ಯಾರೇ ಭೇಟಿ ಕೊಟ್ಟು ವಿಚಾರಿಸಿದರೂ ಯೋಧ ಹನುಮಂತಪ್ಪ ಬದುಕಿ ಬರುವುದು ಕಷ್ಟದ ಮಾತೇ ಆಗಿತ್ತು. ಆದರೆ ಹಾಗೆ ಮಾಡಿದ್ದರೆ ದೇಶ ಕಾಯುವ ಸೈನಿಕ ಸಮುದಾಯದಲ್ಲಿ ಕನಿಷ್ಠ ವಿಶ್ವಾಸ ತುಂಬುವ ಕೆಲಸ ಮಾಡಿದಂತಾಗುತ್ತಿತ್ತು. ರಾಹುಲ್‌ರಂಥ ನಾಯಕರು ಅದನ್ನು ಮಾಡಲಿಲ್ಲ ಎಂಬುದೇ ಬೇಸರದ ಸಂಗತಿ.
ಯೋಧರು, ಸೇನೆ, ಸಮರ್ಪಣೆ ಅಂದರೇನೆ ಹಾಗೆ. ಅದಕ್ಕೆ ಜಾತಿ, ಧರ್ಮ, ಪ್ರದೇಶದ ಎಲ್ಲೆಗಳು ಇರುವುದಿಲ್ಲ. ಅದಿಲ್ಲ ಅಂದಿದ್ದರೆ ಎಲ್ಲಿಯ ಹುಬ್ಬಳ್ಳಿಯ ಬೆಟದೂರು? ಎಲ್ಲಿಯ ಸಿಯಾಚಿನ್? ಎಲ್ಲಿಯ ದೆಹಲಿ? ಹಿಮಗಡ್ಡೆಯ ಅಡಿಯಿಂದ ಎದ್ದುಬಂದು ಆಸ್ಪತ್ರೆ ಸೇರಿದ ಯೋಧ ಹನುಮಂತಪ್ಪ ಕೊಪ್ಪದ ಸಾವನ್ನು ಜಯಿಸಿ ಬರಲಿ ಎಂದು ದೇಶಕ್ಕೆ ದೇಶವೇ ಬೇಡಿಕೊಳ್ಳುತ್ತಿತ್ತು. ಮಂದಿರ, ಮಸೀದಿ, ಚರ್ಚುಗಳೆಂಬ ಭೇದವಿರಲಿಲ್ಲ. ಹರಕೆ, ಪ್ರಾರ್ಥನೆ, ಪೂಜೆಗೆ ಮೇರೆಯಿರಲಿಲ್ಲ. ಆದರೆ ಆ ದೇವರು ನಿರ್ದಯಿ ನೋಡಿ. ಲಾನ್ಸ್ ನಾಯಕ್ ಹನುಮಂತಪ್ಪ ಸಿಯಾಚಿನ್ ಹಿಮಪರ್ವತದ ಗರ್ಭದಲ್ಲಿ ಮುಚ್ಚಿದ ಕಣ್ಣುಗಳನ್ನು ಮತ್ತೆ ತೆರೆಯಲೇ ಇಲ್ಲ.
ಮದ್ರಾಸ್ ರೆಜಿಮೆಂಟಿಗೆ ಸೇರಿದ ಹನುಮಂತಪ್ಪ ಮತ್ತು ಅವರ ಒಂಭತ್ತು ಮಂದಿ ಸಹಯೋಧರು 19,500 ಅಡಿ ಎತ್ತರದ ಸಿಯಾಚಿನ್ ಹಿಮಪರ್ವತದ ಮೇಲೆ ದೇಶ ಕಾಯುವ ಕಾಯಕದಲ್ಲಿ ತೊಡಗಿದ್ದರು. -ಬ್ರವರಿ 3ರ ಬೆಳಗಿನ ಜಾವ ಆದ ರುದ್ರಭಯಂಕರ ಹಿಮಪಾತ ವೀರಯೋಧರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸಿಬಿಟ್ಟಿತು. ಎಷ್ಟೆಂದರೆ ಕ್ಷಣಾರ್ಧದಲ್ಲಿ ಸುಮಾರು 25ರಿಂದ 30 ಅಡಿಯಷ್ಟು ಎತ್ತರಕ್ಕೆ ಯೋಧರ ಮೇಲೆ ಹಿಮ ಆವರಿಸಿಕೊಂಡಿತು. ಪರಿಣಾಮವನ್ನು ಯಾರು ಬೇಕಾದರೂ ಸುಲಭದಲ್ಲಿ ಊಹಿಸಬಹುದಿತ್ತು. ಆ ಹತ್ತು ಮಂದಿ ಯೋಧರು ಹಿಮಸಮಾಧಿ ಆದರೆಂದು ಮಾಧ್ಯಮಗಳಲ್ಲಿ ವರದಿಯಾಯಿತು. ಅಷ್ಟಕ್ಕೆ ಎಲ್ಲವೂ ಮುಗಿದ ಅಧ್ಯಾಯ. ಆದರೆ ಅಲ್ಲಿಂದಲೇ ಶುರುವಾಯಿತು ಹೊಸ ಇತಿಹಾಸದ ಮೊದಲ ಅಧ್ಯಾಯ!
ಯಾವುದೇ ಸನ್ನಿವೇಶದಲ್ಲೂ ಪರಿಸ್ಥಿತಿಗೆ ಶರಣಾಗಿ ಕೈಚೆಲ್ಲಿ ಕೂರುವುದು ಭಾರತೀಯ ಸೇನೆಯ ಜಾಯಮಾನವೇ ಅಲ್ಲ. ಎಂಥದ್ದೇ ದುರ್ಗಮ ಪ್ರದೇಶ, ಸನ್ನಿವೇಶವೇ ಇರಲಿ, ಕರ್ತವ್ಯ ನಿರ್ವಹಿಸುವ ವೇಳೆ ಮಡಿದ ಯೋಧರ ಕಳೇಬರವನ್ನು ತರದೇ ಬಿಡುವ ಪರಿಪಾಠವಿಲ್ಲ. ಸಿಯಾಚಿನ್ ಹಿಮಾಘಾತದ ಸಂದರ್ಭದಲ್ಲೂ ಆ ರೂಢಿ ಮುಂದುವರಿಯಿತು. ತುರ್ತು ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ಮಾಡಲು ಸಕಲ ತರಬೇತಿ ಪಡೆದ 150 ಮಂದಿ ಯೋಧರು ಹಿಮದಡಿ ಹುದುಗಿಹೋಗಿದ್ದ ಹತ್ತು ಯೋಧರಿಗಾಗಿ ಶೋಧಕಾರ್ಯ ಆರಂಭಿಸಿದರು. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿದ್ದ ಹಿಮಶಿಲೆ ಕೊರೆಯಬಲ್ಲ ಡ್ರಿಲ್ಲಿಂಗ್ ಮಶಿನ್‌ಗಳು, ವಿದ್ಯುತ್ ಗರಗಸಗಳು, ರಾಡಾರ್ ಉಪಕರಣಗಳು, ವಿಶೇಷ ರಕ್ಷಣಾ ಕಾರ್ಯಾಚರಣೆಗಳಲ್ಲಿ ಬಳಕೆ ಮಾಡುವ ಸ್ನಿ-ರ್ ಶ್ವಾನಗಳನ್ನು (ಡಾಟ್ ಮತ್ತು ಮಿಶಾ ಎರಡು ವಿಶೇಷ ತರಬೇತಿ ಪಡೆದ ನಾಯಿಗಳು ಹನುಮಂತಪ್ಪ ಮತ್ತು ಅವರ ಸಹಯೋಧರ ಹುಡುಕಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು) ಹೆಲಿಕಾಪ್ಟರ್ ಮೂಲಕ ಸಿಯಾಚಿನ್ ಹಿಮಶಿಖರಕ್ಕೆ ಸಾಗಿಸಿಕೊಂಡರು. ಎಲ್ಲವೂ ಅಣಿಯಾದ ಬಳಿಕ ಸಿಮೆಂಟ್ ಕಾಂಕ್ರಿಟ್‌ಗಿಂತಲೂ ಗಟ್ಟಿಯಾದ ಹಿಮಗಡ್ಡೆಯನ್ನು ಕೊರೆದು ಇಪ್ಪತ್ತೈದರಿಂದ ಮೂವತ್ತು ಅಡಿ ಒಳಕ್ಕೆ ಹೋಗುವ ಸಾಹಸ ಶುರುವಾಯಿತು. ಕೊರೆಯುವ ಚಳಿ. ಮೇಲಿಂದ ಸುರಿಯುವ ಹಿಮಮಳೆ ಬೇರೆ. ಆಮ್ಲಜನಕದ ಕೊರತೆ. ಸವಾಲು ಒಂದಲ್ಲ ಎರಡಲ್ಲ. ಹೆಚ್ಚೆಂದರೆ ಮೂವತ್ತು ನಿಮಿಷ ಅಲ್ಲಿ ನಿಂತು ಕಾರ್ಯಾಚರಣೆ ಮಾಡಬಹುದಿತ್ತು. ಅಂತಹ ದುರ್ಗಮ, ಪ್ರತಿಕೂಲ ಹವಾಮಾನದ ನಡುವೆಯೇ ಇಂಚು ಇಂಚಾಗಿ ಹಿಮಶಿಲೆಯನ್ನು ಬಗೆದು