ಇತ್ತೀಚಿನ ಎರಡು-ಮೂರು ಸಂದರ್ಭಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತಾನು ಸಾಗಿ ಬಂದ ಹಾದಿ, ಮುಂದೆ ಸಾಗಬೇಕಾದ ಗುರಿಯೆಡೆಗೆ ಅಲಕ್ಷ್ಯಮಾಡಿ, ಮುಖ್ಯವಾಗಿ ತನ್ನ ಐಡೆಂಟಿಟಿಯನ್ನೇ ಮರೆತಂತೆ ವರ್ತಿಸುತ್ತಿರುವುದನ್ನು ಕಂಡಾಗ ಅಚ್ಚರಿಯಾಗುತ್ತದೆ.
ಹೆಸರಾಂತ ಐರಿಷ್ ಸಾಹಿತಿ ಜಾರ್ಜ್ ಬರ್ನಾರ್ಡ್ ಷಾ ಪರಿಚಯ ಎಲ್ಲರಿಗೂ ಇದೆ. ಸಾಹಿತ್ಯ ಕೃಷಿಗಾಗಿ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ, ನೊಬೆಲ್ ಪುರಸ್ಕಾರ ಮತ್ತು ಆಸ್ಕರ್ ಅವಾರ್ಡನ್ನು ಪಡೆದ ಏಕೈಕ ಲೇಖಕ ಎಂಬ ದಾಖಲೆ ಇವರ ಹೆಸರಲ್ಲೇ ಇರುವುದು ವಿಶೇಷ. ಷಾ ಕುರಿತು ಹೇಳಲೇಬೇಕಾದ ಮತ್ತೊಂದು ವಿಷಯವಿದೆ. ಅದೇನೆಂದರೆ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಾಗ ಅವರು ಕೊರಳೊಡ್ಡಿದ್ದಕ್ಕಿಂತ ತಿರಸ್ಕರಿಸಿದ್ದೇ ಹೆಚ್ಚು. ಬಾಲ್ಯದಿಂದಲೂ ಮೈತುಂಬ ಬಡತನವೇ ಇದ್ದರೂ ನಾಟಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪ್ರತಿಷ್ಠಿತ ‘ನೈಟ್ಹುಡ್’ ಪುರಸ್ಕಾರ ಹುಡುಕಿಕೊಂಡು ಬಂದಾಗ ಅದನ್ನು ನಯವಾಗಿ ತಿರಸ್ಕರಿಸಿದ ವಿಚಿತ್ರ ವ್ಯಕ್ತಿ. ಇಂಥ ಬರ್ನಾರ್ಡ್ ಷಾ ಅವರ ಜೀವನದಲ್ಲಿ ನಡೆದ ಒಂದು ಅಪರೂಪದ ಪ್ರಸಂಗವನ್ನು ಇಲ್ಲಿ ಸಾಂರ್ದಭಿಕವಾಗಿ ಪ್ರಸ್ತಾಪಿಸುತ್ತಿದ್ದೇನೆ.
