ಈ ಹೊತ್ತಿನ ಎಲ್ಲ ಸವಾಲುಗಳಿಗೆ ಅಂಬೇಡ್ಕರ್ ಪರಿಹಾರ – ದಲಿತರು ಮತ ಅಸವನ್ನು ಸರಿಯಾಗಿ ಬಳಸಿಕೊಳ್ಳದ ಹೊರತು ಅಂಬೇಡ್ಕರ್ ಬಯಸಿದ ಸ್ವಾತಂತ್ರ್ಯ ಸಿಗದು. – ಬಿ. ಸೋಮಶೇಖರ್.
ಸಾವಿರಾರು ಶ್ರೇಷ್ಠ ವ್ಯಕ್ತಿಗಳು ಜಗತ್ತಿನ ಇತಿಹಾಸ ನಿರ್ಮಿಸಿದ್ದಾರೆ. ಒಂದು ದೇಶದ ಇತಿಹಾಸವನ್ನು ನೂರಾರು ಮಂದಿ ಶ್ರೇಷ್ಠ ವ್ಯಕ್ತಿಗಳು ನಿರ್ಮಾಣ ಮಾಡುತ್ತಾರೆ. ಇಂಥ ಇತಿಹಾಸ ಶಿಲ್ಪಿಗಳಲ್ಲಿ ಹೆಚ್ಚಿನವರು ನಮಗೆ ಇತಿಹಾಸದ ಪುಸ್ತಕಗಳನ್ನು ಓದುವಾಗ ನೆನಪಿಗೆ ಬರುತ್ತಾರೆ, ಮತ್ತೆ ಮರೆತುಹೋಗುತ್ತಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಇದಕ್ಕೊಂದು ಅಪವಾದ. ಅವರು ಪ್ರಜ್ಞಾ ಪ್ರಪಂಚದಲ್ಲಿ ಜೀವಂತವಾಗಿರುವ ಮಹಾಚೇತನ. ನಮ್ಮನ್ನು ಎಚ್ಚರಿಸುತ್ತಿರುವ ಹಾಗೂ ನಮಗೆ ದಾರಿ ತೋರುತ್ತಿರುವ ಮಹಾಪುರುಷ. ಇಂದು ನಾವು ಬಾಬಾ ಸಾಹೇಬ್ ಅಂಬೇಡ್ಕರ್ 130ನೇ ಜನ್ಮ ದಿನವನ್ನು ಆಚರಿಸುತ್ತಿದ್ದೇವೆ. ಇಷ್ಟು ವರ್ಷ ಕಳೆದರೂ ಅಂಬೇಡ್ಕರ್ ಅವರ ಪ್ರಸ್ತುತತೆ ಕಡಿಮೆಯಾಗಿಲ್ಲ, ಅಧಿಕವಾಗುತ್ತಿದೆ. ಅವರ ವಿಚಾರ, ಅಭಿಪ್ರಾಯ, ವಿಮರ್ಶೆ, ವಿಶ್ಲೇಷಣೆ, ವ್ಯಾಖ್ಯಾನ ಎಲ್ಲವೂ ನಮ್ಮ ಈ ಹೊತ್ತಿನ ಸಮಸ್ಯೆ ಮತ್ತು ಸವಾಲುಗಳಿಗೆ ಸ್ಪಂದಿಸುತ್ತವೆ.
