ಐಎಸ್‌ಐ ಮೂಲಕ ಖಲಿಸ್ತಾನ್ ಭಯೋತ್ಪಾದನೆಗೆ ಮರುಜೀವ.
ಜಮ್ಮು- ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಟ್ಟೆಚ್ಚರದಿಂದ ವಿಚಲಿತವಾಗಿರುವ ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ, ಭಾರತದಲ್ಲಿ ಹೇಗಾದರೂ ಭಯ ಸೃಷ್ಟಿಸುವ ಯತ್ನದಲ್ಲಿ ಪಂಜಾಬ್‌ನ ಖಲಿಸ್ತಾನ್ ಭಯೋತ್ಪಾದನೆಗೆ ಜೀವ ತುಂಬಲು ಯತ್ನಿಸುತ್ತಿದ್ದಾರೆ. ಅವರ ಯೋಜನೆಗಳೇನು, ಎಲ್ಲಿಂದ ಅನುಷ್ಠಾನಗೊಳ್ಳುತ್ತಿದೆ ಎಂಬ ವಿವರಗಳು ಇಲ್ಲಿವೆ.
ಪಂಜಾಬ್‌ನಲ್ಲಿ ಬಹುತೇಕ ಅಳಿದೇ ಹೋಗಿದ್ದ ಖಲಿಸ್ತಾನ್ ಚಳವಳಿ ಹಾಗೂ ಭಯೋತ್ಪಾದನೆಗೆ ಮತ್ತೆ ಮರುಜೀವ ಬಂದಿದೆ. ಪಂಜಾಬ್‌ನ ಅಲ್ಲಲ್ಲಿ ಬಾಂಬ್ ಸ್ಫೋಟ, ಗುಂಡಿನ ದಾಳಿ ನಡೆಸಲು ಉಗ್ರರು ಸಂಚು ನಡೆಸುತ್ತಿದ್ದು, ಇದು ಹೊಸ ತಲೆಮಾರಿನ ಖಲಿಸ್ತಾನ್ ಚಳವಳಿ ಎಂದೇ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಭಾರತದ ಒಬ್ಬ ಪ್ರಧಾನ ಮಂತ್ರಿಯನ್ನೇ ಬಲಿ ತೆಗೆದುಕೊಂಡ ಚಳವಳಿ ಇದು. ಇದರ ಹೊಸ ಸ್ವರೂಪ, ಅವತಾರಕ್ಕೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ನೆರವಾಗುತ್ತಿದೆ. ಜರ್ಮನಿ ಈ ಚಳವಳಿಗೆ ಮೂಲ ಕೇಂದ್ರವಾಗುತ್ತಿದೆ ಎನ್ನುತ್ತಿದ್ದಾರೆ ಬೇಹುಗಾರಿಕೆ ಅಧಿಕಾರಿಗಳು.
ಜರ್ಮನಿಯಲ್ಲಿ ನೆಲೆ
ಖಲಿಸ್ತಾನ್ ಚಳವಳಿಯತ್ತ ಸಹಾನುಭೂತಿ ಹೊಂದಿದ ಬಹಳ ಮಂದಿ ಜರ್ಮನಿ, ಬ್ರಿಟನ್, ಕೆನಡಾ ಮತ್ತು ಅಮೆರಿಕ (ಈ ದೇಶಗಳಲ್ಲಿ ಸಿಖ್ ವಲಸಿಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ) ದೇಶಗಳಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಚಳವಳಿ ಹಾಗೂ ಭಯೋತ್ಪಾದನೆಗೆ ಸೈದ್ಧಾಂತಿಕ ಬೆಂಬಲ ನೀಡುವ ಹಾಗೂ ಹಣಕಾಸಿನ ನೆರವು ಒದಗಿಸುವವರು. ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (ಕೆಜಿಎಫ್) ಎಂಬ ಹೊಸ ಸಂಘಟನೆಯೊಂದನ್ನು ಪೊಲೀಸರು ಕಳೆದ ವರ್ಷ ಭೇದಿಸಿದ್ದರು. ಇದರ ನಾಯಕರಲ್ಲಿ ಹೆಚ್ಚಿನವರು ಜರ್ಮನಿಯಲ್ಲಿದ್ದಾರೆ. ಪಾಕ್ ಮೂಲಕ ಭಾರತಕ್ಕೆ ಎಕೆ-47 ರೈಫಲ್‌ಗಳು, ಗ್ರೆನೇಡ್‌ಗಳು, ಪಿಸ್ತೂಲುಗಳು, ಸ್ಯಾಟ್‌ಲೈಟ್ ಫೋನ್‌ಗಳನ್ನು ಕಳುಹಿಸುತ್ತಿದ್ದಾರೆ ಎಂದು ಬೇಹುಗಾರಿಕೆ ವರದಿ ತಿಳಿಸಿದೆ. ಇದರಲ್ಲಿ ಒಂದು ಭಾಗ ಕಾಶ್ಮೀರ ಕಣಿವೆಗೂ ಹೋಗುತ್ತಿದೆ.