ಕೇವಲ ಇಂಗ್ಲೆಂಡಿನಲ್ಲಷ್ಟೇ ಅಲ್ಲ, ಹೊರ ಜಗತ್ತಿನಲ್ಲೂ ಚಿರಪರಿಚಿತರಾಗಿದ್ದ ಬರ್ನಾರ್ಡ್ ಷಾ ಒಂದು ದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಟಿಕೆಟ್ ತಪಾಸಕ ಇವರ ಬಳಿ ಬಂದು ಟಿಕೆಟ್ ಎಲ್ಲಿ ಅಂತ ಕೇಳಿದ. ಷಾ ಟಿಕೆಟ್ಟಿಗಾಗಿ ಹುಡುಕಾಟ ಶುರುಮಾಡಿದರು. ಧರಿಸಿದ್ದ ಕೋಟಿನ ಎಲ್ಲ ಕಿಸೆಗಳನ್ನೂ ತಡಕಾಡಿದರು. ಬ್ಯಾಗುಗಳಲ್ಲಿ ತಡಕಾಡಿದರು. ಟಿಕೆಟ್ ಮಾತ್ರ ಸಿಗುತ್ತಿಲ್ಲ. ಅಷ್ಟೊತ್ತಿಗಾಗಲೇ ಟಿಕೆಟ್ ತಪಾಸಕ ಇವರಾರೆಂಬುದನ್ನು ತಿಳಿದುಕೊಂಡಿದ್ದ. ಹೀಗಾಗಿ ‘ಸ್ವಾಮಿ, ಅಷ್ಟೆಲ್ಲ ಕಷ್ಟಪಡಬೇಡಿ. ನೀವ್ಯಾರೆಂಬುದು ನನಗೆ ಗೊತ್ತು. ನೀವು ಟಿಕೆಟ್ ಇಲ್ಲದೆ ಪ್ರಯಾಣ ಮಾಡುವಂಥವರಲ್ಲ ಎಂಬುದೂ ಗೊತ್ತು. ನಿರಾಳವಾಗಿರಿ’ ಎಂದ್ಹೇಳಿ ಟಿಕೆಟ್ ತಪಾಸಕ ಮುಂದಡಿ ಇಡಲು ಅಣಿಯಾದ. ಆಗ ಷಾ ಏನು ಹೇಳಿದರು ಗೊತ್ತೇನು? ‘ಅದೆಲ್ಲ ಸರಿಯಪ್ಪ, ನೀನೇನೋ ನನ್ನನ್ನು ನಂಬುತ್ತೀಯಾ. ಆದರೆ ನಾನು ಯಾವ ಸ್ಟೇಷನ್ನಿನಲ್ಲಿ ಇಳಿಯಬೇಕೆಂದು ತಿಳಿಯುವುದಕ್ಕಾದರೂ ಟಿಕೆಟ್ ಹುಡುಕಿಕೊಳ್ಳಲೇಬೇಕಲ್ಲ’ ಎಂದರು!
ಇತ್ತೀಚಿನ ಎರಡು ಮೂರು ಸಂದರ್ಭಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತಾನು ಸಾಗಿ ಬಂದ ಹಾದಿ, ಮುಂದೆ ಸಾಗಬೇಕಾದ ಗುರಿಯೆಡೆಗೆ ಅಲಕ್ಷ್ಯಮಾಡಿ, ಮುಖ್ಯವಾಗಿ ತನ್ನ ಐಡೆಂಟಿಟಿಯನ್ನೇ ಮರೆತಂತೆ ವರ್ತಿಸುತ್ತಿರುವುದನ್ನು ಕಂಡಾಗ ನನಗೆ ಬರ್ನಾರ್ಡ್ ಷಾ ಜೀವನದ ರೈಲು ಪ್ರಯಾಣದ ಪ್ರಸಂಗ ನೆನಪಾಗಿ ಕಾಡಿತು.