ಅಂಬೇಡ್ಕರ್ ಪ್ರಸ್ತುತತೆಯನ್ನು ಮನಗಂಡು ಅವರ ವೈಚಾರಿಕ ಸಂಪತ್ತನ್ನು ಬಳಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಪ್ರಥಮದಲ್ಲಿ ನವೆಂಬರ್ 16 ಅನ್ನು ‘ಸಂವಿಧಾನ ದಿನ’ ಎಂದು ಆಚರಿಸಬೇಕೆಂದು ಘೋಷಣೆ ಮಾಡಿದರು. ಅಂದಿನಿಂದ ತುಸು ವೇಗವಾಗಿ ಅಂಬೇಡ್ಕರ್ ವಿಚಾರಗಳನ್ನು ಅಧ್ಯಯನ ಮಾಡುವ, ಕೃತಿಗೊಳಿಸುವ ಕೆಲಸ ನಡೆಯುತ್ತಿದೆ. ಈ ಬಾರಿ 2020ನೇ ವರ್ಷದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಕರ್ನಾಟಕ ವಿಧಾನ ಮಂಡಲದ ಮೊದಲನೇ ಅಧಿವೇಶನದಲ್ಲಿ ಸಂವಿಧಾನ ಕುರಿತು ವಿಶೇಷ ಚರ್ಚೆ ನಡೆಸಿ, ಅಂಬೇಡ್ಕರ್‌ಗೆ ಗೌರವ ಸಲ್ಲಿಸಿತು.
ಅಂಬೇಡ್ಕರ್ ಅವರ ವ್ಯಕ್ತಿತ್ವ ಇಂದಿಗೂ ಜೀವಂತವಾಗಿದೆ. ವರ್ಷದಿಂದ ವರ್ಷಕ್ಕೆ ಸತ್ವಶಾಲಿಯಾಗಿ ರೂಪಗೊಳ್ಳುತ್ತಿದೆ. 1891ರಲ್ಲಿ ಮಧ್ಯಪ್ರದೇಶದ ಸಣ್ಣ ಊರೊಂದರಲ್ಲಿ ಸಾಮಾನ್ಯ ದಲಿತ ಕುಟುಂಬವೊಂದರಲ್ಲಿ ಜನಿಸಿದ ಅಂಬೇಡ್ಕರ್ ಮೇಲು ವರ್ಗಗಳ ಕಪಿಮುಷ್ಟಿಯಲ್ಲಿ ಸಿಲುಕಿದ್ದ ಅಂದಿನ ಹಿಂದೂ ಸಮಾಜದ ಅಸಹಕಾರ, ಅಸಹನೆ, ವಿರೋಧ… ಎಲ್ಲವನ್ನು ಸವಾಲಾಗಿ ಸ್ವೀಕರಿಸಿ ದಿಟ್ಟತನದಿಂದ ಎದುರಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಅಂಬೇಡ್ಕರ್ ಅವರ ಜೀವನದ ಗುರಿ ಏನು ಎಂಬುದು ಸ್ಪಷ್ಟವಾಗಿತ್ತು. ಅವರಲ್ಲಿ ಆ ಚಿಕ್ಕ ವಯಸ್ಸಿನಲ್ಲೇ ಯಾವ ಗೊಂದಲವೂ, ಚಪಲತೆಯೂ ಇರಲಿಲ್ಲ. ತಮಗೆ ವರ್ಷಕ್ಕೆ 230 ಪೌಂಡ್ ವಿದ್ಯಾರ್ಥಿ ವೇತನ ನೀಡಿ ಅಮೆರಿಕದ ಕೊಲಂಬಿಯಾ ವಿಶ್ವ ವಿದ್ಯಾಲಯದಲ್ಲಿ ಉನ್ನತ ಅಧ್ಯಯನ ಮಾಡಲು ಅನುವು ಮಾಡಿಕೊಟ್ಟಿದ್ದ ಬರೋಡದ ಮಹಾರಾಜ ಗಾಯಕವಾಡ್ ಅವರಿಗೆ ‘‘ನಾನು ಗಳಿಸುವ ಜ್ಞಾನವನ್ನು ನನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವುದಿಲ್ಲ, ನನ್ನ ಜ್ಞಾನ ಶಕ್ತಿಯನ್ನು ನನ್ನ ಜನರ ಅಭ್ಯುದಯ(ಸಮುದಾಯ)ಕ್ಕೆ ನಿಯೋಜಿಸುತ್ತೇನೆ,’’ ಎಂದು ವಚನ ನೀಡಿದ್ದರು. ಕೊಟ್ಟ ಮಾತನ್ನು ಚಾಚೂ ತಪ್ಪದೇ ಅಕ್ಷರಶಃ ಪಾಲಿಸಿ ಅಂಧಕಾರದಲ್ಲಿ ಮುಳುಗಿದ್ದ ಶೋಷಿತ ವರ್ಗದ ಜನರಿಗೆ ಬಿಡುಗಡೆಯ ಸೂರ್ಯನಾಗಿ ಅಂಬೇಡ್ಕರ್ ಸಲ್ಲಿಸಿದ ಸೇವೆ ಇತಿಹಾಸದ ಸುಂದರ ಭಾಗವಾಗಿದೆ.
ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದು ಭಾರತಕ್ಕೆ ಮರಳಿದ ಅಂಬೇಡ್ಕರ್, ಕೆಲವು ಕಾಲ ಉದ್ಯೋಗಸ್ತರಾಗಿದ್ದು 1919ರಲ್ಲಿ ಸಾರ್ವಜನಿಕ ಜೀವನ ಪ್ರವೇಶಿಸಿದರು. ಭಾರತದ ಆಡಳಿತದಲ್ಲಿ ಸುಧಾರಣೆ ತರಲು ಅಂದಿನ ಬ್ರಿಟಿಷ್ ಸರಕಾರ ಕೈಗೊಂಡ ಹಲವಾರು ಕ್ರಮಗಳಲ್ಲಿ ಲಾರ್ಡ್ ಸೌತ್ ಬರೋ ಸಮಿತಿ ಎಂಬ ಮಹತ್ವದ ಸಮಿತಿಯಾಗಿತ್ತು. ಭಾರತದಲ್ಲಿ ಚುನಾವಣೆ, ಮತದಾನ, ಮತದ ಹಕ್ಕು, ಚುನಾವಣಾ ಕ್ಷೇತ್ರಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಿತಿ, ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕಿತ್ತುಘಿ. ಅಂಬೇಡ್ಕರ್ ಈ ಸಮಿತಿಯ ಮುಂದೆ ಹಾಜರಾಗಿ ಅಸ್ಪೃಶ್ಯರು ಸೇರಿದಂತೆ ದಲಿತ ಸಮುದಾಯಗಳ ಹಕ್ಕುಗಳ ಕುರಿತು ವಿದ್ವತ್‌ಪೂರ್ಣ ಮನವಿ ಸಲ್ಲಿಸಿದರು. ನಂತರ 1927ರಲ್ಲಿ ಸರ್ ಜಾನ್ ಸೈಮನ್ ನೇತೃತ್ವದ ರಾಯಲ್ ಕಮಿಷನ್ ಮುಂದೆ ಪ್ರಥಮ ಬಾರಿಗೆ ಅಸ್ಪೃಶ್ಯರಿಗೆ ಸಮಾನ ರಾಜಕೀಯ ಹಕ್ಕನ್ನು ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು. ಅವರು ಪ್ರಾರಂಭಿಸಿದ ಈ ಹೋರಾಟವನ್ನು ಅಂಬೇಡ್ಕರ್ ಜೀವನಪರ್ಯಂತ ನಡೆಸಿದರು.
