– ಪರೀಕ್ಷೆ ಆಕಾಂಕ್ಷಿಗಳಿಗೆ ಸೂಕ್ತ ಸಲಹೆ, ಮಾರ್ಗದರ್ಶನ.
ವಿಕ ಸುದ್ದಿಲೋಕ ಬೆಂಗಳೂರು.
‘‘ಸತತ ಪ್ರಯತ್ನ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸದಿಂದಾಗಿ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್‌ಎಸ್ ಸೇರಿದಂತೆ ಇತರ ಹುದ್ದೆಗಳ ಭರ್ತಿಗೆ ‘ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)’ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಬಹುದೇ ಹೊರತು, ಬಡತನ, ಕನ್ನಡ ಮಾಧ್ಯಮ, ಗ್ರಾಮೀಣ ಪ್ರದೇಶ ಹಾಗೂ ಇತರೆ ಯಾವುದೇ ಸಮಸ್ಯೆಗಳು ಸಾಧನೆಗೆ ಅಡ್ಡಿ ಬರುವುದಿಲ್ಲ,’’ ಎಂಬುದು ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿರುವ ರಾಜ್ಯದ ಅಗ್ರ ಶ್ರೇಯಾಂಕಿತರ ಅಭಿಮತ.
2019ರ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು 40 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮುಖ್ಯವಾಗಿ ರೈತರು, ಶಿಕ್ಷಕರು, ಗುಮಾಸ್ತರು, ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳೂ ಸೇರಿ ಸಾಮಾನ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು, ಯುಪಿಎಸ್‌ಸಿ ಪರೀಕ್ಷೆಗಳು ಕೇವಲ ಉಳ್ಳವರು, ಅಧಿಕಾರಸ್ಥರು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರ ಸ್ವತ್ತಲ್ಲ ಎಂಬುದನ್ನು ನಿರೂಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆ ಆಕಾಂಕ್ಷಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ಶುಕ್ರವಾರ ‘ವಿಜಯ ಕರ್ನಾಟಕ’ ಕಚೇರಿಯಲ್ಲಿ ‘ಯಪಿಎಸ್‌ಸಿ ಟಾಪರ್ಸ್ ಜತೆ ವೆಬಿನಾರ್’ ಆಯೋಜಿಸಲಾಗಿತ್ತು. ಸಾವಿರಾರು ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
ಯುಪಿಎಸ್‌ಸಿಯಲ್ಲಿ ರಾಜ್ಯದ ಟಾಪರ್ಸ್ ಆದ ಎಚ್.ಎಸ್.ಕೀರ್ತನಾ, ಸಚಿನ್ ಹಿರೇಮಠ್, ಅಭಿಷೇಕ್ ಗೌಡ, ಬಿ.ಕೃತಿ, ವೆಂಕಟ್ರಮಣ ನಾಗೇಶ್ ಭಟ್, ಎಚ್.ಆರ್.ಕೌಶಿಕ್, ಬಿ.ಸಿ.ಹರೀಶ್, ಆನಂದ ವೀರೇಶ ಕಲಾದಗಿ, ವರುಣ್ ಕೆ.ಗೌಡ ಹಾಗೂ ಪ್ರಫುಲ್ ಕೆಂಪಣ್ಣ ದೇಸಾಯಿ ಅವರು ವೆಬಿನಾರ್‌ನಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು.
