ಹೆಚ್ಚುತ್ತಿರುವ ವಾಹನ ಸಂಚಾರ, ಟೋಲ್ ಕಲೆಕ್ಷನ್ನೇ ಆಧಾರ

– ಬೆಂಗಳೂರು ಪರಿಸರದಲ್ಲಿ ಲಾಕ್‌ಡೌನ್‌ ಪೂರ್ವಕ್ಕಿಂತಲೂ ಹೆಚ್ಚು ವೆಹಿಕಲ್ – ಉಳಿದೆಡೆಯೂ ನಿಧಾನವಾಗಿ ಪರಿಸ್ಥಿತಿ ಸುಧಾರಣೆ.

ವಿಕ ಸುದ್ದಿಲೋಕ, ಬೆಂಗಳೂರು : ಲಾಕ್‌ಡೌನ್‌ ಸಡಿಲಿಕೆ ಬಳಿಕ ವಾಹನಗಳ ಸಂಚಾರ ಕ್ರಮೇಣ ಹಳಿಗೆ ಮರುಳುತ್ತಿದೆ. ಬೆಂಗಳೂರಿನ ಸುತ್ತಲಿರುವ ಟೋಲ್ ಕೇಂದ್ರಗಳ ಮೂಲಕ ಹೆಚ್ಚಿನ ವಾಹನಗಳು ಚಲಿಸುತ್ತಿರುವುದು ಕಂಡುಬಂದಿದೆ. ರಾಜ್ಯದ ಹಲವು ಟೋಲ್ ಕೇಂದ್ರಗಳು ಪರಿಸ್ಥಿತಿಯೂ ಸುಧಾರಿಸುತ್ತಿದೆ. ಒಂದೊಮ್ಮೆ ಅಂತಾರಾಜ್ಯ ವಾಹನ ಸಂಚಾರ ಆರಂಭವಾದರೆ ಎಂದಿನ ಸ್ಥಿತಿಗೆ ಮರಳಲಿದೆ. ಮಾರ್ಚ್ 25ರಂದು ಲಾಕ್‌ಡೌನ್‌ ಜಾರಿಯಾಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಗಳೂ ಸೇರಿದಂತೆ ಎಲ್ಲ ಹೆದ್ದಾರಿಗಳ ಟೋಲ್ ಶುಲ್ಕ ಸಂಗ್ರಹವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಬಳಿಕ, ಏಪ್ರಿಲ್ 20ರಿಂದ ಶುಲ್ಕ ಸಂಗ್ರಹ ಆರಂಭವಾಗಿತ್ತಾದರೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಅಗತ್ಯ ವಸ್ತುಗಳ ಸಾಗಣೆ ಜತೆಗೆ ತುರ್ತು ಸಂಚಾರಕ್ಕಿದ್ದ ಅವಕಾಶ ಕ್ರಮೇಣ ಸಾರ್ವಜನಿಕರಿಗೂ ವಿಸ್ತರಣೆಗೊಂಡಿತು. ಇದು ರಸ್ತೆ ಸಾರಿಗೆ ಪ್ರಯಾಣಿಕರಿಗೆ ದೊಡ್ಡ  ರಿಲೀಫ್ ನೀಡಿದೆ. ಬೆಂಗಳೂರು ನಗರ ಪ್ರವೇಶ/ನಿರ್ಗಮನಕ್ಕಾಗಿ ಹೊಸ ಏರ್‌ಪೋರ್ಟ್‌ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಹೊಸಕೋಟೆ ರಸ್ತೆ, ಹೊಸೂರು ರಸ್ತೆ, ನೆಲಮಂಗಲ ರಸ್ತೆಗಳಲ್ಲಿ ಸುಂಕ ವಸೂಲಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ವಿಮಾನ ನಿಲ್ದಾಣ ಟೋಲ್ ಹೊರತುಪಡಿಸಿ ಉಳಿದೆಡೆ ಶೇ.60-65ರಷ್ಟು ವಾಹನಗಳು ರಸ್ತೆಗಿಳಿದಿವೆ. ದೇವನಹಳ್ಳಿ-ಹೈದರಾಬಾದ್ ರಸ್ತೆಯ ಕನ್ನಮಂಗಲ ಟೋಲ್‌ನಲ್ಲಿ ಲಾಕ್‌ಡೌನ್‌ ಮುನ್ನ ನಿತ್ಯ 20 ಸಾವಿರ ವಾಹನಗಳು ಸಂಚರಿಸುತ್ತಿದ್ದವು. ಈಗ ನಿತ್ಯ ಹತ್ತು ಸಾವಿರ ವಾಹನಗಳು ಓಡಾಡುತ್ತಿವೆ. ತುಮಕೂರು ರಸ್ತೆ ಹಾಗೂ ಹೊಸೂರು ರಸ್ತೆಯ ಟೋಲ್‌ಗಳಲ್ಲಿ ಹೆಚ್ಚಿನ ವಾಹನಗಳ ಸಂಚರಿಸುತ್ತಿವೆ. ಲಾಕ್‌ಡೌನ್‌ ಅವಧಿಯು ಸೋಮವಾರ ಮುಗಿಯಲಿದ್ದು, ಮತ್ತಷ್ಟು ವಾಹನಗಳು ರಸ್ತೆಗಿಳಿಯುವ ಸಾಧ್ಯತೆಗಳಿವೆ. ಇದರಿಂದ ಟೋಲ್ ಶುಲ್ಕದ ಆದಾಯ ಹೆಚ್ಚುವ ವಿಶ್ವಾಸ ಇದೆ ಎಂದು ಸಾದಹಳ್ಳಿಯ ಸುಂಕ ವಸೂಲಾತಿ ಕೇಂದ್ರದ ಪ್ರತಿನಿಧಿಗಳು ತಿಳಿಸಿದ್ದಾರೆ. ‘‘ದೇವನಹಳ್ಳಿ ಏರ್‌ಪೋರ್ಟ್‌ ಪೂರ್ಣ ಕಾರ್ಯಾಚರಿಸಿದರೆ ಪ್ರಯಾಣಿಕರ ಓಡಾಟ ಹೆಚ್ಚಲಿದ್ದು, ಟ್ಯಾಕ್ಸಿ ಮತ್ತು ಇನ್ನಿತರ ಬಾಡಿಗೆ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ,’’ ಎನ್ನುತ್ತಾರೆ ಟ್ಯಾಕ್ಸಿ ಹಾಗೂ ಟ್ರಾವೆಲ್ಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ  ರಾಧಾಕೃಷ್ಣ ಹೊಳ್ಳ.
ಟೋಲ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಆರೋಗ್ಯ ಸುರಕ್ಷ ತೆಗೆ ಹೆಚ್ಚಿನ ಕಾಳಜಿ ವಹಿಸಲು ಸೂಚಿಸಲಾಗಿದೆ. ಮಾಸ್ಕ್, ಸ್ಯಾನಿಟೈಸರ್, ಕೈಗವಸು ಬಳಸಲಾಗುತ್ತಿದೆ. ಎಲ್ಲಾ ಟೋಲ್‌ಗಳಲ್ಲಿ ವಾಹನಗಳ ಸರಾಗ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.- ಶ್ರೀಧರ್ ಪ್ರಧಾನ ವ್ಯವಸ್ಥಾಪಕ, ಎನ್ಎಚ್ಎಐ, ಬೆಂಗಳೂರು.
