ವಿಕ ಸುದ್ದಿಲೋಕ ಬೆಂಗಳೂರು.
ಕೊರೊನಾ ಹಿನ್ನೆಲೆಯಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೆ ಚಿಂತಿತರಾಗಿದ್ದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಯಾನಂದ ಸಾಗರ್ ವಿಶ್ವವಿದ್ಯಾಲಯ ಸಿಇಟಿ, ನೀಟ್ ಮತ್ತು ಡಿಎಸ್ಎಟಿಗೆ ಸಿದ್ಧತೆ ಮಾಡಿಕೊಳ್ಳಲು ಉಚಿತ ಆನ್‌ಲೈನ್ ತರಗತಿಗಳನ್ನು ‘ವಿಜಯ ಕರ್ನಾಟಕ’ ಸಹಯೋಗದಲ್ಲಿ ಪ್ರಾರಂಭಿಸಿದೆ.
ನಗರದ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಆನ್‌ಲೈನ್ ತರಗತಿಗಳಿಗೆ ಚಾಲನೆ ನೀಡಿದರು.
‘‘ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ತರಬೇತಿ ಪಡೆಯಲು ಸಾಧ್ಯವಾಗದೇ ವಿದ್ಯಾರ್ಥಿಗಳು ಮತ್ತು ಪೋಷಕರು ಚಿಂತಿತರಾಗಿದ್ದಾರೆ. ಸಿಇಟಿ, ನೀಟ್, ಡಿಎಸ್ಎಟಿ (ದಯಾನಂದ ಸಾಗರ ವಿವಿ ಅಡ್ಮಿಷನ್ ಟೆಸ್ಟ್)ಗೆ ಸಿದ್ಧರಾಗಲು ತರಬೇತಿ ಅವಶ್ಯಕತೆಯಿದೆ. ಸಿಇಟಿ, ನೀಟ್ ಮೂಲಕ ವೃತ್ತಿಪರ ಕೋರ್ಸ್‌ಗಲಿಗೆ ಪ್ರವೇಶ ಪಡೆಯಲು ಸ್ಪರ್ಧೆ ಹೆಚ್ಚಿರುತ್ತದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಗುರಿ ಹೊಂದಿರುತ್ತಾರೆ. ಉತ್ತಮ ತರಬೇತಿ ಪಡೆಯಲು ವಿದ್ಯಾರ್ಥಿಗಳ ನೆರವಿಗೆ ಧಾವಿಸಿರುವ ದಯಾನಂದ ಸಾಗರ್ ವಿವಿ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಯ ಪ್ರಯತ್ನ ಶ್ಲಾಘನೀಯ,’’ ಎಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ಭಾನುವಾರ ವೆಬಿನಾರ್
ದಯಾನಂದ ಸಾಗರ್ ವಿವಿ ಕುಲಪತಿ ಡಾ. ಕೆ.ಎನ್. ಬಾಲಸುಬ್ರಮಣ್ಯಮೂರ್ತಿ ಮಾತನಾಡಿ, ‘‘ಭವಿಷ್ಯ ರೂಪಿಸುವ ಮಹತ್ವದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ಸಿದ್ಧರಾಗಲು ಅಗತ್ಯ ತರಬೇತಿಯನ್ನು ನಮ್ಮ ವಿವಿಯ ಅತ್ಯುತ್ತಮ ಬೋಧಕ ಸಿಬ್ಬಂದಿ ಮೂಲಕ ಒದಗಿಸುತ್ತಿದೆ. ಸಿಇಟಿ ಜತೆಗೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಬೇಕಾದ ತರಬೇತಿ ಆನ್‌ಲೈನ್ ತರಗತಿಗಳಲ್ಲಿ ಸಿಗಲಿದೆ. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಓದಿನ ಕಡೆ ಗಮನಹರಿಸಿ ಟಾಸ್ಕ್ ಮುಗಿಸಬೇಕು. ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತರಗತಿಗಳು ನಡೆಯಲಿವೆ. ಪ್ರತಿ ಭಾನುವಾರ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಾಹಿತಿ ಒದಗಿಸುವ ವೆಬಿನಾರ್ ಕೂಡ ಇರಲಿದೆ. ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ತಜ್ಞರು ಮಾಹಿತಿ ನೀಡುತ್ತಾರೆ,’’ ಎಂದರು.
ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ
‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ‘‘ಕೋವಿಡ್‌ನಿಂದ ಜಗತ್ತು ಸಂಕಷ್ಟ ಎದುರಿಸುತ್ತಿದೆ. ಇದರಿಂದ ಶೈಕ್ಷಣಿಕ ವರ್ಷ ಆರಂಭ ಕೂಡ ವಿಳಂಬವಾಗುತ್ತಿದೆ. ಇಂತಹ ಸಂದರ್ಭದಲ್ಲಿ ದಯಾನಂದ ಸಾಗರ್ ವಿವಿಯಿಂದ ಸಿಇಟಿ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅದಕ್ಕೆ ‘ವಿಜಯ ಕರ್ನಾಟಕ’ ಕೈಜೋಡಿಸಿರುವುದು ಸಂತೋಷವಾಗಿದೆ. ವಿವಿಯ ಪ್ರಯತ್ನಕ್ಕೆ ಪತ್ರಿಕೆಯ ಸಹಕಾರ ಇದ್ದೇ ಇರುತ್ತದೆ,’’ ಎಂದು
ಹೇಳಿದರು.
ಐಟಿ- ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ದಯಾನಂದ ಸಾಗರ್ ವಿವಿಯ ಸಹ ಕುಲಪತಿ ಪ್ರೊ.ಆರ್.ಜನಾರ್ದನ ಸೇರಿದಂತೆ ಉನ್ನತ ಶಿಕ್ಷ ಣ ಇಲಾಖೆ ಮತ್ತು ದಯಾನಂದ ಸಾಗರ್ ವಿವಿಯ
ಅಧಿಕಾರಿಗಳು ಉಪಸ್ಥಿತರಿದ್ದರು.
ನೋಂದಣಿ ಹೇಗೆ?
– ದಯಾನಂದ ಸಾಗರ್ ವಿವಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲೇ ಹೆಸರು ನೋಂದಣಿ ಮಾಡಿಕೊಳ್ಳಬೇಕು. – ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್‌ಪೋನ್, ಟ್ಯಾಬ್ ಮೂಲಕ ಹೆಸರು ನೋಂದಾಯಿಸಿಕೊಂಡು ವೇಳಾಪಟ್ಟಿ – ಪ್ರಕಾರ ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸಬಹುದು. ಜು.27ರವರೆಗೆ ತರಗತಿಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗೆ ದಯಾನಂದ ಸಾಗರ ವಿವಿ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.