ಮತ್ತೆ ಕೊರೊನಾಘಾತದ ಆತಂಕ – ವಿದೇಶದಿಂದ ಕರೆ ತರುವ ಮುನ್ನ ಯೋಚಿಸಿ

ಕೊರೊನಾ ವೈರಸ್(ಕೋವಿಡ್ 19) ಹರಡುವುದನ್ನು ತಡೆಯಲು ಹೇರಲಾಗಿದ್ದ ಲಾಕ್‌ಡೌನ್‌ ಭಾಗಶಃ ತರೆವಿನೊಂದಿಗೆ ದೇಶ ಸಹಜ ಸ್ಥಿತಿಯತ್ತ ಮರಳುವ ಯತ್ನದಲ್ಲಿದೆ. ಇಷ್ಟೆಲ್ಲ ಬಿಗಿ ಕ್ರಮಗಳ ನಂತರವೂ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50 ಸಾವಿರದ ಗಡಿಯನ್ನು ತಲುಪುತ್ತಿದೆ. ಕೊರೊನಾದಿಂದ 1500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸೋಂಕಿತರ ಪ್ರಮಾಣ ಏರುಗತಿಯಲ್ಲಿರುವಾಗಲೇ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರುವ ಪ್ರಯತ್ನಕ್ಕೆ ಸರಕಾರ ಮುಂದಾಗಿರುವುದು ಎಲ್ಲೆಡೆ ಮತ್ತೊಂದು ಸುತ್ತಿನ ಆತಂಕ ಸೃಷ್ಟಿಸಿದೆ. ಸರಕಾರ ನೀಡಿರುವ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ 14,800 ಜನರನ್ನು ಭಾರತಕ್ಕೆ ಕರೆ ತರುವ ಯೋಜನೆ ಇದೆ. ಹಾಗೆ ನೋಡಿದರೆ, ಈ ಹಿಂದೆ ಭಾರತದಲ್ಲಿ ಕೊರೊನಾ ಸೋಂಕು ಪಸರಿಸಲು ವಿದೇಶದಿಂದ ಬಂದವರು ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ವಸ್ತು ಸ್ಥಿತಿ ಹೀಗಿರುವಾಗ ಮತ್ತೆ ವಿದೇಶಗಳಿಂದ ಜನರನ್ನು ವಾಪಸ್ ಕರೆತರಲು ಹೊರಟಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಚರ್ಚೆ ಶುರುವಾಗಿದೆ. ಒಂದು ವೇಳೆ ಹಾಗೆ ಕರೆತರುವುದು ಅನಿವಾರ್ಯವೇ ಆಗಿದ್ದರೆ ಸೋಂಕು ಹರಡದಂತೆ ತೆಗೆದುಕೊಳ್ಳಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂಬುದರ ಬಗ್ಗೆ ಸರಕಾರ ಸ್ಪಷ್ಟ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ, ಕೊರೊನಾ ನಮ್ಮ ಬದುಕಿನ ಮೇಲೆ ಯಾವೆಲ್ಲ ದುಷ್ಪರಿಣಾಮ ಬೀರಿದೆ, ಬೀರುತ್ತದೆ ಎಂಬುದನ್ನು ಹೊಸದಾಗೇನೂ ಹೇಳಬೇಕಿಲ್ಲ.
ವ್ಯಾಸಂಗ, ಉದ್ಯೋಗ ಹೀಗೆ ನಾನಾ ಕಾರಣಕ್ಕೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಬಗ್ಗೆ ಸರಕಾರ ತೋರುತ್ತಿರುವ ಕಾಳಜಿ ಸರಿಯೇ ಇರಬಹುದು. ಆದರೆ ಈ ಸಂದರ್ಭದಲ್ಲಿ ತರಾತುರಿಯಲ್ಲಿ ಅವರನ್ನೆಲ್ಲ ಕರೆತರಬೇಕೇ ಎಂಬುದು ಮೂಲಭೂತ ಪ್ರಶ್ನೆ. ಸಾಧ್ಯವಾದಷ್ಟೂ ಅಂತಹ ಭಾರತೀಯರನ್ನು ಮನವೊಲಿಸಿ, ಧೈರ್ಯ ತುಂಬಿ ಇನ್ನೂ ಕೆಲ ಒಂದೆರಡು ತಿಂಗಳು ಆಯಾ ದೇಶಗಳಲ್ಲೇ ಉಳಿಯುವಂತೆ ಮಾಡುವುದು ಅವರ ಮತ್ತು ಭಾರತದಲ್ಲಿರುವವರ ಸುರಕ್ಷತೆ ದೃಷ್ಟಿಯಿಂದ ಸರಿಯಾದ ಕ್ರಮವಾದೀತು.
