ಜನಗಣಮನದಂತೆ ಜನಗಳ ಮನ ತಾನೆ?

ನಮಗೆ ನಿಜಕ್ಕೂ ಸ್ವಾತಂತ್ರ್ಯ ಸಿಕ್ಕಿದೆಯೇ? ಹೌದು ಎನ್ನುವುದಾದರೆ ಅದನ್ನು ಉಳಿಸಿಕೊಳ್ಳುವಷ್ಟು ವಿಚಾರವಂತಿಕೆಯನ್ನು ಬೆಳೆಸಿಕೊಂಡಿದ್ದೇವೆಯೇ? ಸ್ವಾತಂತ್ರೃ ಸಿಕ್ಕಿದ್ದು ನಮ್ಮನ್ನಾಳುವ ರಾಜಕಾರಣಿಗಳಿಗೆ ಮಾತ್ರವೋ ಹೇಗೆ? ಪ್ರಶ್ನೆಗಳ ಸರಮಾಲೆಯೇ ಉದ್ಭವಿಸುತ್ತದೆ.

 I-day eveಪ್ರಾಥಮಿಕ ಶಾಲೆ, ಹೈಸ್ಕೂಲು ಓದುವಾಗಿನ ಸ್ವಾತಂತ್ರ್ಯ ದಿನೋತ್ಸವದ ಆ ನೆನಪುಗಳು ಅದೆಷ್ಟು ಚೆಂದ ಅಂತೀರಿ. ಆಗೆಲ್ಲ ಇರುತ್ತಿದ್ದುದು ಸರ್ಕಾರ ಕೊಡುತ್ತಿದ್ದ ಒಂದು ಜೊತೆ ಯೂನಿಫಾಮು. ಅದನ್ನೇ ಒಗೆದು ಶುಭ್ರವಾಗಿಸಿ ಆ ದಿನಕ್ಕೆ ರೆಡಿ ಆಗುತ್ತಿದ್ದ ಸಂಭ್ರಮವನ್ನು ಪದಗಳಿಂದ ವರ್ಣಿಸಲಾಗದು. ಆ ಘೊಷಣೆ, ಪುಟಾಣಿಗಳ ಭಾಷಣ, ಕೊನೆಯಲ್ಲಿ ಕೊಡುವ ಪೆಪ್ಪರುಮೆಂಟು… ಬಿಡಿ, ನೆನಪಿಸಿಕೊಂಡರೇನೇ ಅದೇನೋ ಖುಷಿ ಖುಷಿ.

ಪಿಯುಸಿ ಮೆಟ್ಟಿಲು ಹತ್ತುತ್ತಿದ್ದ ಹಾಗೆ ಬಾಲ್ಯದ ಆ ಉತ್ಸಾಹ, ಜೋಷ್, ಅಭಿಮಾನಗಳೆಲ್ಲ ಕರಗತೊಡಗುತ್ತದೆ. ಡಿಗ್ರಿ ಮುಗಿಯವ ಹೊತ್ತಿಗೆ ಸ್ವಾತಂತ್ರ್ಯ ದಿನೋತ್ಸವ, ಗಣರಾಜ್ಯೋತ್ಸವಗಳೆಲ್ಲ ಕನ್ನಡ ಶಾಲೆಯ ಮಕ್ಕಳು ಮತ್ತು ಮೇಷ್ಟ್ರು ಮಾಡುವ ವಾರ್ಷಿಕ ಕಾರ್ಯಕ್ರಮ ಎಂಬಂತಾಗಿಬಿಡುತ್ತದೆ.

