ಅಮೆರಿಕದ ಮನಗೆದ್ದ ಮೋದಿ ಚೀನಾದಲ್ಲೂ ಮೋಡಿ ಮಾಡುತ್ತಾರಾ?

ಜಪಾನ್, ಜರ್ಮನಿ ಮತ್ತು ಅಮೆರಿಕದ ಸ್ನೇಹ-ವಿಶ್ವಾಸ ಗಳಿಸುವ ಮೂಲಕ, ಸದಾ ಕಿರುಕುಳ ನೀಡುತ್ತ ಬಂದಿರುವ ಚೀನಾ ಮತ್ತು ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ತಕ್ಕ ಸಂದೇಶ ರವಾನಿಸಿದ್ದಾರೆ. ಹಾಗಂತ ಚೀನಾದೊಂದಿಗೂ ಹಗೆತನ ಸಾಧಿಸುವ ಉಮೇದಿನಲ್ಲಿ ಅವರು ಇದ್ದಂತೆ ತೋರುತ್ತಿಲ್ಲ.

ಭಾರತ ಭೇಟಿ ವೇಳೆ ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ಮೋದಿ ಅವರೊಂದಿಗೆ..
ಭಾರತ ಭೇಟಿ ವೇಳೆ ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ಮೋದಿ ಅವರೊಂದಿಗೆ..

ಭಯೋತ್ಪಾದಕರ ವಿಷಯದಲ್ಲಿ ಅಮೆರಿಕದವರು ಹೊಂದಿರುವ ಪುಕ್ಕಲುತನವನ್ನು ಯಾರೂ ಒಪ್ಪಲಾಗದು. ಜಗತ್ತಿನ ಸೂಪರ್ ಪವರ್ ಅಂತ ಕರೆಸಿಕೊಂಡಿರುವ ಆ ದೇಶ ಗಡಗಡ ನಡುಗುವ ರೀತಿಯನ್ನು ಕಂಡರೆ ಅಯ್ಯೋ ಪಾಪ ಅನ್ನಿಸುವುದು ಸಹಜ. ಉಗ್ರಗಾಮಿಗಳಲ್ಲೂ ಒಳ್ಳೆಯವರು-ಕೆಟ್ಟವರು ಎಂದು ವಿಭಾಗಿಸಿ ನೋಡುವ ಅಮೆರಿಕದ ಧೋರಣೆ ಕಂಡರೆ ಮನಸ್ಸಿಗೆ ಬೇಸರವಾಗುತ್ತದೆ. ಪಾಕಿಸ್ತಾನದಂತಹ ಗೊತ್ತುಗುರಿ ಇಲ್ಲದ ದೇಶದ ಸ್ನೇಹ ಸಂಪಾದನೆಗೆ ದುಡ್ಡು, ಶಸ್ತ್ರಾಸ್ತ್ರ ಸರಬರಾಜು ಮಾಡುವ ಅದರ ದ್ವಂದ್ವ ನೀತಿ ರೇಜಿಗೆ ತರಿಸುತ್ತದೆ. ಅದರ ಜತೆಜತೆಗೇ ಭಯೋತ್ಪಾದಕರ ಬೆದರಿಕೆ ಹಿನ್ನೆಲೆಯಲ್ಲಿ ತಮ್ಮ ಅಧ್ಯಕ್ಷರ ಭದ್ರತೆಗೆ ಆ ದೇಶದ ಭದ್ರತಾಪಡೆಯವರ ಪರದಾಟ ಅಚ್ಚರಿ ಮೂಡಿಸುತ್ತದೆ. ಇವನ್ನೆಲ್ಲ ನೋಡುತ್ತಿದ್ದರೆ, ಇಷ್ಟೆಲ್ಲ ತೊಂದರೆ ತಾಪತ್ರಯ ತೆಗೆದುಕೊಂಡು ಅಮೆರಿಕ ಅಧ್ಯಕ್ಷ ಒಬಾಮ ಇಲ್ಲಿಗೇಕೆ ಬರಬೇಕು ಅಂತ ಒಂದು ಕ್ಷಣ ಅನ್ನಿಸುವುದು ಸುಳ್ಳಲ್ಲ. ಇದೇ ಭಾವನೆ ದೇಶದ ಬಹಳಷ್ಟು ಜನರಲ್ಲಿ ಮೂಡಿದ್ದಿರಲೂಬಹುದು. ಆದರೆ ದೆಹಲಿ ಪ್ರವಾಸಕ್ಕೆ ಹೊರಟುನಿಂತ ಒಬಾಮ, ಪ್ರಧಾನಿ ಮೋದಿ ಕುರಿತು ಮಾಧ್ಯಮವೊಂದರ ಪ್ರಶ್ನೆಗೆ ಉತ್ತರ ಕೊಡುತ್ತ ಆಡಿದ ಮಾತು ಎಷ್ಟೊಂದು ಆಲೋಚನೆಗೆ ಹಚ್ಚಿತು ಅಂತೀರಿ.

