ತಮ್ಮದೇ ದಾರಿ ಮತ್ತು ಗುರಿಗಳನ್ನು ಬೆನ್ನತ್ತಿ ಹೋಗುವ ಧೈರ್ಯಶಾಲಿಗಳಿಗೆ ಇಲಾನ್ ಮಸ್ಕ್ ದೊಡ್ಡ ಐಕಾನ್.
-ಕೆ. ವೆಂಕಟೇಶ್.
ಆತ ಮಹಾಮೌನಿಯಾಗಿದ್ದ. ಆತಂಕಿತರಾದ ಪೋಷಕರು ಈತ ಕಿವುಡನಿರಬೇಕು ಎಂದು ಭಾವಿಸಿದ್ದರು. ಶಾಲೆಯಲ್ಲಿ ಚಿಲ್ಟೇರಿಯಂತಿದ್ದ ಈತನನ್ನು ಎಲ್ಲರೂ ಆಟದ ವಸ್ತು ಮಾಡಿಕೊಂಡಿದ್ದರು. ಪ್ರಾಥಮಿಕ ಶಾಲೆಯಲ್ಲಿ ಮೆಟ್ಟಿಲುಗಳ ಮೇಲಿಂದ ತಳ್ಳಿ ಮಜಾ ತೆಗೆದುಕೊಂಡಿದ್ದರು. ಈತ ಆಸ್ಪತ್ರೆ ಸೇರಿದ. ಒಂದು ರೀತಿಯಲ್ಲಿ ಅಂತರ್ಮುಖಿಯಾದ ಆತ ಸದಾ ಆಕಾಶವನ್ನೇ ದಿಟ್ಟಿಸುತ್ತಿದ್ದ. ಪೋಷಕರು, ಶಿಕ್ಷಕರು ಮತ್ತು ಸಹಪಾಠಿಗಳು ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿದ್ದ ಆತನಲ್ಲಿ ದೈಹಿಕ ನ್ಯೂನತೆಯೇನೂ ಇರಲಿಲ್ಲ. ಹೂವುಗಳು ದಳಗಳ ಮಿತಿಗೆ ತಕ್ಕಂತೆ ಹೇಗೆ ಅರಳುತ್ತವೆಯೇ ಅದೇ ರೀತಿ ನಮ್ಮ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ನಾವು ಕನಸು ಕಾಣುತ್ತೇವೆ. ಅದನ್ನಷ್ಟೇ ನನಸು ಮಾಡಲು ತೊಡಗುತ್ತೇವೆ ಎನ್ನುವ ಅಸ್ತಿತ್ವವಾದಿ ತತ್ವವನ್ನೇ ತಲೆಕೆಳಗು ಮಾಡುವಂತಿದ್ದ ಆತ ತನ್ನ ಕಾಲವನ್ನು ದಾಟಿ ಮುಂದಕ್ಕೆ ಆಲೋಚಿಸುವವನಾಗಿದ್ದ. ಬೇರೆಯವರಿಗೆ ಹುಚ್ಚು ಎಂದೆನಿಸುವ ಕನಸುಗಳನ್ನು ಕಂಡು ಅವುಗಳನ್ನು ನನಸು ಮಾಡಲು ಯತ್ನಿಸುತ್ತಿದ್ದ. ಈತನ ಹೆಸರು ಇಲಾನ್ ಮಸ್ಕ್. 49 ವರ್ಷ. 12ಕ್ಕೂ ಹೆಚ್ಚು ಕಂಪನಿಗಳ ಒಡೆಯ. ಇದರೊಂದಿಗೆ ಇನೊವೇಟಿವ್ ಲೀಡರ್, ಗೇಮ್ ಚೇಂಜರ್, ಬಿಲಿಯನೇರ್, ಜಗತ್ತಿನ 25 ಪ್ರತಿಭಾವಂತರಲ್ಲೊಬ್ಬ. ಈ ಬಿರುದುಗಳನ್ನು ಕೊಟ್ಟಿರುವುದು ಉಘೇ ಉಘೇ ಎನ್ನುವ ಆತನ ಸ್ವಂತದ ಬಳಗವಲ್ಲ. ಫೋರ್ಬ್ಸ್ ನಿಯತಕಾಲಿಕ.
