ನೆರೆಯ ಚೀನಾ ಕೇವಲ ಇಪ್ಪತ್ತು ವರ್ಷಗಳಲ್ಲಿ ಜಗತ್ತಿನ ಬಲಾಢ್ಯ ಆರ್ಥಿಕ ಶಕ್ತಿಯಾಗಿ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದ್ದು ಅಲ್ಲಿನ ನಾಯಕರ ಇಚ್ಛಾಶಕ್ತಿಯ ಫಲವಾಗಿ. ಅನಿರೀಕ್ಷಿತವಾಗಿ ಭಾರಿ ಆರ್ಥಿಕ ಆಘಾತ ಅನುಭವಿಸಿದರೂ ಅಷ್ಟೇ ಆತ್ಮವಿಶ್ವಾಸದಿಂದ ಹೂಂಕರಿಸುತ್ತಿರುವುದೂ ಅದೇ ಇಚ್ಛಾಶಕ್ತಿಯಿಂದಲೇ. ಇದು ನಮಗೇಕೆ ಮಾದರಿ ಆಗುವುದಿಲ್ಲ?
***
ಕಳೆದ ವರ್ಷ ಇದೇ ವೇಳೆಗೆ ನಾನು ಅಮೆರಿಕ ಪ್ರವಾಸದಲ್ಲಿದ್ದೆ. ಆಗ ಆ ದೇಶದಲ್ಲಿ ಪ್ರತ್ಯಕ್ಷ ಕಂಡ ಅನೇಕ ಸಂಗತಿಗಳನ್ನು ಒಬ್ಬ ಪತ್ರಕರ್ತನಾಗಿ ಎಂದೂ ಮರೆಯಲು ಸಾಧ್ಯವಿಲ್ಲ. ಅವುಗಳ ಪೈಕಿ ಎರಡು ಘಟನೆಗಳನ್ನು ಮಾತ್ರ ಯಾಕೋ ಭಾರತದ ಈಗಿನ ಸನ್ನಿವೇಶದಲ್ಲಿ ನೆನಪು ಮಾಡಿಕೊಳ್ಳಬೇಕು ಅನಿಸುತ್ತಿದೆ.
ನನ್ನ ಪ್ರವಾಸದ ಸಂದರ್ಭಕ್ಕೆ ಸರಿಯಾಗಿ ಅಮೆರಿಕ ಸೆನೆಟ್ಗೆ ದ್ವೆ ೖವಾರ್ಷಿಕ ಚುನಾವಣೆ ಕಾವು ಪಡೆದುಕೊಳ್ಳತೊಡಗಿತ್ತು. ಚುನಾವಣೆ ಸಂದರ್ಭ ಆಗಿದ್ದರಿಂದ ಅಲ್ಲಿನ ಮುಖ್ಯ ಚುನಾವಣಾಧಿಕಾರಿಗಳ ಭೇಟಿಯೂ ನಮ್ಮ ಪ್ರವಾಸದ ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲಿ ಸೇರಿತ್ತು. ಹೀಗಾಗಿ ಅಮೆರಿಕದ ಚುನಾವಣೆ ಪದ್ಧತಿ, ಮತದಾನದ ಪ್ರಕ್ರಿಯೆ, ಪಕ್ಷಗಳ ಕಾರ್ಯವೈಖರಿ, ಸೈದ್ಧಾಂತಿಕ ಬದ್ಧತೆ, ಅಭ್ಯರ್ಥಿಗಳು ಚುನಾವಣಾ ಪ್ರಚಾರದ ವೆಚ್ಚ ಭರಿಸುವುದು ಹೇಗೆ ಎಂಬುದನ್ನೆಲ್ಲ ತಿಳಿದುಕೊಳ್ಳುವ ಅಪೂರ್ವ ಅವಕಾಶ ಸಿಕ್ಕಿತು. ಅಲ್ಲಿನ ಚುನಾವಣಾ ವ್ಯವಸ್ಥೆ ಎಷ್ಟು ಸೂಕ್ಷ್ಮ, ಸಂಕೀರ್ಣ, ಪಾರದರ್ಶಕ, ಶಿಸ್ತುಬದ್ಧ ಮತ್ತು ಕರಾರುವಾಕ್ಕು ಎಂಬುದರ ಅರಿವಾದದ್ದೇ ಆಗ. ಬರೆಯುತ್ತ ಹೋದರೆ ಅಲ್ಲಿನ ಚುನಾವಣೆ ವ್ಯವಸ್ಥೆ ಕುರಿತೇ ಒಂದು ಪುಸ್ತಕವಾಗುತ್ತದೆ. ನಮಗೂ ಅವರಿಗೂ ಅಜಗಜಾಂತರ ವ್ಯತ್ಯಾಸ. ನಮ್ಮಲ್ಲಿನ ಚುನಾವಣೆ ವ್ಯವಸ್ಥೆ ಬಹಳ ಜಾಳು ಜಾಳು ಅಂತ ಅನ್ನಿಸಿದ್ದು ಸುಳ್ಳಲ್ಲ. ಇರಲಿ, ಇಲ್ಲಿ ಹೇಳಬೇಕಾದ ವಿಷಯ ಅದಲ್ಲ.
ಅಮೆರಿಕದ ಚುನಾವಣೆಗೆ ಸಂಬಂಧಿಸಿ ಎರಡು ಸಂಗತಿಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತೇನೆ. ಮೊದಲನೆಯದು; ಚುನಾವಣಾ ಪ್ರಚಾರದ ವಿಚಾರ. ಅದನ್ನು ಕಂಡಾಗ ಕಾಲೇಜು ದಿನಗಳ ವಾರ್ಷಿಕ ಆಟೋಟದ ಸ್ಪರ್ಧೆಯ ನೆನಪು ಬಂತು. ದುಡ್ಡು ಚೆಲ್ಲುವ ರ್ದದಿಲ್ಲ. ಅನಾರೋಗ್ಯಕರ ಪೈಪೋಟಿಯ ರೇಜಿಗೆಯಿಲ್ಲ. ಚುನಾವಣೆಯನ್ನು ಅವರು ಕ್ರೀಡಾಮನೋಭಾವದಲ್ಲಿ ಸ್ವೀಕರಿಸುವ ರೀತಿ, ಚುನಾವಣಾ ಭರವಸೆಗಳ ಮೇಲೆ ನಡೆಯುವ ಗಂಭೀರ ಚರ್ಚೆ ಎಷ್ಟು ಅದ್ಭುತ ಅಂತೀರಿ. ನಮ್ಮಲ್ಲಿ ಚುನಾವಣೆಗಳು ಅಷ್ಟು ಸಹಜವಾಗಿ, ಸಲೀಸಾಗಿ ನಡೆಯಲು ಸಾಧ್ಯವೇ ಇಲ್ಲ!
ಎರಡನೆಯದು; ಚುನಾವಣಾ ಫಲಿತಾಂಶದ ದಿನ ಸಂಜೆ ಕಂಡ ಅಪರೂಪದ ಸನ್ನಿವೇಶ. ಅಂದು ನಾನು ಉಳಿದುಕೊಂಡಿದ್ದ ಶರಟನ್ ಸಿರಾಕ್ಯೂಸ್ ಯೂನಿವರ್ಸಿಟಿ ಹೋಟೆಲಿನಲ್ಲಿ ಸೆನೆಟ್ ಚುನಾವಣೆಯಲ್ಲಿ ಗೆದ್ದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕ್ರಿಸ್ಟನ್ ಗ್ರಿಲ್ಬ್ರಾಂಡ್ ಕಡೆಯವರು ವಿಜಯೋತ್ಸವ ಹಮ್ಮಿಕೊಂಡಿದ್ದರು. ವಿಶೇಷ ಅಂದರೆ ಚುನಾವಣೆಯಲ್ಲಿ ಸೋತ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಕಡೆಯವರೂ ಅದೇ ಹೋಟೆಲಿನ ಇನ್ನೊಂದು ಕಡೆಯಲ್ಲಿ ಸಂತೋಷಕೂಟ ಏರ್ಪಡಿಸಿದ್ದರು. ಗೆದ್ದವರೇನೋ ಸರಿ, ಆದರೆ ಸೋತವರಿಗೇನು ಸಂತೋಷಕೂಟ ಎಂಬ ಅಚ್ಚರಿ ಕಾಡತೊಡಗಿತು. ಹೋಗಿ ನೋಡಿದರೆ ಚುನಾವಣೆಯಲ್ಲಿ ಸೋಲು ಕಂಡ ರಿಪಬ್ಲಿಕನ್ ಪಕ್ಷದ ಕಡೆಯವರ ಸಂಭ್ರಮ, ಸಂತೋಷ ಕಂಡು ಒಂದು ಕ್ಷಣ ದಂಗಾಗಬೇಕಾಯಿತು. ಅಷ್ಟರಲ್ಲೇ ಚುನಾವಣೆಯಲ್ಲಿ ಗೆದ್ದ ಡೆಮಾಕ್ರಟಿಕ್ ಪಕ್ಷದ ಒಂದು ಗುಂಪು ರಿಪಬ್ಲಿಕನ್ ಪಕ್ಷದವರ ಸಂತೋಷಕೂಟದಲ್ಲಿ ಸೇರಿಕೊಂಡಿತು. ಆ ಗುಂಪಿನಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಅಭ್ಯರ್ಥಿ ಕೂಡ ಇದ್ದರು. ನೋಡ ನೋಡುತ್ತಲೇ ವೇದಿಕೆ ಏರಿದ ಗೆದ್ದ ಪಕ್ಷದ ಕಾರ್ಯಕರ್ತರು ಸೋತ ವ್ಯಕ್ತಿಯನ್ನು ಆಲಂಗಿಸಿಕೊಂಡರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನೃತ್ಯ ಮಾಡಿದರು. ಖುಷಿ ಹಂಚಿಕೊಂಡರು. ಆ ಕ್ಷಣವನ್ನು ಎಂದೂ ಮರೆಯಲಾಗದು. ನಮ್ಮಲ್ಲಿ ಚುನಾವಣೆ, ಫಲಿತಾಂಶ, ಆ ನಂತರದ ಸನ್ನಿವೇಶ, ಅಧಿಕಾರಕ್ಕಾಗಿ ನಡೆಯುವ ಮೇಲಾಟ, ಮುಂದುವರಿಯುವ ದ್ವೇಷ ಇವನ್ನೆಲ್ಲ ಒಮ್ಮೆ ಕಣ್ಣಮುಂದೆ ತಂದುಕೊಳ್ಳಿ. ಬೇರೇನೂ ಹೇಳುವುದು ಬೇಕಾಗುವುದಿಲ್ಲ.
ಹಾಗೇ ಮತ್ತೊಂದು ಉದಾಹರಣೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮಹತ್ವಾಕಾಂಕ್ಷೆಯಿಂದ ಜಾರಿಗೊಳಿಸಿರುವ ‘ಹೆಲ್ತ್ ಕೇರ್’ ಯೋಜನೆ ಕುರಿತಾದದ್ದು. ಈ ಯೋಜನೆಯ ಪ್ರಸ್ತಾಪ ಮಾಡಿದಾಗ ಸಾಕಷ್ಟು ವಿರೋಧ ಉಂಟಾಯಿತು. ಅದು ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ. ಹೆಲ್ತ್ ಕೇರ್ ಯೋಜನೆ ಜಾರಿ ವಿಚಾರವಾಗಿ ಅಮೆರಿಕದ ಸಂಸತ್ತಿನ ಒಳಗೂ ಹೊರಗೂ ಸಾಕಷ್ಟು ಚರ್ಚೆ ಆಯಿತು. ಮಸೂದೆ ಹಲವು ಸಲ ತಿದ್ದುಪಡಿಗೂ ಒಳಗಾಯಿತು. ಕೊನೆಗೂ ಯೋಜನೆ ಜಾರಿಗೆ ಬಂತು. ಅದಕ್ಕೆ ಅಧ್ಯಕ್ಷ ಒಬಾಮಾ ಅವರ ಒತ್ತಾಸೆ ಕಾರಣ. ಕೊನೆಗೆ ಅದು ‘ಒಬಾಮಕೇರ್’ ಎಂಬ ಹೆಸರಿನಿಂದಲೇ ಜನಪ್ರಿಯವಾಯಿತು. ಅಮೆರಿಕದ ಯಾವ ಪ್ರಜೆಯೂ ಸೂಕ್ತ ಚಿಕಿತ್ಸೆ ಇಲ್ಲದೆ ಸಾಯಬಾರದು; ಬಡವರು ಮತ್ತು ಶ್ರೀಮಂತರಿಬ್ಬರಿಗೂ ಉತ್ತಮ ಚಿಕಿತ್ಸೆ ಸಮಾನವಾಗಿ ಸಿಗಬೇಕೆಂಬುದು ಯೋಜನೆಯ ಮೂಲ ಆಶಯ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಒಬಾಮಾಕೇರ್ ವಿಷಯದಲ್ಲಿ ಆರೋಗ್ಯಕರ ಚರ್ಚೆ ನಡೆಯಿತೇ ಹೊರತು ರಾಜಕಾರಣದ ಲಾಭ ಹಾನಿಯ ಬಗ್ಗೆಯಾಗಲಿ ಅಥವಾ ಮುಂದಿನ ಚುನಾವಣೆಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರವಾಗಲಿ ಇಣುಕಲಿಲ್ಲ. ಭಾರತದ ಸಂದರ್ಭದಲ್ಲಿ ಉದ್ಯಮಕ್ಕೆ ಉತ್ತೇಜನ ನೀಡಲು ವರದಾನವಾಗಬೇಕಿದ್ದ ಮಹತ್ವಾಕಾಂಕ್ಷೆಯ ಭೂಸ್ವಾಧೀನ ಮಸೂದೆ, ತೆರಿಗೆ ಸಂಗ್ರಹಣೆಯಲ್ಲಿ ವ್ಯಾಪಕ ಸುಧಾರಣೆಗೆ ಕಾರಣವಾಗಬೇಕಿದ್ದ ಜಿಎಸ್ಟಿ ಕಾಯ್ದೆ ವಿಷಯದಲ್ಲಿ ಸಂಸತ್ತಿನಲ್ಲಿ ಏನೇನಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ತಾನೆ? ಭಾರತದ ಸಂದರ್ಭದಲ್ಲೂ ಅಮೆರಿಕ ಮಾದರಿಯ ಪ್ರಬುದ್ಧತೆಯನ್ನು ನಿರೀಕ್ಷೆ ಮಾಡಲಾದೀತೇ?
ದೂರದ ಅಮೆರಿಕದ ವಿಚಾರ ಯಾತಕ್ಕೆ, ನೆರೆಯ ಚೀನಾವೇ ಕಣ್ಣಮುಂದೆ ಇದೆಯಲ್ಲ. ಚೀನಾದ ಬೆಳವಣಿಗೆ ಕುರಿತು ‘ಇಂಡಿಯಾ ಟುಡೆ’ ಸಾಪ್ತಾಹಿಕದ ಪ್ರಧಾನ ಸಂಪಾದಕ ಅರುಣ್ ಪುರಿ ಅವರು ಸಂಪಾದಕೀಯದಲ್ಲಿ ಬರೆದಿರುವ ಒಂದು ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಆರ್ಥಿಕತೆಯ ದೃಷ್ಟಿಯಿಂದ ಜರ್ಮನಿಯನ್ನು ಹಿಂದಿಕ್ಕಿ, ಅಮೆರಿಕಕ್ಕೇ ಸೆಡ್ಡು ಹೊಡೆದಿರುವ ಚೀನಾ ಇಪ್ಪತ್ತು ವರ್ಷಗಳ ಹಿಂದೆ ಹೇಗಿತ್ತು, ಈಗ ಹೇಗಾಗಿದೆ ಎಂಬುದರ ಪ್ರತ್ಯಕ್ಷದರ್ಶಿ ಚಿತ್ರಣವನ್ನು ಅವರು ಈ ಸಂಪಾದಕೀಯದಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ. ‘1981ರ ಪೂರ್ವದಲ್ಲಿ ಚೀನಾ ದಟ್ಟ ದರಿದ್ರ ದೇಶವಾಗಿತ್ತು. ಹೇಗೆಂದರೆ ಆಗ ಬೀಜಿಂಗ್ ನಗರದಲ್ಲಿ ಒಂದೇ ಸ್ಟಾರ್ ಹೋಟೆಲಿತ್ತು. ರಸ್ತೆಗಳಲ್ಲೆಲ್ಲ ಬರೀ ಸೈಕಲ್ಲುಗಳೇ ತುಂಬಿಕೊಂಡಿರುತ್ತಿದ್ದವು. ಕಾರುಗಳನ್ನು ಕಾಣುವುದೇ ಬಲು ಅಪರೂಪವಾಗಿತ್ತು. ಹದಿನೆಂಟು ವರ್ಷಗಳ ನಂತರ 1991ರಲ್ಲಿ ಮತ್ತೆ ಚೀನಾಕ್ಕೆ ಭೇಟಿ ಕೊಟ್ಟಿದ್ದೆ. ಆಗ ಬೀಜಿಂಗ್ನಲ್ಲಿ ಕನಿಷ್ಠ ಒಂದು ಡಜನ್ನಿಗೂ ಹೆಚ್ಚು ಸ್ಟಾರ್ ಹೋಟೆಲುಗಳು ತಲೆಎತ್ತಿದ್ದವು. ರಸ್ತೆಗಳಲ್ಲಿ ಮಾಡರ್ನ್ ಕಾರುಗಳೇ ತುಂಬಿಕೊಂಡು ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಪ್ಪತ್ತು ವರ್ಷದಲ್ಲಿ ಈ ಪರಿ ಬದಲಾವಣೆಯೇ?’ ಎಂದು ಅಚ್ಚರಿಯಿಂದ ಉದ್ಗಾರ ತೆಗೆಯುತ್ತಾರೆ ಅರುಣ್ ಪುರಿ.