ಮಾದಕ ದ್ರವ್ಯಗಳ ನಂಟು
ಕಳೆದ ವರ್ಷ ಜೂನ್‌ನಲ್ಲಿ ಭಾರತೀಯ ಕಸ್ಟಮ್ಸ್ ಅಧಿಕಾರಿಗಳು 532 ಕಿಲೋ ಹೆರಾಯಿನ್ ವಶಪಡಿಸಿಕೊಂಡಿದ್ದರು. ಇದರ ಮೌಲ್ಯ ಅನಾಮತ್ತು 2700 ಕೋಟಿ ರೂಪಾಯಿ. ಇದು ಪಾಕ್‌ನಿಂದ ಅಟ್ಟಾರಿ ಗಡಿಯಲ್ಲಿ ಟ್ರಕ್ ಮೂಲಕ ಪಂಜಾಬ್ ಒಳನುಸುಳಿತ್ತು. ಇದನ್ನು ಕಳಿಸಿಕೊಟ್ಟವನು ಖಲಿಸ್ತಾನಿ ಉಗ್ರನೆಂದು ಘೋಷಿತವಾಗಿರುವ ಗುರ್ಮೀತ್ ಸಿಂಗ್ ಬಗ್ಗಾ. ಭಾರತದಲ್ಲಿ ಪಂಜಾಬ್, ಮಾದಕ ದ್ರವ್ಯಗಳ ರಾಜಧಾನಿ ಎಂದೇ ಕುಖ್ಯಾತಿ ಹೊಂದಿದೆ. ಇಲ್ಲಿನ ಯುವ ತಲೆಮಾರು ದೊಡ್ಡ ಸಂಖ್ಯೆಯಲ್ಲಿ ಮಾದಕ ದ್ರವ್ಯಗಳ ದಾಸರಾಗಿದ್ದಾರೆ. ಇಲ್ಲಿಗೆ ಅಫಘಾನಿಸ್ತಾನದಿಂದ ಪಾಕ್ ಗಡಿಯ ಮೂಲಕ ಡ್ರಗ್ಸ್ ಸರಬರಾಜು ಆಗುತ್ತದೆ. ಖಲಿಸ್ತಾನ್ ಉಗ್ರರಿಗೂ ತಮ್ಮ ದಾಳಿಗಳನ್ನು ಸಂಘಟಿಸಲು ಈಗ ಹಣ ಬೇಕು. ಅತ್ತ ಅಫಘಾನಿಸ್ತಾನ, ಸಿರಿಯಾ ಹಾಗೂ ಇರಾಕ್‌ಗಳಿಂದ ಕಾರ್ಯಾಚರಿಸುತ್ತಿರುವ ಐಸಿಸ್ ಉಗ್ರರಿಗೂ ಹಣದ ಒಂದು ಪ್ರಮುಖ ಮೂಲವೆಂದರೆ ಅಫಘಾನಿಸ್ತಾನದಲ್ಲಿ ಬೆಳೆಯುವ ದೊಡ್ಡ ಪ್ರಮಾಣದ ಅಫೀಮು ಹಾಗೂ ಗಾಂಜಾ. ಈ ಮಾದಕ ದ್ರವ್ಯ ವ್ಯವಹಾರವೇ ಪಂಜಾಬ್‌ನ ಉಗ್ರರು, ಸಿರಿಯಾದ ಉಗ್ರರು ಹಾಗೂ ಮಧ್ಯವರ್ತಿ ನೆಲೆಯಲ್ಲಿ ಐಎಸ್‌ಐಯನ್ನು ಒಂದುಗೂಡಿಸಿದೆ.
