ಭಾರತದ ಕುರಿತು ಅಮೆರಿಕದ ಮಾಧ್ಯಮಗಳಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಎಲ್ಲರೂ ತೆಗೆದುಕೊಳ್ಳುತ್ತಿರುವ ಆಸಕ್ತಿ ಕಂಡು ನಿಜಕ್ಕೂ ಎಷ್ಟು ಖುಷಿ ಆಯಿತು ಗೊತ್ತೇ… ಹಾಗಿದ್ದರೆ ಅದನ್ನು ನಾವು ಇಂಡಿಯಾ ಶೈನಿಂಗ್ ಅಂತ ಕರೆಯೋಣವೇ?
ಇತ್ತೀಚಿನ ವರ್ಷಗಳ ಉದಾಹರಣೆ ಮುಂದಿಟ್ಟುಕೊಂಡು ಹೇಳುವುದಾದರೆ, ಅಮೆರಿಕ ಮಾಧ್ಯಮಗಳಲ್ಲಿ ಒಸಾಮ ಬಿನ್ ಲಾಡೆನ್‍ಗೆ ಸಿಕ್ಕಷ್ಟು ಮಹತ್ವ ಬೇರೆ ಮತ್ತೊಬ್ಬರಿಗೆ ಸಿಕ್ಕಿರಲಿಲ್ಲ. 2001ರ ನವೆಂಬರ್ 11ರಂದು ವಿಶ್ವವಾಣಿಜ್ಯ ಕೇಂದ್ರದ ಮೇಲೆ ಅಲ್‍ಕೈದಾ ಮುಖ್ಯಸ್ಥ ಲಾಡೆನ್‍ನ ಭಂಟರು ನಡೆಸಿದ ಭಯೋತ್ಪಾದಕ ದಾಳಿ ಅಮೆರಿಕದವರಲ್ಲಿ ಸೃಷ್ಟಿಸಿದ ಭೀತಿಯ ಪರಿಣಾಮ ಅಂಥದ್ದು. ಲಾಡೆನ್ ನಂತರ ಅಮೆರಿಕನ್ನರನ್ನು ಅದೇ ರೀತಿ ಬೆಚ್ಚಿ ಬೀಳಿಸಿದ್ದು ತೀರಾ ಇತ್ತೀಚೆಗೆ ಕಾಣಿಸಿಕೊಂಡ ಲೈಬೀರಿಯಾ ಮೂಲದ ಎಬೋಲಾ ಸೋಂಕು. ಎಬೋಲಾ ಎಂದರೆ ಸಾಕು ಇಡೀ ಅಮೆರಿಕ ರಾತ್ರಿಯೆಲ್ಲ ಎದ್ದು ಕುಳಿತುಕೊಳ್ಳುತ್ತದೆ. ಹೀಗಾಗಿ ಎಬೋಲಾ ಕುರಿತು ವರದಿ ಮಾಡುವ ವಿಷಯದಲ್ಲಿ ಅಲ್ಲಿನ ಮಾಧ್ಯಮಗಳ ನಡುವೆ ಭಯಂಕರ ಪೈಪೆÇೀಟಿಯೇ ನಡೆಯುತ್ತಿದೆ. ಇವೆರಡೂ ನಕಾರಾತ್ಮಕ ವಿಷಯಗಳು ಅಂತಿಟ್ಟುಕೊಳ್ಳೋಣ. ಅವನ್ನು ಹೊರತುಪಡಿಸಿ ಹೇಳುವುದಾದರೆ, ಒಂದಿಲ್ಲೊಂದು ಕಾರಣಕ್ಕೆ ಅಮೆರಿಕ ಮಾಧ್ಯಮಗಳಲ್ಲಿ ಅತಿಹೆಚ್ಚು ಜಾಗ ಪಡೆದುಕೊಳ್ಳುತ್ತಿರುವವರು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಮೋದಿ ಸರ್ಕಾರದ ಕಾರ್ಯಕ್ರಮಗಳು ಅಂತ ಅಮೆರಿಕನ್ನರೇ ಹೇಳುತ್ತಾರೆ. ಎಷ್ಟೆಂದರೆ ಈಗ ಅಲ್ಲಿ ಅಧ್ಯಕ್ಷ ಒಬಾಮಗಿಂತಲೂ ಮೋದಿ ಕುರಿತೇ ಜನರು ಮತ್ತು ಮಾಧ್ಯಮಗಳಿಗೆ ಕುತೂಹಲ ಜಾಸ್ತಿ.
