ಅನುಕಂಪಕ್ಕಾಗಿ ಇಂಥ ಕಂಪನ ಸರಿಯೇ?

 

national_herald
national_herald

ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತು ಅದೇ ವೇಳೆ ತನ್ನ ಪರ ಅನುಕಂಪ ಗಿಟ್ಟಿಸಿಕೊಳ್ಳುವ ಧಾವಂತದ ನಡುವೆ ಅಲ್ಪಸ್ವಲ್ಪ ನಂಬಿಕೆ ಉಳಿಸಿಕೊಂಡಿರಬಹುದಾದ ನ್ಯಾಯಾಂಗ ವ್ಯವಸ್ಥೆಗೇ ಕಳಂಕ ತರುತ್ತಿದ್ದೇವೆ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆತಂತೆ ತೋರುತ್ತಿದೆ.

ಕಾಂಗ್ರೆಸ್ ಯಾಕೆ ಇಂಥ ಪ್ರಮಾದವನ್ನು ಮತ್ತೆ ಮತ್ತೆ ಮಾಡುತ್ತಿದೆ? ಹತಾಶೆಯೇ, ಅಸಹಿಷ್ಣುತೆಯೇ, ಅಪ್ರಬುದ್ಧತೆಯೇ, ಅನುಕಂಪ ಗಿಟ್ಟಿಸಿಕೊಳ್ಳುವ ಅಗ್ಗದ ಆಲೋಚನೆಯೇ… ಯಾವುದು? ಈ ಎಲ್ಲವೂ ಮೇಳೈಸಿರುವಂತೆ ತೋರುತ್ತಿದೆ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಹೈಕಮಾಂಡನ್ನು ಪ್ರಶ್ನೆ ಮಾಡಲೇಬಾರದು ಅಂತ ಬೇಕಾದರೆ ಫರ್ವನು ಹೊರಡಿಸಿಕೊಳ್ಳಲಿ. ಹಾಗೆನೋಡಿದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಒಂದು ರಾಜಕೀಯ ಪಕ್ಷ ಹಾಗೆ ನಡೆದುಕೊಳ್ಳುವುದೂ ಪ್ರಮಾದವೇ. ಆದರೂ ಅದು ಆ ಪಕ್ಷದ ಆಂತರಿಕ ವಿಚಾರ ಬಿಡಿ ಎಂದು ಸುಮ್ಮನಾಗಬಹುದು. ಆದರೆ, ಉಚ್ಚ ನ್ಯಾಯಾಲಯವೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮತ್ತು ಅವರ ಸುಪುತ್ರ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಲೇಬಾರದು ಎಂದರೆ ಇದು ಯಾವ ಸೀಮೆಯ ನ್ಯಾಯ ಸ್ವಾಮಿ?

ನಾನಿಲ್ಲಿ ಪ್ರಸ್ತಾಪಿಸುತ್ತಿರುವುದು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆಸ್ತಿ ಕಬಳಿಕೆ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಸಂಸತ್ ಕಲಾಪದ ಅಮೂಲ್ಯ ವೇಳೆಯನ್ನು ಹಾಳುಮಾಡುತ್ತಿರುವ ವಿಚಾರವನ್ನು.

ಮೊದಲನೇ ಪ್ರಶ್ನೆ: ಸೋನಿಯಾ, ರಾಹುಲ್ ಆದಿಯಾಗಿ ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ಮಾಡುತ್ತಿರುವ ಗದ್ದಲದಲ್ಲಿ ಸಾರ್ವಜನಿಕ ಹಿತಾಸಕ್ತಿಯೇನಾದರೂ ಇದೆಯೇ? ಎಳ್ಳಷ್ಟೂ ಇಲ್ಲ. ಇರುವುದು ಕಾಂಗ್ರೆಸ್ ಅಧಿನಾಯಕಿ ಮತ್ತು ಅವರ ಪುತ್ರನ ಹಿತಾಸಕ್ತಿ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗಾದರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಇದಕ್ಕಿಂತ ಮಹತ್ವದ ಬೇರೆ ವಿಷಯ ಇಲ್ಲವೇ?

