ವಾಸ್ತವದಲ್ಲಿ ಕಾಲೇಜುಗಳಲ್ಲಿ, ವಿವಿಗಳಲ್ಲಿ ಈ ರೀತಿಯ ಗುಂಪುಘರ್ಷಣೆಗಳು ಹಿಂದೆಯೂ ನಡೆದಿವೆ. ಮುಂದೆಯೂ ನಡೆಯಬಹುದು. ಆದರೆ ಅದರೊಂದಿಗೆ ರಾಜಕೀಯ ಹಿತಾಸಕ್ತಿ ಬೆರೆತರೆ ಈಗ ಆಗಿರುವಂಥ ಅನಾಹುತಗಳು, ಗೊಂದಲ ಗೋಜಲುಗಳು ಹೆಚ್ಚಾಗುತ್ತಲೇ ಹೋಗುತ್ತವೆ.
ಮೊದಲೇ ಹೇಳಿಬಿಡುತ್ತೇನೆ. ಈ ದೇಶದಲ್ಲಿ ಯಾರೊಬ್ಬರೂ ವಿನಾಕಾರಣ ಸಾಯಬಾರದು. ದಲಿತರು, ಬ್ರಾಹ್ಮಣರು, ಮುಸಲ್ಮಾನರು, ಅನ್ಯಜಾತಿಯ ಹಿಂದುಗಳು, ರೈತರು, ವಿದ್ಯಾರ್ಥಿಗಳು, ಯುವತಿಯರು, ಮಹಿಳೆಯರು ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ. ಆದರೆ ಹಾಗೆ ಹೇಳಿದ ಮಾತ್ರಕ್ಕೆ ಸಾವುನೋವನ್ನು ನಿಲ್ಲಿಸಲಾಗುವುದಿಲ್ಲ. ಅದಕ್ಕೆ ಕಾರಣಗಳು ಹಲವು.
ಇಲ್ಲಿ ಹೇಳಲು ಹೊರಟಿರುವುದು ಇತ್ತೀಚೆಗೆ ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಸಾವಿನ ಕುರಿತು. ದೇಶಕ್ಕೆ ಗೊತ್ತಿರುವುದು ಆತ ದಲಿತ ಜಾತಿಗೆ ಸೇರಿದವನು; ವಿಶ್ವವಿದ್ಯಾಲಯದಲ್ಲಿನ ದಲಿತ ವಿರೋಧಿ ನೀತಿಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಎಂಬುದು ಮಾತ್ರ. ರೋಹಿತ್ನ ಸಾವಿನ ಹಿಂದೆ ವಿಶ್ವವಿದ್ಯಾಲಯದ ಕುಲಪತಿ ಅಪ್ಪಾ ರಾವ್ ಮತ್ತು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರ ಕುಮ್ಮಕ್ಕಿದೆ ಎಂಬುದೂ ಬೇಕಾದಷ್ಟು ಪ್ರಚಾರ ಪಡೆದುಕೊಂಡಿದೆ. ಇದು ಪಟ್ಟಭದ್ರ ಹಿತಾಸಕ್ತಿಗಳ ಕ್ರಮದ ಫಲ ಆಗಿರುವುದರಿಂದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ರಾಜೀನಾಮೆ ಕೊಡಬೇಕು ಎಂಬ ಒತ್ತಾಯವೂ ಜೋರಾಗಿಯೇ ಕೇಳಿಬಂದಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂತಾದವರು ಪ್ರಧಾನಿ ನರೇಂದ್ರ ಮೋದಿಯವರಿಗೂ ಈ ಪ್ರಕರಣವನ್ನು ತಳುಕು ಹಾಕಿದ್ದಾರೆ. ಪ್ರಧಾನಿ ಮಧ್ಯಪ್ರವೇಶಕ್ಕೆ, ರಾಜೀನಾಮೆಗೆ ಕೂಡ ಒತ್ತಾಯಿಸಿದ್ದಾರೆ. ರೋಹಿತ್ ವೇಮುಲನ ಆತ್ಮಹತ್ಯೆ ಹಿನ್ನೆಲೆಯಲ್ಲಿ, ದೇಶದಲ್ಲಿ ಅದಾಗಲೇ ಚಾಲ್ತಿಯಲ್ಲಿದ್ದ ಅಸಹಿಷ್ಣುತೆ ಚರ್ಚೆಯೂ ಮತ್ತೊಮ್ಮೆ ಮುನ್ನೆಲೆಗೆ ಬಂತು. ಆದರೆ ಈ ಗದ್ದಲದ ನಡುವೆ ರೋಹಿತ್ ಸಾವಿನ ಹಿನ್ನೆಲೆಯ ಅಸಲಿ ಕತೆಯೇ ಮುಚ್ಚಿಹೋಗಿತ್ತು. ಅದನ್ನಿಲ್ಲಿ ಅನಾವರಣ ಮಾಡುತ್ತೇನೆ. ಗಮನವಿಟ್ಟು ಓದಿ…
1993ರ ಮುಂಬೈ ಸರಣಿ ಸ್ಫೋಟ ಪ್ರಕರಣವನ್ನು ನೀವ್ಯಾರೂ ಮರೆತಿರಲಿಕ್ಕಿಲ್ಲ. ಹಾಗೆಯೇ ಯಾಕುಬ್ ಮೆಮನ್ ವೃತ್ತಾಂತವನ್ನೂ. ಮುಂಬೈ ಸರಣಿ ಸ್ಪೋಟದ ಸೂತ್ರಧಾರ ಯಾಕುಬ್ ಮೆಮನ್ ಎಂಬುದು ಒಂದಲ್ಲ ಹಲವಾರು ನ್ಯಾಯಾಲಯಗಳಲ್ಲಿ ಸಾಬೀತಾಯಿತು. ವಿಚಾರಣಾ ನ್ಯಾಯಾಲಯ ಯಾಕುಬ್ಗೆ
ಗಲ್ಲುಶಿಕ್ಷೆ ವಿಧಿಸಿತು. ಈ ತೀರ್ಪನ್ನು ಸುಪ್ರೀಂ ಕೋರ್ಟೂ ಅನುಮೋದಿಸಿತು. ಹೀಗಾಗಿ ಯಾಕುಬ್ನನ್ನು ಗಲ್ಲಿಗೇರಿಸದೆ ವಿಧಿ ಇರಲಿಲ್ಲ. ಭಯೋತ್ಪಾದಕರ ಪರ ವಕಾಲತ್ತು ವಹಿಸುವವರು ಆಗಲೂ ಇದ್ದರಲ್ಲ… ಯಾಕುಬ್ನನ್ನು ಗಲ್ಲಿಗೇರಿಸಿದ್ದೇ ತಡ, ಒಂದು ವರ್ಗ ಅದನ್ನು ವಿರೋಧಿಸಲು ತೊಡಗುತ್ತದೆ. ಈ ವಿರೋಧದ ಪ್ರತಿಧ್ವನಿ ಹೈದರಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಜೋರಾಗಿಯೇ ಮೊಳಗುತ್ತದೆ. ಯಾಕುಬ್ನನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಅಂಬೇಡ್ಕರ್ ವಿದ್ಯಾರ್ಥಿ ಅಸೋಸಿಯೇಷನ್ (ಎಎಸ್ಎ) ಪ್ರತಿಭಟನೆಗಿಳಿಯುತ್ತದೆ. ಆ ಪ್ರತಿಭಟನೆ ವೇಳೆ ಹಿಂದೆಂದೂ ಕಾಣದ ಅನೇಕ ಹೊಸ ಮುಖಗಳು ವಿವಿ ಕ್ಯಾಂಪಸ್ಸಿನಲ್ಲಿ ಕಾಣಿಸಿಕೊಳ್ಳುತ್ತವೆ. ಆ ಪ್ರತಿಭಟನೆ ವೇಳೆ ಎಎಸ್ಎ ಮುಖಂಡರು ಮೊಳಗಿಸಿದ ಒಂದು ಘೊಷಣೆಯ ಸ್ಯಾಂಪಲ್ಲನ್ನು ಇಲ್ಲಿ ಉದಾಹರಿಸುತ್ತೇನೆ ನೋಡಿ: ‘ತುಮ್ ಕಿತನೇ ಯಾಕುಬ್ ಮಾರ್ ದೇಂಗೆ? ಹರ್ ಘರ್ಸೆ ಏಕ್ ಏಕ್ ಯಾಕುಬ್ ನಿಕಲೇಗಾ!’ (ನೀವು ಎಷ್ಟು ಮಂದಿ ಯಾಕುಬ್ರನ್ನು ಕೊಲ್ಲುತ್ತೀರಿ? ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬ ಯಾಕುಬ್ ಮತ್ತೆ ಹುಟ್ಟಿ ಬರುತ್ತಾನೆ’). ಹುಟ್ಟಿ ಬರೋದಕ್ಕೆ ಯಾಕುಬ್ ಅಂದರೆ ಸ್ವಾಮಿ ವಿವೇಕಾನಂದ, ರಾಣಾ ಪ್ರತಾಪ್, ಛತ್ರಪತಿ ಶಿವಾಜಿ ಇದ್ದ ಹಾಗೆ ನೋಡಿ! ಈ ಆಘಾತಕಾರಿ ಬೆಳವಣಿಗೆಯನ್ನು ನೋಡಿದ ಅದೇ ವಿಶ್ವವಿದ್ಯಾಲಯದ ಓರ್ವ ಸಾಮಾನ್ಯ ವಿದ್ಯಾರ್ಥಿ ಒಳಗೊಳಗೇ ಕುದ್ದುಹೋಗುತ್ತಾನೆ, ಪ್ರತಿಭಟಿಸುತ್ತಾನೆ. ಆತನ ಹೆಸರು ಸುಶೀಲ್ಕುಮಾರ್. ಈ ಘಟನೆಯನ್ನು ಖಂಡಿಸಿ ಅದೇ ದಿನ ಆತ ಫೇಸ್ಬುಕ್ನಲ್ಲಿ ಕಮೆಂಟ್ ಹಾಕುತ್ತಾನೆ. ಹಾಗಾದರೆ ಸುಶೀಲ್ಕುಮಾರ್ ಮಾಡಿದ್ದು ತಪ್ಪೇನು? ಆತ ಮಾಡಿದ್ದು ದೇಶದ್ರೋಹದ ಕೆಲಸವೇನು? ಮನಸ್ಸಿಗೆ ಒಪ್ಪದ್ದನ್ನು ಪ್ರತಿಭಟಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಆತನಿಗಿಲ್ಲವೇನು? ಆದರೆ, ಎಎಸ್ಎ ಮುಖಂಡರ ಪ್ರಕಾರ ಆತ ಮಹಾಪರಾಧ ಮಾಡಿದ್ದ!
ವಿಶೇಷ ಅಂದರೆ ಎಎಸ್ಎನವರಿಗೆ ಆಗ ಸಹಿಷ್ಣುತೆಯ ನೆನಪೇ ಆಗುವುದಿಲ್ಲ. ಅದೇ ದಿನ ಮಧ್ಯರಾತ್ರಿ ಅಸೋಸಿಯೇಷನ್ನ 30 ಮಂದಿ ಪದಾಧಿಕಾರಿಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಸತಿ ನಿಲಯದಲ್ಲಿದ್ದ ಸುಶೀಲ್ಕುಮಾರ್ನ ಕೊಠಡಿಗೆ ನುಗ್ಗುತ್ತಾರೆ. ಮೂವತ್ತೂ ಮಂದಿ ಮನಬಂದಂತೆ ಸುಶೀಲ್ಗೆ ಥಳಿಸುತ್ತಾರೆ. ಕೊನೆಗೆ ಆತನನ್ನು ವಿಶ್ವವಿದ್ಯಾಲಯದ ಮುಖ್ಯದ್ವಾರದವರೆಗೆ ದರದರನೆ ಎಳೆದು ತರುತ್ತಾರೆ. ವಿವಿ ಸೆಕ್ಯುರಿಟಿ ರೂಮಿನೊಳಕ್ಕೆ ಎಳೆದೊಯ್ದು ಅಲ್ಲಿದ್ದ ಕಂಪ್ಯೂಟರಿನಲ್ಲಿ ಸುಶೀಲ್ಕುಮಾರನ ಫೇಸ್ಬುಕ್ ಅಕೌಂಟನ್ನು ಓಪನ್ ಮಾಡಿಸಿ ಕಮೆಂಟನ್ನು ಬಲವಂತವಾಗಿ ಅಳಿಸಿಹಾಕುವಂತೆ ಮಾಡುತ್ತಾರೆ. ಇದಕ್ಕೆಲ್ಲ ಅಲ್ಲಿನ ಸೆಕ್ಯುರಿಟಿ ಅಧಿಕಾರಿ ಮೂಕಸಾಕ್ಷಿಯಾಗುತ್ತಾರೆ. ನಂತರ ಸುಶೀಲ್ಕುಮಾರ್ನನ್ನು ಹತ್ತಿರದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗುತ್ತದೆ. ಆತನಿಗೆ ಮೂರ್ನಾಲ್ಕು ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರುತ್ತದೆ. ಇದೆಲ್ಲ ಒಂದು ಕತೆ.
