ಮೈತ್ರಿ ಆಡಳಿತದ ಅಪಾಯ ಕಾಂಗ್ರೆಸ್ಗೆ ಮಾತ್ರ ಎನ್ನುವ ಹಾಗಿಲ್ಲ. ಮೈತ್ರಿ ರಾಜಕೀಯದ ಫಲವಾಗಿ ವಾಜಪೇಯಿ ಪ್ರಧಾನಿಯಾದರು ನಿಜ. ಉತ್ತಮ ಆಡಳಿತವನ್ನೂ ನೀಡಿದರು. ಆದರೆ ಹೊಂದಾಣಿಕೆ ರಾಜಕಾರಣಕ್ಕಾಗಿ ಮೂಲ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದ ಬಿಜೆಪಿ ಭಾರಿ ಬೆಲೆ ತೆರಬೇಕಾಯಿತು.
ಕಾಂಗ್ರೆಸ್ ನಾಯಕರು ಪದೇಪದೆ ಯಾಕಿಂಥ ತಪ್ಪು ಮಾಡುತ್ತಿದ್ದಾರೆ ಅನ್ನುವುದೇ ಬಿಡಿಸಲಾಗದ ಒಗಟು. ಈ ಪರಿ ಸ್ವಂತಿಕೆ ಬಿಟ್ಟು ಮೈತ್ರಿ ಮಾಡಿಕೊಂಡು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದು ತೀರಲೇಬೇಕೆಂಬ ದರ್ದಾದರೂ ಏನಿತ್ತು? ಎಲ್ಲೋ ಒಂದುಕಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರಾದ ಬೈರತಿ ಬಸವರಾಜ್, ಮುನಿರತ್ನ ಅಂತಹ ಬೆಂಬಲಿಗರ ಒತ್ತಡದಲ್ಲಿ ಸಿಲುಕಿಕೊಂಡಿದ್ದಾರೆಯೇ? ಮನಸ್ಸಿಲ್ಲದ ಮನಸ್ಸಿನಿಂದ ಮಾಡಬಾರದ ಕೆಲಸಕ್ಕೆ ಮುಂದಡಿ ಇಡುತ್ತಿದ್ದಾರೆಯೇ? ಹಾಗಾದರೆ ಪಕ್ಷದ ಭವಿಷ್ಯ ಏನು? ಸದ್ಯಕ್ಕೆ ಇವಿಷ್ಟು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಜರೂರತ್ತು ಕಾಂಗ್ರೆಸ್ ನಾಯಕರಿಗಿಲ್ಲ ಅಂತೀರಾ?
ರಾಜಕೀಯದ ಒಳ ಲೆಕ್ಕಾಚಾರಗಳು ಹೇಗಿರುತ್ತವೆ ನೋಡಿ. ಬಿಬಿಎಂಪಿ ಚುನಾವಣೆಯಲ್ಲಿ ಮತದಾನಕ್ಕೆ ಇನ್ನು ಒಂದೆರಡು ದಿನ ಬಾಕಿ ಇದ್ದಿರಬಹುದು. ಆ ವೇಳೆ ಬಿಜೆಪಿ ಮತ್ತು ಜೆಡಿಎಸ್ನ ಇಬ್ಬರು ನಾಯಕರು ಒಟ್ಟಿಗೆ ಮಾತಿಗೆ ಸಿಕ್ಕಿದಾಗ ಹೇಳಿದ ಮಾತು ಈಗಲೂ ಗಿರಕಿ ಹೊಡೆಯುತ್ತಿದೆ. ಅವರು ಹೇಳಿದ್ದರು- ‘ಬಿಬಿಎಂಪಿ ಚುನಾವಣೆಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಏನು ಬೇಕಾದರೂ ಇರಲಿ. ಕಾಂಗ್ರೆಸ್ ಗೆಲ್ಲಲಿ ಸೋಲಲಿ. ನಾವು ಮಾತ್ರ ಸಿಎಂ ರಾಜೀನಾಮೆಗೆ ನೆಪಮಾತ್ರಕ್ಕೂ ಒತ್ತಾಯಿಸುವುದಿಲ್ಲ’. ಈ ಮಾತಿನ ಆಂತರ್ಯ ಏನು ಅಂತ ಕೇಳಿದ್ದಕ್ಕೆ, ‘ಬಿಜೆಪಿ ಮತ್ತು ಜೆಡಿಎಸ್ ಭವಿಷ್ಯದ ದೃಷ್ಟಿಯಿಂದ ಸರ್ಕಾರದ ನಾಯಕತ್ವ ಬದಲಾಗದೆ ಇರುವುದೇ ಒಳ್ಳೆಯದು. ಇದೇ ವ್ಯವಸ್ಥೆ ಮುಂದುವರಿದಷ್ಟೂ ಮುಂದಿನ ಚುನಾವಣೆ ದೃಷ್ಟಿಯಿಂದ ನಮಗೆ ಅನುಕೂಲ’ ಎಂಬ ವಿವರಣೆ ನೀಡಿದರು. ಈ ಮಾತಿನ ಮರ್ಮವೇನು? ಅವರವರ ವಿಶ್ಲೇಷಣಾ ಸಾಮರ್ಥ್ಯಕ್ಕೆ ಬಿಟ್ಟದ್ದು.