ಎರಡನೇ ಪ್ರಶ್ನೆ: ಅದಕ್ಕಿಂತ ಮೂಲಭೂತವಾದದ್ದು ಮತ್ತು ಮುಖ್ಯವಾದದ್ದು ನ್ಯಾಷನಲ್ ಹೆರಾಲ್ಡ್ ಆಸ್ತಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಲು ಸೂಚಿಸಿ ದೆಹಲಿ ಹೈಕೋರ್ಟ್ ಸೋನಿಯಾ ಮತ್ತು ರಾಹುಲ್​ಗೆ ಸಮನ್ಸ್ ಕಳಿಸಿರುವುದಕ್ಕೂ ಹಾಗೂ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೂ ಏನಾದರೂ ಸಂಬಂಧ ಇರಲು ಸಾಧ್ಯವೇ? ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂತಹ ಒಂದು ಚಮತ್ಕಾರಕ್ಕೆ ಅವಕಾಶ ಇದೆಯೇ ಎನ್ನುವುದು. ಸ್ವಾತಂತ್ರ್ಯ ತರುವಾಯದಿಂದ ಇಲ್ಲಿಯವರೆಗೆ ಬಹುಪಾಲು ಸಮಯ ಈ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಈ ಪ್ರಶ್ನೆಗೆ ಉತ್ತರಿಸುವುದು ಸುಲಭದ ಮಾತಾಗಬಹುದು. ಸಾಮಾನ್ಯ ತಿಳಿವಳಿಕೆ ಮತ್ತು ಹೊರ ಜಗತ್ತಿನ ಅನುಭವದ ಪ್ರಕಾರ ನ್ಯಾಯಾಲಯದ ತೀರ್ವನದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಪಾತ್ರ ಇರುವುದಿಲ್ಲ ಅಂತಲೇ ಹೇಳಬಹುದು.

ಮೂರನೇ ಪ್ರಶ್ನೆ: ಈಗ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸುಬ್ರಮಣಿಯನ್ ಸ್ವಾಮಿ ನ್ಯಾಷನಲ್ ಹೆರಾಲ್ಡ್ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ ಎಂದ ಮಾತ್ರಕ್ಕೆ ಅದು ಆ ಪಕ್ಷದ ತೀರ್ಮಾನ ಅಥವಾ ಷಡ್ಯಂತ್ರ ಎಂದು ತೀರ್ವನಿಸುವುದು ವಿವೇಚನೆಯ ಲಕ್ಷಣವೇ? ಮುಖ್ಯವಾಗಿ ಇಲ್ಲಿ ಗಮನಿಸಬೇಕಾದದ್ದು ಪ್ರಕರಣದಲ್ಲಿ ಹುರುಳಿದೆಯೇ ಇಲ್ಲವೇ ಎಂಬುದೇ ಹೊರತೂ ಪ್ರಕರಣ ಹೂಡಿದವರಾರು, ಉದ್ದೇಶವೇನು ಅಥವಾ ಅವರ ಹಿನ್ನೆಲೆ ಏನು ಎಂಬುದಲ್ಲ. ಇಷ್ಟು ಸರಳ ವಿಷಯ ಅಷ್ಟು ದೊಡ್ಡ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬನೇ ಒಬ್ಬ ನಾಯಕನಿಗೆ ಹೊಳೆಯದಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ.

ವಾಸ್ತವದಲ್ಲಿ ಸೋನಿಯಾ ಮತ್ತು ರಾಹುಲ್ ಸುಖಾಸುಮ್ಮನೆ ಬೊಬ್ಬೆ ಹೊಡೆಯುವ ಬದಲು ಇದೊಂದು ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಸಾಕಿತ್ತು- ಅಸೋಸಿಯೇಟೆಡ್ ಸಂಸ್ಥೆ ನಡೆಸುತ್ತಿದ್ದ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯನ್ನು ಸೋನಿಯಾ ಮತ್ತು ರಾಹುಲ್ ಒಡೆತನಕ್ಕೆ ಸೇರಿದ ಯಂಗ್ ಇಂಡಿಯಾ ಸಂಸ್ಥೆ ಪರಭಾರೆ ಮಾಡಿಕೊಳ್ಳುವ ಮುನ್ನ ಅಸೋಸಿಯೇಟೆಡ್ ಜರ್ನಲ್​ನ ಷೇರುದಾರರ ಬಹುಮತದ ಒಪ್ಪಿಗೆ ಪಡೆದಿದೆಯೇ ಇಲ್ಲವೇ ಎಂಬುದು. ಸಮ್ಮತಿ ಪಡೆದಿದ್ದರೆ ಸೋನಿಯಾ ಮತ್ತು ರಾಹುಲ್ ಹೌದು ಎನ್ನಬೇಕು. ಆಗ ಅದು ನ್ಯಾಯಯುತವಾದ ವ್ಯವಹಾರವಾಗುತ್ತದೆ. ಇಲ್ಲ ಎಂದರೆ ಇಲ್ಲ ಎನ್ನಬೇಕು. ಆಗ ಕಾಂಗ್ರೆಸ್ ನಾಯಕರಿಬ್ಬರು ಮಾಡಿದ್ದು ಅಕ್ರಮ ಎಂದು ಆ ಕ್ಷಣದಲ್ಲಿ ತೀರ್ವನವಾಗಿ ಹೋಗುತ್ತದೆ. ಫಿರ್ಯಾದುದಾರ ಸುಬ್ರಮಣಿಯನ್ ಸ್ವಾಮಿ ಕೇಳಿದ್ದೂ ಇದನ್ನೇ. ದೆಹಲಿ ನ್ಯಾಯಾಲಯ ಸ್ವಾಮಿ ವಾದವನ್ನು ಪುರಸ್ಕರಿಸಿ ಸೋನಿಯಾ ಮತ್ತು ರಾಹುಲ್​ಗೆ ನೋಟಿಸ್ ಜಾರಿ ಮಾಡಿದ್ದೂ ಅದೊಂದೇ ಕಾರಣಕ್ಕೆ. ಹಾಗಾದರೆ ಇಲ್ಲಿ ಒಂದು ಸರ್ಕಾರದ ಷಡ್ಯಂತ್ರ, ತಂತ್ರ-ಪ್ರತಿತಂತ್ರದ ಪ್ರಮೇಯ ಎಲ್ಲಿ ಬಂತು? ಸೋನಿಯಾ ಮತ್ತು ರಾಹುಲ್​ರೇ ಉತ್ತರಿಸಬೇಕು. ನ್ಯಾಷನಲ್ ಹೆರಾಲ್ಡ್ ಆಸ್ತಿ ಪರಭಾರೆ ಪ್ರರಕಣದಲ್ಲಿ ದೆಹಲಿ ನ್ಯಾಯಾಲಯ ಕಾಂಗ್ರೆಸ್​ನ ಇಬ್ಬರು ಉನ್ನತ ನಾಯಕರಿಗೆ ಸಮನ್ಸ್ ನೀಡಿದ ವಿಷಯ ಒಂದು ರಾಷ್ಟ್ರೀಯ ವಿಪತ್ತು, ತುರ್ತು ಪರಿಸ್ಥಿತಿಯ ಮರುಕಳಿಕೆ ಎಂಬತೆ ಬಿಂಬಿಸಲು ಹೊರಟಿರುವುದು ಬಾಲಿಶತನದ ಪರಮಾವಧಿ ಎಂದು ಅನ್ನಿಸುವುದಿಲ್ಲವೇ?