ಯಾಕೆ ಹೀಗೆ? ಸ್ವಾತಂತ್ರ್ಯೊತ್ಸವ, ಗಣರಾಜ್ಯೋತ್ಸವ ಅಂದರೆ ಇಷ್ಟೇನಾ? ಈ ಪ್ರಶ್ನೆಯನ್ನು ನಾವು ಕೇಳಿಕೊಳ್ಳಲೇಬೇಕಿದೆ. ಹತ್ತಿರ ಹತ್ತಿರ ನೂರು ವರ್ಷಗಳ ಕಾಲ ಹೋರಾಡಿ, ರಕ್ತ ಹರಿಸಿ ಗಳಿಸಿದ ಸ್ವಾತಂತ್ರ್ಯ ಸಂಭ್ರಮ ಇಷ್ಟು ಬೇಗ ಕಳೆಗುಂದಿ ಹೋಯಿತೇಕೆ? ಅದಕ್ಕೆ ಕಾರಣಗಳು ಹಲವು.

ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ಮಗದೊಮ್ಮೆ ನೆನಪಿಸುತ್ತೇನೆ. ತೀರಾ ಇತ್ತೀಚಿನವರೆಗೂ ನಮ್ಮ ದೇಶದ ಮುಂಗಡಪತ್ರವನ್ನು ಸಾಯಂಕಾಲ 5 ಗಂಟೆಗೆ ಸರಿಯಾಗಿ ಸಂಸತ್ತಿನಲ್ಲಿ ಮಂಡಿಸುವ ಪರಿಪಾಠವಿತ್ತು. ಅದು 1860 ಏಪ್ರಿಲ್ 7ರಂದು ಆರಂಭವಾದ ಪರಿಪಾಠ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪರವಾಗಿ ಫೈನಾನ್ಸ್ ಮೆಂಬರಾಗಿದ್ದ ಜೇಮ್ಸ್‌ ವಿಲ್ಸನ್ ಎಂಬುವವರು ಅಂದು ಮೊದಲ ಬಾರಿಗೆ ಭಾರತದ ಬಜೆಟ್ ಮಂಡಿಸಿದರು. ಸ್ವಾತಂತ್ರ್ಯಾನಂತರವೂ ಅದೇ ಪರಿಪಾಠ ಮುಂದುವರಿದುಕೊಂಡು ಬಂತು. ಮಾಧ್ಯಮಗಳೂ ಅಷ್ಟೆ, ಇಂತಿಪ್ಪ ಹಣಕಾಸು ಸಚಿವರು ಸಂಜೆ 5 ಗಂಟೆಗೆ ಸರಿಯಾಗಿ ಸಂಸತ್ತಿನಲ್ಲಿ ಮುಂಗಡಪತ್ರ ಮಂಡಿಸಿದರು ಎಂದು ಮಾರನೆಯ ದಿನ ಮುಖಪುಟದಲ್ಲಿ ಪ್ರಮುಖ ಸುದ್ದಿ ಪ್ರಕಟಿಸುತ್ತಿದ್ದವು. ಆಗೆಲ್ಲ ಇಷ್ಟೊಂದು ಸಂಪರ್ಕ ಕ್ರಾಂತಿ ಆಗಿರದೇ ಇದ್ದುದರಿಂದ ಬಜೆಟ್ ಮಂಡಿಸಿದರು ಎಂಬುದೊಂದನ್ನು ಬಿಟ್ಟರೆ ಮಹಾನುಭಾವರು ಮಂಡಿಸಿದ ಬಜೆಟ್ಟಿನಲ್ಲಿ ಏನೇನಿದೆ ಎಂಬುದು 36 ಗಂಟೆಗಳ ನಂತರವೇ ದೇಶದ ಜನತೆಗೆ ಗೊತ್ತಾಗುತ್ತಿತ್ತು. ದೌರ್ಭಾಗ್ಯದ ಸಂಗತಿಯೆಂದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಅರವತ್ತು ವರ್ಷಗಳವರೆಗೂ ಇದೇ ಸಂಪ್ರದಾಯ ಪಾಲನೆಯಾಗುತ್ತಿತ್ತು.

