ದೇಶದ ಘನತೆ ಕಾಯದವರು ಆಳಲು ಅರ್ಹರೆ? (16 .09.2017)

ಕೆಲವು ಎನ್​ಜಿಒಗಳು ಭಾರತದ ಘನತೆ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲೆಂದೇ ಕಾರ್ಯನಿರ್ವಹಿಸುತ್ತಿವೆ. ಈ ಘನಂದಾರಿ ಕೆಲಸಕ್ಕಾಗಿ ಅವಕ್ಕೆ ಅಪಾರ ಪ್ರಮಾಣದ ಧನ ಸಹಾಯವೂ ಬರುತ್ತದೆ. ಈ ಹುನ್ನಾರವನ್ನು ಅರಿಯದೆ ವಿದೇಶಿ ನೆಲದಲ್ಲಿ ಭಾರತವನ್ನು ಬೈಯುವುದಕ್ಕೆ ಏನೆನ್ನಬೇಕೋ ತಿಳಿಯದು.

ರಾಹುಲ್ ಗಾಂಧಿ ಕೊನೆಗೂ ಕಾಂಗ್ರೆಸ್ ಗಾಡಿಯ ನೊಗಕ್ಕೆ ಹೆಗಲು ಕೊಡಲು ಮನಸ್ಸು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ದೇಶದ ಪ್ರಧಾನಮಂತ್ರಿಯೂ ಆಗುತ್ತೇನೆಂದು ಹೇಳುವ ಧೈರ್ಯ ತೋರಿದ್ದಾರೆ. ಅದು ಒಳ್ಳೆಯದೇ ಅಂತಿಟ್ಟುಕೊಳ್ಳೋಣ. ಈ ಘೊಷಣೆಯಿಂದ ಯಾರಿಗೆ ಎಷ್ಟು ಸಮಾಧಾನ, ಖುಷಿಯಾಗಿದೆಯೋ ಗೊತ್ತಿಲ್ಲ, ಸ್ವತಃ ಕಾಂಗ್ರೆಸ್ ನಾಯಕರಿಗಾದರೂ ಖುಷಿ ತಂದಿದ್ದರೆ ಪರವಾಗಿರಲಿಲ್ಲ. ರಾಹುಲ್ ಭಾಷಣ, ಅಮೆರಿಕ ನ್ಯೂ ಬರ್ಕ್​ಲೀ ವಿವಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ಆಯ್ದುಕೊಂಡ ವಿಷಯ, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಿಯನ್ನು ನೋಡಿದರೆ ಅಷ್ಟು ಹಳೇ ಪಕ್ಷದ ಹೊಣೆಗಾರಿಕೆ ಹೊರಲು ತಯಾರಾಗಿದ್ದೇನೆ ಎಂದು ಹೇಳುವ ನಾಯಕನ ಅಪ್ರಬುದ್ಧತೆ, ಅಪಕ್ವತೆ ಅನಾವರಣ ಆಯಿತು. ಕಾಂಗ್ರೆಸ್ಸಿಗರಲ್ಲಿ ಹುಮ್ಮಸ್ಸು ತುಂಬಲು ನಡೆಸಿದ ದುಬಾರಿ ಕಾರ್ಯಕ್ರಮದ ಪರಿಣಾಮ ಏನೆಂದರೆ ಅವರ ಮುಖವೇ ಪೆಚ್ಚಾಗುವಂತಾಯಿತು.

ಭಾರತದ ಹಿರಿಮೆಯನ್ನು ಸಾರಲು ಸಾಮಾಜಿಕ, ಧಾರ್ವಿುಕ, ರಾಜಕೀಯ ನಾಯಕರು, ವಿಜ್ಞಾನಿಗಳು, ಉದ್ಯಮಿಗಳು ದೇಶವಿದೇಶಗಳಲ್ಲಿ ಸಂಚಾರ, ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ ಪ್ರಪಂಚದ ದೇಶಗಳ ನಡುವೆ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶದ ಮಾನಮರ್ಯಾದೆಯನ್ನು ಹರಾಜು ಹಾಕಲು ಪ್ರವಾಸ ಕಾರ್ಯಕ್ರಮವನ್ನು ಯಾರಾದರೂ ಹಮ್ಮಿಕೊಂಡಿದ್ದನ್ನು ನೋಡಿದ್ದೀರಾ? ಕೇಳಿದ್ದೀರಾ? ಅದು ರಾಹುಲ್ ಗಾಂಧಿಯೇ ಮೊದಲು ಮತ್ತು ಇದೇ ಕೊನೆಯೂ ಆಗಲೆಂದು ಆಶಿಸುವ. ರಾಹುಲ್ ಭಾಷಣವೆಂಬ ಪ್ರಹಸನದ ಕುರಿತಾಗಿ ಎದ್ದಿರುವ ಹಲವು ಪ್ರಶ್ನೆಗಳ ಪೈಕಿ ಕೆಲವಕ್ಕಾದರೂ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ.