9 ಖಲಿಸ್ತಾನಿ ಉಗ್ರರ ನಿಷೇಧ
ಇತ್ತೀಚೆಗೆ ಭಾರತದ ಸರಕಾರ ಒಂಬತ್ತು ಮಂದಿ ಖಲಿಸ್ತಾನ್ ಪರ ಹೋರಾಟಗಾರರನ್ನು ಉಗ್ರಗಾಮಿಗಳು ಎಂದು ಹೆಸರಿಸಿದೆ. ಈ ಒಂಬತ್ತೂ ಮಂದಿ ಭಾರತದಿಂದ ಹೊರಗಡೆ ನೆಲೆ ಕಂಡುಕೊಂಡಿದ್ದು, ಪಂಜಾಬ್‌ನಲ್ಲಿ ಅಶಾಂತಿ ಹಬ್ಬಿಸಲು ಹಣಕಾಸು ಹಾಗೂ ಸೈದ್ಧಾಂತಿಕ ಸಹಾಯ ಒದಗಿಸುತ್ತಿದ್ದಾರೆ.
ಗುರ್ಮೀತ್ ಸಿಂಗ್ ಬಗ್ಗಾ: ಕಳೆದ ವರ್ಷ ಪಾಕಿಸ್ತಾನದಲ್ಲಿರುವ ಉಗ್ರ ರಂಜೀತ್ ಸಿಂಗ್ ಸಹಾಯದಿಂದ ಡ್ರೋನ್‌ಗಳ ಮೂಲಕ ಭಾರತದ ಗಡಿಯೊಳಕ್ಕೆ ಶಸ್ತ್ರಾಸ್ತ್ರಗಳನ್ನು ತೂರಿಸಿದ್ದ. ಜರ್ಮನಿಯಲ್ಲಿ ರಾಧಾಸ್ವಾಮಿ ಪಂಥದ ಮುಖ್ಯಸ್ಥನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬೇಕಾಗಿದ್ದಾನೆ.
ಭೂಪೀಂದರ್ ಸಿಂಗ್ ಭಿಂಡಾ: ಇವನೂ ಜರ್ಮನಿ ನಿವಾಸಿ. ಬಗ್ಗಾನ ಆಪ್ತ ಸಹಾಯಕ.
ರಂಜೀತ್ ಸಿಂಗ್ (ನೀತಾ): ಪಾಕಿಸ್ತಾನದಲ್ಲಿದ್ದು ಐಎಸ್‌ಐ ಸಹಾಯದಿಂದ ಭಾರತದೊಳಕ್ಕೆ ನಕಲಿ ಕರೆನ್ಸಿ, ಡ್ರಗ್ಸ್, ಸ್ಫೋಟಕ ರವಾನೆಗೆ ನೆರವಾಗುತ್ತಾನೆ.
ವಾಧ್ವಾ ಸಿಂಗ್: ಬಬ್ಬರ್ ಖಾಲ್ಸಾ ಅಂತಾರಾಷ್ಟ್ರೀಯ ಸಂಘಟನೆಯ ಮುಖ್ಯಸ್ಥ. ಪಂಜಾಬ್‌ನಲ್ಲಿ ಹಲವು ಪೊಲೀಸರನ್ನು ಕೊಂದಿದ್ದಾನೆ.
ಲಕ್‌ಬೀರ್ ಸಿಂಗ್ ರೋಡೆ: ಈತ ಹಾಗೂ ಈತನ ಮಗ ಭಗತ್ ಬ್ರಾರ್ ಇಬ್ಬರ ಕೆನಡಾದಲ್ಲಿದ್ದು ಅಲ್ಲಿಂದ ಖಲಿಸ್ತಾನ ಭಯೋತ್ಪಾದನೆಯ ಜೊತೆಗೆ ಕೈಜೋಡಿಸಿದ್ದಾರೆ.
ಪ್ರಂಜಿತ್ ಸಿಂಗ್ ಪಮ್ಮಾ: 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ಗೆ ಭೇಟಿ ನೀಡಿದಾಗ ಅವರ ವಿರುದ್ಧ ದ್ವೇಷ ಪ್ರಚೋದಿಸಿದ್ದ. ಬ್ರಿಟನ್‌ನಲ್ಲಿರುವ ಈತ ಖಲಿಸ್ತಾನಿ ಉಗ್ರರಿಗೆ ಹಣಕಾಸು ನೀಡುತ್ತಾನೆ.
ಪರಮ್‌ಜಿತ್ ಸಿಂಗ್ ಪಂಜ್ವರ್: ಈತ ಖಲಿಸ್ತಾನ್ ಕಮಾಂಡೋ ಫೋರ್ಸ್ ಎಂಬ ಸಂಘಟನೆಯ ನಾಯಕ. ಅಫಘಾನಿಸ್ತಾನದಲ್ಲಿದ್ದು ಖಲಿಸ್ತಾನಿ ಉಗ್ರರಿಗೆ ತರಬೇತಿ ಒದಗಿಸುತ್ತಾನೆ.