ಮಹಾ ಜಿಗಿತ : ಮಂಗಳನ ಅಂಗಳದಲ್ಲಿ ಮನುಷ್ಯರ ವಾಸಕ್ಕೆ ವಸಾಹತು ಸ್ಥಾಪಿಸುವುದು ಈತನ ಹೆಗ್ಗುರಿ. ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಿ, ಬೆಂಗಳೂರಿನಿಂದ ಮೈಸೂರಿಗೆ ಕೆಎಸ್ಆರ್ಟಿಸಿ ಬಸ್ ಸಂಚರಿಸುವ ರೀತಿಯಲ್ಲಿ ಪ್ರಯಾಣಿಕರನ್ನು ರಾಕೆಟ್ನಲ್ಲಿ ಕರೆದೊಯ್ದು ಬಾಹ್ಯಾಕಾಶ ಪ್ರವಾಸ ಮಾಡಿಸುವುದು ಈತನ ಹೆಬ್ಬಯಕೆ. ಎರಡನೇ ಕನಸಿನ ಸಮೀಪಕ್ಕೆ ಮಸ್ಕ್ ಬಂದೇ ಬಿಟ್ಟಿದ್ದಾನೆ. ಕಳೆದ ವಾರ (30/5/2020) ಫ್ಲಾರಿಡಾದ ನಾಸಾದ ಕೆನಡಿ ಕೇಂದ್ರದಿಂದ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ ಕಂಪನಿಯ ಫಾಲ್ಕನ್-9 ರಾಕೆಟ್, ಬಾಬ್ ಬೆಹ್ನ್ಕೆನ್ ಮತ್ತು ಡೌಗ್ ಹರ್ಲೆ ಎಂಬ ವ್ಯೋಮಯಾನಿಗಳನ್ನು ಹೊತ್ತು ಆಕಾಶಕ್ಕೆ ಜಿಗಿಯಿತು. ಕಪ್ಪು ಬಿಳುಪಿನ ಬುಲೆಟ್ ಆಕಾರದ ಕ್ರ್ಯೂ ಡ್ರಾಗನ್ ಹೆಸರಿನ ಸಂಪುಟ(ಕ್ಯಾಪ್ಸೂಲ್)ವನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿತು. ಖಾಸಗಿ ಕಂಪನಿಯೊಂದರ ಮಾಂತ್ರಿಕ ಸಾಧನೆ ಇದು. ಕೋವಿಡ್ 19 ಭಯವನ್ನು ನಿರ್ಲಕ್ಷಿಸಿ ಒಂದೂವರೆ ಲಕ್ಷ ಮಂದಿ ಈ ಮಹಾಜಿಗಿತವನ್ನು ಕಣ್ಣು ತುಂಬಿಕೊಂಡರು. ನಾಸಾ ನೌಕೆಗಳ ಹಾರಾಟಕ್ಕೂ ಇಷ್ಟು ಜನ ಸೇರಿದ ಪೂರ್ವ ನಿದರ್ಶನವಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
ಸೆಕೆಂಡಿಗೆ ಏಳೂವರೆ ಕಿಲೋಮೀಟರ್ ವೇಗದಲ್ಲಿ, ಭೂಮಿಯಿಂದ ನಾಲ್ಕು ನೂರು ಕಿಲೋಮೀಟರ್ ಎತ್ತರದಲ್ಲಿ ಸುತ್ತುತ್ತಿರುವ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ತಂಗುದಾಣ’ಕ್ಕೆ ಯಾನಿಗಳ ಸಮೇತ ಕ್ರ್ಯೂ ಡ್ರಾಗನ್ ಜೋಡಣೆಗೊಂಡಿತು. ಲಾಂಚ್ ವೆಹಿಕಲ್ ಫಾಲ್ಕನ್ 9 ಬೂಸ್ಟರ್ ಮರಳಿ ಫ್ಲಾರಿಡಾಗೆ ವಾಪಸ್ ಬಂತು. ಇಂಥ ಬಾಹ್ಯಾಕಾಶ ಸಾಹಸಗಳು ದಿಢೀರ್ ಎಂದೇನೂ ಸಂಭವಿಸುವುದಿಲ್ಲ. ಕಳೆದ ವರ್ಷ ಸ್ಪೇಸ್ಎಕ್ಸ್ ಪೂರ್ವಭಾವಿ ತಾಲೀಮು ಎಂಬಂತೆ ನಾಸಾದ ಉಪಕರಣಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಸಾಗಿಸಿತ್ತು.
ಬಾಹ್ಯಾಕಾಶ ಸಂಚಾರ ಸಂದಣಿ!: ಒಂದು ಖಾಸಗಿ ಕಂಪನಿಯ ಈ ವಿಕ್ರಮ ಇಲ್ಲಿಗೇ ನಿಲ್ಲುವುದಿಲ್ಲ. ಸ್ಪೇಸ್ಎಕ್ಸ್ ನೆರಳಿನ ಅಂತರದಲ್ಲಿ ಬೋಯಿಂಗ್ ಇದೆ. ಅದೂ ಕೂಡ ಬಾಹ್ಯಾಕಾಶ ಪ್ರವಾಸದ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಷ್ಯಾದ ರೊಸ್ಕಾಸ್ಮಾಸ್ ಏನೂ ಕಡಿಮೆ ಇಲ್ಲ. ಭೂಮಿಗೇ ಸೀಮಿತವಾಗಿದ್ದ ಪೈಪೋಟಿ ನಭಕ್ಕೂ ವಿಸ್ತರಿಸಿದೆ. ಈಗಾಗಲೇ ದರ ಸ್ಪರ್ಧೆ ಶುರುವಾಗಿದೆ. ಮುಂದಿನ ವರ್ಷ 55 ಮಿಲಿಯ ಡಾಲರ್ ವೆಚ್ಚದಲ್ಲಿ ಬಾಹ್ಯಾಕಾಶ ಯಾನ ಮಾಡಿಸುವುದಾಗಿ ಸ್ಪೇಸ್ಎಕ್ಸ್ ಹೇಳಿಕೊಂಡಿದೆ. ಬೋಯಿಂಗ್ ಒಬ್ಬರಿಗೆ 90 ಮಿಲಿಯನ್ ಡಾಲರ್ ಎಂದು ಘೋಷಿಸಿದೆ. ಇಲ್ಲೂ ಮಸ್ಕ್ ಮುಂದಿದ್ದಾನೆ.
ಸಂಕೀರ್ಣ ಚೌಕಗಳ ಕುಂಟೊಬಿಲ್ಲೆ: ದಿ ಮಸ್ಕ್ ಹುಟ್ಟಿದ್ದು ದಕ್ಷಿಣ ಆಫ್ರಿಕಾದ ಪ್ರಿಟೊರಿಯಾದಲ್ಲಿ. 17ನೇ ವರ್ಷಕ್ಕೆ ಕುಟುಂಬ ಕೆನಡಾಕ್ಕೆ ವಲಸೆ ಹೋಯಿತು. ಮನೆಯ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಈತನ ತಂದೆ ಎರೊಲ್. ಮನೆಗೆ ನುಗ್ಗಲು ಯತ್ನಿಸಿದ್ದ ಮೂವರು ಕಳ್ಳರಿಗೆ ಗುಂಡು ಹೊಡೆದು ಸಾಯಿಸಿದ್ದ. ನ್ಯಾಯಾಂಗದ ಕುಣಿಕೆಯಿಂದ ಹೇಗೋ ಪಾರಾಗಿದ್ದ. ಮಡದಿ ಮಯೆ ಮಸ್ಕ್ಗೆ ಸೋಡಾ ಚೀಟಿ ಕೊಟ್ಟ. ತಂದೆಯನ್ನು ಮಹಾ ಕೆಡುಕ ಎಂದು ಬಹಿರಂಗವಾಗಿ ಟೀಕಿಸಿದ ಮಸ್ಕ್ ತಾಯಿಯನ್ನು ರೋಲ್ ಮಾಡೆಲ್ ಎಂದ. ರೂಪದರ್ಶಿಯಾಗಿದ್ದ ಮಯೆ, ಮಗನ ಕನಸುಗಳನ್ನು ಪೋಷಿಸಿದರು. 