ಅಮೆರಿಕ ಪ್ರವಾಸ ಮುಗಿಸಿ ವಾಪಸಾದ ನಂತರದಲ್ಲಿ ಅಲ್ಲಿನ ಮಾಧ್ಯಮಗಳಿಗೆ ಮೋದಿಯೇ ಟಿಆರ್‍ಪಿ ವಸ್ತು. ಎಷ್ಟೆಂದರೆ ಒಂದೂವರೆ ತಿಂಗಳಾದರೂ ಮೋದಿ ಭೇಟಿಯ ಬಿಸಿ ಇನ್ನೂ ಆರಿಲ್ಲ. ಹೀಗಾಗಿ ಮುಂಚೂಣಿ ದಿನಪತ್ರಿಕೆಗಳಿಂದ ಹಿಡಿದು ಟಿವಿ ಚಾನೆಲ್ಲುಗಳವರೆಗೆ ಮೋದಿ ಮತ್ತು ಮೋದಿ ಸರ್ಕಾರದ ಕಾರ್ಯಕ್ರಮಗಳ ಕುರಿತು ದಿನವೂ ಒಂದಲ್ಲ ಒಂದು ಸುದ್ದಿ ಇರಲೇಬೇಕು ಎಂಬಂತಾಗಿದೆ ಹೋಗಿದೆ.
ಅಮೆರಿಕದಲ್ಲಿ ಪತ್ರಿಕೆಗಳಿಗೆ ಬರವಿಲ್ಲ, ಸಾವಿರಾರಿವೆ. ವಾರಪತ್ರಿಕೆ ಮತ್ತು ಮಾಸಿಕಗಳನ್ನು ಲೆಕ್ಕಹಾಕಿದರೆ ಅವುಗಳ ಸಂಖ್ಯೆ ನಾಲ್ಕು ಸಾವಿರದ ಗಡಿ ದಾಟುತ್ತದೆ ಅಂತ ಹೇಳುತ್ತಾರೆ. ಪತ್ರಿಕೆಗಳ ಪೈಕಿ ಅತಿಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವುದು `ಯುಎಸ್‍ಎ ಟುಡೆ’ ದಿನಪತ್ರಿಕೆ. ಆ ಪತ್ರಿಕೆಯಲ್ಲಿ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಕುರಿತು ಪ್ರಕಟವಾದ ವಿಶೇಷ ವರದಿಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ತನ್ನ ಗಡಿಯುದ್ದಕ್ಕೂ ಸದಾ ಕಿರುಕುಳ ನೀಡುತ್ತಿರುವ ಚೀನಾಕ್ಕೆ ಪಾಠ ಕಲಿಸಲು ಆ ದೇಶದ ಒಂದೊಂದೇ ಉತ್ಪನ್ನಗಳನ್ನು ನಿರ್ಬಂಧಿಸುವ ಮೂಲಕ ಗಡಿ ತಂಟೆ ನಿಯಂತ್ರಣಕ್ಕೆ ಭಾರತ ಹೊಸ ಉಪಾಯ ಕಂಡುಕೊಂಡಿದೆ ಎಂಬುದು ಆ ವರದಿಯ ಸಾರವಾಗಿತ್ತು. ದಸರಾ ಉತ್ಸವಕ್ಕೆ ಕೆಲ ದಿನ ಮೊದಲು ಚೀನಾದ ಪಟಾಕಿ ಭಾರತದ ಮಾರುಕಟ್ಟೆ ಪ್ರವೇಶಿಸುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು ಗೊತ್ತೇ ಇದೆ. ಅದು ಭಾರತದ ಮಾಧ್ಯಮಗಳಲ್ಲಿ ಅಂಥ ದೊಡ್ಡ ಸುದ್ದಿಯಾಗಲಿಲ್ಲ, ಆ ವಿಚಾರ ಬೇರೆ. ಆ ನಂತರ ದೀಪಾವಳಿಗೆ ಕೆಲ ದಿನ ಮೊದಲು ಚೀನಾದ ಚಾಕಲೇಟ್ ಮತ್ತು ಹಾಲಿನ ಉತ್ಪನ್ನಗಳಿಗೆ ಭಾರತದ ಬಾಗಿಲನ್ನು ಬಂದ್ ಮಾಡುವ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಂಡಿತು. ಗುಣಮಟ್ಟದ ಕೊರತೆಯಿಂದಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಪುಟ್ಟದೊಂದು ವಿವರಣೆ ಭಾರತದ ಮಾಧ್ಯಮಗಳಲ್ಲಿ ಪ್ರಕಟವಾಯಿತೇ ಹೊರತು ಅದಕ್ಕಿಂತ ಹೆಚ್ಚು ಚರ್ಚೆ ನಡೆಯಲಿಲ್ಲ.