ಗುರುಪತ್ವಂತ್ ಸಿಂಗ್ ಪನ್ನುಂ: ಖಲಿಸ್ತಾನ್ ಭಯೋತ್ಪಾದನೆಗೆ ಮರುಜೀವ ನೀಡುತ್ತಿರುವ ‘2020ರ ನಿರ್ಣಯ’ದ ಜನಕ, ನ್ಯಾಯವಾದಿ.
ಹರ್‌ದೀಪ್ ಸಿಂಗ್ ನಿಜ್ಜರ್: ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆಯೊಂದಿಗೆ ಸೇರಿಕೊಂಡು ಉಗ್ರ ದಾಳಿಗಳಿಗೆ ಸ್ಕೆಚ್ ಹಾಕುತ್ತಿದ್ದಾನೆ.
ಐಸಿಸ್ ಉಗ್ರರೂ ಭಾಗಿ?
2019ರಲ್ಲಿ ಚಂಡೀಗಢದಲ್ಲಿ ನಡೆದ ಒಂದು ಸ್ಫೋಟಕ್ಕೆ ಸಂಬಂಧಿಸಿ ಇಬ್ಬರು ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರಿಬ್ಬರೂ ಪಂಜಾಬ್‌ನ ಖಲಿಸ್ತಾನ್ ಚಳವಳಿಗೂ ಅತ್ತ ಐಸಿಸ್‌ಗೂ ಸಂಪರ್ಕ ಹೊಂದಿದ್ದುದು ಕಂಡುಬಂದಿತ್ತು. ಹೀಗಾಗಿ, ಅಂತಾರಾಷ್ಟ್ರೀಯ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಸ್ಥೆಯೂ ಇತ್ತ ತನ್ನ ಕಬಂಧ ಬಾಹು ಚಾಚುತ್ತಿದೆಯೇ ಎಂಬ ಅನುಮಾನವೂ ಉಂಟಾಗಿತ್ತು. 2016ರಲ್ಲೇ ಭಾರತದಲ್ಲಿ 68 ಐಸಿಸ್ ಬೆಂಬಲಿಗರನ್ನು ಬಂಧಿಸಲಾಗಿದೆ ಎಂದು ಸರಕಾರ ಹೇಳಿತ್ತು. 2017ರ ಫೆಬ್ರವರಿಯಲ್ಲಿ, ಇಬ್ಬರು ಐಸಿಸ್ ತರಬೇತಿ ಪಡೆದ ಭಾರತೀಯ ಉಗ್ರರನ್ನು ವಿಚಾರಣೆಗೊಳಪಡಿಸಿ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು ದಿಲ್ಲಿ ಹೈಕೋರ್ಟ್. ಭಾರತದಲ್ಲಿ ಐಸಿಸ್ ಯೋಧರನ್ನು ಸಿದ್ಧಪಡಿಸುವ ಹೊಣೆ ಹೊತ್ತುಕೊಂಡಿರುವ ಮೊಹಮ್ಮದ್ ಶಫಿ ಅರ್ಮಾರ್ ಎಂಬಾತನನ್ನು ‘ಜಾಗತಿಕ ಉಗ್ರ’ ಎಂದು ಅಮೆರಿಕ ಘೋಷಿಸಿದೆ. 2018ರ ಆಗಸ್ಟ್‌ನಲ್ಲಿ ಹೈದರಾಬಾದ್‌ನಲ್ಲಿ ಸ್ಫೋಟಕ್ಕೆ ಸಂಚು ಹೂಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಅವರಿಗೆ ಐಸಿಸ್ ನಂಟು ಕಂಡುಬಂದಿದೆ. 2017ರಲ್ಲಿ, 20 ಇಂಜಿನಿಯರ್‌ಗಳನ್ನು ಐಸಿಸ್ ನಂಟು ಹೊಂದಿದ್ದಾರೆಂದು ಶಂಕಿಸಿ ತನಿಖೆಗೊಳಪಡಿಸಲಾಗಿದೆ.