ಸೀಳಿ ಆಳಕ್ಕೆ ಹೋದಾಗ ಒಂಭತ್ತು ಯೋಧರ ಶವಗಳು ಪತ್ತೆಯಾದವು. ಅದರ ಜೊತೆಜೊತೆಗೇ ಭಾರಿ ಅಚ್ಚರಿಯೊಂದು ಕಾದಿತ್ತು. ಮೃತ್ಯುಂಜಯನಾದ ಯೋಧ ಹನುಮಂತಪ್ಪ ಆರು ದಿನಗಳ ಬಳಿಕವೂ ಹಿಮಗಡ್ಡೆ ನಡುವೆ ಉಸಿರಾಡುತ್ತಲೇ ಇದ್ದ್ದರು! ಮೈನಸ್ 35ರಿಂದ 50 ಡಿಗ್ರಿ ಉಷ್ಣಾಂಶದ ಹಿಮರಾಶಿಯ ನಡುವೆ ಆ ಯೋಧ ಅದ್ಹೇಗೆ ಬದುಕಿದ್ದಿರಬಹುದು! ಹಿಮದ ರಾಶಿ ಮೈಮೇಲೆ ಆವರಿಸಿದ ನಂತರ ಹೆಚ್ಚೆಂದರೆ ಒಂದು ತಾಸು ಬದುಕಬಹುದೇನೋ. ಆದರೆ ಹನುಮಂತಪ್ಪ ಆರು ದಿನ ಜೀವ ಹಿಡಿದುಕೊಂಡಿದ್ದರು. ಅದನ್ನು ಕಂಡು ದೇಶಕ್ಕೆ ದೇಶವೇ ನಿಬ್ಬೆರಗಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದಂತಹ ದೊಡ್ಡ ಸಂಘಟನೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿಗೆ ಅದೇಕೋ ಅದು ವಿಶೇಷ ಅಂತ ಅನ್ನಿಸಲೇ ಇಲ್ಲ!
ಇದು ಕೇವಲ ರಾಹುಲ್ ಗಾಂಧಿಯೊಬ್ಬರ ಸಮಸ್ಯೆ ಅಲ್ಲ… ಬಹುತೇಕ ಸ್ವಘೋಷಿತ ಸೆಕ್ಯುಲರ್ ನಾಯಕರದ್ದು ಇದೇ ಕತೆ. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಪರ ಕಣ್ಣೀರು ಸುರಿಸಿದರೆ ತಮಗೆ ಲಾಭ. ಜಾತಿವಾದದಿಂದ ಮಾತ್ರ ತಮಗೆ ಅನುಕೂಲ. ದೇಶ, ಸೇನೆ, ಭಯೋತ್ಪಾದನೆ, ಮತಾಂಧತೆ ಕುರಿತು ಬಾಯಿಬಿಟ್ಟರೆ ಬಿಜೆಪಿಗೆ ಲಾಭ ಎಂಬ ಅವಾಸ್ತವಿಕ ತೀರ್ಮಾನಕ್ಕೆ ಬಂದಿದ್ದರ ಪರಿಣಾಮ ಇದ್ದಿರಬಹುದು. ಹೀಗಾಗಿ ಕಾಂಗ್ರೆಸ್ ಮತ್ತು ಕಾಂಗ್ರೆಸ್‌ನಿಂದ ಕವಲೊಡೆದ ಸೆಕ್ಯುಲರ್ ನಾಯಕರ ದಂಡಿಗೆ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲನ ಪ್ರಕರಣವೇ ದೊಡ್ಡ ವಿಷಯವಾಗುತ್ತದೆ. ಉತ್ತರಪ್ರದೇಶದ ದಾದ್ರಿಯಲ್ಲಿ ಯಾವುದೋ ಕಾರಣಕ್ಕೆ ಹತ್ಯೆಯಾದ ಅಖ್ಲಾಕ್‌ನ ಪ್ರಕರಣ ತಲ್ಲಣಗೊಳಿಸುತ್ತದೆ. ಬೆಂಗಳೂರಲ್ಲಿ ತಾಂಜೇನಿಯಾದ ಯುವತಿ ಮೇಲೆ ಹಲ್ಲೆ ನಡೆಯಿತೆಂಬ ಗುಲ್ಲೆದ್ದ ಮರುಕ್ಷಣವೇ, ವಿವರಣೆ ಕೇಳಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಆದರೆ, ಸಿಯಾಚಿನ್‌ನ ಹಿಮದ ರಾಶಿಯಲ್ಲಿ ನಿಂತು ದೇಶ ಕಾಯುವ ನಿಸ್ವಾರ್ಥ ಹೃದಯದ ಯೋಧ ಹನುಮಂತಪ್ಪ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ ಸೋನಿಯಾ, ರಾಹುಲ್, ಯೆಚೂರಿ ಹಾಗೂ ಇತರ ನಾಯಕರಿಗೆ ಅದೊಂದು ಮಹತ್ವದ ವಿಷಯವೇ ಆಗುವುದಿಲ್ಲ. ಆ ಕಡೆ ತಿರುಗಿ ನೋಡುವುದಕ್ಕೂ ಪುರುಸೊತ್ತಿರುವುದಿಲ್ಲ. ಏನು ವಿಚಿತ್ರ ನೋಡಿ.
ಆಲೋಚಿಸಿ… ರಾಜಕೀಯ ಲೆಕ್ಕಾಚಾರ, ಲಾಭ ನಷ್ಟದ ತರ್ಕ ಇವೆಲ್ಲದಕ್ಕೆ ಹೊರತಾದ ಸೂಕ್ಷ್ಮಸಂವೇದನೆ ಎಂಬುದು ಇದ್ದಿದ್ದರೆ ರಾಹುಲ್ ಗಾಂಧಿ ಹಾಗೂ ಇತರ ನಾಯಕರು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಮೌನವಾಗಿ ಮಲಗಿದ್ದ ವೀರಯೋಧನ ಮುಖ ನೋಡಲು ಮುಂದಾಗುತ್ತಿದ್ದರು. ಆಸ್ಪತ್ರೆಯ ಹೊರಗಡೆ ಕಣ್ಣೀರಿಡುತ್ತಿದ್ದ ಹನುಮಂತಪ್ಪನ ಕುಟುಂಬದವರನ್ನು ಸಂತೈಸುತ್ತಿದ್ದರು. ಹೊಣೆಗಾರಿಕೆ ಮಾತು ಹೇಗೂ ಇರಲಿ, ಮನುಷ್ಯ ಸಹಜ ಕುತೂಹಲಕ್ಕಾದರೂ ಅವರು ದೆಹಲಿಯ ಆರ್.ಆರ್. ಆಸ್ಪತ್ರೆಗೆ ಭೇಟಿ ನೀಡಬಹುದಿತ್ತಲ್ಲವೇ? ಮೈನಸ್ 35ರಿಂದ 50 ಡಿಗ್ರಿ ಉಷ್ಣಾಂಶದ ಹಿಮಗಡ್ಡೆಯ ಕೆಳಗೆ ಇಪ್ಪತ್ತೈದು ಅಡಿಗಿಂತ ಹೆಚ್ಚು ಆಳದಲ್ಲಿ ಆ ಪುಣ್ಯಾತ್ಮ ಆರು ದಿನಗಳ ಕಾಲ ಹೇಗೆ ಬದುಕಿದ್ದಿರಬಹುದು, ಅದೆಂತಹ ಯಮಯಾತನೆ ಅನುಭವಿಸಿರಬೇಕು, ಆತನಲ್ಲಿ ಬದುಕಿನ ಹಂಬಲ ಅದೆಷ್ಟು ಅದಮ್ಯವಾಗಿದ್ದಿರಬೇಕು ಎಂಬ ಪ್ರಶ್ನೆಗಳಾದರೂ ಕಾಡಬೇಕಿತ್ತಲ್ಲವೆ ಈ ಮಹಾಶಯರಿಗೆ? ರಾಹುಲ್ ಬಯಸಿದ್ದರೆ ಯೋಧನನ್ನು ನೋಡಲು ಯಾವ ಅಡ್ಡಿಯೂ ಇರಲಿಲ್ಲ. ಅಂತಹ ಅವಕಾಶ ಸಿಕ್ಕಿದ್ದರೆ ದೇಶದ ಲಕ್ಷಾಂತರ ಜನರು ಹನುಮಂತಪ್ಪನನ್ನು ಕಣ್ತುಂಬ ನೋಡಿ ಧನ್ಯರಾಗುತ್ತಿದ್ದರು. ಆದರೆ ಅವರೆಲ್ಲ ಆ ವೀರಯೋಧನನ್ನು ನೋಡಲು ಸಾಧ್ಯವಿರಲಿಲ್ಲ. ಖುದ್ದಾಗಿ ನೋಡಲು ಸಾಧ್ಯವಿದ್ದ ರಾಹುಲ್‌ಗೆ ಆಸಕ್ತಿಯೇ ಇರಲಿಲ್ಲ. ಬೇಸರವಾಗುತ್ತದೆ…
ಸ್ವಲ್ಪ ಸೆಕೆ ಆದರೆ ನಾವು ತಲೆ ಮೇಲೆ -ನು ಹಾಕಿಕೊಳ್ಳುತ್ತೇವೆ. ತುಸು ಹೆಚ್ಚು ಅನುಕೂಲ ಇದ್ದರೆ ಎಸಿ ಹಾಕು ಎನ್ನುತ್ತೇವೆ. ಮುಂದಿನ ತಿಂಗಳು ಚಳಿ ಶುರುವಾಗುತ್ತದೆ ಎಂದರೆ ಈಗಲೇ ಸ್ವೆಟರ್ ಖರೀದಿ ಮಾಡಿ ಜೊತೆಯಲ್ಲಿ ಇಟ್ಟುಕೊಂಡಿರುತ್ತೇವೆ. ಪಾಪ.. ಕಾಶ್ಮೀರದ ಆ ಕಣಿವೆಯಲ್ಲಿ, ಕಾರ್ಗಿಲ್‌ನ ಗಿರಿಕಂದರಗಳಲ್ಲಿ, ಸಿಯಾಚಿನ್ ಹಿಮರಾಶಿಯಲ್ಲಿ ಅಹೋರಾತ್ರಿ ಗಸ್ತು ಕಾಯುವ ಯೋಧನಿಗೆ ಇಂಥ ಸವಲತ್ತುಗಳ ಬಗೆಗೆ ಗಮನವೂ ಇರುವುದಿಲ್ಲ.
ನಮಗೆ ಆಹಾರ ಅದೆಷ್ಟೇ ತಾಜಾ ಇದ್ದರೂ ಜೀರ್ಣವಾಗುವುದಿಲ್ಲ. ಬಿಪಿ, ಶುಗರ್ ನಮ್ಮ ಬೆನ್ನು ಬಿಡುವುದಿಲ್ಲ. ಮಿನರಲ್ ವಾಟರ್ ಇಲ್ಲ ಅಂದರೂ ಅಕ್ವಾಗಾರ್ಡ್ ನೀರಾದರೂ ಸಿಗದಿದ್ದರೆ ಗಂಟಲು ಕಚ್ಚುತ್ತದೆ. ಆದರೆ ಹದಿನೈದು, ಇಪ್ಪತ್ತು ದಿನ ಕುಡಿಯಲು ನೀರಿಲ್ಲದೆ, ತಿನ್ನಲು ತಾಜಾ ಮತ್ತು ಹೊಟ್ಟೆತುಂಬ ಆಹಾರವಿಲ್ಲದೆ, ತಲೆ ಮೇಲೊಂದು ವ್ಯವಸ್ಥಿತ ಸೂರಿಲ್ಲದೆ ದೇಶದ ಗಡಿಗಳಲ್ಲಿ ಚಳಿ, ಮಳೆ, ಬಿಸಿಲೆಂದು ಯೋಚಿಸದೇ ಭುಜದ ಮೇಲೆ ಬಂದೂಕು ಹೊತ್ತು ಇಕ್ಕೆಲಗಳಲ್ಲಿ ಗ್ರೆನೇಡ್ ಕಟ್ಟಿಕೊಂಡು, ಮಣಭಾರದ ಹ್ಯಾಟು, ಬೂಟು, ಕೋಟು ಹಾಕಿಕೊಂಡೇ ದಿನ, ತಿಂಗಳು, ವರ್ಷಗಳನ್ನು ಕಳೆಯುವ ಯೋಧನಿಗೆ ಕಷ್ಟ ಸುಖದ ಪರಿವೆ ಎಲ್ಲಿಂದ ಬರಬೇಕು ಹೇಳಿ… ಮಡದಿ ಮಕ್ಕಳ ಯೋಚನೆಗೆಲ್ಲಿ ವ್ಯವಧಾನ! ದೇಹ ನಶ್ವರ…ದೇಶ ಶಾಶ್ವತ… ಎಂಬ ಅವರ ಸಂಕಲ್ಪವೇ ಇದಕ್ಕೆ ಕಾರಣವಲ್ಲದೆ ಮತ್ತೇನು ಅಲ್ಲವೇ?
