ಇರಿ ನಿಗೂಢವಾಗಿ ಕತ್ತಲಿನಂತೆ ಎರಗಿ ದಿಡೀರನೆ ಮಿಂಚಿನಂತೆ

– ಹರೀಶ್‌ ಕೇರ.

ಎಲ್ಲ ಯುದ್ಧಕಲೆಯೂ ನಿಂತಿರುವುದು ಮೋಸಗೊಳಿಸುವುದು ಹೇಗೆ ಎಂಬುದರ ಮೇಲೆ. ಹೀಗಾಗಿ, ನಾವು ದಾಳಿ ಮಾಡಲು ಸಿದ್ಧರಾಗಿದ್ದಾಗ, ನಾವು ದುರ್ಬಲರಂತೆ ಕಾಣಿಸಬೇಕು. ನಮ್ಮ ಶಕ್ತಿಗಳನ್ನು ಪ್ರಯೋಗಿಸುವಾಗ, ನಾವು ನಿಷ್ಕ್ರಿಯರಂತೆ ಕಾಣಿಸಬೇಕು. ನಾವು ಹತ್ತಿರ ಇರುವಾಗ, ದೂರ ಇದ್ದೇವೆ ಎಂದು ಶತ್ರುವಿಗೆ ಭಾಸವಾಗುವಂತೆ ಇರಬೇಕು; ದೂರವಿದ್ದಾಗ, ನಾವು ಹತ್ತಿರವೇ ಇದ್ದೇವೆ ಎಂದು ಆತ ನಂಬುವಂತಿರಬೇಕು.
ಈ ಮಾತುಗಳು ಇರುವುದು ಕ್ರಿಸ್ತಪೂರ್ವ 5ನೇ ಶತಮಾನದ ಸತ್‌ ತ್ಸು ಎಂಬ ಚೀನೀ ಸೇನಾ ತಂತ್ರಗಾರ ಬರೆದ ‘ಆರ್ಟ್‌ ಆಫ್‌ ವಾರ್‌’ ಎಂಬ ಪುಸ್ತಕದಲ್ಲಿ. ಸೀರಿಯಸ್ಸಾಗಿ ನೋಡಿದರೆ, ಚೀನಾ ಸೈನ್ಯ ಭಾರತದ ವಿಷಯದಲ್ಲಿ ಇದನ್ನೇ ಅನುಸರಿಸುವಂತೆ ತೋರುತ್ತದೆ. ತಮಾಷೆಯಲ್ಲ, ಚೀನಾದ ಸೈನ್ಯಕ್ಕೆ ಕಲಿಸುವ ಪಾಠಗಳಲ್ಲಿ ಇದೂ ಒಂದು. ನಮ್ಮಲ್ಲಿ ಚಾಣಕ್ಯನ ರಾಜನೀತಿಯನ್ನು ಬ್ಯುಸಿನೆಸ್‌ ನಿರ್ವಹಣೆಯಲ್ಲಿ ಕಲಿಸುವಂತೆ, ಅಲ್ಲಿ ಕ್ರಿಸ್ತಪೂರ್ವದ ಈ ಕೃತಿಯನ್ನು ಗಂಭೀರವಾಗಿ ಅಧ್ಯಯನ ಮಾಡಿಸಲಾಗುತ್ತದೆ. ಪೂರ್ವ ಏಷ್ಯಾದ ಹಲವು ರಾಷ್ಟ್ರಗಳು ಈ ಕೃತಿಯ ಹಲವು ಪಾಠಗಳನ್ನು ಯುದ್ಧಕಲೆಯಿಂದ ಹಿಡಿದು ರಾಜಕೀಯದವರೆಗೆ ಬಳಸುತ್ತವೆ. ಬಹುಶಃ ಭಾರತವೇ ಇನ್ನೂ ಆ ಕಡೆ ಗಮನ ಹರಿಸಿಲ್ಲ. ಈ ಕೃತಿಯನ್ನು ನಾವು ಸರಿಯಾಗಿ ಓದಿಕೊಂಡರೆ ಚೀನಾದ ಯುದ್ಧತಂತ್ರ, ರಾಜತಂತ್ರಗಳ ಬಗ್ಗೆ ಒಂದು ಅಂದಾಜು ಸಿಕ್ಕಬಹುದು.
