– ಭೂಸುಧಾರಣೆ ಕಾಯಿದೆ ತಿದ್ದುಪಡಿಯ ಒಳಿತು-ಕೆಡುಕಿನ ವಾದ ತಾರಕಕ್ಕೆ
– ಕೃಷಿ ಕೃಶವಾಗದಿರಲಿ, ಕೈಗಾರಿಕೆಗಳಿಗೂ ಅವಕಾಶ ಸಿಗಲಿ ಎಂಬ ಆಶಯ.
ವಿಕ ಸುದ್ದಿಲೋಕ, ಬೆಂಗಳೂರು.
ರಾಜ್ಯ ಸರಕಾರದ ಉದ್ದೇಶಿತ ಭೂಸುಧಾರಣೆ ಕಾಯಿದೆ ತಿದ್ದುಪಡಿ ಪ್ರಸ್ತಾಪದ ಪರ ವಿರೋಧ ಚರ್ಚೆ ತೀವ್ರವಾಗಿದೆ. ಕಾಯಿದೆ ತಿದ್ದುಪಡಿಯಿಂದ ಕರ್ನಾಟಕದಲ್ಲಿ ರೈತರಿಗೆ, ಕೃಷಿ ವಲಯಕ್ಕೆ ಯಾವುದೇ ಹಿನ್ನಡೆ ಆಗದೆ ಕೈಗಾರಿಕಾ ಕ್ರಾಂತಿಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಸರಕಾರದ ನಿಲುವು. ಇದೇ ವೇಳೆ ಈ ತಿದ್ದುಪಡಿ ರಾಜ್ಯದ ರೈತರಿಗೆ ಮಾರಕ ಎಂಬ ವಾದವನ್ನು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ರೈತ ಸಂಘಟನೆಗಳು ಮುಂದಿಡುತ್ತಿವೆ.
ಉದ್ದೇಶಿತ ತಿದ್ದುಪಡಿಯಿಂದ ಕೃಷಿ ಮತ್ತು ಕೈಗಾರಿಕೆಗಳೆರಡೂ ಸಮವಾಗಿ ಅಭಿವೃದ್ಧಿ ಹೊಂದುವ ಅವಕಾಶವಿದೆ. ಜತೆಗೆ ಕೃಷಿಯನ್ನು ಉದ್ದಿಮೆ ಸ್ವರೂಪದಲ್ಲಿ ಬೆಳೆಸಲು ಅವಕಾಶ ದೊರೆಯಲಿದೆ ಎಂಬ ವಾದವಿದೆ. ಹಲವಾರು ರಾಜ್ಯಗಳು ಭೂ ಖರೀದಿ ನಿಯಮಾವಳಿ ಸುಧಾರಣೆಗಳ ಮೂಲಕ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಿಕೊಂಡಿವೆ. ಕರ್ನಾಟಕಕ್ಕೆ ಇದರಿಂದ ಲಾಭವಾಗಲಿದೆ ಎನ್ನುವುದು ಸರಕಾರದ ಅಭಿಪ್ರಾಯ. ಆದರೆ, ಕೃಷಿ ಭೂಮಿಯನ್ನು ಮುಕ್ತ ಮಾರಾಟಕ್ಕೆ ಬಿಡುವುದರಿಂದ ಕೃಷಿ ನಾಶವಾಗಿ ರಿಯಲ್ ಎಸ್ಟೇಟ್ ಮತ್ತಿತರ ದಂಧೆಗಳು ತಲೆ ಎತ್ತುತ್ತದೆ ಎನ್ನುವುದು ವಿರೋಧ ಪಕ್ಷಗಳ ಆರೋಪ.
