ಹೇಳುವುದು ಒಂದು ಮಾಡುವುದು ಇನ್ನೊಂದು

ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕವೇ ಅಧಿಕಾರಕ್ಕೆ ಬಂದ ಕೇಜ್ರಿವಾಲ್ ಕಳಂಕಿತ ಅಧಿಕಾರಿಯ ಪರ ನಿಂತು ವಕಾಲತ್ತು ವಹಿಸುವುದಕ್ಕಿಂತ ತನಿಖಾ ಸಂಸ್ಥೆ ಸೂಕ್ತ ತನಿಖೆ ನಡೆಸಿ ವಾಸ್ತವಾಂಶವನ್ನು ಆದಷ್ಟು ಶೀಘ್ರ ಸಾರ್ವಜನಿಕರ ಮುಂದಿಡಲಿ ಎಂದು ಹೇಳಿದ್ದರೆ ಜಾಣತನದ ಮತ್ತು ಜವಾಬ್ದಾರಿಯುತ ನಡವಳಿಕೆ ಆಗುತ್ತಿತ್ತು.

MODIarvind-kejriwalತುಂಬಾ ದೂರ ಹೋಗುವುದು ಯಾಕೆ? ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆಯನ್ನು, ಜಾರಿ ನಿರ್ದೇಶನಾಲಯದಂತಹ ವ್ಯವಸ್ಥೆಯನ್ನು ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಕೇಂದ್ರದಲ್ಲಿ ಕಾಲಾನುಕಾಲಕ್ಕೆ ಬಂದ ಸರ್ಕಾರಗಳು ಯಥೇಚ್ಛವಾಗಿ ಬಳಸಿಕೊಂಡವು ಎಂಬ ಆರೋಪಗಳಿಗೆ ನಮ್ಮ ಕರ್ನಾಟಕದಲ್ಲೂ ಕೆಲ ಉದಾಹರಣೆಗಳು ಸಿಗುತ್ತವೆ. ಆರೋಪದಲ್ಲಿ ನಿಜ ಎಷ್ಟು ಸುಳ್ಳೆಷ್ಟು ಎಂಬುದು ಬೇರೆ ವಿಚಾರ. ಒಟ್ಟಿನಲ್ಲಿ ಆಗಾಗ ಆರೋಪಗಳಂತೂ ಇದ್ದೇ ಇದ್ದವು. ಆ ರೀತಿ ಮೊದಲು ನೆನಪಾಗುವುದು ಕ್ಲಾಸಿಕ್ ಕಂಪ್ಯೂಟರ್ ಹಗರಣ. ಸಾರೆಕೊಪ್ಪ ಬಂಗಾರಪ್ಪ ಅವರು 1990ರಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುವ ಹೊತ್ತಿಗೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೇ ಹಲವಾರು ಬಾರಿ ತೊಡೆ ತಟ್ಟಿದ್ದರು. ಹಿಡಿದ ಹಠ ಸಾಧಿಸಿಯೇ ತೀರುವ ಅವರ ಜನ್ಮಜಾತ ಸ್ವಭಾವದ ಪರಿಣಾಮ ಅದು. ಬಂಗಾರಪ್ಪ ಎಂದಾಕ್ಷಣ ನಮಗೆ ಈಗಲೂ ಬಡಬಗ್ಗರ ತಲೆ ಮೇಲೊಂದು ಸೂರು