ಅದಿರಲಿ, ಚೀನಾ ನೆಲದಲ್ಲಿ ಯುದ್ಧದ ಬಗ್ಗೆ ಅಷ್ಟೊಂದು ಚಿಂತನೆ ಯಾಕೆ ಮೂಡಿಬಂದಿದೆ? ಬಹುಶಃ ಅದು ಶತಮಾನಗಳಿಂದ ಯುದ್ಧಗ್ರಸ್ತ ನೆಲವಾಗಿದ್ದರಿಂದ ಇರಬಹುದು. ಉತ್ತರದಿಂದ ಮಂಗೋಲಿಯನ್ನರು, ಪೂರ್ವದಿಂದ ಜಪಾನೀಯರು, ಪಶ್ಚಿಮದಿಂದ ಅರಬ್ಬರ ದಾಳಿ; ಮತ್ತು ದೇಶದೊಳಗೇ ನೂರಾರು ಅರಸೊತ್ತಿಗೆಗಳು ಪರಸ್ಪರ ಬಡಿದಾಡಿಕೊಂಡು ಇಲ್ಲಿನ ಮಧ್ಯಯುಗವನ್ನು ರಣರಂಗ ಮಾಡಿದ್ದವು. ಇಂತಿಪ್ಪ ನೆಲದಲ್ಲಿ ಯುದ್ಧಕಲೆಗೆ ಪ್ರಾಶಸ್ತ್ಯ ಸಿಗುವುದು ಸಹಜ ತಾನೆ. ಈ ಕೃತಿಯನ್ನು ಬರೆದ ಸನ್‌ ತ್ಸು ಸ್ವತಃ ಜನರಲ್‌ ಆಗಿದ್ದ; ಲೇಖಕ- ತತ್ವಜ್ಞಾನಿಯೂ ಆಗಿದ್ದ. ನಮ್ಮ ಪಂಪನಂತೆ ಕವಿಯೂ ಕಲಿಯೂ. ಈ ಕೃತಿಯ ಸೂತ್ರಗಳನ್ನು ಚೀನಾದ ಸುಪ್ರೀಂ ಲೀಡರ್‌ ಆಗಿದ್ದ ಮಾವೋತ್ಸೆ ತುಂಗ್‌ ಅಧ್ಯಯನ ಮಾಡಿ ಅಳವಡಿಸಿಕೊಂಡಿದ್ದ; ಅದರಿಂದ ಕಲಿತ ತಂತ್ರಗಳನ್ನು ಗೆರಿಲ್ಲಾ ಯುದ್ಧದಲ್ಲಿ ಪ್ರಯೋಗಿಸಿದ್ದ ಎಂದು ಹೇಳಲಾಗುತ್ತದೆ. ‘ನಿನ್ನನ್ನು ಮೊದಲು ತಿಳಿ; ನಿನ್ನ ಶತ್ರುವನ್ನೂ ತಿಳಿ. ಅದರಿಂದ ನೀನು ಸಾವಿರ ಯುದ್ಧಗಳನ್ನಾದರೂ ಗೆಲ್ಲಬಹುದು’ ಎಂಬ ಸನ್‌ ತ್ಸು ಮಾತು ಅವನಿಗೆ ಪ್ರಿಯವಾಗಿತ್ತು.
ಯುದ್ಧವನ್ನು ಒಂದು ಕಲೆಯಂತೆಯೂ ಧ್ಯಾನದಂತೆಯೂ ಗ್ರಹಿಸಿ, ಅದರ ಎಲ್ಲ ಸಾಧ್ಯತೆ ವಿಲಕ್ಷಣತೆ ಕಪಟತೆಗಳನ್ನೂ ಸಿದ್ಧಿಸಿಕೊಂಡು ಬರೆದಂತಿದೆ ಆರ್ಟ್‌ ಆಫ್‌ ವಾರ್‌. ನಿಮ್ಮ ತಂತ್ರಗಳು ನಿಗೂಢವಾಗಿ ಕತ್ತಲಿನಂತಿರಲಿ. ಆದರೆ ದಾಳಿ ಮಾಡುವಾಗ ಸಿಡಿಲಿನಂತೆ ಎರಗಿ. ಯುದ್ಧಕಲೆಯ ಪರಮೋನ್ನತ ಸಿದ್ಧಿ ಎಂದರೆ ಶತ್ರುವಿನ ನಿಲುವನ್ನು ಹೋರಾಡದೆಯೇ ಭೇದಿಸುವುದು. ವಿಜಯಶಾಲಿ ಧೀರರು ಮೊದಲೇ ಯುದ್ಧವನ್ನು ಗೆದ್ದು ನಂತರ ರಣರಂಗಕ್ಕೆ ತೆರಳುತ್ತಾರೆ. ಪರಾಜಿತರು ಮೊದಲು ಕದನಕಣಕ್ಕಿಳಿದು ಗೆಲುವು ಸಾಧಿಸಲು ಮುಂದಾಗುತ್ತಾರೆ. ಕೋಲಾಹಲಗಳ ನಡುವೆಯೇ ಅವಕಾಶಗಳಿರುತ್ತವೆ. ನಿಮ್ಮ ಶತ್ರು ಸನ್ನದ್ಧನಾಗಿದ್ದರೆ ನೀವೂ ಸನ್ನದ್ಧರಾಗಿಯೇ ಇರಿ. ಅವನ ಶಕ್ತಿ ಹೆಚ್ಚಿದ್ದರೆ ಅವನ ಗಮನ ತಪ್ಪಿಸಿ. ಅವನು ದುಡುಕು ಸ್ವಭಾವದವನಾಗಿದ್ದರೆ ಕಿರಿಕಿರಿ ಹುಟ್ಟಿಸಿ. ದುರ್ಬನಾಗಿರುವಂತೆ ನಟಿಸಿ, ಆಗ ಅವನು ಉದ್ಧಟನಾಗುತ್ತಾನೆ. ಆತ ಸುಸ್ತಾಗಿದ್ದರೆ ಅವನಿಗೆ ವಿಶ್ರಾಂತಿ ಕೊಡಬೇಡಿ. ಅವನ ಸೇನೆ ಸಂಘಟಿತವಾಗಿದ್ದರೆ ಅದನ್ನ ಒಡೆಯಿರಿ. ದೇಶ ಸಂಘಟಿತವಾಗಿದ್ದರೆ ಅಲ್ಲಿ ಒಡಕು ಮೂಡಿಸಿ. ಅವನು ಎಲ್ಲಿ ಸಜ್ಜಾಗಿಲ್ಲವೋ ಅಲ್ಲಿ ದಾಳಿ ಮಾಡಿ. ಅವನು ನಿರೀಕ್ಷಿಸದೆ ಇರುವಲ್ಲಿ ಪ್ರತ್ಯಕ್ಷರಾಗಿ- ಹೀಗೆಲ್ಲ ಆ ಕೃತಿ ಪಾಠ ಮಾಡುತ್ತದೆ. ಇಷ್ಟು ಹೇಳುವ ಈ ಕೃತಿ- ‘ಯುದ್ಧವೇ ಇಲ್ಲದೆ ಗೆಲವು ಸಾಧಿಸುವುದೇ ನಿಜವಾದ ಗೆಲುವು’ ಅಂತಲೂ ಹೇಳುತ್ತದೆ.
