ಏಷ್ಯಾದ ಕುಬೇರ ಮುಕೇಶ್ ಅಂಬಾನಿಯ ಸಾಧನೆಯ ಕಥನದಲ್ಲಿ ಮನೋಜ್ ಮೋದಿ ಅವರದು ಪ್ರಮುಖ ಪಾತ್ರ.
– ಹ.ಚ.ನಟೇಶ ಬಾಬು.
ಭಾರತ ಮಾತ್ರವಲ್ಲ ಏಷ್ಯಾದಲ್ಲಿಯೇ ನಂ.1 ಕುಬೇರ ಎನ್ನುವ ಹೆಗ್ಗಳಿಕೆ ಮುಕೇಶ್ ಅಂಬಾನಿ ಅವರದು. ಹುರುನ್ ಸಿದ್ಧಪಡಿಸಿದ ಶ್ರೀಮಂತರ ಡೇಟಾ ಗಮನಿಸುವುದಾದರೆ, 2019ರಲ್ಲಿ ಮುಕೇಶ್ ಸಂಪತ್ತಿಗೆ 9.39 ಲಕ್ಷ ಕೋಟಿ ರೂ. ಸೇರಿಕೊಂಡಿದೆ. ದಿನದ ಲೆಕ್ಕದಲ್ಲಿ ಇದನ್ನು ವಿಭಾಗಿಸುವುದಾದರೆ, ಅವರ ಸಂಪತ್ತು ದಿನಕ್ಕೆ ಸರಾಸರಿ 237 ಕೋಟಿ ರೂ. ವೃದ್ಧಿಯಾಗಿದೆ. ಗಂಟೆಗೆ 10.7 ಕೋಟಿ ರೂ., ನಿಮಿಷಕ್ಕೆ 16 ಲಕ್ಷ ರೂ. ಲೆಕ್ಕದಲ್ಲಿ ಮುಕೇಶ್ ಖಜಾನೆಗೆ ಹಣ ಹರಿದು ಬಂದಿದೆ. 48.4 ಲಕ್ಷ ಕೋಟಿ ರೂ. ಸಂಪತ್ತಿನ ಒಡೆಯರಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅವರು ಮುಟ್ಟಿದ್ದೆಲ್ಲ ಚಿನ್ನ. ಇಂಧನದಿಂದ ರೀಟೇಲ್, ಅಲ್ಲಿಂದ ಟೆಲಿಕಾಂ ತನಕ ಇವರ ಸಾಮ್ರಾಜ್ಯದ ವಿಸ್ತಾರ ಹಿರಿದು. ತೆರೆಯ ಮೇಲೆ ಮುಕೇಶ್ ಮಿಂಚಿದರೂ ಅವರ ಹಿಂದಿನ ಅಸಲಿ ಶಕ್ತಿ ಮನೋಜ್ ಮೋದಿ.
ಹೊರ ಜಗತ್ತಿಗೆ ಈ ಹೆಸರು ಪರಿಚಿತವಲ್ಲ. ಆದರೆ, ಕಾರ್ಪೊರೇಟ್ ಜಗತ್ತಿನ ಒಳನೋಟಗಳನ್ನು ಬಲ್ಲವರಿಗೆ ಮನೋಜ್ ಪರಿಚಿತರು. ಸಾರ್ವಜನಿಕವಾಗಿ ಮನೋಜ್ ಮೋದಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ, ಮುಕೇಶ್ ಅವರ ಬಹುತೇಕ ಎಲ್ಲ ವ್ಯವಹಾರಗಳಲ್ಲೂ ಮನೋಜ್ ಅವರದು ಪ್ರಮುಖ ಪಾತ್ರ. ಮುಕೇಶ್ ಅಂಬಾನಿ ಮತ್ತು ಮನೋಜ್ ಮೋದಿ ಕಾಲೇಜಿನಿಂದಲೂ ಜೋಡಿ. ಎಂಜಿನಿಯರಿಂಗ್ ಕಾಲೇಜಿನ ಸ್ನೇಹವು ಉದ್ಯಮದ ತನಕ ಬೆಳೆದಿದೆ. ಮುಕೇಶ್ರ ಮೆದುಳಿನಂತೆ ಮನೋಜ್ ಕೆಲಸ ಮಾಡುತ್ತಿದ್ದಾರೆ.
