ವಿಸ್ತಾರ…
ಭಾರತದೊಂದಿಗೆ ಚೀನಾದ ಕದನೋತ್ಸಾಹದ ಒಳಗುಟ್ಟೇನು?
ಶತ್ರುವಿನ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿ ನಿಂತರೆ, ಅದಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ
– ಹರಿಪ್ರಕಾಶ ಕೋಣೆಮನೆ
ಯುದ್ಧ ಸಲ್ಲದು ಎಂಬ ವಿವೇಕ ಜಗತ್ತನ್ನು ಆಳಲಿ ಎಂದು ಹಾರೈಸುತ್ತಲೇ, ಭಾರತ ಮತ್ತು ಚೀನಾದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ ಎಂಬ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂಬುದನ್ನು ಒಪ್ಪಿಕೊಂಡುಬಿಡೋಣ. ಭಾರತದ ವಿರುದ್ಧ ಎರಡನೇ ಬಾರಿಗೆ ಪೂರ್ಣಪ್ರಮಾಣದ ಯುದ್ಧ ಮಾಡುವ ಉನ್ಮಾದದಲ್ಲಿರುವ ಚೀನಾ ಎರಡು ಹೆಜ್ಜೆ ಮುಂದಿಟ್ಟು ಒಂದು ಹೆಜ್ಜೆ ಹಿಂದಕ್ಕೆ ಇಡುತ್ತಿದೆ. ಎರಡು ಹೆಜ್ಜೆ ಮುಂದಿಡುವ, ಒಂದು ಹೆಜ್ಜೆ ಹಿಂದೆ ಸರಿಯುವ ನಡೆಯಲ್ಲಿಯೇ ವಂಚಕತನವಿರಬಹುದು. ಆದರೆ, ಈಗಿನ ಸನ್ನಿವೇಶದಲ್ಲಿ ಯುದ್ಧ ಮಾಡುವುದು ಚೀನಾಗೆ ಅಷ್ಟೊಂದು ಸಲೀಸಾ? ಇನ್ನು ನಮ್ಮ ದೇಶದ ವಿಷಯದಲ್ಲೂ ಅಷ್ಟೇ. ಯುದ್ಧ ನಡೆದರೆ ಅದನ್ನು ಅರಗಿಸಿಕೊಳ್ಳುವುದು ಈ ಹೊತ್ತಲ್ಲಿ ಸಾಧ್ಯವಿದೆಯೇ? ಈ ಸಂಗತಿಯೇ ಇದೀಗ ಚರ್ಚೆಯ ಕೇಂದ್ರ ಬಿಂದು. ಯುದ್ಧದ ತಯಾರಿ ಎಂದರೆ, ಶಸ್ತ್ರಾಸ್ತ್ರಗಳ ಪೂರೈಕೆಯಷ್ಟೇ ಅಲ್ಲ. ನಮ್ಮ ಸ್ನೇಹಿತರು ಯಾರು? ಸ್ನೇಹಿತರಿದ್ದರೂ ಆ ಪೈಕಿ ಯುದ್ಧ ನಡೆದರೆ ಜತೆಗೆ ನಿಲ್ಲುವವರು ಯಾರು? ಶತ್ರು ಯಾರು? ಆತನ ಕ್ರೋಧವೆಷ್ಟು? ಆತನ ಬೆಂಬಲಿಗರು ಯಾರು? ದೌರ್ಬಲ್ಯಗಳೇನು ಎಂಬುದು ಕೂಡ ಯುದ್ಧ ಸಿದ್ಧತೆ ಎಂಬ ಮಾತು ಮಹಾಭಾರತದಲ್ಲಿ ಬರುತ್ತದೆ. ಹಾಗಾಗಿ, ಭಾರತ ಮತ್ತು ಚೀನಾದ ಕುರಿತು ಒಂದಿಷ್ಟು ಸಂಗತಿಗಳನ್ನು ಅರಿಯೋಣ.
ಚೀನಾ ಮೊದಲಿನಿಂದಲೂ ಬಹಳ ಮುಗುಮ್ಮಾದ ನಿಗೂಢ ತಂತ್ರಗಾರಿಕೆ, ಕುತಂತ್ರಗಾರಿಕೆಗೆ ಕುಖ್ಯಾತಿ ಪಡೆದಿದೆ. ಜಗತ್ತಿಗೆಲ್ಲಾ ಕೊರೊನಾ ವೈರಸ್ ಹರಡಿ ಕುಳಿತಿರುವ ಚೀನಾ ತಾನೊಂದು ವಂಚಕ ದೇಶ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ. ಸರ್ವಾಧಿಕಾರಿ ಸ್ವಭಾವದ ಕಮ್ಯುನಿಸ್ಟ್ ಚೀನಾ ಯಾವ ಕಾರಣಕ್ಕೂ ತನ್ನ ಯಾವುದೇ ಗುಟ್ಟನ್ನು ಹೊರ ಜಗತ್ತಿಗೆ ಬಿಟ್ಟು ಕೊಡುವುದಿಲ್ಲ. ಸರ್ಚ್ ಎಂಜಿನ್ನಿಂದ ಹಿಡಿದು ಸೋಷಿಯಲ್ ಮೀಡಿಯಾ, ಸಾರ್ವತ್ರಿಕ ಸುದ್ದಿ ಮಾಧ್ಯಮಗಳವರೆಗೆ ಎಲ್ಲವನ್ನೂ ಚೀನಾ ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಂಡಿದೆ. ನಮ್ಮ ದೇಶ ಹಾಗಲ್ಲ. ಇಲ್ಲಿ ಏನನ್ನೂ ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವಾದಿ ಭಾರತದಲ್ಲಿ ಪಾರದರ್ಶಕತೆಯೂ ವಿಪರೀತ. ಜತೆಗೆ, ಈ ವಿಷಯದಲ್ಲಿ ಸಂಪೂರ್ಣವಾಗಿ ಪರಾವಲಂಬಿ. ಚೀನಾ ಸೇನಾಬಲ ಮತ್ತು ಆರ್ಥಿಕ ಬಲಾಢ್ಯತೆಯಲ್ಲಿ ಅಮೆರಿಕವೂ ಸೇರಿ ಇಡೀ ವಿಶ್ವಕ್ಕೆ ಸಡ್ಡು ಹೊಡೆಯುತ್ತಿದೆ. ಆದರೆ, ಭಾರತ ಈಗಷ್ಟೇ ಜಾಗತಿಕ ಶಕ್ತಿಯಾಗುವತ್ತ ಅಂಬೆಗಾಲಿಡತೊಡಗಿದೆ. ಚೀನಾ ಈ ವಿಷಯದಲ್ಲಿ ಮೊದಲ ನಡಿಗೆಯೊಂದಿಗೆ ಅಗಾಧ ದೂರವನ್ನು ಕ್ರಮಿಸಿದೆ. ಇದೇ ವೇಳೆ ಕೊರೊನಾ ದಾಳಿ ಬಳಿಕ ಭಾರತದ ಆರ್ಥಿಕತೆಯೂ ಸೂಕ್ಷ ್ಮವಾಗಿದೆ. ವಿಶೇಷ ಎಂದರೆ ಇಡೀ ಜಗತ್ತಿಗೆ ಕೊರೊನಾ ಹಂಚಿದ ಚೀನಾ ಮಾತ್ರ, ತನ್ನ ಆರ್ಥಿಕತೆ ಮತ್ತು ಔದ್ಯೋಗಿಕ ಸಾಮರ್ಥ್ಯದಲ್ಲಿ ಈಗಲೂ ಸ್ಥಿರತೆ ಕಾಪಾಡಿಕೊಂಡಿದೆ. ಒಂದು ಪೂರ್ಣ ಪ್ರಮಾಣದ ಯುದ್ಧಕ್ಕೆ ಬೇಕಾದ ಅಗತ್ಯ ಸಲಕರಣೆಗಳನ್ನು ಶೇಖರಿಸಿಟ್ಟುಕೊಂಡು ಎಷ್ಟೋ ಕಾಲ ಆಗಿದೆ. ಹಾಗಾಗಿ, ಆಗಾಗ ಯುದ್ಧೋನ್ಮಾದ, ಶೌರ್ಯದ ಮಾತುಗಳನ್ನು ಆಡುತ್ತಲೇ ಇರುತ್ತದೆ. ಆದರೆ ವಾಸ್ತವದಲ್ಲಿ ಯುದ್ಧ ಸದ್ಯಕ್ಕೆ ಬೇಡ ಎಂಬುದೇ ಚೀನಾದ ಅಂತರಂಗದ ವಿಚಾರವೂ ಆಗಿರಬಹುದು. ಏಕೆಂದರೆ, ಬೊಗಳುವ ನಾಯಿ ಕಚ್ಚುವುದಿಲ್ಲವಲ್ಲ !
