– ನೋವು, ಹಸಿವಿನಿಂದ ಪ್ರಾಣಬಿಟ್ಟ ಗರ್ಭಿಣಿ ಆನೆ – ಕೇರಳದಲ್ಲಿ ಹೃದಯ ವಿದ್ರಾವಕ ಘಟನೆ .
ಏಜೆನ್ಸೀಸ್, ತಿರುವನಂತಪುರ:
ಆಹಾರ ಅರಸಿ ಬಂದ ಗರ್ಭಿಣಿ ಆನೆಯೊಂದು ಸ್ಫೋಟಕ ತುಂಬಿದ ಅನಾನಸ್ ಹಣ್ಣನ್ನು ತಿಂದು ಸಾವನ್ನಪ್ಪಿದ ಘಟನೆ ಕೇರಳದಲ್ಲಿ ವರದಿಯಾಗಿದೆ. ಸ್ಫೋಟಕವು ಬಾಯಲ್ಲಿ ಸ್ಫೋಟಿಸಿದ ಪರಿಣಾಮ ನೋವಿನಿಂದ ಆಹಾರ ಸೇವಿಸಲಾರದೆ 2-3 ದಿನ ನರಳಾಡಿದ ಆನೆ, ಕೊನೆಗೆ ನೋವು ಶಮನಕ್ಕಾಗಿ ನದಿಗೆ ಇಳಿದು ನೀರಿನಲ್ಲೇ ಪ್ರಾಣ ಬಿಟ್ಟಿದೆ. ಮೇ 27ರಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿರುವ ಈ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅರಣ್ಯಾಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆನೆ ಫೋಟೊ ಸಮೇತ ಕರುಣಾಜನಕ ಕತೆಯನ್ನು ಪೋಸ್ಟ್ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪಾಲಕ್ಕಾಡ್-ಮಲಪ್ಪುರಂ ಜಿಲ್ಲೆಯ ಗಡಿಯಲ್ಲಿರುವ ‘ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್’ ಅರಣ್ಯ ಪ್ರದೇಶದ ಹೆಣ್ಣಾನೆಯು ಆಹಾರ ಅರಸುತ್ತಾ ಪಕ್ಕದ ಗ್ರಾಮಕ್ಕೆ ಆಗಮಿಸಿತ್ತು. ಗ್ರಾಮದ ತೋಟದ ಮಾಲೀಕರು ಕಾಡಾನೆಗಳ ಹಾವಳಿ ತಡೆಯಲು ಅನಾನಸ್ ಹಣ್ಣಿನಲ್ಲಿ ಸ್ಫೋಟಕ ತುಂಬಿ ಇರಿಸಿದ್ದರು. ಅದು ನಿಜವಾದ ಹಣ್ಣೆಂದು ಭಾವಿಸಿದ ಆನೆ ಕೂಡಲೇ ಅದನ್ನು ಸೊಂಡಿಲಿನಿಂದ ಎತ್ತಿ ಬಾಯಿಗೆ ಹಾಕಿಕೊಂಡಿದೆ. ಹಣ್ಣನ್ನು ಕಚ್ಚಿದ ಕೂಡಲೇ ಅದು ಬಾಯೊಳಗೆ ಸ್ಫೋಟಗೊಂಡಿದೆ. ಆನೆಯ ದವಡೆ ಭಾಗ, ನಾಲಗೆ ಛಿದ್ರಗೊಂಡಿದೆ. ನೋವು ತಡೆಯಲಾರದೆ ಆನೆ ಘೀಳಿಡುತ್ತಾ ಆ ಪ್ರದೇಶದಲ್ಲಿ ದಿನವಿಡೀ ಸುತ್ತಾಡಿದೆ. ಹಸಿವಾದರೂ, ಆಹಾರ ಸಿಕ್ಕಿದರೂ ತೀವ್ರ ಗಾಯದಿಂದಾಗಿ ಅದನ್ನು ತಿನ್ನಲಾಗದೆ ನರಳಾಡಿದೆ. ಗಾಯದ ಮೇಲೆ ನೊಣಗಳು ಮತ್ತು ಇತರೆ ಕೀಟಗಳ ಕೂತು ನಂಜು ಮಾಡುವುದನ್ನು ತಪ್ಪಿಸಲು ಅಲ್ಲೇ ಹರಿಯುವ ವೆಲ್ಲಿಯಾರ್ ನದಿಗೆ ಇಳಿದು, ಗಾಯವನ್ನು ನೀರಿನಲ್ಲಿ ಮುಳುಗಿಸಿಟ್ಟು ದಿನಗಟ್ಟಲೆ ನಿಂತಿದೆ. ಕೊನೆಗೆ ಹಸಿವು, ನೋವಿನಿಂದ ಬಳಲಿ ಪ್ರಾಣ ಬಿಟ್ಟಿದೆ ಎಂದು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅರಣ್ಯಾಧಿಕಾರಿ ಮೋಹನ್ ಕೃಷ್ಣ ಹೇಳಿದ್ದಾರೆ.
