ಹರಿಪ್ರಕಾಶ ಕೋಣೆಮನೆ
ಶಿಕ್ಷಣ ಮತ್ತು ಪತ್ರಿಕೋದ್ಯಮ
ಅನುಭವಿ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರದ್ದು ಗ್ರಾಮ್ಯ ಹಿನ್ನೆಲೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದ ಶ್ರೀ ವೆಂಕಟರಮಣ ಕೋಣೆಮನೆ ಮತ್ತು ಶ್ರೀಮತಿ ಪಾರ್ವತಿ ಅವರ ಮಗನಾಗಿ ಜನಿಸಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಂದೊಳ್ಳಿ ಹಾಗೂ ಯಲ್ಲಾಪುರದಲ್ಲಿ ಪೂರ್ಣಗೊಳಿಸಿದರು.
ಶಿರಸಿಯ ಎಂ ಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವಿ ಪೂರೈಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದರು.
ಬಾಲ್ಯದಿಂದಲೂ ಅವರಿಗೆ ನಾಗರಿಕ ಸೇವಾಕ್ಷೇತ್ರದಲ್ಲಿ ವಿಶೇಷ ಆಸಕ್ತಿಯಿತ್ತು. ಎರಡು ವರ್ಷಗಳ ಕಾಲ ಹೈದರಾಬಾದ್, ದೆಹಲಿ ಮತ್ತು ಬೆಂಗಳೂರಿನಲ್ಲಿದ್ದು, ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳಿಗೆ ತಯಾರಿ ನಡೆಸಿದರು. ಪತ್ರಿಕೋದ್ಯಮದ ಬಗ್ಗೆ ತಮಗೆ ಪ್ರಬಲವಾದ ಸೆಳೆತವಿರುವುದು ಈ ದಿನಗಳಲ್ಲಿ ಇವರ ಅರಿವಿಗೆ ಬಂತು. ದೇಶದ ಹಳೆಯ ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ಸಂಯುಕ್ತ ಕರ್ನಾಟಕ ದೈನಿಕದ ಮೂಲಕ ಅವರು ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಉಪ ಸಂಪಾದಕರಾಗಿ ಕೆಲಸ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ, ಈ ಪತ್ರಿಕೆಯ ಎಲ್ಲಾ ಆವೃತ್ತಿಗಳ ಸುದ್ದಿ ಸಮನ್ವಯಕಾರರ ಹುದ್ದೆಗೇರಿದರು.
ವಿಆರ್‌ಎಲ್ ಮಾಧ್ಯಮ ಸಮೂಹವು, 2005ರಲ್ಲಿ ಪ್ರತಿಷ್ಠಿತ ಉಷಾ ಕಿರಣ ದಿನಪತ್ರಿಕೆ ಆರಂಭಿಸಿದಾಗ, ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರಾಗಿ ಹರಿಪ್ರಕಾಶ್ ಕಾರ್ಯಭಾರ ವಹಿಸಿಕೊಂಡರು. ಈ ಹೊಸ ಪತ್ರಿಕೆಯ ಪ್ರಸರಣ ರಾಜ್ಯದೆಲ್ಲೆಡೆ ಪಸರಿಸುವಂತೆ ಮಾಡುವಲ್ಲಿ ಹರಿಪ್ರಕಾಶ್ ಇವರ ಪಾತ್ರ ಮಹತ್ವದ್ದಾಗಿತ್ತು. ಅಂದಿನ ಕನ್ನಡ ಪತ್ರಿಕೋದ್ಯಮಕ್ಕೆ ವಿನೂತನ ಎಂಬಂತೆ, ಇಡೀ ಉಷಾಕಿರಣ ಪತ್ರಿಕೆಯ ಆಡಳಿತ ವಿಭಾಗವನ್ನು ಕಾಗದ-ರಹಿತವಾಗಿ ಪರಿವರ್ತಿಸಿದ್ದು, ಅವರ ದೂರದರ್ಶಿತ್ವ ಮತ್ತು ಅನುಷ್ಠಾನ ಸಾಮರ್ಥ್ಯಕ್ಕೆ ಸಾಕ್ಷಿ. ನಂತರ, ಟೈಮ್ಸ್ ಆಫ್ ಇಂಡಿಯಾ ದೈನಿಕದ ಕನ್ನಡ ದಿನಪತ್ರಿಕೆ ಆರಂಭಗೊಂಡಾಗ, ಅದರ ಬೆಂಗಳೂರು ಆವೃತ್ತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
