ಪರಿಣಾಮದ ಬದಲು ಪ್ರಮಾದ ಮಾಡುತ್ತಿರುವುದೇಕೆ?

ನರೇಂದ್ರ ಮೋದಿ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ನೆರೆ ರಾಷ್ಟ್ರಗಳ ಸರ್ಕಾರಗಳ ಪ್ರಮುಖರು ಆಗಮಿಸಿದಾಗ ಸಂಬಂಧದ ವಿಷಯದಲ್ಲಿ ಹೊಸ ಭರವಸೆ ಮೂಡಿತ್ತು. ಆದರೆ ಕೊಹಿನೂರ್ ವಜ್ರ ಮತ್ತು ಈಸಾಗೆ ವೀಸಾ ವಿಷಯದಲ್ಲಿ ನಡೆದುಕೊಂಡ ರೀತಿ ಸರ್ಕಾರದ ರಾಜತಾಂತ್ರಿಕ ನೈಪುಣ್ಯವನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.

ಸ್ವಿಸ್ ಬ್ಯಾಂಕ್​ನಿಂದ ಹಿಡಿದು ಪ್ರಪಂಚದ ನಾನಾ ದೇಶಗಳಲ್ಲಿ ಬಚ್ಚಿಟ್ಟಿರುವ ಸಾವಿರ, ಲಕ್ಷ ಕೋಟಿ ರೂಪಾಯಿ ಲೂಟಿ ಹಣ ಮಾತ್ರವಲ್ಲ, ಬ್ರಿಟಿಷರು ಹೊಡೆದುಕೊಂಡು ಹೋಗಿರುವ ಕೊಹಿನೂರ್ ವಜ್ರವೂ ವಾಪಸ್ ಬರುವುದಿಲ್ಲ ಅಂತ ಎಲ್ಲರಿಗೂ ಈಗ ಅನ್ನಿಸಿರಲಿಕ್ಕೆ ಸಾಕು. ಯಾವಾಗಲೂ ವಾಸ್ತವ ಇರುವುದೇ ಹಾಗೆ. ನಿರೀಕ್ಷೆಗೂ ನಿಜಕ್ಕೂ ಅಜಗಜಾಂತರವಿರುತ್ತದೆ.

vvaniಹೇಗೆ ಒಂದರಮೇಲೊಂದರಂತೆ ಪ್ರಮಾದಗಳಾಗುತ್ತಿವೆ ನೋಡಿ. ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆ ಮತ್ತು ಐತಿಹಾಸಿಕ ಹೆಮ್ಮೆಯ ಕುರುಹಾದ ಕೊಹಿನೂರ್ ವಜ್ರ ಒಂದಲ್ಲ ಒಂದು ದಿನ ಬ್ರಿಟಿಷರ ಕೈಯಿಂದ ನಮಗೆ ವಾಪಾಸ್ ಬಂದೇ ಬರುತ್ತದೆ ಅಂತಲೇ ಎಲ್ಲರೂ ಬಲವಾಗಿ ನಂಬಿಕೊಂಡಿದ್ದರು. ಆದರೆ ನಮ್ಮ ಆಸೆಗೆ ಭಾರತ ಸರ್ಕಾರದ ಸಾಲಿಸಿಟರ್ ಜನರಲ್ ರಂಜಿತ್​ಕುಮಾರ್ ಇತ್ತೀಚೆಗೆ ಏಕಾಏಕಿ ತಣ್ಣೀರೆರಚಿಬಿಟ್ಟರು. ‘ಕೊಹಿನೂರ್ ವಜ್ರ ಭಾರತ ಬ್ರಿಟಿಷರಿಗೆ ಕೊಟ್ಟ ಉಡುಗೊರೆ’ ಎಂದು ಸುಪ್ರಿಂಕೋರ್ಟಿಗೆ ರಂಜಿತ್​ಕುಮಾರ್ ಅಫಿಡವಿಟ್ಟು