ಕೋವಿಡ್‌ ಕರಾಳತೆಯ ಬಳಿಕ…

ಭಾರತದಲ್ಲಿ ಕೊರೊನಾ ವೈರಸ್‌ ಮರಣ ಮೃದಂಗ ಬಾರಿಸಲು ಆರಂಭಿಸಿದೆ. ಲಾಕ್‌ಡೌನ್‌ನ ಸಂದರ್ಭದಲ್ಲಿ ಇದ್ದುದಕ್ಕೂ ಈಗಿನ ಸನ್ನಿವೇಶಕ್ಕೂ ವ್ಯತ್ಯಾಸ ಎದ್ದು ಕಾಣುತ್ತಿದೆ. ದಿಲ್ಲಿ ಹಾಗೂ ಮಹಾರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ನಿಭಾಯಿಸಲು ಸಾಧ್ಯವಾಗದೆ ಖಾಸಗಿ ವ್ಯವಸ್ಥೆಯ ಮೊರೆ ಹೋಗಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ತೀವ್ರ ಸೋಂಕಿತರಿಗೆ ಐಸಿಯುಗಳು ಸಿಗುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಇತರ ದೇಶಗಳಲ್ಲಿ ಪರಿಸ್ಥಿತಿ ಹೇಗಿದೆ? ಅಲ್ಲೂ ಕೊರೊನಾ ಕೇಸುಗಳಲ್ಲಿ ಏರುಮುಖವಿದೆಯೇ ಅಥವಾ ಇಳಿಮುಖವಾಗುತ್ತಿದೆಯೇ? ಅಲ್ಲಿನ ಲಾಕ್‌ಡೌನ್‌ ನಂತರದ ಸಾಮಾಜಿಕ- ಆರ್ಥಿಕ ಸನ್ನಿವೇಶಗಳು ಹೇಗಿವೆ? ಒಂದು ನೋಟ ಇಲ್ಲಿದೆ.

ಅಮೆರಿಕ
ಫೆಬ್ರವರಿ ಆರಂಭದಲ್ಲಿ ಇಲ್ಲಿ 15 ಪ್ರಕರಣ ಕಂಡುಬಂದವು. ಮಾರ್ಚ್‌ 20ರಂದು ಪ್ರಕರಣಗಳ ಸಂಖ್ಯೆ 20,000 ಮುಟ್ಟಿತು. ನಂತರ ಪ್ರತಿದಿನ ಸರಾಸರಿ 10,000 ಕೇಸುಗಳಂತೆ ಏರುತ್ತ ಹೋಗಿ, ಈಗ 23.3 ಲಕ್ಷ ತಲುಪಿದೆ. ಮೃತರ ಸಂಖ್ಯೆ ಸುಮಾರು 1.21 ಲಕ್ಷ. ಮರಣ ಪ್ರಮಾಣ ಸುಮಾರು 5.2% ಇದೆ. ಸದ್ಯಕ್ಕಂತೂ ಸೋಂಕು ಹಾಗೂ ಮರಣ ಪ್ರಮಾಣ ಇಳಿಯುವ ಲಕ್ಷಣ ತೋರುತ್ತಿಲ್ಲ.
ಅಮೆರಿಕದಲ್ಲಿ ಲಾಕ್‌ಡೌನ್‌ ವಿಧಿಸಲಾಗಿದ್ದರೂ ಅದು ಹೆಚ್ಚಿನ ಪರಿಣಾಮ ಬೀರಲೇ ಇಲ್ಲ. ಈಗಾಗಲೇ ಟ್ರಂಪ್‌ ಲಾಕ್‌ಡೌನ್‌ ತೆರವು ಮಾಡಿದ್ದಾರೆ. ಸುಮಾರು 4 ಕೋಟಿ ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಲ್ಲಿ 45% ಶಾಶ್ವತ ನಿರುದ್ಯೋಗ. ಅಮೆರಿಕಾ ಹಿಂದೆಂದೂ ಕಾಣದ ಆರ್ಥಿಕ, ವಾಣಿಜ್ಯ ಕುಸಿತವನ್ನು ಎದುರಿಸುತ್ತಿದೆ. ಸಾವಿರಾರು ಮಂದಿ ಇದೇ ಕಾರಣದಿಂದ ಖಿನ್ನತೆ, ಆತ್ಮಹತ್ಯೆಗಳಿಂದ ಸಾಯುತ್ತಿದ್ದಾರೆ.

