ರಿಯಾಲ್ಟಿ ಕ್ಷೇತ್ರಕ್ಕೆ ರಿಯಲ್ ನೆರವು – ಕ್ರಾಂತಿಕಾರಿ ಸುಧಾರಣೆಗಳನ್ನು ನಿರೀಕ್ಷಿಸಿ ಎಂದ ಕಂದಾಯ ಸಚಿವ ಆರ್ ಅಶೋಕ್

ಬೆಂಗಳೂರು: ಕೊರೊನಾ ಸಂಕಷ್ಟದಿಂದ ಜನಜೀವನ ಪುಟಿದೇಳಲೇಬೇಕು. ರಾಜ್ಯದಲ್ಲಿ ತಕ್ಷಣಕ್ಕೆ ಚೇತರಿಕೆ ಕಾಣಬಲ್ಲ ಕ್ಷೇತ್ರಗಳಲ್ಲಿ ಒಂದಾದ ರಿಯಾಲ್ಟಿ ಕ್ಷೇತ್ರದ ಪುನಶ್ಚೇತನಕ್ಕೆ ಸರ್ವ ನೆರವು ನೀಡಲು ಸರಕಾರ ಬದ್ಧವಾಗಿದೆ. ಈಗಾಗಲೇ ಹಲವು ಕ್ರಮಗಳನ್ನು ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳು ಜಾರಿಯಾಗಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ವಿಜಯ ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ‘ಕರುನಾಡ ಕಟ್ಟೋಣ ಬನ್ನಿ’ ಅಭಿಯಾನದಡಿ ನಡೆದ ‘ರಿಯಾಲ್ಟಿ ಕ್ಷೇತ್ರದ ಪುನಶ್ಚೇತನ: ಚಿಂತನ ಮಂಥನ’ ಡಿಜಿಟಲ್ ಸಂವಾದದಲ್ಲಿ ಮಾತನಾಡಿದರು. ಬೆಂಗಳೂರಿನ ಕ್ರೆಡೈ ಅಧ್ಯಕ್ಷ ಕಿಶೋರ್ ಜೈನ್ ಮತ್ತು ಚುನಾಯಿತ ಆಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ ಅವರು ಕಚೇರಿಯಲ್ಲೇ ಉಪಸ್ಥಿತರಿದ್ದು, ಕ್ಷೇತ್ರದ ಬೇಡಿಕೆಗಳ ಬಗ್ಗೆ ಸಚಿವರ ಗಮನ ಸೆಳೆದರೆ, ನಾನಾ ನಗರಗಳಿಂದ 8 ತಜ್ಞರು ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಭೂಸುಧಾರಣೆ ಕಾಯಿದೆಯ ತಿದ್ದುಪಡಿಯ ಕ್ರಾಂತಿಕಾರಿ ತೀರ್ಮಾನದ ಮೂಲಕ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಸಚಿವ ಅಶೋಕ್ ಅವರು ರಿಯಾಲ್ಟಿ ಕ್ಷೇತ್ರದಲ್ಲೂ ಇದೇ ಮಾದರಿಯ ಕ್ರಾಂತಿ ನಡೆಯಲಿದೆ ಎಂದರು. ರಾಜ್ಯದಲ್ಲಿ 35 ಲಕ್ಷ ರೂ. ಒಳಗಿನ ಮನೆಗಳಿಗೆ ನೋಂದಣಿ ಶುಲ್ಕವನ್ನು ಈಗಿರುವ 5.5%ದಿಂದ 2.5%ಗೆ ಇಳಿಸಲು ನಿರ್ಧರಿಸಲಾಗಿದ್ದು, ಶೀಘ್ರವೇ ರಾಜ್ಯಪತ್ರ ಬಿಡುಗಡೆಯಾಗಲಿದೆ ಎಂದು ಸಚಿವರು ತಿಳಿಸಿದರು.