ಕೃಷಿ ಉಳುಮೆ ಮಾಡುವವನಿಗೆ ಭೂಮಿಯ ಒಡೆತನ ಕೊಡುವುದು 1961ರಲ್ಲಿ ದೇವರಾಜ ಅರಸು ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಭೂಸುಧಾರಣಾ ಕಾಯಿದೆಯ ಉದ್ದೇಶ. ಭೂಸುಧಾರಣಾ ಕಾಯಿದೆಯ ಸೆಕ್ಷನ್ 79ರ ಎ,ಬಿ,ಸಿ, ಅನುಬಂಧಗಳ ಪ್ರಕಾರ ಕೃಷಿಯೇತರ ಆದಾಯ ಹೊಂದಿರುವವರು ಕೃಷಿ ಜಮೀನು ಖರೀದಿ ಮಾಡುವುದನ್ನು ನಿರ್ಬಂಧಿಸುತ್ತದೆ. ಅನುಬಂಧ 80 ಒಬ್ಬ ಕೃಷಿ ಹಿಡುವಳಿದಾರ ಹೊಂದಬಹುದಾದ ಗರಿಷ್ಠ ಕೃಷಿ ಭೂಮಿಯ ಮಿತಿ (30 ಎಕರೆ)ಯನ್ನು ಹೇಳುತ್ತದೆ. ಉದ್ದೇಶಿತ ತಿದ್ದುಪಡಿ ಪ್ರಕಾರ ಕೃಷಿಯೇತರರು ಕೃಷಿ ಭೂಮಿ ಖರೀದಿಸಲು ಇರುವ ನಿರ್ಬಂಧ ಹಾಗೂ ಹಿಡುವಳಿದಾರ ಹೊಂದಬಹುದಾದ ಗರಿಷ್ಠ ಹಿಡುವಳಿ ಮಿತಿ ಎರಡನ್ನೂ ರದ್ದುಪಡಿಸುತ್ತದೆ.
ಇದೇ ಮೊದಲಲ್ಲ
1996ರಲ್ಲಿ ಅಂದಿನ ಜೆಎಚ್ ಪಟೇಲ್ ಸರಕಾರ ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಕೃಷಿ ಹಿಡುವಳಿದಾರ ಹೊಂದಬಹುದಾದ ಗರಿಷ್ಠ ಕೃಷಿ ಭೂಮಿಯ ಮಿತಿಯ ನಿರ್ಬಂಧವನ್ನು ಸಡಿಲಿಸಿ 90 ಎಕರೆಗೆ ವಿಸ್ತರಿಸಿತು.
2015ರಲ್ಲಿ ಅಂದಿನ ಸಿದ್ದರಾಮಯ್ಯ ಸರಕಾರ ಕಾಯಿದೆಗೆ ಮತ್ತೊಮ್ಮೆ ತಿದ್ದುಪಡಿ ತಂದು 5 ಲಕ್ಷಕ್ಕಿಂತ ಹೆಚ್ಚು ಕೃಷಿಯೇತರ ಆದಾಯ ಹೊಂದಿದವರು ಕೃಷಿಯೇತರ ಭೂಮಿ ಖರೀದಿಸಬಾರದೆಂಬ ಮಿತಿಯನ್ನು 25 ಲಕ್ಷ ರೂ.ಗಳಿಗೆ ವಿಸ್ತರಿಸಿತು. ನಿರ್ದಿಷ್ಟ ಕುಟುಂಬ ಖದೀದಿಸಬಹುದಾದ ಕೃಷಿ ಭೂಮಿಯ ಮಿತಿಯನ್ನು 54 ಎಕರೆಗೆ ಏರಿಸಿದರು. ಇದೀಗ ಬಿ.ಎಸ್ ಯಡಿಯೂರಪ್ಪ 108 ಎಕರೆವರೆಗೆ ಕೃಷಿ ಜಮೀನು ಖರೀದಿಸಲು ಅವಕಾಶ ನೀಡುವ ಪ್ರಸ್ತಾಪ ಮುಂದಿಟ್ಟಿದೆ.
ಕರ್ನಾಟಕವೇ ಮೊದಲಲ್ಲ
ಹಾಗೆ ನೋಡಿದರೆ ಈಗಾಗಲೇ ಇತರ ಬಹುತೇಕ ರಾಜ್ಯಗಳು ಕೃಷಿ ಮತ್ತು ಕೃಷಿಯೇತರ ಉದ್ದೇಶಗಳಿಗೆ ಕೃಷಿ ಭೂಮಿ ಖರೀದಿಸಲು ಹಾದಿ ಸುಗಮ ಮಾಡಿಕೊಟ್ಟಿವೆ. ಮುಖ್ಯವಾಗಿ ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ಈ ತಿದ್ದುಪಡಿಯಿಂದ ಕೈಗಾರಿಕೆ ಮತ್ತು ಕೃಷಿ ಎರಡರಲ್ಲೂ ಅಗಾಧ ಪ್ರಗತಿ ಸಾಧಿಸಿವೆ. ಕರ್ನಾಟಕದಲ್ಲಿ ನಿರೀಕ್ಷಿತ ಹೂಡಿಕೆ ಹರಿದು ಬರದೆ ಇರಲು ಭೂಮಿಯ ಅಲಭ್ಯತೆ ಮತ್ತು ಅಗತ್ಯ ಭೂಮಿ ಖರೀದಿಗೆ ಇರುವ ತೊಡಕು ಕಾರಣ ಎಂಬ ದೂರು ಕೇಳಿಬರುತ್ತಿದೆ.
