-ಆಲೋಚನೆ ಮಾಡಿದರೆ ಆಡಳಿತ ಸುಧಾರಣೆಯ ಓನಾಮ ಇಲ್ಲಿಂದಲೇ ಆಗುತ್ತದೆ
“ನಾನು ಒಂದು ದಿನ ಐಎಎಸ್ ಆಗಬೇಕು”. ಇದು ಲಕ್ಷಾಂತರ ಪ್ರತಿಭಾನ್ವಿತ ಯುವ ಭಾರತೀಯರ ಕನಸು. ಶಾಲೆಯಲ್ಲಿದ್ದಾಗ ಶಿಕ್ಷಕರು ನಮ್ಮನ್ನು ಎದ್ದು ನಿಲ್ಲಿಸಿ ಮುಂದೆ ಏನಾಗಬೇಕು ಎಂದುಕೊಂಡಿದ್ದೀಯ ಎಂದು ಕೇಳಿದರೆ “”ಡಿಸಿ ಆಗಬೇಕು” ಎಂದು ಹೇಳಿದವರೆಷ್ಟೋ.
ಲಕ್ಷಾಂತರ ಜನರಂತೆಯೇ ನನಗೂ ಕಾಲೇಜು ದಿನಗಳಲ್ಲಿ ಐಎಎಸ್ ಬಗ್ಗೆ ಸೆಳೆತ ಇದ್ದದ್ದು ನಿಜ. ಐಎಎಸ್ ಹುದ್ದೆ ಕುರಿತು ಯಾಕಿಷ್ಟು ಆಕರ್ಷಣೆ ಎಂಬುದರ ಕುರಿತು ಅನೇಕ ಬಾರಿ ಪ್ರಶ್ನೆಗಳೆದ್ದಿವೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಮುಖ್ಯವಾಗಿ, ಆ ಹುದ್ದೆಗಿರುವ ಅಪರಿಮಿತ ಅಧಿಕಾರ. ಎರಡನೆಯದ್ದು ಉನ್ನತಾಧಿಕಾರದ ಠಾಕುಠೀಕು. ಇದು ಬ್ರಿಟಿಷ್‌ರಾಜ್ ಕಾಲದ ಅಧಿಕಾರಿಗಳಿಂದ ಬಳುವಳಿಯಾಗಿಯೇ ಬಂದಿದೆ. ಅದೇ ಮಾನಸಿಕತೆಯೇ ಈಗಿನ ಬಹುಪಾಲು ಐಎಎಸ್‌ನವರ ಮನದಲ್ಲಿ ಬೇರೂರಿರುವುದು ದುರ್ದೈವ. ಮೂರನೆಯ ಕಾರಣವೆಂದರೆ ನೆಮ್ಮದಿಯ ಜೀವನ ಎಂಬ ಸಾಮಾನ್ಯರ ನಂಬಿಕೆ. ಜೀವನದ ಮೂರ್ನಾಲ್ಕು ವರ್ಷ ಕಷ್ಟ ಪಟ್ಟು ಯುಪಿಎಸ್ಸಿ ಪರೀಕ್ಷೆ ಬರೆದು ಪಾಸ್ ಆದರೆ ಜೀವನ ಸೆಟಲ್. ಅಧಿಕಾರ ಚಲಾಯಿಸಿಕೊಂಡು ಜೀವನ ಸಾಗಿಸಬಹುದು. ಮತ್ತೂ ಕಷ್ಟಪಟ್ಟರೆ ಉತ್ತಮ ಸ್ಥಾನ, ಪ್ರಚಾರ ಸಿಗುತ್ತದೆಯಾದರೂ, ಯಾವುದೇ ನಾವೀನ್ಯತೆ, ಲಿತಾಂಶ ತೋರದಿದ್ದರೂ ಉದ್ಯೋಗಕ್ಕಂತೂ ನಷ್ಟವಿಲ್ಲ.
ಆಡಳಿತ ಸೇವೆಯಲ್ಲಿರುವ ಉನ್ನತ ಅಧಿಕಾರಿಗಳ ಸ್ವಾತಂತ್ರ್ಯ ಮತ್ತು ಸಮಗ್ರತೆಯನ್ನು ಉತ್ತೇಜಿಸುವುದಕ್ಕಾಗಿಯೇ ಸಾಂವಿಧಾನಿಕ ರಕ್ಷಣೆಯನ್ನು ಒದಗಿಸಲಾಗಿದೆ. ಐಎಎಸ್/ಐಪಿಎಸ್ ಅಧಿಕಾರಿಗಳನ್ನು ಸೇವೆಯಿಂದ ಉಚ್ಛಾಟಿಸುವುದು ಸುಲಭದ ಮಾತಲ್ಲ. ಹಾಗಾಗಿಯೇ ಏನೋ ಸೋಮಾರಿತನ ಮೈಗೂಡಿಸಿಕೊಂಡ, ಯಾವುದೇ ಮುನ್ನೋಟವಿಲ್ಲದ ಕೆಲವು ಅಧಿಕಾರಿಗಳನ್ನೂ ಇಲ್ಲಿ ಕಾಣಬಹುದು.
