ತಪ್ಪಿದ ಹೆಜ್ಜೆ ಸರಿಪಡಿಸಿಕೊಂಡರಷ್ಟೇ ಕಾಂಗ್ರೆಸ್ಸಿಗೆ ಭವಿಷ್ಯ

ಕಾಂಗ್ರೆಸ್ ನಾಯಕರಿಗೆ ತಮ್ಮ ಪಕ್ಷಕ್ಕೆ ಮರುಚೈತನ್ಯ ತುಂಬುವ ಕಳಕಳಿ ನಿಜಕ್ಕೂ ಇದ್ದದ್ದೇ ಆದರೆ, ಅವರು ಮೊದಲು ತಮ್ಮ ಆಲೋಚನಾಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿಕೊಳ್ಳಬೇಕು. ಅದಾಗದೆ ಏನೇ ಮಾಡಿದರೂ ಅದು ವ್ಯರ್ಥ.

ಅಲ್ಲಾರೀ, ಒಂದು ವಿಷಯ ಅರ್ಥವೇ ಆಗುತ್ತಿಲ್ಲವಲ್ಲ….?! ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರುವ ನಾಯಕಮಣಿಗಳು ಬುದ್ಧಿ ಕಲಿಯುವುದು ಯಾವಾಗ? ನೆಹರು ಮನೆತನದ ಮೂಲನೆಲೆ ಉತ್ತರಪ್ರದೇಶದಲ್ಲೇ ಪಕ್ಷ ಅಸ್ತಿತ್ವ ಕಳೆದುಕೊಂಡು ಎಷ್ಟೋ ವರ್ಷಗಳಾದವು. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕಾಂಗ್ರೆಸ್ ಅಕ್ಷರಶಃ ನೆಲೆ ಕಳೆದುಕೊಂಡಿತು. ರಾಜಸ್ಥಾನದಲ್ಲಿ ಆಳ್ವಿಕೆ ಕೈತಪ್ಪಿತು. ಮಧ್ಯಪ್ರದೇಶ, ಗುಜರಾತಲ್ಲಿ ಮೂರ್ನಾಲ್ಕು ಬಾರಿ ಕಾಂಗ್ರೆಸ್ಸನ್ನು ಜನರು ತಿರಸ್ಕರಿಸಿದರು. ಆರು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಟ್ಟ ಪಡಿಪಾಟಲನ್ನು ಎಲ್ಲರೂ ನೋಡಿದ್ದಾರೆ. ಆ ಚುನಾವಣೆಯಲ್ಲಿ ಮೋದಿ ಮಾಡಿದ ಮ್ಯಾಜಿಕ್ಕು, ಕಾಂಗ್ರೆಸ್ ಸೊರಗಿದ ರೀತಿ ನೋಡಿ ಇಡೀ ಪ್ರಪಂಚವೇ ನಿಬ್ಬೆರಗಾಯಿತು. ಈಗ ಮಹಾರಾಷ್ಟ್ರ, ಹರಿಯಾಣದಲ್ಲೂ ದೈನೇಸಿ ಸ್ಥಿತಿ. ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕವೇ ಕಾಂಗ್ರೆಸ್‍ಗೆ ಊರುಗೋಲು. ಇಷ್ಟಾದರೂ ಆ ಪಕ್ಷದ ನಾಯಕರು ತಾವು ತಪ್ಪಿದ್ದೆಲ್ಲಿ, ಸರಿಪಡಿಸಿಕೊಳ್ಳಬೇಕಾದ್ದೆಲ್ಲಿ ಅಂತ ಆಲೋಚನೆ ಮಾಡುತ್ತಾರಾ? ಕಾಂಗ್ರೆಸ್ ನಾಯಕರ ರೀತಿ-ರಿವಾಜು ನೋಡಿದರೆ ಅಂಥ ಭರವಸೆ ಹತ್ತಿರದಲ್ಲೆಲ್ಲೂ ಕಾಣಿಸುತ್ತಿಲ್ಲ.ಒಂದು ಕಾಲಕ್ಕೆ ಇಡೀ ಲೋಕಸಭೆಯನ್ನು ಆವರಿಸಿಕೊಳ್ಳುತ್ತಿದ್ದ ಕಾಂಗ್ರೆಸ್, ತನ್ನದೇ ನಾಯಕರ ಬಲಹೀನತೆ, ದೂರದೃಷ್ಟಿ ಕೊರತೆ ಮತ್ತು ಗೊತ್ತು-ಗುರಿಯಿಲ್ಲದ ನಡವಳಿಕೆಯಿಂದಾಗಿ ಐಸಿಯು (ತೀವ್ರ ನಿಗಾ ಘಟಕ) ಸೇರಿರುವುದನ್ನು ಕಂಡರೆ ಯಾರಿಗೆ ತಾನೆ ಮರುಕವಾಗುವುದಿಲ್ಲ ಹೇಳಿ. ಇಷ್ಟೆಲ್ಲ ಕಂಠಶೋಷಣೆ ಮಾಡಿಕೊಳ್ಳುವುದಕ್ಕೆ ಅದೊಂದೇ ಕಾರಣ ಬಿಟ್ಟರೆ ಬೇರೇನೂ ಇಲ್ಲ. ಕಾಂಗ್ರೆಸ್ ಪಕ್ಷ ಭಾಜಪಕ್ಕೆ ಸರಿಸಮನಾಗಿ ಪೈಪೋಟಿ ಕೊಡುವಂತಿದ್ದಿದ್ದರೆ ನಮ್ಮ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಮುಟ್ಟಾಗಬಹುದಿತ್ತೆಂಬ ಆಸೆ. ಜತೆಗೆ, ಅನುಕೂಲಸಿಂಧು ರಾಜಕಾರಣವನ್ನೇ ಬಂಡವಾಳ ಮಾಡಿಕೊಂಡಿರುವ ಪುಡಿಪಕ್ಷಗಳ ಆಟಕ್ಕೆ ಕಡಿವಾಣ ಹಾಕಬಹುದಿತ್ತು. ವಿಪರ್ಯಾಸವೆಂದರೆ ಕಾಂಗ್ರೆಸ್ಸೇ ಚಿಲ್ಲರೆಯಾಗಿಬಿಡುತ್ತಿದೆ.
ಕೆಲ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಮಾತ್ರಕ್ಕೆ ಒಂದು ಪಕ್ಷ ಮುಂದೆಂದೂ ಚೇತರಿಸಿಕೊಳ್ಳಲಾಗದ ಇಳಿಜಾರಿನಲ್ಲಿದೆಯೆಂದು ತೀರ್ಮಾನ ಕೊಡಲಾಗದು. ಅಧಿಕಾರ ಬರುವುದು, ಹೋಗುವುದು ರಾಜಕೀಯದಲ್ಲಿ ಸಹಜಕ್ರಿಯೆ. ಆದರೆ ತನ್ನ ತಪ್ಪು ಆಲೋಚನಾಕ್ರಮದಿಂದಾಗಿ ಕಾಂಗ್ರೆಸ್ ಹಂತಹಂತವಾಗಿ ಹೇಗೆ ಜನರಿಗೆ ಬೇಡವಾಗುತ್ತಿದೆ ಎಂಬುದು ಇಲ್ಲಿ ಹೇಳಲು ಹೊರಟಿರುವ ವಿಚಾರ.
