ಶಿಕ್ಷಣ ನೀತಿ ಎಂಬುದು ಬೋರ್ಡ್‌ ಬದಲಿಸಿದಷ್ಟು ಸರಾಗವೇ?

ಮೂರ್ನಾಲ್ಕು ದಶಕಗಳ ನಂತರ ಸಿಕ್ಕ ಅವಕಾಶವನ್ನು ಆತುರಕ್ಕೆ ಬಿದ್ದು ಕೈಚೆಲ್ಲುವುದು ಸರಿಯಲ್ಲ

ಪ್ರತಿ ಮನುಷ್ಯನಲ್ಲಿರುವ ಚೈತನ್ಯವನ್ನು ಅಭಿವ್ಯಕ್ತಗೊಳಿಸುವುದೇ ಶಿಕ್ಷಣದ ಗುರಿ ಎಂದವರು ಸ್ವಾಮಿ ವಿವೇಕಾನಂದ. ಸಮಾಜದಲ್ಲಿ ಸಮಾನತೆ ಮೂಡಬೇಕೆಂದರೆ ಎಲ್ಲರೂ ಶಿಕ್ಷಿತರಾಗುವುದು ಅತ್ಯವಶ್ಯಕ ಎಂದು ಹೇಳಿದವರು ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌. ಶಿಕ್ಷಣ ಎಂದರೆ ಅಕಾಡೆಮಿಕ್‌ ಹಾಗೂ ವೃತ್ತಿಪರ ಅವಶ್ಯಕತೆಗಳನ್ನೂ ಮೀರಿ ಜ್ಞಾನ ಸಂಪಾದಿಸುವುದಾಗಿದ್ದು, ಪುಸ್ತಕಕ್ಕೆ ಸೀಮಿತವಾಗಿ ಕಂಠಪಾಠ ಮಾಡಿಸುವುದರಿಂದ ಜೀವನಕ್ಕೆ ಯಾವುದೇ ಸಹಕಾರಿಯಾಗುವುದಿಲ್ಲ ಎಂಬುದು ದೇಶದ ಎರಡನೇ ರಾಷ್ಟ್ರಪತಿ, ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್‌ ಹೇಳಿದ ಮಾತು!
ಋುಷಿಮುನಿಗಳ ಕಾಲದಿಂದಲೂ ಇತ್ತೀಚಿನ 300-400 ವರ್ಷದವರೆಗೂ ಭಾರತದಲ್ಲಿ ಅತ್ಯಂತ ವ್ಯವಸ್ಥಿತ, ಸಾಂಸ್ಥಿಕ ರೂಪ ಪಡೆದ ಶಿಕ್ಷಣ ನೀಡುವಿಕೆ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಮಹನೀಯರು ಶಿಕ್ಷಣದ ಕುರಿತು ಮರುವ್ಯಾಖ್ಯಾನ ಮಾಡುವ ಅವಶ್ಯಕತೆ ಏಕೆ ಬಂತು? ಏಕೆಂದರೆ, ಭಾರತದಲ್ಲಿ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು, ಅವರ ಹಿಂದಿನ ಆಕ್ರಮಣಕಾರಿಗಳಂತೆ ದೋಚಿಕೊಂಡು ಓಡಿಹೋಗುವ, ಬಲವಂತದಲ್ಲಿ ಆಳ್ವಿಕೆ ನಡೆಸುವ ಉಮೇದಿನಲ್ಲಿ ಇರಲಿಲ್ಲ. ಅವರ ಅಂತಹ ನಿರ್ಧಾರಕ್ಕೆ ಬ್ರಿಟನ್ನಿನ ಸಂಸತ್ತಿನಲ್ಲೂ ಪೂರ್ಣ ಬೆಂಬಲ ಸಿಗುತ್ತಿರಲಿಲ್ಲ. ಅದಕ್ಕಾಗಿಯೇ, ಭಾರತದಲ್ಲಿ ಅತ್ಯಂತ ಸದೃಢವಾಗಿರುವ ಶಿಕ್ಷಣ ವ್ಯವಸ್ಥೆಯ ಸ್ವರೂಪವನ್ನು ಬುಡಮೇಲಾಗಿಸಿ, ಈ ಶಿಕ್ಷಣ ಪಡೆದವರು ಕಪ್ಪು ಚರ್ಮದ ಬ್ರಿಟಿಷರನ್ನಾಗಿಸಲು ಆಲೋಚಿಸಿಯೇ, ಮೆಕಾಲೆ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು. ಭಾರತದಲ್ಲಿ ಅತ್ಯಂತ ಕೀಳುಮಟ್ಟದ ಜೀವನ ನಡೆಸುತ್ತಿರುವ ಜನರಿಗೆ ಶಿಕ್ಷಣ ಒದಗಿಸಿ, ಅವರನ್ನು ನಾಗರಿಕರನ್ನಾಗಿಸುತ್ತಿದ್ದೇವೆ ಎಂದು ಬ್ರಿಟನ್ನಿನಲ್ಲಿ ಹಾಗೂ ವಿಶ್ವದೆಲ್ಲೆಡೆ ಬಡಾಯಿ ಕೊಚ್ಚಿಕೊಂಡರು.