ಮುಂದಿನ ಹೆಜ್ಜೆ…
2008ರಲ್ಲಿ, ಮತ್ತೆ ಸಂಯುಕ್ತ ಕರ್ನಾಟಕದೊಂದಿಗೆ ನಂಟು ಬೆಸೆದ ಹರಿಪ್ರಕಾಶ್, ಆ ದಿನಪತ್ರಿಕೆಗೆ ಹೊಸತನ ತುಂಬುವ ಉದ್ದೇಶದಿಂದ ಇಡೀ ದೈನಿಕದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿದರು. ಪತ್ರಿಕೆಯ ಸಹಾಯಕ ಸಂಪಾದಕರ ಹೊಣೆಗೆ ಹೆಗಲು ಕೊಟ್ಟು, ಇಡೀ ಪತ್ರಿಕೆಯ ವಿನ್ಯಾಸಕ್ಕೆ ಹೊಸರೂಪ ಕೊಟ್ಟರು; ಸುದ್ದಿಯ ಆದ್ಯತೆ ಮತ್ತು ಸ್ವರೂಪಗಳಲ್ಲಿ ಹೊಸತನ ತಂದರು; ಹಲವಾರು ನವನವೀನ ಅಂಕಣಗಳು ಪತ್ರಿಕೆಯನ್ನು ತುಂಬಿದವು. 2008ರಿಂದ 2010ರ ನಡುವಿನ ಎರಡು ವರ್ಷಗಳಲ್ಲಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಹರಿಪ್ರಕಾಶ್ ಅವರ ಬರೆಯುತ್ತಿದ್ದ ʻದೇಶಕಾಲʼ ಅಂಕಣ ಅಪಾರ ಜನಮನ್ನಣೆ ಗಳಿಸಿತ್ತು. ಈ ಅಂಕಣದ ಬರಹಗಳು ಹೊತ್ತಗೆಯ ರೂಪದಲ್ಲಿ ಅಚ್ಚಾಗಿ, ಜನಮನಕ್ಕೆ ಮತ್ತಷ್ಟು ಹತ್ತಿರವಾದವು.
ವೃತ್ತಿ ಬದುಕಿನ ಮತ್ತೊಂದು ಪ್ರಮುಖ ಮಜಲಾಗಿ, ಕನ್ನಡದ ಜನಪ್ರಿಯ ದಿನಪತ್ರಿಕೆ ಉದಯವಾಣಿಯ ಸುದ್ದಿ ಸಂಪಾದಕರಾಗಿ 2010ರಲ್ಲಿ ನೇಮಕಗೊಂಡರು. ಈ ಪತ್ರಿಕೆಯ ಬೆಂಗಳೂರು ಆವೃತ್ತಿಗೆ ನೂತನ ಸ್ವರ್ಶ ನೀಡುವಲ್ಲಿ ಹರಿಪ್ರಕಾಶ್ ಅವರದ್ದು ಪ್ರಧಾನ ಭೂಮಿಕೆ. ʻಬಾಲ್ಕನಿʼ ಎಂಬ ವರ್ಣರಂಜಿತ ಹೊಸ ಪುಟವಂತೂ ಕನ್ನಡದ ಸಮಕಾಲೀನ ಪತ್ರಿಕೋದ್ಯಮದಲ್ಲಿ ಅಭಿನವ ಪ್ರಯತ್ನವೆಂದೇ ಶ್ಲಾಘಿಸಲ್ಪಟ್ಟಿತ್ತು.
ಹರಿತ ಮತ್ತು ನಿಖರ ಲೇಖನ
ಓದುಗರಿಂದ ವ್ಯಾಪಕ ಮೆಚ್ಚುಗೆ ಪಡೆದಿತ್ತು. ತೀಕ್ಷ್ಣ ಒಳನೋಟದಿಂದ ಕೂಡಿದ್ದ, ಜಾಗೃತಿ ಮೂಡಿಸುವಂಥ ಅವರ ಲೇಖನಗಳು ಹಲವು ಪ್ರಚಲಿತ ವಿಷಯಗಳ ಕುರಿತಾಗಿ ಓದುಗರ ಅರಿವು ವಿಸ್ತರಿಸಿದವು. ವಿವಾದಾಸ್ಪದವೇ ಇರಲಿ ಅಥವಾ ದೃಢ ನಿಲುವನ್ನು ತಳೆಯುವ ಅಗತ್ಯವಿರಲಿ- ಅಂಥ ವಿಷಯಗಳನ್ನು ಕೈಗೆತ್ತಿಕೊಳ್ಳಲು ಇವರು ಹಿಂಜರಿಯುತ್ತಿರಲಿಲ್ಲ.