ಒಮ್ಮೆ ಯುಪಿಎಸ್ಸಿ ಉತ್ತೀರ್ಣರಾದರೆ ಇಡೀ ಜೀವನ ಮತ್ತೆ ಯಾವುದೇ ಪರೀಕ್ಷೆ ಎದುರಿಸುವ ಅವಶ್ಯಕತೆಯೂ ಇಲ್ಲ. ಖಾಸಗೀಕರಣ, ಬೆಲೆ ಏರಿಕೆಯ ನಡುವೆ ಆಟೋಮೇಷನ್ ಬಂದು ಉದ್ಯೋಗ ಕಡಿತ ಮಾಡುತ್ತಿರುವಾಗ ಹೆಚ್ಚುಹೆಚ್ಚು ಐಟಿಬಿಟಿ ಉದ್ಯೋಗಿಗಳು, ಎಂಜಿನಿಯರಿಂಗ್, ಮೆಡಿಕಲ್ ಪದವೀಧರರು ಐಎಎಸ್ ಕಡೆಗೆ ಆಕರ್ಷಿತರಾಗಲು ಈ ಎಲ್ಲವೂ ಕಾರಣ ಇದ್ದಿರಬೇಕು ಎನಿಸುತ್ತದೆ. ನೀವೇ ಗಮನಿಸಿ, ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ 10 ಅಥವಾ 50 ಹೆಸರುಗಳನ್ನು ತೆಗೆದುಕೊಂಡರೆ ಹೆಚ್ಚಿನವರು ಎಂಜಿನಿಯರಿಂಗ್, ಮೆಡಿಕಲ್ ಹಿನ್ನೆಲೆ ಉಳ್ಳವರೆ ಆಗಿರುತ್ತಾರೆ. ಹಾಗೆ ನೋಡಿದರೆ ಐಟಿಬಿಟಿ, ಮೆಡಿಕಲ್ ಕ್ಷೇತ್ರದಲ್ಲಿ ಸಿಗುವ ವೇತನಕ್ಕೂ, ಬಡ್ತಿಗೂ ಐಎಎಸ್ ವೇತನಕ್ಕೂ ಹೋಲಿಕೆ ಮಾಡಲಾಗದು. ಐಟಿಬಿಟಿಯ ಚಿಗುರು ಮೀಸೆಯ ಹುಡುಗರು ಪಡೆಯುವ ಒಂದು ಲಕ್ಷ ರೂ. ವೇತನ ಪಡೆಯಲು ಐಎಎಸ್ ಅಧಿಕಾರಿ ಒಂದಿಷ್ಟು ವರ್ಷ ಕಾಯಬೇಕಾಗುತ್ತದೆ. ಹಾಗಾಗಿ ಐಎಎಸ್ ಕುರಿತ ಆಕರ್ಷಣೆಗೆ ವೇತನಕ್ಕಿಂತಲೂ ಅಲ್ಲಿನ ಅಧಿಕಾರ, ಸಮಾಜದಲ್ಲಿ ಘನತೆ, ಮಾನ್ಯತೆ ಹಾಗೂ ಉದ್ಯೋಗ ಖಾತ್ರಿ ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು, ತಾವು ಅಖಿಲ ಭಾರತ ಸೇವೆಯಲ್ಲಿದ್ದುಕೊಂಡು ದೇಶ ಸೇವೆ ಮಾಡಬೇಕು, ಭ್ರಷ್ಟ ವ್ಯವಸ್ಥೆಯನ್ನು ದೂರದಲ್ಲಿ ನಿಂತು ದೂರುವ ಬದಲು ಅದರೊಳಗಿದ್ದೇ ಸರಿಪಡಿಸುವ ಆದರ್ಶಗಳನ್ನು ಹೊತ್ತು ಐಎಎಸ್ ಸೇರಿದವರೂ ಇದ್ದಾರೆ. ಆದರೆ ಅವರ ಸಂಖ್ಯೆ ಎಷ್ಟಿರಬಹುದು? ಇವರಲ್ಲೂ ಅನೇಕರು ಒಮ್ಮೆ ಹುದ್ದೆಗೆ ಸೇರಿದ ಕೂಡಲೆ ಇತರೆ ಅಧಿಕಾರಿಗಳ ಜತೆಗೆ ತಾವೂ ‘ಸಾಮಾನ್ಯರಾಗಿ’ಬಿಡುತ್ತಾರೆ ಎಂಬ ಅಪವಾದವಿದೆ. ಇನ್ನು ಕೆಲವರು ಅಲ್ಲಿನ ನೈಜ ವ್ಯವಸ್ಥೆ ಅರಿವಾಗಿ, ಅದರಿಂದ ರೋಸಿಹೋಗಿ ರಾಜೀನಾಮೆ ನೀಡಿ ಹೊರಬರುವವರೂ ಇದ್ದಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ತಮ್ಮ ‘ಪಾವಿತ್ರ್ಯ’ ಉಳಿಸಿಕೊಂಡು ಸಮಾಜಕ್ಕೆ ಒಳಿತು ಮಾಡುತ್ತಾರೆ.
ಮೊದಲೇ ಹೇಳಿದ ಹಾಗೆ, ಐಎಎಸ್ ಎಂದ ತಕ್ಷಣ ಮನಸ್ಸಿಗೆ ಬಂದು ನಿಲ್ಲುವುದು ಜಿಲ್ಲಾಧಿಕಾರಿಯೇ! ಈ ಹುದ್ದೆ ಜನಸಾಮಾನ್ಯರಲ್ಲಿ ಅಚ್ಚಳಿಯದೇ ಉಳಿಯಲು ಕಾರಣವೇನು? ಯುಪಿಎಸ್ಸಿ ಪರೀಕ್ಷೆಯಲ್ಲಿ ಪಡೆದ ರ್ಯಾಂಕ್ ಆಧಾರದಲ್ಲಿ ಮತ್ತು ಆ ವರ್ಷ ಲಭ್ಯವಿರುವ ಖಾಲಿ ಹುದ್ದೆಗಳ ಆಧಾರದಲ್ಲಿ ಇಂಡಿಯನ್ ಾರಿನ್ ಸರ್ವಿಸ್(ಭಾರತೀಯ ವಿದೇಶಾಂಗ ಸೇವೆ)ಐಎಎಸ್, ಐಪಿಎಸ್, ಐಆರ್‌ಎಸ್(ಇಂಡಿಯನ್ ರೆವಿನ್ಯೂ ಸರ್ವಿಸ್) ಸೇರಿ ನಾನಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆರಂಭಿಕವಾಗಿ ಆ ವರ್ಷದ ಬ್ಯಾಚ್‌ನಲ್ಲಿ ಆಯ್ಕೆಯಾದವರಿಗೆ ಸಾಮಾನ್ಯ ೌಂಡೇಶನ್ ತರಬೇತಿ ನೀಡಿದ ನಂತರ ಆಯಾ ಸೇವೆಗಳಿಗೆ ಅನುಗುಣವಾಗಿ ಪ್ರತ್ಯೇಕ ತರಬೇತಿ ತರಗತಿಗಳು ಮುಂದುವರೆಯುತ್ತವೆ.
