ರಾಹುಲ್ ಎಲ್ಲಿಗೆ ಹೋಗಿದ್ದಾರೆ, ಯಾವಾಗ ಹಿಂದಿರುಗುತ್ತಾರೆಂಬ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗಿದೆ. ರಾಹುಲ್ ಒಂದು ವಾರ ವಿಶ್ರಾಂತಿ ತೆಗೆದುಕೊಂಡು ವಾಪಸು ಬರುತ್ತಾರೆಂದು ಕೆಲವರು ಹೇಳಿದರೆ, ಹದಿನೈದು ದಿನ ಅಂದರು ಇನ್ನು ಕೆಲವರು. ಈಗ ಒಂದು ತಿಂಗಳೂ ಕಳೆದಿದೆ. ರಾಹುಲ್ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆಂಬ ಮಾಹಿತಿ ಯಾರಿಗೂ ಗೊತ್ತಿಲ್ಲ.
ಯಾಕೋ ಈ ಸಲ ರಜಾ ಮಜಾದ ಕಡೆಯೇ ಮನಸ್ಸು ಸೆಳೆಯುತ್ತಿದೆ. ಅದಕ್ಕೆ ಕಾರಣ ನಾನಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ! ಪ್ರತಿಯೊಂದು ವ್ಯವಸ್ಥೆ ರೂಪಿಸುವುದರ ಹಿಂದೆ ಎಷ್ಟೊಂದು ವೈಜ್ಞಾನಿಕ ಚಿಂತನೆ ಇರುತ್ತದೆ ನೋಡಿ. ಹೇಗೆಂದರೆ ನಮ್ಮಲ್ಲಿ ನೌಕರಿಗೆ ಇರುವಷ್ಟೇ ಮಹತ್ವ ನೌಕರರ ವಾರದ ರಜೆಗೂ ಇದೆ. ನಮ್ಮಲ್ಲಿ ಮಾತ್ರವಲ್ಲ, ಬಹುಶಃ ಪ್ರಪಂಚದ ಇತರೆಡೆಗಳಲ್ಲೂ ಅದು ಹಾಗೇ ಇದೆ. ವಾರದ ರಜೆ ಭಾನುವಾರವೇ ಇರಬೇಕೇ? ಭಾನುವಾರದ ರಜಾಪದ್ಧತಿ ಭಾರತದಲ್ಲಿ ಹೇಗೆ ರೂಢಿಗೆ ಬಂತು ಎಂಬುದೆಲ್ಲ ವಿಸ್ತೃತ ಚರ್ಚೆಯ ವಿಷಯ. ಭಾನುವಾರ ಚರ್ಚ್‍ಗೆ ಹೋಗುವ ಸಂಪ್ರದಾಯ ಬೆಳೆದುಬಂದಿರುವ ಪಾಶ್ಚಾತ್ಯ ದೇಶಗಳಲ್ಲಿ ಭಾನುವಾರದ ರಜೆ ಜಾರಿಯಲ್ಲಿದೆ. ಹಾಗೇ, ಇಸ್ಲಾಂ ಸಂಪ್ರದಾಯಕ್ಕೆ ಒಗ್ಗಿಕೊಂಡಿರುವ ಪಾಕಿಸ್ತಾನದಲ್ಲಿ ಶುಕ್ರವಾರ ಅರ್ಧದಿನ ರಜಾ ಕೊಡಲಾಗುತ್ತದೆ. ಇನ್ನು ಕೆಲ ಮುಸ್ಲಿಂ ದೇಶಗಳಲ್ಲಿ ಶುಕ್ರವಾರ ಇಡೀದಿನ ರಜಾ ಕೊಡುವ ಪದ್ಧತಿಯೂ ಇದೆ. ಆದರೆ ಭಾರತದಲ್ಲಿ ಭಾನುವಾರದ ರಜಾ ಹೇಗೆ ಒಗ್ಗಿಕೊಂಡಿತು? ಎಷ್ಟು ವಿಚಿತ್ರ ನೋಡಿ. ಈ ಪ್ರಶ್ನೆಗೆ ಸಮರ್ಪಕ ಉತ್ತರ ಹುಡುಕುವುದು ಕಷ್ಟವಾದೀತು. ಇಲ್ಲಿ ರಜಾ ಯಾವ ವಾರ ಕೊಡಬೇಕು ಅನ್ನುವುದು ಮುಖ್ಯವಲ್ಲ. ಹಾಗೆ ರಜಾ ಕೊಡುವುದರ ಅಥವಾ ತೆಗೆದುಕೊಳ್ಳುವುದರ ಹಿಂದಿನ ಉದ್ದಿಶ್ಯ ಏನು ಎಂಬುದು ಮುಖ್ಯವಾದದ್ದು. ವಾರವೆಲ್ಲ ಚಾಕರಿಯಲ್ಲೇ ಕಳೆದುಹೋಗುವ ನೌಕರರಿಗೆ ಸ್ವಂತದ ಬದುಕಿಗೂ ಒಂದಿಷ್ಟು ವೇಳೆ ಸಿಗಲಿ ಎಂಬುದು ವಾರದ ರಜಾ ಕೊಡುವುದರ ಹಿಂದಿನ ಮರ್ಮ. ಅದಕ್ಕಿಂತ ಮುಖ್ಯವಾಗಿ, ಕೆಲಸದ ಏಕತಾನತೆ ಮತ್ತು ದಣಿವಿನ ನಡುವೆ ಒಂದು ಬ್ರೇಕ್ ಸಿಕ್ಕಿದರೆ ಕೆಲಸದ ಗುಣಮಟ್ಟ, ದಕ್ಷತೆ, ಉತ್ಪಾದಕತೆಯಲ್ಲಿ ಸುಧಾರಣೆಯಾಗುತ್ತದೆ, ನೌಕರರಲ್ಲಿ ಉಲ್ಲಾಸ ಹೆಚ್ಚಾಗಿ ಕಂಪನಿಗೆ ಹೆಚ್ಚಿನ ಲಾಭವಾಗುತ್ತದೆ ಎಂಬ ವೈಜ್ಞಾನಿಕ ಚಿಂತನೆ ವಾರದ ರಜಾ ಪದ್ಧತಿಯ ಹಿಂದಿರುತ್ತದೆ. ಈಗೀಗ ಕಾರ್ಪೊರೇಟ್ ಸಂಸ್ಕೃತಿ ಹೆಚ್ಚಾದಂತೆಲ್ಲ ವಾರಕ್ಕೆರಡು ದಿನದ ರಜೆಯ ಪದ್ಧತಿ ಜನಪ್ರಿಯವಾಗುತ್ತಿದೆ. ಈ ರಜೆಯ ವೇಳೆ ಕಾರ್ಪೊರೇಟ್ ಕಂಪನಿಗಳ ನೌಕರರು ದಣಿವಾರಿಸಿಕೊಂಡು ಮತ್ತೆ ಹುಮ್ಮಸ್ಸಿನಿಂದ ಕೆಲಸಕ್ಕೆ ಅಣಿಯಾಗುತ್ತಾರಾ? ಅಥವಾ ಆ ಎರಡು ದಿನ ಏನೇನೋ ಮಾಡಿ ಮತ್ತಷ್ಟು ದಣಿವು ಮಾಡಿಕೊಳ್ಳುತ್ತಾರಾ? ಈ ಕುರಿತು ಕಾರ್ಪೊರೇಟ್ ಕಂಪನಿಗಳೇ ಒಂದು ರಿಸರ್ಚ್ ಮಾಡುವುದು ಒಳ್ಳೆಯದು.
ವಿಷಯ ಅದೆಲ್ಲ ಅಲ್ಲವೇ ಅಲ್ಲ. ಮುಖ್ಯವಿಚಾರ ಇರುವುದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ದೈನಂದಿನ ರಾಜಕೀಯ ಜಂಜಾಟಕ್ಕೆ ಗುಡ್‍ಬೈ ಹೇಳಲು ರಜಾಹಾಕಿ ಹೋಗಿದ್ದರ ಕುರಿತು ದೇಶಾದ್ಯಂತ ವ್ಯಾಪಕ ಸುದ್ದಿ, ಚರ್ಚೆ, ಊಹಾಪೋಹಗಳಿಗೆ ಗ್ರಾಸವಾಗಿದೆಯಲ್ಲ, ಆ ಕುರಿತು ಒಂದಿಷ್ಟು ವಿಶ್ಲೇಷಣೆ ಮಾಡುವುದಕ್ಕೋಸ್ಕರ ಇಷ್ಟೆಲ್ಲ ಪೀಠಿಕೆ ಹಾಕಬೇಕಾಗಿ ಬಂತು. ಕಾಂಗ್ರೆಸ್ ಉಪಾಧ್ಯಕ್ಷರು ಒತ್ತಡ ನಿವಾರಣೆಗೆ ಏಕಾಂತಕ್ಕೆ ಹೋಗಿದ್ದು ತಪ್ಪೇ? ಆಲೋಚನೆ ಮಾಡಬೇಕಾದ ವಿಚಾರ.
ಉದಾಹರಣೆಗೆ ನೋಡಿ- ಅಮೆರಿಕ ಅಧ್ಯಕ್ಷರು ವರ್ಷದಲ್ಲಿ ಕನಿಷ್ಠ ಇಪ್ಪತ್ತು ದಿನ ಆಯಾಸ ಪರಿಹಾರಕ್ಕೆಂದೇ ಸಮಯ ಮೀಸಲಿಟ್ಟಿರುತ್ತಾರೆ. ಕುಟುಂಬ ಸಮೇತರಾಗಿ ವರ್ಷಕ್ಕೊಂದು ಬಾರಿ ಕನಿಷ್ಠ 15-20 ದಿನ ಯಾವುದೋ ಅಪರೂಪದ ಸ್ಥಳದಲ್ಲಿ ಕಾಲಕಳೆದು ಹೊಸ ಹುಮ್ಮಸ್ಸಿನಿಂದ ಕೆಲಸಕ್ಕೆ ಹಿಂದಿರುಗುತ್ತಾರೆ. ರಷ್ಯದ ಅಧ್ಯಕ್ಷ ಪುಟಿನ್ ಪ್ರತಿ ಮೂರು ತಿಂಗಳಿಗೊಮ್ಮೆ ಮೂರ್ನಾಲ್ಕು ದಿನ ಏಕಾಂತ ಅನುಭವಿಸುವ ಪರಿಪಾಠ ಇಟ್ಟುಕೊಂಡಿದ್ದಾರಂತೆ. ಚೀನಾ ಅಧ್ಯಕ್ಷ ಜಿನ್‍ಪಿಂಗ್ ವಾರದ ರಜೆಯ ಜೊತೆಗೆ ಆರು ತಿಂಗಳಿಗೊಮ್ಮೆ ಏಕಾಂತಕ್ಕೆ ಜಾರಿ ಮತ್ತೆ ಹೊಸ ಉಲ್ಲಾಸದೊಂದಿಗೆ ಕೆಲಸಕ್ಕೆ ಮರಳುತ್ತಾರಂತೆ. ಮೊನ್ನೆ ಮೊನ್ನೆ ತೀರಿಕೊಂಡರಲ್ಲ, ಆಧುನಿಕ ಸಿಂಗಾಪುರದ ನಿರ್ಮಾತೃ ಕುವಾನ್ ಅವರು ದಣಿವೆನಿಸಿದಾಗ ಪರಿಸರ ರಮ್ಯತಾಣಗಳಲ್ಲಿ ವಿವಿಧ ವಿಷಯಗಳ ಪರಿಣಿತರೊಂದಿಗೆ ಲೋಕಾಭಿರಾಮಕ್ಕಾಗಿ ಸಮಯ ಮೀಸಲಿಡುತ್ತಿದ್ದರಂತೆ. ರಜಾಕಾಲದಲ್ಲಿ ಕೆಲಸದ ಬದಲು ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಯೋಜನೆ ರೂಪಿಸುತ್ತಿದ್ದರಂತೆ. ಅಂದರೆ ರಜಾ ಅನುಭವಿಸುವುದರಲ್ಲೂ ಕುವಾನ್ ಹೊಸ ಪರಿಪಾಠ ಹುಟ್ಟುಹಾಕಿದರು ಅನ್ನಬೇಕು. ಅದಕ್ಕೇ ಅವರು ಪುಟ್ಟದೇಶ ಸಿಂಗಾಪುರವನ್ನು ಈ ರೀತಿ ಕಟ್ಟಲು ಸಾಧ್ಯವಾಯಿತು ಅಂತ ತೋರುತ್ತದೆ. ಹಾಗಾದರೆ ಈ ರಜಾ ಸಂಪ್ರದಾಯ ಭಾರತದ ಸಂದರ್ಭದಲ್ಲಿ ಹೊಸದೇ? ಖಂಡಿತವಾಗಿ ಹಾಗೆ ಹೇಳಲು ಕಾರಣವಿಲ್ಲ. ಹಾಗೆ ನೋಡಿದರೆ ಭಾರತದಲ್ಲಿ ಆಳುಗರು ರಜಾ ತೆಗೆದುಕೊಳ್ಳುವುದು, ದಣಿವಾರಿಸಿಕೊಳ್ಳುವುದು ಈ ಎಲ್ಲ ಸಂಪ್ರದಾಯಗಳು ಬ್ರಿಟಿಷರ ಆಳ್ವಿಕೆ ಕಾಲದಲ್ಲೇ ರೂಢಿಗೆ ಬಂದವು. ರಜಾ ದಿನಗಳನ್ನು ಕಳೆಯುವುದಕ್ಕಾಗಿಯೇ ಶಿಮ್ಲಾ, ಮನಾಲಿಯಂತಹ ಸುಂದರ ಪರಿಸರ ತಾಣಗಳಲ್ಲಿ ಬ್ರಿಟಿಷರು ಪಕ್ಕಾ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು. ಬೇಸಿಗೆಯ ಬಿಸಿಲಿನ ಝಳದಿಂದ ಆಳುವವರು ದಣಿವಾಗಬಾರದೆಂಬ ಉದ್ದೇಶದಿಂದಲೇ ಬ್ರಿಟಿಷ್ ಅಧಿಕಾರಿಗಳು ಶಿಮ್ಲಾದಲ್ಲಿ ಬೇಸಿಗೆ ಕಾಲದ ರಾಷ್ಟ್ರಪತಿ ಭವನ ನಿರ್ಮಾಣ ಮಾಡಿಕೊಂಡಿದ್ದರು.
ಸ್ವಾತಂತ್ರಾೃನಂತರದಲ್ಲಿ ದೇಶದ ಮೊದಲ ಪ್ರಧಾನಿ ನೆಹರು ಬ್ರಿಟಿಷರು ಹಾಕಿಕೊಟ್ಟಿದ್ದ ರಜಾಕಾಲದ ವಿಶ್ರಾಂತಿ ಸಂಪ್ರದಾಯವನ್ನು ಮುಂದುವರಿಸಿದರು. ಹೀಗಾಗಿ ಜವಾಹರಲಾಲ್ ನೆಹರು ತಮ್ಮ ವಾರಾಂತ್ಯವನ್ನು ಕಾಶ್ಮೀರ ಅಥವಾ ಡೆಹರಾಡೂನ್‍ನಲ್ಲಿ ಕಳೆಯುತ್ತಿದ್ದರು. ಹಾಗೇ ಮತ್ತೊಂದು ಉತ್ತಮ ಉದಾಹರಣೆ ಎಂದರೆ ಕಾಮ್ರೇಡ್ ಜ್ಯೋತಿ ಬಸು. ರಾಜಕೀಯ ವಲಯದಲ್ಲಿ ಅಪಾರ ಪ್ರೀತಿ, ಗೌರವಕ್ಕೆ ಭಾಜನರಾಗಿದ್ದ ಎಡಪಂಥದ ಮೇರುನಾಯಕ ಜ್ಯೋತಿ ಬಸು, ಪ್ರತಿಸಲದ ಬೇಸಿಗೆ ಕಾಲದಲ್ಲಿ ಹದಿನೈದು ದಿನ ರಜೆ ತೆಗೆದುಕೊಂಡು ಲಂಡನ್‍ನಲ್ಲಿದ್ದು ರಾಜಕೀಯ ಒತ್ತಡ, ಆಡಳಿತದ ಜಂಜಾಟದಿಂದ ಮುಕ್ತಿಪಡೆದು ಉಲ್ಲಸಿತರಾಗಿ ಹಿಂದಿರುಗುತ್ತಿದ್ದರು. ದಿವಂಗತ ರಾಜೀವ್ ಗಾಂಧಿ ಈ ದೇಶದ ಪ್ರಧಾನಿಯಾಗಿದ್ದಾಗ ಕುಟುಂಬ ಸಮೇತರಾಗಿ ರಣಥಂಬೋರ್ ಹುಲಿಧಾಮ, ಅಂಡಮಾನ್‍ನ ನಡುಗಡ್ಡೆಗಳಲ್ಲಿ ವಾರಗಟ್ಟಲೆ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಮಾಜಿ ಪ್ರಧಾನಿ ವಾಜಪೇಯಿ ಚಳಿಗಾಲದಲ್ಲಿ ರಜಾ ತೆಗೆದುಕೊಳ್ಳುವ ಅಭ್ಯಾಸವಿಟ್ಟುಕೊಂಡಿದ್ದರು. ಹಿಮಾಲಯದ ರೆಸಾರ್ಟ್ ಟೌನ್ ಎಂದೇ ಖ್ಯಾತಿಯಿರುವ ಮನಾಲಿ, ಕೇರಳದ ನದೀತಟ ಅವರಿಗೆ ಪ್ರಿಯವಾದ ವಿಶ್ರಾಂತಿ ತಾಣಗಳಾಗಿದ್ದವು. ಅಲ್ಲಿ ವಾಜಪೇಯಿ ಏಕಾಂತ ಅನುಭವಿಸುತ್ತಿದ್ದರು. ಜಯಲಲಿತಾರಿಗೆ ಕೊಡೈಕೆನಾಲ್ ಅಚ್ಚುಮೆಚ್ಚಿನ ತಾಣವಾಗಿತ್ತು. ಅಧಿಕಾರದಲ್ಲಿರಲಿ ಬಿಡಲಿ ಅವರು ಕೊಡೈಕೆನಾಲ್‍ನಲ್ಲಿ ತಂಗಿ ವಿಶ್ರಮಿಸುತ್ತಿದ್ದರು. ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರದ್ದು ಮತ್ತೊಂದು ಸ್ಟೈಲು. ಹೇಳಿಕೊಳ್ಳುವಂತಹ ಕೆಲಸವೇ ಇಲ್ಲದಿದ್ದರೂ, ಹೆಂಡತಿಯ ತವರೂರು ಇಂಗ್ಲೆಂಡ್‍ನಲ್ಲಿ ವರ್ಷದಲ್ಲಿ ಕನಿಷ್ಠ ಒಂದು ತಿಂಗಳು ವಿರಾಮವಾಗಿ ಕಳೆಯುವುದು ಅವರ ಹವ್ಯಾಸ.
ಇದೀಗ ರಾಹುಲ್ ಗಾಂಧಿಯ ಸರದಿ. ವಿಶ್ರಾಂತಿಗಾಗಿ ರಾಹುಲ್ ಅಜ್ಞಾತವಾಸಕ್ಕೆ ಸರಿದು ಒಂದು ತಿಂಗಳಿಗೂ ಹೆಚ್ಚಿನ ಸಮಯವಾಯಿತು. ಆದರೆ ರಾಹುಲ್ ಸಂದರ್ಭದಲ್ಲಿ ನಾವು ಗಮನಿಸಬೇಕಾದ ಮುಖ್ಯ ವಿಚಾರ ಏನೆಂದರೆ ಅವರು ಯಾತಕ್ಕಾಗಿ ರಜಾ ತೆಗೆದುಕೊಂಡಿದ್ದಾರೆ? ವಿಶ್ರಾಂತಿ ತೆಗೆದುಕೊಳ್ಳುವಷ್ಟು ಅವರು ದಣಿದಿದ್ದಾದರೂ ಹೇಗೆ ಎಂಬುದು. ಬಹುಶಃ ಈ ಪ್ರಶ್ನೆಗೆ ಸೋನಿಯಾರ ಬಳಿಯೂ ಉತ್ತರ ಇರಲಿಕ್ಕಿಲ್ಲ. ಅದಕ್ಕಿಂತ ಅಚ್ಚರಿ ಮೂಡಿಸಿದ್ದು, ರಾಹುಲ್ ವಿಶ್ರಾಂತಿ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಕಾಯ್ದುಕೊಂಡಿರುವ ಗೌಪ್ಯತೆ. ಬ್ರಿಟಿಷರನ್ನು ಬಿಟ್ಟುಬಿಡಿ. ನೆಹರುರಿಂದ ಹಿಡಿದು ವಾಜಪೇಯಿ, ಜಯಲಲಿತಾರವರೆಗೆ ಎಲ್ಲರೂ ಎಲ್ಲಿಗೆ ಯಾವಾಗ ವಿಶ್ರಾಂತಿಗೆ ಹೋಗುತ್ತಾರೆಂಬುದು ಪೂರ್ವನಿರ್ಧರಿತವಾಗಿರುತ್ತಿತ್ತು. ಬಹಿರಂಗ ಮಾಹಿತಿ ಇರುತ್ತಿತ್ತು. ಆದರೆ ರಾಹುಲ್ ವಿಷಯದಲ್ಲಿ ಹಾಗಾಗಲೇ ಇಲ್ಲ. ರಾಹುಲ್ ಎಲ್ಲಿಗೆ ಹೋಗಿದ್ದಾರೆ ಮತ್ತು ಯಾವಾಗ ಹಿಂದಿರುಗುತ್ತಾರೆಂಬ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗಿದೆ. ರಾಹುಲ್ ಒಂದು ವಾರ ವಿಶ್ರಾಂತಿ ತೆಗೆದುಕೊಂಡು ವಾಪಸು ಬರುತ್ತಾರೆಂದು ಕೆಲವರು ಹೇಳಿದರು. ಇನ್ನು ಕೆಲವರು ಹದಿನೈದು ದಿನ ಅಂದರು. ಈಗ ಒಂದು ತಿಂಗಳೂ ಕಳೆದಿದೆ. ರಾಹುಲ್ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆಂಬ ಮಾಹಿತಿ ಯಾರಿಗೂ ಗೊತ್ತಿಲ್ಲ.
ಬಹುಶಃ ರಾಹುಲ್ ವಿಶ್ರಾಂತಿಗೆ ಆಯ್ಕೆಮಾಡಿಕೊಂಡ ಕಾಲವೂ ಹೆಚ್ಚಿನ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಭೂಸ್ವಾಧೀನ ಮಸೂದೆಯಂತಹ ಮಹತ್ವದ ವಿಷಯದ ಮೇಲೆ ಚರ್ಚೆ ನಡೆಯುವ ವೇಳೆ ಸಂಸತ್ತಿನ ಅಧಿವೇಶನಕ್ಕೆ ರಾಹುಲ್ ಗೈರಾದರು. ರಾಹುಲ್ ಓರ್ವ ಯಃಕಶ್ಚಿತ್ ವ್ಯಕ್ತಿಯಾಗಿದ್ದರೆ ಈ ವಿಷಯವನ್ನು ಅಷ್ಟೊಂದು ಎಳೆದಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ ಅವರು ಲೋಕಸಭಾ ಸದಸ್ಯರು. ಅದಕ್ಕಿಂತ ಹೆಚ್ಚಾಗಿ ಅವರು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು. ಇಷ್ಟರಲ್ಲೇ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣ ಪಟ್ಟಾಧಿಕಾರ ಪ್ರಾಪ್ತವಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇಂಥ ಸಂದರ್ಭದಲ್ಲಿ ರಾಹುಲ್ ನಡೆ ಸರಿಯೆಂದು ಒಪ್ಪಿಕೊಳ್ಳುವುದು ಹೇಗೆ ?
ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷ ರಾಹುಲ್‍ರನ್ನು ಬೆಳೆಸುವ ರೀತಿಯಲ್ಲೇ ಎಡವಿದಂತೆ ತೋರುತ್ತಿದೆ. ಸೋನಿಯಾ ಪುತ್ರ, ರಾಜೀವ್ ಪುತ್ರ ಅಂದ ತಕ್ಷಣ ರಾಹುಲ್ ನಾಯಕತ್ವವನ್ನು ದೇಶದ ಜನರು ಒಪ್ಪಿಕೊಂಡುಬಿಡುತ್ತಾರೆಂದು ಕಾಂಗ್ರೆಸ್ ನಾಯಕರು ಭಾವಿಸಿಬಿಟ್ಟರು. ಜನ ಹಾಗೆ ಒಪ್ಪಿಕೊಳ್ಳಲು ರಾಹುಲ್‍ಗೆ ದೇಶವನ್ನು, ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಕನಿಷ್ಠ ಅರ್ಹತೆಯಾದರೂ ಇದೆಯೇ ಎಂಬುದನ್ನು ಆಲೋಚಿಸಲೇ ಇಲ್ಲ. ಒಮ್ಮೆ ರಾಹುಲ್‍ಗೆ ಕಾಂಗ್ರೆಸ್ ಚುಕ್ಕಾಣಿ ಕೊಡುವ ತೀರ್ಮಾನ ಮಾಡಿದಮೇಲೆ ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಅವರ ನಾಯಕತ್ವವನ್ನು ಪ್ರಯೋಗಕ್ಕೆ ಒಡ್ಡಬಹುದಿತ್ತು. ಆ ರಾಜ್ಯದ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ನೋಡಬಹುದಿತ್ತು. ಕೇಂದ್ರದಲ್ಲಿ ಹತ್ತು ವರ್ಷ ಕಾಂಗ್ರೆಸ್ ಪಕ್ಷದ ಸರ್ಕಾರವಿತ್ತಲ್ಲ, ಆಗ ಯಾವುದೋ ಒಂದು ಖಾತೆಯ ಮಂತ್ರಿಯಾಗಿಸಬಹುದಿತ್ತು. ಸಮಯ ಸಿಕ್ಕಾಗಲೆಲ್ಲ ಅವರು ಲೋಕಸಭೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಬಹುದಿತ್ತು. ಆದರೆ ಕಳೆದ ಲೋಕಸಭಾ ಚುನಾವಣೆ, ಅದಕ್ಕೂ ಮೊದಲು ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಅವರು ಮಾಡಿದ ಸಾಧನೆ ತೀರಾ ಕಳಪೆ. ಲೋಕಸಭಾ ಚುನಾವಣೆಯಲ್ಲಂತೂ ಕಾಂಗ್ರೆಸ್ ಪಕ್ಷಕ್ಕೆ ತೀರಾ ಮುಖಭಂಗವಾಯಿತು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಇಂಥ ಎಂದೂ ಕಂಡರಿಯದ ಸೋಲನುಭವಿಸಿತು. ಆದರೂ ಕಾಂಗ್ರೆಸ್ ನಾಯಕರು ಸೋಲಿನಿಂದ ಪಾಠ ಕಲಿತರೇ.. ಕಲಿಯಲೇ ಇಲ್ಲ. ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷದ ಸ್ಥಾನವೂ ಸಿಗಲಿಲ್ಲ. ಕೊನೇಪಕ್ಷ ಕಾಂಗ್ರೆಸ್ ಪಕ್ಷದ ಭವಿಷ್ಯದ ದೃಷ್ಟಿಯಿಂದ ಲೋಕಸಭೆಯಲ್ಲಿ ಪಕ್ಷದ ನಾಯಕತ್ವವನ್ನು ಓರ್ವ ಉತ್ಸಾಹಿ, ಪ್ರಭಾವಿ ಯುವನಾಯಕನಿಗೆ ಕೊಡಬಹುದಿತ್ತಲ್ಲ. ಹಾಗಂತ ನಾನಿಲ್ಲಿ ಖರ್ಗೆ ಯೋಗ್ಯ ಅಲ್ಲ ಎನ್ನುವ ತೀರ್ಮಾನ ಕೊಡುತ್ತಿಲ್ಲ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಬೇಕಾದ ಅನುಭವ, ಲವಲವಿಕೆ ಖರ್ಗೆಯವರಲಿಲ್ಲ. ಮತ್ತೊಂದೆಡೆ ವಯಸ್ಸಿನ ಕಾರಣದಿಂದ ಖರ್ಗೆ ಸರಿಯಾದ ಆಯ್ಕೆ ಅಲ್ಲ ಎಂಬುದು ಅಭಿಪ್ರಾಯ. ಇವೆರಡಕ್ಕೆ ಹೊರತಾಗಿಯೂ ಖರ್ಗೆಯವರಿಗೆ ಅವರದ್ದೇ ಆದ ಹಲವು ಇತಿಮಿತಿಗಳಿವೆ ಅಂತ ಮಾತ್ರ ಹೇಳಬಲ್ಲೆ. ಹಾಗೆ ಯೋಚನೆ ಮಾಡುವುದಾದರೆ ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್ ಅವರಂತಹ ಯುವ ಮುಖಗಳಿಗೆ ಒಂದು ಅವಕಾಶ ಕೊಟ್ಟು ನೋಡಬಹುದಿತ್ತು. ಏಕೆಂದರೆ ಈ ಪರಿ ಸೋತ ಕಾಂಗ್ರೆಸ್ ಒಂದು ಹೊಸಪ್ರಯೋಗ ಮಾಡಿ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಆದರೆ ಲಾಭ. ಹೋದರೆ ನಷ್ಟವಿರಲಿಲ್ಲ. ಅದನ್ನೆಲ್ಲ ಸ್ವತಃ ರಾಹುಲ್ ಗಾಂಧಿಯೇ ಆಲೋಚನೆ ಮಾಡಬೇಕಿತ್ತಲ್ಲವೇ? ಇದು ರಾಹುಲ್ ಆಲೋಚನಾ ಕ್ರಮದ ಸೋಲಿನ ಮುಂದುವರಿದ ಭಾಗ ಅಂತಲೇ ವ್ಯಾಖ್ಯಾನ ಮಾಡಬೇಕಲ್ಲವೇ? ಈಗ ಮತ್ತೊಮ್ಮೆ ಮುಖ್ಯಪ್ರಶ್ನೆ… ಹಾಗಾದರೆ ಏನೂ ಮಾಡದೆ ರಾಹುಲ್ ದಣಿದದ್ದು ಹೇಗೆ? ಹೀಗಾಗಿ ರಾಹುಲ್ ವಿಶ್ರಾಂತಿಯಿಂದ ಯಾವಾಗ ಬೇಕಾದರೂ ಬರಲಿ, ಬಂದ ಬಳಿಕ ಅವರು ಏನು ಮಾಡುತ್ತಾರೆಂಬ ಕುತೂಹಲ ಗರಿಗೆದರುವುದು ಸಹಜವಲ್ಲವೇ? ಇನ್ನೂ ಒಂದು ವಿಚಾರ ಹೇಳುತ್ತೇನೆ ಕೇಳಿ, ರಾಹುಲ್ ಅನುಪಸ್ಥಿತಿಗೆ ವಿಶ್ರಾಂತಿಗೂ ಹೊರತಾದ ಕಾರಣವಿದೆ ಎಂಬ ಅನುಮಾನ ನಿಮ್ಮನ್ನೂ ಕಾಡುವುದಿಲ್ಲವೇ? ಎಲ್ಲದಕ್ಕೂ ಕಾಲವೇ ಉತ್ತರ ಹೇಳಬೇಕಷ್ಟೆ!