ಸಾಯಂಕಾಲ 5 ಗಂಟೆಗೆ ಮುಂಗಡಪತ್ರ ಮಂಡಿಸುವ ಸಂಪ್ರದಾಯ ಬ್ರಿಟಿಷರ ಕಾಲದಲ್ಲಿ ಶುರುವಾಗಲು ಎರಡು ಕಾರಣಗಳನ್ನು ಹೇಳಲಾಗುತ್ತದೆ. ಮೊದಲನೆಯದು- ಹಿಂದಿನ ದಿನ ರಾತ್ರಿಯೆಲ್ಲ ಬಜೆಟ್ ತಯಾರಿಸಿ ದಣಿದ ಸಿಬ್ಬಂದಿ ಆಯಾಸ ನೀಗಿಕೊಳ್ಳುವ ಸಂಬಂಧ ಸಂಜೆ ಈ ಸಂಪ್ರದಾಯ ಜಾರಿಗೆ ಬಂತೆಂಬುದು ಜೇಮ್್ಸ ವಿಲ್ಸನ್ ನೀಡಿದ ಕಾರಣ. ಅಸಲಿ ಕಾರಣ ಬೇರೆ ಎಂಬುದು ಹಲವರ ವಾದ. ಭಾರತದ ಕಾಲಮಾನಕ್ಕೂ ಬ್ರಿಟನ್ನಿನ ಕಾಲಮಾನಕ್ಕೂ ಅಜಮಾಸು ಐದು ತಾಸುಗಳ ವ್ಯತ್ಯಾಸವಿದೆ. ಭಾರತವನ್ನು ಬ್ರಿಟಿಷರು ಆಳುತ್ತಿದ್ದಾಗ ಭಾರತದ ಮುಂಗಡಪತ್ರಕ್ಕೆ ಬ್ರಿಟನ್ ಸಂಸತ್​ನ ಒಪ್ಪಿಗೆ ಸಿಕ್ಕಿ ತರುವಾಯ ರಾಣಿಯ ಅಂಕಿತ ಪಡೆಯಬೇಕಿತ್ತು. ಹೀಗಾಗಿ ಇಲ್ಲಿ ಮುಂಗಡಪತ್ರವನ್ನು ಸಾಯಂಕಾಲ ಮಂಡಿಸುವುದು ರೂಢಿಗೆ ಬಂತು ಎನ್ನಲಾಗುತ್ತಿದೆ. ಅದೇನೇ ಇರಲಿ, ಬ್ರಿಟಿಷ್ ಆಳ್ವಿಕೆ ಕಾಲದ ರೀತಿ ರಿವಾಜುಗಳನ್ನು ಸ್ವಾತಂತ್ರ್ಯೊತ್ತರ ಭಾರತದ ಕಾಂಗ್ರೆಸ್ ಸರ್ಕಾರಗಳು ಮುಂದುವರಿಸಿಕೊಂಡು ಬಂದದ್ದು ಮಾತ್ರ ಸೋಜಿಗದ ಸಂಗತಿ.

ಕೊನೆಗೂ 2001ರಲ್ಲಿ ವಾಜಪೇಯಿ ಸರ್ಕಾರ ಈ ಅನಿಷ್ಟ ಪರಂಪರೆಗೆ ಮಂಗಳ ಹಾಡಿತು. ಆಗ ಹಣಕಾಸು ಮಂತ್ರಿಯಾಗಿದ್ದ ಯಶವಂತ ಸಿನ್ಹಾ ಅವರು ಬೆಳಗ್ಗೆ 11 ಗಂಟೆಗೆ ಮುಂಗಡಪತ್ರವನ್ನು ಮಂಡಿಸಿ ಸ್ವತಂತ್ರ ಭಾರತದ ಮುಂಗಡಪತ್ರದ ಮೇಲಿನ ಬ್ರಿಟಿಷರ ಕರಾಳಛಾಯೆಯನ್ನು ಒರೆಸಿದರು.

ಆದರೂ ಪರಕೀಯ ಛಾಯೆ ನಮ್ಮನ್ನು ಸುತಾರಾಂ ಬಿಡುತ್ತಿಲ್ಲ. ಅದಕ್ಕೊಂದು ಉದಾಹರಣೆ. ನನ್ನ ಸ್ನೇಹಿತರು, ಜನಪ್ರಿಯ ಅಂಕಣಕಾರರು ಹಾಗೂ ದೇಶದ ಹೆಸರಾಂತ ಸಂವಹನ ಸಲಹೆಗಾರರಲ್ಲಿ ಒಬ್ಬರಾಗಿರುವ ಎನ್.ರವಿಶಂಕರ್ ಅವರೊಂದಿಗೆ ಇತ್ತೀಚೆಗೆ ಯಾವುದೋ ವಿಷಯದ ಕುರಿತು ಮಾತನಾಡುವ ವೇಳೆ ಅವರು ಗಮನಿಸಿದ ಎರಡು ಸಂಗತಿಗಳನ್ನು ಪ್ರಸ್ತಾಪಿಸಿದರು. ಮೊದಲನೆಯದ್ದು ಭಾರತದಲ್ಲಿ ಮನೆಗಳನ್ನು ನಿರ್ವಿುಸುವಾಗ ಅನುಸರಿಸುವ ವಿನ್ಯಾಸದ ಕುರಿತಾದ್ದು. ಮತ್ತೊಂದು- ದೇಶದ ಪ್ರತಿಷ್ಠಿತ ವಿಮಾನ ನಿಲ್ದಾಣಗಳಲ್ಲಿರುವ ಟಾಯ್ಲೆಟ್ಟುಗಳಿಗೆ ಸಂಬಂಧಿಸಿದ್ದು.

ನೋಡಿ ನಾವೀಗ ತಾರಸಿ ಮನೆಗಳನ್ನು ನಿರ್ವಿುಸುತ್ತಿದ್ದೇವಲ್ಲ. ಅದು ನಮ್ಮ ದೇಶಕ್ಕೆ ಹೇಳಿಮಾಡಿಸಿದ ವಿನ್ಯಾಸ ಅಲ್ಲವೇ ಅಲ್ಲ ಎಂಬುದು ಅವರ ತರ್ಕ. ನಮ್ಮ ದೇಶದ ವಾತಾವರಣಕ್ಕೆ ಇಲ್ಲಿ ಹೆಂಚಿನ, ಇಳಿಜಾರಾದ ವಾತಾಯನಕ್ಕೆ ಅನುಕೂಲಕರವಾದ ಛಾವಣಿ ಮನೆಗಳೇ ಸೂಕ್ತ. ಆದರೆ ನಾವು ಆರ್​ಸಿಸಿ ಮನೆಗಳನ್ನು ಕಟ್ಟಿ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ ಆ ನಂತರ ಎಸಿ, ಕೂಲರು, ಫ್ಯಾನು ಮತ್ತೊಂದು ಮಗದೊಂದನ್ನು ಅಳವಡಿಸಿಕೊಳ್ಳುತ್ತೇವೆ. ಇದೊಂಥರಾ ಕೋಟು, ಟೈ ಕಟ್ಟಿಕೊಂಡು ಕಿಟಕಿ ಬಾಗಿಲು ಬಂದ್ ಮಾಡಿಕೊಂಡು ಉಸ್ಸಪ್ಪಾ ಎನ್ನುತ್ತ ಎಸಿ ಆನ್ ಮಾಡಿಕೊಂಡು ಕುಳಿತುಕೊಂಡ ಹಾಗೆ. ಸಹಜವಾದ ಗಾಳಿ, ಬೆಳಕಿನಿಂದ ವಂಚಿತರಾಗುವ ನಾವು ಶುದ್ಧಹವಾ ಸೇವನೆಗೋಸ್ಕರ ಮತ್ತೆಲ್ಲೋ ಅಲೆಯುತ್ತೇವೆ. ಒಬ್ಬರನ್ನು ನೋಡಿ ಮತ್ತೊಬ್ಬರು ಅದೇ ಮಾದರಿಯನ್ನು ಅನುಸರಿಸುತ್ತೇವೆ. ವಿಶೇಷ ಅಂದರೆ ನಮ್ಮ ಯಾವುದೇ ಇಂಜಿನಿಯರು ಇದಕ್ಕಿಂತ ಭಿನ್ನವಾಗಿ ಆಲೋಚಿಸಲಾರ. ಹೌದು ತಾನೆ?