ಐಎಎಸ್ ಸೇವೆಗೆ ಆಯ್ಕೆಯಾದವರು ಮುಂದಿನ ಹಂತದ ತರಬೇತಿ ಪಡೆಯಲು ಉತ್ತರಾಖಂಡದ ಮಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸಿ ರಾಷ್ಟ್ರೀಯ ಆಡಳಿತಾತ್ಮಕ ಅಕಾಡೆಮಿಗೆ ಬರುತ್ತಾರೆ. ಈ ಸಂಸ್ಥೆಯ ಘೋಷವಾಕ್ಯ ಏನು ಗೊತ್ತೆ? ‘ಶೀಲಂ ಪರಮ ಭೂಷಣಂ’ ಎಂಬ ಸಂಸ್ಕೃತ ವಾಕ್ಯ. ಅಂದರೆ, ಶೀಲ ಎಂಬುದು ಒಬ್ಬ ವ್ಯಕ್ತಿಗೆ ಅತ್ಯಂತ ಮುಖ್ಯವಾದದ್ದು ಎಂದು. ನೋಡಿ, ಆಡಳಿತಾತ್ಮಕ ತರಬೇತಿ ನೀಡುವ ಸಂಸ್ಥೆಯಲ್ಲಿ ಶೀಲದ ಕುರಿತು ಉಪದೇಶ ಏಕೆ? ಏಕೆಂದರೆ, ಎಂತಹದ್ದೇ ಉತ್ತಮ ತರಬೇತಿ ಪಡೆದರೂ, ಅತ್ಯುತ್ತಮ ಜ್ಞಾನವಿದ್ದಾಗ್ಯೂ ವ್ಯಕ್ತಿತ್ವದಲ್ಲಿ ಲೋಪವುಂಟಾದರೆ, ಭ್ರಷ್ಟಾಚಾರ, ಅನಾಚಾರ, ಸ್ವಜನ ಪಕ್ಷಪಾತ, ಸ್ವಜಾತಿ ಪಕ್ಷಪಾತದಂತಹ ಕೃತ್ಯಗಳಿಂದ ಶೀಲವನ್ನು ಕಳೆದುಕೊಂಡರೆ ಉಳಿದೆಲ್ಲ ಉತ್ತಮ ಗುಣಗಳೂ ಅವಗುಣಗಳಾಗುತ್ತವೆ. ಇದೇ ಕಾರಣಕ್ಕೆ ಶೀಲಕ್ಕೆ ಈ ಸಂಸ್ಥೆಯಲ್ಲಿ ಒತ್ತು ನೀಡಲಾಗುತ್ತದೆ. ಅಲ್ಲಿನ ತರಬೇತಿ, ಶಿಸ್ತು, ಭಾರತದ ಸರ್ವಾಂಗೀಣ ಉನ್ನತಿಯ ಕುರಿತು ನೀಡುವ ತರಬೇತಿ ಪಡೆದವರಲ್ಲಿ ದೇಶಸೇವೆಯ ಕಿಚ್ಚು ಇದ್ದೇ ಇರುತ್ತದೆ.
ಮೊದಲ ಒಂದಷ್ಟು ವರುಷ ತಹಸೀಲ್ದಾರ್, ಉಪ ವಿಭಾಗಾಧಿಕಾರಿಯಂಥ ಹುದ್ದೆಗಳಲ್ಲಿ ಕೆಲಸ ಮಾಡಿದ ನಂತರ ಡಿಸಿ, ಅಂದರೆ ಜಿಲ್ಲಾಧಿಕಾರಿ ಹುದ್ದೆಗೆ ನೇಮಕ ಮಾಡಲಾಗುತ್ತದೆ. ಜಿಲ್ಲಾಧಿಕಾರಿ ಹುದ್ದೆಯಷ್ಟು ಜನರಿಗೆ ಹತ್ತಿರವಾದ ಹುದ್ದೆ ಇನ್ನೊಂದಿಲ್ಲ. ಆ ಜಿಲ್ಲೆಯ ಶಿಕ್ಷಣದಿಂದ ಧಾರ್ಮಿಕ ಸಂಸ್ಥೆವರೆಗೆ, ಕೈಗಾರಿಕೆಯಿಂದ ಮರಳು ಗಣಿಗಾರಿಕೆವರೆಗೆ, ಚುನಾವಣೆಯಿಂದ ವೃದ್ಧಾಪ್ಯ ವೇತನದವರೆಗೆ ಎಲ್ಲ ವಿಚಾರದಲ್ಲೂ ಜಿಲ್ಲಾಧಿಕಾರಿಗೇ ಪರಮಾಧಿಕಾರ. ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಒಮ್ಮೆ ಹೇಳಿರುವಂತೆ, ಈ ದೇಶದಲ್ಲಿ ಪಿಎಂ, ಸಿಎಂ ಬಿಟ್ಟರೆ, ಹೆಚ್ಚು ಅಧಿಕಾರ ಇರುವುದು ಡಿಎಂಗೆ ಮಾತ್ರ. ಡಿಎಂ ಅಂದ್ರೆ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್- ಜಿಲ್ಲಾಧಿಕಾರಿ ಎಂದರ್ಥ.