ಬ್ರಿಟಿಷರ ನಿರೀಕ್ಷೆಯಂತೆ ಮೆಕಾಲೆ ಶಿಕ್ಷಣ ಪದ್ಧತಿಯು ಬೃಹತ್‌ ಪ್ರಮಾಣದಲ್ಲಿ ಕಪ್ಪು ವರ್ಣೀಯ ಬ್ರಿಟಿಷರನ್ನು ಸೃಷ್ಟಿಸಿತು. ಅಂದರೆ ಭಾರತದ ಪ್ರಾಚೀನತೆಯನ್ನು ದ್ವೇಷಿಸುವ, ಬ್ರಿಟಿಷರೇ ಸರ್ವಶ್ರೇಷ್ಠರು ಎನ್ನುವ ಪೀಳಿಗೆಯೇ ತಯಾರಾಯಿತು. ಇವರಲ್ಲಿ ಅನೇಕರು ಅಪವಾದವೆಂಬಂತೆ ಬ್ರಿಟಿಷ್‌ ಶಿಕ್ಷಣ ಪಡೆದರೂ, ಭಾರತೀಯತೆಯ ಬೇರುಗಳನ್ನು ಕಡಿದುಕೊಳ್ಳಲಿಲ್ಲ. ಆದರೆ, ಇಂಥವರ ಸಂಖ್ಯೆ ಕಡಿಮೆ ಎಂಬುದು ಬೇರೆ ಮಾತು.
ಬ್ರಿಟಿಷರು ಮಾಡಿದ್ದ ಇಂತಹ ಘೋರ ಪ್ರಮಾದಗಳನ್ನು ಸರಿಪಡಿಸಿ ನವ ಭಾರತ ಕಟ್ಟುವ ಅವಕಾಶ ಅಂದಿನ ನಾಯಕರಿಗಿತ್ತು. ಅದು ಶಿಕ್ಷಣ ಇರಬಹುದು, ಸಾರ್ವಜನಿಕ ಆಡಳಿತ ವ್ಯವಸ್ಥೆ ಇರಬಹುದು. ಅದು ಸಾಧ್ಯವಾಗಲಿಲ್ಲ. ಹಾಗಾಗಿಯೇ, ಮೆಕಾಲೆ ಶಿಕ್ಷಣ ಪದ್ಧತಿಯನ್ನು ಬದಲಾಯಿಸಿ ಭಾರತೀಯ ಮೂಲದ ಶಿಕ್ಷಣ ವ್ಯವಸ್ಥೆ ರೂಪಿಸಬೇಕೆಂಬ ಕೂಗು ಮೊದಲಿನಿಂದಲೂ ಅನುರಣಿಸುತ್ತಲೇ ಇದೆ.
ಶಿಕ್ಷಣ ವ್ಯವಸ್ಥೆಯನ್ನು ನಿರ್ವಹಿಸಲು ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ-1986ನ್ನು ಜಾರಿಗೆ ತಂದಿತು. ಈ ನೀತಿಯ ಪ್ರಕಾರವೇ ಕಳೆದ ಮೂರು ದಶಕಕ್ಕೂ ಹೆಚ್ಚು ಸಮಯದಿಂದ ನಮ್ಮ ಶಿಕ್ಷಣ ಸಾಗುತ್ತಾ ಬಂದಿದೆ. ಈ ಪಯಣದಲ್ಲಿ ಅದು ಎಂಥಾ ವಿದ್ಯಾವಂತರನ್ನು, ಪದವೀಧರರನ್ನು ತಯಾರು ಮಾಡಬೇಕಿತ್ತು? ಸಂಶೋಧಕರು, ಉದ್ಯಮಿಗಳು, ನಾವೀನ್ಯತೆಗೆ ತುಡಿಯುವವರು, ಕುತೂಹಲ ಹೊಂದಿದವರು, ಕ್ಷೇತ್ರ ಪರಿಣಿತರು, ದೇಶದ ಇತಿಹಾಸದ ಬಗ್ಗೆ ಅರಿವು ಹೊಂದಿರುವ ಪ್ರಾಜ್ಞರು- ಹೀಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ, ಸ್ವಾವಲಂಬಿ ಭಾರತದ ಕನಸು ಕಾಣುವ ನಾಗರಿಕರನ್ನು ಸೃಷ್ಟಿಸಬೇಕಿತ್ತು.
ಆದರೆ, 86ರ ಶಿಕ್ಷಣ ನೀತಿಯಿಂದ ಈ ಕೆಲಸ ಆಗಿರುವುದು ಕಡಿಮೆ. ಬದಲಿಗೆ, ಈ ನೀತಿ ಸೃಷ್ಟಿಸಿದ್ದು- ಸಂಬಳಕ್ಕೆ ಅರಸಿ ಕಾರ್ಖಾನೆಗಳ ಗೇಟು ಅಲೆಯುವ, ಕಂಪನಿಯ ಕಾರಕೂನಿಕೆ ಮಾಡಬಯಸುವ ಪರಾವಲಂಬಿಗಳನ್ನು! ಇದೇ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತಿದ್ದರೂ ತಮ್ಮ ಬುದ್ಧಿ ಶಕ್ತಿಯ ಬಲದಿಂದ, ಸರಕಾರ ಹಾಗೂ ಸಮಾಜದ ನೆರವು ಪಡೆದು ಮೇಲೆ ಬಂದವರು ‘ಉತ್ತಮ ಅವಕಾಶ’ ಅರಸಿಕೊಂಡು ಅಮೆರಿಕ, ಯುರೋಪ್‌ ಸೇರಿದಂತೆ ವಿದೇಶಗಳಿಗೆ ಹಾರಿಹೋದರು. ದೇಶದಲ್ಲೆ ಸೇವೆ ಸಲ್ಲಿಸಬೇಕೆಂಬ ಆಕಾಂಕ್ಷೆಯಲ್ಲಿ ಉಳಿದುಕೊಂಡವರು ಕೆಲವೇ ಮಂದಿ.