ಈ ಆಲೋಚನೆಗಳು ರಾಹುಲ್ ಮನಸ್ಸಿನಲ್ಲಿ ಬರುವುದಿಲ್ಲ ಎಂದರೆ ಹೇಗೆ? ಅವರೊಬ್ಬರೇ ಅಲ್ಲ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲೂ ಅಂತಹ ಆಲೋಚನೆ ಆರಂಭದಲ್ಲಿ ಬರಲಿಲ್ಲ ಅಂತಲೇ ತೋರುತ್ತದೆ. ಹನುಮಂತಪ್ಪ ದೆಹಲಿ ಸೇನಾ ಆಸ್ಪತ್ರೆ ಸೇರಿ ಮೌನವಾಗಿ ಮಲಗಿದ್ದ ದಿನ ಸಿದ್ದರಾಮಯ್ಯ ದಿನಪೂರ್ತಿ ಹುಬ್ಬಳ್ಳಿ ಆಸುಪಾಸಿನಲ್ಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಆದರೆ ಹುಬ್ಬಳ್ಳಿಯ ಮಗ್ಗುಲಲ್ಲೇ ಇರುವ ಹನುಮಂತಪ್ಪನ ಹುಟ್ಟೂರು ಬೆಟದೂರಿನ ಮನೆಗೊಮ್ಮೆ ಭೇಟಿ ಕೊಡಲು ಅವರು ಮನಸ್ಸು ಮಾಡಲಿಲ್ಲ. ಮಾಧ್ಯಮಗಳಲ್ಲಿ ಕಟುಟೀಕೆ ಕೇಳಿ ಬಂದ ಮೇಲೆ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿ ಸಂಜೆ ದೆಹಲಿಗೆ ಹೋಗುತ್ತೇನೆ. ಹನುಮಂತಪ್ಪನ ಮುಖದರ್ಶನ ಮಾಡುತ್ತೇನೆಂದು ಪ್ರಕಟಿಸಿದರು. ಆದರೆ ಬರುವವರ ಮುಖ ನೋಡಲು ಹನುಮಂತಪ್ಪ ಸಂಜೆಯವರೆಗೆ ಕಾದು ಕುಳಿತುಕೊಳ್ಳಲಿಲ್ಲ. ಸಿಯಾಚಿನ್‌ನಲ್ಲಿ ಯೋಧರು ಸಾವನ್ನಪ್ಪಿದ ಸುದ್ದಿ ತಿಳಿದ ತಕ್ಷಣ ತಮಿಳುನಾಡು ಸರ್ಕಾರ ರಾಜ್ಯದ ಯೋಧರಿಗೆ ತಲಾ ಹತ್ತು ಲಕ್ಷ ರೂ ಪರಿಹಾರ ಘೋಷಿಸಿತು, ನಮ್ಮ ಸರ್ಕಾರ ಏನು ಮಾಡುತ್ತಿದೆ ಎಂದು ಮಾಧ್ಯಮಗಳಲ್ಲಿ ಟೀಕೆ ಬಂದಾಗ ಚುನಾವಣಾ ನೀತಿಸಂಹಿತೆ ಕಾರಣಕ್ಕೆ ನಾವು ಹಾಗೆ ಮಾಡಲಿಲ್ಲ ಎಂದವರು ಸಂಜೆ ಹೊತ್ತಿಗೆ ನಿಲುವು ಬದಲಿಸಿ 25 ಲಕ್ಷ ರೂಪಾಯಿ, ಜಮೀನು, ಸೈಟು, ನೌಕರಿ ಇತ್ಯಾದಿಗಳ ಘೋಷಣೆ ಮಾಡಿದ್ದು ಹೇಗೆ? ಬೆಳಗಾಗುವ ಹೊತ್ತಿಗೆ ಮತ್ತೊಂದು ಹೇಳಿಕೆ ನೀಡಿ ಹನುಮಂತಪ್ಪನ ಜೊತೆಗೆ ಸಮಾಧಿಯಾದ ರಾಜ್ಯದ ಇತರ ಸೈನಿಕರಿಗೂ ಅಷ್ಟೇ ಸವಲತ್ತು ಕೊಡುತ್ತೇವೆಂದು ಹೇಳಿದರಲ್ಲ, ಆಗ ನೀತಿಸಂಹಿತೆ ಬಾಧಿಸಲಿಲ್ಲವೇ ಇವರಿಗೆ?