ಕಲ್ಪಿಸುವ ‘ಆಶ್ರಯ’, ಮೂವತ್ತಾರು ಸಾವಿರ ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಿದ ‘ಆರಾಧನಾ’ ಯೋಜನೆಗಳು ನೆನಪಾಗುತ್ತವೆ. ಇಂಥ ಕಾರ್ಯಕ್ರಮಗಳಿಂದಾಗಿ ಮುಖ್ಯಮಂತ್ರಿಯಾದ ಎರಡೇ ವರ್ಷದಲ್ಲಿ ಅವರು ಅಪಾರ ಸುದ್ದಿ ಮಾಡಿದ್ದರು. ಮುಂದೆ ಕಾವೇರಿ ವಿವಾದವನ್ನು ನಿರ್ವಹಿಸುವಲ್ಲಿ ಎಡವಿದರು ಎಂಬ ನೆಪದಲ್ಲಿ ಬಂಗಾರಪ್ಪ ಅವರನ್ನು 1992ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ವನಿಸಿತು. ಅವರ ಸ್ಥಾನದಲ್ಲಿ ವೀರಪ್ಪ ಮೊಯ್ಲಿ ಪ್ರತಿಷ್ಠಾಪನೆಗೊಂಡರು. ಆ ವೇಳೆ ಬಂಗಾರಪ್ಪ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಆ ಕಾರಣಕ್ಕಾಗಿಯೋ ಏನೋ ಅವರ ಪ್ರಭಾವಳಿಯನ್ನು ಮಸುಕು ಮಾಡುವಂತಹ ಹಲವಾರು ಅಕ್ರಮಗಳ ಆರೋಪಗಳು ಕೇಳಿಬಂದವು. ಆ ಪೈಕಿ ಬಂಗಾರಪ್ಪನವರನ್ನು ಹೆಚ್ಚು ಹೈರಾಣ ಮಾಡಿದ್ದು ಕ್ಲಾಸಿಕ್ ಕಂಪ್ಯೂಟರ್ ಹಗರಣ. ಆ ಪ್ರಕರಣದಲ್ಲಿ ಅವರು ಸಿಬಿಐ ತನಿಖೆಯನ್ನೂ ಎದುರಿಸಬೇಕಾಗಿ ಬಂತು. ಹಾಗೆ ನೋಡಿದರೆ ಅದು ಸಿಬಿಐ ತನಿಖೆಗೆ ವಹಿಸುವಂಥ ಪ್ರಕರಣವೂ ಆಗಿರಲಿಲ್ಲ. ಅವ್ಯವಹಾರ ಆರೋಪದ ಮೊತ್ತವೂ ಬಹಳ ಸಣ್ಣದು. ಆದರೂ ಆರೋಪ, ವಿಚಾರಣೆ ಇವೆಲ್ಲ ಬಹಳ ವರ್ಷಗಳ ಕಾಲ ಬಂಗಾರಪ್ಪ ದಣಿಯುವಂತೆ ಮಾಡಿದವು. ಕೊನೆಗೆ ಅವರಿಗೆ ಸುಪ್ರೀಂಕೋರ್ಟ್​ನಲ್ಲಿ ಪರಿಹಾರ ಸಿಕ್ಕಿತು. ಅಷ್ಟೊತ್ತಿಗೆ ಅವರು ರಾಜಕೀಯವಾಗಿ ಸಾಕಷ್ಟು ದುರ್ಬಲರಾಗಿಹೋಗಿದ್ದರು. ಹಾಗಾದರೆ ಬಂಗಾರಪ್ಪನವರೊಬ್ಬರನ್ನು ಬಿಟ್ಟು ಬೇರೆಲ್ಲ ಕಾಂಗ್ರೆಸ್ ನಾಯಕರು ಸತ್ಯಹರಿಶ್ಚಂದ್ರನ ಅಪರಾವತಾರದಂತಿದ್ದರು ಅಂತ ಅರ್ಥವೇ?

