ದುಡ್ಡಿದ್ದವರಿಗೆ ಖಾಸಗಿ ಆಸ್ಪತ್ರೆ, ಬಡವರಿಗೆ ಸರಕಾರಿ ಆಸ್ಪತ್ರೆ ಎಂಬ ಸಮೀಕರಣ ಇದುವರೆಗೂ ನಮ್ಮ ದೇಶದಲ್ಲಿತ್ತು. ಯಾವಾಗ ಕೊರೊನಾ ಬಂದು ಎಲ್ಲ ಕಡೆಯೂ ಹಬ್ಬಿ ರೋಗಿಗಳ ಸಂಖ್ಯೆ ಊಹಿಸಲಾಗದಷ್ಟು ಹೆಚ್ಚಾಯಿತೋ, ಆಗ ಸರಕಾರಿ ಆಸ್ಪತ್ರೆಗಳ ಮಹತ್ವ ಮತ್ತು ಕಾರ್ಯಭಾರ ಎಲ್ಲರಿಗೆ ಅರ್ಥವಾಗತೊಡಗಿದೆ. ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿ ರಾಜಧಾನಿಯ ದೊಡ್ಡ ಸರಕಾರಿ ಆಸ್ಪತ್ರೆಗಳು ತುಂಬಿವೆ; ಜಿಲ್ಲಾಸ್ಪತ್ರೆಗಳೂ ತುಂಬಿ ತುಳುಕುತ್ತಿವೆ. ಸರಕಾರ ಎಷ್ಟೇ ಕಾಯಿದೆ ಕಾನೂನು ರೂಪಿಸಿದರೂ ಎಚ್ಚರಿಕೆ ನೀಡಿದರೂ ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿವೆ. ಹತ್ತಾರು ಖಾಸಗಿ ಆಸ್ಪತ್ರೆಗಳನ್ನು ಸುತ್ತಾಡಿ ನಿರಾಕರಿಸಲ್ಪಟ್ಟು ಜೀವ ತೆತ್ತ ಪ್ರಕರಣಗಳಿವೆ. ಕೋವಿಡ್‌ಗೆ ಚಿಕಿತ್ಸೆ ಪಡೆಯಲೆಂದು ಖಾಸಗಿ ಆಸ್ಪತ್ರೆಗೆ ಸೇರಿದವರು ದಿನವೊಂದಕ್ಕೆ ಕನಿಷ್ಠ 35,000 ರೂ. ಶುಲ್ಕ ತೆರಬೇಕಾದ ಭೀಕರತೆಗೆ ತುತ್ತಾಗಿದ್ದಾರೆ. ಇಂಥಲ್ಲಿ ನಾಲ್ಕಾರು ದಿನ ಚಿಕಿತ್ಸೆ ಪಡೆದರೆ ಬಿಲ್ಲಿನ ಮೊತ್ತ ಹತ್ತು ಲಕ್ಷ ದಾಟುತ್ತದೆ. ಇದನ್ನು ಭರಿಸುವುದು ಮಧ್ಯಮ, ಮೇಲ್ಮಧ್ಯಮ ವರ್ಗದವರಿಗೆ ಸಾಧ್ಯವೇ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಎಲ್ಲರೂ ಸರಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ.
ಆದರೆ ಅಲ್ಲೂ ಸಮಸ್ಯೆಗಳು ಉಂಟಾಗಿವೆ. ಕೋವಿಡ್ ಕೇಂದ್ರಗಳಾಗಿ ಕಾರ್ಯಾಚರಿಸುತ್ತಿರುವ ಜಿಲ್ಲಾಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದು, ಬೆಡ್‌ಗಳು ಸಿಗುತ್ತಿಲ್ಲ. ವೈದ್ಯರು ಹಾಗೂ ಸಿಬ್ಬಂದಿಯೇನೋ ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಸೇವೆಯನ್ನು ನೀಡುತ್ತಿದ್ದಾರೆ. ಆದರೆ, ಒತ್ತಡ ಹೆಚ್ಚಿದೆ. ಇಂಥ ಹೊತ್ತಿನಲ್ಲಿ ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕಾದ, ಕೋವಿಡ್ ಚಿಕಿತ್ಸೆಗೆ ತುರ್ತು ವ್ಯವಸ್ಥೆ ಕಲ್ಪಿಸಬೇಕಾದ ಜರೂರತ್ತು ಬಿದ್ದಿದೆ. ಸದ್ಯ ತಾಲೂಕು ಆಸ್ಪತ್ರೆಗಳು ಸಾಮಾನ್ಯ ಹೆರಿಗೆ ಬಿಟ್ಟರೆ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿಲ್ಲ. ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆಯೂ ಸಾಕಷ್ಟಿದೆ. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕು. ಸದ್ಯಕ್ಕಂತೂ ಕೊರೊನಾ ಕೊನೆಯಾಗುತ್ತದೆ ಎನ್ನುವ ವಿಶ್ವಾಸ ಯಾರಲ್ಲೂ ಇಲ್ಲ. ಸದ್ಯದ ಮತ್ತು ಭವಿಷ್ಯದ ದೃಷ್ಟಿಯಿಂದ ತಾಲೂಕು ಆಸ್ಪತ್ರೆಗಳೂ ಜಿಲ್ಲಾಸ್ಪತ್ರೆಗಳಂತೆ ಆಗಬೇಕಾದ ಅನಿವಾರ್ಯತೆ ಇದೆ. ಹೃದಯ, ಕಿಡ್ನಿ, ಕ್ಯಾನ್ಸರ್ ಸಮಸ್ಯೆಯ ರೋಗಿಗಳಿಗೂ ತಾಲೂಕು ಆಸ್ಪತ್ರೆಗಳಲ್ಲಿಯೇ ಪರಿಣಾಮಕಾರಿ ಚಿಕಿತ್ಸೆ ಸಿಗುವಂತಾಗಬೇಕು. ಎಪಿಎಲ್, ಬಿಪಿಎಲ್ ಮಾನದಂಡವನ್ನು ತಾತ್ಕಾಲಿಕವಾಗಿ ಸಡಿಲಿಸಿ ಎಲ್ಲರಿಗೂ ಯೋಜನೆಯಡಿ ಚಿಕಿತ್ಸೆ ಕೊಡಿಸಬೇಕು. ಆಯುಷ್ಮಾನ್ ವಿಮೆ ಯೋಜನೆಯನ್ನು ವಿಸ್ತರಿಸಬೇಕು. ಸರಕಾರಿ ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆ ಮಾಡಲು ಖಾಸಗಿ ಆಸ್ಪತ್ರೆಗಳ ಗೌರವಧನ ಹೆಚ್ಚಿಸಬಹುದು.