ಖಲಿಸ್ತಾನ್ ಚಳವಳಿಯ ಹಿನ್ನೆಲೆ
1940ರಲ್ಲೇ ಖಲಿಸ್ತಾನದ ಚಿಂತನೆಯ ಬೀಜಗಳು ಹುಟ್ಟಿಕೊಂಡಿದ್ದವು. ಸಿಕ್ಖರಿಗೊಂದು ಪ್ರತ್ಯೇಕ ದೇಶ ಬೇಕು ಎಂದು ಹಲವು ಸಿಕ್ಖರು ವಾದಿಸಿದರು. ಈ ದೇಶದಲ್ಲಿ ಪಂಜಾಬ್‌ನ್ನು ಮುಖ್ಯವಾಗಿಟ್ಟುಕೊಂಡು, ಪಾಕಿಸ್ತಾನ, ಬಲೂಚಿಸ್ತಾನ, ಹಿಮಾಚಲ, ಹರಿಯಾಣ, ಜಮ್ಮು- ಕಾಶ್ಮೀರದ ಕೆಲ ಭಾಗಗಳನ್ನು ಸೇರಿಸಿಕೊಂಡು ಪ್ರತ್ಯೇಕ ಖಲಿಸ್ತಾನ್ ರಚಿಸುವ ಚಿಂತನೆಯಿತ್ತು. ಕೆಲವು ಶ್ರೀಮಂತ ಹಾಗೂ ಪ್ರತ್ಯೇಕತಾವಾದಿ ಸಿಕ್ಖರ ಹಣಕಾಸು ಹಾಗೂ ಪಾಕಿಸ್ತಾನದ ಬೆಂಬಲದಿಂದ 1970-80ರದ ದಶಕದಲ್ಲಿ ಇದು ಉಗ್ರವಾಗಿ ಬೆಳೆಯಿತು. 1980ರಲ್ಲಿ ಜಗಜಿತ್ ಸಿಂಗ್ ಚೌಹಾಣ್ ಎಂಬಾತ ನ್ಯಾಷನಲ್ ಕೌನ್ಸಿಲ್ ಆಫ್ ಖಲಿಸ್ತಾನ್ ಎಂಬ ಸಂಘಟನೆ ಕಟ್ಟಿದ. ಬ್ರಿಟನ್‌ಗೆ ಹೋಗಿ ಅಲ್ಲಿಂದಲೇ ಖಲಿಸ್ತಾನ್ ರಚನೆಯನ್ನೂ ಘೋಷಿಸಿದ. ನಂತರ ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆ ಎಂಬ ಮತಾಂಧ ಧಾರ್ಮಿಕ ಗುರು ಹುಟ್ಟಿಕೊಂಡು, ಉಗ್ರ ‘ಖಾಲ್ಸಾ’ ಪ್ರವೃತ್ತಿಯನ್ನು ಪ್ರೋತ್ಸಾಹಿಸಿದ. ಪ್ರತಿಯೊಬ್ಬ ಸಿಕ್ಖನೂ 32 ಹಿಂದೂಗಳನ್ನು ಕೊಲ್ಲಬೇಕೆಂದು ಕರೆನೀಡಿದ. ಈತನ ಕಾಲದಲ್ಲಿ ಪಂಜಾಬ್‌ನಲ್ಲಿ ಹಿಂಸೆ ತಾಡವವಾಡಿತು. 1984ರ ಜೂನ್‌ನಲ್ಲಿ ಈತ ತನ್ನ ಸಂಗಡಿಗರ ಜೊತೆ ಅಮೃತಸರದ ಸ್ವರ್ಣಮಂದಿರದಲ್ಲಿ ನೆಲೆ ಹೂಡಿದ. ಈತನನ್ನು ಮಣಿಸಲು ಪ್ರಧಾನಿ ಇಂದಿರಾ ಗಾಂಧಿ ‘ಆಪರೇಶನ್ ಬ್ಲೂಸ್ಟಾರ್’ ನಡೆಸಿದರು. ಭಿಂದ್ರಾನ್‌ವಾಲೆ ಸೇರಿ ನೂರಾರು ಉಗ್ರರು, ಪೊಲೀಸರು ಸತ್ತರು. ಪರಿಣಾಮವಾಗಿ ಕೆರಳಿದ ಸಿಖ್ ಅಂಗರಕ್ಷಕರಿಂದ 1984ರಲ್ಲಿ ಪ್ರಧಾನಿ ಇಂದಿರಾ ಕಗ್ಗೊಲೆ, ಇದಕ್ಕೆ ಸೇಡು ಎಂಬಂತೆ ಸಿಖ್ ಹತ್ಯಾಕಾಂಡ ಎಲ್ಲವೂ ನಡೆದದ್ದು ಇತಿಹಾಸ. ನಂತರ ಈ ಚಳವಳಿ ತಣ್ಣಗಾಗುತ್ತ ಬಂತು. ಆದರೂ ಅದನ್ನು ಗಾಳಿ ಹಾಕಿ ಪ್ರಜ್ವಲಿಸುವಂತೆ ಮಾಡಲು ಪಾಕಿಸ್ತಾನ ಪ್ರಯತ್ನಿಸುತ್ತಲೇ ಇದೆ.