊಂಡ ‘ಆಪರೇಷನ್ ನೆಪ್ಚೂನ್ ಸ್ಪಿಯರ್’ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದ ಒಂದು ವರ್ಷದ ತರುವಾಯ ಅಫ್ಘಾನಿಸ್ತಾನದ ಅಲ್ ಜಝೀರಾ ಟಿವಿ ಚಾನಲ್​ಗೆ

ಈ ಸಂಗತಿ ಲೀಕ್ ಆಯಿತು. ಇದು ಉದ್ದೇಶಪೂರ್ವಕವಾಗಿ ಆದ ಸೋರಿಕೆಯೋ ಅಥವಾ ಅನುದ್ದೇಶಿತವೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಒಂದು ಮಾತು ನಿಜ, ಲಾಡೆನ್​ನನ್ನು ಮುಗಿಸುವ ಕಾರ್ಯಾಚರಣೆ ಮುಕ್ತಾಯವಾಗುವವರೆಗೆ ಒಂದು ಸಣ್ಣ ಮಾಹಿತಿ ಕೂಡ ಹೊರ ಜಗತ್ತಿಗೆ ಸೋರಿಕೆ ಆಗಲು ಕೊಡಲಿಲ್ಲ. ಎಷ್ಟೆಂದರೆ ಅಬೋಟಾಬಾದ್​ನಲ್ಲಿ ಲಾಡೆನ್ ತಂಗಿರುವ ಮಾಹಿತಿ ಅಮೆರಿಕದ ಸಿಐಎಗೆ ಸಿಕ್ಕಿದ್ದು ಹೇಗೆ ಎಂಬುದರ ಕುರಿತೇ ಇನ್ನೂ ಗೊಂದಲವಿದೆ. ಲಾಡೆನ್ ತಲೆಗೆ ಅಮೆರಿಕ ಘೊಷಣೆ ಮಾಡಿದ್ದ 25 ಮಿಲಿಯನ್ ಡಾಲರ್ ಇನಾಮಿನ ಆಸೆಗೆ ಯಾವನೋ ಪಾಕ್ ಪ್ರಜೆ ಮಾಹಿತಿ ನೀಡಿದ ಎಂದು ಕೆಲವರು ಹೇಳಿದರೆ, ಲಾಡೆನ್ ತಂಗಿದ್ದ ಮನೆಗೆ ಅಫ್ಘಾನಿಸ್ತಾನ ಮುಂತಾದೆಡೆಯಿಂದ ನಿಯಮಿತವಾಗಿ ಬರುತ್ತಿದ್ದ ಕೊರಿಯರ್​ನ

ಜಾಡು ಹಿಡಿದು ಆತನ ಅಡಗುದಾಣವನ್ನು ಪತ್ತೆ ಮಾಡಲಾಯಿತು ಎಂದು ಇನ್ನೊಂದು ಅಭಿಪ್ರಾಯವಿದೆ. ಇಂತಹ ಸಂದರ್ಭ ಭಾರತದಲ್ಲಿ ಇದ್ದಿದ್ದರೆ ಏನಾಗಬಹುದಿತ್ತು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ, ಅಷ್ಟು ಸಾಕು. ಹೆಚ್ಚೇನೂ ಹೇಳುವ ಜರೂರತ್ತಿಲ್ಲ.

ಇಲ್ಲಿ ಉಲ್ಲೇಖಿಸಲೇಬೇಕಾದ ಮತ್ತೊಂದು ಸಂಗತಿಯಿದೆ. ಅಮೆರಿಕ ನಡೆಸಿದ ಕಾರ್ಯಾಚರಣೆ ವೇಳೆ ಲಾಡೆನ್ ಮಾತ್ರವಲ್ಲ, ಆತನ ಇಪ್ಪತ್ಮೂರು ವರ್ಷ ವಯಸ್ಸಿನ ಪುತ್ರ ಖಾಲಿದ್ ಬಿನ್ ಲಾಡೆನ್, ಸಹಚರ ಅಬು ಅಹಮದ್ ಕುವೈತಿ, ಕುವೈತಿಯ ಸಹೋದರ ಅಬ್ರಾರ್, ಅಬ್ರಾರ್ ಪತ್ನಿ ಬುಶ್ರಾ ಎಂಬುವವರೂ ಸಾವನ್ನಪ್ಪಿದರು. ಲಾಡೆನ್ ಮಾತ್ರ 54 ವರ್ಷದವನಾಗಿದ್ದ. ಬಾಕಿ ಎಲ್ಲರೂ 20ರಿಂದ 30 ವರ್ಷದ ಆಸುಪಾಸಿನಲ್ಲಿದ್ದರು. ಪಾಪ! ಇನ್ನೂ ನೂರ್ಕಾಲ ಬಾಳಿ ಬದುಕಬೇಕಿತ್ತು ಅವರೆಲ್ಲ. ಲಾಡೆನ್ ಜೊತೆಗೆ ಇವರೆಲ್ಲ ಜೀವ ಕಳೆದುಕೊಂಡಿದ್ದು ನ್ಯಾಯವೇ? ವಿಶೇಷ ಅಂದರೆ ಜಗತ್ತಿನ ಯಾವ ದೇಶಕ್ಕೂ ಈ ವಿಚಾರದಲ್ಲಿ ಅಂತಹ ಜಿಜ್ಞಾಸೆ ಕಾಡಲೇ ಇಲ್ಲ. ಬಾಕಿ ದೇಶಗಳಿರಲಿ, ಕನಿಷ್ಠಪಕ್ಷ ಪಾಕಿಸ್ತಾನ ಕೂಡ ಅಮೆರಿಕದ ವಿರುದ್ಧ ದನಿ ಎತ್ತಲಿಲ್ಲ. ಅಂತಾರಾಷ್ಟ್ರೀಯ ಮಾನವಹಕ್ಕುಗಳ ಹೋರಾಟಗಾರರಿಗೂ ಅದರ ವಿರುದ್ಧ ಧ್ವನಿ ಎತ್ತುವ ಮನಸ್ಸಾಗಲಿಲ್ಲ ಅಂತ ತೋರುತ್ತದೆ.

ಇಷ್ಟೆಲ್ಲ ಹೇಳಿದ ಮೇಲೆ ಯಾಕುಬ್ ಮೆಮನ್ ಗಲ್ಲು, ಆ ಹಿನ್ನೆಲೆಯಲ್ಲಿ ಉಂಟಾದ ಗುಲ್ಲು, ಗೋಜಲನ್ನು ಪ್ರಸ್ತಾಪಿಸದೆ ಹೋದರೆ ಹೇಗೆ? ಮೊದಲನೆಯದಾಗಿ ಇಷ್ಟು ಮಹತ್ವದ ವಿಚಾರವನ್ನು ಗೌಪ್ಯವಾಗಿ ಇಟ್ಟುಕೊಳ್ಳುವ ಯೋಗ್ಯತೆಯೂ ಮಹಾರಾಷ್ಟ್ರ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಇಲ್ಲದೆ ಹೋಯಿತು. ಮುಖ್ಯವಾಗಿ ಈಗ ಉಂಟಾಗಿರುವ ಗೊಂದಲಗಳಿಗೆಲ್ಲ ಅದೇ ಮೂಲ ಕಾರಣ ಎಂದರೂ ತಪ್ಪಲ್ಲ. ಒಮ್ಮೆ ವಿಷಯ ಬಹಿರಂಗ ಆದದ್ದೇ ತಡ, ಮುಸ್ಲಿಂ ಎಂಬ ಕಾರಣಕ್ಕಾಗಿ ಯಾಕುಬ್​ಗೆ

ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ ಎಂಬ ವಾದವನ್ನು ಕಾಂಗ್ರೆಸ್ ಮತ್ತು ಎನ್​ಸಿಪಿಯ ಹಿರಿಯ ಮುಖಂಡರೇ ಮುಂದಿಟ್ಟರು. ಹಾಗಾದರೆ ಯಾಕುಬ್, ದಾವೂದ್ ಗ್ಯಾಂಗ್ ಪ್ರತಿನಿಧಿಯಾಗಿ ಕೆಲಸ ಮಾಡಿ 1993ರಲ್ಲಿ ಮುಂಬೈನಲ್ಲಿ ಸರಣಿ ಬಾಂಬ್ ಸ್ಪೋಟದಲ್ಲಿ ನೇರವಾಗಿ ಭಾಗಿಯಾಗಿದ್ದರ ದಾಖಲೆ ಕತೆ ಏನು? ತನ್ನ ಮನೆಯಲ್ಲಿ 12 ಬಾಂಬ್, 85 ಗ್ರೆನೇಡ್​ಗಳನ್ನು ಪೂಜೆಗೆ ಇಟ್ಟುಕೊಂಡಿದ್ದನೇ? ಪಾಕ್​ನಿಂದ ಹವಾಲಾ ಹಣ ಸಾಗಿಸುತ್ತಿದ್ದುದು ಸುಳ್ಳೇ? ಯಾಕುಬ್​ನ ಜೊತೆಗೆ ಕೆಲಸ ಮಾಡಿದ್ದ ಅವನ ಕುಟುಂಬಕ್ಕೇ ಸೇರಿದ ಕೆಲವರು ಪಾಕ್​ನಲ್ಲೇಕೆ ತಲೆಮರೆಸಿಕೊಂಡಿದ್ದಾರೆ? ಈತ ಪಾಕಿಸ್ತಾನದ ಪಾಸ್​ಪೋರ್ಟ್ ಹೊಂದಿದ್ದರ ಹಿಂದಿನ ಕಾರಣ ಏನು? ಪಾಕಿಸ್ತಾನಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದುದು ಯಾಕೆ? ಯಾರಾದರೂ ಆಲೋಚನೆ ಮಾಡುತ್ತಾರಾ? ಬೇರೆಯವರು ಹಾಗಿರಲಿ. ಕೆಲ ನ್ಯಾಯಾಧೀಶರೂ ಆ ಬಗ್ಗೆ ಆಲೋಚಿಸದ್ದು ಅಚ್ಚರಿಯ ವಿಚಾರ. ಟಾಡಾ ನ್ಯಾಯಾಲಯ, ಮುಂಬೈ ಹೈಕೋರ್ಟ್, ಎರಡೆರಡು ಸಲ ಸುಪ್ರೀಂಕೋರ್ಟ್, ರಾಷ್ಟ್ರಪತಿ ಮತ್ತು ಮಹಾರಾಷ್ಟ್ರ ಗವರ್ನರ್ ಇವರೆಲ್ಲ ಕಣ್ಣುಮುಚ್ಚಿಕೊಂಡು ತೀರ್ವನ ನೀಡಿದರೇ? ಎಲ್ಲದಕ್ಕಿಂತ ಮುಖ್ಯವಾಗಿ, ಮುಂಬೈ ಸರಣಿ ಸ್ಪೋಟವೊಂದರಲ್ಲೇ 257 ಮಂದಿ ಮತ್ತು ಸ್ವಾತಂತ್ರ್ಯಾನಂತರ ದೇಶಾದ್ಯಂತ ಎಪ್ಪತ್ತು ಸಾವಿರಕ್ಕೂ ಹೆಚ್ಚು ಅಮಾಯಕ ಪ್ರಜೆಗಳು ಭಯೋತ್ಪಾದಕರ ಕ್ರೌರ್ಯಕ್ಕೆ ಜೀವ ತೆತ್ತಿರುವಾಗ ಓರ್ವ ಯಾಕುಬ್ ಮೆಮನ್​ಗಾಗಿ ಮನಮಿಡಿಯುವವರು ಇದ್ದಾರಲ್ಲ! ಇದಕ್ಕೇನೆನ್ನುವುದು?

ಈ ಸತ್ಯ ನ್ಯಾಯವಾದಿಗಳಾದ ಪ್ರಶಾಂತ್ ಭೂಷಣ್, ಇಂದಿರಾ ಜೈಸಿಂಗ್ ಮತ್ತು ಆನಂದ್ ಗ್ರೋವರ್ ಮುಂತಾದವರಿಗಾದರೂ ಅರ್ಥವಾಗುವುದು ಬೇಡವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top