ಭೂ ಸುಧಾರಣೆಯಿಂದ ಭಾರಿ ಕ್ರಾಂತಿ 

ರಾಜ್ಯದಲ್ಲಿ ಭೂ ಖರೀದಿಗೆ ಸಾಕಷ್ಟು ಅಡೆತಡೆಗಳು ಇದ್ದುದರಿಂದ ಹೆಚ್ಚಿನ ಕೈಗಾರಿಕೆಗಳು ಮನಸಿಲ್ಲದಿದ್ದರೂ ಪಕ್ಕದ ರಾಜ್ಯಗಳಿಗೆ ಹೋಗುತ್ತಿದ್ದವು. ಹೊಸೂರು, ಗೌರಿಬಿದನೂರು ಸೇರಿದಂತೆ ಗಡಿ ಭಾಗಧಿದಲ್ಲೇ ಸ್ಥಾಪನೆಯಾಗುವ ಕಾರ್ಖಾನೆಗಳ ಕಾರ್ಮಿಕರು ನಮ್ಮ ರಾಜ್ಯದಲ್ಲೇ ಹೆಚ್ಚಾಗಿ ವಾಸಿಸುತ್ತಾರೆ. ಇದರಿಂದ ಕಂದಾಯ ಪರರಾಜ್ಯಕ್ಕೆ, ಹೊರೆ ನಮ್ಮ ರಾಜ್ಯಕ್ಕೆ ಎಂಬಂತಾಗುತ್ತಿತ್ತು. ಈಗ 108 ಎಕರೆವರೆಗೆ ಜಾಗ ಖರೀದಿಗೆ ಅವಕಾಶ ನೀಡಿದ್ದರಿಂದ ರಾಜ್ಯದಲ್ಲೇ ಕೈಗಾರಿಕೆ ಸ್ಥಾಪನೆಯಾಗಿ ನಮ್ಮವರಿಗೇ ಉದ್ಯೋಗ, ಆದಾಯ, ಸರಕಾರಕ್ಕೆ ಕಂದಾಯ ಸಿಗುವಂತಾಗಲಿದೆ. ಅದಕ್ಕಿಂತಲೂ ಹೆಚ್ಚಾಗಿ ನಮ್ಮ ವಿದ್ಯಾವಂತ ಯುವ ಜನರು ತಂತ್ರಜ್ಞಾನ ಆಧರಿತ ಕೃಷಿ ಮತ್ತು ಅನ್ವಯಿಕ ಕೈಗಾರಿಕೆಗಳ ಸ್ಥಾಪನೆ ಮೂಲಕ ದೊಡ್ಡ ಕ್ರಾಂತಿ ಮಾಡಲು ಅವಕಾಶವಿದೆ ಎಂದರು.

ಅಶೋಕ್ ಹೆಜ್ಜೆಗುರುತು

– ಆರೋಗ್ಯ ಸಚಿವರಾಗಿದ್ದಾಗ ಮಗು ಮತ್ತು ಬಾಣಂತಿಗೆ ಮಡಿಲು ಕಿಟ್

– ಸಾರಿಗೆ ಸಚಿವರಾಗಿದ್ದಾಗ ಹೈಟೆಕ್ ಬಸ್ ಮತ್ತು ಬಸ್ ನಿಲ್ದಾಣ ಸ್ಥಾಪನೆ

– ಗೃಹ ಸಚಿವರಾಗಿದ್ದಾಗ ಎಲ್ಲಿ ಬೇಕಾದರೂ ದೂರು ನೀಡಬಹುದಾದ ಜನಸ್ನೇಹಿ ಪೊಲೀಸ್ ಯೋಜನೆ

– ಕಂದಾಯ ಸಚಿವರಾಗಿ ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಸುವಂತೆ ಕಾಯಿದೆ ತಿದ್ದುಪಡಿ

ಅಕ್ರಮ ಸಕ್ರಮಕ್ಕೆ ಹೊಸ ಕಾಯಿದೆ

ಬೆಂಗಳೂರು ಸೇರಿ ರಾಜ್ಯಾದ್ಯಂತ ಅಕ್ರಮ ನಿರ್ಮಾಣಗಳ ಸಕ್ರಮಕ್ಕೆ ಇರುವ ಕಾನೂನು ತೊಡಕನ್ನು ನಿವಾರಿಸಲು ಕಾಯಿದೆ ತಿದ್ದುಪಡಿ ಮಾಡಲಾಗುವುದು ಎಂದು ಸಚಿವ ಅಶೋಕ ತಿಳಿಸಿದರು. ರಾಜ್ಯದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ತಿಂಗಳೊಳಗೆ ಕಾಯಿದೆ ತಿದ್ದುಪಡಿ ಮಾಡಿ ಕೋರ್ಟ್‌ಗೆ ಮಾಹಿತಿ ನೀಡಲಾಗುವುದು. ಕಂದಾಯ ಭೂಮಿಯಲ್ಲಿ ಮನೆ ಕಟ್ಟಿದವರು, ನಿಗದಿಗಿಂತ ಹೆಚ್ಚು ಮಹಡಿಗಳನ್ನು ಕಟ್ಟಿದವರು ಒಂದೇ ಬಾರಿ ದಂಡ ಕಟ್ಟಿ ಸಕ್ರಮ ಮಾಡಿಕೊಳ್ಳಲು ಸರಕಾರ ಅವಕಾಶ ನೀಡಿದೆ. 2೦*30 ಜಾಗದಲ್ಲಿ ನಡೆದಿರುವ ಅಕ್ರಮಕ್ಕೆ 10% ದಂಡದಿಂದ ಆರಂಭಿಸಿ ಎರಡು ಪಟ್ಟಿನ ವರೆಗೆ ದಂಡ ವಿಧಿಸಲಾಗುತ್ತದೆ. ಈ ಕ್ರಮದಿಂದ ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ ಸೇರಿದಂತೆ ಎಲ್ಲ ಹಂತಗಳಲ್ಲಿ ಕಂದಾಯ ದೊರೆಯಲಿದೆ ಎಂದು ತಿಳಿಸಿದರು.