ತೀರಾ ಇತ್ತೀಚಿನ ದಿನಗಳಲ್ಲಿ ನಮಗೆ ಇನ್ನೂ ಎರಡು ಪ್ರಕರಣಗಳ ಉದಾಹರಣೆ ಸಿಗುತ್ತದೆ. ಒಬ್ಬರು ಗಾಲಿ ಜನಾರ್ದನ ರೆಡ್ಡಿ ಮತ್ತೊಬ್ಬರು ಮಾಜಿ ಮುಖ್ಯಮಂತ್ರಿ

ಬಿ.ಎಸ್. ಯಡಿಯೂರಪ್ಪ. ರಾಜಕೀಯ ಶಕ್ತಿ ಸಾಮರ್ಥ್ಯದಿಂದಾಗಿ ಯಡಿಯೂರಪ್ಪ ಮತ್ತು ಹಣ ಬಲದಿಂದಾಗಿ ಜನಾರ್ದನ ರೆಡ್ಡಿ ರಾಜ್ಯದಲ್ಲಿ ಕಾಂಗ್ರೆಸ್​ಗೆ ಸಿಂಹಸ್ವಪ್ನವಾಗಿಬಿಟ್ಟಿದ್ದರು. ಈ ಇಬ್ಬರನ್ನು ಮಟ್ಟ ಹಾಕದಿದ್ದರೆ ಕರ್ನಾಟಕ ಮಾತ್ರವಲ್ಲ, ನೆರೆಯ ಆಂಧ್ರದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬ ವಾತಾವರಣ ಸೃಷ್ಟಿಯಾಗಿತ್ತು. ಅದಕ್ಕೆ ಸರಿಯಾಗಿ ಜನಾರ್ದನ ರೆಡ್ಡಿಯವರ ಅಕ್ರಮ ಗಣಿಗಾರಿಕೆ ಹಗರಣ ಮತ್ತು ಯಡಿಯೂರಪ್ಪ ಸೃಷ್ಟಿಸಿಕೊಂಡ ಅಕ್ರಮ ಡಿನೋಟಿಫಿಕೇಶನ್ ಹಾಗೂ ದೇಣಿಗೆ ಸ್ವೀಕಾರದ ಪ್ರಕರಣಗಳು ಕಾಂಗ್ರೆಸ್​ಗೆ ಬ್ರಹ್ಮಾಸ್ತ್ರದಂತೆ ಸಿಕ್ಕಿದವು. ಇಲ್ಲಿ ಪ್ರಕರಣದ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವುದು ಉದ್ದೇಶವಲ್ಲ. ಒಂದು ಸಂದರ್ಭವನ್ನು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಮುಖೇನ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಹೇಗೆ ಬಳಸಿಕೊಂಡಿತು ಎಂಬುದನ್ನು ಮಾತ್ರ ನಾವಿಲ್ಲಿ ಗಮನಿಸಿದರೆ ಸಾಕು. ತನಿಖಾ ಸಂಸ್ಥೆ ಮಾತ್ರವಲ್ಲ ರಾಜ್ಯಪಾಲರ ಕಚೇರಿಯೂ ಕಾಂಗ್ರೆಸ್ ನೆರವಿಗೆ ಬಂತು ಎಂದರೆ ತಪ್ಪಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರ ಒಂದು ತೀರ್ವನದಿಂದ ಕ್ಷಣಮಾತ್ರದಲ್ಲಿ ಯಡಿಯೂರಪ್ಪ ಜೈಲಿಗೆ ಹೋಗಬೇಕಾಗಿ ಬಂತು. ಸಿಬಿಐ ಜನಾರ್ದನ ರೆಡ್ಡಿಯವರನ್ನು ವಶಕ್ಕೆ ಪಡೆಯಿತು. ಅಂದುಕೊಂಡಂತೆ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿತು. ಅದಕ್ಕಿಂತ ಮುಖ್ಯವಾಗಿ ಆ ಒಂದು ಬೆಳವಣಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ಮಟ್ಟಕ್ಕೆ ಬಲವರ್ಧನೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿತು. ಈಗ ನ್ಯಾಯಾಲಯ ಯಡಿಯೂರಪ್ಪ ಅವರ ಮೇಲಿನ ಎಲ್ಲ ಮೊಕದ್ದಮೆಗಳನ್ನು ರದ್ದುಮಾಡಿದೆ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲರು ನಿಯಮ ಬಾಹಿರವಾಗಿ ಅನುಮತಿ ನೀಡಿದ್ದರು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಬಹುತೇಕ ಪ್ರಕರಣಗಳಲ್ಲಿ ಜನಾರ್ದನ ರೆಡ್ಡಿ ಅವರಿಗೂ ಜಾಮೀನು ಸಿಕ್ಕಿದೆ. ಈ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳ ಕಾರ್ಯವೈಖರಿ, ರಾಜ್ಯಪಾಲರ ತೀರ್ವನಗಳನ್ನೆಲ್ಲ ಏನೆಂದು ವ್ಯಾಖ್ಯಾನಿಸಬಹುದು?