ಈ ಬೆಳವಣಿಗೆಯಿಂದ ಆಗುತ್ತಿರುವ ಎರಡು ನಕಾರಾತ್ಮಕ ಪರಿಣಾಮಗಳ ಕುರಿತು ಆಲೋಚನೆ ಮಾಡಿದಾಗ ನಿಜಕ್ಕೂ ಕಳವಳ ಉಂಟಾಗುತ್ತದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತು ಅದೇ ವೇಳೆ ತನ್ನ ಪರ ಅನುಕಂಪ ಗಿಟ್ಟಿಸಿಕೊಳ್ಳುವ ಧಾವಂತದ ನಡುವೆ ದೇಶದಲ್ಲಿ ಅಲ್ಪಸ್ವಲ್ಪ ನಂಬಿಕೆ ಉಳಿಸಿಕೊಂಡಿರಬಹುದಾದ ನ್ಯಾಯಾಂಗ ವ್ಯವಸ್ಥೆಗೇ ಕಳಂಕ ತರುತ್ತಿದ್ದೇವೆ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆತಂತೆ ತೋರುತ್ತಿದೆ. ಅದರ ಜೊತೆಗೆ ಸಂಸತ್ತಿನ ಸಮಯ ಹಾಳುಮಾಡಲಾಗುತ್ತಿದೆ. ನ್ಯಾಯಾಲಯಗಳ ಕಲಾಪದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಅಥವಾ ಮಾಡಲು ಸಾಧ್ಯ ಎಂದು ಹೇಳುವ ಕಾಂಗ್ರೆಸ್ ನಾಯಕರು ನ್ಯಾಯಾಂಗದ ಸ್ವಾತಂತ್ರ್ಯ ಬದ್ಧತೆ ಮತ್ತು ನೈತಿಕತೆಯನ್ನೇ ಪ್ರಶ್ನೆಮಾಡಿದಂತೆ ತೋರುತ್ತಿದೆ. ಹೀಗಾಗಿ ಈ ಬೆಳವಣಿಗೆಯನ್ನು ನ್ಯಾಯಾಂಗ ವ್ಯವಸ್ಥೆ ಹೇಗೆ ಸ್ವೀಕರಿಸುತ್ತದೆ ಎಂಬುದು ಕೂಡ ಮಹತ್ವದ್ದಾಗುತ್ತದೆ. ಮುಂದಿನ ಪರಿಣಾಮದ ಕುರಿತು ಕುತೂಹಲಕ್ಕೆ ಎಡೆ ಮಾಡಿಕೊಡುತ್ತದೆ.

ಇನ್ನು ಎರಡನೆಯದ್ದು ಸಂಸತ್ ಕಲಾಪ ವ್ಯರ್ಥ ಆಲಾಪ ಆಗುತ್ತಿರುವುದು. ಜಿಎಸ್​ಟಿಯಂತಹ ಹತ್ತಾರು ಮಹತ್ವದ ಮಸೂದೆಗಳ ಕುರಿತು ಚರ್ಚೆ ಆಗಬೇಕಿದ್ದ ಸಂಸತ್ತಿನಲ್ಲಿ ಈ ವಿಷಯ ಇಡೀ ಕಲಾಪವನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಇದು ಸರ್ವಥಾ ಸರಿಯಲ್ಲ. ಈ ಬೆಳವಣಿಗೆಯನ್ನು ದೇಶದ ಕೋಟ್ಯಂತರ ಮಂದಿ ಪ್ರಜ್ಞಾವಂತರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಅದೇಕೆ ಅರ್ಥಮಾಡಿಕೊಳ್ಳುತ್ತಿಲ್ಲವೋ?!