2014ರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ, ಇಂಥ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಬೇಕೆಂದು ನಿರ್ಧರಿಸಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಕಾರ್ಯಕ್ಕೆ ಆಗಲೇ ಚಾಲನೆ ನೀಡಿತು. ವಿಜ್ಞಾನಿ ಡಾ. ಕೆ. ಕಸ್ತೂರಿ ರಂಗನ್‌ ಅಧ್ಯಕ್ಷ ತೆಯಲ್ಲಿ ಶಿಕ್ಷಣ ತಜ್ಞರ ಸಮಿತಿಯೊಂದು 2015ರಿಂದಲೇ ನೂತನ ಶಿಕ್ಷಣ ನೀತಿ ರೂಪಿಸಲು ಶ್ರಮಿಸಿ, ಸರಕಾರಕ್ಕೆ ವರದಿಯನ್ನೂ ಸಲ್ಲಿಸಿತು. ಅನೇಕ ಏಳುಬೀಳುಗಳ ನಂತರ, ಸುಮಾರು 3 ಲಕ್ಷ ಸಾರ್ವಜನಿಕ ಅಭಿಪ್ರಾಯಗಳನ್ನೂ ಒಳಗೊಂಡು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಿದ್ಧವಾಗಿ 2019ರಲ್ಲಿ ಸಾರ್ವಜನಿಕರಿಗೆ ಲಭ್ಯವಾಯಿತು.
ಈ ಶಿಕ್ಷಣ ನೀತಿಯ ಕುರಿತು ಸಾಕಷ್ಟು ಕುತೂಹಲಗಳಿದ್ದವು. ಕರಡು ನೀತಿ ಪ್ರಕಟವಾದ ಕೂಡಲೇ ದೇಶಾದ್ಯಂತ, ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಸಮಾಧಾನ ಭುಗಿಲೇಳುತ್ತದೆ ಎಂದು ಚರ್ಚೆಗಳಿದ್ದವು. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕೇಂದ್ರ ಸರಕಾರವು ದ್ರಾವಿಡ ಭಾಷೆಯ ನೆಲದಲ್ಲಿ ಹಿಂದಿ ಹೇರಲು ಮುಂದಾಗುತ್ತದೆ ಎಂಬ ಕೆಲವರ ಪೂರ್ವಾಗ್ರಹಗಳು ಇಂಥ ಅನುಮಾನಕ್ಕೆ ಕಾರಣವಾಗಿತ್ತು. ಸ್ವಲ್ಪಮಟ್ಟಿಗೆ ತಮಿಳುನಾಡಿನಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆಗಳು ನಡೆದವು. ಇದಕ್ಕೆ ಪೂರಕವಾಗಿ, ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಕರಡು ಪ್ರತಿಯಲ್ಲಿ, ರಾಜ್ಯಗಳನ್ನು ‘ಹಿಂದಿ ರಾಜ್ಯಗಳು ಹಾಗೂ ಹಿಂದಿಯೇತರ ರಾಜ್ಯಗಳು’ ಎಂದು ವಿಂಗಡಿಸಲಾಗಿತ್ತು. ಈ ಅಂಶ ಸಾಕಷ್ಟು ವಿವಾದವನ್ನೇ ಸೃಷ್ಟಿಸಿತು. ಈ ರೀತಿಯ ಸಾಲುಗಳು ಕರಡು ಸಿದ್ಧತೆಯ ವಿವಿಧ ಹಂತದಲ್ಲಿ ಇತ್ತಾದರೂ ಅಂತಿಮ ಕರಡಿನಲ್ಲಿ ತೆಗೆಯಲಾಗಿತ್ತು. ಆದರೆ ಆನ್‌ಲೈನ್‌ನಲ್ಲಿ ಹಳೆಯ ಪ್ರತಿ ಅಪ್‌ಲೋಡ್‌ ಆಗಿತ್ತೆಂಬುದು ಅರಿವಾಗಿ ನಂತರದಲ್ಲಿ ಈ ವಿವಾದ ತಣ್ಣಗಾಯಿತು. ಮುಖ್ಯವಾಗಿ, ಆಯಾ ರಾಜ್ಯದ ಭಾಷೆಯೂ ಸೇರಿ ಮಕ್ಕಳಿಗೆ ಯಾವುದೇ ಭಾಷೆಯನ್ನೂ ಹೇರಬಾರದು ಎನ್ನುವುದು ನೂತನ ಶಿಕ್ಷಣ ನೀತಿಯಲ್ಲಿರುವ ಭಾಷೆ ಕುರಿತ ನಿಲುವು.
ಇಂಥ ಹತ್ತಾರು ಚರ್ಚೆ, ಜಿಜ್ಞಾಸೆಯ ಬಳಿಕ 2020ರ ಜುಲೈ 29ರಂದು ಕೇಂದ್ರ ಸಂಪುಟ ಸಮಿತಿಯು ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಒಪ್ಪಿಗೆ ನೀಡಿತು. 1986ರ ಶಿಕ್ಷಣ ನೀತಿಯನ್ನು ಮೂರು ದಶಕದ ನಂತರ ಬದಲಾಯಿಸಿ ಹೊಸಯುಗಕ್ಕೆ ಕಾಲಿಡುವ ಸಂಕಲ್ಪ ಮಾಡಿತು.
ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಒಳಗೊಂಡೇ 21ನೇ ಶತಮಾನಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿ, ಅದರ ಗುರಿ ಸಾಧಿಸುವುದೇ ಒಟ್ಟಾರೆ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ ಎಂದು ಹೊಸ ನೀತಿಯಲ್ಲಿ ತಿಳಿಸಲಾಗಿದೆ. ಸಮಗ್ರ ಶಿಕ್ಷಣ ನೀಡುವಲ್ಲಿ ಭಾರತವು ಉಜ್ವಲ ಇತಿಹಾಸ ಹೊಂದಿದೆ. ಶಾಲೆ ಶಿಕ್ಷಣದ ನಂತರದ ಜೀವನಕ್ಕೆ ಸಿದ್ಧಪಡಿಸುವುದು ಹಾಗೂ ಜ್ಞಾನ ಸಂಪಾದನೆ ಮಾತ್ರ ಪ್ರಾಚೀನ ಭಾರತದ ಶಿಕ್ಷಣ ಮಿತಿಯಾಗಿರಲಿಲ್ಲ. ಬದಲಿಗೆ ತನ್ನನ್ನು ಅರಿಯುವುದು ಮತ್ತು ಬಂಧನದಿಂದ ಮುಕ್ತವಾಗುವುದು ಪ್ರಮುಖ ಗುರಿಯಾಗಿತ್ತು. ಅಂದರೆ, ಅರಿವೇ ಬೆಳಕು ಎಂಬ ಮಾತಿನಂತೆ, ಶಿಕ್ಷಣದ ಮೂಲ ಗುರಿ ಅರಿವು ಮೂಡಿಸುವುದೇ ಆಗಿತ್ತು.
ಚರಕ, ಶುಶ್ರುತ, ಆರ್ಯಭಟ, ಭಾಸ್ಕರಾಚಾರ್ಯ, ಚಾಣಕ್ಯ, ಪತಂಜಲಿ, ಪಾಣಿನಿ ಸೇರಿ ಅಸಂಖ್ಯಾತ ವಿದ್ವಾಂಸರನ್ನು ಭಾರತೀಯ ಶಿಕ್ಷಣನೀತಿ ಸೃಷ್ಟಿಸಿದೆ. ಗಣಿತ, ಖಗೋಳಶಾಸ್ತ್ರ, ಲೋಹಶಾಸ್ತ್ರ, ವೈದ್ಯಕೀಯ ವಿಜ್ಞಾನ, ಶಸ್ತ್ರಚಿಕಿತ್ಸೆ, ನಿರ್ಮಾಣ ಮತ್ತು ವಾಸ್ತುಶಿಲ್ಪ, ನೌಕಾಶಾಸ್ತ್ರ ಮತ್ತು ನೌಕಾಯಾನಶಾಸ್ತ್ರ, ಯೋಗ, ಲಲಿತಕಲೆ, ಚದುರಂಗ ಸೇರಿ ಅನೇಕ ರಂಗಗಳಲ್ಲಿ ವಿಶ್ವದ ಜ್ಞಾನ ವ್ಯವಸ್ಥೆಗೆ ನಮ್ಮ ಪ್ರಾಚೀನ ವಿದ್ವಾಂಸರು ಕೊಡುಗೆ ನೀಡಿದ್ದಾರೆ. ಭಾರತದ ಮೇಲೆ ಪ್ರಪ್ರಥಮವಾಗಿ ದಾಳಿ ಮಾಡಿದವರಿಂದ ಹಿಡಿದು ಬ್ರಿಟಿಷರವರೆಗೆ ಎಲ್ಲರ ಪ್ರಭಾವವನ್ನೂ, ಒಳಿತನ್ನು ಸಮ್ಮಿಳಿತಗೊಳಿಸಿಕೊಂಡು ತನ್ನದೇ ವಿಶಿಷ್ಟ ಸಂಸ್ಕೃತಿಯನ್ನು ಭಾರತ ರೂಪಿಸಿಕೊಂಡಿದೆ. ಇಲ್ಲಿನ ಭಾಷಾ ವೈವಿಧ್ಯತೆ, ನೃತ್ಯ, ಸಂಗೀತ ಪ್ರಕಾರಗಳು, ಕುಂಬಾರಿಕೆ, ಶಿಲ್ಪಶಾಸ್ತ್ರ, ಕಂಚಿನ ಪ್ರತಿಮೆಗಳು, ವಾಸ್ತುಶಿಲ್ಪ, ವಿಶಿಷ್ಟ ಆಹಾರ, ವಸ್ತ್ರೋದ್ಯಮ- ಈ ಎಲ್ಲವೂ ಭಾರತ ಜಗತ್ತಿಗೆ ನೀಡಿರುವ ಬೆರಗಿನ ಕೊಡುಗೆಗಳೇ. ಇಂತಹ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿ, ಸಂರಕ್ಷಿಸುವುದು ಮಾತ್ರವಲ್ಲ, ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಆಲೋಚನೆಗಳ ಮೂಲಕ ಮತ್ತಷ್ಟು ಪ್ರಭಾವಿಯಾಗಿಸಬೇಕು ಎಂಬುದು ಶಿಕ್ಷಣ ನೀತಿಯ ಉದ್ದೇಶ ಎಂದು ವರದಿಯ ಪ್ರಾರಂಭದಲ್ಲಿಯೇ ಕಸ್ತೂರಿ ರಂಗನ್‌ ಹೇಳಿದ್ದಾರೆ. ಈ ಆಶಯ ನಿಜಕ್ಕೂ ಮಹೋನ್ನತವಾದುದೇ!