ಆದರೆ ಅಮೆರಿಕದ ಅಗ್ರಗಣ್ಯ ಪತ್ರಿಕೆಯೊಂದು ಭಾರತ ಸರ್ಕಾರದ ಈ ನಿಲುವನ್ನು ಬೇರೆಯದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿದೆ. ಚೀನಾದ ಸೈನಿಕರು ಅರುಣಾಚಲ ಮತ್ತು ಲಡಾಖ್‍ನಲ್ಲಿ ಬಹಳ ಕಾಲದಿಂದ ಭಾರತಕ್ಕೆ ಕಿರುಕುಳ ಕೊಡುತ್ತಲೇ ಬಂದಿದ್ದಾರೆ. ಅದು ಇತ್ತೀಚಿನ ದಿನಗಳಲ್ಲಿ ಮಿತಿಮೀರಿತ್ತು. ಅದೆಲ್ಲವನ್ನೂ ನುಂಗಿಕೊಂಡು ಭಾರತ ಸರ್ಕಾರ ಚೀನಾ ಅಧ್ಯಕ್ಷ ಜಿನ್‍ಪಿಂಗ್ ಅವರಿಗೆ ಕೆಂಪಹಾಸಿನ ಸ್ವಾಗತ ನೀಡಿತು. ಸುಖಾಸುಮ್ಮನೆ ಗಡಿಯಲ್ಲಿ ತಂಟೆಗೆ ಬರುವುದನ್ನು ಬದಿಗಿಟ್ಟು, ವ್ಯಾಪಾರ ವಹಿವಾಟು ಸಂಬಂಧ ಸುಧಾರಿಸಿಕೊಳ್ಳುವ ಕಡೆ ಹೆಚ್ಚಿನ ಗಮನ ಕೊಡುವ ಕುರಿತು ಈ ಭೇಟಿ ವೇಳೆ ಉಭಯ ರಾಷ್ಟ್ರಗಳ ನಡುವೆ ಸಹಮತವೂ ಏರ್ಪಟ್ಟಿತು. ಅಷ್ಟಾದರೂ ಜಿನ್‍ಪಿಂಗ್ ಭಾರತ ಪ್ರವಾಸದಲ್ಲಿದ್ದಾಗಲೇ ಚೀನಾ ಸೈನಿಕರು ಮೇಲಿಂದ ಮೇಲೆ ಗಡಿ ಉಲ್ಲಂಘನೆ ಮಾಡಿ ಬಿಗುವಿನ ಸನ್ನಿವೇಶ ಸೃಷ್ಟಿಸಿದರು. ಆದರೂ ಭಾರತ ಮೌನ ಮುರಿಯಲಿಲ್ಲ. ಅಧ್ಯಕ್ಷರ ಭಾರತ ಪ್ರವಾಸದ ಎರಡು ತಿಂಗಳ ಬಳಿಕವೂ ಗಡಿಯಲ್ಲಿ ತಂಟೆ ನಿಲ್ಲದೇ ಹೋದಾಗ ಚೀನಾಕ್ಕೆ ಬಿಸಿಮುಟ್ಟಿಸುವ ದೃಷ್ಟಿಯಿಂದ ಆ ದೇಶದ ಉತ್ಪನ್ನಗಳನ್ನು ನಿಷೇಧಿಸಿ, ಚೀನಾದ ಆಟಕ್ಕೆ ವ್ಯೂಹಾತ್ಮಕವಾಗಿ ಬ್ರೇಕ್ ಹಾಕಲು ಮೋದಿ ಸರ್ಕಾರ ಮುಂದಾಗಿದೆ ಎಂದು `ಯುಎಸ್‍ಎ ಟುಡೆ’ ವಿಶ್ಲೇಷಿಸಿತ್ತು. ಭಾರತ ಮತ್ತು ನೆರೆಯ ರಾಷ್ಟ್ರಗಳ ಸಂಬಂಧಗಳ ವಿಷಯದಲ್ಲಿ ಅಮೆರಿಕ ಮಾಧ್ಯಮಗಳು ಎಷ್ಟು ಸೂಕ್ಷ್ಮನಿಗಾ ಇಟ್ಟಿವೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ.