1980ರಲ್ಲಿ ಮನೋಜ್ ರಿಲಯನ್ಸ್ ಪ್ರವೇಶಿಸಿದರು. ಸದ್ಯಕ್ಕೆ ಮನೋಜ್ ಅವರು ರಿಲಯನ್ಸ್ ರಿಟೇಲ್ ಲಿಮಿಟೆಡ್ ಮತ್ತು ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್ನ ನಿರ್ದೇಶಕರು. ಧೀರೂಭಾಯಿ ಅಂಬಾನಿ, ಮುಕೇಶ್ ಮತ್ತು ಪತ್ನಿ ನೀತಾ, ಈಗ ಅವರ ಮಕ್ಕಳಾದ ಇಶಾ ಮತ್ತು ಆಕಾಶ್- ಹೀಗೆ ಅಂಬಾನಿ ಕುಟುಂಬದ ಮೂರು ತಲೆಮಾರುಗಳೊಂದಿಗೆ ಕೆಲಸ ಮಾಡಿರುವ ಮನೋಜ್, ಇತ್ತೀಚಿನ ದಿನಗಳಲ್ಲಿ ದಿಢೀರ್ ಸುದ್ದಿ ಮಾಡಿದ್ದಾರೆ. 5.7 ಶತಕೋಟಿ ಡಾಲರ್(43,320 ಕೋಟಿ ರೂ.) ಡೀಲ್ ಮೂಲಕ ಫೇಸ್ಬುಕ್ ಜೊತೆಗಿನ ರಿಲಯನ್ಸ್ ಮೈತ್ರಿಯಲ್ಲಿ ಮನೋಜ್ ಕೈ ಇದೆ. ಕೋವಿಡ್ ಲಾಕ್ಡೌನ್ನಿಂದ ದೇಶದ ಉದ್ಯಮ ತತ್ತರಿಸಿದ್ದರೆ, ಆ ಅವಧಿಯಲ್ಲಿಯೇ ಕೇವಲ ಏಳು ವಾರಗಳಲ್ಲಿ ವಿವಿಧ ಕಂಪನಿಗಳು ಒಟ್ಟು 13 ಶತಕೋಟಿ ಡಾಲರ್(97,885 ಕೋಟಿ ರೂ.) ಅನ್ನು ಜಿಯೋ ಪ್ಲಾಟ್ಫಾರ್ಮ್ಗಳಲ್ಲಿ ಹೂಡಿಕೆ ಮಾಡಿವೆ. ಕೆಕೆಆರ್ ಆ್ಯಂಡ್ ಕಂಪನಿ, ಸಿಲ್ವರ್ ಲೇಕ್ ಪಾರ್ಟನರ್ಸ್, ವಿಸ್ಟಾ ಈಕ್ವಿಟಿ ಪಾರ್ಟನರ್ಸ್ ಮತ್ತು ಜನರಲ್ ಅಟ್ಲಾಂಟಿಕ್ ಸೇರಿದಂತೆ ವಿಶ್ವದ ದೊಡ್ಡ ಕಂಪನಿಗಳೊಂದಿಗಿನ ಈ ಎಲ್ಲ ಡೀಲ್ಗಳಲ್ಲೂ ಮನೋಜ್ ಮೋದಿ ಕಾರ್ಯತಂತ್ರ ಫಲ ನೀಡಿದೆ. ಈ ಮೂಲಕ ಮುಕೇಶ್ ಅವರ ರಿಲಯನ್ಸ್ ಸಂಸ್ಥೆಯು ಸಾಲಮುಕ್ತವಾಗುವ ಹಾದಿಯಲ್ಲಿ ಮನೋಜ್ ಕಾರಣಕರ್ತರು.