ಸಂಸತ್ ಅಧಿವೇಶನದ ಆರಂಭದ ಚರಣದಲ್ಲಿ ಅಸಹಿಷ್ಣುತೆಯ ಹುಸಿಗುಲ್ಲು ಕಾಲಕ್ಷೇಪಕ್ಕೆ ಕಾರಣವಾಯಿತು. ಎಲ್ಲೋ ಯಾವುದೋ ಒಂದು ಮೂಲೆಯಲ್ಲಿ ನಡೆದ ಎರಡು ಬಿಡಿ ಘಟನೆಗಳು ಇಡೀ ದೇಶದಲ್ಲಿ ಅಸಹಿಷ್ಣುತೆ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ ಎಂಬ ಬೊಬ್ಬೆಗೆ ಕಾರಣವಾಯಿತು. ಅದರ ಪರಿಣಾಮ ದೇಶದಲ್ಲಿ ಹೆಚ್ಚು ಆಗಲಿಲ್ಲ. ಆದರೆ ಏನೂ ಅರಿಯದ ಪರದೇಶಗಳಲ್ಲಿ ದೇಶದ ಪ್ರತಿಷ್ಠೆ ಸಾಕಷ್ಟು ಮುಕ್ಕಾಗುವಂತೆ ಮಾಡಿತು. ಅದರ ಅಬ್ಬರ ಕಡಿಮೆಯಾಗುತ್ತಿದ್ದಂತೆ ಈಗ ಸೋನಿಯಾ, ರಾಹುಲ್ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಸರ್ಕಾರ ಷಡ್ಯಂತ್ರ ಮಾಡುತ್ತಿದೆ ಎಂಬ ಉಬ್ಬರವೆದ್ದಿದೆ.

ಎಲ್ಲದಕ್ಕಿಂತ ಅಚ್ಚರಿಯ ಬೆಳವಣಿಗೆ ಈಗಿನದ್ದು. ದೆಹಲಿ ಹೈಕೋರ್ಟ್ ನೋಟಿಸ್ ನೀಡಿರುವುದನ್ನು ಅವರು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನೆ ಮಾಡುವುದಿಲ್ಲವಂತೆ. ಹಾಗೊಮ್ಮೆ ಪ್ರಶ್ನೆ ಮಾಡಿದರೆ ಪರಿಣಾಮ ಏನಾಗಲಿದೆ ಎಂಬುದರ ಮುಂದಾಲೋಚನೆಯ ಪರಿಣಾಮ ಇದಾಗಿರಬಹುದೇ?

ಒಂದು ಮಾತು ಸತ್ಯ. ಕಳೆದ ಲೋಕಸಭಾ ಚುನಾವಣೆಯ ಸೋಲಿನ ನಂತರ ಸಿಕ್ಕ ಒಂದೊಂದು ಅವಕಾಶವನ್ನೂ ತನ್ನಪರ ಅನುಕಂಪವಾಗಿ ಮಾರ್ಪಡಿಸಿಕೊಳ್ಳಲು ಕಾಂಗ್ರೆಸ್ ತೀರ್ವನಿಸಿದಂತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ವರ್ತನೆ ಮತ್ತು ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಹೋಗದಿರುವ ತೀರ್ವನದ ಹಿಂದೆ ಇದೇ ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆಯೇ ಎದ್ದು ಕಾಣುತ್ತದೆ. ಆದರೆ ಹೀಗೆಲ್ಲ ಮಾಡುವುದರಿಂದ ಅನುಕಂಪದ ಬದಲು ‘ಅಯ್ಯೋ ಪಾಪ’ ಎಂಬ ಕನಿಕರ ದೇಶದ ಜನರಲ್ಲಿ ಉಕ್ಕುತ್ತದೆ ಎಂಬ ಸಾಮಾನ್ಯ ಸಂಗತಿಯೂ ಕಾಂಗ್ರೆಸ್ ನಾಯಕರಿಗೆ ಮನವರಿಕೆ ಆಗದೇ? ಎಂಥಾ ವಿಪರ್ಯಾಸ ನೋಡಿ….

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top