ಕಾಂಗ್ರೆಸ್ ಪಕ್ಷವನ್ನು ಮೇಲೆತ್ತುವ ದಾರಿ ಯಾವುದಯ್ಯ?

ಬಂಗಾಳದಲ್ಲಿ ನೂರಾರು ಕಾಂಗ್ರೆಸ್ಸಿಗರನ್ನು ಕೊಲೆ ಮಾಡಿದ ಕಮ್ಯುನಿಸ್ಟರು, ಮೇವು ಹಗರಣದ ಲಾಲೂ, 2-ಜಿ ಹಗರಣದ ಅಪಖ್ಯಾತಿಯ ಎ.ರಾಜಾ, ರಾಜೀವ್ ಹತ್ಯೆಯ ಕಳಂಕದ ಡಿಎಂಕೆ ಇಂಥವರ ಸಹವಾಸ, ಸ್ನೇಹಕ್ಕೆ ಕೈಚಾಚುವ ಕಾಂಗ್ರೆಸ್ಸನ್ನು ಆ ಭಗವಂತನೂ ಕಾಪಾಡಲಾರನೇನೋ!

S-Rಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಬಹಳ ಅರ್ಥಪೂರ್ಣ ಅನಿಸಿತು. ಮೊದಲನೆಯದು ‘ಈ ಫಲಿತಾಂಶ ನಿರೀಕ್ಷಿತ’. ಎರಡನೆಯದು ‘ಇದರಿಂದ ಕರ್ನಾಟಕದ ಸರ್ಕಾರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವಾಗುವುದಿಲ್ಲ’. ಅವರು ಯೋಚನೆ ಮಾಡಿ ಮಾತನಾಡಿದರೋ ಅಥವಾ ತಕ್ಷಣಕ್ಕೆ ತೋಚಿದ್ದನ್ನು ಹೇಳಿದರೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಎರಡೂ ಹೇಳಿಕೆಗಳು ವಾಸ್ತವ ಎಂಬುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಸೋಲು ಎಂಥವರೂ ಊಹಿಸುವಂಥದ್ದು ಮತ್ತು ಆ ಪಕ್ಷದ ಹೈಕಮಾಂಡ್ ದುರ್ಬಲವಾಗಿದ್ದರಿಂದಲೇ ಸಿದ್ದರಾಮಯ್ಯ ಮತ್ತಷ್ಟು ನಿರಾಳರಾಗುತ್ತಿದ್ದಾರೆಂಬುದು ಕೂಡ ಅಷ್ಟೇ ಸರಿಯಾದದ್ದು… ಅದೇ ಹತ್ತು ವರ್ಷಗಳ ಹಿಂದೆ ಇಂಥ ಹೇಳಿಕೆ ನೀಡಿದ್ದರೆ ಮರುಕ್ಷಣವೇ ಕ್ರಮವಾಗುತ್ತಿತ್ತೇನೋ? ಕಾಲ ಹೇಗೆ ಬದಲಾಗಿದೆ ನೋಡಿ.