ಖಾತಾ ಸಮಸ್ಯೆ ಇರಲ್ಲ :  ಇನ್ನು ಮುಂದೆ ಮನೆ ಮಾಲೀಕರಿಗೆ ಖಾತಾ ಬದಲಾವಣೆಯ ಸಮಸ್ಯೆ ಇರುವುದಿಲ್ಲ. ಎಲ್ಲವನ್ನೂ ಸಕ್ರಮ ಮಾಡುವುದರಿಂದ ಈ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದರು.

3 ತಿಂಗಳಲ್ಲಿ ಸರ್ವರ್ ಸಮಸ್ಯೆ ಪರಿಹಾರ

ರಾಜ್ಯದಲ್ಲಿ ಭೂದಾಖಲೆಗಳ ಡಿಜಿಟಲೀಕರಣದಲ್ಲಿ ಹೊಸ ಹೊಸ ಸಮಸ್ಯೆಗಳು ಉದ್ಭವಿಸಿದೆ. ಸರ್ವರ್ ಡೌನ್ ಎನ್ನುವುದು ನಿರಂತರ ಸಮಸ್ಯೆ. ಆದರೆ, ಇದರ ಬಗ್ಗೆ ಕೇಳಿದಾಗಲೆಲ್ಲ ಒಂದು ವಿಭಾಗ ಇನ್ನೊಂದು ವಿಭಾಗದ ಮೇಲೆ ದೂರುವುದೇ ಆಗಿದೆ. ಹೀಗಾಗಿ ತಂತ್ರಜ್ಞಾನದ ಸರ್ವ ವಿಭಾಗಗಳು ಒಂದೇ ಟೀಮ್ ಆಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೂರು ತಿಂಗಳಲ್ಲಿ ಹೊಸ ಸಾಫ್ಟ್‌ವೇರ್‌ಗಳು, ಹೊಸ ಕಂಪ್ಯೂಟರ್‌ಗಳ ಜತೆ ವ್ಯವಸ್ಥೆಯನ್ನು ಸರ್ವ ಸನ್ನದ್ಧ ಗೊಳಿಸಲಾಗುತ್ತದೆ. ಕಾವೇರಿ, ಭೂಮಿ ಸಾಫ್ಟ್‌ವೇರ್‌ಗಳನ್ನು ಜನಸ್ನೇಹಿಗೊಳಿಸಲಾಗುತ್ತದೆ ಎಂದರು ಸಚಿವರು.

ಭರವಸೆ ನುಡಿಗಳು

– ಪ್ರತಿಯೊಂದು ಇಲಾಖೆಯಲ್ಲೂ ಹೊಸ ಕ್ರಾಂತಿ ಮಾಡಿದ್ದೇನೆ. ಇಲ್ಲೂ ಹೊಸತನ ತಂದೇ ತರುತ್ತೇನೆ.

– ಕ್ರಾಂತಿಕಾರಿ ಕ್ರಮಗಳಿಂದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದೇನೆ. ಬೇಸರವಿಲ್ಲ, ನನಗೆ ಜನರೇ ಮುಖ್ಯ.

– ಆಡಳಿತಶಾಹಿಯ ಮೈಂಡ್ಸೆಟ್ ಚೇಂಜ್ ಮಾಡುತ್ತೇನೆ, ಇಲ್ಲವಾದರೆ ಅವರನ್ನೇ ಚೇಂಜ್ ಮಾಡುತ್ತೇನೆ.