ಸೂಕ್ಷ್ಮ ಗ್ರಹಿಕೆ ಮತ್ತು ಚಿಕಿತ್ಸಕ ನೋಟವನ್ನು ಹೊಂದಿರುವ ಹರಿಪ್ರಕಾಶ್, ಸುತ್ತಲಿನ ಜಗದ ಬಗೆಗಿನ ತಮ್ಮ ಅರಿವನ್ನು ದಿಟ್ಟ ಹಾಗೂ ಗಟ್ಟಿತನದಿಂದ ಕೃತಿಗಿಳಿಸಬಲ್ಲರು. ಇವರ ಹರಿತ ಮತ್ತು ವಿಸ್ತೃತ ರಾಜಕೀಯ ವಿಶ್ಲೇಷಣೆಗಳಂತೂ ಅತ್ಯದ್ಭುತ, ಸಮತೂಕದ ಒಳನೋಟಗಳನ್ನು ಓದುಗರಿಗೆ ಒದಗಿಸಬಲ್ಲವು. ನವ್ಯತೆಯನ್ನು ಕ್ಷಣಮಾತ್ರದಲ್ಲಿ ಗ್ರಹಿಸುವ, ತಮ್ಮ ಸಹೋದ್ಯೋಗಿಗಳ ಸಾಧ್ಯತೆ ಮತ್ತು ಸವಾಲುಗಳನ್ನು ವಿಸ್ತೃತವಾಗಿ ಗ್ರಹಿಸಿ, ಅವುಗಳನ್ನು ಪತ್ರಿಕೆಯ ಒಳಿತಿಗಾಗಿ ಬಳಸಿಕೊಳ್ಳುವ ಹರಿಪ್ರಕಾಶ್ ಸಾಮರ್ಥ್ಯವೇ ಅವರನ್ನು ಉತ್ತುಂಗಕ್ಕೇರಿಸಿದೆ. ತಮ್ಮ ತಂಡದ ಮುಂದಾಳುವಾಗಿ, ಒತ್ತಡದ ಸನ್ನಿವೇಶಗಳಲ್ಲೂ ಸ್ಪಷ್ಟ, ಸೂಕ್ತ ಮತ್ತು ಸಮಯೋಚಿತ ನಿರ್ಧಾರ ತೆಗೆದುಕೊಳ್ಳಬಲ್ಲ ಅಪರೂಪದ ಪತ್ರಕರ್ತ ಹರಿಪ್ರಕಾಶ್. ಅವರ ನಾಯಕತ್ವದ ಗುಣ, ಪತ್ರಿಕೋದ್ಯಮ ವೃತ್ತಿಯಲ್ಲಿ ಉನ್ನತ ಹೊಣೆಗಳನ್ನು ನಿಭಾಯಿಸುವಲ್ಲಿನ ಇವರ ಸೃಜನಶೀಲ ದೃಷ್ಟಿಕೋನಗಳು ಹಲವರ ಮೆಚ್ಚುಗೆಗೆ ಪಾತ್ರವಾಗಿವೆ.
ವೃತ್ತಿಜೀವನದ ಪ್ರಮುಖ ಹಂತ
2011ರಲ್ಲಿ, ವಿಆರ್‌ಎಲ್ ಮಾಧ್ಯಮ ಸಮೂಹಕ್ಕೆ ಹಿಂದಿರುಗಿದ ಹರಿಪ್ರಕಾಶ್, ವಿಜಯವಾಣಿ ಪತ್ರಿಕೆಯ ಸಹಾಯಕ ಸಂಪಾದಕರಾಗಿ ನಿಯುಕ್ತರಾದರು. ಸಂಸ್ಥಾಪನಾ ದಿನಗಳಿಂದಲೇ ಈ ದೈನಿಕದ ಒಡನಾಟ ಇದ್ದುದರಿಂದ, ಪತ್ರಿಕೆಯ ಹತ್ತೂ ಆವೃತ್ತಿಗಳಲ್ಲಿ ನುರಿತ ಪತ್ರಕರ್ತರ ತಂಡವನ್ನು ಕಟ್ಟಿದರು. ಹರಿಪ್ರಕಾಶ್ ಅವರ ಮುಂದಾಳತ್ವದಲ್ಲಿ 400 ಪತ್ರಕರ್ತರು ವಹಿಸಿದ ಶ್ರಮದಿಂದ, ಎರಡೇ ವರ್ಷಗಳಲ್ಲಿ ಈ ಪತ್ರಿಕೆ ರಾಜ್ಯದ ನಂಬರ್ 1 ದಿನಪತ್ರಿಕೆಯಾಯಿತು. ಇವರ ವೃತ್ತಿ ಜೀವನದ ಮಹತ್ವದ ಮೈಲುಗಲ್ಲುಗಳಲ್ಲಿ ಇದೂ ಒಂದು. 2014ರ ಫೆಬ್ರವರಿ 28ರಂದು, ವಿಜಯವಾಣಿಯ ಸ್ಥಾಪಕ ಸಂಪಾದಕ ತಿಪ್ಪಮ್ಮ ಭಟ್ ಅವರು ನಿವೃತ್ತರಾದ ನಂತರ, ಅವರ ಸ್ಥಾನಕ್ಕೆ ಹರಿಪ್ರಕಾಶ್ ಸಹಜ ಆಯ್ಕೆಯಾದರು. ರಾಜ್ಯವ್ಯಾಪಿ ಪ್ರಸಾರವಿರುವ ದಿನಪತ್ರಿಕೆಯೊಂದರ ಸಂಪಾದಕರಾಗಿ 39 ವರ್ಷದಷ್ಟು ಕಿರಿಯ ವಯಸ್ಸಿನಲ್ಲೇ ನಿಯುಕ್ತರಾದರು.