ಇಂಥ ಪ್ರಭಾವ, ಆಕರ್ಷಣೆ ಹೊಂದಿರುವ ಜಿಲ್ಲಾಧಿಕಾರಿ ಹುದ್ದೆಯನ್ನು ನಿರ್ವಹಿಸಿದ ಅನೇಕರು ಜನಪರ ಕಾರ್ಯ ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ. ಅಂಥವರನ್ನು ಜನ ಮರೆಯುವುದಿಲ್ಲ. ಆದರೆ, ಎಲ್ಲ ಐಎಎಸ್ ಅಧಿಕಾರಿಗಳು ಇಂಥಾ ಹುದ್ದೆಯನ್ನು ಜನಹಿತಕ್ಕೆ ದುಡಿಸಿಕೊಂಡಿರುತ್ತಾರೆ ಎಂದೇನಿಲ್ಲ. ಇದೇ ವಿಚಾರವನ್ನು 2015ರಲ್ಲಿ ನಾಗರಿಕ ಸೇವಾ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದರು. ‘‘ಐಎಎಸ್ ತರಬೇತಿ ಸಂಸ್ಥೆಯಲ್ಲಿ ಶೀಲಂ ಪರಮ ಭೂಷಣಂ ಎಂಬ ಘೋಷವಾಕ್ಯ ಇದೆ. ನಾನು ಅನೇಕ ಐಎಎಸ್ ಅಧಿಕಾರಿಗಳಲ್ಲಿ, ಮಸೂರಿಯಲ್ಲಿ ನೀವು ಕಲಿತ ಸಂಸ್ಥೆಯ ಹಾಗೂ ನಿಮ್ಮ ಘೋಷವಾಕ್ಯ ಏನು? ಎಂದು ಪ್ರಶ್ನಿಸುತ್ತೇನೆ. ಇತ್ತೀಚೆಗೆ ತರಬೇತಿ ಮಗಿಸಿ ಬಂದಿರುವವರೆಲ್ಲರೂ ಥಟ್ಟನೆ ಹೇಳುತ್ತಾರೆ. ಆದರೆ ಹಿರಿಯರು, ಹಳಬರು ಮರೆತುಬಿಟ್ಟಿರುತ್ತಾರೆ,’’ ಎಂದಿದ್ದರು.
ಹಿರಿಯ ಐಎಎಸ್ ಅಧಿಕಾರಿಗಳು ಘೋಷವಾಕ್ಯವನ್ನು ಮರೆತು ಇನ್ನೇನನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ಒಂದಿಷ್ಟು ಗಮನಿಸೋಣ.
ಗುಂಪುಗಾರಿಕೆಯ ರೋಗ
ಜಿಲ್ಲಾಧಿಕಾರಿ ಹುದ್ದೆ ನಂತರದ ಇಲಾಖಾ ಸ್ಥಾನಗಳಿಗೆ ತೆರಳಿದಾಗ ಸಹಜವಾಗಿ ಬಹುತೇಕರಿಗೆ ಜನರ ಸಂಪರ್ಕ ಕಡಿತವಾಗುತ್ತದೆ. ಆಗ ನಿಜವಾದ ಬ್ರಿಟಿಷ್ ಆಡಳಿತಶಾಹಿ ವ್ಯಕ್ತಿತ್ವ ಹೊರಹೊಮ್ಮಿರುತ್ತದೆ. ಮನುಷ್ಯನ ಗುಣವೇ ಗುಂಪು ಮಾಡಿಕೊಳ್ಳುವುದಾದ್ದರಿಂದ ಇಲ್ಲೂ ಅನೇಕ ಜಾತಿಗಳು ಹುಟ್ಟಿಕೊಳ್ಳುತ್ತವೆ. ಅವು ಸಾಮಾಜಿಕ ಜಾತಿಗೆ ಭಿನ್ನವಾದವು. ನೇರವಾಗಿ ಯುಪಿಎಸ್ಸಿ ಪರೀಕ್ಷೆ ಬರೆದು ಅಖಿಲ ಭಾರತ ಸೇವೆಗೆ ಆಯ್ಕೆಯಾದವರು ತಮ್ಮನ್ನು ‘ಪ್ಯೂರ್ ಐಎಎಸ್’ ಎಂದು ಕರೆದುಕೊಳ್ಳುತ್ತಾರೆ. ಇನ್ನು, ರಾಜ್ಯ ಲೋಕಸೇವಾ ಆಯೋಗಗಳ (ಕರ್ನಾಟಕದಲ್ಲಿ ಕೆಪಿಎಸ್ಸಿ) ಪರೀಕ್ಷೆ ಬರೆದು ಕೆಎಎಸ್ ಅಧಿಕಾರಿಯಾದವರನ್ನು ಅವರ ಅನುಭವ, ವೃತ್ತಿಪರತೆಯನ್ನು ಪರಿಗಣಿಸಿ, ಅದೇ ಯುಪಿಎಸ್ಸಿ ಮೂಲಕವೇ ಬಡ್ತಿ ನೀಡಿ ಐಎಎಸ್ ಕೇಡರ್‌ಗೆ ಸೇರ್ಪಡೆ ಮಾಡಲಾಗುತ್ತದೆ. ಇವರನ್ನು ‘ಪ್ರೊಮೋಟಿ ಐಎಎಸ್’ ಎಂದು ಕರೆಯುತ್ತಾರೆ. ಹೆಸರಿಗೆ ಐಎಎಸ್ ಎಂದಾದರೂ ‘ಪ್ಯೂರ್ ಐಎಎಸ್’ನವರು ತಮ್ಮನ್ನು ಎರಡನೇ ದರ್ಜೆಯಲ್ಲೇ ಇಡುತ್ತಾರೆ, ಅತ್ಯುನ್ನತ ಸ್ಥಾನಗಳಿಗೆ ನಾವು ತೆರಳದಂತೆ ಅನೇಕ ತಡೆ ಒಡ್ಡುತ್ತಾರೆ ಎಂದು ‘ಪ್ರೊಮೋಟಿ ಐಎಎಸ್’ನವರ ಬಹುಕಾಲದ ಅಳಲು.