ಉಳಿದ ಕೈ ನಾಯಕರ ಹೇಳಿಕೆ ಸಿದ್ದರಾಮಯ್ಯನವರಿಗಿಂತ ತುಸು ಭಿನ್ನವಾಗಿತ್ತು. ‘ಈ ಸೋಲಿಗೆ ರಾಹುಲ್ ಗಾಂಧಿ ಅವರೊಬ್ಬರನ್ನೇ ಹೊಣೆ ಮಾಡುವಂತಿಲ್ಲ’ ಎಂಬುದು ಬಹುತೇಕ ಎಲ್ಲರ ಅಂಬೋಣ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಂದ ಹಿಡಿದು ದಿಗ್ವಿಜಯ ಸಿಂಗ್, ಸೋನಿಯಾರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ವರೆಗೆ ಎಲ್ಲರೂ ಇದೇ ಡೈಲಾಗನ್ನು ಹೇಳಿದರು. ಈ ಮಾತಿನ ಅರ್ಥವೇನು? ಸೋಲಿಗೆ ಪಕ್ಷದ ಎಲ್ಲ ನಾಯಕರೂ ಹೊಣೆ ಅಂತಲೋ ಅಥವಾ ರಾಹುಲ್ರನ್ನು ಪಕ್ಷದ ಉತ್ತರಾಧಿಕಾರಿ ಮಾಡಲು ಹೆಣಗುತ್ತಿರುವ ಸೋನಿಯಾ ಅವರೂ ಕಾರಣ ಎಂತಲೋ?! ಎರಡೂ ನಿಜ. ಕಾಂಗ್ರೆಸ್ಸಿಗರನ್ನು ಹೊರತುಪಡಿಸಿ ಬಹುತೇಕ ಎಲ್ಲರೂ ಈ ಮಾತನ್ನು ಒಪ್ಪುತ್ತಾರೆ. ಏಕೆಂದರೆ ಕಳೆದ ಹತ್ತು ಹನ್ನೆರಡು ವರ್ಷಗಳಿಂದ ರಾಹುಲ್ ಗಾಂಧಿಯನ್ನು ಕಡೆದು ಕೆತ್ತಿ ನಾಯಕನನ್ನಾಗಿ ಮಾಡಲು ಸೋನಿಯಾ ಹೆಣಗುತ್ತಲೇ ಇದ್ದಾರೆ. ಅದನ್ನು ನೋಡಿಕೊಂಡು ದೆಹಲಿಯಿಂದ ಹಿಡಿದು ಗಲ್ಲಿಯವರೆಗೆ ಎಲ್ಲ ಕಾಂಗ್ರೆಸ್ ನಾಯಕರೂ ತೆಪ್ಪಗೆ ಹೌದಪ್ಪಗಳಾಗಿಯೇ ಉಳಿದಿದ್ದಾರೆ. ಹೀಗಿರುವಾಗ ನಿಜವಾಗಿ ತಪ್ಪು ಯಾರದ್ದು ಅಂತ ಹೇಳುವುದು?

ಕಾಂಗ್ರೆಸ್ಗೆ ಸೋಲು ಹೊಸದೇ?: ಇತ್ತ ಬಿಜೆಪಿಯಲ್ಲಿ ನರೇಂದ್ರ ಮೋದಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಅತ್ತ ಕಾಂಗ್ರೆಸ್ ದುರ್ಬಲವಾಗುತ್ತಲೇ ಹೋಗುತ್ತಿದೆ. ಮೋದಿ ಮೇನಿಯಾ ಕಡಿಮೆ ಆಗುತ್ತಿದ್ದಂತೆ ಕಾಂಗ್ರೆಸ್ ಮತ್ತೆ ಚಿಗಿತುಕೊಂಡು ನಳನಳಿಸುತ್ತದೆ ಎಂದು ಬಹಳಷ್ಟು ಮಂದಿ ಹಾಯಾದ ಕನಸನ್ನೂ ಕಾಣುತ್ತಿದ್ದಾರೆ. ಅದನ್ನು ಹಗಲುಗನಸು ಎನ್ನಲಡ್ಡಿಯಿಲ್ಲ. ಏಕೆಂದರೆ ಕಾಂಗ್ರೆಸ್ ಅವಸಾನ ಶುರುವಾದದ್ದು ಇಂದು ನಿನ್ನೆಯಿಂದೇನಲ್ಲ. ಗಾಂಧಿ, ನೆಹರು ಕಾಲದಿಂದಲೇ ಕಾಂಗ್ರೆಸ್ ಇಳಿಜಾರಿನಲ್ಲಿ ಹೆಜ್ಜೆ ಇಡತೊಡಗಿತ್ತ್ತು. ಆ ಕಾಲದಲ್ಲಿ ಆದದ್ದು ನೈತಿಕ ಮತ್ತು ವೈಚಾರಿಕ ಅವಸಾನ. ಈಗ ಕಾಣಿಸುತ್ತಿರುವುದು ಅದರ ದೀರ್ಘಕಾಲೀನ ಪರಿಣಾಮ. ಕಾಂಗ್ರೆಸ್ಸಿನ ಭೌತಿಕ ಅವಸಾನ ಎಂದೂ ಹೇಳಬಹುದು. ನೇತಾಜಿಯಿಂದ ಹಿಡಿದು ಅಂಬೇಡ್ಕರ್, ಸರ್ದಾರ್ ಪಟೇಲ್ವರೆಗೆ ರಾಷ್ಟ್ರವಾದಿಗಳನ್ನು ಮೂಲೆಗುಂಪು ಮಾಡಲು ನೆಹರು ಎಂದು ಮುಂದಾದರೋ ಅಂದೇ ಕಾಂಗ್ರೆಸ್ಸಿನ ಅವನತಿ ಶುರುವಾಯಿತು. ಕಾಂಗ್ರೆಸ್ನ ಅವಸಾನದ ಮೂಲ ಇರುವುದು ಆ ಪಕ್ಷದ ತುಷ್ಟೀಕರಣ ನೀತಿಯಲ್ಲಿ. ಅದನ್ನು ಮೊದಲು ಆರಂಭಿಸಿದ್ದು ಎಂ.ಕೆ.ಗಾಂಧಿ. ಉದಾರಿ ಎಂದು ತೋರಿಸಿಕೊಳ್ಳಲು ಗಾಂಧಿ ಅಂದು ಚೌಕಾಸಿ, ರಾಜಿಗೆ ಮುಂದಾದರು. ಅದರಲ್ಲೇ ತಾತ್ಕಾಲಿಕ ಹಿತವಿದೆ ಎಂಬುದನ್ನು ಚೆನ್ನಾಗಿ ಅರಿತಿದ್ದ ಪಂಡಿತ್ ನೆಹರು ಗಾಂಧಿ ನೀತಿಯನ್ನು ಮುಂದುವರಿಸಿದರು. ಹೇಗೆಂಬುದಕ್ಕೆ ಒಂದು ಉತ್ತಮ ಉದಾಹರಣೆ ನಮ್ಮ ಸಂವಿಧಾನದಲ್ಲೇ ಸಿಗುತ್ತದೆ. ಬಾಕಿ ಅಪವಾದಗಳು ಏನೇ ಇರಲಿ, ಧಾರ್ವಿುಕ, ಆಧ್ಯಾತ್ಮಿಕ ವಿಷಯಗಳಲ್ಲಿ ಗಾಂಧೀಜಿಗೆ ಒಂದು ಸ್ಪಷ್ಟ ನಿಲುವಿತ್ತು. ನೈತಿಕ ಅಧಃಪತನವಾದ ವ್ಯಕ್ತಿ, ಸಂಘಟನೆ, ದೇಶ ಉದ್ಧಾರವಾಗುವುದಿಲ್ಲ ಎಂಬುದರ ಅರಿವು ಅವರಿಗಿತ್ತು. ‘ಹಿಂಸೆ, ಅನಾಚಾರ, ಅನೈತಿಕ ವಿಷಯಗಳಲ್ಲಿ ವ್ಯಕ್ತಿ ಸಾಕಷ್ಟು ಎಚ್ಚರಿಕೆ ವಹಿಸಬೇಕು’ ಎನ್ನುತ್ತಿದ್ದ ಅವರು, ಆ ವಿಷಯಗಳಲ್ಲಿ ಹಾದಿ ತಪ್ಪದಂತೆ ಇರಲು ಸತ್ಯನಿಷ್ಠೆ, ಧರ್ಮನಿಷ್ಠೆ, ನ್ಯಾಯನಿಷ್ಠೆ, ಅಹಿಂಸೆ, ಭಜನೆ ಇಂತಹ ಪರೋಕ್ಷ ಮಾರ್ಗಗಳನ್ನು ಸಲಹೆ ಮಾಡುತ್ತಿದ್ದರು. ಅದನ್ನು