ಅವನು ಉಚ್ಚಿಲ ಅಬ್ದುಲ್‌ಖಾದರ್‌ – ಕ್ಯಾಬಿನ್‌ ಒಳಗಿತ್ತು ಬೆಳ್ಳಿ ಖದರ್‌!

ಅದು 1993ರ ಮಾರ್ಚ್‌ 8. ಮಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ದೊಡ್ಡ ಕಾರ್ಯಾಚರಣೆಯೊಂದಕ್ಕೆ ಸಿದ್ಧವಾಗಿದ್ದರು. ಬೆಳ್ಳಿಯ ಕಳ್ಳ ಸಾಗಾಣಿಕೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದಿದ್ದ ಅವರು ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ (ಈಗ ಉಡುಪಿ ಜಿಲ್ಲೆ) ಪಡುಬಿದ್ರಿ ಜಂಕ್ಷನ್‌ನಲ್ಲಿ ಕಾದು ಕುಳಿತಿದ್ದರು.
ಮಂಗಳೂರಿನಿಂದ ಉತ್ತರ ಕನ್ನಡದ ಕಾರವಾರದವರೆಗಿನ ಸುಮಾರು 110 ಕಿ.ಮೀ. ಉದ್ದದ ಕರಾವಳಿ ಅದಾಗಲೇ ಚಿನ್ನ ಮತ್ತು ಇತರ ವಸ್ತುಗಳ ಕಳ್ಳ ಸಾಗಾಣಿಕೆಗೆ ಫೇಮಸ್‌ ಆಗಿತ್ತು. ಸುಂದರವಾದ ಕಡಲ ತೀರಗಳು ಅಕ್ರಮ ಸಾಗಾಟಕ್ಕೆ ರಾಜಮಾರ್ಗವನ್ನೇ ತೆರೆದಿದ್ದವು. ಅದರಲ್ಲೂ ಸಾಗರದಲ್ಲಿ ಸುತ್ತಾಡುವ ದೋಣಿಗಳು, ಮೀನುಗಾರರಿಗೆ ಮಾರ್ಗದರ್ಶನ ನೀಡಲೆಂದು ನಿರ್ಮಿಸಿದ್ದ ಅತಿ ಸುಂದರ ಕಾಪು ದೀಪಸ್ತಂಭ ಕಳ್ಳರ ಪಾಲಿಗೂ ಮಾರ್ಗದರ್ಶಿಯಾಗಿತ್ತು! ಸುತ್ತಲೂ ಹೆಚ್ಚು ವಾಸ್ತವ್ಯದ ಮನೆಗಳಿಲ್ಲದಿರುವುದು, ರಾತ್ರಿಯ ನೀರವದ ಹೊತ್ತಿನಲ್ಲಿ ಕಳ್ಳರ ಕಾರ್ಯಾಚರಣೆಗೆ ಹೇಳಿ ಮಾಡಿಸಿದಂತಿತ್ತು.