ಬ್ರೆಜಿಲ್‌
ಮಾರ್ಚ್‌ ಕೊನೆಯ ವಾರ ಇಲ್ಲಿ 4000 ಪ್ರಕರಣಗಳು ಕಂಡುಬಂದವು. ಮೇ 15ರ ಬಳಿಕ ಇಲ್ಲಿ ಸೋಂಕಿತರ ಹಾಗೂ ಮರಣ ಹೊಂದುವವರ ಪ್ರಮಣ ಏಕಾಏಕಿ ಹೆಚ್ಚಿತು. ಈಗ ಇಲ್ಲಿ ಸೋಂಕಿತರ ಸಂಖ್ಯೆ 10.70 ಲಕ್ಷದಷ್ಟಿದ್ದರೆ, ಮರಣ ಹೊಂದಿದವರು 50,058. ಮರಣ ಪ್ರಮಾಣ 4.7%ದಷ್ಟಿದೆ. ಕಳೆದ ಒಂದು ವಾರದಿಂದ ಸೋಂಕು ಒಂದೇ ಪ್ರಮಾಣದಲ್ಲಿ ಏರುತ್ತಾ ಇದೆ. ಅಮೆರಿಕ ನಂತರ ಸಾವಿನಲ್ಲಿ ಎರಡನೇ ಸ್ಥಾನದಲ್ಲಿದ್ದು, ಅಮೆರಿಕಕ್ಕಿಂತಲೂ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕವಿದೆ.
ಬ್ರೆಜಿಲ್‌ ಎರಡು ತಿಂಗಳಿನಿಂದ ಲಾಕ್‌ಡೌನ್‌ನಲ್ಲಿದೆ. ಹೀಗಾಗಿ ಆರ್ಥಿಕ ಸ್ಥಿತಿಗತಿ ಪಾತಾಳ ಕಂಡಿದೆ. ಸೋಂಕು ಹಾಗೂ ಸಾವುಗಳು ಹೆಚ್ಚುತ್ತಿದ್ದರೂ ಹಲವಾರು ನಗರಗಳು ಲಾಕ್‌ಡೌನ್‌ನ್ನು ತೆರವು ಮಾಡುತ್ತಿವೆ. ನಿರುದ್ಯೋಗ ಹಾಗೂ ಹಸಿವಿನ ಬವಣೆಯನ್ನು ತಪ್ಪಿಸಲು ಅನಿವಾರ‍್ಯವಾಗಿ ಹೀಗೆ ಮಾಡುತ್ತಿರುವುದಾಗಿ ಅವು ಹೇಳಿಕೊಂಡಿವೆ. ಆರೋಗ್ಯ ಹಾಗೂ ವಿತ್ತ ಇಲಾಖೆ ಮೂಕಸಾಕ್ಷಿಗಳಾಗಿವೆ.

ರಷ್ಯಾ
ಫೆಬ್ರವರಿ 15ರಲ್ಲಿ ಎರಡೇ ಕೇಸುಗಳಿದ್ದದ್ದು, ಒಂದು ತಿಂಗಳಲ್ಲಿ 60 ಆಗಿ, ಮತ್ತೊಂದು ತಿಂಗಳಲ್ಲಿ 21,000 ಆಗಿ, ಮತ್ತೊಂದು ತಿಂಗಳಲ್ಲಿ 2.5 ಲಕ್ಷಕ್ಕೆ ಏರಿತ್ತು. ಪ್ರಸ್ತುತ ಅಲ್ಲಿ ಸೋಂಕಿನ ಸಂಖ್ಯೆ 5.84 ಲಕ್ಷ ಹಾಗೂ ಸಾವಿನ ಸಂಖ್ಯೆ 8,111 ಇದೆ. ಮರಣ ಪ್ರಮಾಣ 1.4%. ಮೇ 11ರಂದು ಅತ್ಯಂತ ಹೆಚ್ಚು ಸೋಂಕು ಕಂಡುಬಂದು, ನಂತರ ನಿಧಾನಗತಿಯಲ್ಲಿ ಇಳಿಯುತ್ತಾ ಬರುತ್ತಿದೆ.