ರಾಜ್ಯದ ನಾನಾ ಭಾಗಗಳಿಂದ ವೆಬಿನಾರ್‌ಗಳಲ್ಲಿ ಪಾಲ್ಗೊಂಡಿದ್ದವರು, ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಹೇಗೆ? ಯಾವ ಅಧ್ಯಯನ ಸಾಮಗ್ರಿಗಳನ್ನು ಅಭ್ಯಾಸ ಮಾಡಬೇಕು? ಐಚ್ಛಿಕ ಕನ್ನಡ ವಿಷಯಕ್ಕೆ ತಯಾರಿ ಹೇಗೆ? ಸಂದರ್ಶನಕ್ಕೆ ಸಿದ್ಧತೆ ಹೇಗೆ ಎಂಬುದೂ ಸೇರಿದಂತೆ ಹತ್ತಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
ಸತತ ಪ್ರಯತ್ನದಿಂದ ಉತ್ತಮ ಫಲ
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಎಷ್ಟೇ ಪ್ರಯತ್ನ ಪಟ್ಟರೂ ಪ್ರಿಲಿಮಿನರಿ ಪರೀಕ್ಷೆಯನ್ನು ಪಾಸು ಮಾಡಲಾಗದವರು ಲಕ್ಷಾಂತರ ಮಂದಿ ಇದ್ದಾರೆ. ಪ್ರಿಲಿಮಿನರಿ ಪರೀಕ್ಷೆ ಪಾಸಾಗಿ ಹಲವು ಬಾರಿ ಮುಖ್ಯ ಪರೀಕ್ಷೆಯಲ್ಲಿ ಫೇಲಾದವರು, ಮುಖ್ಯಪರೀಕ್ಷೆಯನ್ನು ಪಾಸು ಮಾಡಿ ಸಂದರ್ಶನದಲ್ಲಿ ಆಯ್ಕೆಯಾಗದೇ ಇರುವವರು ಸಾಕಷ್ಟು ಮಂದಿ ಇದ್ದಾರೆ. ಆದ್ದರಿಂದ ಅಭ್ಯರ್ಥಿಗಳು ಇಂಥ ಸಂದರ್ಭದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಈ ಹಿಂದಿನ ಪರೀಕ್ಷೆಗಳಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದುಕೊಂಡು ಮುಂದಿನ ಪರೀಕ್ಷೆಗೆ ಪ್ರಯತ್ನಿಸಬೇಕು. ಪುನಃ ಅದೇ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಕಡಿಮೆ ಅಂಕ ಬಂದಿರುವ ವಿಷಯಗಳಿಗೆ ಹೆಚ್ಚು ಒತ್ತು ನೀಡಿ ಅಭ್ಯಾಸ ಮಾಡಬೇಕು. ಆ ಮೂಲಕ ಸೋಲುಗಳನ್ನು ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕು. ಸತತ ಪ್ರಯತ್ನ, ನಿರಂತರ ಅಭ್ಯಾಸ, ಗುಣಮಟ್ಟದ ಓದು, ವಿಮರ್ಶಾತ್ಮಕ ಬರವಣಿಗೆಯಿಂದ ಮುಖ್ಯ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು ಎಂಬ ಸಲಹೆ.
ರಾಜ್ಯದ ಕೀರ್ತಿ ಬೆಳಗಿಸಿ
ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೈಹಿಕ ನ್ಯೂನತೆಯುಳ್ಳವರು, ರೈತರು ಹಾಗೂ ಶಿಕ್ಷಕರ ಮಕ್ಕಳೂ ಸೇರಿದಂತೆ ಸಮಾಜದ ಕಟ್ಟಕಡೆಯ ಸಮುದಾಯದ ಅಭ್ಯರ್ಥಿಗಳು ಅಖಿಲ ಭಾರತ ಮಟ್ಟದ ಹುದ್ದೆಗಳನ್ನು ಪಡೆಯಬಹುದು ಎಂಬುದನ್ನು ರಾಜ್ಯದ ಅಭ್ಯರ್ಥಿಗಳು ನಿರೂಪಿಸಿದ್ದಾರೆ. ಆ ಮೂಲಕ ನಮ್ಮ ನಾಗರಿಕ ಸೇವೆಗಳು ಉತ್ತಮಗೊಳ್ಳಲಿವೆ ಎಂಬ ಭರವಸೆ ಮೂಡಿಸಿದ್ದಾರೆ ಎಂದು ‘ವಿಜಯ ಕರ್ನಾಟಕ’ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ತಿಳಿಸಿದರು.
ವೆಬಿನಾರ್‌ಗೆ ಚಾಲನೆ ನೀಡಿ ಅಭ್ಯರ್ಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕೇಂದ್ರ ನಾಗರಿಕ ಸೇವೆ ಹುದ್ದೆಗಳು ಕೇವಲ ಹಿಂದಿ ಭಾಷಿಕರಿಗೇ ಹೊರತು, ಕನ್ನಡಿಗರಿಗಲ್ಲ ಎಂಬ ಭಾವನೆಯನ್ನು ರಾಜ್ಯದ ಅಭ್ಯರ್ಥಿಗಳು ಸುಳ್ಳು ಮಾಡಿದ್ದಾರೆ. ದೇಶದ ಭವಿಷ್ಯವನ್ನು ರೂಪಿಸುವ ಸಲುವಾಗಿ ಇತ್ತೀಚೆಗೆ ಕೇಂದ್ರ ಸರಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿದೆ. ಜತೆಗೆ, ಕೋವಿಡ್-19 ಸಂಕಷ್ಟದ ಪರಿಸ್ಥಿತಿಯಲ್ಲೇ ರಾಜ್ಯದಲ್ಲಿ ಭೀಕರ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಾಗಾಗಿ, ಭವಿಷ್ಯದ ಅಧಿಕಾರಿಗಳಾಗಿ ಹೊರಬರಲಿರುವ ತಾವು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಕರ್ನಾಟಕದ ಕೀರ್ತಿಯನ್ನು ಅಖಿಲ ಭಾರತ ಮಟ್ಟದಲ್ಲಿ ಹೆಚ್ಚಿಸಲಿದ್ದೀರಿ ಎಂದು ಅಭಿನಂದಿಸಿದರು.
ಐಚ್ಛಿಕ ಕನ್ನಡ ಎಂಬ ಅಮೃತ
ರಾಜ್ಯದ ಅಭ್ಯರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆ ವೇಳೆ ‘ಐಚ್ಛಿಕ ಕನ್ನಡ’ ವಿಷಯ ಅಮೃತದಂತಾಗಿದೆ. ಹಲವು ಮಂದಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವೀಧರರು ಮುಖ್ಯ ಪರೀಕ್ಷೆ ವೇಳೆ ಐಚ್ಛಿಕ ಕನ್ನಡ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆದು ರಾರಯಂಕ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖವಾಗಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲಿಚ್ಛಿಸುವವರು ಹಾಗೂ ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ವಿಷಯಗಳನ್ನು ತೆಗೆದುಕೊಂಡವರು ‘ಉತ್ತರಗಳನ್ನು ಬರೆದು ಅಭ್ಯಾಸ ಮಾಡಬೇಕು’ ಎಂಬುದು ಟಾಪರ್‌ಗಳ ಪ್ರಮುಖ ಸಲಹೆಯಾಗಿದೆ.
ಮುಖ್ಯ ಪರೀಕ್ಷೆ ವೇಳೆ ಕನ್ನಡದಲ್ಲಿ ಅಥವಾ ಐಚ್ಛಿಕ ಕನ್ನಡದ ಪ್ರಶ್ನೆಗಳಿಗೆ ದೀರ್ಘ ಉತ್ತರಗಳನ್ನು ಬರೆಯುವ ಅಗತ್ಯವಿದೆ. ಉತ್ತರಗಳನ್ನು ದೀರ್ಘವಾಗಿ ಬರೆಯಬೇಕಾದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಉತ್ತರಗಳನ್ನು ಬರೆದು ಅಭ್ಯಾಸ ಮಾಡಿದರೆ, ಪರೀಕ್ಷೆ ಎದುರಿಸುವುದು ಉತ್ತಮ. ಅಲ್ಲದೆ, ಪ್ರಶ್ನೆಗಳನ್ನು ನಿಖರವಾಗಿ ಅರ್ಥ ಮಾಡಿಕೊಂಡು ಉತ್ತರಿಸುವುದು ಪ್ರಮುಖ ಅಂಶವಾಗಿದೆ ಎನ್ನುತ್ತಾರೆ ಯುಪಿಎಸ್‌ಸಿ ಟಾಪರ್ಸ್.