1-ರಾಹುಲ್ ಗಾಂಧಿಯವರನ್ನು ಬನ್ನಿ ಭಾಷಣ ಮಾಡಿ ಎಂದು ಕರೆದದ್ದು ಅಮೆರಿಕದ ಸರ್ಕಾರವೇ? ಅಲ್ಲ.
2-ಕ್ಯಾಲಿಫೋರ್ನಿಯಾ ರಾಜ್ಯದ ಸರ್ಕಾರವೇ? ಅದೂ ಅಲ್ಲ.
3-ಬರ್ಕ್​ಲಿ ವಿಶ್ವವಿದ್ಯಾಲಯದ ಆಡಳಿತ ಕರೆಯೋಲೆ ನೀಡಿತ್ತೇ? ಅದೂ ಇಲ್ಲ.

ಹಾಗಾದರೆ ನೂರಿಪ್ಪತೈದು ಕೋಟಿ ಭಾರತೀಯರನ್ನು ಅವಮಾನಿಸುವ ಅತ್ಯಂತ ಕಳಪೆ, ಮಾನಹಾನಿಕರ ಭಾಷಣ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಯಾರು?

ಬೇರೆ ಯಾರೂ ಅಲ್ಲ, ದಿವಂಗತ ರಾಜೀವ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಸಲಹೆಗಾರರಾಗಿದ್ದ ಸ್ಯಾಮ್ ಪಿತ್ರೋಡ ಎಂಬುದು ಈಗ ಬೆಳಕಿಗೆ ಬರುತ್ತಿದೆ. ಹೀಗಾಗಿ ರಾಹುಲ್ ಭಾಷಣ ಕಾರ್ಯಕ್ರಮದ ಬಗ್ಗೆ ರ್ಚಚಿಸುವುದಕ್ಕಿಂತ ಮೊದಲು ಸ್ಯಾಮ್ ಪಿತ್ರೋಡ ಕುರಿತೂ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳುವುದು ಒಳ್ಳೆಯದು. ಸ್ಯಾಮ್ ಪಿತ್ರೋಡ ರಾಜೀವ ಗಾಂಧಿಗೆ ಸಲಹೆಗಾರರಾಗಿದ್ದರು. ಈ ದೇಶದಲ್ಲಿ ದೂರಸಂಪರ್ಕ ಕ್ರಾಂತಿ ಆಗುವುದರಲ್ಲಿ ಅವರ ಪಾತ್ರ ದೊಡ್ಡದಿದೆ ಎಂಬ ಅಭಿಪ್ರಾಯವಿದೆ. ಅದು ಒಳ್ಳೆಯದು. ಅದರ ಜೊತೆಗೇ ಪಿತ್ರೋಡ ಈಗ ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ರಾಹುಲ್ ಗಾಂಧಿ ಮಾತ್ರವಲ್ಲ, ಬರ್ಖಾ ದತ್, ಜಾನ್ ದಯಾಳ್ ಮುಂತಾದ ಪತ್ರಕರ್ತರು, ಬರಹಗಾರರು ಮತ್ತು ಚಿಂತಕರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಬರ್ಖಾ ದತ್, ಜಾನ್ ದಯಾಳ್ ಅವರೆಲ್ಲ ಏನೇನು ಭಾಷಣ ಮಾಡುತ್ತಾರೆ, ಮಾಡಿದ್ದಾರೆ, ಬರೆದಿದ್ದಾರೆ, ಬರೆಯುತ್ತಾರೆ ಎಂಬುದು ಸಾಕಷ್ಟು ಜನರಿಗೆ ಈಗಾಗಲೇ ಗೊತ್ತಿದೆ. ಆ ವಿಷಯವನ್ನು ಇನ್ನೊಮ್ಮೆ ವಿವರವಾಗಿ ಚರ್ಚೆ ಮಾಡೋಣ. ಇಂಥ ಭಾಷಣ ಕಾರ್ಯಕ್ರಮವನ್ನು ಭಾರತ ವಿರೋಧಿ ಧೋರಣೆಯನ್ನು ಬೆಳೆಸುವ, ಭಾರತದ ಪ್ರತಿಷ್ಠೆಯನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಗ್ಗಿಸುವುದಕ್ಕಾಗಿಯೇ ಕೆಲಸ ಮಾಡುವ ಎನ್​ಜಿಒಗಳು ಆಯೋಜಿ(ಸ್ಪಾನ್ಸರ್)ಸುತ್ತವೆ. ಬರ್ಕ್​ಲಿ ವಿಶ್ವವಿದ್ಯಾಲಯದಲ್ಲಿ ರಾಹುಲ್ ಭಾಷಣ ಕಾರ್ಯಕ್ರಮವನ್ನು ಆಯೋಜಿಸಿದ್ದೂ ಇಂಥದ್ದೇ ಸರ್ಕಾರೇತರ ಸಂಸ್ಥೆ.