* ಕಿಸ್ಸಿಂಜರ್ ಬರೆದ ಚೀನಾ ಮರ್ಮ
ಚೀನಾದ ಸೈಕಾಲಜಿಯನ್ನು ಸರಿಯಾಗಿ ಅರಿಯುವ ದೃಷ್ಟಿಯಿಂದ ಇತಿಹಾಸದ ಕೆಲ ಘಟನಾವಳಿಗಳ ಕಡೆ ಹೊರಳಿ ನೋಡಬೇಕು. ಮುಖ್ಯವಾಗಿ ಚೀನಾದ ಕುರಿತು ಹೆನ್ರಿ ಕಿಸ್ಸಿಂಜರ್ ದಾಖಲಿಸಿರುವ ಒಂದು ಸಂಗತಿಯನ್ನು ಮೆಲುಕು ಹಾಕಿದರೆ, ಚೀನಾ ಅಂದು-ಇಂದು-ಎಂದೆಂದೂ ಬದಲಾಗಲ್ಲ ಅನಿಸುತ್ತೆ. ಹೆನ್ರಿ ಕಿಸ್ಸಿಂಜರ್ ಗೊತ್ತಲ್ಲ? ಆತ ಅಮೆರಿಕದ ಹೆಸರಾಂತ ರಾಜನೀತಿಜ್ಞ. ರಿಚರ್ಡ್ ನಿಕ್ಸನ್ ಹಾಗೂ ಪೋರ್ಡ್ ಅವರ ಅವಧಿಯಲ್ಲಿ(1969-1976) ಅಮೆರಿಕದ ಅಧ್ಯಕ್ಷ ರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕೆಲಸ ಮಾಡಿದವರು. ಯುದ್ಧ ನಿರತ ಉತ್ತರ ವಿಯೆಟ್ನಾಂನಲ್ಲಿ ಶಾಂತಿ ಸ್ಥಾಪನೆಗೆ ಅವರು ನಡೆಸಿದ ಯಶಸ್ವಿ ಕೆಲಸಕ್ಕಾಗಿ ಕಿಸ್ಸಿಂಜರ್ಗೆ ನೊಬೆಲ್ ಪಾರಿತೋಷಕವೂ ಸಂದಿದೆ. ಚೀನಾದ ರೀತಿ-ನೀತಿ, ಸ್ವಭಾವದ ಕುರಿತು ತಮ್ಮ ಪುಸ್ತಕದಲ್ಲಿ ಕಿಸ್ಸಿಂಜರ್ ದಾಖಲಿಸಿದ ಸಂಗತಿ ಈ ಸಂದರ್ಭದಲ್ಲಿ ಉಲ್ಲೇಖನಾರ್ಹವಾದದ್ದು. 1962ರಲ್ಲಿ ಚೀನಾ ಭಾರತದ ಮೇಲೆ ನಡೆಸಿದ ಯುದ್ಧದ ಹಿನ್ನೆಲೆಯಲ್ಲಿ ಅವರು ಒಂದು ಆಪ್ತ ಸಂಗತಿಯನ್ನು ದಾಖಲಿಸಿದ್ದಾರೆ. ಗಡಿ ಘರ್ಷಣೆ ಹಿನ್ನೆಲೆಯಲ್ಲಿ ಭಾರತದ ಮೇಲೆ ಯುದ್ಧ ಕೈಗೊಳ್ಳುವ ಪೂರ್ವದಲ್ಲಿ ಆಗಿನ ಚೀನಾದ ಸರ್ವಾಧಿಕಾರಿ ಮಾವೋ ಜೆಡಾಂಗ್ ಬೀಜಿಂಗ್ನಲ್ಲಿ ಉನ್ನತ ಸೇನಾಧಿಕಾರಿಗಳು ಹಾಗೂ ರಾಜಕೀಯ ನಾಯಕರ ಜತೆ ಸಭೆ ನಡೆಸುತ್ತಾರೆ. ಭಾರತದೊಂದಿಗಿನ ಸತತ ಘರ್ಷಣೆಗೆ ಮಂಗಳ ಹಾಡಬೇಕೆಂಬ ಖಚಿತ ಅಭಿಪ್ರಾಯ ಹೊಂದಿದ್ದ ಜೆಡಾಂಗ್ ಸಭೆಯಲ್ಲಿ ಹೀಗೆ ಹೇಳುತ್ತಾರೆ. ‘‘ವಾಸ್ತವದಲ್ಲಿ ಭಾರತ ಮತ್ತು ಚೀನಾ ಅಂಥ ಹಗೆತನವನ್ನೇನೂ ಸಾಧಿಸಬೇಕಿಲ್ಲ. ಉಭಯ ದೇಶಗಳು ದೀರ್ಘಕಾಲದ ಶಾಂತಿ, ಸಹಬಾಳ್ವೆಯನ್ನೂ ಹೊಂದಲೇಬೇಕು. ಅದು ಸಾಧ್ಯವಾಗಬೇಕಾದರೆ ಭಾರತವನ್ನು ಬಲವಂತವಾಗಿ ಮಾತುಕತೆಯ ಟೇಬಲ್ಲಿಗೆ ಕರೆತರಬೇಕು,’’ ಎಂಬ ಸೂಚನೆ ನೀಡುತ್ತಾರೆ. ಅವರ ಮಾತಿನ ಮರ್ಮ ಭಾರತ ಚೀನಾಕ್ಕೆ ಶರಣಾಗಬೇಕಷ್ಟೇ! ಆ ಸಭೆ ಮುಕ್ತಾಯ ಆಗುತ್ತಿದ್ದ ಹಾಗೆ ಚೀನಾ ಭಾರತದ ಮೇಲೆ ಯುದ್ಧ ಶುರುಮಾಡಿತು. ಸೇನಾ ಸನ್ನದ್ಧತೆ, ಬಲಿಷ್ಠ ರಾಷ್ಟ್ರಗಳ ಬೆಂಬಲ ಯಾವುದೂ ಇಲ್ಲದ ಕಾರಣಕ್ಕೆ ಚೀನಾದ ಎದುರು ಭಾರತ ಹೀನಾಯವಾಗಿ ಸೋಲಬೇಕಾಯಿತು. ಯುದ್ಧದ ವೇಳೆ ಚೀನಿ ಸೈನಿಕರು ಭಾರತದ ಅಪಾರ ಭೂಭಾಗವನ್ನು ಅತಿಕ್ರಮಿಸಿಕೊಂಡರು.