ರಿಯಾಲ್ಟಿ ಬೇಡಿಕೆಗಳು

ರಾಜ್ಯದ ಜಿಡಿಪಿಯಲ್ಲಿ 14% ಪಾಲು ಹೊಂದಿರುವ ರಿಯಲ್ ಎಸ್ಟೇಟ್ ಉದ್ಯಮದ ಪುನಶ್ಚೇತನಕ್ಕೆ ಉದ್ಯಮಿಗಳು ತಜ್ಞರು ಮುಂದಿಟ್ಟ ಪ್ರಧಾನ ಪಂಚ ಬೇಡಿಕೆಗಳು

1. ಮುದ್ರಾಂಕ ಶುಲ್ಕ ಇಳಿಸಿ

2. ಮಾರುಕಟ್ಟೆ ಮೌಲ್ಯದ ಸಮಗ್ರೀಕರಣ

3. ಭೂಪರಿವರ್ತನೆ ಸರಳವಾಗಲಿ

4. ನಿರಕ್ಷೇಪಣಾ ಪತ್ರ ಪಡೆಯುವ ಪ್ರಕ್ರಿಯೆ ಸರಳೀಕರಣ

5. ಸಿಮೆಂಟ್, ನಿರ್ಮಾಣ ಸಾಮಗ್ರಿ ಬೆಲೆ ನಿಯಂತ್ರಿಸಿ

ನಿರ್ಮಾಣಕ್ಕೆ ಕನ್ನಡಿಗ ಕಾರ್ಮಿಕರು ಸಿಗಲಿ – ಭಾಸ್ಕರ್ ಟಿ ನಾಗೇಂದ್ರಪ್ಪ

ಬೆಂಗಳೂರು: ಕೋವಿಡ್ ಬಿಕ್ಕಟ್ಟಿನ ಪರಿಣಾಮ 3.5 ಲಕ್ಷ ವಲಸಿಗ ಕಾರ್ಮಿಕರು ರಾಜ್ಯವನ್ನು ತೊರೆದಿದ್ದಾರೆ. ಬಹುತೇಕ ಅಷ್ಟೇ ಕನ್ನಡಿಗರು ಹೊರರಾಜ್ಯಗಳಿಂದ ಮರಳಿದ್ದಾರೆ. ಹೀಗೆ ಬಂದಿರುವವರಲ್ಲಿ ಕಟ್ಟಣ ನಿರ್ಮಾಣ ಕೌಶಲ್ಯ ಇರುವವರನ್ನು ಗುರುತಿಸುವ ಕೆಲಸವಾಗಬೇಕು ಮತ್ತು ಅವರನ್ನು ಕಟ್ಟಡ ನಿರ್ಮಾಣಕ್ಕೆ ಕಾರ್ಯಕ್ಕೆ ಬಳಸಿಕೊಳ್ಳಲು ಅನುಕೂಲವಾಗುವಂಥ ವ್ಯವಸ್ಥೆ ರೂಪಿಸಬೇಕು ಎಂದು ಕ್ರೆಡೈ ಅಧ್ಯಕ್ಷ (ಎಲೆಕ್ಟೆಡ್) ಭಾಸ್ಕರ್ ಟಿ ನಾಗೇಂದ್ರಪ್ಪ ಅವರು ಸಲಹೆ ನೀಡಿದರು. ‘‘ಬಿಕ್ಕಟ್ಟಿನ ಮಧ್ಯೆಯೂ ಜನತೆಗೆ ಸ್ವಂತ ಮನೆ ಹೊಂದಬೇಕು ಎಂಬ ಆಕಾಂಕ್ಷೆ ಹೆಚ್ಚುತ್ತಿದೆ. ಸರಕಾರ ಸುಮ್ಮನೆ ನಮ್ಮ ಬೆರಳು ಹಿಡಿದುಕೊಂಡರೆ ಸಾಕು, ನಾವು ಸಾಕಷ್ಟು ಮುಂದೆ ಹೋಗುತ್ತೇವೆ,’’ ಎಂದರು. ವಿಟಿಯು ಕಾರ್ಮಿಕರ ಮ್ಯಾಪಿಂಗ್ ಕೆಲಸವನ್ನು ಮಾಡುತ್ತಿದೆ. ಸರಕಾರ ಈ ರೀತಿ ಮಾಡಿದರೆ ತುಂಬ ಸಹಾಯವಾಗಲಿದೆ ಎಂದರು.