ಇಂತಹ ಭಾಷಣವನ್ನು ಆಯೋಜಿಸುವ ಎನ್​ಜಿಒಗಳ ಉದ್ದೇಶ ಭಾರತದ ಘನತೆ, ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವುದು, ಭಾರತದಲ್ಲಿ ನಾನಾ ತೆರನಾಗಿ ಮತಾಂತರವನ್ನು ಪ್ರೋತ್ಸಾಹಿಸುವುದು. ಈ ಕೆಲಸಕ್ಕಾಗಿ ಭಾರತ ಮತ್ತು ವಿದೇಶಗಳಲ್ಲಿ ಕೆಲಸ ಮಾಡುವ ಇಂತಹ ಎನ್​ಜಿಒಗಳಿಗೆ ವಿದೇಶಗಳಿಂದ ಧಾರಾಳವಾಗಿ ಹಣಕಾಸಿನ ನೆರವು ಹರಿದು ಬರುತ್ತದೆ. ಇದನ್ನು ಅರಿತಿರುವ ಭಾರತ ಸರ್ಕಾರ ಕಳೆದ ಒಂದು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಇಂತಹ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ ದೇಶವಿರೋಧಿ ಚಟುವಟಿಕೆಗೆ ಹಣಕಾಸಿನ ನೆರವು ಬರುವುದಕ್ಕೆ ತಡೆ ಹಾಕಿರುವುದನ್ನು ನೆನಪಿಸಿಕೊಳ್ಳಬಹುದು. ಈಗ ಇಲ್ಲಿ ಮಾಡಲಾಗದ ಕೆಲಸವನ್ನು ಅಲ್ಲಿ ಹೆಚ್ಚು ವೇಗದಿಂದ ಮಾಡಲಾಗುತ್ತಿದೆ. ಅದಕ್ಕೆ ಒಂದು ಪುರಾವೆ ಬರ್ಕ್​ಲಿ ವಿವಿ ಕಾರ್ಯಕ್ರಮ.

ಅದಕ್ಕಿಂತ ಮುಖ್ಯವಾದ ಇನ್ನೊಂದು ವಿಚಾರ ಇದೆ. ಅದನ್ನು ಹೇಳಿದರೆ ಈ ಎನ್​ಜಿಒಗಳ ಸಾಚಾತನ ಇನ್ನಷ್ಟು ಮನವರಿಕೆ ಆದೀತು. ನರೇಂದ್ರ ಮೋದಿ ಗುಜರಾತದ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಅಮೆರಿಕ ಸರ್ಕಾರ ವೀಸಾ ನಿರಾಕರಿಸಿದ್ದು ನಿಮಗೆ ನೆನಪಿರಬಹುದು. ಮೋದಿ ನರಹಂತಕ, ರಕ್ತಪಿಪಾಸು ಎಂದು ಈ ಸಂಘಟನೆಗಳು ಅಮೆರಿಕ ಸರ್ಕಾರದ ತಲೆತುಂಬಿದ್ದವು. ಅಂದರೆ ಈ ಸಂಘಟನೆಗಳು ಅಲ್ಲಿ ಎಷ್ಟು ಪ್ರಭಾವಿ, ಶಕ್ತಿಶಾಲಿ ಎಂಬುದನ್ನು ಊಹಿಸಿಕೊಳ್ಳಬಹುದು. ಅಪಪ್ರಚಾರದಿಂದ ಮುಖ್ಯಮಂತ್ರಿ ಮೋದಿ ಅಮೆರಿಕ ಪ್ರವಾಸ ತಡೆದವು ಸರಿ. ಆದರೆ ಅದೇ ಮೋದಿ ಭಾರತದ ಪ್ರಧಾನಿ ಆಗುವುದನ್ನು ತಡೆಯಲಾಗಲಿಲ್ಲ. ಪ್ರಧಾನಿ ಮೋದಿಗೆ ಅಮೆರಿಕ ಸರ್ಕಾರವೇ ಆಹ್ವಾನ ನೀಡಿತು. ಅದನ್ನು ತಡೆಯಲಾಗಲಿಲ್ಲ. ಆಗ ಈ ಸಂಘಟನೆಗಳು ಅಮೆರಿಕದಲ್ಲಿ ಬೀದಿ ಪ್ರತಿಭಟನೆ ಹಮ್ಮಿಕೊಂಡವು. ಇಂಥ ಸಂಘಟನೆಗಳ ಉದ್ದೇಶ, ಅಸಲಿತನ ತಿಳಿಯಲಿ ಎಂಬ ಕಾರಣಕ್ಕೆ ಹಿಂದಿನ ವಿದ್ಯಮಾನಗಳನ್ನು ಮೆಲುಕು ಹಾಕಿದೆ.

ಈಗಿನ ಸಂದರ್ಭಕ್ಕೆ ವಾಪಸ್ ಬರೋಣ. ರಾಹುಲ್ ಗಾಂಧಿ ಈ ದೇಶದ ಪ್ರಜೆ, ಕಾಂಗ್ರೆಸ್ ಉಪಾಧ್ಯಕ್ಷ. ಮುಂದೆ ಅಧ್ಯಕ್ಷ ಆಗುತ್ತೇನೆ ಎಂದಿದ್ದಾರೆ. ಭಾರತದ ಪ್ರಧಾನಿ ಆಗುವ ಕನಸನ್ನೂ ಹಂಚಿಕೊಂಡಿದ್ದಾರೆ, ತಪ್ಪಿಲ್ಲ. ತಕರಾರು ಇರುವುದು ಅವರು ಬರ್ಕ್​ಲಿ ವಿವಿಯಲ್ಲಿ ಮಾಡಿದ ಭಾಷಣದ ವಿಷಯವಸ್ತುವಿನ ಕುರಿತು. ರಾಹುಲ್ ಉಲ್ಲೇಖಿಸಿದ ಪ್ರಮುಖ ವಿಷಯಗಳು ಹೀಗಿವೆ:

ಭಾರತದಲ್ಲಿ ಅಸಹನೆ, ಹಿಂಸಾಚಾರ, ಜಾತೀಯತೆ ದಿನೇದಿನೇ ಹೆಚ್ಚುತ್ತಲೇ ಇದೆ. ಹಿಂದೂ ಭಯೋತ್ಪಾದನೆ ತಾಂಡವವಾಡುತ್ತಿದೆ. ಮುಸ್ಲಿಂ ಮತ್ತು ದಲಿತರ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಪ್ರಗತಿಪರ ಪತ್ರಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. (ಗೌರಿ ಹತ್ಯೆಗೆ ಭಾರತ ಸರ್ಕಾರ ಕಾರಣ ಎಂಬುದು ಈ ಮಾತಿನ ಅರ್ಥ) ಭಾರತದಲ್ಲಿ ಈಗಿನ ಸರ್ಕಾರ ಕೇವಲ ಟಾಪ್ 100 ಕಂಪನಿಗಳ ಹಿತವನ್ನು ಮಾತ್ರ ಕಾಪಾಡುತ್ತಿದೆ. ಬಾಕಿ ಸಣ್ಣಪುಟ್ಟ ಕಂಪನಿಗಳನ್ನು ಕೇಳುವವರೇ ಇಲ್ಲ. ಭಾರತದಲ್ಲಿ ಬ್ಯಾಂಕುಗಳು ದೊಡ್ಡ ಕಂಪನಿಗಳಿಗಷ್ಟೇ ಮಣೆ ಹಾಕುತ್ತಿವೆ.