9ನೇ ವಯಸ್ಸಿಗೆ ಮಸ್ಕ್ಇಡೀ ಎನ್ಸೈಕ್ಲೊಪಿಡಿಯಾ ಬ್ರಿಟಾನಿಕಾವನ್ನು ಓದಿ ಮುಗಿಸಿದ್ದ. 12 ತಲುಪುವ ವೇಳೆಗೆ ಕಂಪ್ಯೂಟರ್ ಕೋಡಿಂಗ್ ಬರೆದ. ಬ್ಲಾಸ್ಟರ್ ಎನ್ನುವ ವಿಡಿಯೊ ಗೇಮ್ ರೂಪಿಸಿ ಅದನ್ನು 500 ಡಾಲರ್ಗೆ ಮಾರಾಟ ಮಾಡಿದ್ದ. ಸಹ ವಿದ್ಯಾರ್ಥಿಗಳಿಂದ ರ್ಯಾಗಿಂಗ್ಗೆ ಒಳಗಾಗಿ ಕರಾಟೆ, ಜುಡೊ, ಕುಸ್ತಿ ಕಲಿತ. ಐಸಾಕ್ ಅಸಿಮೋವನಂಥ ಸೈನ್ಸ್ ಫಿಕ್ಷನ್ಗಳನ್ನು ಓದಿಕೊಂಡ ಮಸ್ಕೆಗೆ ಬಾಹ್ಯಾಕಾಶ ಸಂಶೋಧನೆಯ ಮೋಹ ಹುಚ್ಚಿನಂತೆ ಅಂಟಿಕೊಂಡಿತು. ಕೆನಡಾದ ಕ್ವೀನ್ಸ್ ವಿವಿ ಸೇರಿದ. ಆದರೆ ಅಲ್ಲಿ ಪದವಿಯನ್ನು ಪೂರೈಸಲಿಲ್ಲ. ಪಿಲಿಡೆಲ್ಫಿಯಾದ ಪೆನ್ಸಿಲ್ವೇನಿಯಾ ವಿವಿ ಸೇರಿ ಭೌತಶಾಸ್ತ್ರ ಮತ್ತು ವಾಣಿಜ್ಯ ವಿಷಯ ಆಯ್ಕೆ ಮಾಡಿಕೊಂಡ. ಅದೂ ದಡ ಮುಟ್ಟಲಿಲ್ಲ. ಕೊನೆಗೆ 1996ರಲ್ಲಿಆರ್ಥಶಾಸ್ತ್ರ ಪದವಿ ಪಡೆದ.
ಸ್ಟ್ಯಾನ್ಪೋರ್ಡ್ನಲ್ಲಿ ಪಿಎಚ್ಡಿಗೆ ಸೇರಿ, ಎರಡೇ ವರ್ಷದಲ್ಲಿ ಅದಕ್ಕೆ ನಮಸ್ಕಾರ ಹಾಕಿದ. ಏಕೆಂದರೆ ಜಿಪ್-2 ಕಾರ್ಪೊರೇಶನ್ ಲಾಂಚ್ ಮಾಡಿದ. ಮಸ್ಕ್ನ ಶಿಕ್ಷಣ ಕರಿಯರ್ ಗಮನಿಸಿದರೆ ಅದೊಂದು ಸಂಕೀರ್ಣ ಚೌಕಗಳಲ್ಲಿ ಆಡುವ ಕುಂಟೊಬಿಲ್ಲೆಯಂತಿದೆ.
ಸ್ಪೀಡ್: ಜಿಪ್-2 ಎನ್ನುವ ತಂತ್ರಾಂಶ ಕಂಪನಿಯನ್ನು ಸ್ಥಾಪಿಸಿದ ಈತ 27ವರ್ಷಕ್ಕೆ ಮಿಲಿಯನೇರ್ ಎಂದೆನಿಸಿಕೊಂಡ. 40ನೇ ವಯಸ್ಸಿಗೆ ಬಿಲಿಯನೇರ್ ಆದ. ಆತನ ಯಶಸ್ಸಿನ ಗ್ರಾಫ್ ಏರುಮುಖಿಯಾಗುತ್ತಲೇ ಸಾಗಿದೆ. ಮಸ್ಕ್ನ ಇನ್ನೊಂದು ಹೆಸರೇ ಸ್ಪೀಡ್. ಸಂಚಾರ ದಟ್ಟಣೆಯಿಂದ ಬೇಸರಗೊಂಡು ಸುರಂಗ ಸಾರಿಗೆಯ ಪರ್ಯಾಯ ಯೋಜನೆ ರೂಪಿಸಿದ. ಇದಕ್ಕಾಗಿ ದಿ ಬೋರಿಂಗ್ ಎನ್ನುವ ಕಂಪನಿ ಸ್ಥಾಪಿಸಿದ. ನ್ಯೂಯಾರ್ಕ್ನಿಂದ ವಾಷಿಂಗ್ಟನ್ ಡಿಸಿಗೆ 370 ಕಿ.