ಸೊಕ್ಕಿದ ಚೀನಾವನ್ನು ಬಗ್ಗಿಸಲು ಬಹುಶಃ ಭಾರತದ ಪಾಲಿಗೆ ಸದ್ಯಕ್ಕೆ ಇದಕ್ಕಿಂತ ಬೇರೆ ಒಳ್ಳೆಯ ಉಪಾಯ ಇದೆ ಅಂತ ಅನ್ನಿಸುವುದಿಲ್ಲ. ಏಕೆಂದರೆ ಆರ್ಥಿಕವಾಗಿ, ಔದ್ಯೋಗಿಕವಾಗಿ, ಕೈಗಾರಿಕಾ ಬೆಳವಣಿಗೆ ದೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಚೀನಾ, ಭಾರತ ಸರ್ಕಾರದ ಈ ಅನಿರೀಕ್ಷಿತ ನಿರ್ಧಾರದಿಂದ ಬೆಚ್ಚಿಬಿದ್ದಿರಲೂ ಸಾಕು. ಕಾರಣ ಇಷ್ಟೆ, ನೂರಿಪ್ಪತ್ತೈದು ಕೋಟಿ ಜನಸಂಖ್ಯೆ ಹೊಂದಿರುವ ಭಾರತ, ಚೀನಾದ ಉತ್ಪನ್ನಗಳಿಗೆ ಬಹುದೊಡ್ಡ ಮಾರುಕಟ್ಟೆ. ಹೀಗಾಗಿ ಈ ನಿರ್ಬಂಧವನ್ನು ಅರಗಿಸಿಕೊಳ್ಳುವುದು ಚೀನಾಕ್ಕೆ ಅಷ್ಟು ಸುಲಭವಲ್ಲ. ಅದೇ ಕಾರಣಕ್ಕೆ ಭಾರತ ಒಂದು `ಟೆಸ್ಟ್ ಡೋಸ್’ ನೀಡಿದೆ. ಚೀನಾ ಉತ್ಪನ್ನಗಳನ್ನು ನಿಷೇಧಿಸಿದ್ದರಿಂದ ಭಾರತ ಕಳೆದುಕೊಳ್ಳುವುದೇನೂ ಇಲ್ಲ. ಏಕೆಂದರೆ ಇಲ್ಲಿಯವರೆಗೂ ಭಾರತದ ಮಾರುಕಟ್ಟೆಯನ್ನು ಮನಸೋಇಚ್ಛೆ ಬಳಸಿಕೊಳ್ಳುವುದರ ಜತೆಗೆ ಭಾರತದ ಉತ್ಪನ್ನಗಳು ತನ್ನ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಒಂದಲ್ಲ ಒಂದು ಕುಂಟುನೆಪ ಮುಂದೆ ಮಾಡಿ, ಕಾಯ್ದೆಕಟ್ಟಳೆ ಹೆಳೆ ಹೇಳಿ ಅಡ್ಡಿಪಡಿಸುವ ಚಾಳಿಯನ್ನೇ ಚೀನಾ ಅನುಸರಿಸಿತ್ತು. ಚೀನಾದ ಉತ್ಪನ್ನಗಳು ಭಾರತ ಮಾರುಕಟ್ಟೆಯನ್ನು ಸುಲಭದಲ್ಲಿ ಪ್ರವೇಶಿಸಬಹುದಿತ್ತು. ಆದರೆ ಭಾರತದ ಕಂಪನಿಗಳು ಚೀನಾದಲ್ಲಿ ವಹಿವಾಟು ನಡೆಸಲು, ಉತ್ಪನ್ನಗಳನ್ನು ರಫ್ತು ಮಾಡಲು ವರ್ಷಾನುಗಟ್ಟಲೆ ಪರದಾಡಿದರೂ ಸಾಧ್ಯವಾಗುತ್ತಿರಲಿಲ್ಲ. ಇದನ್ನೆಲ್ಲ ಗಮನಿಸಿದರೆ ಈಗ ಭಾರತ ಸರ್ಕಾರ ತೆಗೆದುಕೊಂಡ ನಿಲುವು ಸರಿಯಾಗಿದೆ ಎಂಬುದು `ಯುಎಸ್‍ಎ ಟುಡೆ’ ವರದಿಯ ತಾತ್ಪರ್ಯವಾಗಿತ್ತು. ವಿಷಯ ಹೌದು ತಾನೆ?