ಕಾಂಗ್ರೆಸ್ ನಾಯಕರ ಆಲೋಚನಾಕ್ರಮ ಎಂಥದ್ದು ಅಂತ ನೋಡಿ. ಮೊನ್ನೆ ಮಹಾರಾಷ್ಟ್ರ, ಹರಿಯಾಣ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿ ನೀಡಿದ ಪ್ರತಿಕ್ರಿಯೆ ನೋಡಿ ನಗಬೇಕೋ ಅಳಬೇಕೋ ತಿಳಿಯಲಿಲ್ಲ. “ಬಿಜೆಪಿಯವರು ಸುಳ್ಳು ಹೇಳಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೋಲಾಯಿತು” ಎಂದು ಖರ್ಗೆ ಹೇಳಿದರು. ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯವರು ಸುಳ್ಳು ಹೇಳಿ ಗೆದ್ದರು. ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಹೇಳಿ ದೇಶದ ಜನರನ್ನು ಏಮಾರಿಸಿದರು. ಮಹಾರಾಷ್ಟ್ರ, ಹರಿಯಾಣದಲ್ಲಿ ಆದದ್ದೂ ಅದೇ. ಮತ್ತೆಮತ್ತೆ ಸುಳ್ಳನ್ನೇ ನಂಬಿದ ಜನರು ಕಾಂಗ್ರೆಸ್‍ಗೆ ಮನೆಹಾದಿ ತೋರಿಸಿದರು ಎಂಬುದು ಖರ್ಗೆ ಮಾತಿನ ಧಾಟಿಯಾಗಿತ್ತು. ಖರ್ಗೆಯವರೇ ಒಂದು ವಿಷಯವನ್ನು ಇನ್ನಾದರೂ ಅರ್ಥಮಾಡಿಕೊಳ್ಳಿ. ದಿನದಿಂದ ದಿನಕ್ಕೆ ಜನ ಪ್ರಬುದ್ಧರಾಗುತ್ತಿದ್ದಾರೆ. ಅವರಿಗೆ ತಮ್ಮ ಒಳಿತು-ಕೆಡುಕು ಮುಖ್ಯವೇ ಹೊರತು, ರಾಜಕೀಯ ಪಕ್ಷಗಳ ಮೇಲಾಟವಲ್ಲ. ಜನಕ್ಕೆ ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿಯೂ ಮುಖ್ಯವಲ್ಲ; ಪಕ್ಷಗಳ ಆಲೋಚನಾ ರೀತಿ, ಕಾರ್ಯಕ್ರಮಗಳು ಮುಖ್ಯ. ಭರವಸೆ ಮೂಡಿಸುವ ನಾಯಕತ್ವವನ್ನು ಜನ ಬೆಂಬಲಿಸುತ್ತಾರೆ. ಹಾಗಾದರೆ ಕಾಂಗ್ರೆಸ್ ಪಕ್ಷವನ್ನು ಮೇಲೆತ್ತುವ ಕಳಕಳಿ ನಿಜವಾಗಿಯೂ ಇದ್ದಲ್ಲಿ, ನಾಯಕರೆನಿಸಿಕೊಂಡವರು ಇಂಥ ಅವಿವೇಕದ ಹೇಳಿಕೆಗಳನ್ನು ಮೊದಲು ನಿಲ್ಲಿಸಬೇಕಲ್ಲವೇ? ಅಪ್ರಾಯೋಗಿಕ ಆಲೋಚನೆಯನ್ನ್ನು, ರಾಷ್ಟ್ರಹಿತದ ವಿರುದ್ಧ ಮಾತಾಡುವುದನ್ನು, ಕೆಲಸ ಮಾಡುವುದನ್ನು, ಧರ್ಮ, ಜಾತಿ, ಪ್ರಾಂತದ ಹೆಸರಲ್ಲಿ ರಾಜಕೀಯ ಮಾಡುವುದನ್ನು, ಸವಕಲು ಸೆಕ್ಯುಲರ್ ಸಿದ್ಧಾಂತದ ಜಪಮಾಡುವುದನ್ನು ಬಂದ್ ಮಾಡಬೇಕಲ್ಲವೇ? ಮುಖ್ಯವಾಗಿ ಈ ನಿಮ್ಮ ಲೊಳಲೊಟ್ಟೆಯನ್ನು ಕೇಳಿಸಿಕೊಳ್ಳಲು ಜನ ಇನ್ನು ತಯಾರಿಲ್ಲ ಎಂಬ ಸೂಕ್ಷ್ಮವನ್ನು ಅರಿಯಬೇಕು. ಇಲ್ಲವಾದಲ್ಲಿ, ಮುಂದೆ ಪ್ರಿಯಾಂಕಾ ಬಂದರೂ ಕಾಂಗ್ರೆಸ್ ಪಕ್ಷವನ್ನು ಸೋಲಿನ ದವಡೆಯಿಂದ ಪಾರುಮಾಡುವುದು ಅಸಾಧ್ಯ ಎಂಬುದನ್ನು ಈಗಲೇ ಬರೆದಿಟ್ಟುಕೊಂಡುಬಿಡಿ!