‘He has clear vision of big things, PM Modi’s historic election victory clearly reflects the desire of many Indians for economic growth that is inclusive’ ಎಂದು ಒಬಾಮ ಉದ್ಗಾರ ತೆಗೆದಿದ್ದರು. ಗುಜರಾತಿನಲ್ಲಿ ಹತ್ತು ಹನ್ನೆರಡು ವರ್ಷಗಳ ಕಾಲ ಮಾಡಿದ ಅಭಿವೃದ್ಧಿ ಕೆಲಸಗಳ ಕುರಿತು ಒಬಾಮ ಮಾತಿನಲ್ಲಿ ಮೆಚ್ಚುಗೆ ಧ್ವನಿಸುತ್ತಿತ್ತು; ಮೋದಿ ಗುಜರಾತದ ಬಗ್ಗೆ ಕೇಳಿ ತಿಳಿದುಕೊಂಡಿದ್ದ ದೇಶದ ಇತರ ಭಾಗಗಳ ಜನರು ಎಂತಹ ಪರಿವರ್ತನೆಯನ್ನು ಬಯಸಿದ್ದಾರೆಂಬುದು ಕಳೆದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ವ್ಯಕ್ತವಾಯಿತು ಎಂಬ ಸ್ಪಷ್ಟ ಅಂದಾಜು ವ್ಯಕ್ತವಾಗಿತ್ತು; ಪ್ರಗತಿಯ ಕಡೆಗೆ ಮಗ್ಗುಲು ಹೊರಳಿಸಿರುವ ಭಾರತದ ಸ್ನೇಹ ಆರ್ಥಿಕವಾಗಿ, ಸೈನಿಕವಾಗಿ ಜಗತ್ತಿನ ಬಲಾಢ್ಯ ದೇಶ ಅಮೆರಿಕಕ್ಕೆ ಎಷ್ಟು ಮತ್ತು ಏಕೆ ಅನಿವಾರ್ಯ ಎಂಬುದನ್ನು ಸಾರಿ ಹೇಳುವಂತಿತ್ತು.

ಮೋದಿ ಕುರಿತು ಒಬಾಮ ಆಡಿದ ಮಾತಿನ ಕುರಿತೇ ಆಲೋಚನೆ ಮಾಡುತ್ತಿದ್ದಾಗ ಜಪಾನಿನಲ್ಲಿ ಅಲ್ಲಿನ ದೊರೆ ಮೇಜಿ ಮಾಡಿದ ಕ್ರಾಂತಿಯ ಕುರಿತು ಓದಿದ ಸಂಗತಿ ಮನಸ್ಸಿನಲ್ಲಿ ಹಾದುಹೋಯಿತು. ತಲೆತಲಾಂತರದಿಂದ ರೂಢಿಯಲ್ಲಿದ್ದ ಊಳಿಗಮಾನ್ಯ ಪದ್ಧತಿ ಮತ್ತು ಎರಡೆರಡು ಯುದ್ಧಗಳಿಂದ ಜರ್ಝರಿತವಾಗಿದ್ದ ಜಪಾನ್ ದೇಶವನ್ನು ಕ್ರಾಂತಿಕಾರಿ ಚಿಂತನೆಯ ಮೇಜಿ ಹೇಗೆ ಜಗತ್ತಿನ ಬಲಾಢ್ಯ ಪಾಶ್ಚಿಮಾತ್ಯ ದೇಶಗಳ ಸಾಲಲ್ಲಿ ತಂದು ನಿಲ್ಲಿಸಿದ ಎಂಬುದರ ಚಿತ್ರಣ ಥಟ್ ಅಂತ ಮೂಡಿತು. 