ಇಷ್ಟೆಲ್ಲ ಆದ ಬಳಿಕ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬರುತ್ತಾರೆ. ಹೇಗೆ ಬಂದರೋ ಹಾಗೆ ವಾಪಸಾಗುತ್ತಾರೆ. ನೆಪಮಾತ್ರಕ್ಕೂ ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಅಮಾಯಕನಿಗೆ ರಕ್ಷಣೆ ಕೊಡಬೇಕಿದ್ದ ಪೊಲೀಸರು ಮತ್ತು ವಿವಿ ಅಧಿಕಾರಿಗಳು ಹಲ್ಲೆಕೋರರ ಪರವೇ ನಿಂತುಬಿಡುತ್ತಾರೆ. ಆಗ ಘಟನೆ ಕುರಿತು ವಿಚಾರಿಸಲು ಸುಶೀಲನ ತಾಯಿಯೇ ಸ್ವತಃ ಕೆಲ ವಿವಿ ಅಧಿಕಾರಿಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ.
ಆಗ ಇದೇ ಎಎಸ್ಎ ಕಾರ್ಯಕರ್ತರು ಓರ್ವ ಮಹಿಳೆಗೆ ಕೊಡಬೇಕಾದ ಕನಿಷ್ಠ ಗೌರವವನ್ನೂ ಕೊಡದೆ ಆಡಬಾರದ ಮಾತುಗಳನ್ನೆಲ್ಲ ಆಡುತ್ತಾರೆ. ತನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ಧ ವಿವಿ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದು ಖಾತ್ರಿಯಾದಾಗ ಸುಶೀಲನ ತಾಯಿ ನ್ಯಾಯಾಲಯದ ಮೊರೆ ಹೋಗುತ್ತಾರೆೆ. ಘಟನೆಯ ತನಿಖೆ ಮಾಡಿ ಸಂಪೂರ್ಣ ವರದಿ ಕೊಡಲು ನ್ಯಾಯಾಲಯ ವಿವಿಗೆ ಆದೇಶಿಸುತ್ತದೆ. ಆಗ ವಿವಿ ತನಿಖಾ ಸಮಿತಿ ನೇಮಕ ಮಾಡಬೇಕಾಗಿ ಬರುತ್ತದೆ. ಘಟನೆಯ ತನಿಖೆ ನಡೆಸಿದ ವಿಶೇಷ ತನಿಖಾ ಸಮಿತಿ ಸುಶೀಲನ ಮೇಲೆ ಹಲ್ಲೆ ಮಾಡಿದ 30 ಮಂದಿ ವಿದ್ಯಾರ್ಥಿಗಳ ಪೈಕಿ ಪ್ರಮುಖ ಐವರನ್ನು ವಿವಿಯಿಂದ ಉಚ್ಚಾಟನೆ ಮಾಡಲು ಶಿಫಾರಸು ಮಾಡುತ್ತದೆ. ಆ ಪ್ರಕಾರ ಐವರು ವಿದ್ಯಾರ್ಥಿಗಳನ್ನು ವಿವಿಯಿಂದ ಹೊರ ಹಾಕಲಾಗುತ್ತದೆ. ಆಗ ಎಎಸ್ಎ ಮತ್ತೆ ದೊಂಬಿ ಶುರು ಮಾಡುತ್ತದೆ. ಒಂದು ವರ್ಗದ ವಿರುದ್ಧ ವಿವಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಗದ್ದಲ ಶುರುವಾಗುತ್ತದೆ. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗುತ್ತದೆ. ಅದೇ ವೇಳೆ ಅಧಿಕಾರ ವಹಿಸಿಕೊಂಡ ಹಂಗಾಮಿ ಕುಲಪತಿ ಪರಿಸ್ಥಿತಿ ತಿಳಿಗೊಳಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುತ್ತಾರೆ. ಸುಶೀಲನ ಮೇಲೆ ಹಲ್ಲೆ ಮಾಡಿದ್ದ ಐವರು ವಿದ್ಯಾರ್ಥಿಗಳನ್ನು ವಿವಿಯಿಂದ ಹೊರ ಹಾಕುವ ಬದಲು ವಿದ್ಯಾರ್ಥಿ ವಸತಿ ನಿಲಯದಿಂದ ಆಚೆ ಕಳಿಸುವ ತೀರ್ವನಕ್ಕೆ ಬರುತ್ತಾರೆ. ತನಿಖಾ ಸಮಿತಿ ಗುರುತಿಸಿದ ಐವರು ಆರೋಪಿಗಳಲ್ಲಿ ರೋಹಿತ್ ವೇಮುಲ ಪ್ರಮುಖನಾಗಿದ್ದ!