ನೈಸ್ ರಸ್ತೆಯಲ್ಲೂ ಸಂಚಾರದಲ್ಲಿ ಏರಿಕೆ ಟೋಲ್ ಶುಲ್ಕ ಇತರೆಡೆಗಿಂತ ತುಸು ಹೆಚ್ಚಿದ್ದರೂ, ವೇಗದ ಪ್ರಯಾಣ ಹಾಗೂ ಸಮಯ ಉಳಿತಾಯಕ್ಕಾಗಿ ಸಾರ್ವಜನಿಕರ ಪ್ರಯಾಣಕ್ಕೆ ನೈಸ್ ರಸ್ತೆ ಅನುಕೂಲಕರವಾಗಿದೆ. ಏಪ್ರಿಲ್ ಮಧ್ಯ ಭಾಗದಿಂದ ವಾಹನಗಳ ಸಂಚಾರ ಹೆಚ್ಚಿದ್ದು, ಹಾಲಿ ಶೇ. 65ಕ್ಕೆ ಏರಿದೆ. ವಾರಾಂತ್ಯ ಹಾಗೂ ಅಂತರ ರಾಜ್ಯ ಸಂಚಾರ ಮುಕ್ತವಾದಲ್ಲಿ ವಾಹನಗಳ ಓಡಾಟ ಮತ್ತಷ್ಟು ಏರಿಕೆಯಾಗಲಿದೆ ಎಂದು ನೈಸ್ ಸಂಸ್ಥೆಯ ಮೂಲಗಳು ತಿಳಿಸಿವೆ.
ಹೆಜಮಾಡಿಯಲ್ಲಿ 50% ವಾಹನ:  ಮಂಗಳೂರು ಮತ್ತು ಉಡುಪಿ ಮಧ್ಯೆ ಇರುವ ಹೆಜಮಾಡಿ ಟೋಲ್‌ನಲ್ಲಿ ಲಾಕ್‌ಡೌನ್‌ಗಿಂತ ಮುಂಚೆ ಅಂದಾಜು 23 ಸಾವಿರ ವಾಹನಗಳು ಸಂಚಾರಿಸುತ್ತಿದ್ದವು ಮತ್ತು ನಿತ್ಯ 20 ಲಕ್ಷ  ರೂ. ಸಂಗ್ರಹವಾಗುತ್ತಿತ್ತು. ಇದೀಗ ನಿತ್ಯ 12 ಸಾವಿರದಷ್ಟು ವಾಹನಗಳ ಸಂಚಾರವಿದ್ದು, ನಿತ್ಯ 5.50 ಲಕ್ಷ  ರೂ. ಸಂಗ್ರಹವಾಗುತ್ತಿದೆ.
ದಾವಣಗೆರೆಯಲ್ಲಿ 60% ಸಂಗ್ರಹ :  ಎನ್ಎಚ್ 4ನ ದಾವಣಗೆರೆ ಬಳಿಯ ಹೆಬ್ವಾಳ್ ಟೋಲ್‌ನಲ್ಲಿ ಲಾಕ್‌ಡೌನ್‌ಗಿಂತ ಮುಂಚೆ 14ರಿಂದ 15 ಲಕ್ಷ  ರೂ. ಸಂಗ್ರಹವಾಗುತ್ತಿತ್ತು. ಆಗೆಲ್ಲ ಶೇ.100ರಷ್ಟು ವಾಹನ ಸಂಚಾರವಿತ್ತು. ಇದೀಗ ವಾಹನ ಸಂಚಾರವು ಶೇ.50ರಿಂದ 60ರಷ್ಟಿದ್ದು 6ರಿಂದ 8ಲಕ್ಷ  ರೂ.ವರೆಗೂ ಸಂಗ್ರಹವಾಗುತ್ತಿದೆ.

ಬೆಂಗಳೂರು ಸುತ್ತಮುತ್ತ ಸಂಚಾರ ಹೆಚ್ಚಳ

ಟೋಲ್ ಹೆಸರು – ಮಾ.24 – ಜೂ.9

ಸಾದಹಳ್ಳಿ – 28306 – 23347

ಹೊಸಕೋಟೆ-  29932 – 33492

ನೆಲಮಂಗಲ(1) – 28611 – 28372

ನೆಲಮಂಗಲ(2)  – 24064 – 33492

ಅತ್ತಿಬೆಲೆ – 25600 – 25991

(ನೆಲಮಂಗಲ1-ಬೆಂ.ಗೆ ಆಗಮನ ಮತ್ತು ನೆಲಮಂಗಲ 2: ಬೆಂ.ನಿಂದ ನಿರ್ಗಮನ)

ಮಾ 25: ಟೋಲ್ ಸಂಗ್ರಹಕ್ಕೆ ಸರಕಾರದ ತಡೆ 

ಏ. 20: ಟೋಲ್ ಸಂಗ್ರಹಕ್ಕೆ ಮರು ಆದೇಶ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top