ಹೌದು, ಚೀನಾದ ದಾರಿದ್ರ್ಯನ್ನು ಹೋಗಲಾಡಿಸಲೇಬೇಕೆಂದು ಆರ್ಥಿಕ ಸುಧಾರಣೆಯ ರೂವಾರಿ ಡೆಂಗ್ ಗ್ಸಿಪಿಂಗ್ ಸಂಕಲ್ಪ ಮಾಡಿದರು. ಸುಧಾರಣೆ ಪರ್ವವನ್ನು ಸ್ವತಃ ತಾವೇ ಆರಂಭಿಸಿದರು. ಡೆಂಗ್ ಮೊದಲು ಗಮನ ಕೇಂದ್ರೀಕರಿಸಿದ್ದು ಕೃಷಿಯ ಮೇಲೆ. ಅದೊಂದರಿಂದಲೇ ಆಧುನಿಕ ಚೀನಾದ ಸಾಕಾರ ಅಸಾಧ್ಯ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಎರಡನೇ ಹಂತದಲ್ಲಿ ಕೈಗಾರಿಕೀಕರಣದತ್ತ ಒತ್ತು ನೀಡಿದರು. ಮುಂದೆ ಅಧಿಕಾರಕ್ಕೆ ಬಂದ ಎಲ್ಲರೂ ಡೆಂಗ್ ಕನಸನ್ನು ಸಾಕಾರ ಮಾಡಲು ಟೊಂಕ ಕಟ್ಟಿ ನಿಂತರೇ ಹೊರತು ಸುಧಾರಣೆಯ ಯೋಜನೆಗಳಿಗೆ ತಿಲಾಂಜಲಿ ಕೊಡಲು ಹೋಗಲಿಲ್ಲ. ಅದರ ಪರಿಣಾಮವನ್ನು ಜಗತ್ತು ಇಂದು ನೋಡುತ್ತಿದೆ. ಬೀಜಿಂಗ್ ಮತ್ತು ಪುಡೋಂಗ್ ನದಿಯ ತಟದಲ್ಲಿ ನಳನಳಿಸುವ ಅಪ್ಪಟ ಆಧುನಿಕ ನಗರ ಶಾಂಘೈ ಇವೆರಡೂ ಇಂದು ಜಗತ್ತಿನ ಬಲಾಢ್ಯ ಆರ್ಥಿಕತೆಯ ಕೇಂದ್ರಗಳೆಂಬ ಕೀರ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡಿವೆ.