11111937ಕಾಂಗ್ರೆಸ್ ತಾಳ ಲಯತಪ್ಪಿದ್ದಕ್ಕೆ ಕೆಲ ಸ್ಯಾಂಪಲ್‍ಗಳು ಇಲ್ಲಿವೆ ನೋಡಿ. ಖಿಲಾಫತ್ ಚಳವಳಿಯ ಐತಿಹಾಸಿಕ ಪ್ರಮಾದವನ್ನು ಮರೆತುಬಿಡೋಣ. `ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ್’ ಎಂಬ ಆ ಪವಿತ್ರ ಭಜನೆಯನ್ನು `ಈಶ್ವರ ಅಲ್ಲಾ ತೇರೋನಾಮ್’ ಅಂತ ತಿರುಚಿದರಲ್ಲ, ವಾಸ್ತವಿಕವಾಗಿ ಅಲ್ಲೇ ಕಾಂಗ್ರೆಸ್ ಸೋಲಿನ ಮೂಲ ಇರುವುದು. ಮಹಾತ್ಮ ಗಾಂಧೀಜಿ ಮತ್ತು ಅವರ ಎದುರು ಕುಳಿತ ನಾಲ್ಕು ಮಂದಿಯನ್ನು ಬಿಟ್ಟರೆ ಬೇರೆ ಯಾರೂ ತೇಪೆಭಜನೆಯನ್ನು ಹಾಡಲೇ ಇಲ್ಲ. ರಾಜೀಪ್ರವೃತ್ತಿ ಅಲ್ಲಿಗೇ ನಿಲ್ಲುವುದಿಲ್ಲ. ಶ್ರೇಷ್ಠ ರಾಷ್ಟ್ರಮಂತ್ರ `ವಂದೇ ಮಾತರಂ’ನಲ್ಲಿ ಭಾರತ ದೇಶದ ಪ್ರಾಕೃತಿಕ ವೈಭವದ ವರ್ಣನೆಯನ್ನು ಮಾತ್ರ ಉಳಿಸಿಕೊಂಡು, ಭಾರತಮಾತೆಯನ್ನು ದುರ್ಗೆ, ಸರಸ್ವತಿ, ಲಕ್ಷ್ಮಿಯರಂತೆ ಕಾಣುವ ಭಾಗವನ್ನು ಕರುಣೆ, ಕಕ್ಕುಲಾತಿ ತೋರದೆ ತುಂಡರಿಸಲಾಯಿತು. ಯಾತಕ್ಕಾಗಿ? ಸ್ವಲ್ಪ ಯೋಚನೆ ಮಾಡಿದರೆ ಉತ್ತರ ಸಿಗುತ್ತದೆ. ಅಲ್ಪಸಂಖ್ಯಾತರನ್ನು ಸತತವಾಗಿ ಮುಖ್ಯವಾಹಿನಿಯಿಂದ ದೂರವಿಡುತ್ತ, ಬಹುಸಂಖ್ಯಾತ ಹಿಂದೂಗಳ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುತ್ತ ಬಂದದ್ದು ಒಪ್ಪುವ ವಿಚಾರವೇ? ಈ ವಿಷಯದಲ್ಲಿ ಶೇ. 15ರಿಂದ 20ರಷ್ಟು ಪ್ರಜ್ಞಾವಂತ ಮುಸ್ಲಿಮರು ಈಗೀಗ ಎಚ್ಚೆತ್ತುಕೊಳ್ಳುತ್ತಿರುವುದು ಕಾಂಗ್ರೆಸ್ ಅನುಭವಕ್ಕೂ ಬಂದಿದೆ. ಆದರೂ ಅದು ತಪ್ಪುಹೆಜ್ಜೆ ಸರಿಪಡಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ. ಮತ್ತಷ್ಟು ಓಲೈಸುವುದಕ್ಕಾಗಿ ಸೇನೆಯಲ್ಲಿ, ಪೆÇಲೀಸ್ ಇಲಾಖೆಯಲ್ಲಿ ಮುಸ್ಲಿಮರೆಷ್ಟಿದ್ದಾರೆ ಅಂತ ಲೆಕ್ಕಹಾಕುವ ಕೆಲಸಕ್ಕೆ ಮುಂದಾಯಿತು. ಇದು ಸರಿಯೇ? ಇಷ್ಟೆಲ್ಲ ಮಾಡಿದ ಬಳಿಕವಾದರೂ ಕಾಂಗ್ರೆಸ್ ಬಗ್ಗೆ ಮುಸ್ಲಿಮರಲ್ಲಿ ಭರವಸೆ ಹೆಚ್ಚಾಗುವ ಲಕ್ಷಣ ಕಾಣಿಸುತ್ತಿಲ್ಲ. ಯಾಕೆ ಗೊತ್ತಾ? ಮುಸಲ್ಮಾನರಾದರೂ ಎಷ್ಟು ದಿನ ಅಂತ ಕಾಂಗ್ರೆಸ್ ಪಕ್ಷದ ಹಂಗಿನಲ್ಲಿ ಬದುಕುತ್ತಾರೆ ಹೇಳಿ. ಅವರಿಗೂ ಸ್ವಾಭಿಮಾನದ, ಗೌರವದ, ಸುಖದ, ನೆಮ್ಮದಿಯ ಜೀವನ ಬೇಡವಾಗಿಲ್ಲವಲ್ಲ.
`ವಂದೇ ಮಾತರಂ’ ಗೀತೆಯನ್ನು ತುಂಡರಿಸಲು ಒಪ್ಪಿದ ಮಾನಸಿಕತೆಯೇ ದೇಶದ ಮುಕುಟ ಕಾಶ್ಮೀರವನ್ನು ದೇಶದಿಂದ ಪ್ರತ್ಯೇಕಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಲ್ಲವೇ? ಇತಿಹಾಸದಲ್ಲಿ ಆಗಿಹೋದ ಪ್ರಮಾದವನ್ನು ತಿದ್ದಿಕೊಳ್ಳಲು ಕಾಂಗ್ರೆಸ್ ಈಗಲೂ ತಯಾರಿಲ್ಲವಾದರೆ ಜನರೇಕೆ ಅದನ್ನು ನೆಚ್ಚುತ್ತಾರೆ ಹೇಳಿ? ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ರಾಷ್ಟ್ರಧ್ವಜ, ಎರಡು ಸರ್ಕಾರ ಯಾವ ಪುರುಷಾರ್ಥಕ್ಕಾಗಿ? ಆರ್ಟಿಕಲ್ 370 ರದ್ದತಿಗೆ ಇನ್ನಾದರೂ ಗಟ್ಟಿಮನಸ್ಸು ಮಾಡಬೇಕು ತಾನೆ?
ರಾಮಮಂದಿರ ನಿರ್ಮಾಣದ ವಿಷಯಕ್ಕೆ ಬರೋಣ. ರಾಮನ ವಿಷಯದಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದವೆಣಿಸುವ ಜರೂರೇನಿತ್ತು. ಮರ್ಯಾದಾ ಪುರುಷೋತ್ತಮ ರಾಮ ಹೆಚ್ಚೋ, ವಿದೇಶಿ ಆಕ್ರಮಣಕಾರ ಬಾಬರ್ ಹೆಚ್ಚೋ ಎಂಬ ಸಣ್ಣಸಂಗತಿ ಬುದ್ಧಿಗೆ ನಿಲುಕದೇ ಹೋಯಿತಲ್ಲ. ಕೆಲ ದಾರಿತಪ್ಪಿದ ವ್ಯಕ್ತಿಗಳಿಗೆ ಈ ಒಂದು ಕಿವಿಮಾತು ಹೇಳುವ ಛಾತಿಯನ್ನು ತೋರಿದ್ದರೆ ಸಾಕಿತ್ತು. ಹಾಗೆ ಮಾಡಿದ್ದರೆ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರೃ ಗಳಿಸಿದ ಪಕ್ಷವೆಂಬ ಹೆಮ್ಮೆಗೂ ಅರ್ಥಬರುತ್ತಿತ್ತು. ಪಶ್ಚಿಮ ಘಟ್ಟದಂಥ ಕಾಡುಮೇಡು, ಕುತುಬ್ ಮಿನಾರ್, ತಾಜಮಹಲನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಬೇಕೆಂದು ಹೇಳುವಾಗ ಶ್ರೀರಾಮ ಜನ್ಮಸ್ಥಾನ ಸಂದರ್ಭದಲ್ಲಿ ಪರಂಪರೆ, ಇತಿಹಾಸ, ಗೌರವ, ಸ್ವಾಭಿಮಾನ ಯಾವುದನ್ನೂ ನೆನಪು ಮಾಡಿಕೊಳ್ಳದೇ ಹೋದದ್ದು