ಇಂಥ ಶಿಕ್ಷಣ ನೀತಿಯನ್ನು ದೇಶದಲ್ಲಿ ತಾನೇ ಮೊದಲ ಜಾರಿಗೆ ತರಬೇಕು, ಅದರ ಹೆಗ್ಗಳಿಕೆಯನ್ನು ಬಿಟ್ಟುಕೊಡಬಾರದು ಎಂಬುದು ಕರ್ನಾಟಕ ಸರಕಾರದ ಬಯಕೆ. ಅಂತೆಯೇ ಅದು ಹೊಸ ಶಿಕ್ಷಣ ನೀತಿ ಜಾರಿಗೆ ಮುಂದಾಗಿದೆ. ದಶಕಗಳ ನಂತರ ನಡೆಯುತ್ತಿರುವ ಈ ಬದಲಾವಣೆ ಕರ್ನಾಟಕದಿಂದಲೇ ಜಾರಿಯಾಗಲಿ ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಆಸೆ. ಆದರೆ ಈ ನಡುವೆ ಕೆಲ ಸಮಸ್ಯೆಗಳು ತಲೆದೋರಿವೆ. ಮೊದಲನೆಯದಾಗಿ, ಈಗಿನ ಪದವಿ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕಲಿಯುತ್ತಿದ್ದ ಕನ್ನಡವನ್ನು ಎರಡು ಸೆಮಿಸ್ಟರಿಗೆ ಇಳಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಮುಂದಾಗಿದೆ ಎಂಬ ಮಾತುಗಳು ಕೇಳಿಬಂದವು. ಇದು ಶಿಕ್ಷಣ ನೀತಿಯಲ್ಲಿಲ್ಲ, ಸರಕಾರ ರಚಿಸಿದ್ದ ಸಮಿತಿಯೊಂದು ನೀಡಿದ ವರದಿಯಲ್ಲಿರುವ ಅಂಶ ಎಂದು ಸರಕಾರ ತಿಳಿಸಿದ ನಂತರ ಈ ವಿವಾದ ಸಣ್ಣಗಾಯಿತು.
ನಂತರದಲ್ಲಿ, ಕನ್ನಡವನ್ನು ಕಡ್ಡಾಯ ಮಾಡಲಾಗಿದೆ ಎಂಬ ಹೇಳಿಕೆಯನ್ನು ಸರಕಾರ ನೀಡಿತು. ಕನ್ನಡಿಗರಾಗಿ, ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮಾಡುವುದು ಸರಿಯೆನ್ನಿಸಬಹುದು. ಆದರೆ ಯಾವುದೇ ಭಾಷೆಯನ್ನೂ ಹೇರುವಂತಿಲ್ಲ ಎಂಬ ಶಿಕ್ಷಣ ನೀತಿಯ ಒಟ್ಟಾರೆ ಆಶಯಕ್ಕೇ ಇದು ಧಕ್ಕೆಯಾಗುತ್ತದೆ. ವಿದ್ಯಾರ್ಥಿಗಳು ಯಾವುದಾದರೂ ಎರಡು ಭಾಷೆ ಆಯ್ಕೆ ಮಾಡಿಕೊಳ್ಳಬಹುದು. ಕನ್ನಡವನ್ನು ಕಡ್ಡಾಯ ಮಾಡುವುದರಿಂದ, ಉನ್ನತ ಶಿಕ್ಷಣದಲ್ಲಂತೂ ಬಹುತೇಕ ವಿದ್ಯಾರ್ಥಿಗಳು ಇನ್ನೊಂದು ಭಾಷೆಯಾಗಿ ಇಂಗ್ಲಿಷನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು, ಪೋಷಕರೂ ಇದನ್ನು ಬೆಂಬಲಿಸುತ್ತಾರೆ. ಆ ರೀತಿಯಾದಾಗ ಸಂಸ್ಕೃತ, ಹಿಂದಿ, ಉರ್ದು ಸೇರಿ ಇನ್ನಿತರ ಭಾಷೆಗಳ ಗತಿಯೇನು? ಮುಖ್ಯವಾಗಿ ಹೆಚ್ಚಿನ ಭಾಷೆ ಕಲಿಯುವ ಅವಕಾಶವನ್ನು ವಿದ್ಯಾರ್ಥಿಗಳು ತಪ್ಪಿಸಿಕೊಳ್ಳುತ್ತಾರಲ್ಲವೆ? ಹೆಚ್ಚು ಭಾಷೆ ಕಲಿತಷ್ಟೂ ನಮ್ಮ ಭಾಷೆ ಗಟ್ಟಿಯಾಗುತ್ತ ಸಾಗುತ್ತದೆ, ವಿವಿಧ ಭಾಷೆಯಲ್ಲಿರುವ ಜ್ಞಾನ ಕನ್ನಡಕ್ಕೆ ಆಗಮಿಸುತ್ತದೆ. ಸರಸ್ವತಿ ಸಮ್ಮಾನ್‌ ಪುರಸ್ಕೃತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪನವರು ಅನೇಕ ಸಂದರ್ಭದಲ್ಲಿ ಹೇಳಿರುವಂತೆ, ಈಗಿನ ವಿಶ್ವವಿದ್ಯಾಲಯಗಳಲ್ಲಿರುವ ಪ್ರಾಧ್ಯಾಪಕರಿಗೆ ಸಂಸ್ಕೃತದ ಜ್ಞಾನ ಇಲ್ಲ. ಅವರು ಭಾರತೀಯ ಶಾಸ್ತ್ರ, ಕೃತಿಗಳನ್ನೂ ಇಂಗ್ಲಿಷ್‌ ಅನುವಾದದ ಮೂಲಕ ಕಲಿತಿರುತ್ತಾರೆ. ಈ ಸಂದರ್ಭದಲ್ಲಿ ಇಂಗ್ಲಿಷ್‌ ಅನುವಾದಕರ ಪೂರ್ವಾಗ್ರಹಗಳನ್ನೂ, ತಪ್ಪು ತಿಳಿವಳಿಕೆಗಳನ್ನೂ ಸೇರಿಸಿ ಕಲಿಯುತ್ತಾರೆ, ಅದನ್ನೇ ಮಕ್ಕಳಿಗೆ ಕಲಿಸುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಂಸ್ಕೃತ ಕಲಿತರೆ ವೈದ್ಯಕೀಯ, ವಿಜ್ಞಾನ, ಎಂಜಿನಿಯರಿಂಗ್‌ ಮುಂತಾದ ಕ್ಷೇತ್ರಗಳ ಪ್ರಾಚೀನ ಜ್ಞಾನ ಪ್ರಸಾರವಾಗುತ್ತದೆ. ಹಿಂದಿ, ಉರ್ದು ಭಾಷೆಗಳಿಗೂ ಇದು ಅನ್ವಯ.
ಈಗ ಜಾರಿ ಮಾಡುತ್ತಿರುವ ನೀತಿಯನ್ವಯ ಮೊದಲಿಗೆ ನಾಲ್ಕು ವರ್ಷದ ಪದವಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. ನೂತನ ಶಿಕ್ಷಣ ನೀತಿಯ ಅನೇಕ ಅಂಶಗಳಲ್ಲಿ ನಾಲ್ಕು ವರ್ಷದ, ‘ಮಲ್ಟಿಪಲ್‌ ಎಂಟ್ರಿ-ಮಲ್ಟಿಪಲ್‌ ಎಕ್ಸಿಟ್‌’ ಪದವಿ ಕೋರ್ಸುಗಳು ಒಂದಾದರೂ ಅದೇ ನೀತಿಯಲ್ಲ. ಮುಖ್ಯವಾಗಿ ಇಲ್ಲಿ ಶಿಕ್ಷಕರ ತರಬೇತಿ ವಿಚಾರ ಏಳುತ್ತದೆ. ಒಂದು ಕೋರ್ಸ್‌ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿ, ತನ್ನ ಕೋರ್ಸಿಗೆ ಸಂಬಂಧಪಡದ ಇನ್ನೊಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು, ಇದನ್ನು ಬಹುಶಾಸ್ತ್ರೀಯ ಅಧ್ಯಯನ ಎನ್ನಲಾಗುತ್ತದೆ. ಉದಾಹರಣೆಗೆ, ಕಲಾ ವಿಭಾಗದ ವಿದ್ಯಾರ್ಥಿ, ತನಗೆ ಇಷ್ಟವೆಂದು ಜೀವಶಾಸ್ತ್ರ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಮುಕ್ತ ವಾತಾವರಣಕ್ಕೆ ತಕ್ಕ ಪಠ್ಯಕ್ರಮ ಸಿದ್ಧವಾಗಿದೆಯೇ, ಅದಕ್ಕೆ ತಕ್ಕಂತೆ ಹೊಂದಿಕೊಳ್ಳಲು ಶಿಕ್ಷ ಕರು ಸಜ್ಜಾಗಿದ್ದಾರೆಯೇ? ಎಂಬುದು ಖಚಿತವಿಲ್ಲ. ನೂತನ ಶಿಕ್ಷಣ ನೀತಿ ಜಾರಿಯಾದ ನಂತರವೇ ಆರಂಭವಾಗುವ ಶಿಕ್ಷಣ ಸಂಸ್ಥೆಗಳಿಗೆ ಈ ಪ್ರಕ್ರಿಯೆ ಸರಾಗವಾಗಬಹುದು. ಆದರೆ ಈಗಾಗಲೆ ಹತ್ತಾರು, ನೂರಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು, ಅಲ್ಲಿನ ಮೂಲಸೌಕರ್ಯ, ಸಿಬ್ಬಂದಿ ಸಂಖ್ಯೆ, ಸಿಬ್ಬಂದಿ ತರಬೇತಿ ಅಷ್ಟು ಸರಾಗವಾಗಿ ಬದಲಾಗುವುದಿಲ್ಲ. ಹೆಚ್ಚಿನ ಮೂಲಸೌಕರ್ಯಕ್ಕೆ ಸಂಸ್ಥೆಗಳು ಹೆಚ್ಚು ಹಣ ವ್ಯಯಿಸಬೇಕು. ಆಗ ಸಹಜವಾಗಿಯೇ ಶಿಕ್ಷಣದ ವೆಚ್ಚವೂ ಹೆಚ್ಚಳವಾಗುವ ಅಪಾಯವಿರುತ್ತದೆ. ಇಂತಹ ಅನೇಕ ಸವಾಲುಗಳು ಶಿಕ್ಷಣ ನೀತಿ ಜಾರಿಯಲ್ಲಿ ಇವೆ.