ಓದುಗರ ಮನ ಗೆದ್ದ ಬರಹ
ವಿಜಯವಾಣಿಯಲ್ಲಿನ ಇವರ ಬರಹಗಳು, ಅದರಲ್ಲೂ ʻಕಮೆಂಟರಿʼ ಎಂಬ ಇವರ ಅಂಕಣವು ಆಲೋಚನೆಗಳನ್ನು ಪ್ರಚೋದಿಸುವ ಮತ್ತು ಒಳನೋಟಗಳನ್ನು ತೆರೆದಿಡುವ ಸಾಧ್ಯತೆಯನ್ನು ವಿಸ್ತರಿಸಿತ್ತು. ವಿಷಯ ಅರ್ಥವಿಸಿಕೊಳ್ಳಲು ಸುಲಭಸಾಧ್ಯವಾದ ಅವರ ಬರಹ ಶೈಲಿಯನ್ನು ಓದುಗರು ಅಪಾರವಾಗಿ ಇಷ್ಟಪಟ್ಟಿದ್ದಾರೆ.
2014ರ ಮಲೇಷ್ಯಾ ಭೇಟಿಯ (Visit Malaysia 2014- Mega FAM event) ಬಗ್ಗೆ ವಿಜಯವಾಣಿಯ ಪ್ರತಿನಿಧಿಯಾಗಿ ಅವರು ಓದುಗರೊಂದಿಗೆ ಹಂಚಿಕೊಂಡ ವಿಷಯಗಳಿಗೆ ಉತ್ತಮ ಸ್ಪಂದನೆ ದೊರೆತಿದೆ.
ಟಿವಿ ವಾಹಿನಿಯ ಸಾರಥ್ಯ
ವಿಜಯವಾಣಿಯ ಸಂಪಾದಕರಾಗಿ ಇವರು ಸಾಧಿಸಿದ ಮುನ್ನಡೆಗಳನ್ನು ಪರಾಮರ್ಶಿಸಿದ ವಿಆರ್‌ಎಲ್ ನಿರ್ದೇಶಕ ಮಂಡಳಿಯು, ಇವರನ್ನು ಮಂಡಳಿಯ ನಿರ್ದೇಶಕರಾಗಿ ಆಹ್ವಾನಿಸಿತು. ಇದೇ ಮಂಡಳಿಯು ʻದಿಗ್ವಿಜಯʼ ಎಂಬ ಸುದ್ದಿವಾಹಿಯನ್ನು ಆರಂಭಿಸಲು ನಿರ್ಧರಿಸಿ ಅದಕ್ಕೆ ಹರಿಪ್ರಕಾಶ್ ಅವರನ್ನೇ ಪ್ರಧಾನ ಸಂಪಾದಕರನ್ನಾಗಿ ನೇಮಿಸಿತು.
ʻದಿಗ್ವಿಜಯ 24×7 ನ್ಯೂಸ್ʼಗಾಗಿ ವಾರದಲ್ಲಿ ಆರು ದಿನ, ರಾತ್ರಿ 9 ಗಂಟೆಗೆ ಅವರು ನಡೆಸಿಕೊಡುತ್ತಿದ್ದ ʻನ್ಯೂಸ್ ಔಟ್‌ಲುಕ್ʼ ಕಾರ್ಯಕ್ರಮ ಅಪಾರ ಜನಮನ್ನಣೆ ಗಳಿಸಿತ್ತು. 2007ರ ನವೆಂಬರ್ 15ರಂದು ಇವರು ವಿಜಯವಾಣಿ ಮತ್ತು ದಿಗ್ವಿಜಯ ತೊರೆದರು.