ಮೀ ದೂರ. ಇದನ್ನು ಗಂಟೆಗಟ್ಟಲೆ ಕ್ರಮಿಸಬೇಕು. ಮಸ್ಕ್ ಕನಸಿನ ಯೋಜನೆ ಮುಂದಿನ ವರ್ಷ ನನಸಾಗಲಿದ್ದು, ಕೇವಲ 29 ನಿಮಿಷಗಳಲ್ಲಿ ನ್ಯೂಯಾರ್ಕ್ನಿಂದ ವಾಷಿಂಗ್ಟನ್ಗೆ ಬರಬಹುದು. ಈ ಸುರಂಗಗಳಲ್ಲಿ ಮಸ್ಕ್ ಹಾರುವ ಕಾರುಗಳನ್ನು ಓಡಿಸುತ್ತಾನಂತೆ. ಹೈಪರ್ಲೂಪ್ ಎನ್ನುವುದು ಮಸ್ಕ್ನ ಇನ್ನೊಂದು ಅದ್ಭುತ ಪರಿಕಲ್ಪನೆ. ಇದೊಂದು ಕೊಳವೆ ಮಾರ್ಗ. ಈ ಕೊಳವೆಯಲ್ಲಿ ಕ್ಯಾಪ್ಸೂಲ್ಗಳು ಅಸಾಧ್ಯವೇಗದಲ್ಲಿ ಚಲಿಸುತ್ತವೆ. ಈ ಎಲ್ಲ ಕಾಮಗಾರಿಗಳ ಫಲ ಒಂದೆರಡು ವರ್ಷಗಳಲ್ಲಿ ಜನರಿಗೆ ಸಿಗಲಿದೆ. ಕೃತಕ ಬುದ್ಧಿಮತ್ತೆ ಆನ್ವಯಿಕ ವಲಯಗಳನ್ನು ಶೋಧಿಸಲು ಓಪನ್ಎಐ ಎನ್ನುವ ಇನ್ನೊಂದು ಕಂಪನಿಯನ್ನು ಮಸ್ಕ್ ಸ್ಥಾಪಿಸಿದ್ದಾನೆ. ಸಿನಿಮಾ ಮತ್ತು ಕಿರುತೆರೆಗಳಲ್ಲೂ ಮಿಂಚಿದ್ದಾನೆ.
ಟ್ರಂಪ್ಗೆ ಸಡ್ಡು : ನೆಲದ ಮಕ್ಕಳಿಗೆ ಕೆಲಸ ಎನ್ನುವ ದೇಶೀವಾದ ಮಂಡಿಸಿ ಅಧಿಕಾರಕ್ಕೆ ಬಂದ ಟ್ರಂಪ್, ಮಸ್ಕ್ಗೆ ಉದ್ಯೋಗ ನಿರ್ಮಾಣ ಮತ್ತು ವ್ಯೂಹಾತ್ಮಕ ಕಾರ್ಯನೀತಿಯ ಹೊಣೆ ಒಪ್ಪಿಸಿದ್ದರು. ತಮ್ಮ ಮಂಡಳಿಯ ಥಿಂಕ್ ಟ್ಯಾಂಕ್ ಮಾಡಿಕೊಂಡಿದ್ದರು. ಆದರೆ ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದಕ್ಕೆ ಟ್ರಂಪ್ ಗೋಲಿ ಹೊಡೆದು ಹೊರಬಂದಾಗ, ಮಸ್ಕ್ ಅಧ್ಯಕ್ಷರ ಮಂಡಳಿಗೆ ಗುಡ್ ಬೈ ಹೇಳಿದರು. ಪ್ಯಾರಿಸ್ ಒಪ್ಪಂದದಿಂದ ದೂರವಾಗುವುದರಿಂದ ಅಮರಿಕಕ್ಕೂ ಒಳಿತಲ್ಲ; ಜಗತ್ತಿಗೂ ಒಳಿತಲ್ಲ ಎಂದು ಗುಡುಗಿದ್ದರು. ಮಸ್ಕ್ ರೋಚಕ ಜೀವನ ಇಷ್ಟಕ್ಕೇ ಮುಗಿಯುವುದಿಲ್ಲ. ಈತನಿಗೆ ಆರು ಗಂಡು ಮಕ್ಕಳು. ಇಬ್ಬರು ಅವಳಿಗಳು. ಮೂವರು ತ್ರಿವಳಿಗಳು. 25 ಮಂದಿ ಜಗದೇಕ ವೀರ-(ಮೋಸ್ಟ್ ಪವರ್ಫುಲ್ ಪೀಪಲ್)ರ ಸಾಲಿನಲ್ಲಿರುವ ಮಸ್ಕ್, ತಮ್ಮದೇ ದಾರಿ
ಮತ್ತು ಗುರಿಗಳನ್ನು ಬೆನ್ನೆತ್ತಿ ಹೋಗುವ ಧೈರ್ಯಶಾಲಿಗಳಿಗೆ ದೊಡ್ಡ ಆದರ್ಶ.