ವಿದ್ಯಾರ್ಥಿ ವಸತಿ ನಿಲಯದಿಂದ ಹೊರಹಾಕಿದ ವಿವಿ ತೀರ್ಮಾನ ಪ್ರಶ್ನಿಸಿ ರೋಹಿತ್ ವೇಮುಲ ಮತ್ತು ಆತನ ಸಹಪಾಠಿಗಳು 2015ರ ಡಿಸೆಂಬರ್ನಲ್ಲಿ ಹೈಕೋರ್ಟ್ ಮೆಟ್ಟಿಲೇರುತ್ತಾರೆ. ಈ ಪ್ರಕರಣದ ವಿಚಾರಣೆಯನ್ನು ಇದೇ ಜನವರಿ 18ರ ನಂತರ ನ್ಯಾಯಾಲಯ ಕೈಗೆತ್ತಿಕೊಳ್ಳುವುದಿತ್ತು. ಆದರೆ ದುರದೃಷ್ಟವಶಾತ್ ರೋಹಿತ್ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗಾಗಿ ಇಡೀ ಪ್ರಕರಣ ಮತ್ತೊಂದು ಮಗ್ಗುಲಿಗೆ ಹೊರಳಿಬಿಡುತ್ತದೆ.
ವಿಚಿತ್ರ ಎಂದರೆ ರೋಹಿತ್ ವೇಮುಲ ಆತ್ಮಹತ್ಯೆಗೂ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ವಿರುದ್ಧ ರೋಹಿತನ ತಾಯಿ ನಡೆಸಿರುವ ಕಾನೂನು ಹೋರಾಟಕ್ಕೂ ತಳುಕು ಹಾಕಲಾಗುತ್ತದೆ. ಎಲ್ಲದಕ್ಕಿಂತ ವಿಪರ್ಯಾಸವೆಂದರೆ ಎಎಸ್ಎ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆಗೊಳಗಾದ ಸುಶೀಲ್ ಕೂಡ ಬಡ ಮಧ್ಯಮ ಹಿಂದುಳಿದ ವರ್ಗಕ್ಕೆ ಸೇರಿದವನು. ಅಷ್ಟೇ ಅಲ್ಲ, ಹೈದರಾಬಾದ್ ವಿವಿಯಲ್ಲಿ ದಲಿತರ ಮೇಲೆ ಹಿಂದೂಪರ ಸಂಘಟನೆಗಳಿಂದ ನಿರಂತರ ಹಲ್ಲೆ ನಡೆಯುತ್ತಿದೆ ಎಂದು ಈಗ ಏನು ಹೇಳಲಾಗುತ್ತಿದೆಯಲ್ಲ ಅದೂ ಸತ್ಯಕ್ಕೆ ದೂರವಾದದ್ದು. ಏಕೆಂದರೆ ರೋಹಿತ್ ವೇಮುಲ ದಲಿತನೇ ಆಗಿರಲಿಲ್ಲ. ಆತನೂ ಹಲ್ಲೆಗೊಳಗಾದ ವಿದ್ಯಾರ್ಥಿ ಸುಶೀಲನ ಹಾಗೆ ಒಬಿಸಿ ವರ್ಗಕ್ಕೆ ಸೇರಿದವನು. ಇನ್ನೂ ಒಂದು ಕಠೋರವಾದ ವಿಚಾರವಿದೆ. ಈ ಹಿಂದೆ ಯುಪಿಎ ಆಡಳಿತದ ಹತ್ತು ವರ್ಷಗಳಲ್ಲಿ 2007ರಿಂದ 2011ರ ಅವಧಿಯಲ್ಲಿ ದೇಶದ ನಾನಾ ವಿವಿಗಳಲ್ಲಿ ಮತ್ತು ಐಐಟಿಗಳಲ್ಲಿ 18 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಗ್ಗೆ ಯಾರೊಬ್ಬರಾದರೂ ಚಕಾರ ಎತ್ತಿದ್ದನ್ನು ಕೇಳಿದ್ದೀರಾ? ಬಾಂಬೆ ಐಐಟಿಯ ಶ್ರೀಕಾಂತ, ಬೆಂಗಳೂರು ಐಐಎಸ್ಸಿಯ ಅಜಯ್ ಎಸ್. ಚಂದ್ರ, ಚಂಡಿಗಢದ ಸರ್ಕಾರಿ ಮೆಡಿಕಲ್ ಕಾಲೇಜಿನ ಜಸ್ಪ್ರೀತ್ ಸಿಂಗ್, ಹೈದರಾಬಾದ್ ವಿವಿಯ ಸೆಂಥಿಲ್ಕುಮಾರ್, ಕಾನ್ಪುರ ಐಐಟಿಯ ಜಿ.ಸುಮನ್ ಹೀಗೆ ಸಾಲು ಸಾಲು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿನ್ ಮತ್ತು ಸುಮನ್ ಎಂಬ ಇಬ್ಬರು ವಿದ್ಯಾರ್ಥಿಗಳನ್ನು ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಗೆ ಸೇರಿದ ಕೆಲ ಗೂಂಡಾಗಳು ಕೇರಳ ಕಾಲೇಜು ಕ್ಯಾಂಪಸ್ನಲ್ಲೇ ಬರ್ಬರವಾಗಿ ಹತ್ಯೆ ಮಾಡುತ್ತಾರೆ. ಆಂಧ್ರಪ್ರದೇಶವೊಂದರಲ್ಲೇ 45 ಮಂದಿ ವಿದ್ಯಾರ್ಥಿಗಳನ್ನು ನಕ್ಸಲೀಯರು ಕೊಂದು ಹಾಕುತ್ತಾರೆ. ಈಗ ಹೇಳಿ… ಸಹಿಷ್ಣುತೆ-ಅಸಹಿಷ್ಣುತೆಯ ಚರ್ಚೆ ಯಾವ ಹಿನ್ನೆಲೆಯಲ್ಲಿ ನಡೆಯಬೇಕು ಅಂತ.
