ದಶಕಗಳ ಕಾಲ ಕಾಯಿಲೆ ಇದ್ದರೂ ಬದುಕಿರುವವರು ಮಾತ್ರವಲ್ಲ, ಆರೋಗ್ಯವಂತ ವ್ಯಕ್ತಿಗಳೂ ಕೂಡ ಅತಿರಂಜಿತ ಸುದ್ದಿಯಿಂದಾಗಿ ಭಯಭೀತರಾಗಿ ಮಾನಸಿಕವಾಗಿ ಸಾಯುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಆದರೆ ಗುರುವಾರದ ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟ ವರದಿ ಹಾಗೂ ಸಂಪಾದಕೀಯವನ್ನು ಓದಿದರೆ ಜನರಿಗೆ ಧೈರ್ಯ ಬರುವುದು ಖಂಡಿತ. ಮಾಧ್ಯಮಗಳು ಸದ್ಯ ಮಾಡಬೇಕಿರುವುದು ಇಂಥ ಕೆಲಸವನ್ನೇ ಹೊರತು ಹೆದರುವವರ ಮೇಲೆ ಹಾವು ಎಸೆಯುವುದಲ್ಲ. ಸಕಾಲದಲ್ಲಿ ತಮ್ಮ ಪತ್ರಿಕೆಯಲ್ಲಿ ಕೊರೊನಾ ಕುರಿತು ವಾಸ್ತವವನ್ನು ಬಿಚ್ಚಿಟ್ಟಿದ್ದೀರಿ. ಧನ್ಯವಾದಗಳು.
– ಬಿ.ಎಂ.ಶಿವಕುಮಾರ್ ಬೆಂಗಳೂರು
ಕೊರೊನಾ ಸಾವು ಶೇ.25ರಷ್ಟು ಮಾತ್ರ ಎಂದು ‘ವಿಜಯ ಕರ್ನಾಟಕ’ ಪತ್ರಿಕೆ ಜುಲೈ 16ರಂದು ಪ್ರಕಟಿಸಿದ ಸುದ್ದಿ ಹಾಗೂ ಈ ವಿಷಯಕ್ಕೆ ಸಂಬಂಧಿಸಿದ ಸಂಪಾದಕೀಯ ಬರಹ ಖಂಡಿತ ನಮಗೆ ದೊಡ್ಡ ಆತ್ಮಸ್ಥೈರ್ಯ ಒದಗಿಸಿತು. ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡರೆ ಕೊರೊನಾ ಅತಿ ಸಾಮಾನ್ಯ ಆರೋಗ್ಯ ಸಮಸ್ಯೆ ಎನ್ನುವ ಈ ಬರಹಗಳ ಧೋರಣೆ ಸಮರ್ಪಕವಾಗಿದೆ. ಎಷ್ಟೋ ಮಂದಿ ಕ್ಯಾನ್ಸರ್ ಜಯಿಸಿ ಬಂದಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಜ್ವರ ನೆಗಡಿಗೆ ನಾವು ಅಂಜಬಾರದು. ರೋಗಕ್ಕಿಂತ ಅದರ ಕುರಿತ ಭಯದಿಂದ ಅನೇಕರು ಸಾಯುತ್ತಿದ್ದಾರೆ; ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ವಿಷಮ ಸನ್ನಿವೇಶದಲ್ಲಿ ವಿಕ ವಾಸ್ತವಿಕ ಸುದ್ದಿ ಮತ್ತು ಸಂಪಾದಕೀಯ ಪರಾಮರ್ಶೆ ಸಕಾಲಿಕವಾಗಿದೆ. ಎಲ್ಲರಲ್ಲೂ ಹೊಸ ಆಶಾಭಾವ ಮೂಡಿಸಿದೆ. ವಿಜಯ ಕರ್ನಾಟಕ ಪತ್ರಿಕೆ ಆರಂಭವಾದಾಗಿನಿಂದ ನಾನು ಈ ಪತ್ರಿಕೆಯ ಓದುಗನಾಗಿರುವೆ. ಕೊರೊನಾ ಸ್ಫೋಟ ಕಾಲದಲ್ಲಿ ನೀವು ಪ್ರಕಟಿಸಿದ ಸುದ್ದಿ ಮತ್ತು ಅದು ನನ್ನಲ್ಲಿ ಉಂಟು ಮಾಡಿದ ಆತ್ಮವಿಶ್ವಾಸಕ್ಕೆ ಪತ್ರಿಕೆಗೆ ಧನ್ಯವಾದಗಳು.
-ಎನ್. ಪ್ರಕಾಶ್ ಬೆಂಗಳೂರು