ಸಿಮೆಂಟ್ ದರ ಸಮಸ್ಯೆ

ರಿಯಾಲ್ಟಿ ಯೋಜನೆಗೆ ಕಚ್ಚಾ ಸಾಮಗ್ರಿಗಳು ನಿರ್ಣಾಯಕ. ರಾಜ್ಯದಲ್ಲಿ ಫೆಬ್ರವರಿ-ಮಾರ್ಚ್ ನಲ್ಲಿ ಸಿಮೆಂಟ್ ದರ ಪ್ರತಿ ಬ್ಯಾಗ್‌ಗೆ  260-270 ರೂ. ಆಸುಪಾಸಿ ನಲ್ಲಿತ್ತು. ಲಾಕ್‌ಡೌನ್‌ ಮುಗಿದ ತಕ್ಷಣ 410 ರೂ.ಗೆ ಏರಿತು. ಈಗ 360 ರೂ.ಗಳ ಆಸುಪಾಸಿನಲ್ಲಿದೆ. ಅದೇ ತೆಲಂಗಾಣದಲ್ಲಿ 310 ರೂ. ಇದೆ. ಆದ್ದರಿಂದ ಸಿಮೆಂಟ್ ದರ ಇಳಿಕೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.

ಮಾರುಕಟ್ಟೆ ಮೌಲ್ಯ ಗೊಂದಲ ಸರಿಪಡಿಸಿ

ರಿಯಾಲ್ಟಿ ಪ್ರಾಪರ್ಟಿಗಳಿಗೆ ಮಾರುಕಟ್ಟೆ ಮೌಲ್ಯ ನಿಗದಿ ತಾರತಮ್ಯದಿಂದ ಕೂಡಿದೆ ಅದನ್ನು ಸರಿಪಡಿಸಬೇಕು. ಒಂದೇ ಪ್ರದೇಶದಲ್ಲಿ ಮೌಲ್ಯ ಹೆಚ್ಚು-ಕಡಿಮೆಯಾಗಿರುತ್ತದೆ. ಇದನ್ನು ಸರಿಪಡಿಸಬೇಕು. ಮಾರುಕಟ್ಟೆ ಮೌಲ್ಯ ಕಡಿಮೆ ಮಾಡಿ ಎಂದು ನಾವು ಹೇಳುತ್ತಿಲ್ಲ. ಆದರೆ ಸರಿಪಡಿಸಬೇಕು. ಇದರಿಂದ ರಿಯಾಲ್ಟಿ ಯೋಜನೆಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಅಗ್ಗದ ಮನೆಗಳಿಗಿರುವ ನೆರವಿನ ಮಿತಿ ವಿಸ್ತರಿಸಿ

ರಾಜ್ಯದಲ್ಲಿ ಅಫರ್ಡಬಲ್ ಹೌಸಿಂಗ್(ಅಗ್ಗದ ಮನೆಗಳು) ಅಡಿಯಲ್ಲಿ ಮುದ್ರಾಂಕ ಶುಲ್ಕದ ರಿಯಾಯಿತಿಗೆ ಅರ್ಹತೆ ಪಡೆಯಲು ಅಪಾರ್ಟ್‌ಮೆಂಟ್‌ ಮೌಲ್ಯದ ಮಿತಿಯನ್ನು 20ರಿಂದ 35 ಲಕ್ಷ ರೂ.ಗೆ ಏರಿಸಲಾಗಿದೆ. ಹೀಗಿದ್ದರೂ, ಈ ಮಿತಿಯನ್ನು 45 ಲಕ್ಷ ರೂ.ಗೆ ವಿಸ್ತರಿಸಿದರೆ ಜನತೆಗೆ ಅನುಕೂಲವಾಗಲಿದೆ ಎಂದು ಭಾಸ್ಕರ್ ಟಿ ನಾಗೇಂದ್ರಪ್ಪ ಅವರು ಮನವಿ ಮಾಡಿದರು.