ಪಟಾಕಿ ತಿಂದು ಸಾವು : ಕೇರಳದ ಕೊಲ್ಲಂ ಜಿಲ್ಲೆಯಲ್ಲೂ ಇಂಥದ್ದೇ ಘಟನೆ ಕಳೆದ ಏಪ್ರಿಲ್‌ನಲ್ಲಿ ನಡೆದಿತ್ತು. ಪಟಾಕಿ ತುಂಬಿದ ಆಹಾರವನ್ನು ಕಚ್ಚಿದ ಪರಿಣಾಮ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಕೊನೆಗೂ ಪ್ರಕರಣ ದಾಖಲು: ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರ ಬಗ್ಗೆ ಮಾಹಿತಿ ದೊರೆತರೂ ಕ್ರಮಕ್ಕೆ ಮುಂದಾಗದೆ ಮೌನ ವಹಿಸಿದ್ದ ಕೇರಳ ಅರಣ್ಯ ಇಲಾಖೆ, ಜನಾಕ್ರೋಶ ಹೆಚ್ಚಾದ ಬೆನ್ನಲ್ಲೇ ಬುಧವಾರ ಎಫ್ಐಆರ್ ದಾಖಲಿಸಿದೆ.
ಅಮಾಯಕ, ಮುಗ್ಧ ಗರ್ಭಿಣಿ ಆನೆಯ ಸಾವು ಆಘಾತ ತಂದಿದೆ. ಪಿತೂರಿಯಿಂದ ಕೂಡಿದ ಹಿಂಸಾಕೃತ್ಯಕ್ಕೆ ಇದು ಸಮಾನ. -ರತನ್ ಟಾಟಾ, ಉದ್ಯಮಿ.
ಇದು ಆನೆಯ ಮರ್ಡರ್. ಇದೇ ಜಿಲ್ಲೆಯಲ್ಲಿ ಹಿಂದೊಮ್ಮೆ ಜನ ಸ್ಫೋಟಕಗಳನ್ನು ರಸ್ತೆಗೆ ಎಸೆದು, 400 ಪ್ರಾಣಿ ಪಕ್ಷಿಗಳ ಸಾವಿಗೆ ಕಾರಣರಾಗಿದ್ದರು. – ಮನೇಕಾ ಗಾಂಧಿ, ಸಂಸದೆ.
ನೋವಿದ್ದರೂ ಯಾರಿಗೂ ಹಾನಿ ಮಾಡಿಲ್ಲ…. ನೋವಿನಿಂದ ಘೀಳಿಡುತ್ತಾ ಓಡುವಾಗಲೂ ಆನೆ ಅಕ್ಕಪಕ್ಕದ ಹಳ್ಳಿಗಳ ಮನೆಗಳಿಗಾಗಲೀ, ತೋಟಗಳಿಗಾಗಲೀ ಯಾವುದೇ ಹಾನಿ ಮಾಡಿಲ್ಲ. ಆ ಮೂಕ ಪ್ರಾಣಿ ಮನುಷ್ಯನನ್ನು ನಂಬಿತ್ತು ಎಂದು ತಮ್ಮ ಪೋಸ್ಟ್‌ನಲ್ಲಿ ಅರಣ್ಯಾಧಿಕಾರಿ ಮೋಹನ್ ಕೃಷ್ಣ ಭಾವುಕವಾಗಿ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆನೆಯ ದಾರುಣ ಸಾವಿನ ಬಗ್ಗೆ ತೀವ್ರ ಸಂತಾಪ, ಆಕ್ರೋಶ ವ್ಯಕ್ತವಾಗಿದೆ. ‘‘ಕೇರಳದಲ್ಲಿ ಸಾಕ್ಷರತೆ ಹೆಚ್ಚಾಗಿರಬಹುದು. ಆದರೆ ಸಾಕ್ಷರತೆಗೂ ಶಿಕ್ಷಣಕ್ಕೂ ಸಂಬಂಧವಿಲ್ಲ,’’ ಎಂದು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುಷ್ಕಾ ಶರ್ಮಾ, ಶ್ರದ್ಧಾ ಕಪೂರ್ ಸೇರಿದಂತೆ ಬಾಲಿವುಡ್ ನಟ-ನಟಿಯರೂ ಸಹ ಕೇರಳ ಸಿಎಂ, ಕೇಂದ್ರ ಪರಿಸರ ಖಾತೆ ಸಚಿವರನ್ನು ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.