ಸೋಂಕು ಮಾರ್ಚ್‌ನಲ್ಲೇ ಏರುತ್ತಿದ್ದರೂ ಏಪ್ರಿಲ್‌ ಮಧ್ಯದವರೆಗೂ ಸಂಪೂರ್ಣ ಲಾಕ್‌ಡೌನ್‌ ವಿಧಿಸಿರಲಿಲ್ಲ. ನಂತರ ವಿಧಿಸಿದ ಲಾಕ್‌ಡೌನ್‌ ಅನ್ನು ಈಗ ಸಂಪೂರ್ಣ ತೆರವು ಮಾಡಲಾಗುತ್ತಿದೆ. ಸೋಂಕು ಸಂಪೂರ್ಣ ಇಳಿಮುಖವಾಗಿಲ್ಲದಿರುವುದರಿಂದ ಲಾಕ್‌ಡೌನ್‌ ತೆಗೆಯಬಾರದು ಎಂದು ತಜ್ಞರು ಹೇಳುತ್ತಿದ್ದರೂ ಪುಟಿನ್‌ ಆಡಳಿತ ಅದನ್ನು ಪೂರ್ತಿ ತೆರವು ಮಾಡಿ, ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಅದ್ಧೂರಿ ಪರೇಡ್‌ಗೆ ಸಜ್ಜಾಗುತ್ತಿದೆ. ತಳಮಟ್ಟದಲ್ಲಿ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದ್ದು, ಸರಕಾರಿ ಖರ್ಚುವೆಚ್ಚಗಳಷ್ಟೇ ನಡೆಯುತ್ತಿವೆ.

ಬ್ರಿಟನ್‌
ಬ್ರಿಟನ್‌ನಲ್ಲಿ ಇದುವರೆಗೆ 3.03 ಲಕ್ಷ ಸೋಂಕಿತರು ಕಂಡುಬಂದಿದ್ದು, 42,589 ಮರಣವನ್ನಪ್ಪಿದ್ದಾರೆ. ಮಾರ್ಚ್‌ 3ನೇ ವಾರದ ನಂತರ ಇಲ್ಲಿ ಸೋಂಕು ಹಾಗೂ ಸಾವು ನಿರಂತರವಾಗಿ ಏರುತ್ತ ಹೋಗಿತ್ತು. ಇಲ್ಲಿನ ಮರಣ ಪ್ರಮಾಣ ಶೇ.14ರಷ್ಟಿತ್ತು. ಮೇ 5, 6, 7ರಂದು ಇಲ್ಲಿ ಹೆಚ್ಚಿನ ಸಾವು ಸಂಭವಿಸಿತ್ತು. ನಂತರ ಸಾವುಗಳು ಇಳಿಯುತ್ತ ಬಂದಿವೆ. ಜೂನ್‌ ಮೊದಲ ವಾರದಿಂದ ಸೋಂಕು ನಿಯಂತ್ರಣದಲ್ಲಿದೆ.
ಬ್ರಿಟನ್‌ನ ಆರ್ಥಿಕತೆ ಯಾವ ಮಟ್ಟಕ್ಕೆ ಕುಸಿದಿದೆ ಎಂದರೆ, ಕಳೆದ 57 ವರ್ಷಗಳಲ್ಲೇ ಕಾಣದಷ್ಟು ಸಾಲ ಮಾಡಿಕೊಂಡು ಕೂತಿದೆ. 1963ರಿಂದ ಈಚೆಗೆ, ಬ್ರಿಟನ್‌ನ ಸಾಲ ಅದರ ವಾರ್ಷಿಕ ಆ ಬಜೆಟ್‌ನ ಮೊತ್ತವನ್ನೂ ಮೀರಿಸಿದೆ. ಈ ವಾರ ಬ್ರಿಟನ್‌ ಲಾಕ್‌ಡೌನ್‌ನ ಎಲ್ಲ ಹಂತಗಳನ್ನೂ ಮುಗಿಸಿ ಮುಕ್ತವಾಗಲು ನಿರ್ಧರಿಸಿದೆ. ಆದರೆ 1980ರ ದಶಕದಲ್ಲಿ ಕಲ್ಲಿದ್ದಲು ಗಣಿಗಳ ಕೆಲಸ ನಿಲ್ಲಿಸಿದಾಗ ಉಂಟಾದ ಉದ್ಯೋಗನಾಶದ ಪ್ರಮಾಣವನ್ನೂ ಮೀರಿಸಿ ಈ ಬಾರಿ ನಿರುದ್ಯೋಗ ಸಮಸ್ಯೆ ಉಂಟಾಗಿದ್ದು ಪರಿಹಾರ ಕಾಣದೆ ಬ್ರಿಟನ್‌ ವಿಶ್ವಬ್ಯಾಂಕ್‌, ಹಣಕಾಸು ನಿಧಿ ಉತ್ಯಾದಿಗಳತ್ತ ಕೈಚಾಚಿದೆ.