ಸಣ್ಣ ಮತ್ತು ಮಧ್ಯಮ ಕಂಪನಿಗಳನ್ನು ಕೇಳುವವರೇ ಇಲ್ಲ. ಭಾರತ ದೇಶಕ್ಕೆ ಕಂಪ್ಯೂಟರನ್ನು ಪರಿಚಯಿಸಿದ ಸ್ಯಾಮ್ ಪಿತ್ರೋಡ ಇಲ್ಲೇ ಇದ್ದಾರೆ. ಅವರನ್ನೇ ಬೇಕಾದರೆ ಕೇಳಿನೋಡಿ, ‘ಈ ದೇಶಕ್ಕೆ ಐಐಟಿಗಳು, ಕಂಪ್ಯೂಟರುಗಳು ಯಾಕೆ ಬೇಕು‘ ಎಂದು ಹಿಂದೆ ಕೇಳಿದ್ದವರೇ ಈಗ ದೇಶದ ಪ್ರಧಾನಿ ಆಗಿದ್ದಾರೆ (ಈ ಮಾತಿನ ಅರ್ಥ ನರೇಂದ್ರ ಮೋದಿ ತಂತ್ರಜ್ಞಾನ, ಆಧುನಿಕತೆಯ ವಿರೋಧಿ ಎಂದು). ನೋಟು ರದ್ದತಿ ಮಾಡುವ ಮುನ್ನ ಮುಖ್ಯ ಹಣಕಾಸು ಸಲಹೆಗಾರರ ಮಾತನ್ನು ಕೇಳಲಿಲ್ಲ. ರಿಸರ್ವ್ ಬ್ಯಾಂಕ್ ಆಣತಿ ಕೇಳಿಲ್ಲ, ಕ್ಯಾಬಿನೆಟ್ಟಿಗೆ ತಿಳಿಸಲಿಲ್ಲ. ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.

ಇದರಿಂದಾಗಿ ಭಾರತದಲ್ಲಿ ಆರ್ಥಿಕತೆ ಕುಸಿದು ಹೋಗಿದೆ. ಬಡಬಗ್ಗರ ಬದುಕು ದುಸ್ತರವಾಗಿದೆ. ಜಿಎಸ್​ಟಿ ಜಾರಿಯಿಂದ ದೇಶದ ವ್ಯವಸ್ಥೆ ದಿಕ್ಕೆಟ್ಟುಹೋಗಿದೆ. ಭಾರತದಲ್ಲಿ ದಿನಕ್ಕೆ 33 ಸಾವಿರ ಉದ್ಯೋಗ ಸೃಷ್ಟಿ ಆಗಬೇಕು. ಈಗ ಆಗುತ್ತಿರುವುದು ಕೇವಲ 500 ಉದ್ಯೋಗ ಸೃಷ್ಟಿ. ಹೀಗೇ ಆದರೆ 2030ರ ಹೊತ್ತಿಗೆ ಭಾರತ ಬಡ ಭಿಕಾರಿ ದೇಶವಾಗುತ್ತದೆ. ಭಾರತದಲ್ಲಿ ಈಗ ಬಲಪಂಥೀಯ ಸುನಾಮಿ ಬಂದಿದೆ. ಈ ಪರಿಸ್ಥಿತಿ ಸಹಜತೆಗೆ ಮರಳುತ್ತದೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಾನು ಕಾಂಗ್ರೆಸ್ ಅಧ್ಯಕ್ಷನಾಗುತ್ತೇನೆ. ಭಾರತದ ಪ್ರಧಾನಿ ಆಗುತ್ತೇನೆ ಎಂಬುದು ರಾಹುಲ್ ಭಾಷಣದ ಒಟ್ಟು ಸಾರಾಂಶ. ಈ ಭಾಷಣ ಕೇಳಿದ ನಂತರ ಹಲವರಿಗೆ ಅನ್ನಿಸಿರಲು ಸಾಕು- ಇವರು ಪ್ರಧಾನಿ ಆಗುವುದು ಸಾಧ್ಯವಿಲ್ಲ, ಆಗುವುದೂ ಬೇಡ ಎಂದು. ಹಾಗಾದರೆ ತಪ್ಪು ಯಾರದ್ದು?