1868-1912ರವರೆಗೆ 44 ವರ್ಷಗಳ ಅಲ್ಪಾವಧಿಯಲ್ಲಿ ಜಪಾನ್‍ನ ಗತಿಯನ್ನೇ ಬದಲಿಸಿದ ಮಹಾನುಭಾವ ಇದೇ ಮೇಜಿ. ಹದಿಹರೆಯದಲ್ಲೇ ಆತ ಜಪಾನ್ ಸಾಮ್ರಾಜ್ಯದಲ್ಲಿ ಪಟ್ಟಕ್ಕೆ ಬಂದ. ಆ ವೇಳೆ ಜಪಾನ್ ಊಳಿಗಮಾನ್ಯ ಪದ್ಧತಿಯಿಂದ ಜಡತ್ವ ಪಡೆದುಕೊಂಡಿತ್ತು. ದೇಶದ ದುರ್ಗತಿಯನ್ನು ಕಣ್ಣಾರೆ ಕಂಡು ಬೇಸತ್ತಿದ್ದ ಮೇಜಿ ಅಲ್ಲಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಪರಿವರ್ತನೆ ತರಲು ಸಂಕಲ್ಪ ಮಾಡಿದ. ತನ್ನ ಗುರಿ ಸಾಧನೆಗಾಗಿ ಆತ Fukoku kyohei ಮತ್ತು ಎಂಬ ಘೋಷಣೆ ಹೊರಡಿಸಿದ. ಇಂಗ್ಲಿಷ್‍ನಲ್ಲಿ ಅದರ ಅರ್ಥ `WEALTHY COUNTRY AND STRONG ARMS’ ಎಂದಾಗುತ್ತದೆ. ಜಪಾನನ್ನು ಪಶ್ಚಿಮದ ಬಲಾಢ್ಯ ದೇಶಗಳ ಸಾಲಿನಲ್ಲಿ ತಂದು ನಿಲ್ಲಿಸುವುದು ಮೇಜಿಯ ಏಕಮಾತ್ರ ಗುರಿಯಾಗಿತ್ತು. ತನ್ನ ಗುರಿ ಸಾಧನೆಗೆ ಆತ ಮಾಡಿದ ಮೊದಲ ಕೆಲಸ ಅಂದರೆ ದೇಶದ ರಾಜಧಾನಿಯನ್ನು ಟೋಕಿಯೋಕ್ಕೆ ಸ್ಥಳಾಂತರಿಸಿದ್ದು. ದೇಶಕ್ಕೆ ಅನಿಷ್ಟವಾಗಿ ಕಾಡುತ್ತಿದ್ದ ಊಳಿಗಮಾನ್ಯ ಪದ್ಧತಿಯನ್ನು ರದ್ದುಮಾಡಿದ. ಹಾಗೆ ಮಾಡುವಾಗ ಎದುರಾದ ಶ್ರೀಮಂತ ಜಮೀನ್ದಾರರ ಬಲವಾದ ವಿರೋಧವನ್ನು ಲೆಕ್ಕಿಸದೆ ಮುಂದಕ್ಕೆ ಹೆಜ್ಜೆ ಹಾಕಿದ. ದೇಶವನ್ನು ಸೈನಿಕವಾಗಿ ಸದೃಢ ಮಾಡುವ ಉದ್ದೇಶದಿಂದ `ಜಪಾನ್ ನ್ಯಾಷನಲ್ ಆರ್ಮಿ’ಯನ್ನು ಸ್ಥಾಪಿಸಿದ. ತೆರಿಗೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಪರಿವರ್ತನೆ ತಂದ. ತೆರಿಗೆ ಸೋರಿಕೆ ತಡೆಗಟ್ಟಿ ಸರ್ಕಾರದ ಬೊಕ್ಕಸ ತುಂಬಿ ತುಳುಕುವಂತೆ ಮಾಡಿದ. ಜಮೀನ್ದಾರರ ಮೇಲೆ ತೆರಿಗೆ ಹಾಕಿದ್ದರಿಂದ ಸೈಗೋ ಟಕಮೋರಿ ಎಂಬುವವ ಭಯಂಕರ ಬಂಡಾಯ ಸಾರಿದ. ಆದರೆ ಸೇನೆಯ ನೆರವಿನಿಂದ ಎಲ್ಲ ರೀತಿಯ ಬಂಡಾಯವನ್ನು ಮೇಜಿ ಸಮರ್ಥವಾಗಿ ಎದುರಿಸಿದ. ಎಷ್ಟೇ ವಿರೋಧ ಎದುರಾದರೂ ಜಪಾನಿಗೊಂದು ಹೊಸ ಸಂವಿಧಾನ, ಚುನಾಯಿತ ಸರ್ಕಾರಿ ವ್ಯವಸ್ಥೆ, ಕ್ಯಾಬಿನೆಟ್(1885) ಪದ್ಧತಿ, ಹೊಸ ಸಂಸತ್ತು (ಡಯೆಟ್) ಇವನ್ನೆಲ್ಲ ಒಂದೊಂದಾಗಿ ರೂಪಿಸಿಕೊಳ್ಳುತ್ತ ಹೋದ. ಮೇಜಿ ಕಾಲದಲ್ಲಿ ಜಪಾನ್‍ನಲ್ಲಿ ರೈಲು, ರಸ್ತೆ ಸಂಪರ್ಕದಲ್ಲಿ ದೊಡ್ಡ ಕ್ರಾಂತಿಯೇ ಆಯಿತು. ಖಾಸಗಿ ಉದ್ದಿಮೆಗಳಿಗೆ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹ ಸಿಕ್ಕಿತು. ಯುರೋಪಿಯನ್ ಮಾದರಿಯಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ತಲೆಯೆತ್ತಿತು. 1895ರಲ್ಲಿ ಚೀನಾದ ಜತೆಗೆ ಮತ್ತು 1905ರಲ್ಲಿ ರಷ್ಯಾದ ಜತೆ ಹೀಗೆ ಎರಡೆರಡು ಯುದ್ಧಗಳನ್ನು ಸಮರ್ಥವಾಗಿ ಎದುರಿಸಿದ. ಇಷ್ಟಾದರೂ ಆಧುನಿಕ ಜಗತ್ತಿನಲ್ಲಿ ಶಕ್ತಿಶಾಲಿ ಜಪಾನ್ ನಿರ್ಮಾಣ ಮಾಡುವ ಮೇಜಿ ಸಂಕಲ್ಪ ಈಡೇರಿಕೆಯಲ್ಲಿ ಒಂದಿಷ್ಟೂ ತೊಡಕಾಗಲಿಲ್ಲ. ಮುಖ್ಯವಾಗಿ ಆತ ತನ್ನ ನಂಬಿಕಸ್ಥ ತಂಡವನ್ನು ಜಗತ್ತಿನ ನಾನಾ ದೇಶಗಳಿಗೆ ಕಳುಹಿಸಿ ಆ ದೇಶಗಳಲ್ಲಿನ ಒಳ್ಳೆಯ ಅಂಶಗಳನ್ನು ಜಪಾನ್ ಅಳವಡಿಸಿಕೊಳ್ಳುವಂತೆ ಮಾಡಿದ. ಆ ಪೈಕಿ ಮೇಜಿಯ `ಇವಾಕುರಾ ಮಿಷನ್’, ಅಮೆರಿಕ ಮತ್ತು ಇಂಗ್ಲೆಂಡ್‍ಗೆ ಭೇಟಿ ನೀಡಿ ಆ ದೇಶಗಳು ಹೇಗೆ ಪ್ರಗತಿ ಸಾಧಿಸಿವೆ ಎಂಬುದರ ಕುರಿತು ಆಳವಾದ ಅಧ್ಯಯನ ಮಾಡಿತು. ಅದರ ಸದಸ್ಯರು ಆಡಳಿತ, ಅಭಿವೃದ್ಧಿಯ ಕುರಿತು ಅಲ್ಲಿಂದ ಸಾಕಷ್ಟು ಜ್ಞಾನ ಸಂಪಾದನೆ ಮಾಡಿಕೊಂಡು ದೇಶಕ್ಕೆ ವಾಪಸಾದರು. ಹೀಗಾಗಿ ಜಪಾನಿನ ಬೆಳವಣಿಗೆಯಲ್ಲಿ ಈಗಲೂ ಅಮೆರಿಕದ ಛಾಪು ಗಾಢವಾಗಿದೆ. ಮುಂದೆ ಏಷ್ಯಾದ ಆರ್ಥಿಕ ಬಲಾಢ್ಯರಾದ ದಕ್ಷಿಣ ಕೊರಿಯಾ, ಸಿಂಗಪುರ ದೇಶಗಳೂ ಜಪಾನಿನ ಮಾದರಿಯನ್ನೇ ಅನುಸರಿಸಿದವು. ಮುಂದೆ ಎಂಭತ್ತರ ದಶಕದಲ್ಲಿ ಚೀನಾವೂ ಅದೇ ನೀತಿ ಅನುಸರಿಸಿತು. ಈಗ ಭಾರತ ತಡವಾಗಿ ಅಮೆರಿಕದ ಸ್ನೇಹ ಸಂಪಾದನೆಗೆ ಮುಂದಾಗಿದೆ. ಆರ್ಥಿಕವಾಗಿ, ತಾಂತ್ರಿಕವಾಗಿ ಮತ್ತು ರಾಜತಾಂತ್ರಿಕ ಲಾಭದ ದೃಷ್ಟಿಯಿಂದ ನಮಗೆ ಅದು ಅನಿವಾರ್ಯವೂ ಹೌದು ಅನ್ನಿ.