ವಾಸ್ತವದಲ್ಲಿ ಕಾಲೇಜುಗಳಲ್ಲಿ, ವಿವಿಗಳಲ್ಲಿ ಈ ರೀತಿಯ ಗುಂಪುಘರ್ಷಣೆಗಳು ಹಿಂದೆಯೂ ನಡೆದಿವೆ. ಮುಂದೆಯೂ ನಡೆಯಬಹುದು. ಆದರೆ ಅದರೊಂದಿಗೆ ರಾಜಕೀಯ ಹಿತಾಸಕ್ತಿ ಬೆರೆತರೆ ಈಗ ಆಗಿರುವಂಥ ಅನಾಹುತಗಳು, ಗೊಂದಲ ಗೋಜಲುಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಈ ಸತ್ಯ ರಾಹುಲ್ ಗಾಂಧಿ, ಸೀತಾರಾಮ ಯೆಚೂರಿ ಮತ್ತು ಕೇಜ್ರಿವಾಲ್ ಅವರಂಥ ನಾಯಕರಿಗೆ ಅರ್ಥ ಆಗುವುದು ಯಾವಾಗ? ಮನೆಗೆ ಬೆಂಕಿ ಬಿದ್ದಾಗ ಗಳ ಹಿರಿಯುವುದು ಅಂದರೆ ಇದೇ ಏನು?
ಗ್ಲಾಸ್ಗೋ ಬಾಂಬ್ ಸ್ಪೋಟದ ಆರೋಪಿಗಳನ್ನು ಅರೆಸ್ಟ್ ಮಾಡಿದಾಗ ‘ರಾತ್ರಿಯೆಲ್ಲ ನಿದ್ರೆ ಬರಲಿಲ್ಲ’ ಎಂದು ಆಗಿನ ಪ್ರಧಾನಿ ಮನಮೋಹನ ಸಿಂಗ್ ಕಂಬನಿಗರೆದದ್ದನ್ನು ನೋಡಿದ್ದೀರಲ್ಲವೇ? ಕೇಳಿದ್ದೀರಲ್ಲವೇ? ಅದೇ ಪರಂಪರೆಯನ್ನು ರಾಹುಲ್ ಈಗ ಮುಂದುವರಿಸುತ್ತಿದ್ದಾರೇನೋ? ಉತ್ತರಪ್ರದೇಶದ ದಾದ್ರಿ ಗೋಮಾಂಸದ ಗದ್ದಲ ಶುರುವಾದ ಕೂಡಲೇ ರಾಹುಲ್ ಅಲ್ಲಿಗೆ ಭೇಟಿ ನೀಡುತ್ತಾರೆ. ಮೌಲ್ವಿ ಅಖ್ಲ್ಲಾಕನ ಮೇಲೆ ಹಲ್ಲೆ ನಡೆಯುವುದಕ್ಕೂ ಗೋಮಾಂಸದ ವಿವಾದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದು ನಂತರ ಗೊತ್ತಾಗುತ್ತದೆ. ಆದರೆ ಅಷ್ಟೊತ್ತಿಗಾಗಲೇ ಅಸಹಿಷ್ಣುತೆಯ ಬೊಬ್ಬೆ ದೇಶದಲ್ಲಿ ಎಲ್ಲ ಎಲ್ಲೆಗಳನ್ನೂ ಮೀರಿಹೋಗಿರುತ್ತದೆ.