ಆರ್ಐಎಲ್ ಮತ್ತು ಮುಕೇಶ್ ಯಶಸ್ಸಿನ ಹಿಂದೆ ಮನೋಜ್ ಮ್ಯಾಜಿಕ್ ಇದೆ ಎನ್ನುವುದನ್ನು ಉದ್ಯಮದ ಗಣ್ಯರು ಒಪ್ಪುತ್ತಾರೆ. ಅಂಬಾನಿ ಮತ್ತು ಮೋದಿ ಒಂದೇ ಪ್ರಬಲ ತಂಡದ ಆಟಗಾರರು ಎನ್ನುವುದು ಉದ್ಯಮಕ್ಕೆ ತಿಳಿದಿದೆ. ಮನೋಜ್ ಮೋದಿ ಕೈ ಹಾಕಿದ ಯಾವುದೇ ಡೀಲ್ಗಳು ಸೋತದ್ದಿಲ್ಲ. ಅನೇಕ ಡೀಲ್ಗಳಲ್ಲಿ ಭಾಗಿಯಾಗಿರುವ ಡಜನ್ಗೂ ಅಧಿಕ ಅಧಿಕಾರಿಗಳು, ಮೋದಿ ಅವರ ಪಾತ್ರ ಗಮನಾರ್ಹ ಎನ್ನುತ್ತಾರೆ. ಮಾತುಕತೆ ಮತ್ತು ಚೌಕಾಸಿಗಳಲ್ಲಿ ಅವರ ಕೌಶಲದಿಂದ ರಿಲಯನ್ಸ್ಗೆ ಸಾಕಷ್ಟು ಲಾಭವಾಗಿದೆ.
ಆದರೆ, ಯಾವುದೇ ಕ್ರೆಡಿಟ್ ಅನ್ನು ಭುಜಕಿರೀಟವಾಗಿ ಧರಿಸಲು ಇಚ್ಛಿಸದ ಮನೋಜ್, ‘‘ನಾನು ನಿಜಕ್ಕೂ ಏನನ್ನೂ ಮಾಡಿಲ್ಲ. ನಮ್ಮ ತಂಡದ ಮಾರ್ಗದರ್ಶನವನ್ನು ಅನುಸರಿಸಿದ್ದೇನೆ ಅಷ್ಟೆ. ನನ್ನಲ್ಲಿ ಯಾವ ವಿಶೇಷ ಕೌಶಲ-ಕಾರ್ಯತಂತ್ರಗಳೂ ಇಲ್ಲ. ನಾನು ಯಾವುದೇ ಒಪ್ಪಂದ ಪ್ರಕ್ರಿಯೆಯಲ್ಲೂ ತೊಡಗುವುದಿಲ್ಲ. ನಾನು ರಿಲಯನ್ಸ್ನ ಒಳಗಿನ ಜನರ ಜೊತೆ ಮಾತ್ರ ವ್ಯವಹರಿಸುತ್ತೇನೆ,’’ ಎಂದು ತಣ್ಣಗೆ ಹೇಳುತ್ತಾರೆ. ತಮ್ಮನ್ನು ತಾವು ಸಾಮಾನ್ಯ ಮನುಷ್ಯ, ತಮಗೆ ಯಾವುದೇ ವಿಷನ್ ಅನ್ನುವುದೂ ಇಲ್ಲ ಎನ್ನುತ್ತಾ, ಮರೆಯಲ್ಲಿ ಉಳಿಯಲು ಯತ್ನಿಸುತ್ತಾರೆ.