ನಾಯಕತ್ವ ಬದಲಾವಣೆ, ಯಥಾಸ್ಥಿತಿ ಮುಂದುವರಿಕೆ ವಿಷಯ ಒತ್ತಟ್ಟಿಗಿರಲಿ. ರಾಜ್ಯ ರಾಜಕಾರಣದ ಲೆಕ್ಕಾಚಾರಗಳೂ ಬದಿಗಿರಲಿ. ಈ ರೀತಿ ಅನುಕೂಲಸಿಂಧು ಹೊಂದಾಣಿಕೆ ರಾಜಕಾರಣ ಮಾಡಿದ್ದರಿಂದ ದೇಶದ ಯಾವುದೇ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಯೋಜನವಾದ ಒಂದೇ ಒಂದು ಉದಾಹರಣೆ ಇದೆಯೇ? ಹಾಗಿದ್ದ ಮೇಲೆ ಕರ್ನಾಟಕದಲ್ಲಿ ರಾಜಕೀಯವಾಗಿ ಲಾಭ ಆಗಲು ಸಾಧ್ಯವೇ? ಆಗುವುದಾದರೂ ಯಾರೋ ಒಬ್ಬಿಬ್ಬರಿಗೆ ವೈಯಕ್ತಿಕ ನೆಲೆಯಲ್ಲಿ ಆಗಬಹುದೇ ಹೊರತು ಒಟ್ಟಾರೆ ಪಕ್ಷಕ್ಕೆ ನಯಾಪೈಸೆಯಷ್ಟೂ ಲಾಭವಾಗುವ ಸಾಧ್ಯತೆ ಕಡಿಮೆ.
ಹೌದೋ ಅಲ್ಲವೋ ನೋಡಿ. ಕಾಂಗ್ರೆಸ್ ಪಕ್ಷ ಮೊದಲು ಹೊಂದಾಣಿಕೆ ರಾಜಕೀಯ ಆರಂಭ ಮಾಡಿದ್ದು ರಾಜೀವ್ ಗಾಂಧಿ ಕಾಲದಲ್ಲಿ. ಅದು ಜನತಾ ದಳದಿಂದ ಹೊರಬಂದು ಜನತಾಪಕ್ಷ ಕಟ್ಟಲು ಹೊರಟ ಸಮಾಜವಾದಿ ನಾಯಕ ಚಂದ್ರಶೇಖರ್ ಅವರೊಂದಿಗೆ. ಐವತ್ತು ಚಿಲ್ಲರೆ ಸಂಸದರನ್ನು ಹೊಂದಿರುವ ಒಂದು ಗುಂಪಿಗೆ, ಮಂತ್ರಿಮಂಡಲಕ್ಕೆ ಬೇಕಾದಷ್ಟು ಸದಸ್ಯರನ್ನೂ ಹೊಂದಿರದ ಭಿನ್ನಮತೀಯರ ಗುಂಪಿಗೆ ಹೊರಗಡೆಯಿಂದ ಬೆಂಬಲ ನೀಡುವ ಕಾಂಗ್ರೆಸ್ ನಿರ್ಧಾರ ದೇಶ ವಿದೇಶದಲ್ಲಿ ತಮಾಷೆಗೀಡಾಗಿತ್ತು. ಇದರಿಂದ, ತಮ್ಮ ಕುಟುಂಬಕ್ಕೆ ಸೆಡ್ಡು ಹೊಡೆದು ರಾಷ್ಟ್ರೀಯ ರಂಗ ರಚಿಸಿ ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್ ಅವರಿಗೆ ಪಾಠ ಕಲಿಸಬೇಕೆಂಬ ನೆಹರು-ಗಾಂಧಿ ಕುಟುಂಬದ ಉದ್ದೇಶ ಈಡೇರಿತೇ ವಿನಾ ಪಕ್ಷಕ್ಕೆ ಬೇರೆ ಯಾವ ರೀತಿಯಿಂದಲೂ ಲಾಭ ಆಗಲಿಲ್ಲ.