ಭೂಮಿಯ ಆಯ್ಕೆ ಸ್ವಾತಂತ್ರ್ಯ
ಕೈಗಾರಿಕೀಕರಣಕ್ಕೆ ಅನುಕೂಲ ಆಗಲು ಕಾಲಕಾಲಕ್ಕೆ ಸರಕಾರಗಳು ಭೂಮಿ ಯೋಜನೆ ರೂಪಿಸಿಲ್ಲ ಎಂದಲ್ಲ. ಬೆಂಗಳೂರು ಸುತ್ತಮುತ್ತಲೂ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಕೈಗಾರಿಕೆಗಳಿಗೆ ಮೀಸಲಿಟ್ಟ ಲ್ಯಾಂಡ್ ಬ್ಯಾಂಕನ್ನು ಸ್ಥಾಪಿಸಲಾಗಿದೆ. ಆದರೆ ಆ ಭೂಮಿ ಎಲ್ಲ ಕೈಗಾರಿಕೆಗಳಿಗೆ ಅನುಕೂಲಕರವಾಗಿರುವುದಿಲ್ಲ, ಅಥವಾ ಭೂಮಿ ಆಯ್ಕೆ ಸ್ವಾತಂತ್ರ್ಯ ಉದ್ಯಮಿಗಳಿಗೆ ಇರುವುದಿಲ್ಲ. ಉದ್ದೇಶಿತ ಕಾಯ್ದೆ ತಿದ್ದುಪಡಿ ಉದ್ಯಮಿಗಳಿಗೆ ಭೂಮಿ ಆಯ್ಕೆ ಸ್ವಾತಂತ್ರ್ಯ ನೀಡಲಿದೆ. ಅದರಿಂದ ಕಚ್ಚಾ ವಸ್ತು, ಕೌಶಲ್ಯಭರಿತ ಕಾರ್ಮಿಕರು, ನೀರು, ಸಂಪರ್ಕ ಇತ್ಯಾದಿ ಅನುಕೂಲ ಆಧರಿತ ಕೈಗಾರಿಕೆ ಸ್ಥಾಪನೆಗೆ ಅನುಕೂಲ.
2ನೇ ಹಂತದ ನಗರಗಳಿಗೆ ಲಾಭ
ತಮಿಳುನಾಡು, ಆಂಧ್ರಗಳಲ್ಲಿ ರಾಜಧಾನಿಗೆ ಸರಿಸಮನಾಗಿ ಎಂಟರಿಂದ ಹತ್ತು 2ನೇ ಹಂತದ ಕೈಗಾರಿಕಾ ನಗರಗಳು ಅಭಿವೃದ್ಧಿ ಹೊಂದಿವೆ. ಅದಕ್ಕೆ ಭೂಮಿ ಇತ್ಯಾದಿ ಮೂಲ ಸೌಕರ್ಯ ಲಭ್ಯತೆಗೆ ರೂಪಿಸಿದ ನೀತಿಯೇ ಕಾರಣ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ 2ನೇ ಹಂತದ ನಗರಗಳ ಬೆಳವಣಿಗೆಗೆ ಭೂಸುಧಾರಣೆ ಕಾಯಿದೆ ತಿದ್ದುಪಡಿ ಅನುಕೂಲ.