ಪ್ರಸಂಗ-1: ಸೇನಾ ಯೋಧರಿಗೆ ಒನ್ ರ್ಯಾಂಕ್ ಒನ್ ಪೆನ್ಶನ್ ನೀಡುವ ವಿಷಯಕ್ಕೆ ಸಂಬಂಧಿಸಿದ್ದು: ಸ್ವಲ್ಪ ಹಿಂದಕ್ಕೆ ಹೋಗಿ ಆಲೋಚನೆ ಮಾಡೋಣ. ಶತಮಾನಗಳ ಹಿಂದೆ ಚಂದ್ರಗುಪ್ತನ ಆಳ್ವಿಕೆ ಕಾಲದಲ್ಲಿ ಮಗಧ ದೇಶದಲ್ಲಿ ಇಂಥದ್ದೇ ಒಂದು ಸನ್ನಿವೇಶ ನಿರ್ವಣವಾಗಿತ್ತು. ಆಗ ಆಚಾರ್ಯ ಚಾಣಕ್ಯ ರಾಜನಿಗೆ ಒಂದು ಪತ್ರ ಬರೆಯುತ್ತಾನೆ. ‘‘ಬೇರೆಲ್ಲ ಹೇಗಾದರೂ ಇರಲಿ, ದೇಶ ಕಾಯುವ ಸೈನಿಕ ತನ್ನ ದಿನದ ಸಂಬಳಕ್ಕಾಗಿ, ಅರಸೊತ್ತಿಗೆ ತನಗೆ ನೀಡುವ ಬಾಕಿಗೋಸ್ಕರ ಕೈಯೊಡ್ಡಿ ಬೇಡುವ ಪ್ರಸಂಗ ಬಂದರೆ ಅಲ್ಲಿಗೆ ರಾಜ್ಯಭಾರ ಮಾಡುವ ನೈತಿಕ ಹಕ್ಕನ್ನು ಆ ದೇಶದ ರಾಜ ಕಳೆದುಕೊಂಡ ಎಂತಲೇ ಅರ್ಥ’’ ಎಂದು ಚಾಣಕ್ಯ ಪರೋಕ್ಷವಾಗಿ ಎಚ್ಚರಿಸಿದ್ದ. ಈ ವಿಷಯದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಕೇವಿನ್ ಕೂಲಿಗ್ ಹೇಳಿದ ಮಾತೂ ಅಷ್ಟೇ ಅರ್ಥಪೂರ್ಣವಾದದ್ದು. ಅವರು ಹೇಳುತ್ತಾರೆ- ‘ಯಾವ ದೇಶ ತನ್ನನ್ನು ರಕ್ಷಿಸುವವರನ್ನು ಮರೆಯುತ್ತದೆಯೋ ಅಂಥ ದೇಶ ತನ್ನನ್ನೇ ತಾನು ಮರೆತಂತೆ’. ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡುವ ಲಕ್ಷಾಂತರ ಸೈನಿಕರ ಬಹುಕಾಲದ ಬೇಡಿಕೆ ‘ಒನ್ ರ್ಯಾಂಕ್ ಒನ್ ಪೆನ್ಶನ್’ ಜಾರಿ ವಿಷಯದಲ್ಲಿ ಮೀನಮೇಷ ಎಣಿಸುತ್ತಿರುವ ಕೇಂದ್ರ ಸರ್ಕಾರ ಚಾಣಕ್ಯ ಚಂದ್ರಗುಪ್ತನಿಗೆ ಹೇಳಿದ ಮಾತನ್ನೊಮ್ಮೆ ಕೇಳಿಸಿಕೊಂಡರೆ ಒಳ್ಳೆಯದಲ್ಲವೇ? ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೋಸ್ಕರ ವಿವಿಧ ವೇತನ ಆಯೋಗಗಳು ಕಾಲಕಾಲಕ್ಕೆ ಶಿಫಾರಸು ಮಾಡುತ್ತಲೇ ಬರುತ್ತಿವೆ. ವೇತನ ಆಯೋಗಗಳ ಶಿಫಾರಸನ್ನು ಎಲ್ಲ ಸರ್ಕಾರಗಳೂ ಹೆಚ್ಚೂ ಕಡಿಮೆ ಯಥಾವತ್ತಾಗಿ ಜಾರಿ ಮಾಡುತ್ತಲೂ ಇವೆ. ನಿವೃತ್ತ ಯೋಧರ ಪಿಂಚಣಿ ಬೇಡಿಕೆ ಈಡೇರಿಕೆ ವಿಚಾರದಲ್ಲಿ ಮಾತ್ರ ಯಾಕೀ ತಾತ್ಸಾರ?
ಈ ವಿಷಯಕ್ಕೆ ಸಂಬಂಧಿಸಿ 2009ರ ಸೆಪ್ಟೆಂಬರ್ 9ರಂದು ಸುಪ್ರೀಂಕೋರ್ಟ್ ಒಂದು ಮಹತ್ವದ ತೀರ್ಪ ನೀಡಿದೆ. ನೇಮಕದ ಮತ್ತು ನಿವೃತ್ತಿಯ ದಿನಾಂಕ ಯಾವುದೇ ಇರಲಿ, ಆದರೆ ರ್ಯಾಂಕ್ನಲ್ಲಿ ಹಿರಿಯರಾದ ಸಿಬ್ಬಂದಿ ತನ್ನ ಕಿರಿಯರಿಗಿಂತ ಕಡಿಮೆ ನಿವೃತ್ತಿ ವೇತನವನ್ನು ಪಡೆಯಕೂಡದು ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ ನಮ್ಮ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ತೀರ್ಪ ಲೆಕ್ಕಕ್ಕಿಲ್ಲ.
ತಾರತಮ್ಯ ಹೇಗಿದೆ ನೋಡಿ. 1996ರ ಪೂರ್ವದಲ್ಲಿ ನಿವೃತ್ತನಾದ ಯೋಧನೊಬ್ಬ 2006ರಲ್ಲಿ ನಿವೃತ್ತಿ ಆದ ಯೋಧನಿಗಿಂತ ಶೇ.82 ಕಡಿಮೆ ನಿವೃತ್ತಿ ವೇತನ ಪಡೆಯುತ್ತಾನೆ. ಹಾಗೇ 1996ರ ಪೂರ್ವದಲ್ಲಿ ನಿವೃತ್ತಿಯಾಗುವ ಓರ್ವ ಮೇಜರ್ ಅಥವಾ ಸೇನಾಧಿಕಾರಿ 2006ರಲ್ಲಿ ನಿವೃತ್ತಿಯಾದವರಿಗಿಂತ ಶೇ.53ರಷ್ಟು ಕಡಿಮೆ ಪಿಂಚಣಿ ಪಡೆಯುತ್ತಾನೆ.
1983ರಲ್ಲಿ ಸುಪ್ರೀಂಕೋರ್ಟ್ ಅದಕ್ಕಿಂತ ಮಹತ್ವದ ಮತ್ತೊಂದು ತೀರ್ಪ ನೀಡಿತ್ತು. ಡಿ.ಎಸ್. ನಕ್ರಾ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಕೋರ್ಟ್ ಏನು ಹೇಳಿದೆ ಕೇಳಿ: ‘‘ದೇಶ ಕಾಯುವ ಸೈನಿಕರನ್ನು ಸರ್ಕಾರಗಳು ಗೌರವದಿಂದ ನಡೆಸಿಕೊಳ್ಳಬೇಕು. ವೇತನ ಮತ್ತು ಪಿಂಚಣಿ ಸರ್ಕಾರ ಕೊಡುವ ಕೊಡುಗೆಯಲ್ಲ, ಅದು ಸರ್ಕಾರದ ಕರ್ತವ್ಯ. ಸೇವೆಯ ಸಂದರ್ಭದಲ್ಲಿ ಸೈನಿಕನೊಬ್ಬ ಪ್ರಾಣ ಪಣಕ್ಕಿಟ್ಟು ಮಾಡುವ ಹೋರಾಟಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ’’. ನಮ್ಮ ಸರ್ಕಾರಗಳಿಗೆ ಈ ಮಾತೂ ಕೇಳುವುದಿಲ್ಲವೇ?