ೕಗಾಗಿ, ಪಡುಬಿದ್ರಿ ಮೂಲಕ ಬೆಳ್ಳಿ ಕಳ್ಳಸಾಗಣೆಯಾಗುತ್ತಿದೆ ಎಂಬ ಮಾಹಿತಿಯಿಂದ ಡಿಆರ್‌ಐ ಅಧಿಕಾರಿಗಳೇನೂ ಬೆಚ್ಚಿ ಬೀಳಲಿಲ್ಲ. ಬದಲಾಗಿ, ಸಾಗಣೆಯನ್ನು ತಡೆಯುವ ಮಾರ್ಗೋಪಾಯಗಳ ಬಗ್ಗೆ ಪ್ಲ್ಯಾನ್‌ ಮಾಡಿ ಪಡುಬಿದ್ರಿಗೆ ಬಂದು ಇಳಿದಿದ್ದರು. ಅವರಿಗೆ ಬಂದ ಮಾಹಿತಿ ಪ್ರಕಾರ, ಬೆಳ್ಳಿ ಗಟ್ಟಿ ಹೊತ್ತಟ್ರಕ್‌ ಪಡುಬಿದ್ರಿ ಮೂಲಕ ಕಾರ್ಕಳಕ್ಕೆ ಹೋಗಿ ಅಲ್ಲಿಂದ ಕುದುರೆಮುಖ, ಹರಿಹರ, ಹುಬ್ಬಳ್ಳಿ ಮಾರ್ಗವಾಗಿ ಕೊಲ್ಲಾಪುರಕ್ಕೆ ಹೋಗಲಿಕ್ಕಿತ್ತು. ಅವರು ನಿರೀಕ್ಷಿಸಿದಂತೆಯೇ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಉಡುಪಿ ಕಡೆಯಿಂದ ವೇಗವಾಗಿ ಟ್ರಕ್‌ ಒಂದು ಬಂತು. ಅದು ಕಾರ್ಕಳ ರಸ್ತೆಯ ಕಡೆಗೆ ತಿರುಗುತ್ತಿದ್ದಂತೆಯೇ ಡಿಆರ್‌ಐ ಸಿಬ್ಬಂದಿ ಅಡ್ಡ ಹಾಕಿದರು.
ಅಧಿಕಾರಿಗಳು ಟ್ರಕ್‌ನೊಳಗೆ ಇಣುಕಿ ನೋಡಿದರು. ಚಾಲಕ ಮತ್ತು ಕ್ಯಾಬಿನ್‌ನೊಳಗೆ ಇನ್ನೊಬ್ಬರು ಇದ್ದರು. ಚಾಲಕ ರಾಜಸ್ಥಾನದ ಸುಧೀರ್‌ಪುರದ ರಮೇಶ್‌ಕುಮಾರ್‌ ಮತ್ತು ಜತೆಗಿದ್ದವನು ರಾಜಸ್ಥಾನದ ಪಾಳಿಯ ಮದನ್‌ ಸಿಂಗ್‌. ಡಿಆರ್‌ಐ ಅಧಿಕಾರಿಗಳನ್ನು ಕಂಡು ಈ ಇಬ್ಬರೂ ಬೆಚ್ಚಿ ಬೀಳಲಿಲ್ಲ!
ರಾಜಸ್ಥಾನದಿಂದ ಗ್ರಾನೈಟ್‌ ತಂದಿದ್ದೆವು. ಉಡುಪಿಯಲ್ಲಿ ಅದನ್ನು ಡೆಲಿವರಿ ಮಾಡಿ ವಾಪಸ್‌ ಹೋಗ್ತಾ ಇದ್ದೇವೆ. ಈಗ ವಾಹನದಲ್ಲಿ ಯಾವುದೇ ಲೋಡ್‌ ಇಲ್ಲ, ನೀವು ಚೆಕ್‌ ಮಾಡಬಹುದು ಎಂದು ನಿರಾಯಾಸವಾಗಿ ಹೇಳಿದ ರಮೇಶ್‌ ಕುಮಾರ್‌. ಅವನ ಆತ್ಮವಿಶ್ವಾಸದ ಮಾತುಗಳು ಅದೆಷ್ಟು ಪವರ್‌ಫುಲ್‌ಆಗಿದ್ದವೆಂದರೆ ಅಧಿಕಾರಿಗಳು ವಾಹನವನ್ನು ಸುಮ್ಮನೆ ಬಿಟ್ಟುಬಿಡುವಷ್ಟು. ಆದರೆ ಕರ್ತವ್ಯದಲ್ಲಿ ಒಂದು ಸಣ್ಣ ಮೈ ಮರೆವು ಕೂಡಾ ಅಪಾಯಕಾರಿ ಎಂದು ಅರಿತಿದ್ದ ಅವರು ಟ್ರಕ್‌ ಚೆಕ್‌ ಮಾಡಲು ಮುಂದಾದರು. ವಾಹನದ ಸರ್ವ ದಾಖಲೆಗಳು ಸರಿಯಾಗಿದ್ದವು, ವಿಮೆ ಕಟ್ಟಿದ್ದರು, ಮಾಲೀಕನ ಮಾಹಿತಿಯೂ ಸ್ಪಷ್ಟ ಇತ್ತು. ಇವರ ಹುಡುಕಾಟವನ್ನು ನೋಡಿದ ರಮೇಶ್‌ಕುಮಾರ್‌ ಸ್ವತಃ ಹೇಳಿದ: ಇಲ್ಲ ಸ್ವಾಮಿ, ನಾನು ಯಾವುದೇ ಅಕ್ರಮ ವಸ್ತುವನ್ನು ಅಡಗಿಸಿಕೊಂಡು ಒಯ್ಯುತ್ತಿಲ್ಲ ಅಂತ. ಅವನು ಹೇಳಿದಂತೆಯೇ ಡಿಆರ್‌ಐ ಅಧಿಕಾರಿಗಳಿಗೆ ಏನೂ ಗೋಚರಿಸಲಿಲ್ಲ.