ಅವರು ಹೀಗೆ ಹೇಳಿದ್ದರು- ‘ಸತ್ಯವನ್ನೇ ನುಡಿಯಬೇಕು’(ಹೈಕಮಾಂಡ್ ಮೆಚ್ಚಿಸಲು ಇಲ್ಲಸಲ್ಲದ್ದನ್ನು ಹೇಳಬಾರದು), ‘ಪ್ರಾಣಿ ಹಿಂಸೆ ಮಾಡಬಾರದು’ (ಗೋ ಹತ್ಯೆ ಮಾತ್ರವಲ್ಲ, ಧರ್ಮದ ದುರಭಿಮಾನದಿಂದ ಮನುಷ್ಯ ಹತ್ಯೆಯನ್ನೂ ಮಾಡಬಾರದು. ಕಲ್ಲು ಹೊಡೆಯಬಾರದು. ಬಾಂಬ್ ಹಾಕಬಾರದು. ಅದೆಲ್ಲವೂ ಮಹಾಪಾಪ, ಅಮಾನುಷ ಎಂದು ಈಗ ನಾವು ಅರ್ಥೈಸಿಕೊಳ್ಳೋಣ), ‘ಮದ್ಯಪಾನ ಮಾಡಬಾರದು’ ಇತ್ಯಾದಿ ಇತ್ಯಾದಿ. ಗಾಂಧಿ ಹೇಳಿದ ಈ ಮೌಲ್ಯಗಳಿಗೆ ನೆಹರು ನೇತೃತ್ವದ ಕಾಂಗ್ರೆಸ್ ಎಷ್ಟು ಮಹತ್ವ ಕೊಡಬೇಕಿತ್ತೆಂದರೆ, ಇದು ಈ ದೇಶದ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಕರ್ತವ್ಯ ಮತ್ತು ಹಕ್ಕು ಆಗಬೇಕಿತ್ತು. ದುರ್ದೈವವಶಾತ್ ಉದ್ದೇಶಪೂರ್ವಕವಾಗಿ ಅವನ್ನು ಸಂವಿಧಾನದ ರಾಜ್ಯನೀತಿ ನಿರ್ದೇಶಕ ತತ್ತ್ವಗಳ ಪಟ್ಟಿಯಲ್ಲಿ ಸೇರಿಸಿಬಿಟ್ಟರು. ಐಚ್ಛಿಕ ವಿಷಯ ಮಾಡಿದರು. ಬೇಕಾದರೆ ಮಾಡಬಹುದು. ಬೇಡ ಎಂದರೆ ಬಿಡಬಹುದು. ಕಾಂಗ್ರೆಸ್ ಹಾದಿ ತಪ್ಪಿದ್ದೇ ಇಲ್ಲಿ. ಅದೇ ಜಾಡಿನಲ್ಲಿ ಅರವತ್ತು ವರ್ಷ ಕ್ರಮಿಸಿಬಿಟ್ಟಿತು.

ಇತಿಹಾಸದ ಮಾತು ಹೇಗೂ ಇರಲಿ. ವರ್ತಮಾನಕ್ಕೆ ಬರೋಣ. ಕಾಂಗ್ರೆಸ್ಗೆ ಅನಿರೀಕ್ಷಿತ ಬಹುದೊಡ್ಡ ಆಘಾತ ಆದದ್ದು 2014 ಮೇ ತಿಂಗಳಿನಲ್ಲಿ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಳ ಬಹುಮತ ಪಡೆದುಕೊಂಡಾಗ. ರಾಹುಲ್ ಮತ್ತು ಸೋನಿಯಾ ಮನಸ್ಸು ಮಾಡಿದ್ದರೆ ಅವಲೋಕನ ಮಾಡಿಕೊಂಡು ಈ ಸೋಲನ್ನೇ ಗೆಲುವಿನ ಸೋಪಾನ ಮಾಡಿಕೊಳ್ಳಬಹುದಿತ್ತು. ಹಾಗೆ ಮಾಡುವುದಾದರೆ ಈ ಕೆಲ ಸಂಗತಿಗಳನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬಹುದಿತ್ತು.

ಜವಾಬ್ದಾರಿಯುತ ವಿರೋಧಪಕ್ಷವಾಗಿ ಕೆಲಸ ಮಾಡಬೇಕಿತ್ತು: ಅದರ ಬದಲು ಮೋದಿ ಗುಜರಾತ್ ಸಿಎಂ ಆಗಿದ್ದ ಹನ್ನೆರಡು ವರ್ಷಗಳ ಕಾಲ ಮಾಡಿಕೊಂಡು ಬಂದಂತೆ ಮೋದಿ ಬಯ್ಯುವ ಚಾಳಿಯನ್ನೇ ಮುಂದುವರಿಸಿದರು. ದೇಶ ತನ್ನ ಎಲ್ಲ ಅಪಸವ್ಯಗಳನ್ನು ಕಳಚಿಕೊಂಡು ಇನ್ನಾದರೂ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕಲಿ ಎಂಬ ಒಂದೇ ಉದ್ದೇಶದಿಂದ ಭಾರತದ ಕೋಟ್ಯಂತರ ಜನರು ಮೋದಿಯನ್ನು ನೆಚ್ಚಿಕೊಂಡರು. ಅದಕ್ಕೆ ಹೊರತಾಗಿ ಬೇರೆ ಇನ್ನೇನೂ ಕಾರಣ ಇರಲಿಲ್ಲ. ಕಾಂಗ್ರೆಸ್ ನಾಯಕರು ಇದನ್ನು ಎಲ್ಲರಿಗಿಂತ ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಿತ್ತು. ಹಾಗಾಗಲಿಲ್ಲ. ಕಾಂಗ್ರೆಸ್ ಮತ್ತು ಅದರಿಂದಲೇ ಉದ್ಭವವಾದ ಮಿತ್ರಪಕ್ಷಗಳು ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಅಧಿವೇಶನ ಸರಿಯಾಗಿ ನಡೆಯಲು ಬಿಡಲಿಲ್ಲ. ಕಾಂಗ್ರೆಸ್ ಯಾವ ಪರಿ ಮೈಮರೆತು, ಕುರುಡಾಗಿ, ಸಂವೇದನಾಶೀಲತೆಯೇ ಇಲ್ಲದವರಂತೆ ನಡೆದುಕೊಂಡಿತು ಎಂಬುದಕ್ಕೆ ಎರಡು ಉದಾಹರಣೆ ಸಾಕು. ಒಂದು- ಜಿಎಸ್ಟಿ. ಮತ್ತೊಂದು- ಭೂ ಸ್ವಾಧೀನ ಮಸೂದೆ. ಅವೆರಡನ್ನೂ ಸ್ವತಃ ಕಾಂಗ್ರೆಸ್ ಪಕ್ಷವೇ ತನ್ನ ಸರ್ಕಾರದ ಕಾಲದಲ್ಲೇ ರೂಪಿಸಿದ್ದು. ಮೋದಿಗೆ ಕೀರ್ತಿ ಬಂದುಬಿಡುತ್ತದೆ ಎಂಬ ಒಂದೇ ಕಾರಣಕ್ಕೆ ಈಗಲೂ ಹಟ ಬಿಡಲು ಕಾಂಗ್ರೆಸ್ ತಯಾರಿಲ್ಲ.

ರಾಹುಲ್ ನಾಯಕತ್ವಕ್ಕೆ ಸಾಣೆ ಹಿಡಿಯಲು ಸಕಾಲವಾಗಿತ್ತು: ಸೋತುಸುಣ್ಣ ವಾಗಿದ್ದ ಕಾಂಗ್ರೆಸ್ಸಿಗೆ ಕಳೆದುಕೊಳ್ಳಲು ಬೇರೇನೂ ಇರಲಿಲ್ಲ. ಅಥವಾ ಪಕ್ಷವನ್ನು ಮತ್ತೆ ಆಮೂಲಾಗ್ರವಾಗಿ ಸಶಕ್ತಗೊಳಿಸುವುದಕ್ಕೆ ಅವಕಾಶವನ್ನಾಗಿ ಮಾಡಿಕೊಂಡಿದ್ದರೂ ಆಗುತ್ತಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕತ್ವವನ್ನು ರಾಹುಲ್ ಗಾಂಧಿ ವಹಿಸಿಕೊಳ್ಳಬೇಕಿತ್ತು. ನಾಯಕತ್ವ ವಹಿಸಿಕೊಂಡು ಪಕ್ಷ ಸಂಘಟನೆ ಮಾಡುವ ಮಾತು ಹೇಗೂ ಇರಲಿ, ರಾಹುಲ್ ಸಂಸತ್ತಿನ ಕಲಾಪದಲ್ಲೇ ಸಕ್ರಿಯವಾಗಿ ಪಾಲ್ಗೊಳ್ಳಲಿಲ್ಲ. ಎರಡು ವರ್ಷದಲ್ಲಿ ಒಟ್ಟು ಲೆಕ್ಕ ಹಾಕಿದರೂ ಅವರು ಮಾತನಾಡಿದ್ದು ಅಬ್ಬಬ್ಬಾ ಅಂದರೆ ಒಂದೂವರೆ ಗಂಟೆಯೂ ಆಗಲಿಕ್ಕಿಲ್ಲ. ಅಂಥದ್ದರಲ್ಲಿ ಪಕ್ಷದ ಅಧ್ಯಕ್ಷರಾಗಿ ಮುನ್ನಡೆಸುತ್ತಾರೆಂದು ನಂಬಿ ಕೂರುವುದು ಎಷ್ಟು ಸರಿ?