ಇದರೊಂದಿಗೆ, ಮುಂಬರುವ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ಮತ್ತು ವಿಯೆಟ್ನಾಂಗೆ ಯುದ್ಧ ಸಾಮಗ್ರಿ ಸರಬರಾಜು ಮಾಡುವ ಸಂಬಂಧ ಉಭಯ ದೇಶಗಳ ನಡುವೆ ಆಗಿರುವ ಜಂಟಿ ಒಪ್ಪಂದ ಸಹ ಅಮೆರಿಕ ಮಾಧ್ಯಮಗಳಿಗೆ ಮುಖಪುಟ ಸುದ್ದಿ. ಕಾಶ್ಮೀರದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಪ್ರಧಾನಿ ಮೋದಿ, ಅಲ್ಲಿನ ವಿಧಾನಸಭಾ ಚುನಾವಣೆ ಗೆಲ್ಲುವ ಉಮೇದಿನಲ್ಲಿದ್ದಾರೆಂಬುದು `ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ವರದಿಗೆ ಸರಕು. ಮೇಲ್ನೋಟಕ್ಕೆ ಮೋದಿಯನ್ನು ಕಟಕಿಯಾಡಿದಂತೆ ಕಂಡರೂ, ಆರು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡದ್ದು, ಪ್ರಧಾನಿ ಮೋದಿ ಬೇರೆ ಬೇರೆ ಕಾರ್ಯಕ್ರಮಗಳ ನೆಪದಲ್ಲಿ ಆರು ತಿಂಗಳಲ್ಲಿ ಐದಾರು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಮಳೆ, ಚಳಿಯೆನ್ನದೆ ಗಡಿಕಾಯುವ ಸೈನಿಕರಲ್ಲಿ ನೈತಿಕ ಸ್ಥೈರ್ಯ ತುಂಬಿದ್ದು, ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ತಕ್ಷಣ ಧಾವಿಸಿ ಸಾವಿರ ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದು, ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಸಂಪೂರ್ಣ ಅಲಕ್ಷೃ ಮಾಡಿ ಮೂಲೆಗುಂಪು ಮಾಡಿದ್ದು ಇತ್ಯಾದಿಗಳೆಲ್ಲವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಮೋದಿ ಲೆಕ್ಕಾಚಾರದಂತೆ ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಭಯೋತ್ಪಾದನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ಮಹತ್ವದ ಘಟ್ಟ ತಲುಪಿದಂತಾಗುತ್ತದೆ ಎಂದು ಆ ವರದಿಯಲ್ಲಿ ಷರಾ ಬರೆಯಲಾಗಿದೆ. ಈ ವಾದವನ್ನು ಅಲ್ಲಗಳೆಯುವುದು ಹೇಗೆ?