ಎರಡು ದಶಕಗಳ ಹಿಂದೆ ರಫ್ತು ಎಂದರೆ ಏನೆಂಬುದೇ ಚೀನಾಕ್ಕೆ ಗೊತ್ತಿರಲಿಲ್ಲ. ಆದರೆ ಈಗ ಜಗತ್ತಿನ ಅತಿ ದೊಡ್ಡ ರಫ್ತುದಾರ ದೇಶವಾಗಿ ಅದು ಜಗತ್ತಿನೆದುರು ತಲೆಯೆತ್ತಿ ನಿಂತಿದೆ. ಈಗ ಹೇಗಾಗಿದೆಯೆಂದರೆ ಚೀನಾ
ಜಗತ್ತಿನ ‘ಅತಿದೊಡ್ಡ ಫ್ಯಾಕ್ಟರಿ’ ಎಂಬ ಅನ್ವರ್ಥಕವನ್ನು ಪಡೆದುಕೊಂಡಿದೆ. ಕೇವಲ ಇಪ್ಪತ್ತು ವರ್ಷಗಳಲ್ಲಿ ಚೀನಾ ಸಾಧಿಸಿದ್ದು ಏನು ಕಡಿಮೆಯೇ? ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆಯೆಂದು ಕರೆಸಿಕೊಂಡ ಜರ್ಮನಿಯನ್ನು ಹಿಂದಿಕ್ಕಿ ಆ ಸ್ಥಾನವನ್ನು ತಾನು ಆಕ್ರಮಿಸಿಕೊಂಡಿದೆ. ಖರೀದಿ ಶಕ್ತಿಯ ದೃಷ್ಟಿಯಿಂದ ಜಗತ್ತಿನ ಅತಿ ಶ್ರೀಮಂತ ದೇಶ ಅಮೆರಿಕವನ್ನೂ ಬದಿಗೆ ಸರಿಸಿದೆ ಚೀನಾ. ಅಷ್ಟೇ ಅಲ್ಲ, ಈಗ ಪ್ರಪಂಚದ ಯಾವುದೇ ದೇಶವನ್ನು ತೆಗೆದುಕೊಂಡರೂ, ಅಲ್ಲೆಲ್ಲ ಚೀನಾ ಅತಿ ದೊಡ್ಡ ಹೂಡಿಕೆದಾರ ದೇಶವಾಗುವತ್ತ ದಾಪುಗಾಲಿಡುತ್ತಿದೆ. ಅದೆಲ್ಲ ಸರಿ, ಚೀನಾ ಮಾಡಿದ ಆರ್ಥಿಕ ಕ್ರಾಂತಿಯ ಒಟ್ಟು ಪರಿಣಾಮ ಏನು, ಹೆಚ್ಚಿನ ಲಾಭ ಆದದ್ದು ಯಾರಿಗೆ ಗೊತ್ತೇ? ಕೋಟಿ ಕೋಟಿ ಬಡ ಮಧ್ಯಮ ವರ್ಗದ ಚೀನಿಯರಿಗೆ. ಅವರೆಲ್ಲ ಬಡತನದ ಬವಣೆಯನ್ನು ಆಚೆ ಸರಿಸಿ ಮೇಲೆದ್ದು ನಿಂತುಕೊಳ್ಳುವಂತಾದರು. ಯಾವುದೇ ಆಡಳಿತ ಇದಕ್ಕಿಂತ ಹೆಚ್ಚಿನದನ್ನು ಮತ್ತಿನ್ನೇನು ಮಾಡಬೇಕು ಹೇಳಿ? ಅದೇ ವೇಳೆ ‘ಗರೀಬಿ ಹಟಾವೋ’ ಜಪದಿಂದ ನಾವು ಭಾರತೀಯರು ಏನನ್ನು ಸಾಧಿಸಿದೆವು? ಆಲೋಚಿಸಬೇಡವೆ?
ಭಾರತದ ಕೋಟಿ ಕೋಟಿ ಜನರು ನಿರೀಕ್ಷೆ ಮಾಡುತ್ತಿರುವುದು ಇದನ್ನೇ ಅಲ್ಲದೇ ಬೇರೇನಲ್ಲ. ನಿಜ ಹೇಳಬೇಕೆಂದರೆ ರಾಹುಲ್ ಗಾಂಧಿ ಅವರಂತಹ ಯುವ ನಾಯಕರು ಸಹ ಭಾರತದ ಕೋಟ್ಯಂತರ ಜನರ ನಿರೀಕ್ಷೆ ಏನೆಂಬುದನ್ನು ಗುರುತಿಸುವಲ್ಲಿ ವಿಫಲರಾಗುತ್ತಿದ್ದಾರೆ. ನಮ್ಮ ದೇಶ ಈಗ ಎಲ್ಲಿದೆ, ಮುಂದೆ ಹತ್ತು ವರ್ಷದಲ್ಲಿ ಎಲ್ಲಿರಬೇಕು, ಏನಾಗಬೇಕೆಂಬ ಚಿತ್ರಣವೇ ಕಾಂಗ್ರೆಸ್ ಪಕ್ಷದಂತಹ ದೊಡ್ಡ ಸಂಘಟನೆಯ ವಾರಸುದಾರರು ಎಂದು ಬಿಂಬಿಸಿಕೊಳ್ಳುವವರಿಗೆ ಇಲ್ಲ ಎಂಬುದು ಬೇಸರಕ್ಕೆ ಕಾರಣವಾಗುವ ವಿಚಾರ. ಹೀಗಾಗಿ ‘ಪ್ರಧಾನಿ ಮೋದಿ ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಂಡು ಉದ್ಯಮಿಗಳಿಗೆ ಕೊಡುತ್ತಿದ್ದಾರೆ’ ಎಂದು ಹೋದಲ್ಲಿ ಬಂದಲ್ಲಿ ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಚೀನಾದಂತಹ ದೇಶಕ್ಕೆ ಮೂವತ್ತು ವರ್ಷಗಳ ಹಿಂದೆ ಅರಿವಿಗೆ ಬಂದದ್ದು, ಭಾರತದ ನಾಯಕರಿಗೆ ಇನ್ನೂ ಕಣ್ಣಿಗೆ ಕಾಣಿಸುವುದಿಲ್ಲ, ಆಲೋಚನೆಗೆ ನಿಲುಕುವುದಿಲ್ಲ ಎಂದರೆ ನಿಜಕ್ಕೂ ಸೋಜಿಗದ ಸಂಗತಿಯಲ್ಲವೆ?