ಸಂಸತ್ತಿನಲ್ಲಿ ಮಾತನಾಡಿ ವ್ಯಕ್ತಿತ್ವದಲ್ಲಿ ಪಕ್ವತೆ ಗಳಿಸಿಕೊಳ್ಳುವ ಬದಲು ರಾಹುಲ್ ದೆಹಲಿಯಲ್ಲಿ ದಲಿತ ಕೇರಿಗೆ ಭೇಟಿ ನೀಡಿದರು. ಕೊಳೆಗೇರಿ ತೆರವು ಕಾರ್ಯಾಚರಣೆಗೂ ಮೊದಲೇ ಮಗು ಸಾವನ್ನಪ್ಪಿದ್ದರೂ ಅದಕ್ಕೊಂದು ವಿವಾದ ಸೃಷ್ಟಿ ಆಯಿತು. ರೋಹಿತ್ ವೇಮುಲ, ಕನ್ನಯ್ಯ ಪ್ರಕರಣಗಳಲ್ಲಿ ಅನಗತ್ಯವಾಗಿ ಮೂಗು ತೂರಿಸಿದರು. ಸಿಕ್ಕ ಎಲ್ಲ ಸಂದರ್ಭಗಳನ್ನೂ ಮೋದಿಯನ್ನು ವೈಯಕ್ತಿಕವಾಗಿ ಹಣಿಯುವುದಕ್ಕೆ ಬಳಸಿಕೊಂಡರು. ‘ಸೂಟು ಬೂಟು ಸರ್ಕಾರ’ ಎಂಬ ಅಪ್ರಸ್ತುತ ವಿಷಯವನ್ನು ಪದೇಪದೆ ಪ್ರಸ್ತಾಪಿಸಿದರು. ‘ಅಚ್ಛೇ ದಿನ್ ಆಯಾ ಕ್ಯಾ’ ಎಂದು ಮೂದಲಿಸುವುದನ್ನೇ ಹವ್ಯಾಸ ಮಾಡಿಕೊಂಡರು. ಅದೆಲ್ಲದರ ಪರಿಣಾಮ ತಾನೆ ಈಗ ಚುನಾವಣಾ ಫಲಿತಾಂಶದ ರೂಪದಲ್ಲಿ ಕಾಣುತ್ತಿರುವುದು?

