‘‘ಅನ್ಯ ಜನತೆಯ ಮೇಲೆ ಯಾರೇ ಯುದ್ಧ ಸಾರಲಿ, ಹಾಗೆ ಮಾಡುವವರು ಅರೆ ಹುಚ್ಚರಾಗಿರುತ್ತಾರೆ’’- ಇದೊಂದು ಹಳೆಯ ಚೀನೀ ಗಾದೆ. ಆಕ್ರಮಣವೇ ರಾಷ್ಟ್ರೀಯ ಪ್ರವೃತ್ತಿಯಾದ ಒಂದು ದೇಶದಲ್ಲಿ ಅಂಥ ಗಾದೆ ಮಾತು ಹುಟ್ಟಿದ್ದೂ ಆಶ್ಚರ್ಯವೇ. ಈಗಿನ ಚೀನೀಯರಿಗಂತೂ ಅದರ ನೆನಪು ಕೂಡಾ ಇದ್ದಂತಿಲ್ಲ.
ಈ ‘ಅರೆ-ಹುಚ್ಚರು’ 1950ರಲ್ಲಿ ಅನ್ಯರ ಮೇಲೆ ಯುದ್ಧ ಸಾರಿದರು. ತನ್ನ ಕಾಲು ಭಾಗದಷ್ಟು, ಸುಮಾರು ಪಶ್ಚಿಮ ಯೂರೋಪಿನಷ್ಟು ವಿಸ್ತಾರವುಳ್ಳ ಒಂದು ನೆರೆದೇಶದ ಕೇವಲ ಮೂವತ್ತು ಲಕ್ಷ ಜನಸಂಖ್ಯೆಯ ಮೇಲೆ.
ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಲ್ಲಿ ಪರ್ವತಾವಳಿಯಿಂದ ಬಳಸಲ್ಪಟ್ಟಿರುವ ಪೀಠಭೂಮಿ ಟಿಬೆಟ್. ಪೂರ್ವದಲ್ಲಿ ಚೀನಾ, ಪಶ್ಚಿಮದಲ್ಲಿ ಕಾಶ್ಮೀರ, ದಕ್ಷಿಣದಲ್ಲಿ ನೇಪಾಳ, ಭೂತಾನ್, ಸಿಕ್ಕಿಂ ಹಾಗೂ ಹಿಮಾಲಯ ಪರ್ವತ ಮೂಲೆಯಿಂದ ಇದು ಆವೃತವಾಗಿದೆ. ಬೌದ್ಧ ಮತದ ವಿಶಿಷ್ಟ ಸ್ವರೂಪವೇ ಇವರ ಧರ್ಮ ಹಾಗೂ ಜೀವನದ ಉಸಿರು. ಇಲ್ಲಿನ ಜನಸಂಖ್ಯೆಯ ಮೂರರಲ್ಲೊಂದು ಪಾಲು ಬೌದ್ಧ ಸನ್ಯಾಸಿಗಳು.
ಇವರ ಜೀವನ ವಿಧಾನ, ಕುರಿ ಸಾಕುವಿಕೆ- ಇವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುತ್ತಲೇ ಇರುವ ಅಲೆಮಾರಿಗಳು. ಇಲ್ಲಿನ ಕಣಿವೆಗಳಲ್ಲಿರುವ ಟಿಬೆಟಿಯನ್ನರು ಕೃಷಿಕಾರರು. ಅವರು ಬೆಳೆಯುವ ವಸ್ತುಗಳು: ಬಾರ್ಲಿ, ಅಕ್ಕಿ, ಗೋಧಿ, ಚಹಾ, ಸಾಸಿವೆ. ಅವರು ಹೊರ ದೇಶಗಳಿಗೆ ರಫ್ತು ಮಾಡುವುದು ಪ್ರಾಣಿಗಳ ತೊಗಲು ಹಾಗೂ ಉಣ್ಣೆಗಳನ್ನು. ಅಲ್ಲಿನ ಮಣ್ಣಿನಲ್ಲಿ ಹೊನ್ನಿದೆ. ನದಿಗಳ ತಳದಲ್ಲಿ ಮಣ್ಣಿನೊಡನೆ ಅದು ಬೆರೆತಿರುತ್ತದೆ. ದಕ್ಷಿಣ ಟಿಬೆಟ್ ಜನಸಾಂದ್ರತೆ ಇರುವ ಪ್ರದೇಶ. ಲ್ಹಾಸಾ ರಾಜಧಾನಿ. ಉಳಿದೆರಡು ಮುಖ್ಯ ನಗರಗಳು ಶಿಗಾತ್ಸೆ ಮತ್ತು ಗ್ಯಾಂಗ್ತ್ಸೆ. ಕಷ್ಟಜೀವಿಗಳಾದ ಟಿಬೆಟನ್ನರು ವೀರರು. ರಾಷ್ಟ್ರದ ಸ್ವಾತಂತ್ರ್ಯಕ್ಕೆ ಗಂಡಾಂತರ ಒದಗಿದಾಗ ಸನ್ಯಾಸಿಗಳೂ ಅಲ್ಲಿ ಆಯುಧ ಹಿಡಿದು ಕಾದಾಡುತ್ತಾರೆ.