ಸಲ್ಲಿಸಿದರು. ಇದಕ್ಕಿಂತ ಮೂರ್ಖತನದ ಹೇಳಿಕೆ ಮತ್ತೊಂದಿರಲಾರದು. ಸಾಲಿಸಿಟರ್ ಜನರಲ್ ಹೇಳಿಕೆಯಿಂದ ಆಗಿರುವ ಎಡವಟ್ಟಿನ ವಿಷಯದಲ್ಲಿ ಕೇಂದ್ರ ಸರ್ಕಾರ ತುಸು ತಡವಾಗಿ ಎಚ್ಚೆತ್ತುಕೊಂಡಿತು ಅಂತ ತೋರುತ್ತದೆ. ಆದ ತಪ್ಪನ್ನು ತಿದ್ದಿಕೊಳ್ಳಲು ಸರ್ಕಾರ ಮುಂದಾಯಿತು. ಡ್ಯಾಮೇಜ್ ಕಂಟ್ರೋಲಿಗೆ ಸರ್ಕಸ್ ಮಾಡಿತು. ‘ಸಾಲಿಸಿಟರ್ ಜನರಲ್ ಹೇಳಿಕೆ ಸರಿಯಿಲ್ಲ. ಕೊಹಿನೂರ್ ವಜ್ರವನ್ನು ಮರಳಿ ತರುವ ಯತ್ನವನ್ನು ಕೈ ಬಿಡುವುದಿಲ್ಲ. ಅದು ನಮಗೆ ಸೇರಿದ ಸ್ವತ್ತು’ ಎಂಬ ಅಧಿಕೃತ ಹೇಳಿಕೆ ಮಾರನೇ ದಿನ ಹೊರಬಂತು. ಹಾಗಾದರೆ ಕೊಹಿನೂರ್​ವಜ್ರದ ನಿಜ ಹಕೀಕತ್ತು ಏನು? ಅದನ್ನು ಮತ್ತೆ ಭಾರತಕ್ಕೆ ಮರಳಿ ತರಲು ಸಾಧ್ಯವೇ? ಎಲ್ಲರೂ ಇದೇ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದಾರೆ.

ಸ್ವಲ್ಪ ಇತಿಹಾಸದ ಕಡೆ ನೋಡೋಣ. ಕೊಹಿನೂರ್ ವಜ್ರದ ಮೂಲ ಈಗಿನ ಆಂಧ್ರಪ್ರದೇಶ. ಅದು ಸುಮಾರು 5 ಸಾವಿರ ವರ್ಷಗಳ ಹಿಂದಿನದ್ದೆಂಬ ನಂಬಿಕೆಯಿದೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಜಾಂಬವಂತನಿಂದ ಈ ವಜ್ರವನ್ನು ಪಡೆದ ಎಂದು ಅನೇಕ ಕಥೆಗಳಲ್ಲಿ ಉಲ್ಲೇಖವಿದೆ. ಐತಿಹಾಸಿಕವಾಗಿ 13ನೇ ಶತಮಾನದಲ್ಲಿ ಆಂಧ್ರಪ್ರದೇಶದ ‘ಹಿಂದೂ ಕಾಕತೀಯ’ ಅರಸರ ಆಳ್ವಿಕೆ ಕಾಲದಲ್ಲಿ ಕೊಹಿನೂರ್ ವಜ್ರ ಮೊದಲು ಕಂಡುಬಂದ ಬಗ್ಗೆ ಉಲ್ಲೇಖವಿದೆ. ಆದರೆ ಬಹುತೇಕ ಇತಿಹಾಸಕಾರರು ಕೊಹಿನೂರ್ ವಜ್ರ ಸುಮಾರು 3,000 ವರ್ಷಗಳ ಹಿಂದಿನದ್ದು, ಅಂದರೆ ಮಹಾಭಾರತದ ಕಾಲಘಟ್ಟದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂತಹ ಕೊಹಿನೂರ್ ವಜ್ರ ಪ್ರಸಿದ್ಧಿಗೆ ಬಂದದ್ದು ಸರಿಸುಮಾರು 14ನೇ ಶತಮಾನದಲ್ಲಿ ಎಂಬುದಕ್ಕೆ ಐತಿಹಾಸಿಕ ಪುರಾವೆಗಳು ಸಿಗುತ್ತವೆ. ಅದು ಭಾರತದ ಇತಿಹಾಸ, ಶಕ್ತಿ ಸಾಮರ್ಥ್ಯ ಮತ್ತು ಸಂಸ್ಕೃತಿಯ ದ್ಯೋತಕವೆಂದೇ ನಂಬಲಾಗಿದೆ. ಮೂಲದಲ್ಲಿ ಕೊಹಿನೂರ್ ವಜ್ರ ಕಾಕತೀಯ ಅರಸರ ಸ್ವತ್ತಾಗಿತ್ತು. 1320ರಲ್ಲಿ ಕಾಕತೀಯ ಅರಸರನ್ನು ಸೋಲಿಸಿದ ದೆಹಲಿ ಸುಲ್ತಾನರು ವಜ್ರವನ್ನು ದೆಹಲಿಗೆ ಕೊಂಡೊಯ್ದರು. ಕಾಲಕ್ರಮೇಣ ಅದು ಮೊಘಲ್ ಚಕ್ರವರ್ತಿ ಬಾಬರ್​ನ ಕೈ ಸೇರಿತು ಎಂದು ‘ಬಾಬರ್​ನಾಮಾ’ದಲ್ಲಿ ಉಲ್ಲೇಖವಿದೆ. ಆ ನಂತರದಲ್ಲಿ ವಜ್ರ ಮೊಘಲ್ ದೊರೆ ಔರಂಗಜೇಬನ ಸುಪರ್ದಿಗೆ ಸೇರುತ್ತದೆ. ಆತ ನಂತರ ಕೊಹಿನೂರನ್ನು ಲಾಹೋರದ ದೊರೆ ರಣಜಿತ್ ಸಿಂಗ್​ನಿಗೆ ಕಾಣಿಕೆಯಾಗಿ ನೀಡುತ್ತಾನೆ. ಕೊಹಿನೂರ್ ಪರಂಪರೆಯ ಗೌರವಾರ್ಥವಾಗಿ ತನ್ನ ಕಾಲಾನಂತರದಲ್ಲಿ ವಜ್ರವನ್ನು ಪುರಿ ಜಗನ್ನಾಥ ದೇವಾಲಯಕ್ಕೆ ಕಾಣಿಕೆಯಾಗಿ ನೀಡುವುದಾಗಿ ರಣಜಿತ್ ಸಿಂಗ್ ಉಯಿಲು ಬರೆದಿಡುತ್ತಾನೆ. ಆದರೆ ಆ ಉಯಿಲು ಜಾರಿಯಾಗಲು ಬ್ರಿಟಿಷರು ಅವಕಾಶ ಕೊಡುವುದಿಲ್ಲ. 1839ರಲ್ಲಿ ನಡೆದ ಎರಡನೇ ಆಂಗ್ಲೋ-ಸಿಖ್ ಯುದ್ಧದ ನಂತರ ಬ್ರಿಟಿಷ್ ಅಧಿಕಾರಿ ಲಾರ್ಡ್ ಡಾಲ್​ಹೌಸಿ ಮೋಸದ ಒಪ್ಪಂದಕ್ಕೆ ಬಲವಂತವಾಗಿ ಸಹಿ ಪಡೆದುಕೊಳ್ಳುತ್ತಾನೆ. ಆ ಒಪ್ಪಂದದ ಸಾರಾಂಶವೇನೆಂದರೆ ಕೊಹಿನೂರ್ ವಜ್ರವನ್ನು ಬ್ರಿಟನ್ ಅರಸೊತ್ತಿಗೆಗೆ ಕಾಣಿಕೆಯಾಗಿ ನೀಡುವುದಾಗಿ ಲಾಹೋರ್ ಒಪ್ಪಂದದ ಮೂರನೇ ವಿಧಿಯಲ್ಲಿ ಮೋಸದಿಂದ ಸೇರಿಸಲಾಗುತ್ತದೆ. ಹೀಗೆ ಕೊಹಿನೂರ್ ವಜ್ರ ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಬ್ರಿಟಿಷ್ ಅರಸೊತ್ತಿಗೆ ಪಾಲಾಗುವಂತೆ ವ್ಯವಸ್ಥಿತವಾದ ತಂತ್ರ ಹೆಣೆಯಲಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ವಜ್ರವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಹಸ್ತಾಂತರಿಸುವ ಸಮಯದಲ್ಲಿ ರಣಜಿತ್ ಸಿಂಗ್​ನ ಕಿರಿಯ ಪುತ್ರ ದಿಲೀಪ್ ಸಿಂಗ್​ನಿಗೆ ಕೇವಲ ಹದಿಮೂರು ವರ್ಷ ವಯಸ್ಸು. ಆ ವೇಳೆ ಆತ ಪಕ್ಕಾ ಅಪ್ರಾಪ್ತ. ಹಾಗಾಗಿ ಆ ಒಪ್ಪಂದಕ್ಕೆ ಕಾನೂನುರೀತ್ಯ ಮಾನ್ಯತೆ ಇಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಐತಿಹಾಸಿಕ ಘಟನಾವಳಿಗಳು, ಕಾಣಿಕೆ, ಒಪ್ಪಂದ ಇತ್ಯಾದಿ ವಿಚಾರ ಒತ್ತಟ್ಟಿಗಿರಲಿ. ಈ ಕಾಲದ ಕಾಯ್ದೆ, ಒಪ್ಪಂದ, ಘೊಷಣೆಗಳ ಪ್ರಕಾರವೂ ಕೊಹಿನೂರ್ ವಜ್ರ ನ್ಯಾಯವಾಗಿ ಭಾರತಕ್ಕೆ ಸೇರಬೇಕು. ಅದು ಹೇಗೆಂದರೆ ಬ್ರಿಟಿಷ್ ಸರ್ಕಾರವೇ ಮಾನ್ಯ ಮಾಡುವ ಹೇಗ್ ಸಮ್ಮೇಳನದ ಘೊಷಣೆ ಮತ್ತು 1970ರ ಯುನೆಸ್ಕೋ ಸಮ್ಮೇಳನದ ತೀರ್ವನದ ಪ್ರಕಾರವೂ ಬ್ರಿಟಿಷರು ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಬೇಕು. ‘‘ಪ್ರತಿಯೊಂದು ದೇಶ, ರಾಜ್ಯಗಳ ಸಾಂಸ್ಕೃತಿಕ ಹಿರಿಮೆ, ಗೌರವವನ್ನು ಕಾಪಾಡುವುದಕ್ಕೋಸ್ಕರ ಯಾವುದೇ ತೆರನಾದ ಪಾರಂಪರಿಕ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಅದರ ಮೂಲ ನೆಲೆಯಿಂದ ಹೊರಗೆ ಸಾಗಿಸಿರುವುದು ರುಜುವಾತಾದಲ್ಲಿ ಅಂತಹ ಪಾರಂಪರಿಕ ಸಂಪತ್ತನ್ನು ಅಥವಾ ವಸ್ತುವನ್ನು ಪುನಃ ಅದರ ಮೂಲ ನೆಲೆಗೆ ವಹಿಸಿಕೊಡತಕ್ಕದ್ದು’’ ಎಂದು ಮೇಲಿನ ಎರಡೂ ಘೊಷಣೆಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಒಂದು ದೇಶದ ಸಾಂಸ್ಕೃತಿಕ, ಐತಿಹಾಸಿಕ ಕುರುಹುಗಳು, ಸ್ಮಾರಕಗಳನ್ನು ಒಂದು ವೇಳೆ ಸ್ವ ಇಚ್ಛಾಪೂರ್ವಕವಾಗಿ ಹಸ್ತಾಂತರಿಸಿದ್ದೇ ಆದರೂ ಅದನ್ನು ಅದರ ಮೂಲ ನೆಲೆಗೆ ಒಪ್ಪಿಸುವುದು ಆಯಾ ಸರ್ಕಾರಗಳ ಅಥವಾ ಆಳುಗರ ಕರ್ತವ್ಯ ಎಂದು ಹೇಗ್ ಒಪ್ಪಂದದ ವಿಧಿ-19(ಬಿ) 1(ಡಿ) ಮತ್ತು ಯುನೆಸ್ಕೋ ಒಪ್ಪಂದದ ವಿಧಿ 11ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲಿಗೆ ಒಂದು ವೇಳೆ ಬ್ರಿಟಿಷ್ ಸರ್ಕಾರ ಅದಾಗಿ ಕೊಹಿನೂರ್ ವಜ್ರವನ್ನು ಮರಳಿಸಲು ಮನಸ್ಸು ಮಾಡದಿದ್ದರೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಲು ಮತ್ತು ಮರಳಿ ಭಾರತಕ್ಕೆ ತರಲು ಅವಕಾಶ ಇದ್ದೇ ಇದೆ. ಇಷ್ಟೆಲ್ಲ ಇದ್ದೂ ಸಾಲಿಸಿಟರ್ ಜನರಲ್​ರು ಮಾತ್ರ ‘ಕೊಹಿನೂರ್ ವಜ್ರ ಬ್ರಿಟಿಷರಿಗೆ ಉಡುಗೊರೆಯಾಗಿ ನೀಡಿದ್ದು, ಅದನ್ನು ಹಿಂತಿರುಗಿ ಪಡೆಯುವುದು ಅಸಾಧ್ಯ’ ಎಂದು ಸುಪ್ರೀಂ ಕೋರ್ಟ್​ನಲ್ಲಿ ಲಿಖಿತ ಹೇಳಿಕೆ ನೀಡುತ್ತಾರೆ. ಅವರು ಆ ಹೇಳಿಕೆ ನೀಡಿರುವುದು ಭಾರತ ಸರ್ಕಾರದ ಪ್ರತಿನಿಧಿಯಾಗಿ. ಎಂತಹ ಪ್ರಮಾದ ನೋಡಿ. ಆದ ತಪ್ಪನ್ನು ತಿದ್ದಿಕೊಳ್ಳಲು ಮನಸ್ಸು ಮಾಡಿದರೆ ಈಗಲೂ ಕಾಲ ಮಿಂಚಿಲ್ಲ.

ಕೇಂದ್ರ ಸರ್ಕಾರ ಅದೇಕೋ ಇತ್ತೀಚೆಗೆ ಒಂದಾದ ಮೇಲೆ ಮತ್ತೊಂದು ಇಂಥ ಪ್ರಮಾದಗಳನ್ನು ಎಸಗುತ್ತಿರುವುದು ಕಾಣಿಸುತ್ತಿದೆ. ಉದಾಹರಣೆಗೆ ಉಯ್ಘರ್ ನಾಯಕ ಡೋಲ್ಕನ್ ಈಸಾಗೆ ನೀಡಿದ್ದ ವೀಸಾವನ್ನು ಕೊನೇ ಕ್ಷಣದಲ್ಲಿ ರದ್ದು ಮಾಡಿದ ಪ್ರಕರಣ. ಹಾಗೆ ಮಾಡುವ ಮೂಲಕ ಚೀನಾಕ್ಕೆ ತಿರುಗೇಟು ನೀಡಲು ಸಿಕ್ಕ ಅವಕಾಶವನ್ನು ಭಾರತ ಕೈಚೆಲ್ಲಿತು. ಡೋಲ್ಕನ್ ಈಸಾ ಚೀನಾದ ಪ್ರಜಾಪ್ರಭುತ್ವ ಹೋರಾಟಗಾರ. ಕಮ್ಯುನಿಸ್ಟ್ ಚೀನಾದಲ್ಲಿ ಗ್ಸಿಯಾಂಗ್ ಉಯ್ಘರ್ ಸ್ವತಂತ್ರ ಪ್ರದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೋಸ್ಕರ ಮತ್ತು ಉಯ್ಘರ್ ಜನಾಂಗದ ಮೇಲೆ ಚೀನೀಯರು ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ಚೀನಾದಿಂದ ಹೊರಗೆ ನೆಲೆಸಿ ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದಾರೆ. ಆ ಕಾರಣಕ್ಕೆ ಈಸಾ ಭಯೋತ್ಪಾದಕ ಎಂದು ಚೀನಾ ಘೊಷಿಸಿದೆ. ಆದರೆ ವಿಚಿತ್ರ ಅಂದರೆ ಅದೇ ಚೀನಾ ಭಾರತದಲ್ಲಿ ಸತತವಾಗಿ ಭಯೋತ್ಪಾದನೆಗೆ ನೇರ ಕುಮ್ಮಕ್ಕು ಕೊಡುತ್ತಿರುವ ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಪರ ವಕಾಲತ್ತು ವಹಿಸಿತು. ಜೈಷ್ ಸಂಘಟನೆಯನ್ನು ನಿಷೇಧಿಸಬೇಕು ಮತ್ತು ಮಸೂದ್ ಅಜರ್ ಜಾಗತಿಕ ಭಯೋತ್ಪಾದಕ ಎಂದು ಘೊಷಿಸಬೇಕೆಂದು ವಿಶ್ವಸಂಸ್ಥೆಯಲ್ಲಿ ಭಾರತ ಮಾಡಿದ ಆಗ್ರಹಕ್ಕೆ ಚೀನಾ ಅಡ್ಡಗಾಲು ಹಾಕಿ, ಈ ಸಂಬಂಧವಾಗಿ ಭಾರತ ಮುಂದಿಟ್ಟ ಪ್ರಸ್ತಾವನೆ ವಿರುದ್ಧ ಗೌಪ್ಯ ವೀಟೋ ಚಲಾಯಿಸಿತು. ಅಷ್ಟು ಮಾತ್ರವಲ್ಲ, ಭಯೋತ್ಪಾದನೆ ಮೂಲಕ ಭಾರತಕ್ಕೆ ಸತತ ಕಿರುಕುಳ ನೀಡುತ್ತಿರುವ ಪಾಕಿಸ್ತಾನದೊಂದಿಗೆ ವಿವಾದಾತ್ಮಕ ಭೂಭಾಗದ ಗುಂಟ 46 ಬಿಲಿಯನ್ ಡಾಲರ್ ಮೊತ್ತದ ಆರ್ಥಿಕ ಕಾರಿಡಾರ್ ಸ್ಥಾಪನೆಗೆ ಅದು ಮುಂದಾಗಿದೆ. ಭಾರತದ ಆಂತರಿಕ/ಬಾಹ್ಯ ಸುರಕ್ಷೆ ದೃಷ್ಟಿಯಿಂದ ಇದು ಅಪಾಯಕಾರಿ ಬೆಳವಣಿಗೆ. ಭಾರತದ ಪರಮ ಮಿತ್ರರಾಷ್ಟ್ರ ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಲು, ಎರಡೂ ದೇಶಗಳ ನಡುವೆ ಕಂದಕ ನಿರ್ವಿುಸಲು ಚೀನಾ ನಿರಂತರವಾಗಿ ಹವಣಿಸುತ್ತಲೇ ಇದೆ. ಇಂಥ ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಹಿಮಾಚಲದ ಧರ್ಮಶಾಲಾದಲ್ಲಿ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸಲು ಬಯಸಿದ ಉಯ್ಘರ್ ನಾಯಕ ಡೋಲ್ಕನ್ ಈಸಾಗೆ ವೀಸಾ ನೀಡಿದ್ದು ಸರಿಯಾದ ಕ್ರಮವೇ ಆಗಿತ್ತು. ಅದರಲ್ಲೂ ಮಸೂದ್ ಅಜರ್​ನನ್ನು ಭಯೋತ್ಪಾದಕ ಎಂದು ಘೊಷಿಸಬೇಕೆಂಬ ವಿಶ್ವಸಂಸ್ಥೆಯಲ್ಲಿನ ನಿಲುವಳಿಗೆ ಚೀನಾ ವಿರೋಧ ಮಾಡಿದ ಮರುದಿನವೇ ಉಯ್ಘರ್ ನಾಯಕನಿಗೆ ವೀಸಾ ನೀಡಿದ ಭಾರತದ ಕ್ರಮ ಹೆಚ್ಚು ಸಮಂಜಸವಾಗಿತ್ತು. ಈಸಾಗೆ ವೀಸಾ ನೀಡಿದ್ದು ಗೊತ್ತಾಗುತ್ತಲೇ ಚೀನಾ ನಿರೀಕ್ಷೆಯಂತೆ ಗುರ್ ಎಂದಿತು. ಹಾಗೆ ವಿರೋಧ ಬಂದ ತಕ್ಷಣ ಭಾರತ ಮರುಮಾತಿಲ್ಲದೆ ಈಸಾ ವೀಸಾ ರದ್ದು ಮಾಡಿ ರಾಜತಾಂತ್ರಿಕವಾಗಿ ಐತಿಹಾಸಿಕ ಪ್ರಮಾದ ಮಾಡಿತು. ಎರಡು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಪಾಕಿಸ್ತಾನವೂ ಸೇರಿ ಎಲ್ಲ ನೆರೆ ರಾಷ್ಟ್ರಗಳ ಸರ್ಕಾರಗಳ ಪ್ರಮುಖರು ದೆಹಲಿಗೆ ಆಗಮಿಸಿದಾಗ ಭಾರತ ಮತ್ತು ನೆರೆ ರಾಷ್ಟ್ರಗಳ ಸಂಬಂಧದ ವಿಷಯದಲ್ಲಿ ಹೊಸ ಭರವಸೆ ಮೂಡಿತ್ತು ನಿಜ. ಆದರೆ ಕೊಹಿನೂರ್ ವಜ್ರದ ವಿಚಾರದಲ್ಲಿ ಸುಪ್ರೀಂಕೋರ್ಟ್​ನಲ್ಲಿ ನೀಡಿದ ಹೇಳಿಕೆ ಮತ್ತು ಡೋಲ್ಕನ್ ಈಸಾಗೆ ವೀಸಾ ನೀಡುವ ವಿಷಯದಲ್ಲಿ ನಡೆದುಕೊಂಡ ರೀತಿ ಇವೆರಡೂ ಸರ್ಕಾರದ ರಾಜತಾಂತ್ರಿಕ ನೈಪುಣ್ಯವನ್ನೇ ಅನುಮಾನದಿಂದ ನೋಡುವಂತೆ ಮಾಡಿವೆ.