ಐಎಎಸ್‌ಗಳ ಬಡ್ತಿ ವ್ಯಸನ
ಅಖಿಲ ಭಾರತ ಸೇವೆಗೆ ಪರೀಕ್ಷೆ ಬರೆಯುವಾಗ ಎಲ್ಲರೂ ಒಂದೇ ಆಗಿರುತ್ತಾರೆ. ನಂತರದಲ್ಲಿ ಐಎ್ಎಸ್(ಾರಿನ್ ಸರ್ವಿಸ್), ಐಎಎಸ್, ಐಪಿಎಸ್, ಐಆರ್‌ಎಸ್, ಐಎಎಸ್ ಎಂಬ ವಿಂಗಡಣೆ ಆಗುತ್ತದೆ. ಆದರೆ ಎಲ್ಲ ವಿಭಾಗಗಳಿಗಿಂತಲೂ ಸರಕಾರಕ್ಕೆ ಅತ್ಯಂತ ಸನಿಹದಲ್ಲಿರುವುದು ಐಎಎಸ್. ಪ್ರತಿದಿನ ಅವರಿಗೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ಮಂತ್ರಿಗಳ ಜತೆಗೆ ಒಡನಾಟ ಇರುತ್ತದೆ. ಸರಕಾರದ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ಇದೇ ಅಧಿಕಾರಿಗಳದ್ದು. ಹಾಗಾಗಿ ಇಲ್ಲಿ ಅನೇಕ ಸ್ವಹಿತಾಸಕ್ತಿಗಳು ಕೆಲಸ ಮಾಡುತ್ತವೆ. ಉದಾಹರಣೆಗೆ, ಒಂದು ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಇಂತಿಷ್ಟು ಐಎಎಸ್, ಐಪಿಎಸ್ ಅಧಿಕಾರಿಗಳು ಇರಬೇಕೆಂಬ ನಿಯಮವಿದೆ. ಅದರಲ್ಲೂ ಐಎಎಸ್‌ನಲ್ಲಾದರೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಎಸಿಎಸ್) ಎಂಬ ಹುದ್ದೆಗೂ ಸಂಖ್ಯೆ ನಿಗದಿಯಾಗಿರುತ್ತದೆ. ಅದೇ ರೀತಿ ಐಪಿಎಸ್‌ನಲ್ಲಿ ಇದಕ್ಕೆ ಸಮಾಂತರವಾಗಿ ಡಿಜಿಪಿ ಹುದ್ದೆಯನ್ನು ಪರಿಗಣಿಸಲಾಗುತ್ತದೆ. ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವ ಐಎಎಸ್ ಅಧಿಕಾರಿ ಒಂದಿಷ್ಟು ಅನುಭವ ಪಡೆದ ಕೂಡಲೆ ಎಸಿಎಸ್ ಆಗಿ ಬಡ್ತಿ ಪಡೆಯುತ್ತಾರೆ. ಇದು, ಅನೇಕ ರಾಜ್ಯಗಳಲ್ಲಿ ನಿಗದಿತ ಸಂಖ್ಯೆಯನ್ನು ಮೀರಿದೆ. ಆದರೆ ಐಪಿಎಸ್‌ನಲ್ಲಿ ಮಾತ್ರ ಎಡಿಜಿಪಿ ಹುದ್ದೆಯಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿ, ಇನ್ನೇನು ನಿವೃತ್ತಿ ಅಂಚಿಗೆ ಬಂದರೂ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ಸಿಗುವುದೇ ಇಲ್ಲ. ನಿಯಮ ಮೀರಿ ಐಎಎಸ್ ಅಧಿಕಾರಿಗಳು ತಮಗೆ ಮಾತ್ರ ಬಡ್ತಿ ಕೊಟ್ಟುಕೊಳ್ಳುತ್ತಾರೆ. ಪ್ರಪಂಚದಲ್ಲಿ ಏನೇ ನಡೆಯುತ್ತಿರಲಿ, ಮಹಾಮಾರಿಯೇ ಬಂದಿರಲಿ, ಪ್ರತಿ ವರ್ಷ ಡಿಸೆಂಬರ್ ವೇಳೆಗೆ ಐಎಎಸ್ ಹುದ್ದೆ ಬಡ್ತಿ ಆದೇಶ ಹೊರಬಂದುಬಿಡುತ್ತದೆ. ನಮ್ಮನ್ನು ಕೆಳದರ್ಜೆಯ ಪ್ರಜೆಗಳಂತೆ ಕಾಣುತ್ತಾರೆ ಎಂಬ ನೋವು ಐಪಿಎಸ್ ಅಧಿಕಾರಿಗಳಲ್ಲಿದೆ. ಏಕೆಂದರೆ, ಅಧಿಕಾರ ಕೇಂದ್ರಕ್ಕೆ ಹತ್ತಿರದಲ್ಲಿರುವ, ಅನೇಕ ಬಾರಿ ಅವರೇ ಅಧಿಕಾರದ ಕೇಂದ್ರವಾಗಿರುವ ಕಾರಣ ಐಎಎಸ್ ಅಧಿಕಾರಿಗಳಲ್ಲಿ ಸ್ವಹಿತಾಸಕ್ತಿ ಸಾಧನೆಯ ಮನೋಭಾವ ಬಂದುಬಿಟ್ಟಿದೆ.