ಇನ್ನು, ವಿಮಾನ ನಿಲ್ದಾಣಗಳ ಟಾಯ್ಲೆಟ್​ಗಳ ವಿನ್ಯಾಸದ ವಿಚಾರ. ಅದನ್ನು ಇಂಗ್ಲೆಂಡ್, ಅಮೆರಿಕ ಮತ್ತಿನ್ಯಾವುದೋ ದೇಶದ ಇಂಜಿನಿಯರುಗಳು ವಿನ್ಯಾಸ ಮಾಡಿರುತ್ತಾರೆ. ಹೀಗಾಗಿ ಟಾಯ್ಲೆಟ್ ಕಮೋಡುಗಳನ್ನು ತಮ್ಮ ದೇಶದ ಜನರ ಎತ್ತರಕ್ಕೆ ಸರಿಯಾಗಿ ಅದನ್ನು ಅಳವಡಿಸಲು ವಿನ್ಯಾಸಗೊಳಿಸಿರುತ್ತಾರೆ. ಹೀಗಾಗಿ ಬಹುತೇಕ ಭಾರತೀಯರು ಅಲ್ಲಿ ಮೂತ್ರ ವಿಸರ್ಜಿಸಲು ಪರದಾಡಬೇಕಾಗುತ್ತದೆ. ನಮಗಿಂತಲೂ ಕುಬ್ಜರಾದ ಜಪಾನ್ ಮುಂತಾದ ದೇಶಗಳ ಪ್ರಜೆಗಳು ನಮ್ಮ ವಿಮಾನ ನಿಲ್ದಾಣಗಳ ಟಾಯ್ಲೆಟ್ಟಿನಲ್ಲಿ ಮೂತ್ರ ಮಾಡಲು ಏಣಿಯನ್ನೇ ಬಳಸಬೇಕಾಗುತ್ತದೇನೋ! ನಮ್ಮ ಜೀವನದ ಪ್ರತಿಯೊಂದು ವಿಧದಲ್ಲೂ ಪರಕೀಯರ ಛಾಯೆ ಹೇಗೆ ಆವರಿಸಿಕೊಂಡಿದೆ ಎಂಬುದನ್ನು ಉದಾಹರಿಸುವುದಕ್ಕಾಗಿ ಈ ನಿದರ್ಶನ ಕೊಟ್ಟೆ ಅಷ್ಟೆ.

ವೈಚಾರಿಕವಾಗಿ ಇನ್ನೂ ನಮ್ಮ ಮೇಲೆ ಬ್ರಿಟಿಷರ ಗಾಢ ಛಾಯೆ ಹೇಗೆ ಆವರಿಸಿಕೊಂಡಿದೆ ಎಂಬುದಕ್ಕೆ ತೀರಾ ಇತ್ತೀಚಿನ ಒಂದು ಉದಾಹರಣೆ ಕೊಡಬಹುದು. ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾ ಅವರು ಐದು ತಿಂಗಳ ಹಿಂದೆ, ‘ಇನ್ನು ಮುಂದೆ ನನ್ನ ಹೆಸರಿನ ಮುಂದೆ ‘ಹಿಸ್ ಎಕ್ಸೆಲೆನ್ಸಿ’ ಎಂದು ಬರೆಯುವುದನ್ನು ಬಿಟ್ಟು ಶ್ರೀ, ಶ್ರೀಮಾನ್ ಇತ್ಯಾದಿ ಸಾಮಾನ್ಯ ಗೌರವಸೂಚಕ ಪದ ಬಳಸಿದರೆ ಸಾಕು’ ಎಂದು ಹೇಳಿದ್ದರು. ಇಲ್ಲಿಯವರೆಗೆ ಅದೆಷ್ಟು ರಾಜ್ಯಪಾಲರು ನಮ್ಮ ರಾಜ್ಯಕ್ಕೆ ನೇಮಕವಾಗಿಲ್ಲ? ಇಂಥ ಒಂದು ವಿವೇಚನಾಪೂರ್ಣ ನಿರ್ಧಾರಕ್ಕೆ ಬಂದು ಆದೇಶ ಹೊರಡಿಸಲು ವಜುಭಾಯ್ ಅವರೇ ಬರಬೇಕಾಯಿತೇ?