ಟಾಪರ್ಸ್ ಟಾಪ್ ಅಭಿಪ್ರಾಯ ಜನರ ಸೇವೆಗೆ ಅವಕಾಶ
ನನಗೆ ಮೆಡಿಕಲ್ ಸೈನ್ನ್‌ನಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಹೀಗಾಗಿ, ಯುಪಿಎಸ್‌ಸಿಗೂ ನಾನು ಅದೇ ವಿಷಯವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡೆ. ಮೊದಲ ಪ್ರಯತ್ನದಲ್ಲೇ ಪ್ರಿಲಿಮನರಿ ಹಾಗೂ ಮೇನ್ಸ್ ಪರೀಕ್ಷೆಗಳಲ್ಲಿ ಅರ್ಹತೆ ಪಡೆಯಲು ಸಾಧ್ಯವಾಯಿತು. ಒಬ್ಬ ವೈದ್ಯನಾದರೆ ಅದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕು. ಎಲ್ಲ ಜನರ ಸೇವೆ ಮಾಡಲು ಅವಕಾಶ ಸಿಗಲಿದೆ ಎಂಬ ಉದ್ದೇಶದಿಂದ ಯುಪಿಎಸ್‌ಸಿ ಪರೀಕ್ಷೆ ಬರೆದೆ. ಈಗ ಐಆರ್‌ಎಸ್ ಸಿಗಬಹುದು. ಮತ್ತೆ ಐಎಎಸ್ ಅಧಿಕಾರಿಯಾಗಲು ಪರೀಕ್ಷೆ ಬರೆಯುತ್ತೇನೆ.
– ವರುಣ್ ಕೆ. ಗೌಡ ಮೈಸೂರು
ಓದು ಪಕ್ಕಾ ಇರಬೇಕು
ಐಚ್ಛಿಕ ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದರೆ ರಾರಯಂಕ್ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದು ಖಚಿತ. ಪ್ರತಿ ದಿನ ನಾವು ಎಷ್ಟು ಗಂಟೆ ಓದುತ್ತೇವೆ ಎಂಬುದು ಮುಖ್ಯವಲ್ಲ. ಬದಲಿಗೆ, ಗುರಿಯಿಟ್ಟುಕೊಂಡು ತಿಂಗಳಿಗೆ ಎಷ್ಟು ಪಕ್ಕಾ ಓದಿದ್ದೇವೆ ಎಂಬುದು ಬಹಳ ಮುಖ್ಯ. ಶ್ರದ್ಧೆ, ಸಮರ್ಪಣಾ ಮನೋಭಾವದಿಂದ ಅಧ್ಯಯನ ಮಾಡಿದರೆ ಹಳ್ಳಿ ಮಕ್ಕಳು ಕೂಡ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಪಡೆಯಬಹುದು.
– ಬಿ. ಕೃತಿ ಭಟ್ ಕುಮಟಾ ಮೂಲದ ಬೆಂಗಳೂರು ನಿವಾಸಿ
ಎದೆ ಗುಂದಬಾರದು
ಒಮ್ಮೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅರ್ಹತೆ ಸಿಗದಿದ್ದರೆ ಅದಕ್ಕೆ ಎದೆಗುಂದಬಾರದು. ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಪ್ರಯತ್ನಿಸಬೇಕು. ನಾವು ವೇಳಾಪಟ್ಟಿ ಹಾಕಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ಹಾಗೆಯೇ ಯೋಜನೆ ಬಹಳ ಮುಖ್ಯ.