ಅಮೆರಿಕ ಭೇಟಿ
ಅಮೆರಿಕದ ರಾಯಭಾರ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದ ಅಂಗವಾಗಿ, ಮಾಧ್ಯಮ ನಿಯೋಗದೊಂದಿಗೆ ಆಯ್ಕೆಯಾದ ಇಬ್ಬರು ಪ್ರತಿನಿಧಿಗಳ ಪೈಕಿ ಒಬ್ಬರಾಗಿ ಅಮೆರಿಕಕ್ಕೆ ತೆರಳಿದ್ದರು. ಮಾಧ್ಯಮ, ರಾಜಕೀಯ, ಆರೋಗ್ಯ, ಪರಿಸರ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದವರಲ್ಲಿ, ಈ ಇಬ್ಬರನ್ನು ಆಯ್ಕೆ ಮಾಡಲಾಗಿತ್ತು. 2014ರ ಅಕ್ಟೋಬರ್ 27ರಿಂದ ನವೆಂಬರ್ 15ರವರೆಗೆ, ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗಾಗಿ ನಡೆದ ಎಡ್ವರ್ಡ್ ಆರ್ ಮರ್ರೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾರ್ಷಿಕವಾಗಿ ನಡೆಯುವ ಜಾಗತಿಕ ನಾಯಕತ್ವ ವಿನಿಮಯದಡಿ ಸಂಪನ್ನಗೊಂಡಿದ್ದ ಈ ಕಾರ್ಯಕ್ರಮದ ಪ್ರತಿನಿಧಿಗಳನ್ನು ಸಾಮಾಜಿಕ, ಆರ್ಥಿಕ, ರಾಜಕೀಯ ಚೌಕಟ್ಟಿನಡಿ ನಡೆದ ಮತ್ತಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಆಹ್ವಾನಿಸಿತ್ತು. ಈ ಕುರಿತು ವಿಶೇಷ ಮೆಚ್ಚುಗೆ ಪತ್ರವನ್ನೂ ಹರಿಪ್ರಕಾಶ್ ಅವರಿಗೆ ಅಮೆರಿಕ ಸರಕಾರ ನೀಡಿತ್ತು.
ಈ ಸಂದರ್ಭದಲ್ಲಿ ಅಮೆರಿಕದ ಉದ್ದಗಲಕ್ಕೆ ಇವರು ಸಂಚರಿಸಿದ್ದರು. ವಾಷಿಂಗ್ಟನ್‌ನಲ್ಲಿರುವ ಅಮೆರಿಕದ ಸಂಸತ್ತಿಗೆ ಭೇಟಿ ನೀಡಿ, ಸದನದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದರು. ಹಲವಾರು ಸಚಿವಾಲಯಗಳನ್ನು ಸಂದರ್ಶಿಸಿ, ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಸಿರಾಕ್ಯೂಸ್ ಮತ್ತು ಅರಿಜೋವಾನಾ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ, ಅಂತಾರಾಷ್ಟ್ರೀಯ ವಿಷಯಗಳ ಕುರಿತಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದಲ್ಲದೆ ದಿ ನ್ಯೂಯಾರ್ಕರ್, ಯುಎಸ್‌ಎ ಟುಡೇ ಪತ್ರಿಕೆಗಳು ಮತ್ತು ಎಂಎಸ್‌ಬಿಎನ್‌ಸಿ ಟಿವಿ ವಾಹಿನಿಗಳ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಸಂಪಾದಕೀಯ ಸಿಬ್ಬಂದಿ ಜೊತೆ ಮಾತಾಡಿದ್ದರು. ಅಮೆರಿಕದ ಮೆಕ್ಸಿಕೊ ಗಡಿಯಲ್ಲಿನ ಅಕ್ರಮ ವಲಸಿಗರು, ಮಾದಕ ವಸ್ತುಗಳ ಕಳ್ಳಸಾಗಣೆಯಂಥ ಹಲವು ಮಹತ್ವದ ವಿಷಯಗಳ ಬಗ್ಗೆ ಈ ಸಂರ್ಭದಲ್ಲಿ ಚರ್ಚಿಸಿದ್ದು ಇವರ ಪಾಲಿಗೆ ಅವಿಸ್ಮರಣೀಯ.