ಸ್ಪೇನ್‌
ಸ್ಪೇನ್‌ ಕೊರೊನಾ ಎದುರಿಸಲು ಸಜ್ಜಾಗಿರಲಿಲ್ಲ. ಇಲ್ಲಿ ಸೋಂಕಿತರ ಸಂಖ್ಯೆ 2.93 ಲಕ್ಷ ಆಗಿದ್ದರೆ. ಸತ್ತವರ ಸಂಖ್ಯೆ 28,322. ಮರಣ ಪ್ರಮಾಣ 9.7%ದಷ್ಟಿತ್ತು. ಮಾರ್ಚ್‌ ತಿಂಗಳ ಅಂತ್ಯ ಹಾಗೂ ಏಪ್ರಿಲ್‌ ಮೊದಲ ವಾರದಲ್ಲಿ ಇಲ್ಲಿ ಸೋಂಕಿತರ ಹಾಗೂ ಸಾಯುವವರ ಸಂಖ್ಯೆ ದಿಡೀರನೆ ಏರಿದವು. ನಂತರ ಕೊರೊನಾ ಗ್ರಾಫ್‌ ಇಲ್ಲಿ ಇಳಿಯುತ್ತ ಬಂದಿದ್ದು, ಹೊಸದಾಗಿ ಸೋಂಕಿತರಾಗುತ್ತಿರುವವರ ಪ್ರಮಾಣ ಅತ್ಯಲ್ಪ.
ಸ್ಪೇನ್‌ನಲ್ಲಿ ಕಳೆದ 14 ವಾರಗಳಿಂದ ಇದ್ದ ಲಾಕ್‌ಡೌನ್‌ ಅನ್ನು ಕಳೆದ ವಾರ ಅಂತ್ಯಗೊಳಿಸಲಾಗಿದೆ. ಪ್ರಯಾಣಿಕರು ಮತ್ತೆ ಅತ್ತ ಮುಖ ಮಾಡಿದ್ದಾರೆ. ಸ್ಕೂಲುಗಳನ್ನು ತೆರೆದಿಲ್ಲ. ಮಾಸ್ಕ್‌ ಧರಿಸುವುದು ಕಡ್ಡಾಯ. ಸ್ಪೇನ್‌ನ ರಾಜಕಾರಣಿಗಳು ಕುಸಿದುಹೋದ ದೇಶದ ಆರ್ಥಿಕತೆಯನ್ನು ಮರಳಿ ಕಟ್ಟುವ ಮಾತುಗಳನ್ನು ಆಡುತ್ತಿದ್ದಾರೆ.

ಇಟಲಿ
ಇಟಲಿಯಲ್ಲಿ ಸೋಂಕಿತರ ಪ್ರಮಾಣ 2.4 ಲಕ್ಷದಷ್ಟಿದೆ ಹಾಗೂ ಮರಣ ಹೊಂದಿದವರ ಸಂಖ್ಯೆ 34,610. ಇಲ್ಲಿನ ಮರಣ ಪ್ರಮಾಣ ಶೇ.14.5ರಷ್ಟಿತ್ತು. ಮಾರ್ಚ್‌ ಮೂರನೇ ವಾರದಲ್ಲಿ ಜಗತ್ತನ್ನೇ ದಿಗಿಲು ಬೀಳಿಸುವಂತೆ ಇಲ್ಲಿ ಜನ ಸಾಯತೊಡಗಿದ್ದರು. ಹೆಚ್ಚಾಗಿ ವೃದ್ಧರು ಹಾಗೂ ಇತರ ಕಾಯಿಲೆಗಳಿಂದ ನರಳುತ್ತಿದ್ದವರೇ ಮೃತಪಟ್ಟಿದ್ದರು. ವೆಂಟಿಲೇಟರ್‌ಗಳ ಸಂಖ್ಯೆ ಸಾಕಾಗದೆ ಜನ ಬೀದಿಯಲ್ಲಿ ಸಾಯುವಂತಾಗಿತ್ತು. ಮೇ ಕೊನೆಯ ವಾರದಲ್ಲಿ ಸಾವುಗಳು ನಿಂತವು, ಜೂನ್‌ ಆರಂಭದಿಂದ ಸೋಂಕು ಪ್ರಮಾಣ ಇಳಿಮುಖವಾಗಿದೆ.
