ಸವಾಲುಗಳೇ ಅವಕಾಶಗಳಾಗಲಿ – ಕೊರೊನಾ ಪರಿಸ್ಥಿತಿ ಎದುರಿಸಿ ಗೆಲ್ಲೋಣ

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅನೇಕ ಸವಾಲುಗಳನ್ನು ಸೃಷ್ಟಿಸಿದೆ. ಅದೇ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕಿದೆ. ಕೊರೊನಾ ಸೈಡ್ ಎಫೆಕ್ಟ್‌ಗಳು ಹಲವು. ಆ ಪೈಕಿ ಕೆಲವು ನಕಾರಾತ್ಮಕವಾಗಿದ್ದರೆ, ಮತ್ತೆ ಕೆಲವು ಸಕಾರಾತ್ಮಕವಾಗಿವೆ. ಸೋಂಕಿನ ಪರಿಣಾಮ ಅನಾರೋಗ್ಯ, ಸಾವು ನಕಾರಾತ್ಮಕ ಎನಿಸಿಕೊಂಡರೆ, ಜನರಲ್ಲಿ ವೈಯಕ್ತಿಕ ಆರೋಗ್ಯ, ಸ್ವಚ್ಛತೆ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಜ್ಞೆ ಮೂಡುತ್ತಿದೆ. ಇದು ಸಕಾರಾತ್ಮಕ ಬದಲಾವಣೆಗೆ ಸಾಕ್ಷಿ. ಇದರ ಜೊತೆಗೆ ಕೊರೊನಾ ಭೀತಿಯಿಂದಾಗಿ ಹಲವು ಪರಿಣಾಮಗಳ ವೈಯಕ್ತಿಕ ಮತ್ತು ಸಾಮಾಜಿಕ, ಆರ್ಥಿಕವಾಗಿಯೂ ಸವಾಲುಗಳನ್ನು ಸೃಷ್ಟಿಸಿವೆ.
ವಲಸೆ ಕಾರ್ಮಿಕರಿಂದಲೇ ತುಂಬಿ ತುಳುಕುತ್ತಿದ್ದ ಮಹಾನಗರಗೆಳೆಲ್ಲವೂ ಕೊರೊನಾ ಭೀತಿಯಿಂದಾಗಿ ಖಾಲಿಯಾಗಿವೆ. ಈ ಹಿಂದೆ ಗ್ರಾಮಗಳಿಂದ ನಗರಗಳತ್ತ ವಲಸೆ ಸಾಮಾನ್ಯವಾಗಿತ್ತು. ಆದರೀಗ, ಅದಕ್ಕೆ ತದ್ವಿರುದ್ಧವಾಗಿ ನಗರದಿಂದ ಗ್ರಾಮಗಳಿಗೆ ವಲಸೆ ಶುರುವಾಗಿದೆ. ಈ ರೀತಿಯ ಪ್ರಕ್ರಿಯೆ ಇಂದು ಇಲ್ಲದಿದ್ದರೆ ಮುಂದೊಂದು ನಡೆಯಲೇಬೇಕಿತ್ತು. ಆದರೆ, ಅದು ವಿವೇಚನೆಯ ಪ್ರಕ್ರಿಯೆವಾಗುತ್ತಿತ್ತು. ಈಗ ನಡೆಯುತ್ತಿರುವ ವಲಸೆಯು ಭೀತಿಯ ಪರಿಣಾಮ ಸಂಭವಿಸಿರುವಂಥದ್ದು. ಅದು ನಗರ, ಗ್ರಾಮಗಳೆರಡರಲ್ಲೂ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು. ಈ ಮರು ವಲಸೆಯಿಂದಾಗಿ ನಗರಗಳಲ್ಲಿ ಇದೀಗ ಕಾರ್ಮಿಕ ಕೊರತೆ ಎದುರಾಗುತ್ತಿದೆ. ಲಾಕ್‌ಡೌನ್‌ ನಿಧಾನವಾಗಿ ಹಿಂತೆಗೆದುಕೊಳ್ಳುತ್ತಿದ್ದಂತೆ ನಗರಗಳು ತಮ್ಮ ಎಂದಿನ ಲಯಕ್ಕೆ ಮರಳುವ ಪ್ರಯತ್ನ ಮಾಡುತ್ತಿವೆ; ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿವೆ. ಆದರೆ, ಸಾಮಾನ್ಯ ಅಂಗಡಿಯಿಂದ ಹಿಡಿದು ಕೈಗಾರಿಕೆಗಳವರೆಗೂ ಕಾರ್ಮಿಕರ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಪರಿಸ್ಥಿತಿಯನ್ನು ನಿವಾರಿಸಲು ಸರಕಾರಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕಿದೆ. ಮೊದಲನೆಯದಾಗಿ, ಸ್ಥಳೀಯವಾಗಿ ಲಭ್ಯ ಇರುವ ಮಾನವಸಂಪನ್ಮೂಲವನ್ನು ಕಾರ್ಮಿಕ ಕೆಲಸಗಳಿಗೆ ಪ್ರೇರೇಪಿಸುವ ಕಾರ್ಯವಾಗಬೇಕು. ಎರಡನೆಯದಾಗಿ, ವಲಸೆ ಹೋಗಿರುವ ಕಾರ್ಮಿಕರಿಗೆ ಸುರಕ್ಷ ತೆಯ ಅಭಯವನ್ನು ನೀಡಬೇಕು. ಇಲ್ಲವೇ, ಹಾಗೆ ಹೋಗಿರುವ ಕಾರ್ಮಿಕರಿಗೆ ಅವರ ಇರುವ ಪರಿಸರದಲ್ಲೇ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಮಾಡಬೇಕು. ಅಂದರೆ, ಅವರು ಅವರ ಸ್ಥಳದಲ್ಲೇ ಉದ್ಯೋಗಿಗಳೂ ಆಗಬಹುದು, ಉದ್ಯೋಗದಾತರೂ ಆಗಬಹುದು. ಅಂತಹ ವಾತಾವರಣ ಸೃಷ್ಟಿಸುವ ಕೆಲಸ ಆಗಬೇಕಷ್ಟೆ. ಇನ್ನು ಸ್ಥಳೀಯವಾಗಿ ಲಭ್ಯ ಇರುವ ಕಾರ್ಮಿಕರು, ಕೆಲಸಗಾರರ ಮನೋಸ್ಥಿತಿಯನ್ನು ಬದಲಿಸುವ, ಲಭ್ಯ ಉದ್ಯೋಗ ಮಾಡುವ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಇದು ಸರಕಾರ ಮತ್ತು ಸಮಾಜ ಸೇರಿ ನಿರ್ವಹಿಸಬೇಕಿರುವ ಜವಾಬ್ದಾರಿ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇಂಥದ್ದೇ ಕೆಲಸವನ್ನು ಮಾಡಬೇಕೆಂಬ ಮನೋಭಾವ ಇರುತ್ತದೆ. ಮಾಡುವ ಕೆಲಸದ ವಿಷಯದಲ್ಲಿ ಕೀಳರಿಮೆ ಅಥವಾ ಹೆಚ್ಚುಗಾರಿಕೆ ಬೆಳೆದಿರುತ್ತದೆ. ಆ ಪ್ರಜ್ಞೆಯನ್ನು ಹೋಗಲಾಡಿಸಿ ಸಿಗುವ ಅವಕಾಶ ಬಳಸಿಕೊಳ್ಳಲು ಉದ್ಯೋಗಿಗಳಲ್ಲಿ ತಿಳುವಳಿಕೆ ಮೂಡಿಸುವ ಅವಶ್ಯಕತೆಯಿದೆ.
ಬೆಂಗಳೂರಿನಂಥ ನಗರದಲ್ಲಿ ಈಗಾಗಲೇ ಕೆಲಸಗಾರರು ಬೇಕಾಗಿದ್ದಾರೆ ಎಂಬ ಫಲಕಗಳು ಅಲ್ಲಲ್ಲಿ ಕಾಣುತ್ತಿವೆ. ಈ ಕೆಲಸಗಳೆಲ್ಲವೂ ವಲಸೆ ಕೆಲಸಗಾರರಿಂದ ತೆರವಾಗಿರುವಂಥ ಉದ್ಯೋಗಗಳೇ. ಆದರೆ, ಅವುಗಳನ್ನು ಸ್ಥಳೀಯರ ಎಷ್ಟರಮಟ್ಟಿಗೆ ತುಂಬಬಲ್ಲರು ಎಂಬುದರ ಮೇಲೆ ಉದ್ಯೋಗದ ಭರವಸೆಯೂ ಮೂಡಲಿದೆ. ಈಗ ಸಿಗುತ್ತಿರುವ ಅವಕಾಶಗಳನ್ನು ಸ್ಥಳೀಯರು ಎರಡೂ ಕೈಯಿಂದ ಬಾಚಿಕೊಂಡು ತಮ್ಮ ಭವಿತವ್ಯವನ್ನು ರೂಪಿಸಿಕೊಳ್ಳಬಹುದು. ಆದಾಗದಿದ್ದರೆ, ಸರಕಾರ ಮತ್ತು ವಲಸಿಗ ಕಾರ್ಮಿಕರನ್ನು ದೂರುತ್ತಾ ಕುಳಿತಕೊಳ್ಳಬೇಕಾಗುತ್ತದೆ.
ಮತ್ತೊಂದು ನೆಲೆಯಲ್ಲಿ ನೋಡುವುದಾರೆ, ಸ್ಥಳೀಯರು ಉದ್ಯೋಗ ಅವಕಾಶಗಳನ್ನು ಬಳಸಿಕೊಳ್ಳದಿದ್ದರೆ ಸರಕಾರಗಳು ವಲಸೆ ಕಾರ್ಮಿಕರಲ್ಲಿ ಸುರಕ್ಷತೆಯ ವಿಶ್ವಾಸವನ್ನು ಮೂಡಿಸಬೇಕು. ಅವರಲ್ಲಿರುವ ಭಯವನ್ನು ಹೋಗಲಾಡಿಸಬೇಕು. ಒಟ್ಟಾರೆ ತಾತ್ಪರ್ಯ ಇಷ್ಟೇ; ಕೊರೊನಾ ಸೃಷ್ಟಿಸಿರುವ ಸವಾಲಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಮಾಜ ಮತ್ತು ಸರಕಾರಗಳೆರಡೂ ಭವಿಷ್ಯದ ಅವಕಾಶಗಳನ್ನು ಸೃಷ್ಟಿಸುವ ಕೆಲಸಕ್ಕೆ ಮುಂದಾಗಬೇಕು. ಆರ್ಥಿಕತೆ ಮತ್ತು ಸಮಾಜ ಪುನಃಶ್ಚೇತನಗೊಳ್ಳಲು ಇದೊಂದೇ ಈಗ ನಮ್ಮ ಮುಂದಿರುವ ದಾರಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top