ಸಹಜ ಜನಜೀವನಕ್ಕೆ ಸಂಬಂಧಿಸಿದ ವಿಚಾರಕ್ಕೇ ಬರೋಣ. ನಮಗೆ ನಿಜಕ್ಕೂ ಸ್ವಾತಂತ್ರ್ಯ ಸಿಕ್ಕಿದೆಯೇ? ಹೌದು ಎನ್ನುವುದಾದರೆ ಅದನ್ನು ಉಳಿಸಿಕೊಳ್ಳುವಷ್ಟು ವಿಚಾರವಂತಿಕೆಯನ್ನು ಬೆಳೆಸಿಕೊಂಡಿದ್ದೇವೆಯೇ? ಸ್ವಾತಂತ್ರ್ಯ ಸಿಕ್ಕಿದ್ದು ನಮ್ಮನ್ನಾಳುವ ರಾಜಕಾರಣಿಗಳಿಗೆ ಮಾತ್ರವೋ ಹೇಗೆ? ಇಂತಹ ಹತ್ತಾರು ಪ್ರಶ್ನೆಗಳು ಉದ್ಭವಿಸುತ್ತ ಹೋಗುತ್ತವೆ.

ಸುಮ್ಮನೇ ಯೋಚನೆ ಮಾಡುತ್ತ ಹೋಗೋಣ;

* ನಮ್ಮ ದೇಶದಲ್ಲಿ ಬೇಕಾದಷ್ಟು ಕಾಯ್ದೆ ಕಾನೂನುಗಳಿವೆ. ಆದರೆ ಅವು ಈ ನೆಲಕ್ಕೆ, ಜನಕ್ಕೆ ಸರಿಹೊಂದುತ್ತವೆಯೇ? ಇಲ್ಲ. ಶೇ.80ರಷ್ಟು ಹಳೆಯ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಈ ದೇಶದ ಪ್ರಧಾನಿಯೇ ಹಿಂದೊಮ್ಮೆ ಹೇಳಿದ್ದರು. ಅದಕ್ಕೆ ಒಂದು ಸಣ್ಣ ಉದಾಹರಣೆ ಅಂದರೆ ನ್ಯಾಯಾಲಯಗಳಲ್ಲಿ ಬಳಸುವ ‘ಮೈ ಲಾರ್ಡ್ ಮತ್ತು ಯುವರ್ ಆನರ್’ ಪದಗಳು. ಬೇಕಾ ನಮಗೆ ಲಾರ್ಡ ಮತ್ತು ಗಾರ್ಡ! ಓ ಮೈ ಗಾಡ್! ಬೇಕಾದರೆ ನ್ಯಾಯದೇವತೆಗೆ ಉದ್ದಂಡ ಬೀಳೋಣ. ಹೊರತು ಬೇರೆಲ್ಲ ಬೇಡ ಪ್ಲೀಸ್… ಅದೂ ಇರಲಿ,

* ನಾವೇ ಆರಿಸಿ ಕಳಿಸಿದ ಜನಪ್ರತಿನಿಧಿಯೆದುರು ಸಾರ್ವಜನಿಕವಾಗಿ ಆಗಬೇಕಾದ ಕೆಲಸವನ್ನು ಕೇಳಿ ಪಡೆಯುವ ಸ್ವಾತಂತ್ರ್ಯ ನಮಗೆ ಸಿಕ್ಕಿದೆಯೇ?