ಎಷ್ಟು ಸರಿ. ಹಾಗಾದರೆ, ಬಿಜೆಪಿಗೆ ರಾಮಮಂದಿರ ನಿರ್ಮಾಣ ಒಂದು ಅಜೆಂಡಾ ಅಂತ ಮಾಡಿಕೊಳ್ಳಲು ಅವಕಾಶ ಕೊಟ್ಟು ತಪ್ಪುಮಾಡಿದ್ದು ಕಾಂಗ್ರೆಸ್ಸೇ ಅಲ್ಲವೇ? ಈಗಿನ ಕಾಂಗ್ರೆಸ್ಸಿಗರ ನಿಲುವನ್ನು ಸ್ವರ್ಗದಲ್ಲಿರುವ ರಾಜೀವರ ಆತ್ಮವೂ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಅಂದು ಮಂದಿರದ ಬೀಗಮುದ್ರೆ ತೆರೆದು ಪೂಜೆಗೆ ಅವಕಾಶಮಾಡಿಕೊಟ್ಟ ಅವರು ಮಂದಿರಕ್ಕೆ ಅಡ್ಡಬರುತ್ತಿದ್ದರು ಎನ್ನಲು ಸಾಧ್ಯವೇ ಇಲ್ಲ.
ಗೋಹತ್ಯೆ ತಡೆ ವಿಷಯಕ್ಕೆ ಬನ್ನಿ. ಗೋ ಸಂತತಿ ಈ ದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಬೆನ್ನೆಲುಬು ಎಂಬ ಕಾರಣಕ್ಕಾಗಿಯಾದರೂ ಆ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬಹುದಿತ್ತು. ಹಾಲು, ಮೊಸರು, ಬೆಣ್ಣೆ, ತುಪ್ಪ, ಗೋಮೂತ್ರ, ಗೊಬ್ಬರ, ಆರೋಗ್ಯ, ಆರ್ಥಿಕ ಸಬಲತೆಯನ್ನು ಮುಸಲ್ಮಾನರು ಬೇಡ ಎನ್ನುತ್ತಾರಾ? ಗೋ ಸಂರಕ್ಷಣೆಯನ್ನೇಕೆ ಹಿಂದೂ ಮುಸ್ಲಿಮ್ ಕನ್ನಡಕದಿಂದ ನೋಡಬೇಕು. ಹೋಗಲಿ ಗಾಂಧೀಜಿ ಆಶಯ ಪೂರೈಸುವುದಕ್ಕಾದರೂ ಗೋರಕ್ಷಣೆಗೆ ಗಟ್ಟಿನಿರ್ಧಾರ ತಾಳಬಹುದಿತ್ತು. ಆದರೆ ಮುಸ್ಲಿಮರನ್ನು ಪ್ರಚೋದಿಸಿ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವುದರ ಮೇಲೇ ದೃಷ್ಟಿನೆಟ್ಟ ನೀವು ಹಾಗೆ ಮಾಡಲೇ ಇಲ್ಲ. ಹಾಗಾದರೆ ಗೋ ಸಂರಕ್ಷಣೆ ವಿಷಯವನ್ನು ಬಿಜೆಪಿ, ವಿಎಚ್‍ಪಿ, ಆರೆಸ್ಸೆಸ್‍ನವರು ತಮ್ಮ ಅಜೆಂಡಾ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ತಪ್ಪು ಮಾಡಿದ್ದೂ ಕಾಂಗ್ರೆಸ್ಸೇ ಅಲ್ಲವೇ?