ದೆಹಲಿಯಲ್ಲಿ ಸ್ಲಮ್ ತೆರವು ಮಾಡಿದಾಗ ರಾಹುಲ್ ಗಾಂಧಿ ಭೇಟಿ ನೀಡಿ ಕಂಬನಿ ಮಿಡಿಯಲು ಹೋಗಿ ನಗೆಪಾಟಲಿಗೀಡಾದದ್ದು ಗೊತ್ತೇ ಇದೆಯಲ್ಲ. ಅತಿಕ್ರಮಣ ಮಾಡಿ ನಿರ್ವಿುಸಿಕೊಂಡ ಗುಡಿಸಲು ತೆರವು ಮಾಡಿದ್ದರಿಂದ ಒಂದು ಮಗು ಪ್ರಾಣ ಕಳೆದುಕೊಂಡಿತು ಎಂದು ಅವರು ಕಣ್ಣೀರು ಹರಿಸಿದರು. ಆದರೆ ಅದರ ಬೆನ್ನಲ್ಲೇ ಸತ್ಯ ಹೊರಬರುತ್ತದೆ. ಆ ಮಗು ಗುಡಿಸಲು ತೆರವು ಮಾಡುವುದಕ್ಕಿಂತ ಮೊದಲೇ ಸಾವನ್ನಪ್ಪಿತ್ತು ಎಂಬುದು ಗೊತ್ತಾಗುತ್ತದೆ.
ಹೈದರಾಬಾದ್ನಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ರಾಹುಲ್, ಕೇಜ್ರಿವಾಲ್, ಸೀತಾರಾಮ್ ಯೆಚೂರಿ ಮುಂತಾದವರು ಭೇಟಿ ನೀಡಿ ಪ್ರಚೋದನಕಾರಿ ಮಾತುಗಳನ್ನಾಡಿದ ಬಳಿಕ ವಿದ್ಯಾರ್ಥಿಗಳ ಹೋರಾಟ ಹಿಂಸಾರೂಪಕ್ಕೆ ತಿರುಗುತ್ತದೆ. ಹೈದರಾಬಾದ್ ವಿವಿ ಘಟನೆ ದೆಹಲಿ ಸೇರಿ ದೇಶದ ನಾನಾ ಭಾಗಗಳ ವಿವಿಗಳಲ್ಲಿ ಮಾರ್ದನಿಸುತ್ತದೆ. ಅದರ ಪರಿಣಾಮವೇನು ಕಡಿಮೆಯೇ? ಮಹಾರಾಷ್ಟ್ರದಲ್ಲಿ ಆರೆಸ್ಸೆಸ್ ಶಾಖೆಯ ಮೇಲೆ ದುಷ್ಕರ್ವಿುಗಳು ದಾಳಿ ಮಾಡುತ್ತಾರೆ. ದೆಹಲಿಯಲ್ಲಿ ಎಬಿವಿಪಿ ಕಚೇರಿ ಮೇಲೆ ದಾಳಿ ಮಾಡುತ್ತಾರೆ. ದೂರದ ಮಾತೇಕೆ ಇಲ್ಲೇ ಬೆಂಗಳೂರಲ್ಲಿ ಎಬಿವಿಪಿ ಕಚೇರಿಯ ಮೇಲೆ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ದಾಳಿ ಮಾಡಿ ಕಚೇರಿಯ ಪೀಠೋಪಕರಣಗಳನ್ನು ಧ್ವಂಸ ಮಾಡುತ್ತಾರೆ. ಕಚೇರಿಯಲ್ಲಿದ್ದ ವಿದ್ಯಾರ್ಥಿ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಾರೆ. ಹಾಗಾದರೆ ಇವರೇ ಬೊಬ್ಬೆ ಹೊಡೆಯುವ ಸಹಿಷ್ಣುತೆಯ ಪಾಠ ಅವರದೇ ಸಂಘಟನೆಗಳ ಕಾರ್ಯಕರ್ತರಿಗೆ ಅನ್ವಯಿಸುವುದಿಲ್ಲ ಏಕೆ?