2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹರಿಯಾಣದ ರೇವಾರಿಯಲ್ಲಿ ಪ್ರಧಾನಿ ಅಭ್ಯರ್ಥಿ ಮೋದಿ ಮೊದಲ ಬೃಹತ್ ಪ್ರಚಾರ ರ್ಯಾಲಿ ನಡೆಸಿದರು. ಅಲ್ಲಿ ನಿವೃತ್ತ ಸೇನಾಯೋಧರು ದೊಡ್ಡ ಪ್ರಮಾಣದಲ್ಲಿ ಸೇರಿದ್ದರು. ಆಗ ಭಾಷಣ ಮಾಡುತ್ತ, ‘ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿ ವಿಷಯದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಶ್ವೇತಪತ್ರ ಹೊರಡಿಸಬೇಕು’ ಎಂದು ಮೋದಿ ಆಗ್ರಹಿಸಿದ್ದರು. ಅಷ್ಟೇ ಅಲ್ಲ, 2004ರಲ್ಲಿ ವಾಜಪೇಯಿ ಸರ್ಕಾರ ಮರಳಿ ಅಧಿಕಾರಕ್ಕೆ ಬಂದಿದ್ದರೆ ಅಂದೇ ಈ ಬೇಡಿಕೆ ಈಡೇರಿಬಿಡುತ್ತಿತ್ತು ಎಂದೂ ಹೇಳಿದ್ದರು. ಯೋಧರ ಬೇಡಿಕೆ ಈಡೇರಿಕೆ ಹತ್ತು ವರ್ಷ ವಿಳಂಬವಾಗಲು ಹಿಂದಿನ ಮನಮೋಹನ ಸಿಂಗ್ ಸರ್ಕಾರ ಕಾರಣ ಎನ್ನುವುದಾದರೆ, ಈಗೇಕೆ ಮೀನಮೇಷ ಎಂಬ ಪ್ರಶ್ನೆಗೂ ಉತ್ತರ ಕೊಡಬೇಕಲ್ಲವೇ?
ಪ್ರಸಂಗ-2: ಸೌರಭ್ ಕಾಲಿಯಾ ಪ್ರಕರಣವನ್ನು ಅಲಕ್ಷ್ಯಮಾಡುತ್ತಿರುವುದು: ಸೌರಭ್ ಕಾಲಿಯಾ, ಅರ್ಜುನ್ ರಾಂ, ಭನ್ವರ್ ಲಾಲ್ ಬಗರಿಯಾ, ಭಿಕಾ ರಾಮ್ ಮೂಲಾ ರಾಂ ಮತ್ತು ನರೇಶ್ ಸಿಂಗ್ ಜಮ್ಮು ಕಾಶ್ಮೀರದ ಕಕ್ಸರ್ ವಲಯದಲ್ಲಿ ದೇಶ ಕಾಯುವ ಕರ್ತವ್ಯದಲ್ಲಿದ್ದ ಜಾಟ್-4 ರೆಜಿಮೆಂಟಿನ ಯೋಧರು. ಕಾರ್ಗಿಲ್ ಪ್ರದೇಶದೊಳಕ್ಕೆ ಪಾಕಿಸ್ತಾನದ ಸೈನಿಕರು ಒಳನುಸುಳಿದ್ದನ್ನು ಮೊದಲು ಪತ್ತೆ ಮಾಡಿದ್ದೂ ಇವರೇ. ಆ ಅಪರಾಧಕ್ಕಾಗಿ 1999ರ ಮೇ 15ರಂದು ಪಾಕ್ ಸೈನಿಕರು ಕಾಲಿಯಾ ಮತ್ತು ಐವರು ಸಹವರ್ತಿಗಳನ್ನು ಸೆರೆ ಹಿಡಿದು ಕೊಂಡೊಯ್ದು ಒಂದು ವಾರ ಕಾಲ ಕೊಡಬಾರದ ಚಿತ್ರಹಿಂಸೆ ಕೊಟ್ಟು ಸಾಯಿಸಿಬಿಟ್ಟರು. 1999ರ ಜೂನ್ 9ರಂದು ರುಂಡಮುಂಡ ಬೇರಾಗಿದ್ದ, ಕಣ್ಣು, ಕಿವಿ ಸಹಿತ ಕೆಲ ಅಂಗಾಂಗಗಳೇ ಇಲ್ಲದ ದೇಹಗಳನ್ನು ಪಾಕ್ ಸೈನಿಕರು ಭಾರತಕ್ಕೆ ಹಸ್ತಾಂತರಿಸಿದರು.