ಟಿಬೆಟನ್ನರಿಗೂ ಚೀನೀಯರಿಗೂ ಯಾವ ರೀತಿಯ ಹೋಲಿಕೆಯೂ ಇಲ್ಲ. ಅವರಿಬ್ಬರೂ ಬೇರೆಬೇರೆ ಬುಡಕಟ್ಟಿನ ಜನಾಂಗಗಳು. ಚೀನೀ ಚಕ್ರವರ್ತಿಗಳು ಬಲಾಢ್ಯರಾದಾಗಲೆಲ್ಲಾ ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸುವ ಪರಿಪಾಠವಿಟ್ಟುಕೊಂಡವರು. ಹಾಗೆಯೇ ಅವರಲ್ಲಿ ಹಲವರು ಆಗಿಂದಾಗ್ಗೆ ಟಿಬೆಟನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಂಥ ಎಲ್ಲ ಯತ್ನಗಳೂ ಯಶಸ್ವಿಯಾಗುತ್ತಿರಲಿಲ್ಲ. ಆದರೆ ಚೀನಾ ತನ್ನ ಎರಡು ಅರಸೊತ್ತಿಗೆಗಳ ಕಾಲದಲ್ಲಿ ಟಿಬೆಟನ್ನು ಅಧೀನವಾಗಿರಿಸಿಕೊಂಡಿತ್ತು. ಒಮ್ಮೆ ಮಂಗೋಲ್ ವಂಶವು ಚೀನವನ್ನು ಆಳುತ್ತಿದ್ದಾಗ, ಇನ್ನೊಮ್ಮೆ ಮಂಚೂ ರಾಜಮನೆತನ ಚೀನದ ಗದ್ದುಗೆಯ ಮೇಲಿದ್ದಾಗ. ಆದರೆ ಈ ಎರಡೂ ರಾಜವಂಶಗಳು, ಸ್ವತಃ ಚೀನೀಯರ ದೃಷ್ಟಿಯಲ್ಲೇ ಪರಕೀಯವಾದಂಥವೆಂಬುದು ಗಮನಾರ್ಹ.
ಟಿಬೆಟಿನ ಮೊದಲ ಪ್ರಬಲ ದೊರೆಯಾಗಿದ್ದವನು ಗೊಂಪೊ. ನಂತರ ಆಳ್ವಿಕೆ ನಡೆಸಿದ ಬಲಾಢ್ಯ ಅರಸು ಮೇ ಆಕ್ತ್-ಸೋಮ್. ಇವನ ಶೌರ್ಯಕ್ಕೆ ಮೆಚ್ಚಿದ ಅಂದಿನ ಚೀನೀ ಸಾಮ್ರಾಟ ಕ್ರಿ.ಶ.712ರಲ್ಲಿ ತನ್ನ ಮಗಳನ್ನು ಆತನಿಗೆ ಮದುವೆ ಮಾಡಿಕೊಟ್ಟಿದ್ದ. ಆಕ್ತ್-ಸೋಮನ ಮೊದಲನೆಯ ಪತ್ನಿ ನೇಪಾಳದವಳು. ಇಬ್ಬರು ಪತ್ನಿಯರೂ ಧರ್ಮಿಷ್ಟರು. ಕಿರಿಯವಳು ರಾಜನ ಮೇಲೆ ಬಹಳ ಪ್ರಭಾವ ಬೀರಿದಳು. ಆತ ಬೌದ್ಧ ಮತವನ್ನು ಸ್ವೀಕರಿಸಿ, ಅದನ್ನೇ ಇಡೀ ಟಿಬೆಟಿನ ಧರ್ಮವನ್ನಾಗಿ ಮಾಡಿದ. ಚೀನೀ ಸಾಮ್ರಾಟ ತನ್ನ ಈ ಅಳಿಯನಿಗೆ ಪ್ರತಿವರ್ಷವೂ 50,000 ಗಜ ಚಿನ್ನದ ಜರಿಯನ್ನು ಕಾಣಿಕೆಯಾಗಿ ಕಳುಹಿಸುತ್ತಿದ್ದ. ಚೀನದಿಂದ ಟಿಬೆಟನ್ನರು ಕೆಲ ಶಿಷ್ಟಾಚಾರಗಳನ್ನು ಕಲಿತರು. ಭಾರತದಿಂದ ಲಿಪಿ ಜ್ಞಾನವೂ ವಿದ್ವತ್ತೂ ಬೌದ್ಧ ಸನ್ಯಾಸಿಗಳ ಮೂಲಕ ಟಿಬೆಟಿಗೆ ಬಂದಿತು.