‘‘ನಾನು ಉನ್ನತಾಧಿಕಾರಿಯಾಗಿ ಸಮರ್ಥನೂ ಅಲ್ಲ. ಆದರೆ, ಯೋಜನೆ ಜಾರಿಯಲ್ಲಿ ಹಿಂದೆಮುಂದೆ ನೋಡುವುದಿಲ್ಲ. ಯಾವುದೇ ಅಡ್ಡಿಗಳಿದ್ದರೂ ಅತ್ತ ನೋಡುವುದೇ ಇಲ್ಲ. ಅಡ್ಡಿಗಳು ಕಾಣಿಸಿದರೂ, ಅವುಗಳನ್ನು ಹಾದು ಮುಂದೆ ಸಾಗುವುದು ಹೇಗೆ ಎಂದಷ್ಟೇ ಯೋಚಿಸುತ್ತೇನೆ,’’ ಎಂದು ಮನೋಜ್ ಹಿಂದೊಮ್ಮೆ ಹೇಳಿಕೊಂಡಿದ್ದಾರೆ. ಬಹುಶಃ ಇದೇ ಅವರ ಗೆಲುವಿನ ಗುಟ್ಟು ಇದ್ದಿರಬಹುದು.
‘‘ಜನರು ಬಹುತೇಕ ಸಲ ತಮ್ಮದೇ ತೀರ್ಮಾನಗಳಿಗೆ ಅಂಟಿಕೊಂಡಿರುತ್ತಾರೆ. ಅಲ್ಲಿಯೇ ಒದ್ದಾಡುತ್ತಿರುತ್ತಾರೆ. ರಿಲಯನ್ಸ್ನಲ್ಲಿ ಯಾರು ಯಾವುದೇ ತೀರ್ಮಾನ ಕೈಗೊಳ್ಳಲಿ. ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ತೀರ್ಮಾನವು ತಪ್ಪಾಗಿದ್ದರೆ, ಅದನ್ನು ತ್ವರಿತವಾಗಿ ಸರಿಪಡಿಸುವುದರತ್ತ ನಾವು ಗಮನ ನೀಡುತ್ತೇವೆ ಅಷ್ಟೇ,’’ ಎನ್ನುವ ಮನೋಜ್ ಅವರಿಗೆ ದೇಶದ ಜನರ ನಾಡಿಮಿಡಿತ ಚೆನ್ನಾಗಿ ಗೊತ್ತು. ‘‘ಭಾರತದಲ್ಲಿ ಪೂರೈಕೆಗೆ ಕೊರತೆಯಿರುವ ಮಾರುಕಟ್ಟೆ ಇದೆಯೇ ಹೊರತು, ಬೇಡಿಕೆಗೆ ಕೊರತೆ ಇಲ್ಲ. ಈ ಥಿಯರಿಯನ್ನೇ ನಾಲ್ಕು ದಶಕಗಳಿಂದ ನಾವು ಅನುಸರಿಸುತ್ತಿದ್ದೇವೆ,’’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದೇ ಅಂಬಾನಿ ಸಾಮ್ರಾಜ್ಯದ ಬುನಾದಿ.
60 ವರ್ಷದ ಮನೋಜ್ ಮೋದಿ ಮೀಡಿಯಾ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಅವರ ಕುರಿತ ವೈಯಕ್ತಿಕ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ. ವಿರಳವಾಗಿ ಸಂದರ್ಶನಗಳನ್ನು ನೀಡುತ್ತಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವೇ ಜನರಿಗಷ್ಟೇ ತಿಳಿದಿದೆ. ‘‘ಮನೋಜ್ ಅವರು ತಮ್ಮ ನಿಷ್ಠೆಯಿಂದ ಮಾತ್ರವಲ್ಲ, ಅವರ ಸ್ಮಾರ್ಟ್ನೆಸ್, ಸಂವಹನದ ಕೌಶಲ, ತಂತ್ರಗಾರಿಕೆ ಮೂಲಕ ಸಂಸ್ಥೆಯ ಚಲನಶಕ್ತಿಯಾಗಿದ್ದಾರೆ,’’ ಎಂದು ಏರ್ ಡೆಕ್ಕನ್ ಸಂಸ್ಥಾಪಕ ಜಿ.ಆರ್.ಗೋಪಿನಾಥ್ ಹಿಂದೊಮ್ಮೆ ಹೇಳಿದ್ದರು. ತಮ್ಮ ಏರ್ಲೈನ್ಸ್ನ ಷೇರುಗಳನ್ನು ರಿಲಯನ್ಸ್ಗೆ 2010ರಲ್ಲಿ ಮಾರಾಟ ಮಾಡಿದ್ದ ಗೋಪಿನಾಥ್ ಅವರು ಮನೋಜ್ರನ್ನು ಹತ್ತಿರದಿಂದ ನೋಡಿದವರು.