ವಿಜಯ ಕರ್ನಾಟಕ
ವಿಜಯ ಕರ್ನಾಟಕದ ಸಂಪಾದಕರಾಗಿದ್ದು ಇವರ ವೃತ್ತಿ ಜೀವನದ ಮತ್ತೊಂದು ಪ್ರಮುಖ ಹಂತ. ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರ ಹುದ್ದೆಯನ್ನು 2018ರಿಂದ 2022ರ ಮಾರ್ಚ್‌ವರೆಗಿನ ಅವರ ಸಂಪಾದಕತ್ವದ ಅವಧಿ ಬಹಳಷ್ಟು ಸವಾಲುಗಳಿಂದ ಕೂಡಿತ್ತು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪತ್ರಿಕೆಯ ಮುದ್ರಣವನ್ನು ನಿಲ್ಲಿಸಬೇಕೆಂಬ ಬಲವಾದ ಒತ್ತಡದ ನಡುವೆಯೂ, ಪತ್ರಕರ್ತರೂ ಕೋವಿಡ್ ಯೋಧರು ಎಂಬುದನ್ನು ಇವರು ಸಾಧಿಸಿ ತೋರಿಸಿದರು. ಇದೆಲ್ಲಾ ಒತ್ತಡಗಳನ್ನೂ ಮೀರಿ ನಿಂತ ಪತ್ರಿಕೆ, ಪ್ರಸರಣ ಮತ್ತು ಆದಾಯ ಗಳಿಕೆಯಲ್ಲಿ ದಾಖಲೆ ಬರೆದಿತ್ತು. ಎರಡನೇ ಸ್ಥಾನದಲ್ಲಿದ್ದ ಪತ್ರಿಕೆ ಮತ್ತೆ ರಾಜ್ಯದ ನಂಬರ್ 1 ಸ್ಥಾನಕ್ಕೆ ಏರಿತ್ತು. ಕೋವಿಡ್ ಸಂದರ್ಭದಲ್ಲಿ ನಡೆಸಲಾಗಿದ್ದ ʻರಿಬಿಲ್ಡ್ ಕರ್ನಾಟಕʼ ಎಂಬ ಕಾರ್ಯಕ್ರಮ, ಓದುಗರನ್ನು ವಿನೂತನ ರೀತಿಯಲ್ಲಿ ಸೆಳೆದಿತ್ತು.
ಸತತ ಎರಡು ವರ್ಷಗಳ ಕಾಲ ಪ್ರತಿಷ್ಠಿತ ʻಟೈಮ್ಸ್ ಆಫ್ ಇಂಡಿಯಾ ಚೇರ್‌ಮನ್ʼ ಪ್ರಶಸ್ತಿಗೆ ಪಾತ್ರರಾದರು. ಇದು ಇವರ ಅತ್ತ್ಯುತ್ತಮ ವೃತ್ತಿಕೌಶಲ ಮತ್ತು ಸವಾಲಿನ ಸಂದರ್ಭಗಳಲ್ಲೂ ತೋರಿದ ಸಾಧನೆಗೆ ಹಿಡಿದ ದೀವಿಗೆ. ಪ್ರಚಲಿತ ವಿಷಯಗಳ ಬಗ್ಗೆ ಇವರು ಮೂರು ವರ್ಷಗಳ ಕಾಲ ಬರೆದ ʻವಿಸ್ತಾರʼ ಅಂಕಣವು ಕನ್ನಡ ಪತ್ರಿಕೋದ್ಯಮದ ಮೈಲುಗಲ್ಲು ಎಂದೇ ಪರಿಗಣಿತವಾಗಿದೆ.
ವಿಸ್ತಾರದ ನೇತಾರರಾಗಿ…
ವಿಜಯ ಕರ್ನಾಟಕದ ಯಶಸ್ವಿ ಅವಧಿಯ ನಂತರ, ಸ್ವತಂತ್ರ ಮಾಧ್ಯಮ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸುವ ಹಂಬಲದಿಂದ ಟಿವಿ ವಾಹಿನಿ ಮತ್ತು ಡಿಜಿಟಲ್ ಮೀಡಿಯಾ ಒಳಗೊಂಡ ʼವಿಸ್ತಾರ ಮೀಡಿಯ ಪ್ರೈವೇಟ್ ಲಿಮಿಟೆಡ್ʼ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಸಿಇಒ ಮತ್ತು ಪ್ರಧಾನ ಸಂಪಾದಕರಾಗಿ ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ವಿಸ್ತಾರ ನ್ಯೂಸ್ ವೆಬ್ ಪೋರ್ಟಲ್ ಮತ್ತು ಸುದ್ದಿಯ ಆ್ಯಪ್‌ಗೆ 2022ರ ಜುಲೈ 23ರಂದು ಚಾಲನೆ ನೀಡಲಾಗಿತ್ತು. ಇದೀಗ ಅತಿ ಕಡಿಮೆ ಸಮಯದಲ್ಲಿ ಭಾರೀ ಜನಪ್ರಿಯತೆಯನ್ನು ಈ ವೆಬ್ ಪೋರ್ಟಲ್ ಗಳಿಸಿರುವುದು ಹರಿಪ್ರಕಾಶ್ ಅವರ ಸಹಜ ನಾಯಕತ್ವ ಮತ್ತು ಸೃಜನಶೀಲ ಯೋಜನೆಗಳಿಗೆ ಸಾಕ್ಷಿ. ಇದಾದ ಮೂರು ತಿಂಗಳ ನಂತರ, 2022ರ ನವೆಂಬರ್ 6ರಂದು ವಿಸಾರ ನ್ಯೂಸ್ ಸುದ್ದಿವಾಹಿನಿಗೆ ಚಾಲನೆ ನೀಡಲಾಗಿದ್ದು, ಈ ಸುದ್ದಿಸಂಸ್ಥೆ ಈಗ ಕರ್ನಾಟಕದಲ್ಲಿ ಮನೆಮಾತಾಗಿದೆ.