ವಿಯೆಟ್ನಾಂ ಪ್ರಧಾನಿಯ ಭಾರತ ಭೇಟಿಯ ವೇಳೆ, ಅಲ್ಲಿನ ನೌಕಾಪಡೆಗೆ ಯುದ್ಧನೌಕೆ ಸರಬರಾಜು ಮಾಡುವುದಾಗಿ ಭಾರತ ಘೋಷಣೆ ಮಾಡುವ ಮೂಲಕ ಚೀನಾಕ್ಕೆ ಭರ್ಜರಿ ಟಾಂಗ್ ಕೊಟ್ಟಿದೆ ಎಂದು ಅಮೆರಿಕದ ಇನ್ನೊಂದು ಪ್ರತಿಷ್ಠಿತ ಪತ್ರಿಕೆ `ವಾಲ್‍ಸ್ಟ್ರೀಟ್ ಜರ್ನಲ್’ ಹೇಳಿದೆ. ವಿಯೆಟ್ನಾಂ ಮಿಲಿಟರಿ ಆಧುನೀಕರಣಕ್ಕೆ ಬದ್ಧ ಎಂದಿರುವುದು, ಆ ದೇಶಕ್ಕೆ ಬ್ರಹ್ಮೋಸ್ ಕ್ಷಿಪಣಿ ಒದಗಿಸುವುದಕ್ಕೂ ಭಾರತ ಸಿದ್ಧ ಎಂಬುದರ ಮುನ್ಸೂಚನೆ ಎಂದು `ವಾಲ್‍ಸ್ಟ್ರೀಟ್ ಜರ್ನಲ್’ ಊಹಿಸಿದೆ. ಅದೇ ರೀತಿ ವಿಯೆಟ್ನಾಂ ಸೈನಿಕರಿಗೆ ಸಬ್‍ಮರಿನ್ ತರಬೇತಿ ನೀಡುವ ಭಾರತ, ಮುಂದೆ ಆ ದೇಶದ ಪೈಲಟ್‍ಗಳಿಗೆ ಸುಖೋಯ್ ಯುದ್ಧವಿಮಾನ ಚಾಲನಾ ತರಬೇತಿಯನ್ನೂ ಕೊಡಬಹುದು. ನಾಗರಿಕ ಪರಮಾಣು ತಂತ್ರಜ್ಞಾನವನ್ನು ವಿಯೆಟ್ನಾಂ ಜತೆ ಹಂಚಿಕೊಳ್ಳಬಹುದು. ಜತೆಗೆ 200 ಮೆಗಾವಾಟ್ ಸಾಮಥ್ರ್ಯದ ಪರಮಾಣು ಸ್ಥಾವರ ಸ್ಥಾಪನೆಗೂ ಸಹಕರಿಸಬಹುದು. ವಿಯೆಟ್ನಾಂಗೆ ಬ್ರಹ್ಮೋಸ್ ಕ್ಷಿಪಣಿ ಒದಗಿಸುವ ಉದ್ದೇಶದಿಂದಲೇ ಕ್ಷಿಪಣಿ ತಂತ್ರಜ್ಞಾನ ಪ್ರಸರಣ ನಿಯಂತ್ರಣ ಒಪ್ಪಂದಕ್ಕೆ ಸಹಿ ಹಾಕಲು ಭಾರತ ವಿಳಂಬ ಮಾಡುತ್ತಿದೆ ಅಂತೆಲ್ಲ ಆ ಪತ್ರಿಕಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಯೆಟ್ನಾಂ ಪ್ರಧಾನಿ ಜತೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಟ್ವೀಟ್ ಮಾಡಿದ ಮೋದಿ, ಭಾರತ ಏಷ್ಯಾ ಪೆಸಿಫಿಕ್ ವಲಯದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತದೆ ಎಂದಿದ್ದನ್ನೂ ಇಲ್ಲಿನ ಪತ್ರಿಕೆಗಳು ಪ್ರಮುಖವಾಗಿ ಗಮನಿಸಿವೆ. ಭಾರತ ಈಗಾಗಲೇ ಜಪಾನ್ ಮತ್ತು ಅಮೆರಿಕದೊಂದಿಗೆ ತ್ರಿಪಕ್ಷೀಯ ಒಡಂಬಡಿಕೆ ಮಾಡಿಕೊಂಡಿದೆ. ಇದೀಗ ವಿಯೆಟ್ನಾಂ, ಭಾರತ ಮತ್ತು ಜಪಾನ್ ಜತೆಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಷರಾ ಹಾಕಿದೆ. ಚೀನಾ ತನ್ನ ಭೂ ಮತ್ತು ಜಲಪ್ರದೇಶವನ್ನು