ಸಿದ್ದರಾಮಯ್ಯ ಮಾತ್ರವಲ್ಲ, ಜನಸಾಮಾನ್ಯರ ಹಾಗೆ ಅದೇ ಆಲೋಚನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನಸ್ಸಿನಲ್ಲೂ ಸುಳಿದಾಡಿದ್ದರೆ ಸಿಯಾಚಿನ್ ಸವಾಲನ್ನು ಜಯಿಸಿದ ಹನುಮಂತಪ್ಪನವರನ್ನು ದೆಹಲಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಪ್ರಧಾನಿ ಮೋದಿ ಅಲ್ಲಿಗೆ ಬರುವ ಮುನ್ನ ಧಾವಿಸುತ್ತಿದ್ದರು ಅಲ್ಲವೇ? ಕೇರಳದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ರೋಹಿತ್ ವೇಮುಲನ ಭಾವಚಿತ್ರಕ್ಕೆ ಹೂವಿಡಲು ಮರೆಯದ ರಾಹುಲ್‌ಗೆ ಸಾವು ಬದುಕಿನ ಹೋರಾಟದಲ್ಲಿದ್ದ ಹನುಮಂತಪ್ಪ ನೆನಪಾಗದ್ದು ಹೇಗೆ?
ನಿಜ, ರಾಹುಲ್ ಅಥವಾ ಮತ್ತಾವುದೇ ನಾಯಕರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರೆ ಹನುಮಂತಪ್ಪ ಏನೂ ಮರಳಿ ಬರುತ್ತಿರಲಿಲ್ಲ. ಏಕೆಂದರೆ ಆಮ್ಲಜನಕ, ಗ್ಲುಕೋಸ್ ದೇಹದೊಳಕ್ಕೆ ಸರಬರಾಜಾಗದೆ ಮೂರ‍್ನಾಲ್ಕು ದಿನ ಆಗಿದ್ದರಿಂದ ಆ ಯೋಧನ ಕಿಡ್ನಿ, ಲಿವರ್ ಇತ್ಯಾದಿ ಪ್ರಮುಖ ಅಂಗಗಳೆಲ್ಲವೂ ನಿಷ್ಕ್ರಿಯವಾಗಿದ್ದವು. ಆದರೆ ಇಂಥ ಸಂದರ್ಭದಲ್ಲಿ ನಮ್ಮ ನಾಯಕರೆನಿಸಿಕೊಂಡವರು ಕಾಳಜಿ ವಹಿಸುವುದರಿಂದ ಸಹಸ್ರಾರು ಸೈನಿಕರಿಗೆ ಧೈರ್ಯ ತುಂಬಿದಂತಾಗುತ್ತದೆ. ಅದನ್ನು ಮಾಡಬೇಕಿತ್ತು ಅಷ್ಟೆ. ಎಲ್ಲವನ್ನೂ ದೇಶ ಮತ್ತು ಜನರು ಗಮನಿಸುತ್ತಿರುತ್ತಾರೆ ಎಂಬುದು ನಾಯಕರೆನಿಸಿಕೊಂಡವರಿಗೆ ಗೊತ್ತಿರಲಿ…