ಎನ್ಆರ್‌ಐಗಳನ್ನು ಉತ್ತೇಜಿಸಿ ಎಂದ ಕಿಶೋರ್ ಜೈನ್‌

ಬೆಂಗಳೂರು: ಅನಿವಾಸಿ ಭಾರತೀಯರು(ಎನ್ಆರ್‌ಐ) ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಹೂಡಿಕೆಗೆ ಆಸಕ್ತರಾಗಿದ್ದಾರೆ. ಆದ್ದರಿಂದ ಅವರನ್ನು ಆಕರ್ಷಿಸಲು ಕೆಲ ವಿಶೇಷ  ರಿಯಾಯಿತಿಗಳನ್ನು ನೀಡಿದರೆ ಒಳ್ಳೆಯದು ಎಂದು ಬೆಂಗಳೂರಿನ ಕ್ರೆಡೈ ಘಟಕದ ಅಧ್ಯಕ್ಷ ಕಿಶೋರ್ ಜೈನ್ ಅವರು ಮನವಿ ಮಾಡಿದರು.ಎನ್ಆರ್‌ಐಗಳಿಗೆ ಮುದ್ರಾಂಕ ಶುಲ್ಕದಲ್ಲಿ ರಿಯಾಯಿತಿ ಅಥವಾ ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ಪಾಲಿನಲ್ಲಿ ಕಡಿತ ಘೋಷಿಸಬಹುದು. ಇದರಿಂದ ಸರಕಾರಕ್ಕೂ ಆದಾಯ ವೃದ್ಧಿಸಲಿದೆ. ಹೆಚ್ಚಿನ ಹೂಡಿಕೆ ರಿಯಾಲ್ಟಿಗೆ ಹರಿದು ಬರಲಿದೆ. ಉದ್ಯೋಗಾವಕಾಶ ಸೃಷ್ಟಿಯಾಗಬಹುದು ಎಂದರು. ‘‘ವಿಶ್ವಬ್ಯಾಂಕ್ ಉದ್ಯಮಸ್ನೇಹಿ ರಾಷ್ಟ್ರಗಳನ್ನು ನಿಗದಿಪಡಿಸಲು ಪರಿಗಣಿಸುತ್ತಿರುವ ಭಾರತದ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಹೀಗಾಗಿ ನಗರದ ರಿಯಾಲ್ಟಿ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡಿದರೆ, ಉದ್ಯಮಸ್ನೇಹಿ ರ್ಯಾಂಕಿಂಗ್‌ನಲ್ಲಿ ಮುಂದುವರಿಯಲೂ ಪೂರಕವಾಗಲಿದೆ. ರಾಜ್ಯ ಸರಕಾರದ ಬೊಕ್ಕಸಕ್ಕೂ ಆದಾಯ ಸಿಗಲಿದೆ,’’ ಎಂದರು. ಕೋವಿಡ್-19 ಬಿಕ್ಕಟ್ಟಿನ ನಂತರ ಉಂಟಾಗಿರುವ ವಲಸಿಗರ ಸಮಸ್ಯೆಯನ್ನು ಬಗೆಹರಿಸುವುದು, ಸಿಮೆಂಟ್ ದರದ ನಿಯಂತ್ರಣ, ಮಾರುಕಟ್ಟೆ ಮೌಲ್ಯದ ಸರಳೀಕರಣ, ಮುದ್ರಾಂಕ ಶುಲ್ಕ ಕಡಿತ, ಗ್ರಾಹಕರಿಗೆ ಮತ್ತು ಬಿಲ್ಡರ್‌ಗಳಿಗೆ ಇನ್ಸೆಂಟಿವ್ ವಿತರಣೆ ಇತ್ಯಾದಿ ಸುಧಾರಣಾ ಕ್ರಮಗಳನ್ನು ರಿಯಾಲ್ಟಿ ಉದ್ಯಮಿಗಳು ನಿರೀಕ್ಷಿಸುತ್ತಿದ್ದಾರೆ ಎಂದರು.

ರಿಯಲ್ ಎಸ್ಟೇಟ್ ಉದ್ಯಮಿಗಳ ಅಭಿಪ್ರಾಯ
ಸರಕಾರದ ಭೂಸುಧಾರಣೆಯು ಶ್ಲಾಘನೀಯವಾಗಿದೆ. ಇದು ಬಹಳ ವರ್ಷಗಳ ಬೇಡಿಕೆಯಾಗಿತ್ತು. ಆದರೆ, ಈ ವಿಷಯದಲ್ಲಿ ಅಸಮಾನತೆಯಾಗಬಾರದು. ಕೃಷಿ ಹಾಗೂ ರಿಯಲ್ ಎಸ್ಟೇಟ್‌ಗಳೆರಡೂ ಸಮಾನವಾಗಿಯೇ ಸಾಗಬೇಕು. ಕೃಷಿಯಿಂದ ರಿಯಲ್ ಎಸ್ಟೇಟ್‌ಗೆ, ರಿಯಲ್ ಎಸ್ಟೇಟ್‌ನಿಂದ ಕೃಷಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಕೊರೊನಾ ಕಾಲಘಟ್ಟದಲ್ಲಿ ಮನೆಯ ಮಹತ್ವ ಇನ್ನೂ ಹೆಚ್ಚಾಗಿಯೇ ಗೊತ್ತಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್‌ಗೆ ಪೂರಕವಾಗುವಂಥ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು. -ಪೂರ್ಣಪ್ರಜ್ಞ, ಸ್ಪೆಷಲ್ ಕನ್ಸಲ್ಟೆಂಟ್, ಬ್ಲೂಜಾಯ್ ಎಂಟರ್‌ಪ್ರೈಸಸ್‌, ಬೆಂಗಳೂರು

ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮಂಗಳೂರು ಭಾಗದಲ್ಲಿ ಬಹಳಷ್ಟು ಅವಕಾಶಗಳಿವೆ. ಆದರೆ, ಸಣ್ಣಪುಟ್ಟ ಸಮಸ್ಯೆಗಳಿದ್ದೂ ಅವುಗಳನ್ನು ಸರಕಾರ ಬಗೆಹರಿಸಬೇಕು. ಕಾರ್ಮಿಕರ ಕೊರತೆಯ ಸಮಸ್ಯೆ ಎದುರಾಗಿದೆ. ವಲಸೆ ಹೋಗಿರುವ ಅವರನ್ನು ವಾಪಸ್ ಕರೆತರುವ ಕೆಲಸವಾಗಬೇಕು. ಲೈಸೆನ್ಸಿಂಗ್ ವ್ಯವಸ್ಥೆ ತುಂಬ ಸುಧಾರಣೆಯಾಗಬೇಕು. ಸಿಆರ್‌ಜೆಡ್‌ ಮತ್ತು ನಾನ್ ಸಿಆರ್‌ಜೆಡ್ ನಿಮಯಗಳಿಂದಾಗಿ ವರ್ಷದ 6 ತಿಂಗಳು ಮರಳು ದೊರೆಯುವುದಿಲ್ಲ. ಈ ಸಮಸ್ಯೆ ನಿವಾರಿಸಿ ವರ್ಷಪೂರ್ತಿ ಮರಳು ದೊರೆಯವಂತಾಗಬೇಕು. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ ಬೆಳವಣಿಗೆ ಸಾಧ್ಯವಾಗಲಿದೆ.- ಪುಷ್ಪರಾಜ್ ಜೈನ್, ಆಡಳಿತ ನಿರ್ದೇಶಕರು,  ಅಭಿಷ್ ಬಿಲ್ಡರ್ಸ್ ಪ್ರೈ ಲಿ., ಮಂಗಳೂರು

ಕೊರೊನಾ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೇತರಿಕೆ ನೀಡಲು ಸ್ಟ್ಯಾಂಪ್ ಡ್ಯೂಟಿಯನ್ನು ಸರಕಾರ ಕಡಿಮೆ ಮಾಡಿದೆ. ಇದು ಸ್ವಾಗತಾರ್ಹ. ಆದರೆ, ಈ ಕ್ರಮ ಅನುಷ್ಠಾನವಾಗುತ್ತಿಲ್ಲ. ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ನಮಗೆ ಆ ರೀತಿಯ ಸರ್ಕ್ಯೂಲರ್ ಬಂದಿಲ್ಲ ಎನ್ನುತ್ತಾರೆ ಮತ್ತು ಹಳೆಯ ದರದಲ್ಲಿ ಹಣವನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಖರೀದಿದಾರರು ಹಿಂಜರಿಯುತ್ತಿರುವುದು ಮಾತ್ರವಲ್ಲ ಫ್ಲ್ಯಾಟ್ ಖರೀದಿಯನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಇದರಿಂದ ತುಂಬ ತೊಂದರೆಯಾಗುತ್ತಿದೆ. ಆದಷ್ಟು ಬೇಗನೆ ಈ ಸಮಸ್ಯೆಯನ್ನು ಸರಿ ಮಾಡಿ. – ಪ್ರಕಾಶ್ ಜೋಶಿ, ಎಂಡಿ, ಶ್ರೀದತ್ತ ಇನ್ಫೋಟೆಕ್ ಪ್ರೈ ಲಿ., ಹುಬ್ಬಳ್ಳಿ

ಭೂ ಪರಿವರ್ತನೆ ಸರಳೀಕರಣವಾಗಬೇಕು. ಸುಮಾರು ಮೂರರಿಂದ ಆರು ತಿಂಗಳವರೆಗೂ ಭೂ ಪರಿವರ್ತನೆಗೆ ಕಾಲಾವಕಾಶ ಬೇಕಾಗುತ್ತದೆ. ಚಿಕ್ಕ ಜಾಗದಲ್ಲಿ ಸ್ವತಂತ್ರವಾಗಿ ಮನೆ ಕಟ್ಟುವವರಿಗೆ ಇದರಿಂದ ವಿನಾಯ್ತಿ ನೀಡಿದರೆ ಇನ್ನೂ ಒಳ್ಳೆಯದು. ಮುದ್ರಾಂಕ ಶುಲ್ಕ ಮಿತಿಯನ್ನು 25 ರಿಂದ 35 ಲಕ್ಷ  ರೂ.ವರೆಗೆ ಏರಿಸಿದ್ದೀರಿ. ಒಳ್ಳೆಯದು. ಆದರೆ, ಶೇ.25ರಷ್ಟು ಹಣವನ್ನು ಗ್ರಾಹಕರು ನೀಡಬೇಕಾಗುತ್ತದೆ. ನೌಕರರಿಗೆ ಗ್ರಾಚ್ಯುಯಿಟಿ, ಪಿಎಫ್‌ನಿಂದ ಸಾಲ ಸಿಗುವಂತೆ ಮಾಡಿ. -ಶಿವರಾಮ್,  ಡೈರೆಕ್ಟರ್ ಮಾರ್ಕೆಟಿಂಗ್, ರಾಶಿ ಡೆವಲಪರ್ಸ್, ಬೆಂಗಳೂರು

