– ಸರಕಾರದ ಶಕ್ತಿ ಕೇಂದ್ರದಲ್ಲೇ ವೈಫಲ್ಯ | ಸೋಂಕಿತರ ನರಳಾಟ | ಇತರ ಜಿಲ್ಲಾಡಳಿತಗಳೇ ಬೆಸ್ಟ್
– ಇಲಾಖೆ, ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ| ಹೊಣೆ ಮರೆತ ಬಿಬಿಎಂಪಿ ಆಯುಕ್ತ
ವಿಕ ಸುದ್ದಿಲೋಕ ಬೆಂಗಳೂರು.
ರಾಜಧಾನಿಯಲ್ಲಿ ಕೊರೊನಾ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಕೊರೊನಾ ನಿಯಂತ್ರಣದಲ್ಲಿ ದೇಶದಲ್ಲೇ ಬೆಸ್ಟ್ ಎಂಬ ಹೆಗ್ಗಳಿಕೆ ಪಡೆದ ಕರ್ನಾಟಕ ತನ್ನ ಶಕ್ತಿ ಕೇಂದ್ರದಲ್ಲೇ ಸೋಂಕಿಗೆ ಕಡಿವಾಣ ಹಾಕಲು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವಿಫಲವಾಗುತ್ತಿದೆ.
ಸುಸಜ್ಜಿತ ಆಸ್ಪತ್ರೆಗಳು, ಮುಖ್ಯಮಂತ್ರಿಯೂ ಸೇರಿದಂತೆ ಇಡೀ ಸಚಿವ ಸಂಪುಟ, ಶಕ್ತಿಶಾಲಿ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ವ್ಯವಸ್ಥೆಗಳಿರುವ ಬೆಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಲು ಆಡಳಿತ ವ್ಯವಸ್ಥೆಯಲ್ಲಿನ ಸಮನ್ವಯದ ಕೊರತೆಯೇ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಜಧಾನಿಯ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ.
ರಾಜಧಾನಿಯಲ್ಲಿ ಸೋಂಕು ಜನಸಮುದಾಯಕ್ಕೆ ಹರಡಿದಂತೆ ಕಾಣುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿವೆ. ಆದರೆ, ಬಿಬಿಎಂಪಿ ಕೇವಲ 1400 ಕೇಸುಗಳಿಗೇ ಸುಸ್ತು ಹೊಡೆದಿದೆ. ಉಡುಪಿ, ಕಲಬುರಗಿಯಂಥ ಜಿಲ್ಲಾಡಳಿತಗಳು ಸಾವಿರಕ್ಕೂ ಅಧಿಕ ಕೇಸುಗಳನ್ನು ಯಾವುದೇ ಗೊಂದಲಕ್ಕೆ, ಅಪಾಯಕ್ಕೆ ಅವಕಾಶವಿಲ್ಲದೆ ಬಗೆಹರಿಸಿಕೊಂಡು ನಿರಾಳವಾಗುವ ಹಾದಿಯಲ್ಲಿವೆ. ಯಾದಗಿರಿಯಂಥ ಪುಟ್ಟ ಜಿಲ್ಲೆ 881 ಕೊರೊನಾ ಪ್ರಕರಣಗಳು ಬಂದರೂ ಜನರ ಜೀವನವನ್ನು ಒತ್ತೆ ಇಟ್ಟಿಲ್ಲ. ಆದರೆ, ಬೆಂಗಳೂರು ಮಾತ್ರ ಸರ್ವ ವ್ಯವಸ್ಥೆಗಳ ನಡುವೆಯೂ ಕೈಚೆಲ್ಲಿ ಕುಳಿತು ಅಪಾಯಕ್ಕೆ ಆಹ್ವಾನ ನೀಡುವಂತೆ ಕಾಣುತ್ತಿದೆ. ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸೋಂಕಿತರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕಾದ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಅವರು ದಿವ್ಯ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಆರೋಪಗಳು ಕೇಳಿ ಬಂದಿವೆ. ಜತೆಗೆ ಎಲ್ಲ ಜನಪ್ರತಿನಿಧಿಗಳು ಕೂಡಾ ಜನರನ್ನು ಅಪಾಯಕ್ಕೆ ದೂಡಿದ ಆರೋಪ ಎದುರಿಸಬೇಕಾಗಿದೆ.
ಬಲಾಢ್ಯರ ಭದ್ರಕೋಟೆ ಛಿದ್ರ
ಮುಖ್ಯಮಂತ್ರಿ, ಡಿಸಿಎಂ, ಐವರು ಮಂತ್ರಿಗಳು, ಮೂವರು ಎಂಪಿಗಳು, ರಾಜ್ಯಸಭಾ ಸದಸ್ಯರು, ಎಂಎಲ್ಸಿಗಳು, 27 ಶಾಸಕರು, 198 ಕಾರ್ಪೊರೇಟರ್‌ಗಳು, ಜಿಲ್ಲಾಧಿಕಾರಿ, ಹತ್ತಾರು ಇಲಾಖೆಗಳ ನೂರಾರು ಅಧಿಕಾರಿಗಳು, ಸಾವಿರಾರು ಸಿಬ್ಬಂದಿ ಇದ್ದರೂ ಬೆಂಗಳೂರನ್ನು ಕೊರೊನಾ ಆಕ್ರಮಣದಿಂದ ರಕ್ಷಿಸಲು ಸಾಧ್ಯವಾಗಿಲ್ಲ. ಎಲ್ಲ ಇದ್ದರೂ ಪರಸ್ಪರರ ನಡುವೆ ಹೊಂದಾಣಿಕೆ ಇಲ್ಲದಿರುವುದೇ ಪರಿಸ್ಥಿತಿ ಹಳಿ ತಪ್ಪಲು ಪ್ರಮುಖ ಕಾರಣ.
ಕೆ.ಆರ್. ಮಾರ್ಕೆಟ್ ಸೀಲ್
ಬೆಂಗಳೂರಿನಲ್ಲಿ ನಾಗಾಲೋಟದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸೋಮವಾರ ತುರ್ತು ಸಭೆ ನಡೆಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು:
– ಬೆಂಗಳೂರಿನ ಕೆಆರ್ ಮಾರ್ಕೆಟ್, ವಿವಿ ಪುರಂ, ಸಿದ್ದಾಪುರ, ಕಲಾಸಿಪಾಳ್ಯ, ಚಾಮರಾಜಪೇಟೆ, ಚಿಕ್ಕಪೇಟೆ 15 ದಿನ ಸೀಲ್‌ಡೌನ್, ಎಲ್ಲಾ ವ್ಯಾಪಾರ ವಹಿವಾಟುಗಳು ಬಂದ್
– ಬೆಂಗಳೂರು ಸೇರಿದಂತೆ ಕೊರೊನಾ ವ್ಯಾಪಿಸುತ್ತಿರುವ ಹಲವು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ
– ಮುಂದಿನ 15 ದಿನ ಅತ್ಯಂತ ಮಹತ್ವದ್ದಾಗಿದ್ದು, ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸುವುದು
ಕ್ವಾರಂಟೈನ್ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ಸರಕಾರ ನಿಗದಿ ಮಾಡಿದ ದರದಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕಲ್ಪಿಸಲು ಕ್ರಮ
– ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ಫಿವರ್ ಕ್ಲಿನಿಕ್
– ಕ್ವಾರಂಟೈನ್ ಉಲ್ಲಂಘನೆ, ಸೋಂಕಿತರ ಪತ್ತೆಗೆ ಬೂತ್ ಮಟ್ಟದ ಅಧಿಕಾರಿಗಳ ತಂಡ
ಬಿಬಿಎಂಪಿಗೆ ಯಡಿಯೂರಪ್ಪ ಖಡಕ್ ವಾರ್ನಿಂಗ್
ರಾಜಧಾನಿಯಲ್ಲಿ ಸೋಂಕು ನಿಯಂತ್ರಣ ತಪ್ಪಿದ್ದರಿಂದ ಸಿಟ್ಟಿಗೆದ್ದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬಿಬಿಎಂಪಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಪಾದರಾಯನಪುರಕ್ಕೆ ಸೀಮಿತವಾಗಿದ್ದ ಸೋಂಕು ಎಲ್ಲ ವಾರ್ಡ್‌ಗಳಿಗೆ ಹರಡಲು ಬಿಬಿಎಂಪಿ ನಿಷ್ಕಾಳಜಿಯೇ ಕಾರಣವೆಂದು ಸೋಮವಾರ ನಡೆದ ಸಭೆಯಲ್ಲಿ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ‘ಕರ್ನಾಟಕ ಮಾದರಿ’ ಅಳವಡಿಸಿಕೊಳ್ಳಲು ಕೇಂದ್ರ ಸರಕಾರ ಇತರ ರಾಜ್ಯಗಳಿಗೆ ಸೂಚಿಸಿದೆ. ಬೆಂಗಳೂರು ಸುರಕ್ಷಿತ ಎಂದು ಗುರುತಿಸಲಾಗಿತ್ತು. ಅಂಥ ರಾಜಧಾನಿಗೆ ಈ ಸ್ಥಿತಿ ಬಂದಿರುವುದು ಸಿಎಂ ಅವರನ್ನು ಕೆರಳಿಸಿದೆ. ಜನರಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಿ ಎನ್ನುವುದಷ್ಟೇ ಅಲ್ಲ, ಬಿಬಿಎಂಪಿಯೂ ತನ್ನ ಹೊಣೆಗಾರಿಕೆ ನಿರ್ವಹಿಸಬೇಕು ಎಂದಿರುವ ಅವರು ಲೋಪವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕೇಳುವವರೇ ಇಲ್ಲ
– ಸಮುದಾಯದ ಹಂತಕ್ಕೆ
– ಸೋಂಕು ತಲುಪಿದರೂ ಮುಂದುವರಿದ ನಿರ್ಲಕ್ಷ್ಯ.
– ರಾಂಡಮ್ ಪರೀಕ್ಷೆ ಇಲ್ಲ, ಜನರೇ ಸ್ವಯಂ ಪರೀಕ್ಷೆಗೆ ಮುಂದಾದರೂ ಸ್ಪಂದನೆ ಇಲ್ಲ.
– ಪಾಸಿಟಿವ್ ಕೇಸ್ ಬಂದರೂ ಆಸ್ಪತ್ರೆಗೆ ದಾಖಲಿಸಿ, ತಕ್ಷಣದ ಚಿಕಿತ್ಸೆ ನೀಡಲಾಗುತ್ತಿಲ್ಲ.
– ಹೃದಯಾಘಾತ ಮತ್ತು ತೀವ್ರ ಉಸಿರಾಟದ ಸಮಸ್ಯೆ ಎದುರಾದರೆ ಕೇಳೋರೇ ಇಲ್ಲ.
ಬಿಬಿಎಂಪಿ ನಿರ್ಲಕ್ಷ್ಯ
– ಪರೀಕ್ಷಾ ಕೇಂದ್ರಗಳಿಂದ ವರದಿ ಪಡೆದು ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ನಡೆಯುತ್ತಿಲ್ಲ.
– ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿ ಇದೆ ಎಂಬ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ.
– ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಸರಿಯಾಗಿಲ್ಲ, ನುರಿತ ಸಿಬ್ಬಂದಿ ಇಲ್ಲ. ಶವಸಂಸ್ಕಾರಕ್ಕೆ ಪ್ಲ್ಯಾನ್ ಇಲ್ಲ.
– ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಆಹಾರದ ವ್ಯವಸ್ಥೆ ಸರಿಯಾಗಿಲ್ಲ.