ಕೃಷಿಗೂ ಲಾಭ
ನಗರ ಪ್ರದೇಶದಲ್ಲಿ ಉದ್ಯೋಗ ಮಾಡಿಕೊಂಡು ಆರ್ಥಿಕವಾಗಿ ಅನುಕೂಲ ಇರುವ ವಿದ್ಯಾವಂತರು ಕೃಷಿ ಚಟುವಟಿಕೆ ನಡೆಸಲು ಮತ್ತು ಕೃಷಿಯಲ್ಲಿ ಹೂಡಿಕೆ ಮಾಡಲು ಭೂಸುಧಾರಣೆ ಕಾಯಿದೆಯೇ ತೊಡಕು. ಪರಿಣಾಮ ಹಣವುಳ್ಳವರು, ವಿದ್ಯಾವಂತರು ಕೃಷಿ ಮಾಡುವ ಹಾಗಿಲ್ಲ, ಹಣವಿಲ್ಲದ ಕೃಷಿ ಭೂಮಿ ಹಿಡುವಳಿದಾರರು ಕೃಷಿಯಲ್ಲಿ ಹೂಡಿಕೆ, ತಂತ್ರಜ್ಞಾನ ಅಳವಡಿಕೆ ಮಾಡುವ ಹಾಗಿಲ್ಲ. ಈ ಉದ್ದೇಶಿತ ಕಾಯಿದೆ ಈ ತೊಡಕನ್ನು ನಿವಾರಿಸಿ ವಿದ್ಯಾವಂತ ಕೃಷಿ ಆಸಕ್ತರನ್ನು ಕೃಷಿ ಕಡೆ ಆಕರ್ಷಿಸಲು ಅನುಕೂಲ ಭೂಮಿಯ ಉತ್ಪಾದಕತೆಗೆ ಒತ್ತು ಕೃಷಿ ಭೂಮಿಯನ್ನು ಕೃಷಿಗೆ ಅಥವಾ ಕೈಗಾರಿಕೆಗೆ ಹೂಡಿಕೆ ಆಧಾರದಲ್ಲಿ ಬಳಸಲು ಅನುವು ಮಾಡಿ ಕೊಡುವುದರಿಂದ ಭೂಮಿಯ ಉತ್ಪಾದಕತೆ ಮೌಲ್ಯ ವೃದ್ಧಿ ಆಗಲಿದೆ. ಇದರಿಂದ ಕೃಷಿ ಹಿಡುವಳಿದಾರರಿಗೂ, ಉದ್ಯಮಿಗಳಿಬ್ಬರೂ ಈ ಅವಕಾಶದ ಲಾಭ ಮಾಡಿಕೊಳ್ಳಲು ಅವಕಾಶವಾಗಲಿದೆ.
ಕಾಂಟ್ರಾಕ್ಟ್ ಫಾರ್ಮಿಂಗ್ ಅಪಥ್ಯವಲ್ಲ
ಉದ್ದೇಶಿತ ಭೂಸುಧಾರಣೆ ಕಾಯಿದೆ ತಿದ್ದುಪಡಿ ರಾಜ್ಯದಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್ ಜನಪ್ರಿಯಗೊಳಿಸಲು ಅನುಕೂಲ ಆಗಬಹುದು. ಈ ಪದ್ಧತಿ ಈಗಾಗಲೇ ಮುಂದುವರೆದ ದೇಶಗಳಲ್ಲಿ ಲಾಭದಾಯಕವಾಗಿ ಜನಪ್ರಿಯಗೊಂಡಿದೆ. ಮುಖ್ಯವಾಗಿ ಕೃಷಿಗೆ ಕೈಗಾರಿಕಾ ಸ್ಥಾನಮಾನ ನೀಡಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿಕೆಗೆ ಹಾದಿ ಸುಗಮ ಮಾಡಲಿದೆ. ಕಾಂಟ್ರಾಕ್ಟ್ ಫಾರ್ಮಿಂಗ್ ಜನಪ್ರಿಯಗೊಂಡರೆ, ತಂತ್ರಜ್ಞಾನ ಆಧಾರಿತ ವ್ಯಾಪಕ ಕೃಷಿ ಚಟುವಟಿಕೆಯಿಂದ ಭೂಒಡೆಯನಿಗೆ ಮತ್ತು ಬಳಕೆದಾರರಿಬ್ಬರಿಗೂ ಅಧಿಕ ಲಾಭ ನಿರೀಕ್ಷಿಸಬಹುದಾಗಿದೆ. ಇದು ವಿಶಾಲ ಕೃಷಿ ಭೂ ಪ್ರದೇಶ ಹೊಂದಿರುವ ಉತ್ತರ ಕರ್ನಾಟಕ ಭಾಗದ ರೈತರಿಗೆ ಸಮಗ್ರ ಕರ್ನಾಟಕದ ಬಳಕೆದಾರರಿಗೆ ಅನುಕೂಲ ಆದೀತು.