‘ಎಂಎಂ’ ಎಂದು ಮುಕೇಶ್ ಅಂಬಾನಿಯಿಂದ ಕರೆಸಿಕೊಳ್ಳುವ ಮನೋಜ್ ಮೋದಿ ಮುಂದೆ, ಗೆಳೆಯನ ಸಾಮ್ರಾಜ್ಯ ವಿಸ್ತರಣೆ ಕುರಿತಾದ ದೊಡ್ಡದೊಡ್ಡ ಕನಸುಗಳಿವೆ. ಅವರು ಬಿಸಿನೆಸ್ ಮತ್ತು ಫೈನಾನ್ಸ್ ಕುರಿತಾದ ಪದವಿಗಳನ್ನು ವಿದೇಶಿ ವಿಶ್ವವಿದ್ಯಾಲಯಗಳಿಂದ ಗಳಿಸಿದವರಲ್ಲ. 70ರ ದಶಕದ ಮಧ್ಯದಲ್ಲಿ ಮುಂಬಯಿನ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಪದವಿ ಪಡೆದವರು. ಒಂದೊಮ್ಮೆ ವಿದೇಶಕ್ಕೆ ತೆರಳಿ ಉನ್ನತ ವ್ಯಾಸಂಗ ಮಾಡುವಂತೆ ಮನೋಜ್ಗೆ ಮುಕೇಶ್ ಸೂಚಿಸಿದ್ದರು. ‘‘ಅದೆಲ್ಲ ಅನಗತ್ಯ. ಸುಮ್ಮನೇ ಸಮಯ ಹಾಳು. ಸ್ವಲ್ಪ ಕೆಲಸ ಮಾಡೋಣ,’’ ಎಂದು ಮನೋಜ್ ಆಗ ಹೇಳಿದ್ದರು. ದಣಿವರಿಯದ ಅವರ ಕೆಲಸ ಮುಂದುವರಿಯುತ್ತಲೇ ಇದೆ. ಫಿಟ್ನೆಸ್ಗೆ ಹೆಚ್ಚಿನ ಒತ್ತು ಕೊಟ್ಟಿದ್ದು, ದಿನಕ್ಕೆ ಅರ್ಧಗಂಟೆ ಯೋಗಕ್ಕೆ ಮೀಸಲು. ಹೆಚ್ಚಿನ ಸಮಯ ಕಚೇರಿಯಲ್ಲಿಯೇ ಕಳೆಯುತ್ತಾರೆ.
ಮುಕೇಶ್ರ ರಿಲಯನ್ಸ್ ತನ್ನ ವ್ಯವಹಾರಗಳಲ್ಲಿ ಕಾರ್ಯತಂತ್ರದ ಸಹಭಾಗಿತ್ವವನ್ನು ಈಗ ಅನ್ವೇಷಿಸುತ್ತಿದೆ. ತನ್ನ ತೈಲ-ರಾಸಾಯನಿಕಗಳ ವ್ಯವಹಾರದಲ್ಲಿ ಸೌದಿ ಅರಾಮ್ಕೊಗೆ ಪಾಲು ನೀಡಲು ಮನಸ್ಸು ಮಾಡಿದೆ. ಈ ಬಗೆಗಿನ ಮಾತುಕತೆಗಳು ಬಿರುಸಾಗಿದ್ದು, ಇದರ ನೇಪಥ್ಯದಲ್ಲಿರುವುದು ಇದೇ ಮನೋಜ್ ಮೋದಿ. ಅವರು ಅಂದುಕೊಂಡಂತೆಯೇ ಎಲ್ಲವೂ ಆದರೆ, ಸದ್ಯದಲ್ಲಿಯೇ ಮುಕೇಶ್ರ ಸಾಮ್ರಾಜ್ಯ ಸಂಪೂರ್ಣ ಸಾಲಮುಕ್ತ.