ಅವರ ಧರ್ಮದಲ್ಲಿ ಎರಡು ಪಂಥಗಳಿದ್ದವು. ಒಂದರ ಒಲವು ಲೌಕಿಕದ ಕಡೆಗೆ. ಇನ್ನೊಂದರದು ಪಾರಮಾರ್ಥಿಕದ ಕಡೆಗೆ. ಎರಡನೆಯ ಪಂಥಕ್ಕೆ 1557ರಲ್ಲಿ ಚಕ್ರವರ್ತಿ ಮಂಗೋಲ್ ಖಾನ್, ಎರಡನೆಯ ಪಂಥದ ಲಾಮಾಗಳಿಗೆ- ಸನ್ಯಾಸಿಗಳಿಗೆ- ತನ್ನ ಬೆಂಬಲ ನೀಡಿ, ಅವರ ಮುಖ್ಯಸ್ಥನಿಗೆ ದಲಾಯಿ ಲಾಮಾ ಎಂದು ಅಭಿಧಾನವಿತ್ತ. ದಲಾಯಿ ಎಂದರೆ ಜ್ಞಾನಸಾಗರ ಎಂದರ್ಥ. ಅಂದಿನಿಂದ ದಲಾಯಿ ಲಾಮಾ ಟಿಬೆಟ್ ರಾಜ್ಯದ ಅಧಿಪತಿಯಾದರು. ಹೀಗೆ ಧಾರ್ಮಿಕ ವಿಚಾರಗಳಲ್ಲೂ ರಾಜಕೀಯದಲ್ಲೂ ಒಬ್ಬರದೇ ಹಿರಿತನವಿರುವ ವಿಶಿಷ್ಟ ಸ್ವರೂಪದ ರಾಜ್ಯವ್ಯವಸ್ಥೆಯೊಂದು ಟಿಬೆಟಿನಲ್ಲಿ ಆಚರಣೆಗೆ ಬಂದಿತು.
17ನೆಯ ಶತಮಾನದಲ್ಲಿ ಲ್ಹಾಸಾದಲ್ಲಿ ದಲಾಯಿ ಲಾಮರ ವಾಸಕ್ಕಾಗಿ ಪೊಟಾಲಾ ಅರಮನೆಯ ನಿರ್ಮಾಣವಾಯಿತು. ಐದನೆಯ ದಲಾಯಿ ಲಾಮರು ತಮ್ಮ ಗುರುವನ್ನು ಗೌರವಿಸುವುದಕ್ಕಾಗಿ ಪಂಚೆನ್ಲಾಮ ಎಂಬ ಸ್ಥಾನವೊಂದನ್ನು ಸೃಷ್ಟಿಸಿ, ಶಿಗಾತ್ಸೆ ನಗರದಲ್ಲಿ ತಮ್ಮ ಗುರುವನ್ನು ಪ್ರತಿಷ್ಠಾಪಿಸಿದರು. ದಲಾಯಿ ಲಾಮಾ ಬುದ್ಧನ ಅವತಾರವೆಂದು ಟಿಬೆಟನ್ನರ ನಂಬುಗೆ. ಒಬ್ಬ ಲಾಮಾ ತೀರಿಕೊಂಡಾಗ, ಟಿಬೆಟ್ ಮನೆಗಳಲ್ಲಿ ಅನಂತರ ಹುಟ್ಟಿದ ಮಕ್ಕಳಲ್ಲಿ ಪುನರ್ಜನ್ಮ ಹೊಂದಿದ ದಲಾಯಿಯನ್ನು ಆ ಧರ್ಮದ ಹಿರಿಯರು ಅರಸುತ್ತಾರೆ. ದಲಾಯಿಯ ಲಕ್ಷ ಣಗಳೆಲ್ಲ ಕಂಡುಬಂದ ಶಿಶುವನ್ನು ಪೊಟಾಲಾ ಅರಮನೆಗೆ ತಂದು ಧರ್ಮಪಾರಂಗತನನ್ನಾಗಿ ಮಾಡುತ್ತಾರೆ. ಟಿಬೆಟನ್ನರು ಹಾಗೆ ಆರಿಸಲ್ಪಟ್ಟ ದಲಾಯಿಯನ್ನು ‘ದೇವರಾಜ’ ಎಂದು ಆದರಿಸುತ್ತಾರೆ.