ಸುಮಾರು ಹತ್ತು ವರ್ಷಗಳ ಕಾಲ ಗುಜರಾತದಲ್ಲಿ ಇನ್ನಿಲ್ಲದ ಕಿರುಕುಳ, ಟೀಕೆ, ವಿರೋಧವನ್ನು ಎದುರಿಸಿದ ಮೋದಿ ಆ ರಾಜ್ಯದ ಮಾತ್ರವಲ್ಲ, ಇಡೀ ಭಾರತದ ಜನರ ಮನಸ್ಸು ಗೆದ್ದುಕೊಂಡರು. ಅಪಪ್ರಚಾರಕ್ಕೆ ಕಿವಿಗೊಟ್ಟ ಅಮೆರಿಕ ಹತ್ತು ವರ್ಷ ಕಾಲ ಮೋದಿಗೆ ವೀಸಾ ನೀಡದೆ ಸತಾಯಿಸಿತು. ಆದರೆ ಅದೇ ಅಮೆರಿಕದ ವಿಷಯದಲ್ಲಿ ಮೋದಿ ಹೇಗೆ ನಡೆದುಕೊಂಡರು ನೋಡಿ. ಪ್ರಧಾನಿಯಾದ ಬಳಿಕ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಸದವಕಾಶವನ್ನೇ ಬಳಸಿಕೊಂಡು ಅಮೆರಿಕ ಪ್ರವಾಸ ನಿಗದಿ ಮಾಡಿದರು. ಮನಸ್ಸಿನಲ್ಲಿ ಒಂದಿಷ್ಟೂ ನಂಜು ಇಟ್ಟುಕೊಳ್ಳದೆ ಕೈಗೊಂಡ ಆ ಪ್ರವಾಸದಿಂದ ಭಾರತದಲ್ಲಿ ಜನರ ಮನಗೆದ್ದ ಮೋದಿ ಅಮೆರಿಕನ್ನರ ಮನಸ್ಸನ್ನೂ ಕದ್ದರು. ಗಣರಾಜ್ಯೋತ್ಸದ ಸಂದರ್ಭವನ್ನು ಬಳಸಿಕೊಂಡು ಅಮೆರಿಕ ಅಧ್ಯಕ್ಷರನ್ನು ಆಹ್ವಾನಿಸಿ ಭಾರತ ಏನೆಂಬುದನ್ನು ಮನವರಿಕೆ ಮಾಡಿಕೊಟ್ಟರು. ಮುಖ್ಯವಾಗಿ ಒಬಾಮ ಭೇಟಿಯಿಂದ ಅಮೆರಿಕಕ್ಕಿಂತ ಭಾರತಕ್ಕಾದ ಲಾಭವೇ ಹೆಚ್ಚು ಎಂಬುದು ಪರಿಣತರು ಹೇಳುವ ಮಾತು.