ಅತಿಕ್ರಮಿಸಿಕೊಂಡಿರುವುದರಿಂದ ಸತತ ಕಿರುಕುಳ ಅನುಭವಿಸುತ್ತಿರುವ ವಿಯೆಟ್ನಾಂ, ಭಾರತ ತನ್ನ ಪಾಲಿನ ಆಪದ್ಬಾಂಧವನೆಂದು ಭಾವಿಸುವುದು ಸಹಜ ಎಂದು ವಿಶ್ಲೇಷಿಸಲಾಗಿದೆ. ಇದಕ್ಕಿಂತ ಅಚ್ಚರಿ ಮೂಡಿಸಿದ ಬೇರೊಂದು ಸಂಗತಿ ಇದೆ. ಅಮೆರಿಕ ವಿದೇಶಾಂಗ ಇಲಾಖೆ ಹಮ್ಮಿಕೊಂಡಿರುವ `ನಾಯಕತ್ವ ವಿನಿಮಯ ಕಾರ್ಯಕ್ರಮ’ದಲ್ಲಿ ಭಾಗವಹಿಸಿದ ದಕ್ಷಿಣ ಏಷ್ಯಾ ದೇಶಗಳ ಪ್ರತಿನಿಧಿಗಳು ಹಾಗೂ ಅಮೆರಿಕದ ಅಂತಾರಾಷ್ಟ್ರೀಯ ವ್ಯೂಹಾತ್ಮಕ ಅಧ್ಯಯನ ಕೇಂದ್ರದ ಮುಖ್ಯಸ್ಥ ರಿಕ್ ರುಸ್ಸೋ ಹಾಗೂ ಅಮೆರಿಕ ಸರ್ಕಾರದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಭಾಗದ ಡೆಪ್ಯುಟಿ ಸೆಕ್ರೆಟರಿ ಐಲಿನ್ ಒ ಕನರ್ ನಡುವೆ ವಿದೇಶಾಂಗ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಮುಖಾಮುಖಿ ಚರ್ಚೆ ನಡೆಯಿತು. ಆ ವೇಳೆ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮುಂತಾದ ಎಲ್ಲ ದೇಶಗಳ ಪ್ರತಿನಿಧಿಗಳು ಜತೆಯಲ್ಲಿದ್ದೆವು. ವಿಶೇಷ ಅಂದರೆ ರುಸ್ಸೋ ಮತ್ತು ಕನರ್ ಇಬ್ಬರೂ, ಒಂದು ಗಂಟೆಯ ಚರ್ಚೆಯ ವೇಳೆ ಮುಕ್ಕಾಲು ಗಂಟೆಗೂ ಹೆಚ್ಚು ಕಾಲವನ್ನು ಬದಲಾಗುತ್ತಿರುವ ಭಾರತದ ಆರ್ಥಿಕ ನೀತಿ, ಮೋದಿ ಸರ್ಕಾರದ `ಮೇಕ್ ಇನ್ ಇಂಡಿಯಾ’ ಘೋಷಣೆ, ಮೋದಿ ಅಮೆರಿಕ ಭೇಟಿ, ಭಾರತದ ಬೇರೆಬೇರೆ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುತ್ತಿರುವ ರೀತಿ, ಭಾರತ ಭಯೋತ್ಪಾದನೆ ದಮನಕ್ಕೆ ಮಾಡಿರುವ ಸಂಕಲ್ಪ ಇವುಗಳ ಕುರಿತೇ ಮಾತನಾಡಿದರು. ಇದರಿಂದಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರತಿನಿಧಿಗಳು ಇರುಸುಮುರುಸು ಅನುಭವಿಸಿದ್ದು ಅವರ ಮುಖಭಾವದಲ್ಲಿಯೇ ಗೊತ್ತಾಗುತ್ತಿತ್ತು. ಭಾರತದ ಕುರಿತು ಅಮೆರಿಕದಂತಹ ಬಲಾಢ್ಯ ದೇಶದ ಆಸಕ್ತಿಯನ್ನು ನಾವು ಹೇಗೆ ಸ್ವೀಕರಿಸೋಣ? ನಾವಿದನ್ನು `ಇಂಡಿಯಾ ಶೈನಿಂಗ್’ ಅಂತ ಕರೆದರೆ ಹೇಗೆ?