ಪಾಕಿಸ್ತಾನ ಮಾಡಿದ ಪಾಪಕೃತ್ಯಕ್ಕೆ ಇಷ್ಟು ಪುರಾವೆ ಸಾಕಾಗದೆ? ಆದರೆ ಮನಮೋಹನ ಸಿಂಗ್ ಸರ್ಕಾರ 2013ರ ನವೆಂಬರ್ನಲ್ಲಿ ಸುಪ್ರಿಂಕೋರ್ಟ್ನಲ್ಲಿ ಏನೆಂದು ಅಫಿಡವಿಟ್ ಕೊಟ್ಟಿದೆ ಗೊತ್ತೇ? ‘ಕಾಲಿಯಾಗೆ ಪಾಕ್ ಸೈನಿಕರು ಕೊಟ್ಟ ಚಿತ್ರಹಿಂಸೆಯನ್ನು ಯುದ್ಧಾಪರಾಧ ಎಂದು ತಾನು ಪರಿಗಣಿಸುವುದಿಲ್ಲ’. ಈ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯವ ಇರಾದೆಯೂ ಸರ್ಕಾರಕ್ಕಿಲ್ಲ ಎಂದಿತು ಹೊಣೆಗೇಡಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಬೇಕಾದ್ದನ್ನು ಮಾಡಲಿ. ಕಾಲಿಯಾ ವಿಷಯದಲ್ಲಿ ಮೋದಿ ಸರ್ಕಾರವೂ ಹಾಗೇ ನಡೆದುಕೊಳ್ಳುತ್ತಿದೆ ಎಂದರೆ ನಂಬುತ್ತೀರಾ? ಕಾಲಿಯಾ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯುತ್ತೀರಾ ಎಂದು ಇತ್ತೀಚೆಗೆ ಸಂಸದ ರಾಜೀವ್ ಚಂದ್ರಶೇಖರ್ ವಿದೇಶಾಂಗ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ಗೆ ಲಿಖಿತವಾಗಿ ಕೇಳಿದ್ದರು. ಅದಕ್ಕೆ ಸಚಿವ ಸಿಂಗ್, ‘‘ಈ ವಿಷಯದಲ್ಲಿ ಈಗಾಗಲೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಮತ್ತು ಮಾನವಹಕ್ಕು ಆಯೋಗದ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲಾಗಿದೆ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯ ಪರಿಹಾರದ ಸಾಧ್ಯತೆಯನ್ನೂ ಪರಿಶೀಲಿಸಲಾಗಿದ್ದು, ಹಾಗೆ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ ಎಂಬ ತೀರ್ವನಕ್ಕೆ ಬರಲಾಗಿದೆ’’ ಎಂದು ಉತ್ತರ ಬರೆಯುತ್ತಾರೆ. ಅದಕ್ಕಿಂತ ಬೇಜವಾಬ್ದಾರಿ ಹೇಳಿಕೆ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರದ್ದು. ‘‘ಭಾರತ ಮತ್ತು ಪಾಕಿಸ್ತಾನಗಳೆರಡೂ ಕಾಮನ್ವೆಲ್ತ್ ಸಮೂಹದ ಸದಸ್ಯ ರಾಷ್ಟ್ರಗಳಾಗಿರುವುದರಿಂದ ಯುದ್ಧಾಪರಾಧದ ವಿಷಯದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲು ಹತ್ತುವುದು ಸಮಂಜಸವಲ್ಲ’’ ಎನ್ನುತ್ತಾರೆ ಅವರು. ಈ ವಿಷಯದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವರಸೆಯೇ ಬೇರೆ. ‘‘ಕಾಲಿಯಾ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯಬಹುದೇ ಎಂಬುದರ ಬಗ್ಗೆ ಸುಪೀಂಕೋರ್ಟ್ನ ಅಭಿಪ್ರಾಯ ಕೇಳಿ ಮುಂದಿನ ಹೆಜ್ಜೆ ಇಡುತ್ತೇವೆ’’ ಎನ್ನುತ್ತಾರೆ ಸುಷ್ಮಾ. ಇದೊಂಥರಾ ರಾಜಕೀಯ ಜಾಣ್ಮೆಯ ಉತ್ತರ. ಇಷ್ಟಾದದ್ದೇ ತಡ, ಸರ್ಕಾರದ ನಡೆ ಕುರಿತು ಸಾರ್ವತ್ರಿಕ ಟೀಕೆ ಹೆಚ್ಚಾಗುತ್ತಲೇ ಹೊಸ ಹೇಳಿಕೆ ನೀಡಿದ ಸುಷ್ಮಾ ಸ್ವರಾಜ್, ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಸುಪ್ರೀಂ ಕೋರ್ಟ್ಗೆ ನೀಡಿದ್ದ ಅಫಿಡವಿಟ್ಟನ್ನು ಹಿಂಪಡೆದು ಹೊಸ ಅಫಿಡವಿಟ್ಟನ್ನು ಸಲ್ಲಿಸುತ್ತೇವೆಂದು ಹೇಳಿದ್ದಾರೆ. ಅಸಲಿ ಸಂಗತಿ ಏನು ಗೊತ್ತೇ? ಈ ಪ್ರಕರಣವನ್ನು ಸೌರಭ್ ಕಾಲಿಯಾರ ವೃದ್ಧ ತಂದೆ ಎನ್.ಕೆ. ಕಾಲಿಯಾ ಕೋರ್ಟ್ಗೆ ತೆಗೆದುಕೊಂಡು ಹೋಗದಿದ್ದರೆ ಇಷ್ಟೊತ್ತಿಗೆ ಕಾಲಿಯಾ ನೆನಪೂ ಸರ್ಕಾರಕ್ಕೆ ಇರುತ್ತಿರಲಿಲ್ಲವೇನೋ!
ವೀರಪುತ್ರನನ್ನು ಕಳೆದುಕೊಂಡ ಎನ್.ಕೆ. ಕಾಲಿಯಾರ ಆಕ್ರಂದನವನ್ನೊಮ್ಮೆ ಕೇಳಿಸಿಕೊಳ್ಳಬೇಕು. ‘‘ಭಾರತ ಇಷ್ಟು ದೊಡ್ಡ ದೇಶವಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ದುರ್ದೈವ ಅಂದರೆ ಪಾಪಿ ಪಾಕಿಸ್ತಾನದ ವಿಷಯದಲ್ಲೇ ನಮ್ಮ ಸರ್ಕಾರಕ್ಕೆ ಒಂದು ಸ್ಪಷ್ಟ ನಿಲುವಿಲ್ಲ. ನಾನೊಬ್ಬ ವಿಜ್ಞಾನಿ, ಕಾನೂನಿನ ಬಗ್ಗೆ ಅಷ್ಟೇನೂ ಗೊತ್ತಿಲ್ಲ. ನಾನು ಸವೋಚ್ಚ ನ್ಯಾಯಾಲಯದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದೇನೆ. ಹದಿನಾರು ವರ್ಷಗಳ ನಂತರವಾದರೂ ಸರ್ಕಾರ ಮತ್ತು ನ್ಯಾಯಾಲಯಗಳು ಒಂದು ಸ್ಪಷ್ಟ ನಿರ್ಧಾರಕ್ಕೆ ಬರುತ್ತವೆ ಎಂಬ ಭರವಸೆ ಹೊಂದಿದ್ದೇನೆ. ಗೊತ್ತಿರಲಿ, ನಾನು ನನ್ನ ಮಗನಿಗಾಗಿ ಹೋರಾಡುತ್ತಿಲ್ಲ. ದೇಶಕ್ಕಾಗಿ ಹೋರಾಡಿದ, ಹೋರಾಡುತ್ತಿರುವ ಸೈನಿಕರ ಸ್ವಾಭಿಮಾನಕ್ಕಾಗಿ, ಅವರನ್ನು ಹೆತ್ತ ನೂರಾರು ಅಪ್ಪ, ಅಮ್ಮಂದಿರ ಮಿಡಿತಕ್ಕಾಗಿ’’ ಎಂದು ಸುಪ್ರೀಂಕೋರ್ಟ್ ಕಟ್ಟೆಯ ಮೇಲೆ ಕಣ್ಣೀರು ಹಾಕುತ್ತ ಹೇಳುತ್ತಾರೆ. ಪ್ರಕರಣದ ಮುಂದಿನ ವಿಚಾರಣೆ ಬರುವ ಆಗಸ್ಟ್ 25ಕ್ಕೆ ನಿಗದಿಯಾಗಿದೆ.
ಪ್ರಸಂಗ 3: ಪಿಡಿಪಿ ದೋಸ್ತಿ ಕಿ ಕಹಾನಿ: ದೆಹಲಿಯಲ್ಲಿ ಕೇಜ್ರಿವಾಲ್ ಎದುರು ಸೋತ ದುಃಖವನ್ನು ಮರೆಯಲು ಬಿಜೆಪಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ನೇರ ಶಾಮೀಲಾಗಿರುವ ಪಿಡಿಪಿಯೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸಿತು. ಪರಿಣಾಮ ಏನು? ಬಹಳ ವರ್ಷಗಳ ನಂತರ ಮತ್ತೊಮ್ಮೆ ಪ್ರತ್ಯೇಕತಾವಾದಿಗಳು ಬಾಲ ಬಿಚ್ಚತೊಡಗಿದ್ದಾರೆ. ಅದರ ಮುಂದಿನ ಪರಿಣಾಮ ನಿಜಕ್ಕೂ ಘನಘೊರ. ಯಾವ ಅನುಮಾನವೂ ಬೇಡ.
ಮೂಲಸಿದ್ಧಾಂತವನ್ನೇ ಮರೆತು, ಒಬ್ಬ ಜಿನ್ನಾನನ್ನು ಹೊಗಳಿದರೆ ಪರಿಣಾಮ ಏನಾಗುತ್ತದೆ ಎಂಬುದನ್ನು ಆಡ್ವಾಣಿಯವರನ್ನು ಕೇಳಿ ತಿಳಿದುಕೊಳ್ಳಬಹುದು. ಲಕ್ಷ, ಕೋಟಿ ಕಾರ್ಯಕರ್ತರಿಗೆ ನಿರಾಸೆಯಾದರೆ ಒಂದೊಳ್ಳೆಯ ಸರ್ಕಾರ ಕೊಟ್ಟ ಬಳಿಕವೂ ಎಂತಹ ಸೋಲು ಬರಬಹುದು ಎಂಬುದಕ್ಕೆ 2004ರ ಲೋಕಸಭಾ ಚುನಾವಣೆಯ ಸೋಲಿನ ದೃಷ್ಟಾಂತ ಕಣ್ಣಮುಂದೆಯೇ ಇದೆ.
ಕೊನೇ ಮಾತು: ರಾಮಮಂದಿರ ನಿರ್ವಿುಸದಿದ್ದರೆ, ಗೋ ಹತ್ಯೆ ನಿಷೇಧ ಮಾಡದಿದ್ದರೆ ಪರವಾಗಿಲ್ಲ. ಯಾಕೆಂದರೆ ಅದು ಈ ಸಲದ ನಿಮ್ಮ ಚುನಾವಣಾ ಅಜೆಂಡಾವೇ ಆಗಿರಲಿಲ್ಲ. ಆದರೆ ಮಾಡಲಾಗದ ಕೆಲಸದ ಬಗ್ಗೆ ಇಲ್ಲಸಲ್ಲದ ಸಬೂಬನ್ನು ಮಾತ್ರ ನೀಡಲು ಹೋಗಬಾರದು. ಮುಖ್ಯವಾಗಿ ನಾಲ್ಕು ಗೋಡೆಯ ನಡುವೆ ನಡೆಯಬೇಕಿದ್ದ ಚರ್ಚೆಯನ್ನು ಬೀದಿಗೆ ತರುವ ಕೆಲಸವನ್ನಾದರೂ ಮಾಡಬಾರದು. ಹಾಗಾದರೆ ಏರಿದ್ದು ಯಾವ ಟ್ರೇನು, ಇಳಿಯಬೇಕಾದ ಸ್ಟೇಷನ್ ಯಾವುದೆಂದು ನೆನಪಾಗತ್ತಾ?