ದೇಶಾದ್ಯಂತ ಅನೇಕ ಚರ್ಚೆಗಳಾಗಿ ಅಂತಿಮವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದ್ದ ಮಾತೃಭಾಷಾ ಶಿಕ್ಷ ಣ ವಿಚಾರದಲ್ಲಿ ಶಿಕ್ಷಣ ನೀತಿ ಕೆಲವು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದೆ. ಮಾತೃಭಾಷೆ ಅಥವಾ ಮನೆ ಭಾಷೆಯಲ್ಲಿ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು ಬೇಗ ಅರಿಯುತ್ತಾರೆ. ಆದರೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ, ತಮ್ಮದಲ್ಲದ ಭಾಷೆ ಕಲಿಯಲು ಮುಂದಾಗುವ ವಿದ್ಯಾರ್ಥಿಗಳು ಪ್ರಾರಂಭದಲ್ಲೆ ಸ್ಪರ್ಧೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಸ್ಥಳಿಯ ಭಾಷೆಯಲ್ಲೆ ಶಿಕ್ಷಣ ನೀಡಬೇಕು ಎಂಬುದಕ್ಕೆ ಒತ್ತು ನೀಡಬೇಕಿದೆ. ಪ್ರಮುಖವಾಗಿ, ಭಾರತೀಯ ಭಾಷೆಯಲ್ಲಿ ರಚಿಸಲಾಗಿರುವ ವಿಜ್ಞಾನ ಪಠ್ಯಪುಸ್ತಕಗಳು ಇಂಗ್ಲಿಷ್‌ನಷ್ಟು ಗುಣಮಟ್ಟ ಹೊಂದಿಲ್ಲ ಎಂದು ನೀತಿಯಲ್ಲಿ ತಿಳಿಸಲಾಗಿದೆ. ವನವಾಸಿಗಳ ಭಾಷೆಯೂ ಸೇರಿ ಎಲ್ಲ ಸ್ಥಳೀಯ ಭಾಷೆಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಪುಸ್ತಕ ರಚನೆಯಾಗಬೇಕು ಹಾಗೂ ಆ ಪಠ್ಯ ಬೋಧಿಸಲು ಅತ್ಯುತ್ತಮ ಶಿಕ್ಷಕರನ್ನೇ ನಿಯೋಜಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದೆ.
ಭಾಷೆ ಆಯ್ಕೆ ಪೋಷಕರಿಗೆ ಬಿಟ್ಟ ವಿಚಾರ ಎಂದು ಸಾಂವಿಧಾನಿಕ ಪೀಠ ಈ ಆದೇಶ ನೀಡಿರುವ ಕಾರಣ, ಸಂವಿಧಾನ ತಿದ್ದುಪಡಿಯೊಂದೇ ಪರಿಹಾರ. ಇದೀಗ ನೂತನ ಶಿಕ್ಷಣ ನೀತಿಯಲ್ಲೂ ಅಂತಹದ್ದೇ ತಪ್ಪು ಆಗದಂತೆ ಎಚ್ಚರಿಕೆ ಹೆಜ್ಜೆ ಇಡಬೇಕಾಗುತ್ತದೆ. ಆತುರಾತುರದಲ್ಲಿ ಸಮಿತಿಗಳನ್ನು ರಚಿಸಿ, ಒಂದು ವಾರ- ಹತ್ತು ದಿನದಲ್ಲಿ ವರದಿ ಪಡೆದು ಅನುಷ್ಠಾನಕ್ಕೆ ಮುಂದಾಗುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ.
ಇಲ್ಲಿ ಗಮನಿಸಬೇಕಾಗಿರುವುದು, ಶಿಕ್ಷಣ ನೀತಿಯನ್ನು ಒಂದೇ ವರ್ಷದಲ್ಲಿ ಜಾರಿ ಮಾಡಬೇಕೆಂದಿಲ್ಲ. ಸಂಪೂರ್ಣ ಶಿಕ್ಷಣ ನೀತಿ ಜಾರಿಗೆ ಒಟ್ಟು 10 ವರ್ಷ ಸಮಯ ನಿಗದಿಪಡಿಸಲಾಗಿದೆ. ಏಕೆಂದರೆ, ಸ್ವತಂತ್ರ ಭಾರತದ 7 ದಶಕದಲ್ಲಿ ನಿರ್ಮಾಣಗೊಂಡಿರುವ ವ್ಯವಸ್ಥೆಗಳಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. ಹಾಗೆ ನೋಡಿದರೆ ಭಾರತದಂತಹ ವೈವಿಧ್ಯಮಯ ದೇಶಕ್ಕೆ 10 ವರ್ಷವೂ ಕಡಿಮೆಯೇ.
ಈ ಬದಲಾವಣೆ ಎಲ್ಲಿಂದ ಆಗಬೇಕು? ಮೊದಲಿಗೆ ಉನ್ನತ ಶಿಕ್ಷಣದಲ್ಲಿ ಬದಲಾವಣೆಯಾಗಬೇಕೊ, ಪ್ರಾಥಮಿಕ ಶಿಕ್ಷಣದಲ್ಲೊ? ಪ್ರಾಥಮಿಕ ಶಿಕ್ಷಣದಿಂದ ಬದಲಾವಣೆಯನ್ನು ಆರಂಭಿಸಿದರೆ ಹಂತಹಂತವಾಗಿ ಪದವಿ, ಸ್ನಾತಕೋತ್ತರ, ಸಂಶೋಧನೆವರೆಗೆ ವಿಸ್ತಾರವಾಗುತ್ತದೆ. ಹಂತಹಂತವಾಗಿ ಮೂಲಸೌಕರ್ಯ, ಪಠ್ಯಕ್ರಮ, ಶಿಕ್ಷಕರ ಮನೋಧರ್ಮವೂ ಬದಲಾಗುತ್ತದೆ. ಮುಖ್ಯವಾಗಿ ಇಡೀ ಶಿಕ್ಷಣ ವ್ಯವಸ್ಥೆಯ ಆಧಾರವೇ ಪ್ರಾಥಮಿಕ ಶಿಕ್ಷಣ. ಸಂವಿಧಾನದಲ್ಲಿ ಹೊಣೆಗಾರಿಕೆ ಹಂಚಿಕೆಯಲ್ಲಿ, ಪ್ರಾಥಮಿಕ ಶಿಕ್ಷಣ ಎನ್ನುವುದು ರಾಜ್ಯ ಸರಕಾರದ ಬಳಿಯೇ ಇರುತ್ತದೆ. ಕೇಂದ್ರ ಸರಕಾರ ಒಂದು ಮಟ್ಟವನ್ನು ಸೂಚಿಸುತ್ತದೆ ಅಷ್ಟೆ. ಆದರೆ ಸಂಪೂರ್ಣ ಜಾರಿ ಮಾಡುವ ಹೊಣೆ ರಾಜ್ಯ ಸರಕಾರದ ಮೇಲೆಯೇ ಇರುತ್ತದೆ. ಆದರೆ ಪ್ರಾಥಮಿಕ ಶಾಲೆಗಳಲ್ಲಿ ನೀತಿಯ ಜಾರಿ ಆರಂಭವಾದಂತೆ ಕಾಣುತ್ತಿಲ್ಲ.