ಕೃಷಿ ಭೂಮಿ ಕೃಷಿಗೆ ಬಳಕೆ ಆಗುತ್ತಿಲ್ಲ
ಉದ್ದೇಶಿತ ಭೂಸುಧಾರಣೆ ತಿದ್ದುಪಡಿ ಕಾಯಿದೆಯಿಂದ ಕೃಷಿ ಭೂಮಿ ಪ್ರಮಾಣ ಕುಗ್ಗಲಿದೆ ಎಂಬುದು ಸಾಮಾನ್ಯವಾಗಿ ವ್ಯಕ್ತಪಡಿಸಲಾಗುತ್ತಿರುವ ಅಭಿಪ್ರಾಯ. ಆದರೆ, ವಾಸ್ತವ ಏನು ಎಂದರೆ ಈಗಾಗಲೇ ಕರ್ನಾಟಕವೊಂದರಲ್ಲೇ 23 ಲಕ್ಷ ಹೆಕ್ಟೇರಿಗೂ ಅಧಿಕ ಕೃಷಿ ಭೂಮಿ ಪಾಳು ಬಿದ್ದಿದೆ. ಕಾಯಿದೆ ತೊಡಕಿನ ಕಾರಣಕ್ಕೆ ಆ ಭೂಮಿ ಅನ್ಯ ಉದ್ದೇಶಗಳಿಗೆ ಬಳಸಲೂ ಸಾಧ್ಯವಾಗುತ್ತಿಲ್ಲ. ಸಾಧ್ಯವಾದರೆ ಇಂಥ ಪಾಳು ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಬಳಸಲು ಸರಕಾರ ಆದ್ಯತೆ ನೀಡುವುದು ಉತ್ತಮ.
ಅಪಾಯದ ಬಗ್ಗೆ ಎಚ್ಚರ ಇರಲಿ
ಎಲ್ಲ ವಿಷಯದಲ್ಲೂ ಎಲ್ಲ ಕಾಲದಲ್ಲೂ ಅಪಾಯ ಉಪಾಯ ಎರಡೂ ಇದ್ದದ್ದೇ. ಈಗ ಉದ್ದೇಶಿತ ಭೂಸುಧಾರಣಾ ಕಾಯಿದೆ ತಿದ್ದುಪಡಿಯ ಸಂದರ್ಭಧಿದಲ್ಲೂ ಅಪಾಯವನ್ನು ಮುಂಗಾಣಲೇಬೇಕು. ಅದನ್ನು ನಿರ್ಬಂಧಿಸಲು ಸೂಕ್ತ ಉಪಕ್ರಮ ರೂಪಿಸಬೇಕು.
ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯಾಗಲಿ
ಕಾಯಿದೆ ತಿದ್ದುಪಡಿ ಸಂದರ್ಭದಲ್ಲಿ ಕಠಿಣ ನೀತಿ ರೂಪಿಸುವ ಅಧಿಕಾರ ಸರಕಾರದ ಕೈಲಿದೆ. ಕೃಷಿ ಭೂಮಿಯನ್ನು ಖರೀದಿಸುವ ಉದ್ದೇಶ ಸ್ಪಷ್ಟಪಡಿಸಲು ಮತ್ತು ಅದೇ ಉದ್ದೇಶಕ್ಕೆ ಆ ಭೂಮಿ ಬಳಸಲು ನಿಗಾ ವ್ಯವಸ್ಥೆ ಕಟ್ಟುನಿಟ್ಟಾಗಿರಬೇಕು. ಕೈಗಾರಿಕಾ ಉದ್ದೇಶಕ್ಕೆ ಖರೀದಿಸುವ ಭೂಮಿಯನ್ನು ಕನಿಷ್ಠ 15ರಿಂದ 20 ವರ್ಷ ಕಾಲ ಬೇರೆ ಉದ್ದೇಶಕ್ಕೆ ಬಳಸದಂತೆ ನಿರ್ಬಂಧಿಸಿದರೆ ದುರ್ಬಳಕೆ ತಡೆ ಸುಲಭ.
ಅಧಿಕಾರಿಗಳನ್ನು ಹೊಣೆ ಮಾಡಲಿ
ಸರಕಾರ ರೂಪಿಸುವ ಯೋಜನೆಗಳ ಸೋಲು ಗೆಲವು ಯೋಜನೆ ಜಾರಿಗೊಳಿಸುವ ಅಧಿಕಾರಿಗಳ ಮೇಲಿದೆ. ಹೀಗಾಗಿ ಕೃಷಿ ಭೂಮಿ ಖರೀದಿ, ಬಳಕೆ ಸಂದರ್ಭದಲ್ಲಿಅಧಿಕಾರಿಗಳು ತಕ್ಕ ನಿಗಾ ವಹಿಸಲು ಕಟ್ಟುನಿಟ್ಟಿನ ನಿಯಮ ರೂಪಿಸಬೇಕು.