ಪಠಾಣ್​ಕೋಟ್ ವಾಯುನೆಲೆ ಮೇಲೆ ಭಯೋತ್ಪಾದಕ ದಾಳಿ ಮತ್ತು ಆ ನಂತರ ಆದ ಬೆಳವಣಿಗೆಗಳು ಕೂಡ ಕೊಹಿನೂರ್ ವಜ್ರ ಹಾಗೂ ಈಸಾ ವೀಸಾ ನಿರಾಕರಣೆ ಪ್ರಕರಣಕ್ಕಿಂತ ಭಿನ್ನವೇನಲ್ಲ. ಪಠಾಣ್​ಕೋಟ್ ದಾಳಿ ತನಿಖೆಗೆ ಪಾಕಿಸ್ತಾನಕ್ಕೆ ಅವಕಾಶ ಮಾಡಿಕೊಟ್ಟದ್ದು ಸರ್ವಥಾ ಸರಿಯಾದ ಕ್ರಮವಲ್ಲ. ಇಲ್ಲಿಗೆ ಬಂದ ಪಾಕ್ ತನಿಖಾ ತಂಡ ನಿರೀಕ್ಷೆಯಂತೆಯೇ ಭಾರತದ ವಿರುದ್ಧವೇ ಗೂಬೆ ಕೂರಿಸುವ ಕೆಲಸ ಮಾಡಿತು. ‘ಪಠಾಣ್​ಕೋಟ್ ದಾಳಿ ಪ್ರಕರಣ ಪಾಕಿಸ್ತಾನದ ಮುಖಕ್ಕೆ ಮಸಿ ಬಳಿಯಲು ಭಾರತವೇ ಹೆಣೆದ ನಾಟಕ’ ಎಂದು ಅದು ಹೇಳಿತು. ಪಠಾಣ್​ಕೋಟ್ ಘಟನೆಯ ಫ್ಲಾಷ್​ಬ್ಯಾಕ್​ಗೊಮ್ಮೆ ಹೋಗೋಣ. ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಪಾಕ್ ಪ್ರಧಾನಿಯನ್ನು ಆಹ್ವಾನಿಸಿದ್ದು ಮಾತ್ರವಲ್ಲ, ಕಳೆದ ಡಿಸೆಂಬರ್ 25ರಂದು ಅಫ್ಘಾನಿಸ್ತಾನದಿಂದ ಹಿಂದಿರುಗುವ ವೇಳೆ ದಿಢೀರಾಗಿ ಲಾಹೋರ್​ನಲ್ಲಿ ಇಳಿದು ಷರೀಫ್ ಮೊಮ್ಮಗಳ ಮದುವೆ-ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಿ ರಾಜತಾಂತ್ರಿಕವಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದರು ನಿಜ. ಆದರೆ ಅದಕ್ಕೆ ಸಿಕ್ಕ ಪ್ರತಿಕ್ರಿಯೆಯೇನು? ಮೋದಿ ಲಾಹೋರ್​ನಲ್ಲಿಳಿದ ಒಂದು ವಾರದ ಒಳಗಾಗಿ ಪಠಾಣ್​ಕೋಟ್ ವಾಯುನೆಲೆ ಮೇಲೆ ಪಾಕಿಸ್ತಾನ ಪ್ರೇರಿತ ಉಗ್ರರು ಭೀಕರ ದಾಳಿ ನಡೆಸಿದರು. ಇದರಿಂದ ಭಾರತದಲ್ಲಿ ಪಾಕ್ ಉಗ್ರರು ಬೇರು ಬಿಟ್ಟಿರುವ ಆಳ ಮತ್ತು ಅಗಲದ ಸ್ವರೂಪವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಭಾರತದಲ್ಲಿ ದಾಳಿಗೆ ಉಗ್ರರು ಸದಾ ಸನ್ನದ್ಧರಾಗಿರುತ್ತಾರೆ ಎಂಬುದು. ಇದು ಆತಂಕಕಾರಿ ವಿಚಾರ ಅಲ್ಲವೇನು? ನಮ್ಮ ಉದಾರತನ ಅಲ್ಲಿಗೂ ನಿಲ್ಲುವುದಿಲ್ಲ, ಪಠಾಣ್​ಕೋಟ್ ದಾಳಿಗೆ ಸಂಬಂಧಿಸಿ ಪಾಕಿಸ್ತಾನದ ಉಡಾಫೆ ಧೋರಣೆ ನಡುವೆಯೇ ‘ಹಾರ್ಟ್ ಆಫ್ ಏಫ್ಯಾ’ ಶೃಂಗದ ಸಂದರ್ಭದಲ್ಲಿ ಮತ್ತೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗೆ ಉತ್ಸಾಹ ತೋರಿದ್ದೇವೆ. ಪರಿಣಾಮ ಏನು? ಮತ್ತದೇ ಫಲಿತಾಂಶವಿಲ್ಲದ ಮಾತುಕತೆ ಎಂಬ ಪ್ರಹಸನ. ಎಂಥಾ ವಿಚಿತ್ರ ನೋಡಿ. ಇದಕ್ಕೆ ಕೊನೆಯೆಂದು?

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top