ಹಾಗೆ ನೋಡಿದರೆ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧದ ಪರ್ವ ಆರಂಭವಾದದ್ದು ಇದೇ ಮೊದಲು ಎನ್ನುವ ಹಾಗಿಲ್ಲ. 1956ರಲ್ಲಿ ಪಂಡಿತ್ ನೆಹರು ಮೊದಲ ಬಾರಿ ಅಮೆರಿಕ ಪ್ರವಾಸ ಕೈಗೊಂಡರು. ಇದಕ್ಕೆ ಪ್ರತಿಸ್ಪಂದನೆಯಾಗಿ 1959ರಲ್ಲಿ ಆಗಿನ ಅಮೆರಿಕ ಅಧ್ಯಕ್ಷರಾಗಿದ್ದ ಐಸೆನ್‍ಹೋವರ್ ಭಾರತಕ್ಕೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಅವರು ಭಾರತಕ್ಕೆ ಅಮೆರಿಕ ಆರ್ಥಿಕ ನೆರವನ್ನು ದುಪ್ಪಟ್ಟು ಮಾಡುವ ಘೋಷಣೆ ಮಾಡಿದರು. ಎರಡು ವರ್ಷದ ತರುವಾಯ ಜಾನ್ ಕೆನಡಿ ಅಧ್ಯಕ್ಷಾವಧಿಯಲ್ಲಿ ನೆಹರು ಮತ್ತೊಮ್ಮೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಆದರೆ ಆಗಿದ್ದು ಎಂದೂ ಮರೆಯಲಾಗದ ಕಹಿ ಅನುಭವ. ಪ್ರವಾಸ ಮುಗಿಸಿ ನೆಹರು ಭಾರತಕ್ಕೆ ಮರಳಿದ ಬಳಿಕ `ಇದೊಂದು ಅತ್ಯಂತ ನೀರಸ ಮತ್ತು ಕೆಟ್ಟ ರಾಜತಾಂತ್ರಿಕ ಭೇಟಿ’ ಎಂದು ಕೆನಡಿ ಮೂಗು ಮುರಿದಿದ್ದರು. 1980ರ ದಶಕದಲ್ಲಿ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ, ನಂತರ ಎನ್‍ಡಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ, 2005ರಲ್ಲಿ ಪ್ರಧಾನಿ ಮನಮೋಹನ ಸಿಂಗ್ ಇವರೆಲ್ಲರೂ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಆದರೆ ಅವರ್ಯಾರ ಕಾಲದಲ್ಲೂ ಭಾರತ ಮತ್ತು ಅಮೆರಿಕ ಸಂಬಂಧದ ವಿಷಯದಲ್ಲಿ ಇಷ್ಟೊಂದು ಧನಾತ್ಮಕ ಬೆಳವಣಿಗೆ ಆಗಿರಲಿಲ್ಲ. ಭರವಸೆ ಹುಟ್ಟಿರಲಿಲ್ಲ. ಎಷ್ಟೆಂದರೆ 2005ರಲ್ಲಿ ಅರ್ಧಕ್ಕೇ ನಿಂತಿದ್ದ ನಾಗರಿಕ ಪರಮಾಣು ಒಪ್ಪಂದವನ್ನು ಪೂರ್ತಿಗೊಳಿಸುವುದಕ್ಕೂ ಮೋದಿ ಸರ್ಕಾರವೇ ಜನ್ಮತಾಳಿ ಬರಬೇಕಾಯಿತು.

ಕಳೆದ ಸೆಪ್ಟೆಂಬರ್‍ನಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಮತ್ತು ಈಗ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಒಬಾಮರನ್ನು ಆಹ್ವಾನಿಸುವಾಗ ಹಿರಿಯ ಅಧಿಕಾರಿಗಳು ಪ್ರಧಾನಿ ಮೋದಿಗೆ ಸಣ್ಣದೊಂದು ಎಚ್ಚರಿಕೆ ನೀಡಿದ್ದರಂತೆ. ಅಮೆರಿಕದೊಂದಿಗೆ ಇಷ್ಟು ವೇಗವಾಗಿ ವ್ಯವಹರಿಸಿದರೆ ಚೀನಾ ಸರ್ಕಾರ ಕೆರಳಬಹುದು ಎಂದು. ಅದಕ್ಕೆ ಮೋದಿ, `ಅದೆಲ್ಲ ಹಳೇ ಕತೆ ಬಿಡಿ, ನಾವು ಈಗಿನ ಅಗತ್ಯಕ್ಕೆ ತಕ್ಕಂತೆ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯವಹರಿಸಬೇಕು’ ಅಂದುಬಿಟ್ಟರು ಎಂದು ಉನ್ನತ ಅಧಿಕಾರಿಗಳೇ ಹೇಳಿದ್ದಾರೆ. ಗಡಿಯಲ್ಲಿ ಸದಾ ತಂಟೆ ತೆಗೆಯುವ ಪಾಕಿಸ್ತಾನ ಮತ್ತು ಚೀನಾಕ್ಕೆ ವ್ಯೂಹಾತ್ಮಕವಾಗಿ ಪಾಠ ಕಲಿಸುವ ಉದ್ದೇಶದಿಂದ ರಾಜತಾಂತ್ರಿಕ ಪ್ರವಾಸ ಆರಂಭಿಸಿದ ಮೋದಿ ಆರಂಭದಲ್ಲಿ ಭೂತಾನ್, ನೇಪಾಳ, ಮ್ಯಾನ್ಮಾರ್ ಮತ್ತು ಫಿಜಿ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿದರು. ಮುಖ್ಯವಾಗಿ ಪ್ರಧಾನಿಯಾದ ಬಳಿಕ ಮೋದಿ ಅಮೆರಿಕದ ಮಿತ್ರರಾಷ್ಟ್ರಗಳಾದ ಜಪಾನ್ ಮತ್ತು ಆಸ್ಟ್ರೇಲಿಯಾಗಳಿಗೆ ಪ್ರವಾಸ ಕೈಗೊಂಡು ಅಮೆರಿಕದೊಂದಿಗಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ತಂತ್ರವನ್ನು ಅನುಸರಿಸಿದರು. ಅದರ ಫಲ ಮೋದಿ ಅಮೆರಿಕ ಭೇಟಿ ಮತ್ತು ಒಬಾಮ ಭಾರತ ಭೇಟಿ ವೇಳೆ ಇಡೀ ಜಗತ್ತಿಗೆ ಸ್ಪಷ್ಟವಾಗಿ ಗೊತ್ತಾಗಿದೆ.

ಅಮೆರಿಕ ಸ್ನೇಹವನ್ನು ಸಂಪಾದಿಸುವ ಯತ್ನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಮೋದಿ ಒಂದು ಅರ್ಥದಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಯತ್ನ ಮಾಡಿದ್ದಾರೆ. ಜಪಾನ್, ಜರ್ಮನಿ ಮತ್ತು ಅಮೆರಿಕದ ಸ್ನೇಹ-ವಿಶ್ವಾಸ ಗಳಿಸುವ ಮೂಲಕ, ಸದಾ ಕಿರುಕುಳ ನೀಡುತ್ತ ಬಂದಿರುವ ಚೀನಾ ಮತ್ತು ಪಾಕಿಸ್ತಾನಕ್ಕೆ ತಕ್ಕ ಸಂದೇಶ ರವಾನಿಸಿದ್ದಾರೆ. ಹಾಗಂತ ಚೀನಾದೊಂದಿಗೂ ಹಗೆತನ ಸಾಧಿಸುವ ಉಮೇದಿನಲ್ಲಿ ಅವರು ಇದ್ದಂತೆ ತೋರುತ್ತಿಲ್ಲ. ಆರಂಭದಲ್ಲಿ ಚೀನಾ ಪ್ರವಾಸದ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ ಮೋದಿ ಇದೀಗ ಮುಂದಿನ ಮಾರ್ಚ್ ಹೊತ್ತಿಗೆ ಪ್ರವಾಸ ಹಮ್ಮಿಕೊಳ್ಳಲು ಮನಸ್ಸು ಮಾಡುವ ಮೂಲಕ ಜಾಣ ರಾಜತಾಂತ್ರಿಕತೆಯ ಒಂದು ವೃತ್ತವನ್ನು ಪೂರ್ಣಗಳಿಸುವ ಯೋಜನೆ ಹಾಕಿಕೊಂಡಿರುವಂತಿದೆ. ಚುನಾವಣೆಯಲ್ಲಿ ದೇಶ ಗೆದ್ದು ನಗೆ ಬೀರಿದ ಮೋದಿ ರಾಜತಾಂತ್ರಿಕವಾಗಿಯೂ ಅದೇ ತೆರನಾದ ಯಶಸ್ಸು ಕಾಣುತ್ತಾರಾ? ಮೋದಿಯನ್ನು ಮೇಜಿಗೆ ಹೋಲಿಸುವ ಜರೂರತ್ತಿಲ್ಲ ಬಿಡಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top