ಜೆಡಾಂಗ್ ಯೋಜನೆಯಂತೆ ಯುದ್ಧಾನಂತರ ಉಭಯ ದೇಶಗಳು ಮಾತುಕತೆಗೆ ಕುಳಿತುಕೊಂಡವು. ಪರಸ್ಪರ ಶಾಂತಿ ಸಹಬಾಳ್ವೆಗೆ ಒಂದಿಷ್ಟು ಒಪ್ಪಂದಗಳೂ ಆದವು. ಮಾತುಕತೆ ವೇಳೆ ತಾನು ಅತಿಕ್ರಮಿಸಿಕೊಂಡ ಭಾರತದ ಭೂ ಪ್ರದೇಶದ ಬಗ್ಗೆ ಸೊಲ್ಲು ಎತ್ತಲೇ ಇಲ್ಲ. ಶಾಂತಿ ಸಹಬಾಳ್ವೆಗೆ ಮಾಡಿಕೊಂಡ ಒಪ್ಪಂದದ ಪಾಲನೆಯಲ್ಲೂ ಚೀನಾ ಪ್ರಾಮಾಣಿಕತೆ ತೋರಲಿಲ್ಲ. ಅದೆಲ್ಲವೂ ಈಗ ಇತಿಹಾಸದ ಭಾಗ.
*ಚೀನಾದ ವರ್ತಮಾನದ ಚಡಪಡಿಕೆ
ವರ್ತಮಾನದ ಸಂದರ್ಭಕ್ಕೆ ಬರೋಣ. 1962ರ ಯುದ್ಧದ ಬಳಿಕ ಮತ್ತೊಮ್ಮೆ ಅಂಥದ್ದೇ ಸನ್ನಿವೇಶ ನಿರ್ಮಾಣವಾಗಿದೆ. ಲಡಾಕ್ನ ಗಲ್ವಾನ್ ಕಣಿವೆ ಸಮೀಪ ಚೀನಾದ ಯೋಧರು ಭಾರತೀಯ ಯೋಧರ ಮೇಲೆ ಹಠಾತ್ತಾಗಿ ದಾಳಿ ಮಾಡಿದರು. 20 ಭಾರತೀಯ ಯೋಧರು ಪ್ರಾಣಾರ್ಪಣೆ ಮಾಡಿದರು. ಸುಮಾರು 60 ಸಾವಿರ ಚದರ ಮೈಲಿ ಭಾರತದ ಭೂ ಪ್ರದೇಶವನ್ನು ಚೀನಾ ಅತಿಕ್ರಮಿಸಿತು ಎಂಬ ವರದಿಯೂ ಇತ್ತು. 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿ ಇಂಥ ಗಂಭೀರ ಬಿಕ್ಕಟ್ಟು ಎದುರಾಗುತ್ತಿದೆ. ಹಾಗಾದರೆ ಈ ಬೆಳವಣಿಗೆಗೆ ಏನು ಕಾರಣ? ಗಡಿ ಪ್ರದೇಶ ಒತ್ತುವರಿ ಬಿಕ್ಕಟ್ಟಿನ ಕುರಿತು ಉಭಯ ದೇಶಗಳ ಸೇನಾಧಿಕಾರಿಗಳು ಮಾತುಕತೆ ನಡೆಸುತ್ತಿರುವ ವೇಳೆ ಏಕಾಏಕಿ ಚೀನಿ ಸೈನಿಕರು ಮಾರಣಾಂತಿಕ ದಾಳಿ ನಡೆಸಿದರು. ಇದಕ್ಕೆ ಏನು ಕಾರಣ ಎಂಬುದನ್ನು ಚೀನಾ ಸೇನೆಯಾಗಲಿ ಅಥವಾ ಅಲ್ಲಿನ ಸರಕಾರವಾಗಲಿ ಎಲ್ಲೂ ಮಾತಾಡಿಲ್ಲ. ಆದರೆ ಚೀನಾದ ಕಮ್ಯುನಿಸ್ಟ್ ಸರಕಾರದ ಮುಖವಾಣಿ ಪತ್ರಿಕೆಯಾದ ದಿ ಗ್ಲೋಬಲ್ ಟೈಂಸ್ ಕಳೆದ ಫೆಬ್ರುವರಿ, ಮಾರ್ಚ್ ಮತ್ತು ಜೂನ್ ತಿಂಗಳಲ್ಲಿ ಸರಣಿ ವರದಿ ಮಾಡಿ, ಸರಕಾರ ನೀಡಬೇಕಾದ ಹೇಳಿಕೆಯನ್ನು ಪ್ರಕಟಿಸಿದೆ. ಆ ವರದಿ ಪ್ರಕಾರ ಭಾರತ ಮತ್ತು ಅಮೆರಿಕದ ಬಾಂಧವ್ಯ ಗಟ್ಟಿಗೊಳ್ಳುತ್ತಿರುವುದು ಚೀನಾದ ಕಣ್ಣನ್ನು ಕೆಂಪಾಗಿಸಿದೆ. ಇಂಡೋ ¶ಫೆಸಿಫಿಕ್ ವಲಯದಲ್ಲಿ ಚೀನಾ ವಿರೋಧಿ ಅಮೆರಿಕದ ಚಟುವಟಿಕೆ ಗಟ್ಟಿಗೊಳಿಸುವುದು ಈ ಬಾಂಧವ್ಯ ವೃದ್ಧಿಯ ಮೂಲ ಉದ್ದೇಶ ಎಂಬುದು ಚೀನಾದ ಬಲವಾದ ಊಹೆಯಾಗಿತ್ತು. ವಿಸ್ತೃತ ಜಿ-7 ಗುಂಪಿಗೆ ಭಾರತ ಸೇರ್ಪಡೆ ಆಗುವುದನ್ನು ಅಮೆರಿಕ, ಆಸ್ಪ್ರೇಲಿಯಾ, ಜಪಾನ್ ಬೆಂಬಲಿಸಿದ್ದೂ ಸಹ ಚೀನಾದ ವಿರುದ್ಧ ಪ್ರಬಲ ಶಕ್ತಿಗಳ ಒಗ್ಗೂಡುವಿಕೆ ಸೂಚನೆಯೇ ಆಗಿದೆ. ಈ ಬೆಳವಣಿಗೆ ಭಾರತದ ವಿರುದ್ಧದ ಚೀನಾದ ಅತೃಪ್ತಿಯ ಜ್ವಾಲೆಗೆ ತುಪ್ಪ ಸುರಿದಂತಾಗಿತ್ತು. ಮುಂದೆ ಅಮೆರಿಕದ ಹೌಡಿ ಮೋದಿ ಸಮಾವೇಶ, ಗುಜರಾತಲ್ಲಿ ನಮಸ್ತೇ ಟ್ರಂಪ್ ಕಾರ್ಯಕ್ರಮ ನಡೆದಿದ್ದು ಚೀನಾದ ಚಡಪಡಿಕೆಯನ್ನು ಮತ್ತಷ್ಟು ಹೆಚ್ಚಿಸಿತು. ಈ ಎಲ್ಲ ಬೆಳವಣಿಗೆಗಳನ್ನು ವರದಿ ಮಾಡಿದ್ದ ಅಲ್ಲಿನ ಗ್ಲೋಬಲ್ ಟೈಂಸ್ ಪತ್ರಿಕೆ, ಇಂಥಾ ಹೊತ್ತಲ್ಲಿ ಚೀನಾ ಮೂಕ ಪ್ರೇಕ್ಷ ಕನಾಗಿ ಕೂರುವುದಿಲ್ಲ ಎಂದು ಸರಕಾರದ ಬೇಗುದಿಯನ್ನು ವರದಿ ಮಾಡಿತ್ತು. ನೆರೆಯ ಚೀನಾದ ಅನುಮಾನದ ಚಡಪಡಿಕೆ ಅಲ್ಲಿಗೂ ನಿಲ್ಲುವುದಿಲ್ಲ. ಎರಡನೇ ಅವಧಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅವರು ಚೀನಾದ ವಿಷಯದಲ್ಲಿ ತನ್ನ ನಿಲುವನ್ನು ಮತ್ತಷ್ಟು ಬದಲಿಸಿಕೊಂಡಿದ್ದಾರೆ. ಅಮೆರಿಕದ ಚೀನಾ ವಿರೋಧಿ ಕಾರ್ಯಕ್ರಮಗಳಲ್ಲಿ ಭಾರತ ಸಕ್ರಿಯವಾಗಿದೆ. ಆ ಬಗ್ಗೆ ತನ್ನ ತಕರಾರಿರುವ ಸಂದೇಶವನ್ನು ಚೀನಾ ಭಾರತಕ್ಕೆ ರವಾನಿಸಿದೆ. ಅದನ್ನು ಸ್ವೀಕರಿಸುವುದೂ ಬಿಡುವುದು ಭಾರತಕ್ಕೆ ಬಿಟ್ಟ ವಿಚಾರ ಎಂದು ಜೂನ್ 5ರಂದು ಅದೇ ಗ್ಲೋಬಲ್ ಟೈಂಸ್ ವರದಿ ಮಾಡಿದೆ. ಅಷ್ಟು ಮಾತ್ರವಲ್ಲ, ಭಾರತದ ಆಂತರಿಕ ವಿಚಾರಗಳಲ್ಲೂ ಚೀನಾ ಮೂಗು ತೂರಿಸಿತು. ಜಮ್ಮು, ಕಾಶ್ಮೀರ, ಲಡಾಕ್ನ ತ್ರಿಭಜನೆ ಮಾಡಿ, ಆರ್ಟಿಕಲ್ 370 ರದ್ದತಿ ಸಮರ್ಥನೆ ವೇಳೆ ಗೃಹ ಸಚಿವ ಅಮಿತ್ ಶಾ ಆಕ್ಸಯ್ ಚೀನಾ ಭಾರತಕ್ಕೆ ಸೇರಿದ್ದು ಎಂದು ಸಮರ್ಥನೆ ಮಾಡಿಕೊಂಡಿದ್ದನ್ನು ಗ್ಲೋಬಲ್ ಟೈಮ್ಸ… ಸಹಿಸಿಕೊಂಡಿಲ್ಲ. ಅದಕ್ಕೂ ಆಕ್ಷೇಪ ತೆಗೆಯುತ್ತಲೇ ಬಂದಿದೆ. ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಭಾರತದ ಸೈನಿಕರ ಮೇಲೆ ಎರಗುವುದಕ್ಕೆ, ಗಡಿ ಉಲ್ಲಂಘನೆ ಮಾಡುವುದಕ್ಕೆ ಇದೇ ಕಾರಣ ಎಂದು ಅಂತಿಮ ಷರಾ ಬರೆದು ಸಮರ್ಥನೆ ಮಾಡಿಕೊಂಡಿತು.
ಭಾರತದಂತಹ ಸರ್ವತಂತ್ರ ಸ್ವತಂತ್ರ ಪ್ರಜಾತಂತ್ರ ದೇಶ, ಯಾವುದೇ ದೇಶದ ಗೊಡ್ಡುಬೆದರಿಕೆಗಳಿಗೆಲ್ಲ ಸೊಪ್ಪು ಹಾಕುವ ಅಗತ್ಯ ಇಲ್ಲ. ಆದರೆ, ಚೀನಾದ ಸಮಸ್ಯೆಯ ಮೂಲ ಎಲ್ಲಿದೆ ಎಂಬುದನ್ನು ಅದು ಅರ್ಥ ಮಾಡಿಕೊಳ್ಳಬೇಕು.
ಚೀನಾದ ಜೊತೆಗೆ ಶತಮಾನಗಳಿಂದ ಕಠಿಣ ಚೌಕಾಸಿ ನಡೆಸಿದೆ. ಆರ್ಥಿಕ ಮತ್ತು ರಕ್ಷ ಣಾತ್ಮಕ ರಾಜಿ ಮಾಡಿಕೊಂಡಿದೆ. ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬಂದಿಲ್ಲ . ರಾಜತಾಂತ್ರಿಕ ಮಾತುಕತೆ ಮೂಲಕ ಭಾರತ ನಡೆಸಿದ ಶಾಂತಿ ಸ್ಥಾಪನೆ ಯತ್ನವೂ ಫಲ ನೀಡಿಲ್ಲ. ಹಾಗಾದರೆ ಮತ್ತೊಂದು ಪೂರ್ಣ ಪ್ರಮಾಣದ ಯುದ್ಧ ನಡೆದರೆ ಏನಾದೀತು, ಭಾರತ ಮತ್ತು ಚೀನಾ ಬಲ ಮತ್ತು ದೌರ್ಬಲ್ಯ ಏನು ಎಂಬುದನ್ನು ತುಲನಾತ್ಮಕವಾಗಿ ನೋಡೋಣ.
