– ಆನ್‌ಲೈನ್‌ನಲ್ಲೇ ಉಚಿತ ಅರ್ಜಿ ವಿತರಣೆ ಮಾಡಲು ಡಿಸಿಎಂ ಸೂಚನೆ
– ಸೆಪ್ಟೆಂಬರ್ 1ರಿಂದಲೇ ಆನ್‌ಲೈನ್ ಪಾಠ | ಅಕ್ಟೋಬರ್‌ನಿಂದ ರೆಗ್ಯುಲರ್ ಕ್ಲಾಸ್?
ವಿಕ ಸುದ್ದಿಲೋಕ ಬೆಂಗಳೂರು
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಪದವಿ ಹಾಗೂ ಇತರೆ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ತಕ್ಷಣದಿಂದಲೇ ಆರಂಭವಾಗಲಿದೆ. ಪದವಿ ಕಾಲೇಜುಗಳಲ್ಲಿ ಸೆಪ್ಟೆಂಬರ್ 1ರಿಂದಲೇ ಆನ್‌ಲೈನ್ ತರಗತಿ ಆರಂಭವಾಗಲಿದೆ. ಕೊರೊನಾ ನಿಯಂತ್ರಣಕ್ಕೆ ಬಂದರೆ ಅಕ್ಟೋಬರ್‌ನಲ್ಲಿ ರೆಗ್ಯುಲರ್ ತರಗತಿಗಳು ನಡೆಯಲಿವೆ.
ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶುಕ್ರವಾರ ಈ ವಿಷಯ ಪ್ರಕಟಿಸಿದ್ದು, ವಿದ್ಯಾರ್ಥಿಗಳಿಗೆ ಉಚಿತವಾಗಿ ಅರ್ಜಿ ವಿತರಣೆ ಮಾಡುವಂತೆ ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿದರು.
ಕೊರೊನಾ ಕಾಲದಲ್ಲಿ ರಾಜ್ಯದಲ್ಲಿ ಸರ್ವ ರಂಗಗಳ ಪುನರುತ್ಥಾನಕ್ಕಾಗಿ ವಿಜಯ ಕರ್ನಾಟಕ ನಡೆಸುತ್ತಿರುವ ‘ಕರುನಾಡ ಕಟ್ಟೋಣ ಬನ್ನಿ’ ಅಭಿಯಾನದ ಭಾಗವಾಗಿ ಶುಕ್ರವಾರ ನಡೆದ ‘ಕೋವಿಡ್ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಪುನಶ್ಚೇತನ ಹಾಗೂ ಆನ್‌ಲೈನ್ ಪಾಠ’ ಕುರಿತ ರಾಜ್ಯ ಮಟ್ಟದ ವೆಬಿನಾರ್‌ನಲ್ಲಿ ಈ ಮಹತ್ವದ ಸಂಗತಿಯನ್ನು ಪ್ರಕಟಿಸಿದರು ಡಿಸಿಎಂ ಡಾ. ಅಶ್ವತ್ಥನಾರಾಯಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಭಾಗವಹಿಸಿದ್ದ ವೆಬಿನಾರ್‌ನಲ್ಲಿ ಸರಕಾರದ ಶೈಕ್ಷಣಿಕ ಸಲಹೆಗಾರರಾಗಿರುವ ಪ್ರೊ. ಎಂ.ಆರ್. ದೊರೆಸ್ವಾಮಿ ಸೇರಿದಂತೆ ರಾಜ್ಯಾದ್ಯಂತದ 11 ಮಂದಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಶುಲ್ಕ ಮಾಹಿತಿ ಕಡ್ಡಾಯ
ಸರಕಾರಿ ಇರಲಿ, ಖಾಸಗಿ ಶಿಕ್ಷಣ ಸಂಸ್ಥೆ ಆಗಿರಲಿ, ಪ್ರತಿ ಕಾಲೇಜುನಲ್ಲಿ ಲಭ್ಯ ಇರುವ ಕೋರ್ಸ್ ವಿವರವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ವಿದ್ಯಾರ್ಥಿಗಳ ಆಯ್ಕೆಗೆ ಅನುಕೂಲ ಆಗುವಂತೆ ವೆಬ್‌ಸೈಟ್‌ನಲ್ಲಿ ಮಾಹಿತಿ ಒದಗಿಸಬೇಕು. ಕೆಲವು ಕಡೆ ಲಾಕ್‌ಡೌನ್ ಇರುವುದರಿಂದ ಆನ್‌ಲೈನ್‌ನಲ್ಲಿ ಅರ್ಜಿ ಹಾಗೂ ಶುಲ್ಕ ಮಾಹಿತಿ ನೀಡಿದರೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗುಂಪು ಸೇರುವುದನ್ನು ತಡೆಯಬಹುದು ಎಂದು ಸಲಹೆ ನೀಡಿದರು. ಪದವಿ ಕಾಲೇಜುಗಳಲ್ಲಿ ಮುಂದಿನ ಸೆಪ್ಟೆಂಬರ್ 1 ರಿಂದ ಆನ್‌ಲೈನ್ ತರಗತಿ ಆರಂಭಿಸಲಾಗುವುದು. ಕೊರೊನಾ ನಿಯಂತ್ರಣಕ್ಕೆ ಬಂದರೆ ಅಕ್ಟೋಬರ್‌ನಲ್ಲಿ ತರಗತಿಗಳನ್ನು ನಡೆಸಲು ಯೋಚಿಸಲಾಗಿದೆ. ಇದೆಲ್ಲವೂ ಆಗಿನ ಪರಿಸ್ಥಿತಿಯ ಮೇಲೆ ನಿರ್ಧರಿಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಎಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನಡೆದು ಫಲಿತಾಂಶ ಬರಬೇಕಿದೆ. ಆದರೆ ಬಿಎ, ಬಿಎಸ್ಸಿ, ಬಿಬಿಎಂ ಸೇರಿದಂತೆ ಇತರೆ ಪದವಿ ಕೋರ್ಸ್‌ಗಳಿಗೆ ಸೇರ ಬಯಸುವವರಿಗೆ ಅವಕಾಶ ಮಾಡಿಕೊಡಲಾಗುವುದು. ರಾಜ್ಯದ ಎಲ್ಲ ಸರಕಾರಿ ಮತ್ತು ಪದವಿ ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು. ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಇದ್ದರೂ ಆನ್‌ಲೈನ್‌ನಲ್ಲೇ ಪ್ರವೇಶ ಅರ್ಜಿ ವಿತರಣೆ ವ್ಯವಸ್ಥೆ ಮಾಡಬೇಕು. ಅರ್ಜಿ ವಿತರಿಸಲು ಯಾವುದೇ ಶುಲ್ಕ ವಿಧಿಧಿಸಬಾರದು. ಇದರ ಜೊತೆಗೆ ಪ್ರವೇಶ ಶುಲ್ಕದ ಮಾಹಿತಿಯನ್ನು ಕಾಲೇಜು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಈ ಸಂಬಂಧ ಈಗಾಗಲೇ ಕಾಲೇಜು ಶಿಕ್ಷಣ ಆಯುಕ್ತರು ಮಾರ್ಗಸೂಚಿ ಹೊರಡಿಸಿದ್ದಾರೆ. ಅದನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಡಿಸಿಎಂ ತಿಳಿಸಿದರು.
ಪ್ರಮುಖ ಅಭಿಮತ
– ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಇದನ್ನು ತಡೆಯಬೇಕು.
– ಖಾಸಗಿ ವಿವಿಗಳು ಸರಕಾರಿ ಶಾಲೆ ದತ್ತು ಪಡೆದು ಸಬಲೀಕರಣ
– ಸರಕಾರದ ಅನುದಾನವಿಲ್ಲದೆಯೂ ಕೊಡುಗೆ ನೀಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಡಿ
– ಪಿಯುಸಿ ಶಿಕ್ಷಣದಲ್ಲಿ ಸಿಲೆಬಸ್ ಕಟ್ ಬೇಡ, ಬೇಕಿದ್ದರೆ ಶೈಕ್ಷಣಿಕ ವರ್ಷ ಮುಂದೂಡಿ
– ಅಂತಿಮ ಪದವಿ ಪರೀಕ್ಷೆಗಳನ್ನು ಆದಷ್ಟು ಬೇಗನೆ ಮಾಡಿ
– ಬ್ಯಾಚ್‌ವಾರು ತರಗತಿಗಳನ್ನು ಆರಂಭಿಸಬಹುದು
ಆ.5ರ ಹೊತ್ತಿಗೆ ಸ್ಪಷ್ಟ ಚಿತ್ರಣ
ಶಾಲೆ ಆರಂಭ ಮತ್ತು ಎಲ್ಲರಿಗೂ ಆನ್‌ಲೈನ್ ಶಿಕ್ಷಣ ನೀಡುವ ಸಾಧ್ಯಾಸಾಧ್ಯತೆಗಳ ಸ್ಪಷ್ಟ ಚಿತ್ರಣ ಆಗಸ್ಟ್ 15ರ ಹೊತ್ತಿಗೆ ದೊರೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ನಿಗದಿಯಂತೆ ಸಿಇಟಿ
ನಿಗದಿಯಂತೆ ಜು.30 ಮತ್ತು 31 ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಎಸ್ಎಸ್ಎಲ್ಸಿ ಮಾದರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಸಿದ್ಧತೆ ನಡೆದಿದೆ
ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಕಾಮೆಡ್-ಕೆ ಮುಂದೂಡಿಕೆ
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಕ್ಕೆ ಆಗಸ್ಟ್ 1ರಂದು ನಡೆಸಲು ಉದ್ದೇಶಿಸಿದ್ದ ಕಾಮೆಡ್-ಕೆ ಯುಜಿಇಟಿ-2020 ಪರೀಕ್ಷೆಯನ್ನು ಮುಂದೂಡಲಾಗಿದೆ. ಮೇ 10ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಹಿಂದೆ ಆಗಸ್ಟ್ 1ಕ್ಕೆ ಮುಂದೂಡಲಾಗಿತ್ತು.