ಆ ನಂತರದಲ್ಲಿ ರಾಜೀವ್ ಹತ್ಯೆ ಅನುಕಂಪದಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯಿತಾದರೂ ಒಂದು ರಾಷ್ಟ್ರೀಯ ಪಕ್ಷವಾಗಿ ಸಂಘಟನಾತ್ಮಕ ಬಿಗಿ ಕಾಯ್ದುಕೊಳ್ಳಲು ಆಗಲಿಲ್ಲ. ನರಸಿಂಹ ರಾವ್ ಸರ್ಕಾರ ಕೆಲ ಕ್ರಾಂತಿಕಾರಿ ಆರ್ಥಿಕ ಸುಧಾರಣೆ ತಂದಿದ್ದು ಹೌದಾದರೂ, ಕೇಂದ್ರದ ನಾನಾ ಕಾಂಗ್ರೆಸ್ ಸರ್ಕಾರಗಳ ಪೈಕಿ ರಾಜಕೀಯವಾಗಿ ಅತ್ಯಂತ ದುರ್ಬಲ ಎಂದೇ ಕರೆಸಿಕೊಂಡಿತು. ಮುಂದೆ ಸೀತಾರಾಮ್ ಕೇಸರಿ ನೇತೃತ್ವದ ಕಾಂಗ್ರೆಸ್ ಪಕ್ಷ ದೇವೇಗೌಡ ಮತ್ತು ಐ.ಕೆ.ಗುಜ್ರಾಲ್ ಸರ್ಕಾರಗಳಿಗೆ ಬೆಂಬಲ ನೀಡಿದ್ದೂ ಅದೇ ಕತೆ. ಒಂದಿಷ್ಟು ದಿನ ಅಧಿಕಾರದಲ್ಲಿ ಪಾಲು ಹಂಚಿಕೊಳ್ಳಲು ಸಾಧ್ಯವಾಯಿತೇ ವಿನಾ ಪಕ್ಷಕ್ಕೆ ಸಂಘಟನಾತ್ಮಕವಾಗಿ ಒಂದಿಷ್ಟೂ ಅನುಕೂಲವಾಗಲಿಲ್ಲ. ಬದಲಾಗಿ, ಕಾಂಗ್ರೆಸ್ ಆಘಾತದ ಮೇಲೆ ಆಘಾತ ಎದುರಿಸುತ್ತಲೇ ಹೋಯಿತು.
ಮೈತ್ರಿ ಆಡಳಿತದ ಅಪಾಯ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎನ್ನುವ ಹಾಗಿಲ್ಲ. ಅದರ ಕಹಿ ಅನುಭವ ಬಿಜೆಪಿಗೂ ಆಗಿದೆ. ಬಿಜೆಪಿ ಏಕಾಂಗಿಯಾಗಿದ್ದಾಗ ಹೊಂದಿದ್ದ ಛಾರ್ಮನ್ನು ಮೈತ್ರಿ ಮಾಡಿಕೊಂಡಾಗ ಸಂಪೂರ್ಣವಾಗಿ ಕಳೆದುಕೊಂಡಿತು. ಮೈತ್ರಿ ರಾಜಕೀಯದ ಫಲವಾಗಿ ಅಟಲ್ ಬಿಹಾರಿ ವಾಜಪೇಯಿ ಈ ದೇಶದ ಪ್ರಧಾನಿಯಾದರು ನಿಜ. ಉತ್ತಮ ಆಡಳಿತವನ್ನೂ ನೀಡಿದರು. ಆದರೆ ಮೈತ್ರಿ ಕಾರಣಕ್ಕೆ ಮೂಲ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡು ಬಿಜೆಪಿ ತೆತ್ತ ಬೆಲೆಯನ್ನು ದೇಶ ಕಣ್ಣಾರೆ ಕಂಡಿದೆ. ಚಂದ್ರಬಾಬು ನಾಯ್ಡು ಮತ್ತು ಜಯಲಲಿತಾ ಈ ಇಬ್ಬರ ಸಹವಾಸದ ಕಾರಣಕ್ಕೆ ಮುಂದೆ ಹತ್ತು ವರ್ಷಗಳ ಕಾಲ ಬಿಜೆಪಿ ಅಧಿಕಾರದಿಂದ ದೂರ ಉಳಿಯಬೇಕಾಗಿ ಬಂತು. ಆ ಹತ್ತು ವರ್ಷ ದೇಶ ಆಳಿದ ಕಾಂಗ್ರೆಸ್ಗೆ ಏನಾದರೂ ಲಾಭ ಆಯಿತೇ? ಮೈತ್ರಿ ಹೆಸರಲ್ಲಿ ಅಧಿಕಾರ ಅನುಭವಿಸಿದ ಕಡುಭ್ರಷ್ಟರಿಗೆ ಭರಪೂರ ಲಾಭವಾದದ್ದು ಬಿಟ್ಟರೆ ಬೇರೇನೂ ಇಲ್ಲ.
ಕಾಂಗ್ರೆಸ್ ಸಂಘಟನೆ ದುರ್ಬಲವಾಯಿತು. ಪಕ್ಷದ ಪ್ರತಿಷ್ಠೆ ಕಡಿಮೆ ಆಯಿತು. ಮಾನ ಹರಾಜಾಯಿತು. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಗುಜರಾತ್ದಂತಹ ರಾಜ್ಯಗಳಲ್ಲೇ ಪಕ್ಷ ನಾಮಾವಶೇಷವಾಗುವ ಹಂತ ತಲುಪಿತು. ಒಂದು ಉದಾಹರಣೆಯನ್ನು ನೋಡಿ. ಸದ್ಯದಲ್ಲೇ ಚುನಾವಣೆ ಎದುರಾಗಲಿರುವ ಬಿಹಾರದಲ್ಲಿ ಕಾಂಗ್ರೆಸ್ನಷ್ಟು ದುರ್ಬಲ ಪಕ್ಷ ಇನ್ನೊಂದಿಲ್ಲ. ಲಾಲು, ನಿತೀಶ್ ಮುಂತಾದವರು ಕೊಡುವ ಭಿಕ್ಷೆಗೆ ಆ ಪಕ್ಷ ಕೈಯೊಡ್ಡಿ ಕೂರಬೇಕಾಗಿದೆೆ. ಇದಕ್ಕಿಂತ ದುರ್ಗತಿ ಬೇರಿನ್ನೇನಿದೆ ಹೇಳಿ. ಒಂದು ಸಂಗತಿ ಗಮನಿಸಬೇಕು. ಕಾಂಗ್ರೆಸ್ಗೆ ಈಗಲೂ ಒಂದು ಗಟ್ಟಿ ವೋಟ್ ಬ್ಯಾಂಕ್ ಇದೆ. ಕುಸಿತವಾಗಿರುವುದು ಕೆಲ ಪರ್ಸೆಂಟ್ ಮಾತ್ರ. ಅದಕ್ಕಿಂತ ಮುಖ್ಯವಾದದ್ದು ಕಾಂಗ್ರೆಸ್ ಮತಗಳನ್ನು ಕಸಿದಿರುವುದು ಬಿಜೆಪಿಯಲ್ಲ. ಡಿಎಂಕೆ, ಎಐಎಡಿಎಂಕೆ, ಸಮಾಜವಾದಿ ಪಾರ್ಟಿ, ಆರ್ಜೆಡಿ, ಎನ್ಸಿಪಿ, ಜೆಡಿಯು ಇತ್ಯಾದಿ ಇತ್ಯಾದಿ ಕಾಂಗ್ರೆಸ್ನಿಂದ ಟಿಸಿಲೊಡೆದ ಮತ್ತು ಸ್ವಘೊಷಿತ ಸೆಕ್ಯುಲರ್ ಪಕ್ಷಗಳು. ಕರ್ನಾಟಕದ ಮಟ್ಟಿಗೆ ಜೆಡಿಎಸ್ ಕೂಡ ಈ ಮಾತಿಗೆ ಹೊರತಲ್ಲ. ಹಾಗಾದರೆ ರಾಜ್ಯದಲ್ಲಿ ಮೈತ್ರಿ ಪರಿಣಾಮ ಬೇರೆ ರೀತಿ ಆಗಲು ಸಾಧ್ಯವೇ?
ಜೆಡಿಎಸ್ ಭವಿಷ್ಯಕ್ಕೂ ಅನುಕೂಲವಲ್ಲ: ತಾತ್ಕಾಲಿಕ ಅನುಕೂಲಗಳು, ಲಾಭದ ಲೆಕ್ಕಾಚಾರಗಳೇನಾದರೂ ಇದ್ದರೆ ಗೊತ್ತಿಲ್ಲ. ಆದರೆ ಈ ಮೈತ್ರಿ ಜೆಡಿಎಸ್ಗೂ ಒಳ್ಳೆಯದಲ್ಲ. ರಾಜ್ಯದಲ್ಲಿ ಸೊರಗಿದ್ದ ಪಕ್ಷಕ್ಕೆ ಟಾನಿಕ್ ಸಿಕ್ಕಿದ್ದು ಸಿಎಂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ನಡುವಣ ನೇರಾನೇರ ಕುಸ್ತಿಯಿಂದಲೇ ಅಲ್ಲವೇ? ಅಧಿಕೃತ ವಿಪಕ್ಷ ಸ್ಥಾನ ಕೈತಪ್ಪಿದ ನಂತರವೂ ವಿರೋಧ ಪಕ್ಷ ಎಂದು ಅನ್ನಿಸಿಕೊಂಡಿದ್ದು ಜೆಡಿಎಸ್ ಮಾತ್ರ. ಹೀಗಿರುವಾಗ, ಇನ್ನು ಮುಂದೆ ಜೆಡಿಎಸ್ ನಾಯಕರು ಯಾವ ಮುಖವಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳ ವಿರುದ್ಧ ಹೋರಾಟ ಮಾಡುತ್ತಾರೆ? ಅಕಸ್ಮಾತ್ ಮಾಡಿದರೂ ಕಾರ್ಯಕರ್ತರು ಮತ್ತು ರಾಜ್ಯದ ಜನರು ನಂಬಬಹುದೇ? ರಾಜಕೀಯ ಅನುಕೂಲಕ್ಕೋಸ್ಕರ ಒಂದೆರಡು ಬಾರಿ ನಿಲುವು ಬದಲಿಸಿದರೆ, ಮಾತು ತಪ್ಪಿದರೆ ಜನರು ಕ್ಷಮಿಸಬಹುದು. ಆದರೆ ಇದು ಕಾಯಂ ಪ್ರವೃತ್ತಿಯಂತಾದರೆ ಜನ ಮನ್ನಿಸುವುದು ಕಷ್ಟ. ನೇರವಾಗಿ ಹೇಳುವುದಾದರೆ ದೂರಗಾಮಿ ರಾಜಕೀಯ ಪರಿಣಾಮದ ದೃಷ್ಟಿಯಿಂದ ಈ ಮೈತ್ರಿಯಿಂದ ಜೆಡಿಎಸ್ಗೆ ಲಾಭಕ್ಕಿಂತ ಹಾನಿಯೇ ಜಾಸ್ತಿ.