ಇನ್ನೇನು ಎಲ್ಲ ತಪಾಸಣೆ ಮುಗಿಸಿ ಕೆಳಗಿಳಿಯಬೇಕು ಎನ್ನುವಷ್ಟರಲ್ಲಿ ಒಬ್ಬ ಸಿಬ್ಬಂದಿಗೆ ಡ್ರೈವರ್‌ನ ಸೀಟಿನ ಹಿಂಬದಿಯಲ್ಲಿ ತಗಡಿನ ಹಲಗೆಯನ್ನು ಹೊಡೆದಿದ್ದು ಕಂಡಿತು. ಅದನ್ನು ತೆರೆದು ನೋಡುತ್ತಿದ್ದಂತೆಯೇ ಅಲ್ಲಿ ಗೋಣಿಚೀಲದಲ್ಲಿ ಏನೋ ಗಂಟು ಕಟ್ಟಿ ಇಟ್ಟಂತೆ ಭಾಸವಾುತು. ತೆರೆದು ನೋಡಿದರೆ ಏನೋ ಲೋಹದ ಇಟ್ಟಿಗೆಗಳು ಕಂಡವು. ಅವುಗಳ ನಡುವೆ ಮಲಗಿತ್ತು ಫುಲ್ಲಿ ಲೋಡೆಡ್‌ 9 ಎಂಎಂ ಪಿಸ್ತೂಲು. ಅದೂ ಇಟಾಲಿಯನ್‌ ಮೇಡ್‌. ಜತೆಗೆ 59 ಜೀವಂತ ಗುಂಡುಗಳು!
ಕೂಡಲೇ ರಮೇಶ್‌ಕುಮಾರ್‌ ಮತ್ತು ಮದನ್‌ಅವರೂ ಸೇರಿದಂತೆ ಟ್ರಕ್‌ನ್ನು ಮಂಗಳೂರಿನ ಡಿಆರ್‌ಐ ಕಚೇರಿಗೆ ತರಲಾಯಿತು. ಎಣಿಸಿ ನೋಡಿದರೆ ಅದರಲ್ಲಿ 75 ಲೋಹದ ಗಟ್ಟಿಗಳಿದ್ದವು. ಅಕ್ಕಸಾಲಿಗನನ್ನು ಕರೆಸಿ ತಪಾಸಣೆ ನಡೆಸಿದಾಗ ಗೊತ್ತಾಗಿದ್ದು: ಅದು 999 ಪರಿಶುದ್ಧತೆಯ ಬೆಳ್ಳಿ ಎಂದು. ಒಟ್ಟಾರೆ ತೂಕ 2676 ಕೆಜಿ! ಆಗಿನ ಕಾಲದಲ್ಲೇ ಅದರ ಮೌಲ್ಯ 2.14 ಕೋಟಿ ರೂ.! ಈಗದ ಲೆಕ್ಕದಲ್ಲಿ 11.43 ಕೋಟಿ! ಪಿಸ್ತೂಲಿನ ಬೆಲೆ ಆಗಿನ ಕಾಲಕ್ಕೇ 41,180 ರೂ.