ದಲಿತರ, ಬಡವರ ಬಗ್ಗೆ ಮಾತನಾಡುವ ನೀವು, ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಅಂಬೇಡ್ಕರ್‍ರಂಥ ಮಹಾನ್ ನಾಯಕನಿಗೆ ಕಿರುಕುಳ ಕೊಟ್ಟು ರಾಜಕೀಯವಾಗಿ ಹತ್ತಿಕ್ಕಿದ್ದನ್ನು ಹೇಗೆ ಅಲ್ಲಗಳೆಯುತ್ತೀರಿ? ನ್ಯಾಯಾಲಯ ಕ್ಲೀನ್‍ಚಿಟ್ ಕೊಟ್ಟಿದ್ದನ್ನು ಬುದ್ಧಿಪೂರ್ವಕವಾಗಿ ಮರೆತು, ಆರೆಸ್ಸೆಸ್‍ನವರು ಗಾಂಧಿ ಕೊಂದವರು ಎನ್ನುವಾಗ, ಹಿಂದುಳಿದ ವರ್ಗದ ಇಬ್ಬರಿಗೆ ಅದೇ ಆರೆಸ್ಸೆಸ್ ಪರಮೋಚ್ಚ ಸ್ಥಾನ ಕೊಟ್ಟಿದ್ದನ್ನು ಹೇಗೆ ಅಮಾನ್ಯ ಮಾಡುತ್ತೀರಿ? ಕಾಂಗ್ರೆಸ್‍ನಲ್ಲಿ ಇದು ಎಂದಾದರೂ ಸಾಧ್ಯವೇ? ಕಾಂಗ್ರೆಸ್ ಬಡವರ ಪಕ್ಷ ಎಂದು ಹೇಳುವಾಗ ದೇಶದ ಬಡತನ ದೂರಮಾಡಲು 65 ವರ್ಷ ಕಾಲ ಸಿಕ್ಕಿದ ಅವಕಾಶವನ್ನು ಯಾಕೆ ಸದ್ಬಳಕೆ ಮಾಡಿಕೊಳ್ಳಲಾಗಲಿಲ್ಲ ಅಂತಲೂ ಆಲೋಚನೆ ಮಾಡಬೇಕು ತಾನೆ? ಕಾಂಗ್ರೆಸ್ ಕಾಯಮ್ಮಾಗಿ ಅಧಿಕಾರದಲ್ಲಿರಲು ಬಡವರ ಪ್ರಮಾಣ ದಿನೇದಿನೆ ಹೆಚ್ಚಾಗಬೇಕೆಂಬುದು ಈ ಮಾತಿನರ್ಥವೇ? ಬಡವರ ವೋಟ್‍ಬ್ಯಾಂಕ್ ಉಳಿಸಿಕೊಳ್ಳುವುದಕ್ಕೋಸ್ಕರ ಶ್ರೀಮಂತರನ್ನು, ಶ್ರೀಮಂತಿಕೆಯನ್ನೇಕೆ ಜರಿಯಬೇಕು? ಇದರ ಅರಿವು ಈ ದೇಶದ ಬಡವರಿಗೆ ನಿಧಾನವಾಗಿ ಆಗುತ್ತಿರುವುದರ ಪರಿಣಾಮವೇ ಏನೇ ಮಾಡಿದರೂ ಕಾಂಗ್ರೆಸ್ ಸೋಲನ್ನು ತಡೆಯಲು ಆಗುತ್ತಿಲ್ಲ ಎಂಬುದು ಯಾತಕ್ಕೆ ಅರ್ಥವಾಗುವುದಿಲ್ಲ? ಇಷ್ಟಾದ ಮೇಲೂ, ಕಾಂಗ್ರೆಸ್‍ನಿಂದ ಕತ್ತೆಯನ್ನು ನಿಲ್ಲಿಸಿದರೂ ಗೆಲ್ಲುತ್ತದೆ ಅಂತ ಯಾವ ಧೈರ್ಯದ ಮೇಲೆ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಹೇಳುತ್ತಾರೋ ಗೊತ್ತಿಲ್ಲ. ಇಂಥ ಮಾತು ಕಾಂಗ್ರೆಸ್ ಬೆಂಬಲಿಸುವವರಿಗೆ ಮಾಡುವ ಘೋರ ಅಪಮಾನ ಅಂತಲಾದರೂ ಅರಿತಿದ್ದರೆ ಒಳ್ಳೆಯದಿತ್ತು. ಈಗ ಹೇಳಿ, ಸುಳ್ಳುಹೇಳಿ ರಾಜಕೀಯ ಮಾಡುತ್ತಿರುವವರು ಯಾರು ಹಾಗಾದರೆ?