ಭಾರತದ ಶಕ್ತಿ-ಸಾಮರ್ಥ್ಯ
1962ರ ನಂತರ ಭಾರತ ಐದು ಯುದ್ಧಗಳನ್ನು ನಡೆಸಿದ ಅನುಭವ ಹೊಂದಿದೆ. ಈ ಪೈಕಿ ನಾಲ್ಕರಲ್ಲಿ ಅಭೂತಪೂರ್ವ ಗೆಲುವು ಪಡೆದಿದೆ. ಅದರಲ್ಲೂ ಪರ್ವತ ಪ್ರದೇಶದಲ್ಲಿ ಸೆಣೆಸುವ ಭಾರತದ ಸೇನೆಯ ಅನುಭವ, ಸಾಮರ್ಥ್ಯವನ್ನು ಗುರುತಿಸಲೇಬೇಕು. ಭಾರತ ವ್ಯೂಹಾತ್ಮಕವಾಗಿ ಮತ್ತು ಸೇನಾ ಸನ್ನದ್ಧತೆ ದೃಷ್ಟಿಯಿಂದಲೂ ಅಪಾರ ಪ್ರಗತಿ, ಶಕ್ತಿಯನ್ನು ಗಳಿಸಿದೆ. ಅಮೆರಿಕ, ಆಸ್ಪ್ರೇಲಿಯಾ, ಜಪಾನ್, ಫ್ರಾನ್ಸ್, ರಷ್ಯಾ, ಇಸ್ರೇಲ್ ದೇಶಗಳು ಭಾರತದ ಬೆನ್ನಿಗೆ ನಿಂತುಕೊಂಡಿವೆ. ಆ ಎಲ್ಲ ದೇಶಗಳು ಭಾರತಕ್ಕೆ ರಕ್ಷ ಣಾ ತಂತ್ರಜ್ಞಾನ ಮತ್ತು ರಕ್ಷ ಣಾ ಉಪಕರಣಗಳ ನೆರವು ನೀಡುತ್ತಿವೆ. ನೇಪಾಳದಂತಹ ಸಣ್ಣಪುಟ್ಟ ದೇಶದ ಕಿರುಕುಳ ಭಾರತಕ್ಕೆ ಇತ್ತಾದರೂ ತಂತ್ರಗಾರಿಕೆಯಿಂದ ಆ ಸಮಸ್ಯೆಯನ್ನು ಭಾರತ ನಿವಾರಿಸಿಕೊಂಡಿದೆ. ಎಲ್ಲದಕ್ಕಿಂತ ಮುಖ್ಯವಾಗಿ 1962ಕ್ಕೆ ಹೋಲಿಸಿದರೆ ಭಾರತಕ್ಕೆ ನಿರ್ಣಾಯಕ ನಾಯಕತ್ವ ಇದೆ.
ಭಾರತಕ್ಕೆ ಸವಾಲುಗಳು
ಸೇನಾ ಸನ್ನದ್ಧತೆಗೆ ಹೋಲಿಸಿದರೆ ಭಾರತ ಚೀನಾದ ಎದುರು ಇನ್ನೂ ಸಾಧಿಸಬೇಕಾದ್ದು ಸಾಕಷ್ಟಿದೆ. ನೈಜ ಯುದ್ಧದ ಸನ್ನಿವೇಶ ನಿರ್ಮಾಣವಾದರೆ ರಷ್ಯಾದಂತಹ ದೇಶ ಯಾವ ಪಾತ್ರವಹಿಸುತ್ತದೆ ಎಂಬುದು ಇನ್ನೂ ಅಸ್ಪಷ್ಟ . ರಷ್ಯಾ ಮೊದಲಾದ ದೇಶದಿಂದ ಆಮದಿಗೆ ಸಿದ್ಧತೆ ನಡೆಸಿರುವ ಹಲವು ಶಸ್ತ್ರಾಸ್ತ್ರಗಳು ಈಗಾಗಲೇ ಚೀನಾದ ಬತ್ತಳಿಕೆಯಲ್ಲಿವೆ. ಚೀನಾ ಹೊಂದಿರುವ ಪ್ರಬಲ ಶಸ್ತ್ರಾಸ್ತ್ರಗಳಿಗೆ ಹೋಲಿಸಿದರೆ ಭಾರತದ ಬಳಿ ಅದರ ಕಾಲುಭಾಗ ಮಾತ್ರ ಇದೆ. ಇನ್ನೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ಗೆ ಹಿನ್ನಡೆಯಾದರೆ ಅಮೆರಿಕ ನಿಲುವು ಏನಿರುತ್ತೆ ಎಂಬುದು ಗೊತ್ತಿಲ್ಲ. ಚೀನಾವನ್ನು ಅಸ್ಥಿರಗೊಳಿಸಲು ಅಮೆರಿಕ ಭಾರತವನ್ನು ಒಂದು ಟೂಲ್ ಆಗಿ ಬಳಸಿಕೊಳ್ಳುತ್ತಿದೆಯೇ ಎಂಬ ಗುಮಾನಿಯೂ ಇದೆ. ಜತೆಗೆ, ಈಗಾಗಲೇ ಸಂಕಷ್ಟದಲ್ಲಿರುವ ಭಾರತದ ಆರ್ಥಿಕತೆ ಏನಾಗುತ್ತದೆ ಎಂಬ ಆತಂಕ ಎಲ್ಲದಕ್ಕಿಂತ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಗಲ್ವಾನ್ ಕಣಿವೆ ಆಕ್ರಮಣಕ್ಕೆ ಪ್ರತಿಯಾಗಿ ಭಾರತ ಚೀನಾದ ಆ್ಯಪ್ಗಳನ್ನು ನಿರ್ಬಂಧಿಸಿರುವುದು ವಾಸ್ತವದಲ್ಲಿ ಅಷ್ಟು ಫಲ ಕೊಡಲಾರದು. ಯುದ್ಧ ಆತಂಕದಲ್ಲಿ ಘೋಷಣೆ ಮಾಡಿರುವ ಆತ್ಮನಿರ್ಭರ ನೀತಿ ತಾತ್ಕಾಲಿಕವಾಗಿ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು. ಕೊರೊನೋತ್ತರ ಕಾಲದಲ್ಲಿ ಆ ವಿಷಯವನ್ನು ಪ್ರತ್ಯೇಕವಾಗಿಯೇ ಚರ್ಚಿಸುವುದು ಉತ್ತಮ.
ಚೀನಾದ ಶಕ್ತಿ ಮಿಲಿಟರಿ ದೃಷ್ಟಿಯಿಂದ ಭಾರತಕ್ಕಿಂತ ಎಷ್ಟೋ ಪಟ್ಟು ಬಲಾಢ್ಯ. ಅಣ್ವಸ್ತ್ರ ಸಂಗ್ರಹದಲ್ಲೂ ಚೀನಾ ಭಾರತಕ್ಕಿಂತ ಹೆಚ್ಚು ಶಕ್ತಿಶಾಲಿ. ಜಾಗತಿಕ ಆರ್ಥಿಕ ಹಿಂಜರಿತ, ಕೊರೊನಾ ಆತಂಕದಿಂದ ಚೀನಾದ ಆರ್ಥಿಕವಾಗಿ, ಔದ್ಯೋಗಿಕ ಶಕ್ತಿ ಒಂದಿಷ್ಟೂ ಮುಕ್ಕಾಗಿಲ್ಲ.
ಚೀನಾದ ದೌರ್ಬಲ್ಯಗಳು
14 ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಚೀನಾ ಬಹುತೇಕ ದೇಶಗಳೊಂದಿಗೆ ಒಂದಲ್ಲ ಒಂದು ಸಮಸ್ಯೆ ಸೃಷ್ಟಿಸಿಕೊಂಡಿದೆ. 1962ರ ನಂತರ ಚೀನಾ ಒಂದೇ ಒಂದು ಯುದ್ಧವನ್ನು ವಿಯೆಟ್ನಾಂ ವಿರುದ್ಧ ನಡೆಸಿದೆ. ಈ ವಿಷಯದಲ್ಲಿ ಸೇನೆಗೆ ಅನುಭವ ಕಡಿಮೆ. ಅಮೆರಿಕದಂತಹ ಬಲಾಢ್ಯ ದೇಶದ ಜೊತೆ ವೈರತ್ವ ಕಟ್ಟಿಕೊಂಡಿದೆ.
ಕಡೆಮಾತು: ಚೀನಾ ಮತ್ತು ಭಾರತದ ಶಕ್ತಿ, ಸಾಮರ್ಥ್ಯ ಕುರಿತ ಈ ಬಲಾಬಲದ ಲೆಕ್ಕಾಚಾರಗಳೆಲ್ಲವೂ ಒಂದು ಹಂತದಲ್ಲಿ ತರ್ಕದ ಅಂಚಿಗೆ ಬಂದು ನಿಲ್ಲುತ್ತವೆ. ಏಕೆಂದರೆ, ದೇಶದ ಹಿತ ಕಾಪಾಡುವ ಬಲು ಸಂಕಷ್ಟದ ಸಂದರ್ಭದಲ್ಲಿ, ಶತ್ರುವಿನ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿ ನಿಂತರೆ, ಅದಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದು ಇರುವುದಿಲ್ಲ. ಹೇಡಿತನ ಎಂಬುದು ಭಾರತದ ಜಾಯಮಾನ ಅಲ್ಲವೇ ಅಲ್ಲ !