– ಸಚಿನ್ ಹಿರೇಮಠ್ ದಾಂಡೇಲಿ (ಪ್ರಸ್ತುತ ಕೊಲ್ಕೊತಾದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸಹಾಯಕ ನಿರ್ದೇಶಕ)
ಕಠಿಣ ಪರಿಶ್ರಮ ಬೇಕು
ಒಮ್ಮೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಎಂದು ಕೊರಗುವುದು ಬೇಡ. ನಾವು ಜೀವನದಲ್ಲಿ ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಒಮ್ಮೆ ಪಾಸಾಗಲಿಲ್ಲ ಎಂಬ ಕಾರಣಕ್ಕೆ ಪ್ರಯತ್ನ ಬಿಡಬಾರದು. ಸೋಲು ಗೆಲುವಿಗೆ ಮೆಟ್ಟಿಲು ಎಂದು ಭಾವಿಸಿ ಪ್ರಯತ್ನಿಸಿ, ಕಠಿಣ ಪರಿಶ್ರಮ ಹಾಕಿದರೆ ಖಂಡಿತಾ ಯಶಸ್ಸು ಸಿಗಲಿದೆ.
– ಬಿ. ಸಿ. ಹರೀಶ್, ತುಮಕೂರು
ಹಿಂದೆ ಸರಿಯಬೇಡಿ
ಕಳೆದ ಬಾರಿ ಐಆರ್‌ಎಸ್ ಸೇವೆಗೆ ಆಯ್ಕೆಯಾಗಿದ್ದೆ. ಈ ಬಾರಿ ಐಎಎಸ್ ಹುದ್ದೆ ಸಿಗುವ ವಿಶ್ವಾಸವಿದೆ. ಇದು ನನ್ನ ಐದನೇ ಪ್ರಯತ್ನವಾಗಿದೆ. ಆದ್ದರಿಂದ ಅಭ್ಯರ್ಥಿಗಳು ಎಂದೂ ತಮ್ಮ ಗುರಿಗಳಿಂದ ಹಿಂದೆ ಸರಿಯಬಾರದು. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಮಾಡಿಕೊಳ್ಳಿ.
– ಎಚ್.ಆರ್.ಕೌಶಿಕ್, ಚಿಕ್ಕಮಗಳೂರು ಜಿಲ್ಲೆ
ಹೆಚ್ಚು ಗಮನ ನೀಡಿ
ಕಳೆದ ಐದು ಪ್ರಯತ್ನಗಳಲ್ಲಿ ಪ್ರಿಲಿಮಿನರಿ ಹಂತದಲ್ಲೇ ಫೇಲಾಗಿದ್ದೆ. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ನಾನು, ಕೆಲಸದ ಒತ್ತಡದಲ್ಲಿ ಓದಿನ ಕಡೆ ಹೆಚ್ಚು ಗಮನ ನೀಡಲಾಗುತ್ತಿರಲಿಲ್ಲ. ಹಾಗಾಗಿ, ಕೆಲಸ ಬಿಟ್ಟು ಸಂಪೂರ್ಣವಾಗಿ ಪರೀಕ್ಷೆಗೆ ಸಿದ್ಧತೆ ನಡೆಸುವ ಮೂಲಕ ಈ ವರ್ಷ ಒಂದೇ ಬಾರಿಗೆ ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದೆ.
– ಎಚ್.ಎಸ್. ಕೀರ್ತನಾ ಬೆಂಗಳೂರು
ಪ್ರಯತ್ನ ಬಿಡಬೇಡಿ
ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿರುವ ನಾನು ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ಕನ್ನಡ ವಿಷಯವನ್ನು ತೆಗೆದುಕೊಂಡಿದ್ದೆ. ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡದ ಬರವಣಿಗೆ ನಿಧಾನ. ಕನ್ನಡ ಬರೆಯಲು ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ದೀರ್ಘ ಉತ್ತರಗಳನ್ನು ಬರೆಯಬೇಕು.