ಒಂದು ವೇಳೆ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ಕರೆ ತರಲೇಬೇಕೆಂದಿದ್ದರೆ ಕೊರೊನಾ ಹರಡದಂತೆ ನೋಡಿಕೊಳ್ಳಲು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈಗ ಭಾರತದಲ್ಲಿ ಕೊರೊನಾ ಹರಡಲು ವಿದೇಶ ಪ್ರವಾಸದಿಂದ ಬಂದವರ ಕೊಡುಗೆ ಸಾಕಷ್ಟಿದೆ ಎಂಬುದನ್ನು ದಾಖಲೆಗಳು ಹೇಳುತ್ತವೆ. ಆ ವೇಳೆ ಸೂಕ್ತ ಮುನ್ನೆಚ್ಚರಿಕೆ, ಕಟ್ಟುನಿಟ್ಟಿನ ತಪಾಸಣೆ ಇಲ್ಲದಿರುವುದೇ ಕಾರಣ ಎಂಬ ಮಾತುಗಳೂ ಇವೆ. ಈ ಅನುಭವದ ಹಿನ್ನೆಲೆಯಲ್ಲಿ ಈಗ ಕರೆತರಲು ಹೊರಟಿರುವ ಪ್ರಜೆಗಳ ಸೂಕ್ಷ ವೈದ್ಯಕೀಯ ಪರೀಕ್ಷೆ, ಕಡ್ಡಾಯ ಕ್ವಾರಂಟೈನ್ ಮಾಡುವುದರಲ್ಲಿ ಒಂದಿಷ್ಟೂ ವಿನಾಯಿತಿ ನೀಡಬಾರದು, ಉದಾಸೀನ ತೋರಬಾರದು.
ಈ ಹಂತದಲ್ಲಿ ನಾವು ಮಾಡುವ ಒಂದು ಸಣ್ಣ ತಪ್ಪೂ ಬಹುದೊಡ್ಡ ಬೆಲೆ ತೆರಲು ಕಾರಣವಾಗಬಹುದು. ಈಗಾಗಲೇ ಮೂರು ತಿಂಗಳು ವಿಧಿಸಿದ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಜರ್ಜರಿತವಾಗಿದೆ. ಸಹಸ್ರಾರು ಜನರು ಕೊರೊನಾ ಪೀಡಿತರಾಗಿದ್ದಾರೆ. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮುಂದೆ ಒಂದೇ ಒಂದು ದಿನವೂ ಲಾಕ್‌ಡೌನ್‌ ಇತ್ಯಾದಿ ಕಠಿಣ ಕ್ರಮಗಳನ್ನು ಎದುರಿಸುವ ಸ್ಥಿತಿಯಲ್ಲಿಲ್ಲ. ಈಗಾಗಲೇ ವಿಧಿಸಿರುವ ಲಾಕ್‌ಡೌನ್‌ನ್ನು ಸಂಪೂರ್ಣ ತೆರವು ಮಾಡಲು ಇಡೀ ದೇಶ ತುದಿಗಾಲ ಮೇಲೆ ನಿಂತು ಕಾಯುತ್ತಿದೆ. ಈ ಸನ್ನಿವೇಶದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ವಿದೇಶಗಳಿಂದ ಕರೆತರಲು ಸಿದ್ಧತೆ ನಡೆದಿದೆ. ಈ ಬೆಳವಣಿಗೆ ಸಹಜವಾಗಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಸನ್ನಿವೇಶದಲ್ಲಿ ಸರಕಾರ ಎಚ್ಚರಿಕೆ ಹೆಜ್ಜೆ ಇಡುವುದೊಂದೇ ಉಳಿದಿರುವ ದಾರಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top