* ನಮ್ಮೂರಿನ ತಂಗುದಾಣ, ಟಾಯ್ಲೆಟ್ಟು, ರಸ್ತೆಗಳ ಮೇಲೆ ತೂಗುಹಾಕಿರುವ ‘ಇಂಥ ಶಾಸಕರ ಕೊಡುಗೆ’ ಎಂಬ ಬೋರ್ಡನ್ನು ತೆಗೆದುಹಾಕಿ ‘ಇದು ಸರ್ಕಾರದ ಸೇವೆ, ನಿಮ್ಮ ಪಾಲಿನ ಕರ್ತವ್ಯ’ ಎಂದು ಬರೆಸುವ ಸ್ವಾತಂತ್ರ್ಯ ನಮಗೆ ಸಿಕ್ಕಿದೆಯೇನು?

* ‘ನಾನು ಇಂತಿಂಥ ಘನಂದಾರಿ ಕೆಲಸವನ್ನು ಈ ಹಿಂದಿನ ಅವಧಿಯಲ್ಲಿ ಮಾಡಿದ್ದೇನೆ, ಅದಕ್ಕಾಗಿ ನನಗೆ, ನನ್ನ ಮಕ್ಕಳಿಗೆ, ಹೆಂಡತಿಗೆ ವೋಟ್ ಹಾಕಿ’ ಎಂದು ಡಿಮಾಂಡ್ ಮಾಡುವವರ ಮುಂದೆ ‘ನಾವು ಅವಕಾಶ ಕೊಟ್ಟದ್ದ ಕ್ಕಾಗಿ ನೀನು ಇಷ್ಟಾದರೂ ಮಾಡಲೇಬೇಕಿತ್ತು. ಈ ಸಾರಿ ಬೇರೆಯವರಿಗೆ ಅವಕಾಶ ಮಾಡಿಕೊಡಿ’ ಎಂದು ಹೇಳುವ ಸ್ವಾತಂತ್ರ್ಯ ನಮಗಿದೆಯೇ?

* ಸರಿಯಾಗಿ ಎದ್ದು ನಿಲ್ಲಲಾರದಷ್ಟು ವಯಸ್ಸಾದ ಮೇಲೂ ಎಲೆಕ್ಷನ್​ಗೆ ಏಕೆ ನಿಲ್ಲುತ್ತೀರೆಂದು ಕೇಳುವ ಸ್ವಾತಂತ್ರ್ಯ ಉಂಟೇ ನಮಗೆ?

* ನ್ಯಾಯವಾಗಿ ದೊರಕಬೇಕಾದ ಸರ್ಕಾರಿ ಸೇವೆಯನ್ನು ಲಂಚ ಕೊಡದೆ ಮಾಡಿಸಿಕೊಳ್ಳುವ ಸ್ವಾತಂತ್ರ್ಯ ದೇಶದ ಪ್ರಜೆಗಳಿಗೆ ಸಿಕ್ಕಿದೆಯೇನು?

* ಒಡೆದು ಆಳುವ ನೀತಿ ಬ್ರಿಟಿಷರ ಕೊಡುಗೆ. ಕುರ್ಚಿಯ ಭದ್ರತೆಗೆ ಇಂದಿಗೂ ನಮ್ಮವರು ಅದೇ ನೀತಿ ಅನುಸರಿಸುತ್ತಿದ್ದಾರೆ. ಬೇಡ ಬಿಡಿ ಅನ್ನುವ ಸ್ವಾತಂತ್ರ್ಯ ನಮಗೆ ಉಂಟಾ?

* ಜ್ಞಾನವನ್ನು ಕದಿಯಲಾಗದು ಎಂದು ಜಗತ್ತಿಗೇ ಹೇಳಿದ ದೇಶ ನಮ್ಮದು. ಆದರೆ ಹೊರಗಿನಿಂದ ಬಂದದ್ದೇ ಜ್ಞಾನ ಎಂಬಂತಾಗಿದ್ದು ಸುಳ್ಳೇನು?

