ನೀತಿಗಳಲ್ಲಿ ಸ್ಪಷ್ಟತೆ ಇರಲಿ – ರಾಜಧಾನಿಯಲ್ಲಿ ಲಾಕ್‌ಡೌನ್‌ ಬೇಕು, ಬೇಡ ಚರ್ಚೆ

ರಾಜಧಾನಿ ಬೆಂಗಳೂರಲ್ಲಿ ಕೋವಿಡ್-19 ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗುತ್ತಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್‌ಡೌನ್‌ ಅಥವಾ ಸೀಮಿತ ಲಾಕ್‌ಡೌನ್‌ ಹೇರಬೇಕೇ, ಬೇಡವೇ ಎಂಬ ಚರ್ಚೆ ಸರಕಾರದ ಮಟ್ಟದಲ್ಲೇ ಶುರುವಾಗಿದೆ. ಇದನ್ನು ಗಮನಿಸಿದರೆ ಈ ವಿಷಯದಲ್ಲಿ ಸರಕಾರಕ್ಕೆ ಸ್ಪಷ್ಟತೆ ಇಲ್ಲವೇ ಎಂಬ ಸಂದೇಹ ಉಂಟಾಗುತ್ತದೆ. ಕಾರಣ ಇಷ್ಟೇ, ಸೋಂಕು ತಡೆಯಲು ಲಾಕ್‌ಡೌನ್‌ ಒಂದೇ ಪರಿಹಾರ ಎಂಬುದಾಗಿದ್ದರೆ ಈ ಹಿಂದೆ ಲಾಕ್‌ಡೌನ್ ತೆರವು ಮಾಡಿದ್ದೇಕೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಸೋಂಕು ಹೆಚ್ಚಾಗಲು ಜನರಲ್ಲಿ ಜಾಗೃತಿಯ ಕೊರತೆಯ ಜೊತೆಗೆ ಸರಕಾರದ ನೀತಿ, ನಿರ್ಧಾರಗಳಲ್ಲಿ ಸ್ಪಷ್ಟತೆ ಮತ್ತು ಗಾಂಭೀರ್ಯ ಇಲ್ಲದಿರುವುದೂ ಕಾರಣ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಒಂದೊಂದು ದಿನಕ್ಕೆ ಒಂದೊಂದು ನೀತಿಗಳು, ನಿಯಮಗಳನ್ನು ಹೇರುತ್ತಾ ಹೋದ ಪರಿಣಾಮ ಜನರಲ್ಲೂ ಸಾಕಷ್ಟು ಗೊಂದಲ ಮೂಡಿದೆ. ಕೊರೊನಾ ತಡೆ ವಿಷಯದಲ್ಲಿ ಗಾಂಭೀರ್ಯ ಮಾಯವಾಗಿದೆ. ಸರಕಾರದ ಮಟ್ಟದಲ್ಲಿ ಸಮನ್ವಯತೆ ಕೊರತೆ ಇದೆ ಎಂಬ ಅನುಮಾನವೂ ದಟ್ಟವಾಗುತ್ತದೆ. ಇದೆಲ್ಲದರ ನಡುವೆ ಮತ್ತೆ ಲಾಕ್‌ಡೌನ್ ಹೇರಬೇಕೆಂಬ ಚರ್ಚೆ ಅವಿವೇಕತನದ್ದು ಎನಿಸಿಕೊಳ್ಳುತ್ತದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಲಾಕ್‌ಡೌನ್‌ನಿಂದ ಬಡಜನರು, ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಲಾಕ್‌ಡೌನ್‌ನ ನಕಾರಾತ್ಮಕ ಪರಿಣಾಮವನ್ನು ಈಗಲೂ ಅವರು ಎದುರಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮತ್ತೆ ಲಾಕ್‌ಡೌನ್ ಹೇರಿಕೆಯಾದರೆ ಅವರ ಗತಿ ಏನಾಗಬಹುದು ಎಂಬುದನ್ನು ಯಾರೇ ಆದರೂ ಊಹಿಸಬಹುದು. ಮತ್ತೆ ಲಾಕ್‌ಡೌನ್ ಮಾಡಿದಲ್ಲಿ ಸೋಂಕು ತಗುಲಿ ಸಾವಿಗೀಡಾಗುವವರಿಗಿಂತಲೂ ಕೆಲಸವಿಲ್ಲದೇ, ಆಹಾರವಿಲ್ಲದೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಸಾಯುವವವರ ಸಂಖ್ಯೆ ಹೆಚ್ಚಾಗಬಹುದು ಎಂಬುದನ್ನು ಸರಕಾರ ಮನಗಾಣಲೇಬೇಕಿದೆ.
ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಅನಗತ್ಯವಾಗಿ ಓಡಾಡದೇ ಇರುವುದು ಹೆಚ್ಚು ಪರಿಣಾಮಕಾರಿ. ಆದರೆ, ಬೆಂಗಳೂರು ನಗರದಲ್ಲಿ ಈ ನಿಯಮಗಳು ಬಹುಪಾಲಿಗೆ ಅಲಕ್ಷ್ಯಕ್ಕೊಳಗಾಗಿವೆ. ಹೀಗೆ ಬೇಜವಾಬ್ದಾರಿಯಿಂದ ವರ್ತಿಸುವವರನ್ನು ಮುಲಾಜಿಲ್ಲದೆ ದಂಡಿಸುವ ಕೆಲಸ ಆಗುತ್ತಿಲ್ಲ. ಹಾಗೆ ಮಾಡುವ ಬದಲು ಲಾಕ್‌ಡೌನ್ ಮಾಡಿದರೆ ಜವಾಬ್ದಾರಿಯಿಂದ ವರ್ತಿಸುವವರನ್ನೂ ಸಂಕಷ್ಟಕ್ಕೆ ದೂಡಿದಂತಾಗುತ್ತದೆ. ಅದರ ಬದಲು ಕಟ್ಟುನಿಟ್ಟಿನ ನಿಯಮ ಪಾಲನೆಗೆ ಬಲಪ್ರಯೋಗ ಮಾಡುವುದು ಹೆಚ್ಚು ಪರಿಣಾಮಕಾರಿ ಆಗಬಹುದು. ಇನ್ನು ಬೆಂಗಳೂರು ಅಧಿಕಾರದ ಕೇಂದ್ರಸ್ಥಾನ. ಸೋಂಕು ನಿಯಂತ್ರಣದ ಪ್ರಾಥಮಿಕ ಜವಾಬ್ದಾರಿಯನ್ನು ಹೊಂದಿರುವ ಬಿಬಿಎಂಪಿ, ಸ್ಥಳೀಯಾಡಳಿತ ಸಂಸ್ಥೆಗಳು, ಪೊಲೀಸ್ ವ್ಯವಸ್ಥೆ ಪ್ರಬಲವಾಗಿವೆ. ಹಾಗೆಯೇ ಬಹುಪಾಲು ಸಚಿವರು ಇಲ್ಲಿಯವರೇನೆ. ಬೆಂಗಳೂರು ಉಸ್ತುವಾರಿ ಕೂಡ ಮುಖ್ಯಮಂತ್ರಿಗಳ ಬಳಿಯೇ ಇದೆ. ಹಾಗಿದ್ದೂ, ನಿಯಂತ್ರಣ ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಅದೇ ವೇಳೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಕೊರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದಾರೆ. ಅದರ ಜೊತೆಗೆ ಕಡಿಮೆ ಕಲಿತವರು ಮತ್ತು ಅನಕ್ಷರಸ್ಥರೇ ಹೆಚ್ಚಿರುವ ಗ್ರಾಮೀಣ ಜನರು ಹೆಚ್ಚು ಜಾಗರೂಕತೆಯಿಂದ ವರ್ತಿಸುವುದು ಪ್ರತ್ಯಕ್ಷ ಕಾಣಿಸುತ್ತಿದೆ. ಇದು ರಾಜಧಾನಿಯಲ್ಲೇಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಯನ್ನು ಸರಕಾರವೇ ಕೇಳಿಕೊಳ್ಳಬೇಕಿದೆ. ಅಂತಿಮವಾಗಿ ಹೇಳುವುದು ಇಷ್ಟು, ಸರಕಾರ ಮುಖ್ಯವಾಗಿ ಮೂರು ಅಂಶಗಳ ಮೇಲೆ ಗಮನಹರಿಸಬೇಕಿದೆ. ಜನರಲ್ಲಿರುವ ಜೀವ ಭಯವನ್ನು ಹೋಗಲಾಡಿಸುವುದು, ಕರೊನಾ ತಡೆಗೆ ಜಾಗೃತಿ ಮೂಡಿಸುವುದು ಮತ್ತು ಕಾಯಿಲೆ ಪೀಡಿತರ ಆರೈಕೆ ಮಾಡುವುದು. ಈ ಸಂಗತಿಗಳ ಕಡೆಗೆ ನಿಖರವಾಗಿ ಗಮನ ನೀಡಿದರೆ ಕೊರೊನಾ ತಡೆಗೆ ಲಾಕ್‌ಡೌನ್ ಅಸ್ತ್ರ ಪ್ರಯೋಗದ ಅಗತ್ಯ ಇಲ್ಲವೇ ಇಲ್ಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top