ಭಾಗವಹಿಸಿದ ಶಿಕ್ಷಣ ತಜ್ಞರು
ಪೊ›.ಎಂ.ಆರ್. ದೊರೆಸ್ವಾಮಿ ಸರಕಾರದ ಶೈಕ್ಷ ಣಿಕ ಸಲಹೆಗಾರರು ಮತ್ತು ಪಿಇಎಸ್ ವಿವಿ ಕುಲಾಧಿಪತಿ
ಡಾ. ಪ್ರಭಾಕರ್ ಕೋರೆ ಕಾರ್ಯಾಧ್ಯಕ್ಷ ರು, ಕೆಎಲ್ಇ ಶಿಕ್ಷ ಣ ಸಂಸ್ಥೆ, ಬೆಳಗಾವಿ.
ಡಾ. ಪಿ.ಶ್ಯಾಮರಾಜು ಕುಲಾಧಿಪತಿ, ರೇವಾ ಯೂನಿವರ್ಸಿಟಿ ಬೆಂಗಳೂರು
ಡಾ. ಎಸ್.ಚಂದ್ರಶೇಖರ ಶೆಟ್ಟಿ ಕುಲಪತಿ, ಆದಿಚುಂಚನಗಿರಿ ವಿವಿ ಬೆಳ್ಳೂರ್ ಕ್ರಾಸ್, ನಾಗಮಂಗಲ
ಪೊ›. ಎಂ.ಬಿ. ಪುರಾಣಿಕ್ , ಅಧ್ಯಕ್ಷರು, ಶಾರದಾ ವಿದ್ಯಾಸಂಸ್ಥೆಗಳು, ಮಂಗಳೂರು.
ಡಾ. ಸುಧಾಕರ್ ಶೆಟ್ಟಿ ಅಧ್ಯಕ್ಷರು, ಜ್ಞಾನಸುಧಾ ಎಜುಕೇಷನ್ ಇನ್ಸ್‌ಟಿಟ್ಯೂಷನ್, ಕಾರ್ಕಳ
ಡಾ. ಕಿರಣ್ ರೆಡ್ಡಿ ಸಂಸ್ಥಾಪಕರು, ಪ್ರಾಂಶುಪಾಲರು ಎಐಎಂಎಸ್ ಇನ್ಸ್‌ಟಿಟ್ಯೂಷನ್ ಬೆಂಗಳೂರು
ಎನ್.ಬಿ. ಪ್ರದೀಪ್ ಕುಮಾರ್ ಕಾರ್ಯದರ್ಶಿ, ವಿದ್ಯಾವಾಹಿನಿ ಶಿಕ್ಷ ಣ ಸಂಸ್ಥೆಗಳು ತುಮಕೂರು
ಡಾ. ಅಶೋಕ್ ಶೆಟ್ಟರ್ ಕುಲಪತಿ, ಕೆಎಲ್ಇ ಟೆಕ್ ವಿವಿ, ಹುಬ್ಬಳ್ಳಿ
ಡಾ. ಬಿ.ಎಂ. ಪುಟ್ಟಯ್ಯ ಶಿಕ್ಷ ಣ ತಜ್ಞರು, ಹಂಪಿ ಕನ್ನಡ ವಿವಿ, ಬಳ್ಳಾರಿ.
ಮಂಜಪ್ಪ ಕೆ.ಎಂ. ನಿರ್ದೇಶಕರು, ಸಿದ್ದೇಶ್ವರ ಪಿಯು ಕಾಲೇಜು, ಟೀಮ್ ಅಕಾಡೆಮಿ ಅಧ್ಯಕ್ಷ ರು, ದಾವಣಗೆರೆ.
ಕಿರಣ್ ಕುಮಾರ್ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್, ಶಿವಮೊಗ್ಗ