ಕಾಂಗ್ರೆಸ್ಸಿಗೆ ಇರುವ ಒಂದೇ ಒಂದು ಆಸರೆ ಅಂದರೆ ಕರ್ನಾಟಕ ಸರ್ಕಾರ; ಅದೂ ಹೇಗೆ ಹಾದಿತಪ್ಪುತ್ತಿದೆ ನೋಡಿ. ಪಕ್ಷ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆಯುತ್ತ ಬಂತು. ಇನ್ನೂ ಅನ್ನಭಾಗ್ಯ, ಶಾದಿಭಾಗ್ಯ, ಮತ್ತೊಂದು ಭಾಗ್ಯ ಅಂತ ಹೇಳುತ್ತಿದ್ದಾರೆಯೇ ಹೊರತು, ಕೈಗಾರಿಕೆ, ಬಂಡವಾಳ ಹೂಡಿಕೆ ಇತ್ಯಾದಿಗಳ ಕುರಿತು ಚಕಾರ ಎತ್ತುತ್ತಾರಾ? ಹೊಸ ರಸ್ತೆ, ಹೊಸ ಕೈಗಾರಿಕೆ, ಹೊಸ ಹೊಸ ಹೂಡಿಕೆ ಯೋಜನೆಗಳು ಚರ್ಚೆಯಾದರೂ ಆಗುತ್ತಿವೆಯೇ? ಯಾವುದನ್ನೂ ಕೇಳಬೇಡಿ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದಲ್ಲಿ ಒಳಿತಾಗಲು ಸಾಧ್ಯವೇನು…. ಹೇಳುವವರು ಕೇಳುವವರು ಯಾರು?
ನಮ್ಮ ಆಡಳಿತ ವ್ಯವಸ್ಥೆ ಬ್ರಿಟಿಷ್ ನಕಲೇ ಇರಬಹುದು. ಆದರೆ ನಾವು, ನಮ್ಮ ಜನ ವಾಲುತ್ತಿರುವುದು ಅಮೆರಿಕದಂಥ ಅಧ್ಯಕ್ಷೀಯ ಮಾದರಿ ಪ್ರಜಾಪ್ರಭುತ್ವದ ಕಡೆಗೇನೆ ಎಂಬುದು ಗೊತ್ತಿರಲಿ. ಕಾರಣ ಇಷ್ಟೆ, ಬ್ರಿಟಿಷ್ ಮಾದರಿಗಿಂತ ಅಮೆರಿಕ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರೀಕರಣಕ್ಕೆ ಮಹತ್ವ ಕಡಿಮೆ. ನಾವೂ ಉದ್ಧಾರ ಆಗಬೇಕೆಂದಿದ್ದರೆ ಅಸಮರ್ಥ, ಭ್ರಷ್ಟ ಸರ್ಕಾರೀಕರಣದ ಹಿಡಿತ ಸಡಿಲಗೊಳ್ಳದೆ ವಿಧಿಯಿಲ್ಲ. ರಾಜಕೀಯ ಗೋಜಲಿಗೆ ಎಡೆಯಿಲ್ಲದಂತಾಗಲು ಎರಡೇ ಪಕ್ಷ, ರಾಷ್ಟ್ರಹಿತ ಚಿಂತನೆಯೇ ಅವುಗಳ ಮೂಲಾಧಾರ, ಅಧಿಕಾರಕ್ಕಿಂತ ಸೇವೆ, ಶಿಸ್ತು, ಸಮರ್ಪಣೆಗೇ ಪ್ರಾಧಾನ್ಯವಿದ್ದರೆ ಒಂದು ಸಶಕ್ತ ರಾಷ್ಟ್ರದ ನಿರ್ಮಾಣಕ್ಕೆ ಬೇರೆ ಅಸ್ತ್ರ, ಶಸ್ತ್ರಗಳ ಅವಶ್ಯಕತೆಯಿಲ್ಲ. ಇವೆಲ್ಲ ಕಾಂಗ್ರೆಸ್ ನಾಯಕರಿಗೆ ಈಗಲಾದರೂ ಅರ್ಥವಾದರೆ ಕಾಂಗ್ರೆಸ್ಸಿಗೂ ಮತ್ತು ದೇಶಕ್ಕೂ ಒಳಿತಾಗುತ್ತದೆ. ಹಾಗಾಗಲೆಂದು ಆಶಿಸೋಣ, ಅಲ್ಲವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top