ರಾಹುಲ್ ಮಾತನ್ನು ಕೇಳಿದಾಗ ತಕ್ಷಣ ಅನ್ನಿಸಿದ್ದು ಅವರಿಗೆ ದೇಶದ ಒಳಗೆ ಏನು ಮಾತನಾಡಬೇಕು, ಹೊರಗೆ ಏನು ಮಾತನಾಡಬೇಕೆಂಬುದೇ ಗೊತ್ತಿಲ್ಲ ಎಂದು. ಇಲ್ಲಿ ಆಡಬೇಕಾದುದನ್ನು ಅಲ್ಲಿ ಆಡಿದ್ದಾರೆ. ಅಲ್ಲಿ ಮಾತನಾಡಬೇಕಿದ್ದನ್ನು ಎಲ್ಲೂ ಮಾತನಾಡುತ್ತಿಲ್ಲ ಎಂದು. ಇಷ್ಟೂ ಭಾಷಣವನ್ನು ರಾಹುಲ್ ದೇಶದ ಸಂಸತ್ತಿನಲ್ಲಿ ಮಾತನಾಡುವ ಧೈರ್ಯ, ಪರಾಕ್ರಮ ಮೆರೆದಿದ್ದರೆ ಕನಿಷ್ಠಪಕ್ಷ ಉತ್ತರವಾದರೂ ದೊರಕುತ್ತಿತ್ತು. ಅಲ್ಲಿ ಮಾತನಾಡಿದ್ದನ್ನು ನೋಡಿದರೆ ಉಳಿದಿರುವುದು ಅಯ್ಯೋಪಾಪ ಎಂಬ ಉದ್ಗಾರ ಮಾತ್ರ!

ಭವಿಷ್ಯದಲ್ಲಿ ಪ್ರಧಾನಿ ಆಗಬೇಕೆನ್ನುವ ವ್ಯಕ್ತಿಗೆ ಈ ದೇಶದ ಶಕ್ತಿ ಸಾಮರ್ಥ್ಯ ಏನೆಂಬುದು ಚೆನ್ನಾಗಿ ಗೊತ್ತಿರಬೇಕು. ಅದನ್ನು ವಿದೇಶಿ ನೆಲದಲ್ಲಿ ಸಮರ್ಥವಾಗಿ ನಿರೂಪಿಸಬೇಕು. ಅಲ್ಲಿ ಹೋಗಿ ಬಾಲಿಶವಾಗಿ ಮಾತನಾಡುವುದಲ್ಲ. ಅಮೆರಿಕದ ಬರ್ಕ್​ಲೀ ವಿವಿಯಲ್ಲಿ ಮಾಡಿದ ಭಾಷಣವನ್ನ್ನು ಇಲ್ಲಿ ಸಾವಿರ, ಲಕ್ಷ ಬಾರಿ ಮಾಡಿ ಆಗಿದೆ. ಒಬ್ಬನೇ ಒಬ್ಬ ಭಾರತೀಯ ಕಿವಿ ಮೇಲೆ ಹಾಕಿಕೊಂಡಿದ್ದಾನೆಯೇ ಎಂಬುದನ್ನು ರಾಹುಲ್ ಮೊದಲು ಆಲೋಚಿಸಬೇಕಿತ್ತು.

ಬರ್ಕ್​ಲೀ ವಿವಿಯ ಭಾಷಣದ ನಂತರ ಅಲ್ಲಿನ ವಿದ್ಯಾರ್ಥಿಗಳು ಎರಡು ಮುಖ್ಯವಾದ ಪ್ರಶ್ನೆಗಳನ್ನು ಎತ್ತಿದ್ದರು. ಆ ಪ್ರಶ್ನೆಗಳನ್ನು ನೋಡಿದರೆ ಗೊತ್ತಾಗುತ್ತದೆ, ಆ ವಿದ್ಯಾರ್ಥಿಗಳು ರಾಹುಲ್ ಅವರನ್ನು ಚೆನ್ನಾಗಿ ಅರಿತಿದ್ದಾರೆ ಎಂದು.

ಅವರು ಕೇಳಿದ ಮೊದಲ ಪ್ರಶ್ನೆ- ವಂಶಪಾರಂಪರ್ಯ ಆಡಳಿತ ವ್ಯವಸ್ಥೆ, ಕುಟುಂಬ ಕೇಂದ್ರಿತ ಅಧಿಕಾರ ವ್ಯವಸ್ಥೆ ಕುರಿತು ನಿಮ್ಮ ಅಭಿಪ್ರಾಯವೇನು ಎಂದು. ನಿಜಕ್ಕೂ ಧಾರ್ಷ್ಯrವಿದ್ದರೆ ‘ಹೌದು ನಾನದಕ್ಕೆ ಸೊಪ್ಪು ಹಾಕಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಇನ್ನು ಮುಂದೆ ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಪ್ರಧಾನಿ ಅಭ್ಯರ್ಥಿಯಾಗಿ ಬೇರೆಯವರ ಹೆಸರನ್ನು ಘೊಷಣೆ ಮಾಡುತ್ತೇವೆ‘ ಎನ್ನಬೇಕಿತ್ತು. ನಾನು ಹಿಂದೆ ನಿಂತು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತೇನೆ ಎಂದು ಹೇಳಬೇಕಿತ್ತು. ಆಗ ಅವರಲ್ಲಿ ಭವಿಷ್ಯದ ನೇತಾರನನ್ನು ಕಾಣಬಹುದಿತ್ತು.

ಆದರೆ ರಾಹುಲ್ ಭಾರತದಲ್ಲಿ ಅದೆಲ್ಲ ಸಹಜ ಎಂದು ಸಮರ್ಥಿಸಿಕೊಂಡು ಲಾಲು ಪ್ರಸಾದ್, ಮುಲಾಯಂ ಸಿಂಗ್ ಮುಂತಾದವರನ್ನು ಉದಾಹರಿಸಿದರು. ಈ ದೇಶದಲ್ಲಿ ನೆಹರೂ-ಗಾಂಧಿ ಕುಟುಂಬದ ವಂಶಾಡಳಿತದ ಮುಂದೆ ಬೇರೆ ಎಲ್ಲಾ ನಗಣ್ಯ, ಅವೆಲ್ಲ ಕಾಂಗ್ರೆಸ್ ಪಕ್ಷದ ಪಡಿಯಚ್ಚುಗಳೇ. ಅದಕ್ಕಿಂತ ಹೆಚ್ಚಾಗಿ ಲಾಲೂ, ಮುಲಾಯಂ ಅಂದರೆ ಬರ್ಕ್​ಲೀ ವಿವಿ ವಿದ್ಯಾರ್ಥಿಗಳಿಗೇನು ಗೊತ್ತಾಗಬೇಕು? ಅವರು ಕೇಳಿದ ಪ್ರಶ್ನೆ ನೇರವಾಗಿ ರಾಹುಲ್ ಕುರಿತಾದ್ದು, ಸೋನಿಯಾ, ಪ್ರಿಯಾಂಕ ಕುರಿತಾದ್ದು. ಅದನ್ನೂ ಅರ್ಥಮಾಡಿಕೊಳ್ಳದೇ ಹೋದರೆ…?!

ಎರಡನೇ ಪ್ರಶ್ನೆ; ಸಿಖ್ ಹತ್ಯಾಕಾಂಡದ ಕುರಿತು ಏನು ಹೇಳುತ್ತೀರಿ ಎಂಬುದು. ‘ಆ ದುರ್ಘಟನೆ, ನರಮೇಧಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ, ಇತಿಹಾಸದಲ್ಲಿ ಮಹಾಪ್ರಮಾದವೊಂದು ನಡೆದು ಹೋಗಿದೆ‘ ಎಂಬ ಒಂದು ಮಾತನ್ನು ಹೇಳಿದ್ದಿದ್ದರೆ ರಾಹುಲ್ ನಿಜಕ್ಕೂ ದೊಡ್ಡ ಮನುಷ್ಯರಾಗುತ್ತಿದ್ದರು. ಅವರು ಹಾಗೆ ಹೇಳಿದರೆ ತಪ್ಪೇನು ಇರುತ್ತಿರಲಿಲ್ಲ. ಸಣ್ಣತನದ ಪ್ರದರ್ಶನವೂ ಆಗುತ್ತಿರಲಿಲ್ಲ. ಏಕೆಂದರೆ ಆ ಘಟನೆಗೆ ರಾಹುಲ್ ಕಾರಣ ಆಗಿರಲೇ ಇಲ್ಲ.

ನಮಗೆ ಇಂದು ಬೇಕಿರುವುದು ತಪ್ಪು ತಪ್ಪೇ ಎಂದು ಒಪ್ಪಿಕೊಳ್ಳುವ ಪ್ರಾಮಾಣಿಕ, ದೇಶವನ್ನು ಸಮರ್ಥವಾಗಿ ಮುನ್ನಡೆಸುವ, ಯುವ ಮನಸ್ಸುಗಳಲ್ಲಿ ಹೊಸ ಹೊಸ ಕನಸನ್ನು ಬಿತ್ತುವ ನಾಯಕರೇ ಹೊರತು ಕಾಂಗ್ರೆಸ್, ಬಿಜೆಪಿ, ಮುಸ್ಲಿಂ, ದಲಿತ, ಬಲಿತ, ಬಡವ, ನಿರುದ್ಯೋಗ ಮತ್ತೊಂದು ಇನ್ನೊಂದು ಎಂದು ಕರುಬುವ, ಓಬೀರಾಯನ ಕಾಲದ ಸಿದ್ಧಾಂತಗಳಿಗೆ, ಗೊಡ್ಡುವಾದಗಳಿಗೆ ಗಂಟು ಬಿದ್ದಿರುವ, ಜಾತಿ, ವಿಚಾರ ಮತ್ತೊಂದರ ಹೆಸರಲ್ಲಿ ಮೊಸಳೆ ಕಣ್ಣೀರು ಸುರಿಸುವ, ಬರೆದುಕೊಟ್ಟಿದ್ದನ್ನು ಭಾವನಾಶೂನ್ಯರಾಗಿ ಓದಿ ಬರುವ ನಾಯಕರಲ್ಲ.

ಈಗಲೂ ಕಾಲ ಮಿಂಚಿಲ್ಲ. ಅಮೆರಿಕಕ್ಕೆ ಹೋಗಿ ಭಾರತ ಮತ್ತು ಭಾರತದ ವ್ಯವಸ್ಥೆಯನ್ನು ನಿರ್ಲಜ್ಜವಾಗಿ ಜರಿದು ಬಂದ ತಕ್ಷಣ ರಾಹುಲ್ ಅಂತಾರಾಷ್ಟ್ರೀಯ ನಾಯಕರಾಗುವುದಿಲ್ಲ. ಭಾರತೀಯರು ಅವರನ್ನು ಕಾಂಗ್ರೆಸ್ ಅಧ್ಯಕ್ಷರೆಂದು ಒಪ್ಪಿಕೊಳ್ಳುವುದಿಲ್ಲ. ಭಾರತದ ಪ್ರಧಾನಿ ಸ್ಥಾನದಲ್ಲಿ ಕರೆದು ಕುಳ್ಳಿರಿಸುವುದಿಲ್ಲ. ಅದಾಗಬೇಕೆಂದರೆ ರಾಹುಲ್ ಮೊದಲು ಇಲ್ಲಿನ ಗ್ರಾಮ ಪಂಚಾಯಿತಿ ವ್ಯವಸ್ಥೆ, ತಾಲೂಕು ಕಚೇರಿ, ಡಿಸಿ ಕಚೇರಿ, ಸಚಿವಾಲಯ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.

ಎಪ್ಪತ್ತು ವರ್ಷಗಳ ಪರ್ಯಂತ ಸತತವಾಗಿ ಬಡತನ ನಿಮೂಲನೆ ಘೊಷಣೆ ಮಾಡಿದ ನಂತರವೂ ಈ ದೇಶದಲ್ಲಿ ಸರ್ಕಾರಗಳು ಅನ್ನಭಾಗ್ಯವನ್ನು ಕರುಣಿಸುವ, ಇಂದಿರಾ ಕ್ಯಾಂಟೀನು ತೆರೆಯುವ ದೈನೇಸಿ ಸ್ಥಿತಿ ಏಕಿದೆ ಹೇಗಿದೆ ಎಂಬುದನ್ನು ಅರಿಯಬೇಕು. ಅಧ್ಯಯನ ಮಾಡಬೇಕು. ಕನಿಷ್ಠಪಕ್ಷ ಸಂಸತ್ತಿನ ಅಧಿವೇಶನದಲ್ಲಿ ಒಂದೊಂದು ನಿಮಿಷ ಸಮಯವನ್ನು ಕಲಿಯಲು, ಕೇಳಲು ವಿನಿಯೋಗಿಸಬೇಕು. ಅದಿಲ್ಲ ಅಂದರೆ ಇದೆಲ್ಲ ವ್ಯರ್ಥ ಕಸರತ್ತು ಆಗುತ್ತದೆಯೇ ಹೊರತು ಮತ್ತೇನೂ ಅಲ್ಲ.
(ಲೇಖಕರು ವಿಜಯವಾಣಿ – ದಿಗ್ವಿಜಯ ನ್ಯೂಸ್ ಪ್ರಧಾನ ಸಂಪಾದಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top