ಆದ್ದರಿಂದ ಕನ್ನಡದಲ್ಲಿ ಉತ್ತರಗಳನ್ನು ಹೆಚ್ಚೆಚ್ಚು ಬರೆದು ಅಭ್ಯಾಸ ಮಾಡಿದರೆ, ಉತ್ತಮವಾಗಿ ಪರೀಕ್ಷೆ ಎದುರಿಸಬಹುದು.
– ಪ್ರಫುಲ್ ಕೆಂಪಣ್ಣ ದೇಸಾಯಿ ಬೆಳಗಾವಿ ಜಿಲ್ಲೆ
ಸಾಧನೆಗೆ ಮಿತಿಯಿಲ್ಲ
ನಾನು 3ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸು ಮಾಡಿದ ನಾನು, 10ನೇ ತರಗತಿವರೆಗೆ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ಕನ್ನಡ ವಿಷಯವನ್ನು ತೆಗೆದುಕೊಂಡಿದ್ದೆ. ಸಾಧನೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಹಂಗಿಲ್ಲ. ಎನಿಬಡಿ ಕ್ಯಾನ್ ಡೂ ಇಟ್.
– ಡಾ. ಅಭಿಷೇಕ್ ಗೌಡ ಮಂಡ್ಯ ಜಿಲ್ಲೆ.
ಐಚ್ಛಿಕ ವಿಷಯ ಆಯ್ಕೆ ನಿರ್ಣಾಯಕ
ಯುಪಿಎಸ್‌ಸಿ ಪರೀಕ್ಷೆಗೆ ಐಚ್ಛಿಕ ವಿಷಯಗಳ ಆಯ್ಕೆ ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ಈ ಪರೀಕ್ಷೆಗೆ ಪದವಿ ಹಂತದಿಂದಲೇ ಅಗತ್ಯ ತಯಾರಿ ನಡೆಸಿಕೊಂಡು ಅಭ್ಯರ್ಥಿಗಳು ತಮಗೆ ಅಭ್ಯಾಸ ಮಾಡಲು ಸುಲಭ ಎನಿಸುವ ವಿಷಯಗಳನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಳ್ಳಬೇಕು. ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ. ಆದ್ದರಿಂದ ಅಭ್ಯರ್ಥಿಗಳು ಐಚ್ಛಿಕ ವಿಷಯಗಳಿಗೆ ಹೆಚ್ಚು ಒತ್ತು ನೀಡಿ ಸಮಗ್ರವಾಗಿ ಅಧ್ಯಯನ ಮಾಡಬೇಕು. ಪರೀಕ್ಷೆಯಲ್ಲಿ ವಿಮರ್ಶಾತ್ಮಕವಾಗಿ ಬರೆದಾಗ ಮಾತ್ರ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ ಎಂಬುದು ಟಾಪರ್ಸ್ ಅಭಿಮತ.
ವಿಕ ಮಾರ್ಗದರ್ಶಿ
ಕೇಂದ್ರೀಯ ಸೇವೆಗಳ ಪರೀಕ್ಷೆ ಬರೆಯಲು ಉತ್ಸುಕರಾಗಿರುವವರಿಗೆ ಅನುಕೂಲವಾಗುವಂತೆ ವಿಜಯ ಕರ್ನಾಟಕ ‘ಯುಪಿಎಸ್‌ಸಿ’ ಮಾರ್ಗದರ್ಶಿಯನ್ನು ದಿನವೂ ಪ್ರಕಟಿಸಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಕೆ, ಓದುವುದು ಪರೀಕ್ಷೆ ಎದುರಿಸುವುದು ಸೇರಿದಂತೆ ವಿಷಯಕ್ಕೆ ಸಂಬಂಧಿಸಿ ನಿಮಗೆ ಪ್ರಶ್ನೆಗಳಿದ್ದರೆ ನಮಗೆ ಬರೆದು ಕಳುಹಿಸಿ.
ನಮ್ಮ ವಾಟ್ಸ್ ಆ್ಯಪ್ ನಂಬರ್ 6366422240