* ನಮ್ಮ ಜೀವನ ವಿಧಾನವಾದ ಯೋಗ, ಪ್ರಾಣಾಯಾಮ, ಆಯುರ್ವೆದ ಒಳ್ಳೆಯದು ಅಂತ ವಿಶ್ವಸಂಸ್ಥೆ ನಮಗೆ ಹೇಳಬೇಕಾಯಿತಾ? ಇದಾ ಸ್ವಾತಂತ್ರ್ಯ

* ನಮಗೆ ನಮ್ಮದೇ ಆದ ಧೋರಣೆಗಳನ್ನು ಬೆಳೆಸಿಕೊಳ್ಳುವ ಸ್ವಾತಂತ್ರ್ಯ ಇಲ್ಲವೇ? ವಿದೇಶಿ ಅಧ್ಯಯನ ಪ್ರವಾಸದ ಕಾಯಂ ಕಾಯಿಲೆ ಮತ್ತು ಖಯಾಲಿ ಬೇಕಾ ನಮಗೆ?

* ಹಿಂದಿನದನ್ನು ಭೂತ ಎನ್ನುತ್ತೇವೆ. ಬ್ರಿಟಿಷರೂ ಹಿಂದಿನವರೇ ತಾನೆ? ಅನೇಕ ಸಂಗತಿಗಳಲ್ಲಿ ಇಂದಿಗೂ ಬ್ರಿಟಿಷ್ ಭೂತ ನಮ್ಮನ್ನು ಕಾಡುವುದನ್ನು ಬಿಡುತ್ತಿಲ್ಲವೇಕೆ? ಬಡತನ ಬಳಸಿಕೊಂಡು, ಆಮಿಷ ತೋರಿಸುವ ಸಂಪ್ರದಾಯ ಬ್ರಿಟಿಷರದ್ದು. ಇಂದು ಸರ್ಕಾರ ನಮಗೆ ಕರುಣಿಸುವ ‘ಭಾಗ್ಯ’ಗಳನ್ನು ಕಂಡಾಗ ಯಾರ ನೆನಪಾಗುತ್ತದೆ ಹೇಳಿ?

* ಬ್ರಿಟಿಷರ ಆಳ್ವಿಕೆಯಲ್ಲಿ ಹಕ್ಕಿನ ಪ್ರಜ್ಞೆ ಇರಲಿಲ್ಲ. ಆದರೆ ಅವರಿಂದಾಗಿ ಮತ್ತು ಅನಿವಾರ್ಯವಾಗಿ ಕರ್ತವ್ಯದ ಪ್ರಜ್ಞೆ ಬೆಳೆಸಿಕೊಂಡಿದ್ದೆವು. ಸ್ವಾತಂತ್ರ್ಯ ಫಲವಾಗಿ ಇಂದು ಹಕ್ಕನ್ನು ಬಲವಂತವಾಗಿ ಕೇಳುತ್ತಿದ್ದೇವೆ. ಕರ್ತವ್ಯಪ್ರಜ್ಞೆ ಯನ್ನು ಸಂಪೂರ್ಣವಾಗಿ ಮರೆತೇಬಿಟ್ಟಿದ್ದೇವೆ. ಇದೆಂಥ ಸ್ವಾತಂತ್ರ್ಯ

‘ಜನಗಣಮನ’ಕ್ಕೆ ತಕ್ಕನಾಗಿ ಜನಗಳ ಮನ. ಬ್ರಿಟಿಷರಿಗೆ ನಾವು ‘ಅಧಿನಾಯಕ ಜಯಹೇ ಜಯಹೇ…’ ಎಂದು ಹಾಡಿದೆವು. ಈಗಲೂ ಅದೇ ಮುಂದುವರಿದಿದೆ. ತಪ್ಪು ಯಾರದ್ದು? ತಪ್ಪಿನ ಆರಂಭ ಎಲ್ಲಿಂದ? ಸರಿಪಡಿಸಿಕೊಳ್ಳುವುದು ಯಾವಾಗ? ಹೇಗೆ? ಇನ್ನಾದರೂ ಆಗಲಿ ಆಲೋಚನೆಯ ಶುಭಾರಂಭ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top