ಕೊರೊನಾ ಸಾವುಗಳ ಆಘಾತ ಹಾಗೂ ಲಾಕ್‌ಡೌನ್‌ಗಳ ಪರಿಣಾಮ ನೆಲಕಚ್ಚಿದ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ವಿಶ್ವದ ಬೃಹತ್‌ ಪ್ಯಾಕೇಜ್‌ಗಳಲ್ಲಿ ಒಂದನ್ನು (75 ಶತಕೋಟಿ ಯೂರೋ) ಇಟಲಿ ಘೋಷಿಸಿದೆ. ಇಲ್ಲಿ ಸುಮಾರು 10 ಲಕ್ಷ ಜನುದ್ಯೋಗ ಕಳೆದುಕೊಂಡು ನಿರಾಶ್ರಿತರಾಗಿದ್ದು, ಒಟ್ಟಾರೆ ವ್ಯವಸ್ಥೆಯನ್ನೇ ಸರಕಾರ ಮರಳಿ ಕಟ್ಟಬೇಕಿದೆ. ಇಟಲಿ ಲಾಕ್‌ಡೌನ್‌ ತೆರವು ಮಾಡಿದ್ದರೂ, ಇಲ್ಲಿನ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾದ ಪ್ರವಾಸೋದ್ಯಮ ಬಹಳ ದೊಡ್ಡ ಹೊಡೆತ ತಿಂದಿದ್ದು, ಪ್ರವಾಸಿಗರು ಮರಳಲು ಮೀನಮೇಷ ಎಣಿಸುತ್ತಿದ್ದಾರೆ.

ಫ್ರಾನ್ಸ್‌
ಇಟಲಿಯಂಥದೇ ಸನ್ನಿವೇಶ ಎದುರಿಸಿದ ಇನ್ನೊಂದು ದೇಶವೆಂದರೆ ಫ್ರಾನ್ಸ್‌. ಇಲ್ಲೂ ಸೋಂಕಿತರು 1.60 ಲಕ್ಷ ಹಾಗೂ ಮೃತಪಟ್ಟವರು 29,633. ಮಾರ್ಚ್‌ ಅಂತ್ಯದಲ್ಲಿ ಮರಣ ಪ್ರಮಾಣ ಶೇ.18ರವರೆಗೂ ಹೋಗಿ ಎಲ್ಲರನ್ನೂ ಬೆಚ್ಚಿ ಬೀಳಿಸಿತು. ನಂತರ ಏಪ್ರಿಲ್‌ ಮಧ್ಯದಲ್ಲೊಮ್ಮೆ, ಮೇ ಮಧ್ಯದಲ್ಲೊಮ್ಮೆ ಸೋಂಕಿತರ ಸಂಖ್ಯೆ ಹೆಚ್ಚಿತು. ಜೂನ್‌ನಲ್ಲಿ ಇದು ನಿಯಂತ್ರಣದಲ್ಲಿದೆ.
ಫ್ರಾನ್ಸ್‌ನಲ್ಲಿ ಬಹಳ ಬೇಗನೆ ಲಾಕ್‌ಡೌನ್‌ ತೆರವು ಮಾಡಲಾಗಿದೆ. ಮಾರ್ಚ್‌ 17ರಿಂದ ಮೇ 11ರವರೆಗೆ ಪೂರ್ಣವಾಗಿ ಜಾರಿಯಲ್ಲಿತ್ತು. ಇಲ್ಲಿ ಎಲ್ಲ ದೇಶಗಳಿಗಿಂತ ಮೊದಲು ರೆಸ್ಟೋರೆಂಟ್‌ಗಳನ್ನು ಓಪನ್‌ ಮಾಡಿದ್ದಲ್ಲದೆ, ಶಾಲೆಗಳನ್ನೂ ಪುನಾರಂಭ ಮಾಡಲು ಗ್ರೀನ್‌ ಸಿಗ್ನಲ್‌ ಕೊಡಲಾಗಿದೆ. ಪ್ಯಾರಿಸ್‌ ಮುಂತಾದ ಜಾಗತಿಕ ಪ್ರವಾಸೋದ್ಯಮ ಕೇಂದ್ರಗಳಿರುವ ಈ ದೇಶದಲ್ಲೂ ಪ್ರವಾಸೋದ್ಯಮ ನೆಲಕಚ್ಚಿದ್ದು, ಎಲ್ಲವನ್ನೂ ಆದಿಯಿಂದ ಆರಂಭಿಸಬೇಕಾಗಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top