ಒಂದು ವಿಷಯ ಸ್ಪಷ್ಟ. ದೇಶದ ಬಡತನ ನೀಗಬೇಕು, ಕೋಟಿ ಕೋಟಿ ಕೈಗಳಿಗೆ ಉದ್ಯೋಗಾವಕಾಶ ಸಿಗಬೇಕು, ಉದ್ಧಾರ ಆಗಬೇಕು ಎಂದರೆ ಕೃಷಿಯೂ ಸೇರಿ ಉದ್ಯಮ ಕ್ಷೇತ್ರದಲ್ಲಿ ಭರಪೂರ ಹೂಡಿಕೆ ಹರಿದು ಬರಲೇಬೇಕು. ಕೈಗಾರಿಕೆ ಮತ್ತು ಕೃಷಿ ಉದ್ದೇಶಕ್ಕೆ ಭೂಮಿ ಬಳಸುವ ಸಂಬಂಧ ಈಗಿರುವ ಕಾಯಿದೆಗಳಿಗೆ ಆಮೂಲಾಗ್ರ ತಿದ್ದುಪಡಿ ಆಗಲೇಬೇಕು. ಮೂಲಸೌಕರ್ಯಗಳನ್ನು ಸಾವಿರಪಟ್ಟು ಸುಧಾರಿಸಬೇಕು. ತೆರಿಗೆ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ಅದಿಲ್ಲದೇ ಹೋದರೆ ಇನ್ನೂ ನೂರು ವರ್ಷ ಬಡತನ ನಿವಾರಣೆ ಜಪ ಮಾಡಿದರೂ ಫಲ ಸಿಗುವುದು ಮಾತ್ರ ಅಷ್ಟಕ್ಕಷ್ಟೆ. ಇದರಲ್ಲಿ ಯಾವ ಅನುಮಾನವೂ ಬೇಡ.
ಕೊನೇದಾಗಿ ಒಂದು ಮಾತು. ಎಷ್ಟೆಲ್ಲ ಪರಿಶ್ರಮಪಟ್ಟರೂ ಸಹ ಚೀನಾ ಇಂದು ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದೆ. ಅದಕ್ಕೆ ಕಾರಣ ಅದು ರಫ್ತು ಆದಾಯವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದು. ಆದರೆ ಭಾರತದ ಸಂದರ್ಭ ಹಾಗಲ್ಲ. ಭಾರತ ತನ್ನ ಸಣ್ಣಪುಟ್ಟ ಅಡೆತಡೆಗಳನ್ನು ನಿವಾರಿಸಿಕೊಂಡು ಮುನ್ನಡೆಯುವ ಸಂಕಲ್ಪ ಮಾಡಿದರೆ, ಚೀನಾದ ಅನನುಕೂಲವನ್ನೇ ತನ್ನ ಅವಕಾಶವನ್ನಾಗಿ ಮಾಡಿಕೊಂಡರೆ ಆರ್ಥಿಕವಾಗಿ ಬಲಾಢ್ಯವಾಗುವ ಎಲ್ಲ ಅವಕಾಶವೂ ಇದೆ ಎನ್ನುತ್ತಾರೆ ಪರಿಣತರು. ಸೋನಿಯಾ, ರಾಹುಲ್ ಮತ್ತು ಅವರ ಹಿಂಬಾಲಕರು ಅರ್ಥಮಾಡಿಕೊಳ್ಳುತ್ತಾರಾ?