ಬಾಕಿ ಎಲ್ಲ ಹೇಗೂ ಇರಲಿ. ಇತ್ತೀಚೆಗೆ ಪಂಜಾಬ್ನ ಪಠಾಣ್ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದು ಹತ್ತಾರು ಮಂದಿ ವೀರಯೋಧರು ಉಗ್ರರ ಗುಂಡಿಗೆ ಎದೆಯೊಡ್ಡಿ ಅಸುನೀಗಿದರಲ್ಲ. ಅವರಿಗೂ ಮಡದಿ, ಮಕ್ಕಳಿದ್ದಾರೆ. ಇದೇ ರಾಹುಲ್, ಕೇಜ್ರಿವಾಲ್, ಯೆಚೂರಿ ಇವರೆಲ್ಲ ಆ ಕುಟುಂಬದವರ ಕಣ್ಣೀರನ್ನೂ ಒರೆಸಬೇಕಿತ್ತಲ್ಲವೇ?
ಹಾಗೆ ಮಾಡುವುದಿಲ್ಲ. ಏಕೆಂದರೆ ಹಾಗೆ ಮಾಡಿದಲ್ಲಿ ಎಲ್ಲಿ ಯಾಕುಬ್ ಮೆಮನ್, ದಾವೂದ್ ಇಬ್ರಾಹಿಂನ ಬೆಂಬಲಿಗರಿಗೆ ಬೇಸರ ವಾಗಿಬಿಡಬಹುದೋ ಎನ್ನುವ ಆತಂಕವಿರಬೇಕು! ಪಠಾಣ್ಕೋಟ್ ದಾಳಿ ನಂತರ ರಾಹುಲ್ ಸೇರಿದಂತೆ ಬಹುತೇಕ ಕಾಂಗ್ರೆಸ್ ನಾಯಕರು ಇತ್ತೀಚೆಗೆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚುತ್ತಿದೆ ಎಂಬ ಟೀಕೆ ಮಾಡುತ್ತಿದ್ದಾರೆ. ಅದಲ್ಲ ಅಸಲಿ ವಿಚಾರ. ಏನಂದ್ರೆ ನೆಹರು ಮತ್ತು ಅವರ ಸಂತತಿಯವರು ಬಿತ್ತಿದ ಬೀಜ ಈಗ ಫಲ ಕೊಡುತ್ತಿದೆ ಅಷ್ಟೆ. ಈಗ ಆ ವಿಷಯವೂ ರಟ್ಟಾಗಿದೆ. ಬುದ್ಧಿಜೀವಿಗಳು ಮಾತ್ರವಲ್ಲ, ಭಯೋತ್ಪಾದಕರೂ ಅಸಹಿಷ್ಣುಗಳಾಗಿದ್ದಾರೆ. ದೇಶದಲ್ಲಿ ಅಲ್ಲೋಲಕಲ್ಲೋಲ ಮಾಡಿ ಮೋದಿ ಸರ್ಕಾರದ ಪತನಕ್ಕೆ ಸಂಚು ರೂಪಿಸಿದ್ದಾರೆ ಎಂಬುದನ್ನು ಗುಪ್ತಚರ ವರದಿ ಬಹಿರಂಗಪಡಿಸಿದೆಯಲ್ಲ!
ಬೇರೆ ಎಲ್ಲಾ ಏಕೆ? ಕರ್ನಾಟಕದಲ್ಲಿ ಶಂಕಿತ ಉಗ್ರರನ್ನು ಹೈದರಾಬಾದ್, ಎನ್ಐಎ ಪೊಲೀಸರು ಬಂಧಿಸುತ್ತಾರೆ ಎಂದ ಮಾತ್ರಕ್ಕೆ ಕರ್ನಾಟಕದ ಪೊಲೀಸರಿಗೆ ಮಾಹಿತಿ ಇಲ್ಲ, ಇಲ್ಲಿನವರು ಅಸಮರ್ಥರು ಎಂದೇ? ಹಾಗಲ್ಲ, ಪೊಲೀಸರು, ರಕ್ಷಣಾ ಪಡೆಯುವರೆಲ್ಲ ಆಳುವ ಸರ್ಕಾರದ ಆಣತಿಯಂತೆ ಕೆಲಸ ಮಾಡುತ್ತಾರೆ ನೆನಪಿರಲಿ. ಗಣರಾಜ್ಯೋತ್ಸವದಂದು ದೇಶದಲ್ಲಿ ಹಿಂಸಾಚಾರ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿ ಬಂಧಿತರಾದವರು ಅಮಾಯಕರು ಎಂಬ ವರಾತ ಈಗಾಗಲೇ ಶುರುವಾಗಿದೆ. ಮುಂದೆ ಮತ್ತದು ಜೋರಾಗುತ್ತದೆ ನೋಡುತ್ತಿರಿ… ಎಲ್ಲವೂ ಆಯಮ್ಮನ ಇಚ್ಛೆ ಕಣ್ರಿ…