ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಹೇರಲಾಗಿರುವ ‘ಲಾಕ್ಡೌನ್’ ನಿಂದಾಗಿ ಆರ್ಥಿಕ ಚಟುವಟಿಕೆಗಳೆಲ್ಲವೂ ಸ್ಥಗಿತವಾಗಿವೆ. ಪರಿಣಾಮ ಸರಕಾರದ ಬೊಕ್ಕಸವೂ ಬರಿದಾಗುತ್ತಿದೆ. ಇದು ಅನಿರೀಕ್ಷಿತವೇನಲ್ಲ. ಆದರೆ, ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳು ಯಾವ ರೀತಿ ಪರಿಣಾಮ ಬೀರಲಿವೆ ಎಂಬುದರ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಖಜಾನೆ ಖಾಲಿಯಾಗುತ್ತಿದೆ ಎಂದು ಹೇಳುತ್ತ ಕೂರುವುದರಲ್ಲೂ ಯಾವುದೇ ಅರ್ಥವಿಲ್ಲ. ದೀರ್ಘಕಾಲೀನ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸಮಯೋಚಿತ ನಿರ್ಧಾರಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೈಗೊಳ್ಳಬೇಕು ಮತ್ತು ಅವುಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಜನರ ಮುಂದಿಡಬೇಕು.
ಸಂಕಟದ ಸಮಯದಲ್ಲಿ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ 2020ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಶೇ.4ರಷ್ಟು ಏರಿಕೆ ಮಾಡಲಾಗಿದ್ದ ತುಟ್ಟಿಭತ್ಯೆಯನ್ನು 2021ರ ಜುಲೈ 30ರವರೆಗೂ ನೀಡುವುದಿಲ್ಲ ಕೇಂದ್ರ ಸರಕಾರ ಹೇಳಿದೆ. ಕೇಂದ್ರದ ಈ ನಿರ್ಧಾರದ ಮಾದರಿಯಲ್ಲೇ ರಾಜ್ಯ ಸರಕಾರ ಕೂಡ ಹೆಜ್ಜೆ ಇಡಲು ಬಯಸಿದ್ದರಿಂದ ಮೂಲ ವೇತನದ ಕನಿಷ್ಠ ಶೇ.4 ಡಿಎ ಏರಿಕೆಯಂತೆ ಮುಂದಿನ 3 ಪರಿಷ್ಕರಣೆಯ ಶೇ. 12 ಡಿಎ ಉಳಿತಾಯದಿಂದ ಸರಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಉಳಿತಾಯ ಆಗಲಿದೆ. ಸಂಕಷ್ಟ ಕಾಲದಲ್ಲಿ ಸರಕಾರಗಳು ತೆಗೆದುಕೊಳ್ಳುವ ಈ ನಿರ್ಧಾರವನ್ನು ಸ್ವಾಗತಿಸೋಣ. ಆದರೆ, ಸಂಕಷ್ಟ ಪರಿಹಾರಕ್ಕೆ ಇದೊಂದೇ ಮಾರ್ಗವೇ? ಪರ್ಯಾಯ ಮಾರ್ಗೋಪಾಯಗಳಿವೆಯೇ? ಎಂಬುದರ ಬಗ್ಗೆ ಸರಕಾರ ಯೋಚಿಸಬೇಕಿದೆ. ನೌಕರರ ಸಂಬಳ ಅಥವಾ ತುಟ್ಟಿ ಭತ್ಯೆ ಕಡಿತದಿಂದ ಮಾತ್ರವೇ ಸರಕಾರದ ಬೊಕ್ಕಸ ಸಂಕಷ್ಟ ಪರಿಹಾರ ಕಾಣಲಿಕ್ಕಿಲ್ಲ. ಸರಕಾರದ ಮಟ್ಟದಲ್ಲಿಇನ್ನೂ ಅನೇಕ ವೆಚ್ಚ ಕಡಿತಗಳನ್ನು ಮಾಡಲು ಅವಕಾಶವಿದೆ. ಬಹಳಷ್ಟು ನಿಗಮ, ಮಂಡಳಿಗಳು ಸರಕಾರಕ್ಕೆ ಹೊರೆಯಾಗಿವೆ. ಅವುಗಳಿಗೆ ನೀಡುವ ಅನುದಾನವನ್ನು ಕಡಿತ ಮಾಡಬೇಕು. ಬಿಳಿಯಾನೆಗಳಾಗಿರುವ ಇವುಗಳನ್ನು ಒಂದಿಷ್ಟು ವರ್ಷಗಳ ಕಾಲ ಮುಚ್ಚಿದರೂ ಅಭಿವೃದ್ಧಿ ಕಾರ್ಯಗಳಿಗೇನೂ ತೊಂದರೆಯಾಗುವುದಿಲ್ಲ. ಇದರಿಂದ ಸರಕಾರಕ್ಕೆ ಹೆಚ್ಚಿನ ಪ್ರಮಾಣದ ಉಳಿತಾಯವಾಗಲಿದೆ. ಜೊತೆಗೆ, ದೀರ್ಘಾವಧಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಾದ ಹಣವನ್ನು ಆರೋಗ್ಯ, ಕೃಷಿ, ಸಮಾಜ ಕಲ್ಯಾಣ, ಶಿಕ್ಷಣ, ಕೈಗಾರಿಕೋದ್ಯಮ ಚೇತರಿಕೆಯತ್ತ ಹರಿಸಿದರೆ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ದೊರಕುವುದರಲ್ಲಿ ಅನುಮಾನ ಬೇಡ.
ನಮ್ಮ ಆರ್ಥಿಕತೆ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಈ ಬಾರಿ ಹದವಾದ ಮಳೆಗಾಲ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ, ಕೃಷಿ ಮೇಲೆ ಹೆಚ್ಚು ಗಮನಕೇಂದ್ರೀಕರಿಸಿ, ಹೆಚ್ಚಿನ ಹಣವನ್ನು ಒದಗಿಸಬೇಕು. ಮೇಲಿಂದ ಮೇಲೆ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿರುವ ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಗಮನ ನೀಡಬೇಕು. ಜೊತೆಗೆ ಕೊರೊನಾ ಕಲಿಸಿರುವ ಪಾಠದಿಂದ ಎಚ್ಚೆತ್ತುಕೊಂಡು, ಆರೋಗ್ಯ ಕ್ಷೇತ್ರದ ಮೇಲೂ ಹೆಚ್ಚಿನ ವೆಚ್ಚ ಮಾಡಬೇಕಿದೆ. ಇದೆಲ್ಲ ಆಗಬೇಕೆಂದರೆ, ಎಷ್ಟು ಸಾಧ್ಯವೋ ಅಷ್ಟು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಅತ್ಯಗತ್ಯ. ಪರ್ಯಾಯ ಮಾರ್ಗಗಳ ಮೂಲಕ ಹಣವನ್ನು ಹೊಂದಿಸುವ ಕೆಲಸವನ್ನು ಸರಕಾರ ಮಾಡಬೇಕಿದೆ. ಜೊತೆಗೆ, ಹೀಗೆ ಸಂಗ್ರಹಿಸಲಾದ ಹಣವನ್ನು ಯಾವ ರೀತಿಯಲ್ಲಿ ವೆಚ್ಚ ಮಾಡಲಾಗುತ್ತಿದೆ, ಕೈಗೊಂಡ ಕ್ರಮಗಳೇನು ಎಂಬುದನ್ನು ತಿಳಿಯುವ ಹಕ್ಕು ಜನರಿಗಿದೆ. ಹಾಗಾಗಿ, ಆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯುವ ಹಾಗೆ ಮಾಡಬೇಕು. ಸರಕಾರವು ದಕ್ಷತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತನ್ನ ನೀತಿಯನ್ನಾಗಿಸಿಕೊಳ್ಳಬೇಕು. ಆಗ ಸಂಕಟ ಮತ್ತು ಸಮೃದ್ಧಿಯ ಕಾಲದ ಅಗತ್ಯಗಳನ್ನು ಅರಿತಿರುವ ಜನರಿಂದಲೂ ಉತ್ತಮ ಸ್ಪಂದನೆ ದೊರೆಯುವುದು ಗ್ಯಾರಂಟಿ.