ಇದೇ ತೆರನಾದ ಸಂದಿಗ್ಧವನ್ನು ತಂದಿಡುವ ಮತ್ತೊಂದು ಪ್ರಕರಣ ಎಂದರೆ ನೆರೆಯ ಆಂಧ್ರಪ್ರದೇಶದ ಜಗನ್ ರೆಡ್ಡಿ ಅವರ ವಿಚಾರಣೆ, ಜೈಲು, ಬೇಲು ಇತ್ಯಾದಿಗಳ ಕುರಿತಾದ್ದು. ಅಕ್ರಮ ಆಸ್ತಿ ಗಳಿಕೆ ಆರೋಪದಡಿ 2011ರಲ್ಲಿ ಅವರನ್ನು ಬಂಧಿಸಿ ಸಿಬಿಐ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಆಧಾರ ಏನು? 2004ರ ಚುನಾವಣೆ ವೇಳೆ ಜಗನ್​ವೋಹನ ರೆಡ್ಡಿ ಅಫಿಡವಿಟ್ಟಿನಲ್ಲಿ ಘೊಷಿಸಿದ್ದ ಆಸ್ತಿಗೂ ಅವರು ಆ ನಂತರ ಗಳಿಸಿದ ಆಸ್ತಿಗೂ ಅಜಗಜಾಂತರವಿದೆ ಎಂಬುದು. ಹಾಗಾದರೆ ಅಕ್ರಮ ಆಸ್ತಿ ಗಳಿಕೆ ವಿಚಾರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದ ನಂತರವೇ ಗೊತ್ತಾಯಿತೇನು? ಜಗನ್ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೂ, ಕಾಂಗ್ರೆಸ್ ತೊರೆದು ವೈಎಸ್​ಆರ್ ಕಾಂಗ್ರೆಸ್ ಸ್ಥಾಪಿಸಿದ್ದಕ್ಕೂ ಮತ್ತು ಸಿಬಿಐ ತನಿಖೆಗೂ ಕಾಕತಾಳೀಯ ಸಂಬಂಧ ಮಾತ್ರ ಎಂದು ಅರ್ಥವ್ಯಾಖ್ಯಾನ ಮಾಡಿದರೆ ಸಾಕೇ? ಇಲ್ಲಿ ಎಲ್ಲವೂ ನಿಜವೆ. ಸಂದರ್ಭಾನುಸಾರ ಸನ್ನಿವೇಶಗಳು, ಪಾತ್ರಧಾರಿಗಳು ರೂಪುಗೊಂಡವು ಅಷ್ಟೆ.