ಹದಿನೆಂಟನೆಯ ಶತಮಾನದಲ್ಲಿ ಚೀನದ ಮಂಚೂ ಅರಸರು ಟಿಬೆಟ್-ನೇಪಾಳಗಳ ಮೇಲೆ ಆಕ್ರಮಣ ನಡೆಸಿದರು. ಟಿಬೆಟ್ ಪ್ರತಿಭಟಿಸಿತು. ಅದರ ಮೇಲೆ ಮಂಚೂಗಳಿಗೆ ಸ್ವಲ್ಪಮಟ್ಟಿನ ಹತೋಟಿ ದೊರೆಯಿತಾದರೂ ಅದು ಕ್ರಮೇಣ ಶಿಥಿಲವಾಯಿತು. 1910ರಲ್ಲಿ ಚೀನಾ ಮತ್ತೊಮ್ಮೆ ಟಿಬೆಟನ್ನು ಆಕ್ರಮಿಸಿತು. ಮಂಚೂ ವಂಶದ ಕೊನೆಯ ದಿನಗಳಾಗಲೇ ಸಮೀಪಿಸಿದ್ದವು. ಅಂಥ ಘಳಿಗೆಯಲ್ಲಿ ಅನ್ಯರ ಮೇಲೆ ಆಕ್ರಮಣ ನಡೆಸಲು ಅವರು ಆತುರಗೊಂಡಿದ್ದರು! ಈ ಸಲ ಚೀನವನ್ನು ಇದಿರಿಸಲಾಗದೆ, ಆಗ ಅಧಿಕಾರದಲ್ಲಿದ್ದ ಹದಿಮೂರನೆಯ ಲಾಮಾ ಭಾರತಕ್ಕೆ ಓಡಿಬಂದರು.
ಮರು ವರ್ಷವೇ ಚೀನದಲ್ಲಿ ರಾಷ್ಟ್ರೀಯ ಕ್ರಾಂತಿಯಾಯಿತು. ಮಂಚೂ ವಂಶದ ಪತನವಾಯಿತು. ಆ ಘಳಿಗೆಯಲ್ಲಿ ಟಿಬೆಟನ್ನರೂ ನೇಪಾಳಿಗಳೂ ಪರಕೀಯ ನೊಗವನ್ನು ಕಿತ್ತೆಸೆದು ತಮ್ಮ ರಾಷ್ಟ್ರಗಳ ಸ್ವಾತಂತ್ರ್ಯವನ್ನುಸಾರಿದರು. ಟಿಬೆಟಿನಲ್ಲಿದ್ದ ಚೀನೀ ಸೇನೆಯು ತನ ್ನತಾಯ್ನಾಡಿಗೆ ಪಲಾಯನ ಮಾಡಿತು. ಭಾರತದಲ್ಲಿ ಆಶ್ರಯ ಪಡೆದಿದ್ದ ದಲಾಯಿ ಲಾಮಾ ಆಗ ಟಿಬೆಟಿಗೆ ಹಿಂತಿರುಗಿದರು.
ಚೀನದಲ್ಲಿ ಗಣರಾಜ್ಯವು ಸ್ಥಾಪನೆಯಾದ ನಂತರ ಟಿಬೆಟಿನ ಮೇಲೆ ಸಾರ್ವಭೌಮತ್ವವನ್ನು ಸ್ಥಾಪಿಸುವ ಪ್ರಯತ್ನಗಳು ನಡೆದವು. ದಂಡೆತ್ತಿ ಹೋದ ಸೈನ್ಯದ ತುಕಡಿಯನ್ನು ಟಿಬೆಟನ್ನರು ಹಿಮ್ಮೆಟ್ಟಿಸಿದರು. 1950ರವರೆಗೂ ಟಿಬೆಟ್ ಅಬಾಧಿತವಾದ ಸ್ವಾತಂತ್ರ್ಯವನ್ನು ಅನುಭವಿಸಿತು.
(ನಾಳೆ: ದಲಾಯಿ ಲಾಮರ ‘ಮೆದುಳು’ ಸ್ವಚ್ಚಗೊಳಿಸುವ ವಿಫಲ ಯತ್ನ)