-ಹೋರಾಟದ ಮೊದಲ ಮೈಲುಗಲ್ಲು-
ಅಂಬೇಡ್ಕರ್ ಹೋರಾಟದ ಮೊದಲ ಮೈಲುಗಲ್ಲು ಮಹಾಡ್ ಸತ್ಯಾಗ್ರಹ. ಈ ಸತ್ಯಾಗ್ರಹದ ಕುರಿತು ಡಿಸೆಂಬರ್ 25, 1927ರಲ್ಲಿ ಸಭೆ ನಡೆಯಿತು. ಫ್ರಾನ್ಸ್‌ನಲ್ಲಿ 1789ರಲ್ಲಿ ನಡೆದ ಕ್ರಾಂತಿಯೇ ಅವರ ಭಾಷಣದ ಕೇಂದ್ರ ಬಿಂದುವಾಗಿತ್ತುಘಿ. ಫ್ರಾನ್ಸಿನ ಕ್ರಾಂತಿ ಕೇವಲ ಆರ್ಥಿಕ ಅಸಮಾನತೆ ವಿರುದ್ಧವಾಗಿತ್ತು. ಅದನ್ನು ವರ್ಷಾಲಿಸ್(Versailles) ಕಾನ್ಫರೆನ್ಸ್ ಎಂದು ಕರೆಯುತ್ತಾರೆ. ಮಹಾಡ್ ಸತ್ಯಾಗ್ರಹವು ಫ್ರಾನ್ಸಿನ ವರ್ಷಾಲಿಸ್ ಕಾನ್ಫರೆನ್ಸ್‌ಗೆ ಹೋಲುತ್ತದೆ ಎಂದಿದ್ದರು. ಇದೇ ಸಂದರ್ಭದಲ್ಲಿ ಅವರು ರೋಮ್ ಸಾಮ್ರಾಜ್ಯದ ಪ್ರಾಚೀನ ಪದ್ಧತಿಯ ಆಡಳಿತದ ಬಗ್ಗೆ ಚರ್ಚಿಸುತ್ತಾರೆ. ರೋಮ್ ಸಾಮ್ರಾಜ್ಯದಲ್ಲಿದ್ದ ಎರಡು ವರ್ಗಗಳಿದ್ದವು. ಅವುಗಳನ್ನು ಆಳುವ ವರ್ಗ (Patricians) ಮತ್ತು ಆಳಿಸಿಕೊಳ್ಳುವ ಸಾಮಾನ್ಯ ಜನರಾದ ಪ್ಲೆಬಿಯನ್ನರು(Plebiens) ಎಂದು ಕರೆಯುತ್ತಿದ್ದರು. ಪ್ಲೆಬಿಯನ್ನರನ್ನು ಕೀಳು ಜನರು ಎಂದು ಕಿರುಕುಳಕ್ಕೆ ಒಳಗಾಗಿಸಿದ್ದರು. ತುಳಿತಕ್ಕೆ ಒಳಗಾಗಿ ಬೇಸತ್ತ ಪ್ಲೆಬಿಯನ್ನರು ಒಂದು ಹಂತದಲ್ಲಿ ಸಂಘಟಿತರಾಗಿ ಬದಲಾವಣೆ ಬಯಸಿ ಹಲವಾರು ಹಕ್ಕೊತ್ತಾಯ ಮಂಡಿಸುತ್ತಾರೆ. ಸಂಪ್ರದಾಯ ಪದ್ಧತಿಯ ಬದಲಾಗಿ ಕಾನೂನುಗಳನ್ನು ರಚಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ವಾದಿಸುತ್ತಾರೆ. ಇದಕ್ಕೆ ಒಪ್ಪಿದ ಪೆಟ್ರೀಶಿಯನ್ನರು ನೀತಿ ನಿರೂಪಿಸಿ ಕಾನೂನುಗಳಲ್ಲಿ 12 ಆರ್ಟಿಕಲ್ಸ್ ಗಳನ್ನು ಜಾರಿ ಮಾಡುತ್ತಾರೆ. ಆದರೆ, ಪ್ಲೆಬಿಯನ್ನರಿಗೆ ಪ್ರಯೋಜನವಾಗುವುದಿಲ್ಲ. ಏಕೆಂದರೆ ಕಾನೂನುಗಳನ್ನು ಜಾರಿ ಮಾಡುವ ಅಧಿಕಾರ ಪೆಟ್ರೀಶಿಯನ್ನರ ಕೈಯಲ್ಲಿ ಕೇಂದ್ರೀಕೃತವಾಗಿರುತ್ತದೆ. ಈ ಬಾರಿ ಪ್ಲೆಬಿಯನ್ನರು ಕಾನೂನು ಜಾರಿ ಮಾಡುವ ಸಮಿತಿಯಲ್ಲಿ (Tribunal) ತಮಗೂ ಇಬ್ಬರು ಸದಸ್ಯರ ಪೈಕಿ ಒಬ್ಬರು ಪ್ಲೆಬಿಯನ್ನರು ನೇಮಿಸಬೇಕೆಂದು ಒತ್ತಾಯಿಸಿ ಸಮಾನ ಪ್ರಾತಿನಿಧ್ಯ ಬೇಕೆಂದು ಒತ್ತಾಯಿಸುತ್ತಾರೆ. ಪೆಟ್ರೀಶಿಯನ್ನರು ಇದಕ್ಕೆ ಒಪ್ಪುತ್ತಾರೆ. ಆದರೂ ಪ್ಲೆಬಿಯನ್ನರ ಸಮಸ್ಯೆ ಬಗೆಹರಿಯಲಿಲ್ಲ. ಏಕೆಂದರೆ ರೋಮಿನಲ್ಲಿ ಒಂದು ಸಂಪ್ರದಾಯವಿರುತ್ತದೆ; ಅದರ ಪ್ರಕಾರ ಪ್ರಮುಖ ನೀತಿ, ಕಾನೂನು ಕಾರ್ಯಕ್ರಮ ನೇಮಕ ಮುಂತಾದವುಗಳನ್ನು ಅವರ ದೇವತೆ ಡೆಲ್ಫಿ(Godes Delphi) ಒಪ್ಪಿಕೊಳ್ಳಬೇಕು. ದೇವತೆ ತಿರಸ್ಕರಿಸಿದರೆ ಆ ಕಾರ್ಯವನ್ನು ಯಾರೂ ಮಾಡುವಂತಿಲ್ಲಘಿ. ಪ್ಲೆಬಿಯನ್ನರು ಸಮಿತಿ(Tribunal)ಗೆ ಸೂಚಿಸಿದ ಯಾವ ಹೆಸರನ್ನು ಡೆಲ್‌ಫಿ ದೇವತೆ ಒಪ್ಪುತ್ತಿರಲಿಲ್ಲ. ಕಾರಣವೇನು ಗೊತ್ತೇ? ಡೆಲ್‌ಫಿ ದೇವತೆ ಹೆಸರಿನಲ್ಲಿ ತೀರ್ಪು ಕೊಡುತ್ತಿದ್ದವರು ಯಾರೂ ಅಲ್ಲ ಪೆಟ್ರಿಶಿಯನ್ ವರ್ಗಕ್ಕೆ ಸೇರಿದ ಪೂಜಾರಿ ಆಗಿದ್ದನು. ದೇವತೆ ಹೆಸರಿನಲ್ಲಿ ಪ್ಲೆಬಿಯನ್ನರ ಪ್ರತಿನಿಧಿ ಪೆಟ್ರಿಶಿಯನ್ನರಿಗೆ ಒಪ್ಪಿಗೆಯಾದವರು ಮಾತ್ರ (Pliable) ನೇಮಕವಾಗುತ್ತಿದ್ದರು. ಹಾಗಾಗಿ ಪ್ಲೆಬಿಯನ್ನರ ಹೋರಾಟ ಗಾಳಿಯೊಡನೆ ನಡೆಸಿದ ಕುಸ್ತಿಯಾಯಿತಷ್ಟೇ. ಏಕೆಂದರೆ ಸಮಿತಿಗೆ ಪ್ಲೆಬಿಯನ್ನರ ಸದಸ್ಯರನ್ನು ನೇಮಕ ಮಾಡಲು ಒತ್ತಾಯಿಸಿದಾಗಲೇ ಪ್ಲೆಬಿಯನ್ನರ ವರ್ಗಕ್ಕೆ ಸೇರಿದ ದೇವತೆಯ ಪೂಜಾರಿಯನ್ನು ನೇಮಕ ಮಾಡಲು ಒತ್ತಾಯಿಸಬೇಕಾಗಿತ್ತು. ಇದನ್ನು ವಿವರಿಸಿದ ಅಂಬೇಡ್ಕರ್ ಕಾನೂನುಗಳನ್ನು ರಚಿಸಿದರೆ ಸಾಲದು ಅವುಗಳನ್ನು ಜಾರಿಗೊಳಿಸುವುದು ಬಹು ಮುಖ್ಯ. ಕಾನೂನು ಜಾರಿಗೊಳಿಸುವ ಅಧಿಕಾರವನ್ನು ಗಳಿಸುವುದು ಹೋರಾಟದ ನಿಜವಾದ ಗುರಿಯಾಗಬೇಕೆಂದು ಕರೆ ಕೊಡುತ್ತಾರೆ.
– ದೊರೆಯದ ಫಲಿತಾಂಶ –
ಇದರಿಂದ ನಮಗೆ ಅರ್ಥವಾಗುವುದೇನೆಂದರೆ ಡಾ. ಅಂಬೇಡ್ಕರ್ ಹೋರಾಟ ಮಾಡಿ ಬ್ರಿಟಿಷರಿಂದ ಪ್ರತ್ಯೇಕ ಮತದಾನದ ಹಕ್ಕನ್ನು ಪಡೆದರು(Communal Award). ಆದರೆ, ಗಾಂಧೀಜಿಯಿಂದಾಗಿ ಪೂನಾ ಒಡಂಬಡಿಕೆಯ ಪ್ರಕಾರ ಜಂಟಿ ಮತದಾನ ವ್ಯವಸ್ಥೆ ಜಾರಿಯಾಯಿತು. ಇದರಿಂದ ಈಗಿರುವ ಮೀಸಲು ಕ್ಷೇತ್ರಗಳಲ್ಲಿ ಅಸ್ಪೃಶ್ಯರ ಆಯ್ಕೆ ಇನ್ನೂ ರೋಮ್‌ನ ಪೆಟ್ರೀಶಿಯನ್ನರ ರೀತಿ ಮೇಲ್ ವರ್ಗಗಳ ಕೈಯಲ್ಲೇ ಇದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿದ್ಯೆಯ ಬೆಟ್ಟ. ಜ್ಞಾನದ ಗಣಿ, ಅವರ ಜ್ಞಾನ ಜ್ಯೋತಿ ಸದಾ ಅವಿರತವಾಗಿ ಬೆಳಗುತ್ತಿರುತ್ತದೆ. ಅವರ ಜ್ಞಾನದ ಬೆಳಕಿನಲ್ಲಿ ನಾವು ಕಲಿತು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ತಪ್ಪುಗಳನ್ನು ತಿದ್ದಿಕೊಂಡು, ಸವಾಲುಗಳನ್ನು ಎದುರಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮೊದಲನೆಯದಾಗಿ, ರಾಜಕಾರಣಿಗಳು ಹಾಗೂ ದಲಿತರು ಸೇರಿದಂತೆ ಶೋಷಿತ ವರ್ಗದ ಪ್ರತಿನಿಧಿಗಳು ಹೊಂದಾಣಿಕೆ ರಾಜಕೀಯಕ್ಕೆ ಶರಣಾಗಬಾರದು. ಹಾಗೆ ಮಾಡಿದರೆ ಅವರು ಪ್ರತಿನಿಧಿಸುವ ವರ್ಗಗಳಿಗೆ ಅನ್ಯಾಯ ಮಾಡಿದ ಹಾಗೆ. ನನ್ನ ದೃಷ್ಟಿಯಲ್ಲಿ ಇದು ಅಂಬೇಡ್ಕರ್ ಅವರು ನೀಡಿರುವ ಮೊದಲ ಸಂದೇಶ.