2008ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ಮಾಲೇಗಾಂವ್​ನಲ್ಲಿ ಬಾಂಬ್ ಸ್ಫೋಟ ಸಂಭವಿಸಿತು. ಅದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ಅವರು ಒಂದು ಹೊಸ ಪದಪ್ರಯೋಗವನ್ನು ಆರಂಭಿಸಿದರು. ಅದು ‘ಹಿಂದು ಟೆರರಿಸಂ’ ಎಂಬುದು. ಅವರ ಈ ಮಾತಿಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಚಿದಂಬರಂ ಹೇಳಿಕೆ ಪ್ರಕಟವಾಗಿ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರ ಎಟಿಎಸ್(ಭಯೋತ್ಪಾದನಾ ನಿಗ್ರಹ ದಳ) ಸಾಧಿ್ವ ಪ್ರಜ್ಞಾ ಸಿಂಗ್ ಮತ್ತು ಸೇನಾ ಅಧಿಕಾರಿ ಕರ್ನಲ್ ಶ್ರೀಕಾಂತ ಪುರೋಹಿತ ಅವರನ್ನು ವಶಕ್ಕೆ ಪಡೆಯುತ್ತದೆ. ತನಿಖೆ ವೇಳೆ ಬಲವಂತದ ಹೇಳಿಕೆ ಪಡೆದುಕೊಳ್ಳಲು ತನಿಖಾಧಿಕಾರಿಗಳು ಚಿತ್ರಹಿಂಸೆ ಕೊಟ್ಟ ಪರಿಣಾಮ ಪ್ರಜ್ಞಾ ಸಿಂಗ್ ಸೊಂಟದಿಂದ ಕೆಳಭಾಗಕ್ಕೆ ಲಕ್ವ ಹೊಡೆಯುತ್ತದೆ. ಈ ಸಂಗತಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೇ ಹೇಳಿದೆ ಮತ್ತು ತನಿಖಾಧಿಕಾರಿಗಳಿಗೆ ಛೀಮಾರಿ ಹಾಕಿದೆ ಕೂಡ. ಏನೇ ಮಾಡಿದರೂ ಮಾಲೇಗಾಂವ್ ಸ್ಪೋಟಕ್ಕೂ ಸಾಧಿ್ವ ಪ್ರಜ್ಞಾ ಸಿಂಗ್ ಅವರಿಗೂ ನಂಟಿರುವ ಒಂದೇ ಒಂದು ಸಾಕ್ಷ್ಯ ಪುರಾವೆ ಯಾವುದೂ ಸಿಗುವುದಿಲ್ಲ. ವಿಚಿತ್ರ ಎಂದರೆ ಸಾಧಿ್ವೆ ಈಗಲೂ ಜೈಲಿಂದ ಮುಕ್ತಿ ಇಲ್ಲ. ಅವರು ಪೊಲೀಸ್ ವಶದಲ್ಲಿ ನರಕಯಾತನೆ ಅನುಭವಿಸುತ್ತಲೇ ಇದ್ದಾರೆ.

ಹಿಂದು ಟೆರರಿಸಂ ವಾದವನ್ನು ಸಾಬೀತು ಮಾಡಲು ಕೇಂದ್ರ ತನಿಖಾಧಿಕಾರಿಗಳು ಹರಸಾಹಸ ಪಟ್ಟ ಮತ್ತೊಂದು ಉದಾಹರಣೆ ಸ್ವಾಮಿ ಅಸೀಮಾನಂದ ಅವರ ಪ್ರಕರಣ. 2007ರಲ್ಲಿ ಹೈದರಾಬಾದಿನ ಮೆಕ್ಕಾ ಮಸೀದಿ ಸ್ಫೋಟ ಸಂಭವಿಸುತ್ತದೆ. ಆ ಸ್ಪೋಟದ ಸಂದರ್ಭದಲ್ಲೂ ‘ಹಿಂದು ಟೆರರಿಸಂ’ ವಾದವನ್ನೇ ಕೇಂದ್ರ ಸರ್ಕಾರ ಮುಂದಿಡುತ್ತದೆ. ಅದಕ್ಕೆ ಪೂರಕವಾಗಿ, ಗುಡ್ಡಗಾಡು ಪ್ರದೇಶದಲ್ಲಿ ಮತಾಂತರದ ವಿರುದ್ಧ ಹಾಗೂ ಶಿಕ್ಷಣ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡ ಸ್ವಾಮಿ ಅಸೀಮಾನಂದ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ. ‘ಒಮ್ಮೆ ನಾವು ಹೇಳಿದ್ದನ್ನು ಒಪ್ಪಿಕೊಂಡು ಬಿಡಿ ಸಾಕು’ ಎಂದು ಸಿಬಿಐ ವಿಚಾರಣಾಧಿಕಾರಿಗಳು ಅವರ ಮೇಲೆ ಒತ್ತಡ ಹಾಕುತ್ತಾರೆ. ಹಾಗಂತ ಅಸೀಮಾನಂದ ಅವರು ನ್ಯಾಯಾಲಯಗಳಲ್ಲಿ ಪದೇಪದೆ ಹೇಳಿದ್ದಾರೆ. ಮಾಡದ ತಪ್ಪನ್ನು ಒಪ್ಪಿಕೊಳ್ಳಲು ತನಿಖಾಧಿಕಾರಿಗಳು ವಿಧವಿಧವಾದ ಒತ್ತಡ ಹಾಕಿದರು. ಆಮಿಷ ಎಲ್ಲವನ್ನೂ ಒಡ್ಡಿ್ಡರೂ ಅಸೀಮಾನಂದರು ಆತ್ಮಸಾಕ್ಷಿ ವಿರುದ್ಧ ಹೇಳಿಕೆ ನೀಡಲು ಒಪ್ಪದೇ ಹೋದಾಗ ಅವರಿಗೆ ಚಿತ್ರಹಿಂಸೆ ನೀಡಿದರು. ಆದರೂ ಜಗ್ಗಲಿಲ್ಲ. ಇತ್ತೀಚೆಗೆ ಅವರು ಜಿಲ್ಲಾ ನ್ಯಾಯಾಲಯದಲ್ಲಿ ಖುಲಾಸೆಗೊಂಡು ಜೈಲಿಂದ ಬಿಡುಗಡೆ ಹೊಂದಿದ್ದಾರೆ. ಆದರೆ ಸರ್ಕಾರ ಮೇಲ್ಮನವಿ ಹೋಗಿದೆ.

ಸಿಬಿಐ ಮತ್ತು ತನಿಖಾ ಆಯೋಗಗಳು ಅತಿ ಹೆಚ್ಚು ವಿವಾದಾತ್ಮಕವಾಗಿ ನಡೆದುಕೊಂಡದ್ದು ಗೋಧ್ರಾ ಹತ್ಯಾಕಾಂಡದ ವಿಚಾರಣೆ ಸಂದರ್ಭದಲ್ಲಿ ಮತ್ತು ಗುಜರಾತದಲ್ಲಿ ನಡೆದ ಇಷ್ರತ್ ಜಹಾನ್ ಎನ್​ಕೌಂಟರ್ ಪ್ರಕರಣದ ವಿಚಾರದಲ್ಲಿ. ಈ ಎರಡೂ ಪ್ರಕರಣಗಳಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ, ಗೃಹ ಮಂತ್ರಿ ಮತ್ತು ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸಿಲುಕಿಸುವ ಯತ್ನವನ್ನು ಸಿಬಿಐ ಸಾಕಷ್ಟು ಬಾರಿ ಮಾಡಿತು ಎಂಬ ಬಲವಾದ ಆರೋಪವಿದೆ. ವಿವಿಧ ತನಿಖಾ ಆಯೋಗಗಳ ಮೂಲಕವೂ ಹಾಗೆ ಮಾಡಿಸಲಾಯಿತು. ಕೊನೆಗೂ ಆಗಿದ್ದೇನು? ಇಷ್ರತ್ ಜಹಾನ್ ಲಷ್ಕರ್ ಎ ತೋಯ್ಬಾ ಉಗ್ರಗಾಮಿಯಾಗಿದ್ದಳು ಎಂಬುದು ಸಾಬೀತಾಯಿತು. ಆ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರಾಮಾಣಿಕ, ದಕ್ಷ ಅಧಿಕಾರಿಗಳು ಅಂತೂ ಹತ್ತು ಹನ್ನೆರಡು ವರ್ಷಗಳ ತರುವಾಯ ಜಾಮೀನು ಭಾಗ್ಯ ಪಡೆದಿದ್ದಾರೆ. ಇದರಿಂದ ಯಾವ ಸಂದೇಶ ರವಾನೆಯಾಗುತ್ತದೆ? ಪ್ರೇರಣಾಕರ್ತರು ಯಾರು?