ಸಿಕ್ಕಿದ್ದೆಲ್ಲಿ ಈ ಬೆಳ್ಳಿ?
ಅಲ್ಲಿವರೆಗೆ ಪರಮ ಸಂಭಾವಿತರಂತೆ ಫೋಸು ಕೊಡುತ್ತಿದ್ದ ಚಾಲಕ ರಮೇಶ್‌ ಕುಮಾರ್‌ ಮತ್ತು ಕ್ಲೀನರ್‌ ಮದನ್‌ ಅಷ್ಟು ಹೊತ್ತಿಗೆ ಹೆದರಿ ಕಂಗಾಲಾಗಿ ಹೋಗಿದ್ದರು. ಮತ್ತು ಸತ್ಯವನ್ನು ಬಾಯಿ ಬಿಟ್ಟರು.
ನಾವು ಉಡುಪಿಗೆ ಗ್ರಾನೈಟ್‌ ಹಿಡಿದುಕೊಂಡು ಬಂದಿದ್ದು ನಿಜ. ಉಡುಪಿಯಲ್ಲಿರುವಾಗ ನಮಗೊಂದು ಸೂಚನೆ ಬಂತು. ಮಾರ್ಚ್‌ 7ರ ರಾತ್ರಿ ಕಾಪು ಬೀಚ್‌ಗೆ ಹೋಗಬೇಕು ಎಂದು. ನನಗೆ ತಿಳಿಸಿದಂತೆ ಅಲ್ಲಿಗೆ ಹೋದೆವು. ಅಲ್ಲಿ ಬೆಳ್ಳಿ ಗಟ್ಟಿಯನ್ನು ತುಂಬಿಸಿ ಕೊಲ್ಲಾಪುರಕ್ಕೆ ಹೋಗುವಂತೆ ಸೂಚಿಸಿದರು. ಈ ಪಿಸ್ತೂಲನ್ನು ಇಟ್ಟಿದ್ದು ಕೂಡಾ ಅವರೇ. ಇಷ್ಟೇ ಗೊತ್ತಿರುವುದು ನಮಗೆ ಎಂದರು.
ಕಾಪು ಕಡಲ ತೀರದಲ್ಲಿ ಈ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದು ಮಹಮ್ಮದ್‌ ದೋಸಾ. ಆವತ್ತು ಅದೊಂದೇ ಟ್ರಕ್‌ ಹೊರಟಿದ್ದಲ್ಲ. ಮೂರು ಪ್ರತ್ಯೇಕ ಟ್ರಕ್‌ಗಳು ಮೂರು ಮಾರ್ಗಗಳಲ್ಲಿ ಸಾಗಿವೆ ಎಂದು ರಮೇಶ್‌ಕುಮಾರ್‌ ಹೇಳಿದ.
ಅಷ್ಟು ಹೊತ್ತಿಗೆ ಡಿಆರ್‌ಐ ಸಿಬ್ಬಂದಿಗೆ ಖಚಿತವಾಗಿ ಹೋಗಿತ್ತು. ಇದು ಅವನದೇ ಕೆಲಸ. ಅವನೆಂದರೆ ಉಚ್ಚಿಲ ಅಬ್ದುಲ್‌ ಖಾದರ್‌! ಅವನ ಹೆಸರು ಹೇಳುತ್ತಿದ್ದಂತೆಯೇ ರಮೇಶ್‌ ಕುಮಾರ್‌ ‘‘ಹೌದು, ಅವರ ಮನೆಗೆ ಹೋಗಿದ್ದೆವು. ನಮ್ಮಜತೆ ಮಾತನಾಡಿದ್ದರು,’’ ಎಂದು ಹೇಳಿದ. ಕೂಡಲೇ ಉಚ್ಚಿಲ ಅಬ್ದುಲ್‌ ಖಾದರ್‌ನ ಮನೆಗೆ ಪೊಲೀಸರು ದಾಳಿ ನಡೆಸಿದರು. ಖಾದರ್‌ ಏನೂ ಆಗಿಲ್ಲ ಎಂಬಂತೆ ಅಲ್ಲೇ ಇದ್ದ. ಬಂಧನಕ್ಕೂ ಹೆಚ್ಚು ಕಿರಿಕಿರಿ ಮಾಡಲಿಲ್ಲ. ಆದರೆ, ಅವನ ತಮ್ಮ ಧೀರಜ್‌ ಹುಸೇನ್‌ ಮಾತ್ರ ಡಿಆರ್‌ಐ ಲಗ್ಗೆ ಇಡುವ ಹೊತ್ತಿಗೆ ಮನೆಯಿಂದ ತಪ್ಪಿಸಿಕೊಂಡಿದ್ದ.
ಡಿಆರ್‌ಐ ಸಿಬ್ಬಂದಿ ಮತ್ತೊಮ್ಮೆ ಉಚ್ಚಿಲ ಅಬ್ದುಲ್‌ಖಾದರ್‌ನ ಕಡತ ತೆರೆದರು. ಉಚ್ಚಿಲ ಗ್ರಾಮದಲ್ಲಿ ಹುಟ್ಟಿದ ಖಾದರ್‌ ಸರಿಯಾಗಿ ಎಲಿಮೆಂಟರಿ ಶಿಕ್ಷಣವನ್ನೂ ಮುಗಿಸಿದವನಲ್ಲ. ಆದರೆ, ದೊಡ್ಡ ಉದ್ಯಮಿಯಾಗಿದ್ದ. ಇಬ್ಬರು ಹೆಂಡಿರು. ಉಚ್ಚಿಲದಲ್ಲೊಂದು ಮನೆ ಇದ್ದರೆ, ಮುಂಬಯಿಯಲ್ಲಿ ಮೂರು ಬಂಗಲೆಗಳಿದ್ದವು. ಅವನು ಹೆಚ್ಚಾಗಿ ಇರುತ್ತಿದ್ದುದೇ ಮುಂಬಯಿಯಲ್ಲಿ.
ಕಳ್ಳ ಸಾಗಾಣಿಕೆ ಎನ್ನುವುದು ಉಚ್ಚಿಲ ಅಬ್ದುಲ್‌ಖಾದರ್‌ಗೆ ರಕ್ತಗತ. ಹಲವಾರು ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ ಆತನನ್ನು ಕಾಫೆಫೋಸಾ ಕಾಯಿದೆಯಡಿ ಒಮ್ಮೆ ಬರೋಡಾ ಜೈಲಿಗೂ ಹಾಕಲಾಗಿತ್ತು. ಕುಖ್ಯಾತ ದೋಸಾ ಬ್ರದರ್ಸ್‌ ಜತೆಗಿನ ಆತನಕಾರ್ಯಾಚರಣೆ ಆರಂಭವಾಗಿದ್ದು ಗುಜರಾತ್‌ ಕರಾವಳಿ ತೀರದಲ್ಲಿ ಕಳ್ಳಸಾಗಣೆ ಮಾಡುವುದರೊಂದಿಗೆ.
ಇಷ್ಟು ವಿವರ ಹಿಡಿದುಕೊಂಡ ಡಿಆರ್‌ಐ ಸಿಬ್ಬಂದಿ ದೊಡ್ಡ ಬೇಟೆಯಾಡಿದ ಖುಷಿಯಲ್ಲಿದ್ದರು. ಆದರೆ, ಉಚ್ಚಿಲ ಅಬ್ದುಲ್‌ಖಾದರ್‌ ಸುಲಭದಲ್ಲಿ ಬಲೆಗೆ ಬೀಳುವ ಮೀನಾಗಿರಲಿಲ್ಲ!

ಮುಂದಿನ ಕಂತಿನಲ್ಲಿ
ಆಪರೇಷನ್‌ ಸಕ್ಸಸ್‌ಗೆ ರುದ್ರಾಭಿಷೇಕದ ಹರಕೆ ಹೊತ್ತಿದ್ದ ಖಾದರ್‌!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top