ಖಾಸಗೀಕರಣದತ್ತ ಸರಕಾರದ ಚಿತ್ತ ಇದೆ. ಆದರೆ ಇದರ ಅಪಾಯಗಳನ್ನು ಯಾರೂ ಮುಂಗಾಣುತ್ತಿಲ್ಲ. ಬ್ಯಾಂಕ್‌ಗಳಿಂದ ಹಿಡಿದು ಎಲ್ಲವೂ ಖಾಸಗೀಕರಣಗೊಳ್ಳುತ್ತಿವೆ; ನಷ್ಟದಲ್ಲಿ ನಡೆಯುತ್ತಿರುವ ಸಂಸ್ಥೆಗಳನ್ನು ಮುಚ್ಚಲು, ಲಾಭದಲ್ಲಿ ನಡೆಯುತ್ತಿರುವುದನ್ನು ಮಾರಲು ಸರಕಾರಗಳು ಮುಂದಾಗುತ್ತಿವೆ. ಆದರೆ, ಜನರ ನಿತ್ಯಜೀವನಕ್ಕೆ ನೇರವಾಗಿ ಹಾಗೂ ಅತ್ಯಗತ್ಯವಾಗಿ ತಳುಕು ಹಾಕಿಕೊಂಡ ಆರೋಗ್ಯ ಸೇವೆ, ಶಿಕ್ಷಣ ರಂಗ, ನೀರಾವರಿ ಮುಂತಾದವು ಖಾಸಗಿ ವಲಯಕ್ಕೆ ಸಡ್ಡು ಹೊಡೆಯುವಂತೆ ಬಲಿಷ್ಠವಾಗಿ ಉಳಿಯಬೇಕಾದುದು ಅಗತ್ಯ ಎಂಬುದನ್ನು ಮನದಟ್ಟು ಮಾಡಿಸಬೇಕಾದರೆ ಕೊರೊನಾ ಬರಬೇಕಾಯಿತು. ಒಂದು ವೇಳೆ ಈಗ ಸರಕಾರಿ ಆಸ್ಪತ್ರೆಗಳೇ ಇರಲಿಲ್ಲವೆಂದಿದ್ದರೆ, ಪ್ರಜೆಗಳ ಸ್ಥಿತಿ ಚಿಂತಾಜನಕ ಆಗುತ್ತಿತ್ತು; ಎಲ್ಲರೂ ದಿವಾಳಿಯಾಗಬೇಕಾಗಿತ್ತು. ಖಾಸಗಿ ವಲಯ ಲಾಭದ ಮೇಲೆ ನಿಂತಿದೆ. ಸರಕಾರಿ ವಲಯವಷ್ಟೇ ಲಾಭದ ಚಿಂತೆಯಿಲ್ಲದೆ ಜನತೆಗೆ ಸೇವೆಯನ್ನು ನೀಡಬಹುದಾದ ಸಾಮರ್ಥ್ಯ ಹೊಂದಿದೆ. ಇದನ್ನು ಸರಕಾರಗಳು ಹಾಗೂ ಜನತೆಯೂ ಮನಗಾಣಬೇಕು. ಸರಕಾರಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ನಾವು ಹೋರಾಡಬೇಕಾದ ಸ್ಥಿತಿ ಇಂದಿನದು. ಸರಕಾರಿ ಆಸ್ಪತ್ರೆಗಳ ಈ ಅನಿವಾರ್ಯತೆಯನ್ನು ಶಿಕ್ಷಣ ವಲಯಕ್ಕೂ ಅನ್ವಯಿಸಿಕೊಂಡು ನೋಡಬೇಕು. ಖಾಸಗಿಗೂ ಸ್ಪರ್ಧಾತ್ಮಕವಾಗುವಂತೆ ಮಾದರಿಯಾಗಿ ಇವುಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕಾಗಿದೆ.