ಕೊರೊನಾವನ್ನೂ ಮೀರಿಸುತ್ತಿದೆ ಖಿನ್ನತೆ, ಕಳಂಕದ ಭೀತಿ

– ಆತಂಕ, ಭಯದಿಂದ ಮನೋತಜ್ಞರ ಮೊರೆಹೋದ ಜನ | ರಾಜ್ಯ ಸರಕಾರದ ಟೆಲಿ ಕನ್ಸಲ್ಟೆನ್ಸಿಗೆ 3 ಲಕ್ಷ ಕರೆ.

ಮಂಜುನಾಥ ನಾಗಲೀಕರ್, ಬೆಂಗಳೂರು.

ಕೊರೊನಾ ಸೋಂಕಿಗಿಂತ ಅದಕ್ಕೆ ಸಂಬಂಸಿದ ಕಳಂಕ, ಭಯ, ಸಾಮಾಜಿಕ ಅಂತರ ಮತ್ತು ಸಹಜ ಜೀವನದಿಂದ ಪ್ರತ್ಯೇಕವಾಗಿರಬೇಕಾದ ಪರಿಸ್ಥಿತಿಯೇ ವೈದ್ಯಕೀಯ ಸಮುದಾಯ ಮತ್ತು ರಾಜ್ಯದ ಜನರನ್ನು ತೀವ್ರವಾಗಿ ಕಾಡುತ್ತಿದೆ.
ಸೋಂಕಿತರು ಅಥವಾ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಮಾಡಿದ ಕ್ವಾರಂಟೈನ್‌ನಿಂದ ಆದ ಮಾನಸಿಕ ಒತ್ತಡದಿಂದ ಕಾಪಾಡಲು 3 ಲಕ್ಷ ಕ್ಕೂ ಹೆಚ್ಚು ಜನರೊಂದಿಗೆ ರಾಜ್ಯದ ಮನೋ ತಜ್ಞರ ತಂಡಗಳು ನಡೆಸಿದ ಟೆಲಿ ಕನ್ಸಲ್ಟೇಷನ್ ವೇಳೆ ಈ ಸಂಗತಿ ಗೊತ್ತಾಗಿದೆ.
ಸೋಂಕಿತರು, ಐಸೋಲೇಷನ್, ಕ್ವಾರಂಟೈನ್‌ನಲ್ಲಿರುವವರು, ಅವರ ಕುಟುಂಬದವರು ಹಾಗೂ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯಕೀಯ ಸಮುದಾಯ ಮತ್ತು ಚಿಕಿತ್ಸೆ ನೀಡುವಾಗ ಸೋಂಕಿಗೆ ಒಳಗಾದವರೊಂದಿಗೆ ಮನೋ ತಜ್ಞರು ಫೋನ್ ಮೂಲಕ ಸಮಾಲೋಚನೆ ನಡೆಸಿದ್ದಾಧಿರೆ. ತಮ್ಮಿಂದ ಬೇರೆಯವರಿಗೆ ಸೋಂಕು ತಗುಲಿರಬಹುದೇನೋ ಎಂಬ ದುಗುಡದ ಜತೆಗೆ ಸಮಾಜದಿಂದ ಕಳಂಕ ಹೊರಬೇಕಾಗುತ್ತದೆ ಎಂದು ಆತಂಕವನ್ನು ಜನ ಹೇಳಿಕೊಂಡಿದ್ದಾರೆ.
‘‘ಟಿವಿಗಳಲ್ಲಿ ಬರುವ ಸುದ್ದಿಗಳನ್ನು ನೋಡಿ ನನಗೆ ಯಾವಾಗ ವೈರಸ್ ತಗಲುವುದೋ ಎಂಬ ಭಯ. ಒಂದು ವೇಳೆ ತಗಲಿದರೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದೋ, ಇಲ್ಲವೋ? ನನಗೆ ಬಂದರೂ ಪರವಾಗಿಲ್ಲ. ನನ್ನ ಮನೆಯವರಿಗೆ ಬರಬಾರದು’’ ಎಂದು ಕೆಲವರು ಹೇಳಿಕೊಂಡಿದ್ದಾರೆ.
ಇನ್ನು ಕೊರೊನಾ ಆತಂಕವು ಕ್ಯಾನ್ಸರ್, ಡಯಾಬಿಟಿಸ್, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆ ಇರುವವರನ್ನು ಮತ್ತು ವೃದ್ಧರನ್ನು ಹೆಚ್ಚಿಗೆ ಬೆದರಿಸಿದೆ. ಅವರು ಮನೆಯಿಂದ ಹೊರ ಹೋಗದಂತಹ ಪರಿಸ್ಥಿತಿ ಇದೆ. ವಾಯು ವಿಹಾರಕ್ಕೂ ಹೋಗಲು ಕೂಡ ಸಾಧ್ಯವಾಗದೆ ಗೃಹಬಂದಿಗಳಾಗಿ ನರಳುತ್ತಿದ್ದಾರೆ

ಧೈರ್ಯಕ್ಕೆ ವಾಟ್ಸ್ ಆ್ಯಪ್ ಗ್ರೂಪ್
‘ಕೇರಿಂಗ್ ಫಾರ್ ಹೆಲ್ತ್‌ಕೇರ್‌ ವರ್ಕರ್ಸ್’ ಕಾರ್ಯಕ್ರಮದ ಮೂಲಕ 840 ವೈದ್ಯರು ಮತ್ತು 4,423 ಆರೋಗ್ಯ ಕಾರ್ಯಕರ್ತರಿಗೆ ಮಾನಸಿಕ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಕೌನ್ಸೆಲಿಂಗ್ ಮೂಲಕ ಧೈರ್ಯ ಹೇಳಲಾಗುತ್ತಿದೆ. ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡು ಒಬ್ಬರಿಗೊಬ್ಬರು ಸಂಪರ್ಕದಲ್ಲಿರುವುದು, ಮಾತನಾಡುವುದು ಮುಂತಾದ ಸಲಹೆಗಳ ಮೂಲಕ ಕ್ರಿಯಾಶೀಲರಾಗಿರುವಂತೆ ಧೈರ್ಯ ತುಂಬಲಾಗಿದೆ.

ಕಳಂಕದ್ದೇ ದೊಡ್ಡ ನೋವು
ಸೋಂಕಿನಿಂದ ಗುಣಮುಖರಾಗಿ ನಿಗದಿತ ಕ್ವಾರಂಟೈನ್ ಅವಧಿ ಮುಗಿಸಿದ್ದರೂ ಅವರನ್ನು ನೆರೆ ಹೊರೆಯವರು ಮತ್ತು ಸಮಾಜ ಕಾಣುವ ದೃಷ್ಟಿಕೋನ ಸರಿ ಇಲ್ಲ ಎನ್ನುವುದು ಮನೋ ತಜ್ಞರ ಸಮಾಲೋಚನೆ ವೇಳೆ ಕಂಡು ಬಂದಿದೆ.

ಯಾರಿಗೆ ಏನು ಸಮಸ್ಯೆ?
ಶಾಲೆ, ಕಾಲೇಜು ಇಲ್ಲದ ಕಾರಣ ಹೊರಗೆ ಓಡಾಡಲು ಸಾಧ್ಯವಾಗದೆ ವಿದ್ಯಾರ್ಥಿ ಸಮುದಾಯ ತೀವ್ರ ಬೇಸರಗೊಂಡಿದೆ. ಆನ್‌ಲೈನ್‌ ಕ್ಲಾಸ್, ಮೊಬೈಲ್, ಟಿವಿ ನೋಡಿ ಸಾಕಾಗಿದೆ. ಯಾವಾಗ ಶಾಲೆ, ಕಾಲೇಜಿಗೆ ಹೋಗುತ್ತೆವೇಯೋ ಎನ್ನುತ್ತಿದ್ದಾರೆ.
ಪ್ರಾಕ್ಟಿಕಲ್ ಇಲ್ಲದೆ ಕೇವಲ ಥಿಯರಿ ಕ್ಲಾಸ್‌ಗಳಿಂದ ಅಧ್ಯಯನ ತಲೆಗೆ ಹತ್ತದೇ ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ’’ ಎನ್ನುತ್ತಾರೆ ಆರೋಗ್ಯ ಇಲಾಖೆ ಮಾನಸಿಕ ಆರೋಗ್ಯ ವಿಭಾಗದ ಉಪ ನಿರ್ದೇಶಕಿ ಡಾ. ಪಿ. ರಜಿನಿ.
104ಕ್ಕೆ ಕರೆ ಮಾಡಿ
ಮನೋತಜ್ಞರ ಸಲಹೆಗೆ 104ಕ್ಕೆ ಕರೆ ಮಾಡಿ ನಂಬರ್ 4 ಪ್ರೆಸ್ ಮಾಡಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top