– ಹೆಜ್ಜೆ ಹೆಜ್ಜೆಗೂ ಹೋರಾಟ –
ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರು, ಮೇಲ್ಜಾತಿಯ ನಾಯಕರು ಅಂಬೇಡ್ಕರ್ ಅವರಿಗೆ ಕೊಟ್ಟ ಕಿರುಕುಳ, ತೋರಿದ ವಿರೋಧ, ಒಡ್ಡಿದ ಅಡ್ಡಿ, ಆತಂಕಗಳು ಹೇರಳ. ಇದರಿಂದ ಅವರು ಹೆಜ್ಜೆ ಹೆಜ್ಜೆಗೂ ಹೋರಾಟ ಮಾಡಬೇಕಾಯಿತು. ಆದರೆ ಧೈರ್ಯ ಕಳೆದುಕೊಳ್ಳಲಿಲ್ಲ. ತಮ್ಮ ಗುರಿಯಿಂದ ವಿಚಲಿತರಾಗಲಿಲ್ಲ, ಹೊಂದಾಣಿಕೆ ರಾಜಕೀಯಕ್ಕೆ ಬಲಿಯಾಗಲಿಲ್ಲ. ಅವರು ಹೊಂದಾಣಿಕೆ ಮಾಡಿಕೊಂಡಿದ್ದರೆ ಅನೇಕಾನೇಕ ಉನ್ನತ ಹುದ್ದೆಗಳು, ಬಿರುದುಗಳು ದೊರೆಯುತ್ತಿದ್ದವು. ಜೀವನ ಸುಖಕರವಾಗಿರುತ್ತಿತ್ತು. ಆದರೆ, ದಲಿತರ ಅಭ್ಯುದಯ ನನಸಾಗುವ ಬದಲು ಹಗಲು ಕನಸಾಗಿ ಉಳಿದು ಬಿಡುತ್ತಿತ್ತು. ಆದರೆ, ಅಂಬೇಡ್ಕರ್ ಹಾಗೆ ಮಾಡದೇ
ದಲಿತರ ಅಭ್ಯುದಯಕ್ಕೆ ತಮ್ಮನ್ನು ಅರ್ಪಿಸಿಕೊಂಡರು.
– ಅಧಿಕಾರ ಬರದಿರುವುದಕ್ಕೆ ದಲಿತರೇ ಕಾರಣ-
ಅಧಿಕಾರ ಪಡೆಯಲು ಅವರಿಗೆ ಮತ ನೀಡುವ ಹಕ್ಕು ದೊರೆಯಬೇಕೆಂದು ತಿಳಿದಿದ್ದ ಅಂಬೇಡ್ಕರ್ ಅವರು ಹೋರಾಡಿ ಒಬ್ಬ ಮನುಷ್ಯ(ಪ್ರಜೆ) ಒಂದು ಮತ, ಒಂದು ಮತಕ್ಕೆ ಒಂದು ವೌಲ್ಯ ಎಂದು ಸಂವಿಧಾನಬದ್ಧ ಹಕ್ಕನ್ನು ಕಲ್ಪಿಸಿಕೊಟ್ಟರು. ಮತ ಅವರು ಜನರ ಕೈಯಲ್ಲಿ ಇಟ್ಟ ಅಸ. ಆದರೆ, ಇಂದು ಏನಾಗಿದೆ? ಸ್ವಾತಂತ್ರ್ಯ ಪಡೆದು 74 ವರ್ಷಗಳಾದರೂ ಅಧಿಕಾರ ಬಂದಿಲ್ಲ. ಇದಕ್ಕೆ ದಲಿತರೇ ಕಾರಣ. ಇದಕ್ಕೆ ಕಾರಣವೂ ಸ್ಪಷ್ಟ, ಅಂಬೇಡ್ಕರ್ ಅವರು ದಲಿತರ ಅಭ್ಯುದಯಕ್ಕೆ ಕೊಟ್ಟ ಸೂತ್ರ ‘‘ವಿದ್ಯಾವಂತರಾಗಿ (Educate), ಸಂಘಟಿತರಾಗಿ (Organize), ಹೋರಾಡಿ (Agitate). ಆದರೆ, ಈ ಸೂತ್ರವನ್ನು ಬದಲಾಯಿಸಿದ್ದೇವೆ. ‘‘ಅಕ್ಷರಸ್ಥರಾಗಿ (Literate), ಅಸಂಘಟಿತರಾಗಿ(Separate), ಹೊಂದಾಣಿಕೆ (Compromise) ಮಾಡಿಕೊಳ್ಳಿ,’’ ಎಂದಾಗಿದೆ. ದಲಿತ ಶೋಷಿತ ವರ್ಗಗದ ಜನರೆಲ್ಲರೂ ಐಕ್ಯತೆ ಸಾಧಿಸಿ, ಸಂಘಟಿತರಾಗಿ ಅಂಬೇಡ್ಕರ್ ನೀಡಿರುವ ಮತ ಅಸವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವವರೆಗೂ ಅಂಬೇಡ್ಕರ್ ಬಯಸಿದ ಸ್ವಾತಂತ್ರ್ಯ, ಸಮಾನತೆ ಸಿಗುವುದಿಲ್ಲ ಎಂದು ದಲಿತ ರಾಜಕಾರಣಿಗಳು ಮನಗಾಣಬೇಕು. ಸ್ವಾರ್ಥ, ತಮ್ಮೊಳಗಿರುವ ಸಣ್ಣತನ ಮತ್ತು ಅಸೂಯೆಗಳನ್ನು ತ್ಯಜಿಸದ ಹೊರತು ದಲಿತರ ಕಲ್ಯಾಣವಾಗದು ಎಂದು ಅರಿಯಬೇಕು. ‘‘ಸಂವಿಧಾನ ನಮ್ಮ ಕೈಯಲ್ಲಿದೆ. ಈ ಸಂವಿಧಾನ ಎಷ್ಟು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ಈ ಸಂವಿಧಾನವನ್ನು ಬಳಸಿ ಆಡಳಿತ ನಡೆಸುವವರು ಎಷ್ಟು ಉತ್ತಮರು, ಎಷ್ಟು ಅಧಮರು ಎಂಬುದರ ಮೇಲೆ ಅವಲಂಬಿಸಿರುತ್ತದೆ,’’ ಎಂಬ ಅವರ ಗಂಭೀರ ಎಚ್ಚರಿಕೆ ಸದಾ ಸ್ಮರಣೀಯ.
– ಸಂವಿಧಾನವು ನೈತಿಕತೆಯ ಮಾರ್ಗದರ್ಶಿ –
ಸಂವಿಧಾನ ಕಾನೂನು ಗ್ರಂಥ ಆಗಿರುವಂತೆ ನೀತಿ ಸಂಹಿತೆ ಮತ್ತು ವೌಲ್ಯದರ್ಶಗಳ ಗ್ರಂಥವೂ ಆಗಿದೆ. ಆಡಳಿತ ನಡೆಸುವ ಸರಕಾರಗಳಿಗೆ ಮತ್ತು ನಾಗರಿಕ ಪ್ರಜೆಗಳಿಗೆ ಸಂವಿಧಾನ ಒಂದು ಕಾನೂನಿನ ಮತ್ತು ನೈತಿಕತೆಯ ಮಾರ್ಗದರ್ಶಿ. ಸಂವಿಧಾನ ಸಾರುವ ನೈತಿಕತೆ, ನೈತಿಕತೆಯ ನಿಯಮಗಳನ್ನು ಸರಕಾರ ಮತ್ತು ನಾಗರಿಕ ಪ್ರಜೆಗಳು ಅರ್ಥ ಮಾಡಿಕೊಂಡು ಅದಕ್ಕೆ ಬದ್ಧರಾಗಿ ನಡೆದುಕೊಂಡರೆ ಎಲ್ಲರ ಜೀವನ ಸುಖಕರವಾಗಿರುತ್ತದೆ. ಭಾರತ ಮಹಾನ್ ಭಾರತವಾಗುತ್ತದೆ. ಹಾಗಾದರೆ ಸಂವಿಧಾನ ನೀಡುವ ನೈತಿಕತೆ ಏನು? ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವ. ಈ ತತ್ವಗಳನ್ನು ರಾಷ್ಟ್ರ ಜೀವನದ ಹಾಗೂ ವೈಯಕ್ತಿ ಜೀವನದ ಎಲ್ಲಾ ರಂಗಗಳಲ್ಲಿ ಅಳವಡಿಸಿಕೊಂಡು ಸಾರ್ಥಕತೆ ಪಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಅಂಬೇಡ್ಕರ್ ಬಯಸುತ್ತಾರೆ.
(ಲೇಖಕರು ರಾಜ್ಯ ಬಿಜೆಪಿಯ ಉಪಾಧ್ಯಕ್ಷರು ಮತ್ತು ಮಾಜಿ ಸಚಿವರು)