ಮೂರು ರೀತಿ ಐಎಎಸ್ ಮನಸ್ಥಿತಿ
ಐಎಎಸ್ ಅಧಿಕಾರಿಗಳು ಎಂದ ಕೂಡಲೆ ಸಾಮಾನ್ಯವಾಗಿ ಕೇಳುವ ಮಾತು, ಎಛ್ಞಿಛ್ಟಿಚ್ಝಜಿಠಠಿ, ಚ್ಠ್ಟಿಛಿಚ್ಠ್ಚ್ಟಚಠಿಜ್ಚಿ ಹಾಗೂ ಠಠಿಚಠ್ಠಿಠಟ್ಠಿಟಜಿಠಠಿ ಎಂದು. ಜನರಲಿಸ್ಟ್ ಎಂದರೆ ಯಾವುದೇ ವಿಷಯವನ್ನು ನಿರ್ದಿಷ್ಟವಾಗಿ ನೋಡದೆ ಸರಳೀಕರಿಸಿ, ಒಟ್ಟಾರೆ ಅಂದಾಜಿಸಿ ಅದಕ್ಕೊಂದು ಪರಿಹಾರ ಹೇಳಿಬಿಡುವುದು. ತಮಗೆ ತಿಳಿದ ಒಂದೆರಡು ಆಡಳಿತ ಸೂತ್ರದ ಆಧಾರದಲ್ಲಿ ತಾವು ಆರ್ಥಿಕ ಇಲಾಖೆಯನ್ನೂ ನಿಭಾಯಿಸಬಹುದು, ಮುಜರಾಯಿ ಇಲಾಖೆಯಲ್ಲೂ ಆಡಳಿತ ನಡೆಸಬಹುದು, ಲೋಕೋಪಯೋಗಿ ಇಲಾಖೆ ತಜ್ಞನೂ ಆಗಬಹುದು ಎಂಬ ಮನೋಭಾವ. ಆ ಕ್ಷೇತ್ರದ ಆಳ ಅಗಲದ ಪರಿಚಯವೇ ಇಲ್ಲದ ಇಂತಹ ಐಎಎಸ್ ಅಧಿಕಾರಿಗಳು ತಮ್ಮ ಸೀಮಿತ ಜ್ಞಾನವನ್ನು ಒಪ್ಪಿಕೊಳ್ಳದೆ ಅಜ್ಞಾನ, ಅಹಂಕಾರದಿಂದಲೇ ಕೆಳಗಿನವರ ಮೇಲೆ ಆಡಳಿತ ನಡೆಸುವ ಅದೆಷ್ಟೋ ನಿದರ್ಶನಗಳಿವೆ. ಕ್ಷೇತ್ರದ ಪೂರ್ಣ ಜ್ಞಾನ ಪಡೆಯದೆ ಆಡಳಿತ ನಡೆಸಿದ ಇಂಥವರ ಕಾರಣದಿಂದಲೇ ಅನೇಕ ಸರಕಾರಿ ಉದ್ದಿಮೆಗಳು ನೆಲಕಚ್ಚಿದವು.
ಎರಡನೆಯದು ಬ್ಯೂರಾಕ್ರೆಟಿಕ್, ಅಂದರೆ ಆಡಳಿತಶಾಹಿ. ಯಾವುದೇ ವಿಷಯವನ್ನು ಭಾವನಾತ್ಮಕವಾಗಿ, ಮಾನವೀಯವಾಗಿ ನೋಡುವ ದೃಷ್ಟಿಯನ್ನು ಕಳೆದುಕೊಳ್ಳುವುದು. ಒಬ್ಬ ವಿಧವೆಯೋ, ಓದು ಬರಹ ಗೊತ್ತಿಲ್ಲದ ವ್ಯಕ್ತಿಯೊ ಸಹಾಯ ಕೇಳಿ ಬಂದರೆ, ಅವರಿಗೆ ನಿಜವಾಗಿಯೂ ಕಷ್ಟ ಇದೆಯೇ? ನಾವು ಹೇಗೆ ಸಹಾಯ ಮಾಡಬಹುದು ಎಂಬ ಆಲೋಚನೆಗಿಂತಲೂ ಮೊದಲು, ಸರಕಾರದ ನಿಯಮದಲ್ಲಿ ಇದಕ್ಕೆ ಅವಕಾಶ ಇದೆಯೇ? ಹಣದ ಲಭ್ಯತೆ ಇದೆಯೇ? ಎಂಬುದನ್ನೇ ಮೊದಲು ಮಾಡಿಕೊಂಡು ತಿರಸ್ಕರಿಸಿ ಕಳಿಸುವುದು. ಇದೊಂದು ಉದಾಹರಣೆ ಅಷ್ಟೆ. ಸರಕಾರದೊಂದಿಗೆ ವ್ಯವಹಾರ ಮಾಡಲು ಹೋಗಿಬಂದ ಅನೇಕ ಉದ್ಯಮಿಗಳು ಹೇಳುವುದು ಇದೇ ಮಾತನ್ನು; ‘‘ಅಧಿಕಾರಿಗಳಿಗೆ ರೂಲ್ ಬುಕ್ ಬಿಟ್ಟು ಏನೂ ಕಾಣುತ್ತಿಲ್ಲ’’ ಎಂದು. ಇಂತಹ ಅಧಿಕಾರಿಗಳ ಕಾರಣದಿಂದಾಗಿ ಅನೇಕ ಸಮಸ್ಯೆಗಳು ಬಗೆಹರಿಯದೇ ಉಳಿದುಬಿಡುತ್ತವೆ. ಇದರಿಂದಾಗಿಯೇ ನಮ್ಮಲ್ಲಿ ಮುಖ್ಯಮಂತ್ರಿಗಳೇನಾದರೂ ಜನತಾ ದರ್ಶನ ಆರಂಭಿಸಿದರೆ, ಸಾವಿರಾರು ಜನ ರೇಷನ್ ಕಾರ್ಡ್‌ಗಾಗಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜನತಾ ದರ್ಶನ ಆರಂಭಿಸಿದಾಗ, ಸಾವಿರಾರು ಸಂಖ್ಯೆಯಲ್ಲಿ ಜನ ಮುಂದಿಟ್ಟಿದ್ದು, ಇಂಥಾ ಸಣ್ಣ ಪುಟ್ಟ ಸಮಸ್ಯೆಯನ್ನೇ! ಇದಕ್ಕೆಲ್ಲಾ ಅಧಿಕಾರಿಗಳೇ ಕಾರಣ. ಎಲ್ಲ ಸ್ತರದ ಅಧಿಕಾರಿಗಳ ಇಂಥಾ ಕಳಪೆ ಸೇವೆಗೆ ಐಎಎಸ್ ಅಧಿಕಾರಿಗಳೇ ಮಾದರಿ ಎನ್ನಬಹುದು.