ವಿಸ್ತಾರ ಆರಂಭವಾದ ಮೂರೇ ತಿಂಗಳುಗಳಲ್ಲಿ, ʻನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼ ಎಂಬ ವಿನೂತನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಾಗಿದೆ. ಈ ಕಾರ್ಯಕ್ರಮದಡಿ, ಸಮಾಜದ ಮುಂಚೂಣಿಯಲ್ಲಿರುವ ಜನನಾಯಕರು, ಉದ್ಯಮಿಗಳು ಮತ್ತಿತರರು 75ಕ್ಕೂ ಹೆಚ್ಚಿನ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಈ ಮೂಲಕ ಸಮಾಜದಲ್ಲಿ ಸುಸ್ಥಿರ ಪರಿವರ್ತನೆಯೊಂದಕ್ಕೆ ಇವರು ನಾಂದಿ ಹಾಡಿದ್ದಾರೆ. ಸಾಮಾನ್ಯರನ್ನು ಓದು ಮತ್ತು ಬರವಣಿಗೆಯತ್ತ ಮತ್ತೆ ಸೆಳೆಯುವ ʻಬುಕ್ ಟಾಕ್ʼ ಸಹ ಅನನ್ಯ ಕಾರ್ಯಕ್ರಮ ಎನಿಸಿದ್ದು, ಓದುಗರು ಮತ್ತು ವೀಕ್ಷಕರಿಂದ ಅತ್ಯುತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ವಿಸ್ತಾರ ಎನ್ನುವುದು ಕೇವಲ ಸುದ್ದಿ ಸಂಸ್ಥೆಯಷ್ಟೇ ಆಗಿರದೆ, ಜನರ ಕುಂದು-ಕೊರತೆಗಳಿಗೂ ಸ್ಪಂದಿಸುತ್ತಿದೆ; ಬದುಕಿನ ಎಲ್ಲಾ ಮಗ್ಗುಲುಗಳಲ್ಲಿರುವ ಎಲೆಮರೆಯ ಕಾಯಿಯಂಥ ಸಾಧಕರನ್ನು ಜನತೆಗೆ ಪರಿಚಯಿಸುತ್ತಿದೆ. ಈ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿರುವ ಮತ್ತು ಮರೆಯಲ್ಲೇ ಉಳಿದಿರುವವರ ನಡುವಿನ ಕೊಂಡಿಯಾಗಿ ಸಮನ್ವಯ ಸಾಧಿಸುತ್ತಿದೆ. ವೀಕ್ಷಕರು ಇಂಥ ಕಾರ್ಯಕ್ರಮಗಳನ್ನು ಅಪಾರ ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ.
ಆಡಳಿತ ಮತ್ತು ಸಂಪಾದಕತ್ವದ ಹೊಣೆಗಾರಿಕೆ ನಡುವೆಯೂ, ವಿಸ್ತಾರ ಸುದ್ದಿ ವಾಹಿನಿಯಲ್ಲಿ ಹರಿಪ್ರಕಾಶ್ ಪ್ರತಿದಿನ ಎರಡು ಕಾರ್ಯಗಳನ್ನು ನಿಯಮಿತವಾಗಿ ನೀಡುತ್ತಿದ್ದಾರೆ- ಒಂದು, ಇಡೀ ದಿನವನ್ನು ಚಂದಗಾಣಿಸುವ ರೀತಿಯಲ್ಲಿ ಬೆಳಗಿನ 7.30ರ ಕಾರ್ಯಕ್ರಮ ಮತ್ತು ಇನ್ನೊಂದು, ಇಡೀ ದಿನದ ಸುದ್ದಿ ತಾತ್ಪರ್ಯವನ್ನು ಹೊತ್ತು ತರುವ ರಾತ್ರಿ 9ರ ಕಾರ್ಯಕ್ರಮ.
ಹರಿಪ್ರಕಾಶ್ ಅವರ ಅಂಕಣಗಳು
ದೇಶಕಾಲ: ಸಂಯುಕ್ತ ಕರ್ನಾಟಕ ದೈನಿಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಅಂಕಣ, ನಂತರ ಎರಡು ಭಾಗಗಳಲ್ಲಿ ಸಂಕಲಿತವಾಗಿದೆ.
ಕಮೆಂಟರಿ: ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ಈ ಜನಮೆಚ್ಚಿದ ಅಂಕಣ 300ಕ್ಕೂ ಹೆಚ್ಚು ಬರಹಗಳಲ್ಲಿ ಮೂಡಿಬಂದಿದೆ.
ವಿಸ್ತಾರ: ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಅತಿ ಜನಪ್ರಿಯ ಅಂಕಣ. ಇದರ 150 ಲೇಖನಗಳನ್ನು ಎರಡು ಭಾಗಗಳಲ್ಲಿ ಪ್ರಕಟಿಸಲಾಗಿದೆ.
ಪ್ರಶಸ್ತಿ ಮತ್ತು ಗೌರವಗಳು
2017ರಲ್ಲಿ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ
2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರ
2019 ಮತ್ತು 2020ರ ಸಾಲಿನಲ್ಲಿ ಟೈಮ್ಸ್ ಆಫ್ ಇಂಡಿಯಾ ಚೇರ್‌ಮನ್ ಪ್ರಶಸ್ತಿ
2023ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಸಾಧಕರಿಗೆ ನೈಜ ಪ್ರೇರಣೆ…
ಯಶಸ್ಸಿನತ್ತ ಹರಿಪ್ರಕಾಶ್ ಅವರ ಪಯಣ ಹಲವರಿಗೆ ಸ್ಫೂರ್ತಿ ನೀಡುವಂಥದ್ದು. ಗ್ರಾಮೀಣ ಹಿನ್ನೆಲೆಯಿಂದ ಬಂದು, ಹಲವು ರೀತಿಯ ಸವಾಲುಗಳನ್ನು ಎದುರಿಸಿದರೂ, ಪತ್ರಿಕೋದ್ಯಮದತ್ತ ಇವರು ಅದಮ್ಯ ಪ್ರೀತಿ ಮತ್ತು ಬದ್ಧತೆಯನ್ನು ಇರಿಸಿಕೊಂಡಿದ್ದಾರೆ. ಏನನ್ನೂ ಸಾಧಿಸಬಹುದು ಎಂಬ ನಿಟ್ಟಿನಲ್ಲಿ ಇವರು ತೋರುತ್ತಿರುವ ದೃಢತೆ ಮತ್ತು ಬದ್ಧತೆಗಳು ಎಲ್ಲರಿಗೂ ಅನುಸರಣೀಯ. ಮಾತ್ರವಲ್ಲ, ಇವರ ಶ್ರಮ, ಪ್ರತಿಭೆ ಮತ್ತು ಸಮರ್ಪಣಾ ಭಾವಗಳು ಅವರ ಯಶಸ್ಸಿನ ದ್ಯೋತಕವಾಗಿ ನಿಂತಿವೆ.
ಮಾಧ್ಯಮ ಮತ್ತು ಜನಸಾಮಾನ್ಯರ ನಡುವೆ ಕೊಂಡಿಯನ್ನು ಸೃಷ್ಟಿಸಿರುವುದು, ಜನತೆಯ ಸಮಸ್ಯೆ ಮತ್ತು ಸವಾಲುಗಳನ್ನು ಅಧಿಕಾರ ಕೇಂದ್ರವು ಆಲಿಸುವಂತೆ ಮಾಡುವುದರಲ್ಲಿಯೂ ಇವರ ಯಶಸ್ಸಿನ ಸೂತ್ರ ಅಡಗಿದೆ. ಜನತಾ ದರ್ಶನ, ರೀಡರ್ ರಿಪೋರ್ಟರ್, ಸೂಪರ್ ಸ್ಟಾರ್ ರೈತ ಮುಂತಾದ ಕಾರ್ಯಕ್ರಮಗಳು ಇದಕ್ಕೆ ದೃಷ್ಟಾಂತಗಳು.
ಹರಿಪ್ರಕಾಶ್ ಕೋಣೆಮನೆ ಪ್ರತಿಭಾನ್ವಿತ ಮತ್ತು ಸ್ಫೂರ್ತಿಯಾಗಬಲ್ಲ ಪತ್ರಕರ್ತ. ಅವರ ಕ್ರಿಯಾಶೀಲತೆಯು ಪತ್ರಿಕೋದ್ಯಮದ ಮೇಲೆ ಮಹತ್ವದ ಪರಿಣಾಮ ಬೀರಿದೆ. ಅವರ ಅನನ್ಯ ದೃಷ್ಟಿಕೋನ ಮತ್ತು ಪ್ರಬಲ ಸಂವಹನ ಸಾಧ್ಯತೆಗಳು ಪ್ರಮುಖ ವಿಷಯಗಳ ಮೇಲೆ ಕ್ಷಕಿರಣ ಬೀರಿವೆ; ಅವರ ಯಶೋಗಾಥೆಯು ಶ್ರಮ ಮತ್ತು ಬದ್ಧತೆಯ ಪ್ರತೀಕವಾಗಿದೆ. ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಲು ಉತ್ಸುಕರಾದ ಯಾರಿಗೇ ಆದರೂ ಹರಿಪ್ರಕಾಶ್ ಕೋಣೆಮನೆ ಅವರು ನೈಜ ಪ್ರೇರಣೆ.
……………