ಪ್ರಶಾಂತ ಕಿಶೋರ್ ಏನು ಮಾಡಬಲ್ಲರು?: ಸತತ ಸೋಲಿನ ನಂತರ ಕಾಂಗ್ರೆಸ್ ನಾಯಕರು ಪಕ್ಷದ ಪುನರುಜ್ಜೀವನಕ್ಕೆ ರಾಜಕೀಯ ತಂತ್ರಗಾರಿಕೆ ನಿಪುಣ ಪ್ರಶಾಂತ ಕಿಶೋರ್ ಅವರ ಮೊರೆಹೋದದ್ದು ಮತ್ತೊಂದು ಹಾಸ್ಯಾಸ್ಪದ ವಿಚಾರ. ಬಿಜಿನೆಸ್ ಸ್ಟ್ರಾಟಜಿಸ್ಟ್ಗಳು ಒಳ್ಳೆಯ ಸರಕನ್ನು ಮಾರುವ ನವೀನ ಉಪಾಯಗಳನ್ನು ಸಲಹೆ ಮಾಡಬಹುದು. ಅದರಿಂದ ಕಂಪನಿಗೆ ಅನುಕೂಲವೂ ಆಗಬಹುದು. ಮೂಲತಃ ಆ ಸರಕಿನಲ್ಲಿ ಸತ್ವ ಇದ್ದರೆ! ಅದಿಲ್ಲ ಎಂದಾದರೆ ಅಂತಹ ಸಂವಹನ ಸಲಹೆಗಾರರೇ ಫೇಲ್ ಆಗಿಬಿಡಬಹುದು. ಮೊದಲು ಮೋದಿ, ಆ ನಂತರ ನಿತೀಶ್ ಅವರಂತಹ ಒಳ್ಳೆ ಪ್ರಾಡಕ್ಟನ್ನು ಸೇಲ್ ಮಾಡಿದ ಪ್ರಶಾಂತ್ ಕಿಶೋರ್ ಈಗ ನಿಜವಾದ ಸವಾಲನ್ನು ಎದುರಿಸುತ್ತಿದ್ದಾರೆ. ಅವರ ಮುಂದೆ ಉತ್ತರಪ್ರದೇಶ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆಯ ದೊಡ್ಡ ಸವಾಲಿದೆ. ಉತ್ತರಪ್ರದೇಶದಲ್ಲಿ ರಾಹುಲ್ ಮುಂದಿಟ್ಟುಕೊಂಡು ಚುನಾವಣೆ ಪ್ರಚಾರಕ್ಕೆ ಧುಮುಕಬೇಕೇ ಅಥವಾ ಪ್ರಿಯಾಂಕಾ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕೆೇ ಎಂಬ ಗೊಂದಲವೊಂದೇ ಸಾಕು ಕಾಂಗ್ರೆಸ್ ಹಿನ್ನಡೆಗೆ. ನಾಯಕನಾಗುವ ಸಾಮರ್ಥ್ಯ ಇಲ್ಲದ ರಾಹುಲರನ್ನು ಪಕ್ಷದ ಉನ್ನತ ಹುದ್ದೆಗೆ ತಂದ ಸೋನಿಯಾ ಮತ್ತು ಗಾಂಧಿ ಮನೆತನದ ಹೊಗಳುಭಟ್ಟರ ಪಟಾಲಂನ ಅವಿವೇಕತನದ ನಿಜವಾದ ಪರಿಣಾಮವನ್ನು ಪಕ್ಷ ಈಗ ಅನುಭವಿಸುತ್ತಿದೆ. ರಾಹುಲರನ್ನು ಬಿಡುವ ಹಾಗಿಲ್ಲ, ಇಟ್ಟುಕೊಳ್ಳುವಂತೆಯೂ ಇಲ್ಲ. ಹಾಗಂತ ಪ್ರಿಯಾಂಕಾ ಖಂಡಿತವಾಗಿ ಕಾಂಗ್ರೆಸ್ಗೆ ಉತ್ತಮ ಉತ್ತರಾಧಿಕಾರಿಯಾಗಲಾರರು. ಅದಕ್ಕೆ ಕಾರಣ ಎರಡು. ಮೊದಲನೆಯದ್ದು ಪ್ರಿಯಾಂಕಾ ಬೆನ್ನಿಗಿರುವ ರಾಬರ್ಟ್ ವಾದ್ರಾ ಎಂಬ ಭಾರ. ಅದಕ್ಕಿಂತ ಮುಖ್ಯವಾಗಿ ಕುಟುಂಬ ರಾಜಕಾರಣದ ಒಲವಿನಿಂದ ಭಾರತೀಯ ಮತದಾರರು ಅದಾಗಲೇ ಎಷ್ಟೋ ದೂರ ಕ್ರಮಿಸಿಬಿಟ್ಟಿರುವುದು. ಈ ಸತ್ಯವನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳುವುದು ಯಾವಾಗ?

ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ತಿಲಾಂಜಲಿ ಕೊಟ್ಟು ಅಭಿವೃದ್ಧಿ, ರಾಷ್ಟ್ರವಾದದ ರಾಜಕೀಯಕ್ಕೆ ಒಗ್ಗಿಕೊಳ್ಳದೆ ಅನ್ಯ ಆಯ್ಕೆ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಏಕೆಂದರೆ ಕಾಂಗ್ರೆಸ್ನ ತುಷ್ಟೀಕರಣದ ನೀತಿಯನ್ನು ಭಾರತೀಯ ಮುಸ್ಲಿಮರೇ ನಂಬಲು ತಯಾರಿಲ್ಲ. ಹೀಗಾಗಿ ಕಾಂಗ್ರೆಸ್ಗೆ ಪರ್ಯಾಯ ಇರುವಲ್ಲೆಲ್ಲ ಪ್ರಾದೇಶಿಕ ಪಕ್ಷಗಳನ್ನೇ ಮುಸ್ಲಿಮರು, ಹಿಂದುಳಿದ ವರ್ಗದವರು ನೆಚ್ಚಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅಷ್ಟು ದುರ್ಬಲ ಎಂಬುದು ಇದಕ್ಕೆ ಒಂದು ಕಾರಣವಾದರೆ, ಅದು ತೋರುವ ಮಮಕಾರ ಅಸಲಿ ಅಲ್ಲ ಎಂಬುದು ಮತ್ತೊಂದು ಕಾರಣ.

ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್ ಸೂಕ್ತ ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಮತ್ತೆ ಮತ್ತೆ ಎಡವುತ್ತಿದೆ. ಅದಕ್ಕೆ ಒಂದು ಉತ್ತಮ ಉದಾಹರಣೆ ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದು. ಕಾಂಗ್ರೆಸ್ ನಾಯಕತ್ವಕ್ಕೆ ಅದೆಂಥಾ ವೈಚಾರಿಕ ದಾರಿದ್ರ್ಯ ಬಂದಿದೆಯೆಂದರೆ ರಾಜೀವ್ ಗಾಂಧಿ ಹಂತಕರಿಗೆ ಕ್ಷಮಾದಾನ ಕೊಡಲು ಎರಡು ವರ್ಷಗಳ ಹಿಂದೆ ಸಮ್ಮತಿ ನೀಡಿದ ಸೋನಿಯಾ ಪರಿವಾರ, ಅದೇ ರಾಜೀವ್ ಹತ್ಯೆಯ ಕಳಂಕವನ್ನು ಇಂದಿಗೂ ತೊಳೆದುಕೊಳ್ಳಲಾಗದ ಡಿಎಂಕೆ ಜೊತೆ ಮತ್ತೆ ಸ್ನೇಹಕ್ಕೆ ಮುಂದಾಯಿತು. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ಕ್ರೌರ್ಯಕ್ಕೆ ಅದೆಷ್ಟು ಮಂದಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಪ್ರಾಣ, ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆಂಬುದು ಸೋನಿಯಾ ಮತ್ತು ರಾಹುಲ್ಗೆ ಗೊತ್ತಿರಲಿಕ್ಕಿಲ್ಲ. ಆ ಸತ್ಯವನ್ನು ಮೋತಿಲಾಲ್ ವೋರಾ ಅವರಂಥ ಹಿರಿಯರಿಂದಾದರೂ ಕೇಳಿ ತಿಳಿದುಕೊಳ್ಳಬೇಕಿತ್ತು. ನೂರಾರು ಕಾಂಗ್ರೆಸ್ಸಿಗರನ್ನು ಕೊಲೆ ಮಾಡಿದ ಕಮ್ಯುನಿಸ್ಟರು, ಮೇವು ಹಗರಣದ ಲಾಲೂ, 2-ಜಿ ಹಗರಣದ ಅಪಖ್ಯಾತಿಯ ಎ.ರಾಜಾ, ರಾಜೀವ್ ಹತ್ಯೆಯ ಕಳಂಕದ ಡಿಎಂಕೆ ಇಂಥವರ ಸಹವಾಸ, ಸ್ನೇಹಕ್ಕೆ ಕೈಚಾಚುತ್ತಿರುವ ಕಾಂಗ್ರೆಸ್ ಪಕ್ಷವನ್ನು ಆ ಭಗವಂತನೂ ಕಾಪಾಡಲಾರನೇನೋ!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top