ತನಿಖಾ ಆಯೋಗಗಳ ವಿಷಯದಲ್ಲಿ ಓರ್ವ ಮುಖ್ಯಮಂತ್ರಿ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಮಾಯಾ ಕೊಡ್ನಾನಿ ಪ್ರಕರಣ ಒಂದು ಉತ್ತಮ ನಿದರ್ಶನ ಆದೀತು. ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಅವರ ಸಂಪುಟದಲ್ಲಿ ಮಾಯಾ ಕೊಡ್ನಾನಿ ಓರ್ವ ದಕ್ಷ ಸಚಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರು. ನರೋಡಾ ಕ್ಷೇತ್ರದಿಂದ ಮೂರು ಬಾರಿ ಗೆಲುವು ಪಡೆದ ಶಾಸಕಿ. ಅವರ ಜನಪ್ರಿಯತೆ ಎಷ್ಟಿತ್ತೆಂದರೆ ವಿಧಾನಸಭಾ ಚುನಾವಣೆಯಲ್ಲಿ ಒಮ್ಮೆ ಎಂಭತ್ತು ಸಾವಿರ, ಮತ್ತೊಮ್ಮೆ ಒಂದು ಲಕ್ಷ, ಮಗದೊಮ್ಮೆ ಒಂದು ಲಕ್ಷ ನಲ್ವತ್ತು ಸಾವಿರ ಮತಗಳ ಭಾರಿ ಅಂತರದಲ್ಲಿ ಗೆದ್ದಿದ್ದರು. ಆದರೆ ನರೋಡಾ ಪಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿ ಸಿಬಿಐ ಮಾಯಾ ಕೊಡ್ನಾನಿಯವರನ್ನು ಬಂಧಿಸಿದಾಗ ಮುಖ್ಯಮಂತ್ರಿಯಾಗಿದ್ದ ಮೋದಿ ತುಟಿಪಿಟಕ್ಕೆನ್ನಲಿಲ್ಲ. ಪತ್ರಕರ್ತರು ಬಲವಂತವಾಗಿ ಕೇಳಿದಾಗ ‘ಕಾನೂನು ಅದರ ಇತಿಮಿತಿಯಲ್ಲಿ ಕ್ರಮ ಕೈಗೊಳ್ಳುತ್ತದೆ’ ಎಂದಷ್ಟೇ ಹೇಳಿದ್ದರು. ಹಾಗಾದರೆ ಆದರ್ಶ ಯಾವುದು?

ಈಗ ದ್ವೇಷ ರಾಜಕಾರಣದ ಗದ್ದಲದ ವಿಷಯಕ್ಕೆ ಬರೋಣ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಬೆಂಬಲಿಗರು ಟೀಕೆ ಮಾಡುತ್ತಿರುವುದು ಯಾವ ಕಾರಣಕ್ಕೆ? ಕೇಜ್ರಿವಾಲ್ ಸರ್ಕಾರದ ಓರ್ವ ಮಂತ್ರಿ ಮತ್ತು ಅವರ ಪಕ್ಷದ ಮತ್ತಿಬ್ಬರು ಶಾಸಕರು ನಕಲಿ ಡಿಗ್ರಿ ಪ್ರಮಾಣಪತ್ರ ಪಡೆದ ಗುರುತರ ಅಪರಾಧ ಪ್ರಕರಣದಲ್ಲಿ ಕೋರ್ಟ್ ಕಟಕಟೆ ಏರಿ ಹಿನ್ನಡೆ ಅನುಭವಿಸುತ್ತಾರೆ. ಅದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನು ಬಂತು?

ಹಾಗೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಸಿಬಿಐ ತನಿಖೆಗೆ ಕೈಗೆತ್ತಿಕೊಂಡಿರುವ ಪ್ರಮುಖ ಪ್ರಕರಣಗಳು ಎರಡೇ ಎರಡು. ಮೊದಲನೆಯದ್ದು ತೃಣಮೂಲ ಕಾಂಗ್ರೆಸ್​ನ ಘಟಾನುಘಟಿ ನಾಯಕರೇ ಶಾಮೀಲಾಗಿರುವ ಬಹು ಕೋಟಿ ವಂಚನೆಯ ಶಾರದಾ ಚಿಟ್ ಫಂಡ್ ಹಗರಣ. ಮತ್ತೊಂದು ಇದೀಗ ವಿವಾದಕ್ಕೆ ಕಾರಣವಾಗಿರುವ ದೆಹಲಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಮೇಲಿನ ಭ್ರಷ್ಟಾಚಾರ ಆರೋಪ ಪ್ರಕರಣ. ಅದರಲ್ಲೂ ರಾಜೇಂದ್ರಕುಮಾರ್ ವಿರುದ್ಧ ಟ್ರಾನ್​ಪರೆನ್ಸಿ ಇಂಟರ್​ನ್ಯಾಷನಲ್ ಸಂಸ್ಥೆ ಎಂಟು ತಿಂಗಳ ಹಿಂದೇ ಭ್ರಷ್ಟಾಚಾರದ ದೂರು ನೀಡಿದೆ. ಆ ದೂರನ್ನು ಕೇಜ್ರಿವಾಲ್ ಇಷ್ಟು ದಿನ ಯಾತಕ್ಕೆ ಅಡಿಯಲ್ಲಿ ಇಟ್ಟುಕೊಂಡು ಕುಳಿತರೋ ಕಾಣೆ. ಅಷ್ಟಕ್ಕೂ ಓರ್ವ ಆರೋಪಿ ಅಧಿಕಾರಿಯ ತನಿಖೆ ಮಾಡಿದರೆ ಏನು ತಪ್ಪು?

ಕೇಜ್ರಿವಾಲ್ ರಾಜಕೀಯಕ್ಕೆ ಬಂದದ್ದೇ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ. ಜನಲೋಕಪಾಲ ಜಾರಿಗೆ ತಂದು ಪ್ರಧಾನಿ ಮತ್ತು ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಅದರ ವ್ಯಾಪ್ತಿಗೆ ಬರಬೇಕೆಂಬುದು ಅವರ ಧ್ಯೇಯ ಮತ್ತು ಸಂಕಲ್ಪ. ಕೇಜ್ರಿವಾಲ್ ಬಯಕೆ ಈಡೇರಲಿ ಎಂದು ದೆಹಲಿ ಜನರು ಅಭೂತಪೂರ್ವ ಬಹುಮತ ನೀಡಿದರು. ಅಧಿಕಾರಕ್ಕೆ ಬಂದ ಮೊದಲ ದಿನವೇ ಸಹಾಯವಾಣಿ ಆರಂಭಿಸಿ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದರು. ಈಗ ಆಗುತ್ತಿರುವುದೇನು? ಓರ್ವ ಕಳಂಕಿತ ಅಧಿಕಾರಿಯ ವಿರುದ್ಧ ತನಿಖೆಗೆ ಮುಂದಾದರೆ ದ್ವೇಷ ರಾಜಕಾರಣ ಎನ್ನುತ್ತಿದ್ದಾರೆ. ಅದೂ ಒತ್ತಟ್ಟಿಗಿರಲಿ, ಮೋದಿಯವರನ್ನು ಟೀಕಿಸುವ ಭರದಲ್ಲಿ ದೇಶದ ಪ್ರಧಾನಿ ಮತ್ತು ಒಂದು ರಾಜ್ಯದ ಮುಖ್ಯಮಂತ್ರಿ ಪದವಿಯ ಘನತೆ ಗೌರವಗಳನ್ನಾದರೂ ಗಾಳಿಗೆ ತೂರಬಾರದಿತ್ತಲ್ಲವೇ? ಎಂಥಾ ವಿಪರ್ಯಾಸ ನೋಡಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top