ಮತ್ತೆ ಮತ್ತೆ ಎಡವುತ್ತಿದೆ ಬಿಜೆಪಿ: ಒಟ್ಟಾರೆ ಸನ್ನಿವೇಶ ನೋಡಿದರೆ ಬಿಬಿಎಂಪಿ ಅಧಿಕಾರ ಹಿಡಿಯುವ ವಿಷಯದಲ್ಲಿ ಬಿಜೆಪಿ ಒಡೆದ ಮನೆಯಂತೆ, ಯಾರೋ ಒಬ್ಬರ ಗುತ್ತಿಗೆಯಂತೆ ಗೋಚರಿಸುತ್ತಿದೆ. ಈ ಬೆಳವಣಿಗೆ ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಗೆ ಒಳ್ಳೆಯದಲ್ಲ. ಆದರೆ ಹೆಚ್ಚು ಸ್ಥಾನ ಗಳಿಸಿಯೂ ಅಧಿಕಾರ ವಂಚಿತವಾದರೆ ಮತದಾರರನ್ನು ಭಾವನಾತ್ಮಕವಾಗಿ ಮೀಟುವ ದೃಷ್ಟಿಯಿಂದ ಅನುಕೂಲ ಆಗಬಹುದು. ಈ ಹಿಂದೆ ಹಲವು ಬಾರಿ ಭಾವನಾತ್ಮಕತೆಯೇ ಬಿಜೆಪಿಯ ಕೈ ಹಿಡಿದ ಉದಾಹರಣೆ ಇರುವುದರಿಂದ ಪಕ್ಷದ ನಾಯಕರು ಆಗಿದ್ದೆಲ್ಲ ಒಳ್ಳೆಯದೇ ಎಂದು ಭಾವಿಸಲು ಕಾರಣಗಳಿವೆ. ಆದರೆ ಒಂದು ಹಂತದ ಗಾಂಭೀರ್ಯ ಕಳೆದುಕೊಂಡರೆ ಜನ ಮುಖ ತಿರುಗಿಸದಿದ್ದಾರೇ? ಬಿಜೆಪಿ ನಾಯಕರೇ ಆಲೋಚಿಸಬೇಕು.
ತಲೆ ತಗ್ಗಿಸುವ ಸರದಿ ಜನರದ್ದು: ಒಟ್ಟಾರೆ ಹೇಳುವುದಾದರೆ ಆರಂಭದಿಂದಲೂ ಬಿಬಿಎಂಪಿ ಚುನಾವಣೆ ಮತ್ತು ಆಡಳಿತ ಚುಕ್ಕಾಣಿ ಹಿಡಿಯುವ ಕಸರತ್ತೇ ಒಂದು ರೀತಿಯ ತಮಾಷೆ ವಸ್ತುವಾಗಿದೆ. ಅದರ ನಡುವೆ ಕಾಪೋರೇಟರುಗಳನ್ನು ಹೈಜಾಕ್ ಮಾಡುವುದು, ಒತ್ತೆ ಇಟ್ಟುಕೊಳ್ಳುವುದು, ದಿನ ಬೆಳಗಾದರೆ ಮೂರೂ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಿರುವುದು ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬೀದಿಗಳಲ್ಲಿ ಪ್ರತಿಭಟನೆಗೆ ಇಳಿಯುತ್ತಿರುವುದನ್ನು ನೋಡಿ ಜನರೇ ತಲೆ ತಗ್ಗಿಸುವಂತಾಗಿದೆ.
***
ಚುರುಕ್ ಚಾಟಿ
ಬೆಂಗಳೂರಲ್ಲಿ ಕುದುರೆ ವ್ಯಾಪಾರ ಜೋರಾಗಿದೆಯಂತಲ್ಲ ಗುರೂ?
-ಕುದುರೆ ಮತ್ತು ಕತ್ತೆಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲದೆ ಏನೇನೋ ಮಾತಾಡಬೇಡ ಮರಿ!