ಮೈಸೂರಿನಲ್ಲಿ ಮೂಡಾ ಸಭೆಗಳು ಪ್ರತಿ ತಿಂಗಳು ನಡೆಯುವಂತಾಗಬೇಕು. ಇದರಿಂದ ಉದ್ಯಮಕ್ಕೆ ಸಹಾಯವಾಗಲಿದೆ. ಇನ್ನೂ ಎನ್ಒಸಿಗಳನ್ನು ಪಡೆಯುವುದೇ ದೊಡ್ಡ ಸಮಸ್ಯೆಯಾಗಿದೆ. ಅವುಗಳನ್ನು ಪಡೆಯಲು ಸಾಕಷ್ಟು ಸಮಯವೇ ಹಿಡಿಯತ್ತದೆ. ಇದರಿಂದ ಉದ್ಯಮಿಗಳು ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿ, ಎನ್ಒಸಿಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿ.- ಶಿವಕುಮಾರ್ ಎಂ.ಡಿ., ಭೀಮಾ ಪ್ರಾಪರ್ಟಿಸ್, ಮೈಸೂರು

ಫ್ಲ್ಯಾಟ್ ಅಥವಾ ಜಮೀನು ಖರೀದಿದಾರರಿಗೆ ಸುಲಭ ಸಾಲ ದೊರೆಯುವಂತೆ ಮಾಡಬೇಕು. ಇದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುವುದಲ್ಲದೇ, ಉದ್ಯಮದ ಉತ್ತೇಜನಕ್ಕೂ ಸಹಕಾರಿಯಾಗಲಿದೆ. ಸರಕಾರಕ್ಕೂ ಆದಾಯದ ದೊರೆಯುತ್ತದೆ. ಜೊತೆಗೆ, ಭೂ ವೆಚ್ಚ ಮತ್ತು ನೋಂದಣಿ ಶುಲ್ಕವನ್ನು ಕೂಡ ತಗ್ಗಿಸಬೇಕು.-ಮಂಜುನಾಥ ಕುರಹಟ್ಟಿ, ಮುಖ್ಯಸ್ಥರು, ಆವಾಸ್ ನಿರ್ಮಾಣ್, ಹುಬ್ಬಳ್ಳಿ

ರಿಯಲ್ ಎಸ್ಟೇಟ್ ಉದ್ಯಮಕ್ಕೆ ನೆರವಾಗಲು ಇರುವ ಏಕಗವಾಕ್ಷಿಯಿಂದ ಉಪಯೋಗ ಆಗುತ್ತಿಲ್ಲ. 30 ದಿನಗಳಲ್ಲಿ ನೀಡಬೇಕಾದ ಅನುಮತಿಯನ್ನು ಮೂರ್ನಾಲ್ಕು ತಿಂಗಳಾದರೂ ನೀಡುತ್ತಿಲ್ಲ. ಇನ್ನು ಎಸ್‌ಟಿಪಿ ಅಳವಡಿಕೆ ಸಂಬಂಧ ಸರಕಾರ ನೀತಿ ತುಂಬ ಕಠಿಣವಾಗಿದೆ. ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದಕ್ಕಿಂತ ಮಿತಿಯನ್ನು ಕಡಿಮೆ ಮಾಡಿದೆ. ಕನಿಷ್ಠ 20 ಫ್ಲ್ಯಾಟ್‌ಗಳಿರುವ ಕಟ್ಟಡಕ್ಕೂ ಎಸ್‌ಟಿಪಿ ಕಡ್ಡಾಯ ಅವಾಸ್ತವಿಕ. – ಕ್ವಾಯಿಸ್ ನೂರಾನಿ, ಜಂಟಿ ಕಾರ್ಯದರ್ಶಿ, ಕ್ರೆಡೈ ಕರ್ನಾಟಕ, ಬೆಳಗಾವಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top