ಮೂರನೆಯದು ಯಥಾಸ್ಥಿತಿ ವಾದಿ. ಯಾವುದೇ ಸ್ಥಿತಿ ಬದಲಾವಣೆ ಆಗದೆ ಹಾಗೆಯೇ ಮುಂದುವರಿಯಲಿ. ನನ್ನ ಅವಧಿ ಮುಗಿಸಿ ಹೋದರೆ ಸಾಕು, ವ್ಯವಸ್ಥೆ ಸರಿಪಡಿಸಲು ಹೋಗಿ ನನ್ನ ವ್ಯಕ್ತಿತ್ವಕ್ಕೆ ಕಳಂಕ ಅಂಟಿಕೊಂಡುಬಿಟ್ಟರೆ? ಎಂಬ ಅಳುಕು. ಇದರಿಂದಾಗಿಯೇ, ವ್ಯವಸ್ಥೆಯಲ್ಲಿ ನಡೆಯುವ ಭ್ರಷ್ಟಾಚಾರ, ದರ್ಪ, ದೌರ್ಜನ್ಯವನ್ನು ಕಂಡೂ ಕಾಣದಂತೆ ನೋಡುತ್ತಿರುತ್ತಾರೆ. ಹೊಸ ಬದಲಾವಣೆಗೆ ಮುಂದಾದರೆ ಅದನ್ನು ಸಲಗೊಳಿಸುವ ಹೊಣೆಯೂ ಹೆಗಲೇರುತ್ತದೆ. ನನಗ್ಯಾಕೆ ಅದೆಲ್ಲ ಉಸಾಬರಿ? ಬರುವ ಸಂಬಳ ತೆಗೆದುಕೊಂಡು ನೆಮ್ಮದಿಯಿಂದ ಇರೋಣ ಎಂಬ ಭಾವನೆ. ಹಾಗೆ ನೋಡಿದರೆ, ಐಎಎಸ್ ಅಧಿಕಾರಿಗಳು ನಿಸ್ಸಂಶಯವಾಗಿ ಸ್ವೀಕಾರವಲ್ಲದ ರಾಜಕೀಯ ಒತ್ತಡಗಳನ್ನು ಪ್ರತಿರೋಧಿಸುವ ಶಕ್ತಿಯನ್ನು ಹೊಂದಿದ್ದಾರೆ. ಸಂವಿಧಾನ ಅಂಥದ್ದೊಂದು ಭರವಸೆ ನೀಡಿದೆ. ಆದರೆ ಬಹುತೇಕರು ಆ ಅವಕಾಶವನ್ನು ಕೈಚೆಲ್ಲುತ್ತಾರೆ. ವ್ಯವಸ್ಥೆಯನ್ನು ಸರಿಪಡಿಸಲೂ ಆಗದೆ, ಸುಮ್ಮನಿರಲೂ ಆಗದ ಅನೇಕ ಅಧಿಕಾರಿಗಳು ಈ ವ್ಯವಸ್ಥೆಯಿಂದ ಬೇಸತ್ತಿದ್ದಾರೆ.
ಈ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಈಗಿನ ಕೇಂದ್ರ ಸರಕಾರ ಮುಂದಾಗಿದೆ. ಎಲ್ಲವನ್ನೂ ಸರಳವಾಗಿ ನೋಡುವ ಅಧಿಕಾರಿಗಳಿಂದ ಯಾವುದೇ ಹೊಸ ಬದಲಾವಣೆ ನಿರೀಕ್ಷೆ ಇಲ್ಲ ಎಂಬ ಅರಿವು ಮುಖ್ಯವಾಗಿ ಪ್ರಧಾನಿ ಮೋದಿಯವರಿಗೇ ಇದ್ದಂತಿದೆ. ಇದೇ ಕಾರಣಕ್ಕೆ, ಆಯಾ ಕ್ಷೇತ್ರದ ತಜ್ಞರನ್ನು ನೇರವಾಗಿ ಉನ್ನತ ಹುದ್ದೆಗಳಿಗೆ ನೇಮಿಸುವ (ಲ್ಯಾಟರಲ್ ಎಂಟ್ರಿ) ಕಾರ್ಯಕ್ಕೆ ಚಾಲನೆ ನೀಡುವ ಚರ್ಚೆ ಆಗಾಗ ಮುನ್ನೆಲೆಗೆ ಬರುತ್ತಿದೆ. ತರಬೇತಿಯಲ್ಲೂ ಆಮೂಲಾಗ್ರ ಬದಲಾವಣೆಗೆ ಮುಂದಾಗಿದ್ದಾರೆ.