ಅದಿರಲಿ, ನಮ್ಮಲ್ಲಿ ಇಂಥ ಚಾರಿತ್ರಿಕ ಕೃತಿಗಳು ಇವೆಯಾ? ಎದ್ದು ಕಾಣುವ ಒಂದು ಉದಾಹರಣೆ ಎಂದರೆ ಚಾಣಕ್ಯನ ಅರ್ಥಶಾಸ್ತ್ರದ್ದು. ಅದು ಅರ್ಥನೀತಿಯಲ್ಲ, ಯುದ್ಧನೀತಿಯೂ ಅಲ್ಲ. ಆದರೆ ಪರಿಣಾಮಕಾರಿ ಆಡಳಿತ ಹೇಗಿರಬೇಕು ಎಂಬುದಕ್ಕೆ ಸಂಬಂಧಪಟ್ಟದ್ದು. ಅಲ್ಲಿ ಶತ್ರುವನ್ನು ನಾಶ ಮಾಡಬಹುದಾದ ಹಲವು ವಿಧಾನಗಳನ್ನು ಹೇಳಿದೆ. ವಿಷ ಹಾಕುವುದು, ಬೆಂಕಿ ಇಕ್ಕುವುದು, ವಿಷಕನ್ಯೆಯನ್ನು ಬಳಸುವುದು- ಮುಂತಾದ ಎಲ್ಲ ಕಪಟಗಳೂ ಅಲ್ಲಿವೆ. ಶತ್ರುನಾಶದ ಸಂದರ್ಭದಲ್ಲಿ ಇದನ್ನೆಲ್ಲ ಬಳಸಬಹುದಂತೆ. ಚಾಣಕ್ಯನೇ ಇಂಥದನ್ನೆಲ್ಲ ಬಳಸಿಕೊಂಡು ನಂದರನ್ನು ಮಟ್ಟಹಾಕಿ ಚಂದ್ರಗುಪ್ತನನ್ನು ಪ್ರತಿಷ್ಠಾಪಿಸಿದವನು. ಅದರಲ್ಲಿ ನಾವು ಕಲಿಯಬಹುದಾದ ನೀತಿಸೂತ್ರಗಳೂ ಇವೆ; ಹಾಗೇ ನಮ್ಮ ಸಮಾಜದಲ್ಲಿದ್ದ ಹಲವು ಅನಿಷ್ಟಗಳನ್ನು ಗಟ್ಟಿಗೊಳಿಸುವ ಸೂತ್ರಗಳೂ ಇವೆ.
ಮಹಾಭಾರತದಲ್ಲಿ ನೋಡಿದರೆ, ಚಾಣಕ್ಯನ ತಂತ್ರಗಳನ್ನು ದುರ್ಯೋಧನನೂ ಬಳಸಿದ್ದು ಕಂಡುಬರುತ್ತದೆ. ಅವನಿಗೆ ಶಕುನಿಯೇ ಗುರು. ‘ಶಯನದಲಿ, ವಹ್ನಿಯಲಿ, ವೈಹಾಳಿಯಲಿ, ಬೇಟೆಯಲೂಟದಲಿ, ಕೇಳಿಯಲಿ, ಸುರತಕ್ರೀಡೆಯಲಿ, ಮಜ್ಜನದ ಸಮಯದಲಿ, ಜಯದ ಜೋಕೆಯಲೋಲಗದ ಮರವೆಯಲಿ, ವಾರಸ್ತ್ರೀಯರುಗಳಲಿ, ಲಯವನೈದಿಸಬಹುದು ಚಿತ್ತೈಸೆಂದನಾ ಶಕುನಿ’ ಎನ್ನುತ್ತಾನೆ ಕುಮಾರವ್ಯಾಸ ಭಾರತದಲ್ಲಿ ಶಕುನಿ. ಅಂದರೆ ಶತ್ರು ನಿದ್ರಿಸುತ್ತಿರುವಾಗ, ಉತ್ಸವದಲ್ಲಿರುವಾಗ, ಬೇಟೆ ಊಟಗಳ ಸಂದರ್ಭ, ಆಟವಾಡುವಾಗ, ಸುರತಕ್ರೀಡೆಯ ವೇಳೆ, ಸ್ನಾನದ ವೇಳೆ, ಜಯೋತ್ಸಾಹದಲ್ಲಿದ್ದಾಗ, ಓಲಗದಲ್ಲಿದ್ದಾಗ, ವೇಶ್ಯೆಯರ ಬಳಿಯಲ್ಲಿದ್ದಾಗ ಸಮಯ ಕಾದು ಕೊಲ್ಲಬಹುದಂತೆ. ಚಾಣಕ್ಯನಿಗೂ ಸ್ಫೂರ್ತಿ ಶಕುನಿಯೇ ಇರಬಹುದು. ಶುಕ್ರಾಚಾರ್ಯರೂ ಒಂದಿಷ್ಟು ರಾಜನೀತಿಯನ್ನು ಹೇಳುತ್ತಾರೆ. ಕುರುಕ್ಷೇತ್ರದ ಕೊನೆಯಲ್ಲಿ ಧರ್ಮರಾಯನಿಗೆ ಭೀಷ್ಮರೂ ಒಂದಿಷ್ಟು ಬೋಧಿಸುತ್ತಾರೆ. ಕುರುಕ್ಷೇತ್ರ ಯುದ್ಧಾರಂಭದಲ್ಲೂ ಯುದ್ಧದ ವೇಳೆಯಲ್ಲೂ ಕೃಷ್ಣ, ಅರ್ಜುನನಿಗೆ ಆಗಾಗ ಯುದ್ಧನೀತಿ ಬೋಧಿಸುತ್ತಾನೆ. ಆದರೆ ಅಲ್ಲಿ ಕಪಟಕ್ಕೆ ಪ್ರಾಧಾನ್ಯವಿಲ್ಲ.
ಯುದ್ಧವನ್ನು ‘ಕಲೆ’ ಎಂದು ನೋಡುವುದಕ್ಕಿಂತಲೂ, ‘ಯಜ್ಞ’ ಎಂದು ನೋಡಿದ ಉದಾಹರಣೆಗಳೇ ನಮ್ಮಲ್ಲಿ ಹೆಚ್ಚು. ಕೃಷ್ಣನೂ ಯುದ್ಧವನ್ನು ಕ್ಷತ್ರಿಯನು ಮಾಡಲೇಬೇಕಾದ ಯಜ್ಞ ಎಂದೇ ಪ್ರತಿಪಾದಿಸುತ್ತಾನೆ. ಆದರೆ ಯುದ್ಧ ಸೃಷ್ಟಿಸುವ ಭೀಭತ್ಸತೆ, ಕುಲನಾಶ, ದುರಂತದ ಬಗ್ಗೆ ವೇದವ್ಯಾಸರು ಹೆಚ್ಚು ಒತ್ತು ಕೊಡುತ್ತಾರೆ. ‘ಧರ್ಮಯುದ್ಧ’ ಎಂದು ಆರಂಭವಾದ ಕುರುಕ್ಷೇತ್ರ ಕದನ ಬರಬರುತ್ತಾ ಅಧರ್ಮಯುದ್ಧವಾದ ಪರಿಯನ್ನು ವೇದವ್ಯಾಸರು ಚಿತ್ರಿಸುತ್ತಾರೆ. ಭಾರತೀಯರಾದ ನಮ್ಮ ಮನದಲ್ಲಿ ಯುದ್ಧಪಿಪಾಸುತನಕ್ಕಿಂತಲೂ ಶಾಂತಿ- ಆನಂದದ ಕಡೆಗಿನ ಚಿಂತನೆಯೇ ಹೆಚ್ಚು ಇರುವಂತಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top