ನೂತನ ಶಿಕ್ಷಣ ನೀತಿಯಲ್ಲಿ, ಸರಕಾರ ಹೇರುವುದಕ್ಕಿಂತಲೂ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮೆದುರಿರುವ ಅಗಾಧ ಕೋರ್ಸ್‌ಗಳು, ಪಠ್ಯಕ್ರಮಗಳು, ವಿಷಯಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಮನಸ್ಸಿಗೆ ಬಂದ ಆಯ್ಕೆಗಳನ್ನು ಮಾಡಿಕೊಂಡಿದ್ದೇ ಆದಲ್ಲಿ ಮತ್ತೆ ವಿದ್ಯಾರ್ಥಿಯ ಓದು ವ್ಯರ್ಥವಾಗುತ್ತದೆ. ಇಂತಹ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಸಾಕಷ್ಟು ಅರಿವು ಇರಬೇಕಾಗುತ್ತದೆ. ಅವರಿಗೆ ಮಾರ್ಗದರ್ಶನ ಮಾಡಲು ಸರಕಾರಿ ಮತ್ತು ಖಾಸಗಿ ವ್ಯವಸ್ಥೆಯೂ ಇರಬೇಕಾಗುತ್ತದೆ. ಈ ಕುರಿತು ಸಮಾಜದಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಕಾರ್ಯವೂ ಆಗಬೇಕು.
ಈಗ ತಾಂತ್ರಿಕ ಶಿಕ್ಷಣದತ್ತ ಹೆಚ್ಚು ಗಮನ ಕೇಂದ್ರೀಕರಿಸಿ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುತ್ತಿದೆ. ಮಾನವಿಕ ವಿಷಯಗಳ ಕುರಿತು ಗಮನ ನೀಡದಿದ್ದರೆ ಭವಿಷ್ಯದಲ್ಲಿ ಕೇವಲ ಕೈಗಾರಿಕಾ ನೌಕರರು ಸೃಷ್ಟಿಯಾಗುತ್ತಾರೆಯೇ ಹೊರತು, ಜ್ಞಾನದ ಪ್ರಸರಣವಾಗಬೇಕೆಂಬ ಶಿಕ್ಷಣ ನೀತಿಯ ಉದ್ದೇಶ ಸೋಲುತ್ತದೆ. ನೀತಿಯ ಜಾರಿಗೆ ಕೇಂದ್ರ ಸರಕಾರದ ಹಂತದಲ್ಲಿ ನಡೆಯಬೇಕಾದ ಕೆಲವು ಸಾಂಸ್ಥಿಕ ಬದಲಾವಣೆಗಳು, ಹಣಕಾಸಿನ ಲಭ್ಯತೆಯಂತಹ ವಿಚಾರಗಳು ಇನ್ನೂ ಚಾಲನೆಗೊಳ್ಳಬೇಕಿದೆ.
ಈ ನೀತಿ ಪರಿಣಾಮಕಾರಿಯಾಗಬೇಕೆಂದರೆ, ಈಗಿರುವ ಬೋರ್ಡ್‌ ತೆಗೆದು ಹೊಸ ಬೋರ್ಡ್‌ ಹಾಕುವುದು ಖಂಡಿತ ಅಲ್ಲ. ಆಮೂಲಾಗ್ರ ಬದಲಾವಣೆ ಎಂಬುದೇ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಶಯ. ಸಣ್ಣಪುಟ್ಟ ಬದಲಾವಣೆಗಳಿಂದ ಏನೂ ಆಗದು. ಈಗಾಗಲೆ ಅಂತಹ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ, ಹೆಚ್ಚಿನ ಸಾಧನೆಯೇನೂ ಆಗಿಲ್ಲ. ಒಂದಷ್ಟು ದಿನ ಗಾಡಿ ಓಡಿ ಮತ್ತೆ ಕೆಟ್ಟು ನಿಲ್ಲುತ್ತದೆ. ಹಾಗೇನಾದರೂ ಈಗಿರುವ ಮೂಲಸೌಕರ್ಯದೊಳಗೇ ಹೊಸ ವಿಷಯವನ್ನು ತುರುಕಿದ್ದೇ ಆದರೆ ಮಹಾನ್‌ ತಪ್ಪಾಗುತ್ತದೆ. ಮೂರ್ನಾಲ್ಕು ದಶಕಗಳ ನಂತರ ಸಿಕ್ಕ ಈ ಅವಕಾಶವನ್ನು, ಆತುರಕ್ಕೆ ಬಿದ್ದು ಕೈಚೆಲ್ಲುವುದು ಸರಿಯಲ್ಲ.
 
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top