ಅಖಿಲ ಭಾರತ ಸೇವೆಗಳಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದವರು ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರು. ಸ್ವತಂತ್ರಪೂರ್ವಕವಾಗಿ ತಮ್ಮನ್ನು ಅಭಿವ್ಯಕ್ತಗೊಳಿಸಿಕೊಳ್ಳಬಲ್ಲ ಅಖಿಲ ಭಾರತ ಸೇವೆ ಎಲ್ಲಿಯವರೆಗೆ ಇರುವುದಿಲ್ಲವೋ, ಅಲ್ಲಿವರೆಗೆ ಸ್ವತಂತ್ರ ಭಾರತದ ಕಲ್ಪನೆಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪಟೇಲರು ಹೇಳಿದ ವಾಕ್ಯವನ್ನು ಮಸೂರಿಯಲ್ಲಿರುವ ಪಟೇಲರ ಪ್ರತಿಮೆ ಕೆಳಗೆ ಬರೆಯಲಾಗಿದೆ. ಸ್ವತಂತ್ರ ಭಾರತದ ಮೊದಲ ಬ್ಯಾಚಿನ ಐಎಎಸ್ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಅವರು ಹೇಳಿದ ಮಾತು: ‘‘ನಿಮ್ಮ ಪೂರ್ವಿಕರು (ಬ್ರಿಟಿಷ್ ಸರಕಾರದಲ್ಲಿದ್ದ ಅಧಿಕಾರಿಗಳು) ಸಾಮಾನ್ಯ ಜನಜೀವನದಿಂದ ದೂರವಾಗಿರುವಂತಹ ಸಂಪ್ರದಾಯದಲ್ಲಿ ಜೀವನ ನಡೆಸುತ್ತಿದ್ದವರು. ಭಾರತದ ಸಾಮಾನ್ಯ ಜನರನ್ನು ನಿಮ್ಮವರು ಎಂದೇ ಭಾವಿಸಿ ಆಡಳಿತ ನಡೆಸುವುದು ನಿಮ್ಮೆಲ್ಲರ ಆದ್ಯ ಕರ್ತವ್ಯ’’. ಸರ್ದಾರ್ ಪಟೇಲರ ಮಾತು ನಿಜವಾಗಲಿ, ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯು ವಸಾಹತು ಮನಸ್ಥಿತಿಯಿಂದ ಸ್ವತಂತ್ರ ಪಡೆದು, ನಿಜವಾದ ಜನಸೇವೆ ಮಾಡುವಂತಾಗಲಿ ಎಂದು ಆಶಿಸೋಣ.
ಕೊನೆಯಲ್ಲಿ ಇನ್ನೊಂದು ಸಂಗತಿಯನ್ನು ಹೇಳಲೇಬೇಕು. ಆಡಳಿತ ವ್ಯವಸ್ಥೆ ಅಂದರೆ ಎಂದರೆ ಕೇವಲ ಐಎಎಸ್ ಅಧಿಕಾರಿಗಳು ಮಾತ್ರವಲ್ಲ, ರಾಜಕೀಯ ಬಾಸ್‌ಗಳು, ಮಂತ್ರಿಗಳ ಮನಸ್ಥಿತಿ ಬದಲಾಗುವುದೂ ಪ್ರಮುಖ. ಸರ್ವೆಯೊಂದರ ಪ್ರಕಾರ ಓರ್ವ ಐಎಎಸ್ ಅಧಿಕಾರಿ ತನ್ನ ಅಧಿಕಾರಾವಧಿಯ ಬಹುಪಾಲು ಸಮಯವನ್ನು ಜಿಲ್ಲಾ ಗಡಿಯಲ್ಲಿ ಮಂತ್ರಿಗಳ ಸ್ವಾಗತ, ಬೀಳ್ಕೊಡುಗೆಗೆ, ರಾಜಕಾರಣಿಗಳಿಗೆ ಕಾಯುವುದರಲ್ಲೇ ವ್ಯಯ ಮಾಡುತ್ತಾರೆ. ಹಾಗೆಯೇ ಅವರಿಗೂ ಮನೆ, ಮಕ್ಕಳು, ಹೆಂಡತಿ, ಅವರ ಓದು ಆರೋಗ್ಯ ಇತ್ಯಾದಿ ಇರುತ್ತದೆಯಲ್ಲವೇ? ಹಾಗಾಗಿ ಮನಬಂದಂತೆ ಅಧಿಕಾರಿಗಳನ್ನು ನಡೆಸಿಕೊಳ್ಳುವ, ಕಾಲ್ಚೆಂಡಿನಂತೆ ವರ್ಗಾವಣೆ ಮಾಡುವ ಬದಲು ದಕ್ಷವಾಗಿ ಕೆಲಸ ತೆಗೆಯಬಹುದಲ್ಲವೇ?
ಆಲೋಚನೆ ಮಾಡಿದರೆ ಆಡಳಿತ ಸುಧಾರಣೆಯ ಓನಾಮ ಇಲ್ಲಿಂದಲೇ ಆಗುತ್ತದೆ, ಅನುಮಾನ ಬೇಡ!